Wednesday 7 October 2009

ಆಯ್ಕೆ - ಭಾಗ 2


ವೇದಾಂತ ಅಭ್ಯಾಸ ಮಾಡುತ್ತಿದ್ದ ಶಿಷ್ಯನೊಬ್ಬ ಗುರುವಿನೊಡನೆ ಮಾತನಾಡುತ್ತಾ “ ಗುರುಗಳೇ ನನ್ನೊಳಗೆ ಸಂಘರ್ಷ ಕಾಡುತ್ತದೆ ಆ ಸಂಘರ್ಷ ನಿವಾರಿಸಲು ಸಹಾಯ ಮಾಡಿ” ಎಂದ ಅದಕ್ಕೆ ಉತ್ತರವಾಗಿ “ಹೋಗಿ ತಪಸ್ಸು ಮಾಡು ಸಂಘರ್ಷದ ಕಾರಣಗಳನ್ನು ಸಂಶೋಧಿಸು” ಶಿಷ್ಯ ಕೆಲಕಾಲ ತಪಸ್ಸು ಮಾಡಿ ಹಿಂದಿರುಗುತ್ತಾನೆ “ಗುರುಗಳೇ ನಾನು ಆಯ್ಕೆಗಳಿರುವುದೇ ಸಂಘರ್ಷಕ್ಕೆ ಕಾರಣ ಎಂದು ಕಂಡುಕೊಂಡಿದ್ದೇನೆ. ಪ್ರಾಣಿಗಳಿಗೆ ಆಯ್ಕೆಯ ಸಮಸ್ಯೆ ಇಲ್ಲ. ಅವು ಪ್ರಾಕೃತಿಕ ಪವೃತ್ತಿಗಳಂತೆ ನಡೆದುಕೊಳ್ಳುತ್ತವೆ. ಆದರೆ ನನಗೆ ಮದುವೆಯಾಗಬೇಕೋ, ಬೇಡವೋ, ಸಸ್ಯಾಹಾರಿಯಾಗಲೋ, ಮಾಂಸಾಹಾರಿಯಾಗಲೋ, ಪ್ರವಚನಕೇಳಲೋ, ಬೇಡವೋ -ಹೀಗೆ ಆಯ್ಕೆಗಳಿವೆ. ಆಯ್ಕೆಯಿರುವಲ್ಲಿ ಸಂಘರ್ಷವಿರುತ್ತದೆ” ಎಂದು ಹೇಳಿದ. ಗುರು ಹೀಗೆಂದ “ಕೇವಲ ಅಯ್ಕೆಗಳಿರುವುದರಿಂದಲೇ
ಸಂಘರ್ಷವುಂಟಾಗುವುದಿಲ್ಲ. ಇನ್ನೂ ಸ್ವಲ್ಪಕಾಲ ತಪಸ್ಸು ಮಾಡಿ ನೋಡು”. ಶಿಷ್ಯ ಪುನಃ ತಪಸ್ಸು ಮಾಡಿದ. ಕೆಲಕಾಲದ ನಂತರ ಹಿಂದಿರುಗಿ ಗುರುವನ್ನು ಭೇಟಿಯಾಗಿ ಗುರುಗಳೇ ನಾನು ಸಂಘರ್ಷದ ಕಾರಣವನ್ನು ತಿಳಿದುಕೊಂಡೆ ಕೇವಲ ಆಯ್ಕೆಯಿಂದ ಸಂಘರ್ಷ ಉಂಟಾಗುವುದಿಲ್ಲ. ಆಯ್ಕೆಯ ಹಿಂದೆ ಬಯಕೆ ಇರುವುದರಿಂದ ಸಂಘರ್ಷವುಂಟಾಗುತ್ತದೆ. ಬಯಕೆ ಅಥವಾ ಕಾಮನೆಯು ಆಯ್ಕೆಯ ಹಿಂದೆ ಒತ್ತಡ ಹಾಕುವುದರಿಂದ ಸಂಘರ್ಷವುಂಟಾಗುತ್ತದೆ.” ಎಂದ.





ನಿಜ ಕಾಮನೆ ಅಥವಾ ಬಯಕೆಯನ್ನು ಪೂರೈಸಲು ಅಸಾಧ್ಯವಾದಾಗ ಅದು ಆಯ್ಕೆಯ ಮೇಲೆ ಒತ್ತಡ ಹಾಕುತ್ತದೆ. ಆಗ ಸಂಘರ್ಷವುಂಟಾಗುತ್ತದೆ. ಈ ಸಂಘರ್ಷದಿಂದ ಮಾನವ ತನ್ನ ಮನಃ ಶಾಂತಿಯನ್ನು ಕಳೆದುಕೊಳ್ಳುತ್ತಾನೆ. ನಮ್ಮ ಮಾನವನ ಹೃದಯದ ನೈಜ ಪರಿಸ್ಥಿತಿಯನ್ನು ಡಿ.ವಿ.ಜಿಯವರು ಮಾರ್ಮಿಕವಾಗಿ ವರ್ಣಿಸುತ್ತಾರೆ. ದೇವ ದಾನವರ ರಣರಂಗ ಮಾನವ ಹೃದಯ ಭಾವ ರಾಗ ಹಠಂಗಳವರ ಸೇನೆಗಳು ಭೂವಿಭವ ಜಯಗಳ ಭ್ರಾಂತಿಯಲಿ ಮರೆಯುವರು ಜೀವಾಮೃತವನವರು. ಮನುಷ್ಯನ ಹೃದಯದಲ್ಲಿ ದೇವತೆಗಳಿಗೂ ರಾಕ್ಷಸರಿಗೂ ಯುದ್ಧನಡೆಯುತ್ತಿರುತ್ತದೆ ಎಂದರೆ ಒಳ್ಳೆಯದು ಮತ್ತು ಕೆಟ್ಟದ್ದಕ್ಕೂ ಒಂದು ಜಗಳ ಅವನ ಹೃದಯದಲ್ಲಿ ನಡೆಯುತ್ತಿರುತ್ತದೆ ಎಂದರ್ಥ. ಭಾವ, ರಾಗ ಮತ್ತು ಹಠಗಳೇ ಅವರ ಸೈನ್ಯಗಳು. ಈ ಭೂಮಿಯ ವೈಭವದ ಮತ್ತು ವಿಜಯಿಗಳ ಭ್ರಾಂತಿಯಲ್ಲಿ ಜೀವದ ಅಮೃತವನ್ನು ಅವರು ಮರೆಯುತ್ತಾರೆ. ಇಂತಹ ಗೊಂದಲ ನಮ್ಮ ಹೃದಯದಲ್ಲಿ ಆಯ್ಕೆಯ ಬಗೆಗೆ ಅವ್ಯಾಹತವಾಗಿ ನಡೆಯುತ್ತಿರುತ್ತದೆ. ಕೆಡುಕಿನ ಬದಲು ಒಳಿತನ್ನ್ನು, ಕಿರಿದಾದಗಿಂತ ಮಹತ್ತಾದದ್ದನ್ನು, ವ್ಯಷ್ಠಿಯ ಬದಲು ಸಮಷ್ಠಿಯ ಆಯ್ಕೆ ಮಾಡುವುದೇ ಮಹಾತ್ಮರ ಲಕ್ಷಣ. ಆದ್ದರಿಂದ ಬದುಕಿನಲ್ಲಿ ಆಯ್ಕೆ ಮಾಡುವಾಗ ಅದು ಪೂರ್ಣತೆಯ, ಸ್ವಸ್ಥತೆಯ, ಜೀವಂತಿಕೆಯಿಂದ ತುಂಬಿದ ಅಯ್ಕೆ ನಮ್ಮದಾಗಲಿ. ನಮ್ಮ ಆಯ್ಕೆಗಳು ಸ್ವಾರ್ಥಕ್ಕಲ್ಲ ಬದಲಾಗಿ ಪರಾರ್ಥಕ್ಕಿರಲಿ. ಸಮಾಜಮುಖೀ ಮನೋಭಾವ ವರ್ಧಿಸಿದ್ದಲ್ಲಿ ನಮಗೆ ಜೀವತುಂಬುವ ಹಾಗೂ ಇತರರಿಗೆ ಜೀವ ಕೊಡುವ ಆಯ್ಕೆಗಳು ನಮ್ಮದಾಗುತ್ತವೆ. ಇಂದಿನ ವಿಹ್ವಲಮಯ ಬದುಕಿಗೆ, ಅಪಾರ ಆಯ್ಕೆಗಳ ನಡುವೆಯೂ ನೆಮ್ಮದಿಯನ್ನು ಕಾಣದ ಹಲವು ಜೀವಗಳಿಗೆ ಮತ್ತು ಸಮಸ್ಯೆಗಳಿಗೆ ಉತ್ತರಗಳು ನಮ್ಮ ಆಯ್ಕೆಯಿಂದಲೇ ಆರಂಭವಾಗಬೇಕು.



-ಅನಿಲ್
Read more!



No comments:

Post a Comment