Tuesday 6 October 2009

ಆಯ್ಕೆ - ಭಾಗ 1

ಆಯ್ಕೆ ಮಾನವನ ಬದುಕಿನ ಅವಿಭಾಜ್ಯ ಅಂಗ. ದಿನನಿತ್ಯ ಹಲವು ಆಯ್ಕೆಗಳ ನಡುವೆಯೂ ಸುಗಮವಾಗಿಯೂ, ಕೆಲವೊಮ್ಮೆ ದ್ವಂದ್ವಮಯವಾಗಿಯೂ ಜೀವನವನ್ನು ಸಾಗಿಸುತ್ತೇವೆ. ನಮ್ಮ ಬದುಕನ್ನು ರೂಪಿಸುವುದು ಅಥವಾ ಅದನ್ನು ಕೆಡಿಸುವುದು ನಮ್ಮ ಆಯ್ಕೆಯ ಮೇಲೆ ಹೊಂದಿದೆ. ನಮ್ಮ ಬದುಕಿಗೆ ನಾವೇ ಜವಾಬ್ದಾರರಾಗಿರುವಾಗ ನಮ್ಮ ಆಯ್ಕೆಗಳಿಗೂ ಕೂಡ ನಾವು ಜವಾಬ್ದಾರರು. ಜಾಗತೀಕರಣಗೊಂಡ ಈ ಯುಗದಲ್ಲಿ ಮಾನವ ಸಮಾಜ ಕೊಳ್ಳುಬಾಕ ಸಂಸ್ಕೃತಿಗೆ ಮಾರುಹೋಗಿರುವುದನ್ನು ಕಾಣುತ್ತೇವೆ. ಅದು ಬೇಕು, ಇದು ಬೇಕು, ಮತ್ತೊಂದು ಬೇಕೆಂದು ಬೆದಕುತ್ತಿರುವುದು ಇಂದಿನ ಸಮಾಜ. ಈ ಬೆದಕಾಟದ ಬದುಕು ಕ್ಷಣ ಕ್ಷಣಕ್ಕೂ ಬೇರೆ ಬೇರೆ ಬೇಕುಗಳನ್ನು ಹುಟ್ಟಿಸುತ್ತದೆ. ತನ್ನ ಜೀವಮಾನದಲ್ಲಿ ಈ ಬೇಕುಗಳನ್ನು ಪ್ರತೀಕ್ಷಣ ಹೊಂದಿಸಿಕೊಳ್ಳಬೇಕಾದಾಗ ಜೀವಕ್ಕೆ ಸುಖ, ನೆಮ್ಮದಿ ಶಾಂತಿ ಎಲ್ಲಿಂದ ತಾನೇ ಬರಬೇಕು?





ಇಂದು ಈ ಬೇಕುಗಳ ಪೂರೈಸುವಿಕೆಗೆ ಎಂಬಂತೆ ಪೂರಕವಾಗಿ ಆಯ್ಕೆಗಳಿವೆ. ಈ ಆಯ್ಕೆ ಎಲ್ಲಾ ಸ್ತರಗಳಲ್ಲಿ ಕಂಡುಬರುತ್ತದೆ. ಅದು ಉಡುಗೆ ತೊಡುಗೆಯಲ್ಲಾಗಲಿ, ಖಾದ್ಯ ಪದಾರ್ಥಗಳಲ್ಲಾಗಲಿ, ಬೌದ್ಧಿಕತೆ, ನೈತಿಕತೆಯಾಗಲಿ, ಜೀವನ ಶೈಲಿಯಾಗಲಿ ಎಲ್ಲದರಲ್ಲೂ ಆಯ್ಕೆಯ ಸುರಿಮಳೆ. ಈ ಆಯ್ಕೆಗಳಿಂದಲೇ ಮಾನವ ತನ್ನ ಅನನ್ಯತೆ, ಅಮೋಘತೆಯನ್ನು ಕಂಡಂತಿದೆ. ಈ ಆಯ್ಕೆಯ ಅಮೋಘ ಪ್ರದರ್ಶನಕ್ಕೆ ನಾ ಮುಂದು ತಾ ಮುಂದು ಎಂಬ ಧಾವಂತ ನಡೆಯುತ್ತಿದೆ. ಈ ಆಯ್ಕೆಯ ಹಿಂದಿರುವುದು ಮನದ ಮುಂದಣ ಬಯಕೆಯ ಪೂರೈಕೆ, ಹಾಗೂ ತೃಷ್ಣೆಯನ್ನು ಪೂರೈಸುವ ಹಪಹಪಿಸುವಿಕೆ. ಇಂದಿನ ವೈಯಕ್ತಿಕ ಸ್ವಾತಂತ್ರ್ಯದ ಪರಿಕಲ್ಪನೆಯು ಆಯ್ಕೆಯನ್ನು ದ್ವಿಗುಣಗೊಳಿಸಿದೆ. ತನ್ನ ಸ್ವೇಚ್ಛಾಚಾರದಿಂದ ತನಗೆ ಇಷ್ಟವಾದುದನ್ನು, ಸಮಾಜಕ್ಕೆ, ಪರಿಸರಕ್ಕೆ ಹಾನಿಯನ್ನು ಉಂಟುಮಾಡಿದರೂ ತನ್ನ ಆಯ್ಕೆಯೇ ಪಾರಮ್ಯ ಪಡೆದಿದೆ ಎಂಬ ಅಹಂನಿಂದ ತನ್ನ ಆಯ್ಕೆಯಿಂದ ನಿವೃತ್ತಿಯಾಗಲು ಒಲ್ಲೆಯೆನುವನು. ಇಂದು ಕೇವಲ ಸಾಂಪ್ರದಾಯಿಕವಾದುದನ್ನು, ಇತರರ ಒಪ್ಪಿಗೆಗೆ ಅನುಗುಣವಾದ ವಸ್ತು ವಿಷಯಗಳನ್ನು ಆಯ್ಕೆ ಮಾಡಬೇಕಾಗಿಲ್ಲ. ಹಾಗಾಗಿ ಇಂದಿನ ಜನತೆ ತಮಗೆ ಅಧಿಕ ಪ್ರಮಾಣದಲ್ಲಿ ಆಯ್ಕೆಯಿರುವುದರಿಂದ ತಾವು ನಮ್ಮ ಪೂರ್ವಜರಿಗಿಂತ ಸ್ವತಂತ್ರರು ಎಂಬ ಮಿಥ್ಯಾಲೋಕದಲ್ಲಿ ವಿಹರಿಸುತ್ತಿದ್ದಾರೆ ಹಾಗೂ. ಈ ರೀತಿಯ ಮಿಥ್ಯಾ ಪಡಿಯಚ್ಚುಗಳನ್ನು ಜನತೆಯೆಡೆಗೆ ಪ್ರವಹಿಸುವಲ್ಲಿ ಶಕ್ಯವಾಗಿದೆ. ಆದರೆ ನಿಜವಾಗಿಯೂ ಜಾಹೀರಾತುಗಳ ಜಾಲಕ್ಕೆ ಬಲಿಯಾಗಿ ತನ್ನ ಆಯ್ಕೆಯಲ್ಲಿ ಸ್ವತಂತ್ರಕಳೆದುಕೊಂಡು ಬಂಧನಕ್ಕೊಳಗಾಗಿದ್ದಾನೆ.








ವೈವಿಧ್ಯತೆ ಇಂದಿನ ಆಯ್ಕೆಗಳಿಗೆ ನಾಂದಿ ಹಾಡುತ್ತದೆ. ಒಬ್ಬ ಸಾಮಾನ್ಯನು ಆಯ್ಕೆ ಮಾಡುವಾಗ ಸ್ವಹಿತದ ವೃದ್ಧಿಯನ್ನು ಮನಗಂಡರೆ ಬದುಕಿನಲ್ಲಿ ದೊಡ್ಡವನೆನಿಸಿಕೊಂಡವನು ಪರಹಿತದ ವೃದ್ಧಿಯನ್ನು ತನ್ನ ಆಯ್ಕೆಯ ಆಶಯವಾಗಿರಿಸುತ್ತಾನೆ. ಅಧಿಕಾರ, ಸಂಪತ್ತು, ಸೊಗಸು ಕೀರ್ತಿಗಳನ್ನು ಮೀರಿಸುತ್ತಾ ಜೀವಕ್ಕೆ ನೆಮ್ಮದಿಯನ್ನು ನೀಡುವ ಸರ್ವಭೂತಹಿತರತಾವನ್ನು ಆಶಿಸುವವರ ಆಯ್ಕೆಯೇ ಶ್ಲಾಘನೀಯವಾದುದು.





ಮಾನವನನ್ನು ಭಗವಂತನು ಸೃಜಿಸಿದರೆಂದು ಆಸ್ತಿಕರು ನಂಬಿದರೆ, ಈ ಸ್ರೃಜಿಸಲ್ಪಟ್ಟ ವ್ಯಕ್ತಿಯು ತನ್ನ ಕ್ರಿಯಾ ಶೀಲ ಪ್ರವೃತ್ತಿಯಿಂದ ಈ ದೇವ ಕಾರ್ಯವನ್ನು ಮುಂದುವರಿಸಬೇಕು. ಕೇವಲ ಇನ್ನೊಬ್ಬರು ಸೃಷ್ಟಿಸಿದ ವಿಷಯಗಳನ್ನು ಆಯ್ಕೆ ಮಾಡುತ್ತಾ ಹೋದಲ್ಲಿ ಮಾನವನ ಮೂಲಭೂತವಾಗಿರುವ ಆ ಸೃಜನಾತ್ಮಕತೆಗೆ ಕುಂದು ತಂದೀತು. ಬದುಕಿನಲ್ಲಿ ಸಂತೃಪ್ತಿಯಿರುವುದು ಹಲವು ಭೋಗ್ಯಗಳ ಆಯ್ಕೆಗಳಿಂದಲ್ಲ ಬದಲಾಗಿ ಡಿ.ಜೆ.ಡಿಯವರ ಪ್ರಕಾರ “ಸಂತೃಪ್ತಿಯು ಅಪಾರ ಸಂಪತ್ತಿನ ಕೂಸಲ್ಲ ಅದು ಕಡಿಮೆ ಬಯಕೆಗಳ ಶಿಶು”. ಜೀವನದಲ್ಲಿ ನಮಗೆ ಬೇಕಾದುದು ಎಷ್ಟು ಅಲ್ಪ ಎಂಬುದನ್ನು ಅದು ಕಳೆದು ಹೋಗುವ ತನಕ ನಾವು ತಿಳಿಯುವುದಿಲ್ಲ.




- ಆನಿಲ್

Read more!

(ಮು೦ದುವರಿಯುವುದು)

1 comment:

  1. navu hege hosa vishayagalannu e blognalli bareyuvadu selvajoseph75@gmail.com

    ReplyDelete