ಐದು ವರ್ಷಕ್ಕೊಮ್ಮೆ ಬರುವ
ಕಡು ಬಡವಗೂ ಹೆಮ್ಮೆಯ ತರುವ
ಎಲ್ಲ ಜನಗಳ ಕಣ್ಣು ತೆರೆಸುವ ವರದಾನ
ಎಲ್ಲರ ಪಾಲಿಗು ಅಮೂಲ್ಯವಾದ ಮತದಾನ
ಪ್ರಜಾ ಪ್ರಭುತ್ವ ಕೊಟ್ಟ ಕೊಡುಗೆಯೋ
ಪರಮಧಿಕಾರ ಇಟ್ಟ ನಡಿಗೆಯೋ
ದುಷ್ಟರ ಕೂಟಕೆ ದಿಟ್ಟ ಸವಾಲೋ
ಜನಗಳ ಅರಿವಿನ ಅಗ್ನಿ ಪರೀಕ್ಷೆಯೋ
ಎಲ್ಲರ ಎದೆಯಲಿ ಕನಸನು ಬೆಳೆಸುತ
ಭ್ರಮೆಗಳ ನೆಲೆಸುವ ಮತದಾನ
ಎಲ್ಲರ ಪಾಲಿಗು ಅಮೂಲ್ಯವಾದ ಮತದಾನ
ಚುನಾವಣೆಗಳು ಬಂದಾಗಲೆಲ್ಲಾ ಕವಿ ಸಿದ್ಧಲಿಂಗಯ್ಯನರು ಬರೆದ ಈ ಮೇಲಿನ ಚಿತ್ರಗೀತೆ ಬಿಟ್ಟು ಬಿಡದಂತೆ ನೆನಪಿಗೆ ಬರುತ್ತದೆ. ಪ್ರಜಾಪ್ರಭುತ್ವದ ದೊಡ್ಡ ಕೊಡುಗೆಯಾದ, ದುಷ್ಟ ವ್ಯವಸ್ಥೆಗೆ ಸವಾಲಾಗಬಲ್ಲಂಥ, ಜನಗಳ ಅರಿವು, ಜವಬ್ದಾರಿಗಳನ್ನು ಅಗ್ನಿ ಪರೀಕ್ಷೆಗೆ ಒಳಪಡಿಸುತ್ತಲೇ, ಆಶಾವಾದದ ಕನಸನ್ನು ಬಿತ್ತುವ ಚುನಾವಣೆ, ಮತದಾನದ ಬಗ್ಗೆ ಸುಂದರವಾಗಿ ರಚಿತವಾದ ಗೀತೆ ಇದು. ಹಾಗೆಯೇ ಮುಂದುವರಿಯುವ ಗೀತೆ ತನ್ನ ಮುಂದಿನ ಸಾಲುಗಳಲ್ಲಿ ಮತದಾನವೆಂಬ ಪ್ರಜಾಪ್ರಭುತ್ವದ ಶಕ್ತಿಯುತ ಸಾಧನ ಹೇಗೆ ಸ್ವಾರ್ಥ, ಭ್ರಷ್ಟ ವ್ಯವಸ್ಥೆಯಲ್ಲಿ ನಲುಗಿ ತನ್ನ ನಿಜ ಸ್ವರೂಪವನ್ನು ಕಳೆದುಕೊಳ್ಳುತ್ತಿದೆ ಎಂಬುದನ್ನು ಎಳೆ ಎಳೆಯಾಗಿ ಚಿತ್ರಿಸುತ್ತಾ ಹೋಗುತ್ತದೆ. ಮತ್ತೊಂದು ಚುನಾವಣೆ ಬಂದಿರುವ ಈ ಸಂದರ್ಭದಲ್ಲಿ ಇದು ಸಮಯೋಚಿತ.
ಕೆಳೆದ ಐದು ವರ್ಷಗಳಲ್ಲಿ ಹಲವಾರು ಬಾರಿ ಮುಂದಿನ ವಾರವೋ, ಬರುವ ತಿಂಗಳೋ ಆಗಬಹುದು ಎಂಬಂತ್ತಿದ್ದ ಚುನಾವಣೆಗಳು ಈಗ ನಿಜಕ್ಕೂ ಬಂದಿದೆ. ಪೂರ್ತಿ ಐದು ವರ್ಷದ ಬಳಿಕವೇ ಬರುತ್ತಿದೆ ಎಂಬುದು ಸಮಾಧಾನದ ವಿಷಯ. ಒಂದೆರೆಡು ತಿಂಗಳ ಹಿಂದಷ್ಟೇ ನಡೆದ ಸ್ಥಳೀಯ ಚುನಾವಣೆಗಳನ್ನು ಎದುರಿಸಲು ಭಾರಿ ಹಿಂದೇಟು ಹಾಕಿದ ಪಕ್ಷಗಳು ಈ ಬಾರಿಯ ವಿಧಾನಸಭೆಯ ಚುನಾವಣೆಯನ್ನು ಎದುರಿಸಲು ಅತ್ತ್ತ್ಯುತ್ಸಾಹದಿಂದ ಗರಿಗೆದರಿ ನಿಂತಿವೆ. ಪಕ್ಷಗಳ ಟಿಕೆಟ್ ಆಕಾಂಕ್ಷಿಗಳ ಸಾಲು, ಟಿಕೆಟ್ ಪಡೆದವರ ಸಂಭ್ರಮ, ಸಿಗದವರ ನಿರಾಸೆ, ಪ್ರತಿಭಟನೆ, ನಾಮ ಪತ್ರ ಸಲ್ಲಿಸುವಾಗ ನಡೆಯುತ್ತಿರುವ ಮೆರವಣಿಗೆ, ಆಗುತ್ತಿರುವ ಟ್ರಾಫಿಕ್ಕು ಜಾಮು, ಲಾಠಿ ಚಾರ್ಜು ಎಲ್ಲವನ್ನು ನೋಡುತ್ತಿದ್ದರೆ ಈ ಬಾರಿಯ ಚುನಾವಣೆಗಳು ಭಾರಿ ಕುತೂಹಲ ಮೂಡಿಸಿದೆ.
ಸರಿಯಾಗಿ ಗಮನಿಸಿದರೆ ಹಲವು ಪ್ರತಿಷ್ಠಿತ ಕ್ಷೇತ್ರಗಳಲ್ಲಿ, ಪ್ರತಿಯೊಂದು ಪಕ್ಷದಿಂದಲೂ ಕನಿಷ್ಠ ಇಬ್ಬರಾದರೂ ಟಿಕೆಟ್ ಆಕಾಂಕ್ಷಿಗಳು. ಯಾರಿಗೆ ಟಿಕೆಟ್ ಕೊಡಬೇಕೆನ್ನುವ ತಲೆನೋವು ಮಾತ್ರವಲ್ಲದೆ, ಜೋರು ಪ್ರತಿಭಟನೆಗಳನ್ನು ಪಕ್ಷದ ಮುಖಂಡರು ಎದುರಿಸಬೇಕಾಗಿ ಬಂದಿದೆ. ತಮ್ಮ ನಾಯಕರೊಬ್ಬರಿಗೆ ಟಿಕೆಟ್ ಕೊಡಲಿಲ್ಲ ಎಂಬ ಕಾರಣಕ್ಕೆ ಪಕ್ಷದ ಹಿರಿಯ ಮುಖಂಡರೊಬ್ಬರು ಹೊರಟಿದ್ದ ಕಾರಿನ ಚಕ್ರದ ಬಳಿ ಮಲಗಿ ಪ್ರತಿಭಟಿಸಿದ ಕಾರ್ಯಕರ್ತನೊಬ್ಬನ ನೋವನ್ನು ಟಿ.ವಿ ಚಾನೆಲ್ಲಗಳು ನಿಮಿಷಕ್ಕೆ ಐದಾರಿ ಬಾರಿ ಹಾಕುತ್ತಿದ್ದವು. ಹಾಗೇ ಪ್ರತಿಭಟನೆಗೆ ಕರೆದುಕೊಂಡು ಬಂದಿದ್ದ ವೃದ್ಧರೊಬ್ಬರು ಹೃದಯಾಪಘಾತವಾಗಿ ಸತ್ತ ಮನಕಲಕುವ ಘಟನೆಯೂ ನಡೆದಿದೆ. ಈ ಹತ್ತಾರು ನ್ಯೂಸ್ ಚಾನೆಲ್ಲುಗಳು ಬಂದ ಮೇಲೆ, ಈಗ ಪಕ್ಷಗಳಲ್ಲಿ "ಒಳ ಜಗಳಗಳೇ" ಇಲ್ಲ, ಎಲ್ಲಾವೂ ನೇರಾತಿ ನೇರ, ಜನರ ಮುಂದೆ ಬಹಿರಂಗದ "ಹೊರ ಜಗಳಗಳೇ". ನಾಯಕರುಗಳ ಈ ಟಿಕೆಟ್ ಪಡೆಯುವಿಕೆ,ನಾಮ ಪತ್ರ ಸಲ್ಲಿಕೆ, ಚುನಾವಣೆ ಎದುರಿಸುವ ಸಿದ್ಧತೆ, ಬದ್ಧೆತೆಗಳನ್ನು ಕಂಡು, ಇದೇ ಸಿದ್ಧತೆ, ಬದ್ಧತೆಗಳನ್ನು ಅವರು
ಜನರ ಸಮಸ್ಯೆಗಳ ಬಗೆಗೂ ತೋರಿದರೆ, ನೀರು, ಕರೆಂಟು, ಬಸ್ಸು ರೋಡು, ಶಾಲೆ, ಆಸ್ಪತ್ರೆ ಮುಂತಾದವುಗಳೆಲ್ಲಾ ಸಮಸ್ಯೆಗಳೆಲ್ಲ ಸಮಸ್ಯೆಗಳೇ ಅಲ್ಲ ಎಂಬ ಅನಿಸಿಕೆ ಜನಸಾಮಾನ್ಯರದು. ಇನ್ನೂ ಅಲ್ಲಲ್ಲಿ ಕೇಳಿ ಬರುತ್ತಿರುವ ಭಾಷಣಗಳು, ಪ್ರಣಾಳಿಕೆಗಳು, ಪರಸ್ಪರ ದೋಷಾರೋಪಗಳನ್ನು ಕಂಡಾಗ ಮೇಲಿನ ಹಾಡಿನ ಮುಂದಿನ ಸಾಲುಗಳು ನೆನಪಾಗುತ್ತವೆ.
![]() |
ಚಿತ್ರಕೃಪೆ : ಪ್ರಜಾವಾಣಿ |
ಬಣ್ಣ ಬಣ್ಣದ ಭಾಷಣದಲ್ಲಿ
ಕಣ್ಮನ ಸೆಳೆಯುವ ಸ್ವರ್ಗವ ತಂದು
ಎಲ್ಲರ ಎದೆಯಲಿ ಕನಸನು ಬೆಳೆಸುತ
ಭ್ರಮೆಗಳ ಮೆರೆಸುವ ಮತದಾನ
ಆಡುವ ಮಾತು ಹೃದಯದ್ದಲ್ಲ
ಮಾಡುವ ಕೆಲಸ ಮನಸಿನದಲ್ಲ
ಭಾವನೆ ಇಲ್ಲದ ಕನಸನು ಕೊಲ್ಲುವ
ಸುಳಿಯಲಿ ಸಿಲುಕುವ ಮತದಾನ
ಎಲ್ಲರ ಪಾಲಿಗು ಅಮೂಲ್ಯವಾದ ಮತದಾನ .....
ಇಷ್ಟೆಲ್ಲದರ ನಡುವೆಯೂ ಜನ ಸಾಮಾನ್ಯರಾದ ನಾವು ನೀವು ಮತದಾನದ ಬಗ್ಗೆ, ಚುನಾವಣೆಗಳ ಬಗ್ಗೆ ಆಶಾವಾದ ಇಟ್ಟುಕೊಳ್ಳಲೇ ಬೇಕಾಗಿದೆ. ನಿಜಕ್ಕೂ ಇದು ಪ್ರಜಾಪ್ರಭುತ್ವದ ದೊಡ್ಡ ಕೊಡುಗೆಯೇ. ಮತ ಚಲಾಯಿಸದೆ ವ್ಯವಸ್ಥೆಯನ್ನು ದೂಷಿಸುವುದರಲ್ಲಿ ಅರ್ಥವಿಲ್ಲವೆಂಬ ಸತ್ಯವನ್ನು ನಾವು ಮನಗಾಣಬೇಕಾಗಿದೆ. ಪ್ರತಿ ಹೊಸ ಚುನಾವಾಣೆಯ ಸಮಯದಲ್ಲಿ ಹೊಸದಾಗಿ ಮತ ಚಲಾಯಿಸುವ ಹಕ್ಕು ಪಡೆಯುವ ಯುವಕರ ಸಂಖ್ಯೆ ದುಪ್ಪಟ್ಟಾಗುತ್ತಿರುವ ಈ ಸಂದರ್ಭದಲ್ಲಿ ಯುವ ಜನತೆಯ ಪಾತ್ರವೂ ಮಹತ್ವದಾಗಿದೆ. ಒಬ್ಬ ಕ್ರಿಕೆಟ್ ಆಟಗಾರನ ಎಲ್ಲಾ ಅಂಕಿ ಅಂಶಗಳೂ, ಒಬ್ಬ ಸಿನಿಮಾ ನಟನ ವ್ಯಯಕ್ತಿಕ ಜೀವನದ ಸಣ್ಣ ವಿವರಗಳೂ ಗೊತ್ತಿರುವ ನಮಗೆ, ಮುಂದೆ ನಮ್ಮನ್ನು ಪ್ರತಿನಿಧಿಸುವ ನಮ್ಮದೇ ಕ್ಷೇತ್ರದ ಅಭ್ಯರ್ಥಿಯ ವಿವರಗಳು ಮುಖ್ಯದಾಗಬೇಕಾಗುತ್ತದೆ. ಯಾವ ಮೊಬೈಲಿನಲ್ಲಿ ಯಾವ ಸೌಲಭ್ಯವಿದೆ, ಯಾವ ಸಿಮ್ ಹೆಚ್ಚು ಫ್ರೀ ಎಸ್.ಎಮ್.ಎಸ್ ಕೊಡುತ್ತದೆ ಎಂಬ ಗೊಂದಲಗಳಂತೆಯೇ ಯಾವ ಪಕ್ಷಕ್ಕೆ ಮತ ಕೊಟ್ಟರೆ ನಾಡಿಗೆ ಒಳ್ಳೆಯದಾಗುತ್ತದೆ, ಯಾವ ಅಭ್ಯರ್ಥಿ ಏಕೆ ನಮ್ಮ ಕ್ಷೇತ್ರಕ್ಕೆ ಬೇಕು, ನಮ್ಮ ಹಿತ ಕಾಯುವುದು ರಾಷ್ಟ್ರೀಯ ಪಕ್ಷವೇ? ಪ್ರಾದೇಶಿಕ ಪಕ್ಷವೇ?, ನಮಗೆ ಪಕ್ಷ ಮುಖ್ಯವೇ ಆಥವಾ ಕ್ಷೇತ್ರದ ಅಭ್ಯರ್ಥಿ ಮುಖ್ಯವೇ? ಎನ್ನುವಂಥಹ ಗೊಂದಲ, ಪ್ರಶ್ನೆಗಳು ನಮ್ಮಲ್ಲಿ ಮೂಡಬೇಕಾಗಿದೆ. ಮೂಡುವ ಪ್ರಶ್ನೆಗಳಿಗೆ ಉತ್ತರವನ್ನೂ ಕಂಡುಕೊಳ್ಳಬೇಕಾಗಿದೆ. ಈ ನಿಟ್ಟನಲ್ಲಿ ನಮ್ಮ ಕೆಲವೊಂದು ಪತ್ರಿಕೆಗಳು ನಿಜಕ್ಕೂ ಒಳ್ಳೆಯ ಕೆಲಸವನ್ನು ಮಾಡಿ ಪ್ರತಿ ಕ್ಷೇತ್ರದಲ್ಲಿನ ಪರಿಸ್ಥಿತಿ, ಅಭ್ಯರ್ಥಿಗಳ ಬಗ್ಗೆ ನಿಖರವಾದ ಮಾಹಿತಿಗಳನ್ನು ಕೊಡುತ್ತಿವೆ. ಅವೆಲ್ಲವನ್ನು ಗಣನೆಗೆ ತೆಗೆದುಕೊಂಡು ನಮ್ಮ ಮತಗಳನ್ನು ಚಲಾಯಿಸಬೇಕಾದ ಅನಿವಾರ್ಯತೆ ಹಿಂದೆಂದಿಗಿಂತಲೂ ಈಗ ಇದೆ. ಜವಬ್ದಾರಿಯುತ ಮತದಾನದಿಂದಾಗಿ ಜವಬ್ದಾರಿಯುತವಾದ ನಾಯಕ ಸಮೂಹವನ್ನು ಕಟ್ಟುವ, ಅದರೊಂದಿಗೆ ನಾಡಿನ ಅಭಿವೃಧಿಯಲ್ಲಿ ಪಾಲುದಾರರಾಗುವ ಸದವಕಾಶ ನಮಗೆ ಚುನಾವಣೆಗಳು ನೀಡಿದೆ.

ಕೊನೆಗೆ, ದುಂಡಿರಾಜರ ಚುನಾವಣೆ ಬಗೆಗಿನ ಒಂದು ಹನಿಗವನ:
ಚುನಾವಣೆ ಎಂದರೆ ಕೆಲವು ನಾಯಕರಿಗೆ
ಕಂಡಾಬಟ್ಟೆ
ಸಿಟ್ಟು.
ಕೆಳೆದ ಚುನಾವಣೆಯಲ್ಲಿ ಪಾಪ ಅವರು
ಕಳೆದುಕೊಂಡಿದ್ದರು ಡಿಪಾ
ಸಿಟ್ಟು!!!
- ಪ್ರಶಾಂತ್ ಇಗ್ನೇಷಿಯಸ್
No comments:
Post a Comment