Tuesday 10 January 2012

ತಿರುಕನ ಹಾಡು

ನಾನು ತಿರುಕ ನಾನು ತಿರುಕ
ಊರೇ ಆಗಲಿ ನಾಡೇ ಆಗಲಿ ನಡೆಯುವುದೇ ಪುಳಕ,
ಪಾಪಿ ಚಿರಾಯು....!
ನಾನು ಸಾಯೋಲ್ಲ, ಸತ್ತರು ಅಲ್ಲಿಗೆ ಸೇರೋಲ್ಲ
ಭೂಮಿಯೇ ನನಗೆ ಎಲ್ಲ......., ಎಲ್ಲ ಇರುವ ತನಕ!!
ನಾವು ಇರುವ ತನಕ ಅವನದೇ ಕೈಚಳಕ


ತಿರುಗಿ ತಿರುಗಿ ಏನು ನೋಡಿಲ್ಲ
ಹುಡುಕಿ ಹುಡುಕಿ ಏನು ಸಿಕ್ಕಿಲ್ಲ
ಊಟಕಿಷ್ಟು ರದ್ದಿ ನೋಟಕಿಷ್ಟು ಸುದ್ದಿ...! ಚಿತ್ರ ಸುದ್ದಿ
ಆಟವಿಲ್ಲ ಪಾಠವಿಲ್ಲ ಎರಡೂ ದೂರ ನನ್ನನೊದ್ದಿ
ಹೆಚ್ಚೆಂದರೆ ಎರಡು ಗುದ್ದು, ಗಟ್ಟಿಯಾದರೆ ಗೆಳೆಯರು
ಪಾಪವಿಲ್ಲ ಪುಣ್ಯವಿಲ್ಲ ಪುರುಸೊತ್ತಿಲ್ಲದ ಒರಟರು


ಪುರ ಪೇಟೆ ಪಾಳ್ಯಗಳ ಸುತ್ತಿರೆ ಇರುಳ ಅಕ್ಷಿಯಲ್ಲಿ
ಕಂಡೀತು ಬಾಳಹಕ್ಕಿ....
ನಾನು ಇದ್ದ ಪಾಳುಬಿದ್ದ ಮನೆಯಹಾಳು ಕಿಟಕಿಯಲ್ಲಿ
ಕಂಡೀತು ಬಾನಚುಕ್ಕಿ.....
ನೆತ್ತಿಯ ಮೇಲೆ ನೇತಾಡುವ ಚುಕ್ಕಿ, ಚುಕ್ಕಿಗಳ ಲೆಕ್ಕ ತಿಳಿದಿಲ್ಲ
ಚಕ್ಕೆ ನಾಣ್ಯದ ಗಾತ್ರ ಮಾತ್ರ ಇಷ್ಟೇ ಎಂದು ಹೇಳಬಲ್ಲ
ತಿರುಕ ನಾನು ತಿರುಕ ತಿಳುವಳಿಕೆ ಇಲ್ಲದ ತಿಕಲ


ಅಪ್ಪ ಇಲ್ಲ ಅಮ್ಮ ಇಲ್ಲ ಅವರಿವರ ಪಾಲಾದೆನು
ಆಸ್ತಿ ಇಲ್ಲ ಆರೈಕೆ ಗೊತ್ತಿಲ್ಲ ಗರ್ವದಿಂದ ಮನೆ ಬಿಟ್ಟವನು
ಸೇಂದಿ ಸಿಗರೇಟು ಮುಟ್ಟೊದಿಲ್ಲ, ಅನ್ನೋದೆಲ್ಲ ನಿಜವೇ ಅಲ್ಲ
ದೇವನಿದ್ರು ನಂಬೊದಿಲ್ಲ ಭೇಟಿ ಮಾತ್ರ ತಪ್ಪೋದಿಲ್ಲ
ಬಟ್ಟೆ ಚಿಂದಿ, ಕಸುಬು ಚಿಂದಿ, ಮನಸ್ಸು ಚಿಂದಿ, ಥೇಟ್ ಹಂದಿ....!
ತಿರುಗುತೀನಿ ನಾನು ತಿರುಕ ತಿರುಕ,
ಹೊತ್ತು ತಿರುಗುತ್ತೀನಿ ಜೊತೆಗಿಷ್ಟು ಕೊಳಕು ಬದುಕ...!!

                                                                      -ಸಂತೋಷ್.ಇ

No comments:

Post a Comment