Wednesday 26 June 2013

ಸ್ವರ್ಗದ ಬಾಗಿಲು

ಇನ್ನೇನು ಮೂರೇ ಜನ
ನನ್ನ ಮುಂದೆ ಸಾಲಲ್ಲಿ ಇದ್ದವರು
ನನ್ನಂತೆಯೇ ನ್ಯಾಯ ತೀರ್ಪಿಗಾಗಿ
ಸ್ವರ್ಗದ ಬಾಗಿಲಲ್ಲಿ ನಿಂತವರು

















ನನ್ನ ಮನದಲ್ಲಾವುದೋ ಅನಂದ
ಸಂತೋಷ ಸಮಾಧಾನ
ಭೂಲೋಕದ ಬಾಳಲ್ಲಿ ಉತ್ತಮ
ಕ್ರೈಸ್ತನಾಗಿಯೇ ಬದುಕಿದ್ದೆ
ಎಂಬ ಬಿಗುಮಾನ

ದಿನವೂ ವಾಕ್ಯವ ಓದಿ ಜಪಸರ ಮಾಡಿ
ಪೂಜೆಗೆ ಹೋಗಿ ಕಾಣಿಕೆ ಹಾಕಿ
ಗುರುಗಳಿಗೆ ಕೈ ಮುಗಿದು ಕ್ಷಮೆ ಬೇಡಿದ್ದೆ
ಸಂತರ ಜೀವನ ಓದಿಕೊಂಡಿದ್ದೆ


ಸ್ವರ್ಗದ ಸಾಲು ಕಿರಿದಾದಂತೆ
ಕರ್ತನ ಕಾಣಲು ಕಾತುರನಾದಂತೆ
ಮಗ್ಗುಲಲ್ಲಿ ಪಾಪಿಗಳ ಸಾಲು
ಅಳುವವರು ಗೋಳಾಡುವವರು
ಕ್ಷಮೆ ಬೇಡುತ್ತಾ ಪ್ರಲಾಪಿಸುತ್ತಿರುವವರು


ಆ ಕಡೆ ಕಣ್ಣಾಯಿಸುತ್ತಿದ್ದಂತೆ
ನಿಂತಿದ್ದವನು ನನ್ನದೇ
ಕಛೇರಿಯ ಸಹದ್ಯೋಗಿ ಗೆಳೆಯ

ದಿನವೂ ಕಂಡು ಒಟ್ಟಿಗೆ ಉಂಡು
ಕೆಲಸ ಮಾಡಿ ನಗುತ್ತಾ ಇದ್ದವರು
ನಾನೂ ಅವನು.
ಇಂದು ತೀರ್ಪಿಗಾಗಿ ಮತ್ತೊಂದು
ಸಾಲಿನಲ್ಲಿ ಕಾಯುತ್ತಿದ್ದ ಅವನು


ದಿನವೂ ಸಿಕ್ಕಾಗ ಜೊತೆ ಜೊತೆ ನಕ್ಕಾಗ
ತೋರಲಿಲ್ಲವೇಕೆ ದೇವರ ನನಗೆ?
ಪ್ರತಿ ದಿನ ಪ್ರತಿ ವಾರ ಹೋಗುವಾಗ
ಗುಡಿಗೆ ಕರೆಯಲಿಲ್ಲ ನನ್ನೇಕೆ?
ನಿನ್ನಂತೆ ಸ್ವರ್ಗ ಭಾಗ್ಯವ ಹೊಂದಲು
ಕರ್ತನ ಕಾಣಲು
ಅಣಿ ಮಾಡಲಿಲ್ಲ ನನ್ನೇಕೆ
ಎಂದು ನನ್ನ ನೋಡಿ
ಅಲ್ಲಿಂದಲೇ ಕೂಗುತ್ತಿದವನಿಗೆ
ಮುಖ ತೋರಲಾಗದೆ ತಲೆ ಬಾಗಿದೆ

ಇನ್ನೂ ಒಬ್ಬರೇ ನನ್ನ ಮುಂದೆ ಸಾಲಲ್ಲಿ
ಗೆಳೆಯ ಮಾತ್ರ ಇನ್ನಷ್ಟು
ಪ್ರಶ್ನೆಗಳನ್ನು ಕೇಳುತ್ತಿದ್ದ
ತಡೆಯಲಾರದಾಯಿತು ನನಗೆ
ಎದೆಯ ಭಾರಕ್ಕೆ ಕುಸಿಯುವಂತಾದೆ
ಬಿದ್ದೆ.........

ಎದ್ದಾಗ ಕಣ್ಣುಬಿಟ್ಟಾಗ..
ಕನಸ್ಸಾಗಿತ್ತು ಅದು
ಅದರೂ ಮನಸ್ಸಿಗೆ ಅದೇ ಭಾರ
ಖಾಲಿತನ

ಅರಿತೆ ಅಂದೇ,.....
ನನ್ನ ಕರ್ತ ನನ್ನ ದೇವ
ಅತನ ವಾಕ್ಯ ಶಿಲುಬೆ ತ್ಯಾಗವೆಲ್ಲಾ
ಗುಟ್ಟಲ್ಲ, ನನ್ನದು ಮಾತ್ರವಲ್ಲ
ಹಂಚದೆ ಹರಡದೆ
ನನ್ನ ಸ್ವರ್ಗ ಪೂರ್ತಿಯಲ್ಲ

-ಪ್ರಶಾಂತ್ ಇಗ್ನೇಷಿಯಸ್
(ಇಂಗ್ಲೀಷ್ ಬರಹವೊಂದರ ಸ್ಪೂರ್ತಿ)!

No comments:

Post a Comment