Tuesday, 15 March 2022

ಪುನೀತ್ ಇಲ್ಲದ ಈ ನಾಲ್ಕು ತಿಂಗಳು.... - ಪ್ರಶಾಂತ್ ಇಗ್ನೇಷಿಯಸ್







ದೊಡ್ಡಮಟ್ಟದಲ್ಲಿ ವೈರಲ್ ಆದ ವಿಡಿಯೋ ಅದು
. ಬಸ್ಸೊಂದರ ಮೇಲೊಂದು ಪೋಸ್ಟರ್. ಪೋಸ್ಟರ್ ಮೇಲೆ ಒಂದಷ್ಟು ಧೂಳು. ತನ್ನ ಮನೆಯ ಗೋಡೆಯ ಮೇಲಿನ ಧೂಳೇನೋ ಎಂಬಂತಹ ಕಾಳಜಿಯಿಂದ ಆ ಪೋಸ್ಟರ್ ಅನ್ನು ಒರೆಸುತ್ತಿದ್ದ ಹಣ್ಣು ಹಣ್ಣು ಅಜ್ಜಿ. ಸಾಮಾನ್ಯವಾಗಿ ಅವಸರದಲ್ಲೇ ಇರುವ ಬಸ್ಸಿನ ಡ್ರೈವರ್ ಆ ಅಜ್ಜಿ ಒರೆಸುವುದನ್ನು ನೋಡುತ್ತಾ ನಿಂತಿದ್ದ ವಿಡಿಯೋ ಅದು.  ಆ ಪೊಸ್ಟರ್ ಪುನೀತ್ ರಾಜಕುಮಾರ್ ದು. ಪುನೀತ್ ಅಗಲಿ ಒಂದಷ್ಟು ದಿನಗಳಾಗಿತ್ತಷ್ಟೇ. ಪುನೀತ್ ಸಾವು ಇಡೀ ನಾಡಿಗೆ ತಂದ ಭಾವಸ್ಪಂದನದ ಸಣ್ಣ ಉದಾಹರಣೆಯಷ್ಟೇ ಅದು.  ಪುನೀತ್ ಅಗಲಿ ನಾಲ್ಕೈದು ತಿಂಗಳು ಕಳೆದು ಅವರ ಹುಟ್ಟು ಹಬ್ಬ ಈ ಸಮಯದಲ್ಲಿ ಇಡೀ ಕರ್ನಾಟಕವೇ ಒಂದೇ ಉಸಿರಿನಲ್ಲಿ ಅಂದು ಕೇಳಿದ, ಇಂದಿಗೂ ಕೇಳುತ್ತಿರುವ ಪ್ರಶ್ನೆ ಒಂದೇ “ಈ ಸಾವು ನ್ಯಾಯವೇ?”.

ಸಾಮಾನ್ಯವಾಗಿ ಸಣ್ಣವಯಸ್ಸಿನಲ್ಲಿ ಸತ್ತ ವ್ಯಕ್ತಿಗಳ ಬಗ್ಗೆ ಈ ಪ್ರಶ್ನೆ ಸಹಜವಾಗಿಯೇ ಕೇಳಿಬರುತ್ತದೆ. ವ್ಯಕ್ತಿ ಜನಪ್ರಿಯನಾಗಿದ್ದರೆ ಸುತ್ತಮುತ್ತಲಿನ ಜನಸಮುದಾಯ ನೊಂದುಕೊಳ್ಳುತ್ತದೆ, ವಿಷಾದಿಸುತ್ತದೆ. ಆದರೆ ಇಡೀ ನಾಡೇ ಒಂದು ದೊಡ್ಡ ವಿಷಾದಕ್ಕೆ ತನ್ನನ್ನೇ ದೂಡಿಕೊಂಡು ದಿಗ್ಭ್ರಮೆಯಿಂದ ಹೊರಬಾರದಂತೆ ಪ್ರತಿಕ್ರಿಯಿಸುತ್ತಾ, ಒಂದು ಸಾವನ್ನು ಒಪ್ಪದ ಮನಸ್ಸಿನಿಂದ ಚಡಪಡಿಸುತ್ತಾ ತನ್ನ ಭಾವ ಪ್ರಪಂಚಕ್ಕೆ ಸೇರಿಸಿಕೊಳ್ಳುವುದು ಅಪರೂಪದ ಸಂಗತಿ.

ಜನಪ್ರಿಯ ವ್ಯಕ್ತಿಗಳು ಸಾಧಕರು, ಅದರಲ್ಲೂ ಜನಸೇವೆಯಲ್ಲಿ ಹೆಸರು ಮಾಡಿದವರು ಸತ್ತಾಗ ನಾಡು ಕಂಬನಿ ಮಿಡಿಯುವುದನ್ನು ನಾವು ಕಾಣುತ್ತೇವೆ. ಆ ರೀತಿಯ ಬಹುತೇಕರು ತುಂಬು ಜೀವನ ನಡೆಸಿ ತಮ್ಮ ಇಳಿವಯಸ್ಸಿನಲ್ಲಿ ಅಗಲಿದಾಗ ನೋವಾದರೂ ಭಾವಾಂತರಂಗದಲ್ಲಿ ಸಾವಿನ ಬಗ್ಗೆ ಒಂದು ಮಾನಸಿಕ ಸಿದ್ಧತೆ ಜೊತೆಗೆ ಸಾರ್ಥಕತೆ ಇರುತ್ತದೆ. ಆದರೆ ಪುನೀತ್ ಸಾವನ್ನು ಕರ್ನಾಟಕದ ಜನತೆ ಸುಲಭದಲ್ಲಿ ಅರಗಿಸಿಕೊಳ್ಳಲಿಲ್ಲ ಎಂಬ ವಿಷಯದಲ್ಲಿ ಯಾವುದೇ ಅನುಮಾನವಿಲ್ಲ.

ಸುಮಾರು 20 ಲಕ್ಷದಷ್ಟು ಜನ ಅಂದು ಅಂತಿಮ ನಮನ ಸಲ್ಲಿಸಲು ಬಂದರೆ, ಇಂದಿಗೂ ಭಾನುವಾರ ರಜಾ ದಿನಗಳಲ್ಲಿ 20- 30 ಸಾವಿರ ಜನ ಸಮಾಧಿಗೆ ಬರುತ್ತಿರುವುದು ಒಂದು ಸಾಂಸ್ಕೃತಿಕ ಅಚ್ಚರಿಯೇ ಸರಿ. ಪುನೀತ್ ಒಬ್ಬ ಸಿನೆಮಾ ನಟ. ಅದರಲ್ಲೂ ಬೆಳ್ಳಿ ಪರದೆಯನ್ನು ವಿಶಿಷ್ಟವಾಗಿ ಆವರಿಸಿಕೊಂಡು ರಂಜಿಸಬಲ್ಲವನಾಗಿದ್ದ ಒಬ್ಬ ಸುಸಂಸ್ಕೃತ ಸಜ್ಜನ ಜನಪ್ರಿಯ ನಟ. ಆದರೆ ಕರ್ನಾಟಕದ ಜನತೆ ಮಾತ್ರವಲ್ಲದೆ ಇಡೀ ದೇಶವೇ ಪುನೀತ್ ಸಾವಿಗೆ ಸ್ಪಂದಿಸಿದ ರೀತಿ ನಟನಾರಂಗದ ಗಡಿಯನ್ನು ಮೀರಿದ್ದು.

ಈ ತೀವ್ರತರವಾದ ಭಾವ ಸ್ಪಂದನಕ್ಕೆ ಕಾರಣವಾದರೂ ಏನು? ಕೇವಲ 46ನೇ ವರ್ಷದಲ್ಲಿ ಅಗಲಿದರೂ ಎಂಬುದೇ? ಇನ್ನುಮುಂದೆ ರಂಜಿಸಲು ಇಲ್ಲವಲ್ಲ ಎಂಬ ಖಾಲಿ ಭಾವವೇ? ಡಾ.ರಾಜ್ ಪುತ್ರನೆಂಬ ಅಭಿಮಾನವೇ? ಎಂಬ ಪ್ರಶ್ನೆಗಳು ಮೂಡುತ್ತವೆ. ಇವೆಲ್ಲವೂ ಹೌದು, ಆದರೆ ಇದೆಲ್ಲದಕ್ಕೂ ಮೀರಿದ ಭಾವನಾತ್ಮಕ ಕೊಂಡಿ ಪುನೀತ್ ಹಾಗೂ ಕನ್ನಡ ಜನತೆಯ ನಡುವೆ ಇತ್ತು ಹಾಗೂ ಪುನೀತ್ ಕೆಲವಾರು ವರ್ಷಗಳಲ್ಲಿ ಆ ಕೊಂಡಿಯನ್ನು ಗಟ್ಟಿಗೊಳಿಸುತ್ತಾ ಹೋಗಿದ್ದು ಮಾತ್ರವಲ್ಲದೆ ಅದನ್ನು ವಿಸ್ತರಿಸುತ್ತಾ ಸಾಗಿದ್ದರು. ಅದು ಕರ್ನಾಟಕದ ಉದ್ದಗಲಕ್ಕೂ ಮಾತ್ರವಲ್ಲದೆ ಅಕ್ಕಪಕ್ಕದ ರಾಜ್ಯಗಳಲ್ಲಿ ಹರಡುವಂತೆ ತಮ್ಮ ವ್ಯಕ್ತಿತ್ವದಿಂದಲೇ ನೋಡಿಕೊಂಡರು. ಅಕ್ಕಪಕ್ಕದ ರಾಜ್ಯಗಳ ಕಥೆ ನಂತರಕ್ಕಿರಲಿ, ಕರ್ನಾಟಕದಲ್ಲಿ ಇದು ಈ ಪರಿ ಬೆಳೆದದ್ದಾದರೂ  ಹೇಗೆ?

ಚಿತ್ರರಂಗದ ಬಾಲನಟರಲ್ಲಿ ಪುನೀತ್ ಹೆಸರು ಮೊದಲ ಸಾಲಿನಲ್ಲಿ ಕಾಣುತ್ತದೆ. ಒಂದಷ್ಟು ಬಾಲನಟರು ಬಂದು, ಹೋಗಿ ಉತ್ತಮವಾಗಿ ನಟಿಸಿದ್ದರೂ ಗಮನಸೆಳೆದಿದ್ದರೂ ಇಲ್ಲಿ ಉಳಿದದ್ದು ಕೆಲವೇ ಮಂದಿ. ಡಾ ರಾಜ್ ಚಿತ್ರಗಳಲ್ಲಿ ಬಾಲನಟನಾಗಿ ಬಂದು ಪುನೀತ್ ಗಮನ ಸೆಳೆಯಲು ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ. ಬಾಲನಟನಾಗಿ ಕಾಣಿಸಿಕೊಂಡ ಪಾತ್ರಗಳು ಚಿತ್ರದಲ್ಲಿ ತುರುಕಿದಂತೆ ಕಾಣಲಿಲ್ಲ. ಇಲ್ಲಿ ಪಾರ್ವತಮ್ಮ ಹಾಗೂ ಅಂದಿನ ನಿರ್ದೇಶಕರ ಜಾಣ್ಮೆ ಮೆಚ್ಚತಕ್ಕದ್ದೇ. ಗಂಡ-ಹೆಂಡಿರ ಮುನಿಸಿನ ನಡುವಿನ ಮುದ್ದು ಮಗನ ’ವಸಂತ ಗೀತ’ ಪಾತ್ರ, ಕೊಲೆಯೊಂದರ ಪ್ರಮುಖ ಸಾಕ್ಷಿಯಾಗಿ ನಿಲ್ಲುವ ’ಚಲಿಸುವ ಮೋಡಗಳು’, ನತದೃಷ್ಟ ಎಂದು ಕರೆಸಿಕೊಂಡು ಕೊನೆಯಲ್ಲಿ ಸಾವಿರಾರು ಜನರ ಪ್ರಾಣವುಳಿಸುವ ’ಭಾಗ್ಯವಂತ’, ರಾಕ್ಷಸ ತಂದೆಗೆ ಸರಿಸಮನಾಗಿ ನಿಲ್ಲುವ ’ಭಕ್ತ ಪ್ರಹ್ಲಾದ’,  ಪತ್ತೆದಾರಿ ಪೊಲೀಸರಿಗೆ ಸಹಾಯ ಮಾಡುವ ’ಯಾರಿವನು’, ದ್ವಿಪಾತ್ರದ ’ಎರಡು ನಕ್ಷತ್ರಗಳು’ ಹಾಗೂ  ಎಲ್ಲದಕ್ಕೂ ಕಳಶವಿಟ್ಟಂತೆ ಬಡ ಹುಡುಗನ ಪಾತ್ರದಲ್ಲಿ ರಾಷ್ಟ ಪ್ರಶಸ್ತಿ ಪಡೆದ ’ಬೆಟ್ಟದ ಹೂವು’, ಎಲ್ಲವೂ ಪುನೀತ ರನ್ನು ಕನ್ನಡ ಜನರ ಹೃದಯದಲ್ಲಿ ಗಟ್ಟಿಯಾಗಿ ನಿಲ್ಲಿಸಿದ ಚಿತ್ರಗಳು.

 ಈ ಚಿತ್ರಗಳಲ್ಲಿನ ಲವಲವಿಕೆಯ ಅಭಿನಯ ಮಾತ್ರವಲ್ಲದೆ ಸ್ವತ: ಗಾಯನ ಕೂಡ ಪುನೀತ್ ಗೆ ಜನಪ್ರಿಯತೆಯ ಜೊತೆಗೆ ಜನರಲ್ಲಿ ಮೆನೆ ಮಗನ ಸ್ಥಾನ ದೊರಕಿಸಿತು.  ಆ ಸಮಯದಲ್ಲಿ ಎಲ್ಲರಿಗೂ ತಮ್ಮ ಮಕ್ಕಳು ಪುನೀತರಂತೆ ಹಾಡಿ ಅಭಿನಯಿಸಬೇಕೆಂಬ ಹಂಬಲ.

 ಬಾಲನಟನ ಅಧ್ಯಾಯ ಮುಗಿದು, ನಾಯಕ ನಟನಾಗುವ ಸಮಯದಲ್ಲಿ ಹೊಸ ನಾಯಕ ನಟರಿಗೆ ಕನ್ನಡ ಚಿತ್ರರಂಗ ಒಂದು ಪೂರಕವಲ್ಲದ ವಾತಾವರಣದಂತಿತ್ತು. ಡಾಕ್ಟರ್ ರಾಜ್ ಸೇರಿದಂತೆ ಹಿರಿಯ ನಟರ ಸಿನಿಮಾಗಳು ಕ್ರಮೇಣ ಕಡಿಮೆಯಾಗ ತೊಡಗಿ, ಗುಣಮಟ್ಟದಲ್ಲಿ ಪರಭಾಷಾ ಚಿತ್ರಗಳ ಮುಂದೆ ಸೊರಗಿ, ಸೃಜನಶೀಲ ನಿರ್ದೇಶಕರ ಕೊರತೆಯ ಸಮಯದಲ್ಲಿ ಪುನೀತರ ಮೊದಲ ಚಿತ್ರ ’ಅಪ್ಪು’ ಚಿತ್ರ ತೆರೆಗೆ ಸಿದ್ದವಾಗಿತ್ತು.   ಪುನೀತ್ ಎಂಬ ಕುತೂಹಲ ನಿರೀಕ್ಷೆ ಇದ್ದರೂ ಕುಟುಂಬ ಸಮೇತ ಚಿತ್ರ ನೋಡುವ ಪರಿಪಾಠ ಕನ್ನಡದ ಮಟ್ಟಿಗೆ ಗಣನೀಯವಾಗಿ ಕಡಿಮೆಯಾಗಿತ್ತು. ಯಾವುದೋ ವ್ಯಾಪಾರ ಮಾಡಲು ಹೋಗಿ ಕೈ ಸುಟ್ಟುಕೊಂಡಿದ್ದು ಮಾತ್ರವಲ್ಲದೆ, ಸಣ್ಣ ವಿವಾದಕ್ಕೂ ಪುನೀತ್ ಗುರಿಯಾಗಿದ್ದರು.

ಆದರೆ ರಾಜ್ ಸಂಸ್ಥೆ ಜನರ ನಿರೀಕ್ಷೆಯನ್ನು ಸುಳ್ಳು ಮಾಡಲಿಲ್ಲ ಕತೆಯ ಆಯ್ಕೆಯಲ್ಲಿ ಸದಾ ಒಂದು ಹೆಜ್ಜೆ ಮುಂದಿದ್ದ ಸಂಸ್ಥೆ ಯುವ ಜನಾಂಗಕ್ಕೆ ಬೇಕಾದ ಪ್ರೇಮಕಥೆಯನ್ನು ಪುನೀತ್ ಮೊದಲ ಚಿತ್ರಕ್ಕೆ ಆಯ್ಕೆ ಮಾಡಿತ್ತು.  ಈ ದೊಡ್ಡಮಟ್ಟದ ನಿರೀಕ್ಷೆಯನ್ನು ಪುನೀತ್ ಮುಟ್ಟಬಲ್ಲರೇ ಎಂಬ ಸಣ್ಣ ಅನುಮಾನದಿಂದಲೇ ಥಿಯೇಟರಿಗೆ ಕಾಲಿಟ್ಟ ಜನಕ್ಕೆ ಆನಂದದ ಅಚ್ಚರಿ ಕಾದಿತ್ತು. ಯುವ ಜನರಿಗೆ ಬೇಕಾದ ಎಲ್ಲವೂ ಚಿತ್ರದಲ್ಲಿತ್ತು. ಅದಕ್ಕಿಂತಲೂ ಮುಖ್ಯವಾಗಿ ರಾಜ್ ಸಂಸ್ಥೆಯಿಂದ ಜನ ನಿರೀಕ್ಷಿಸುತ್ತಿದ್ದ ಕೌಟುಂಬಿಕ ಅಂಶಗಳು ಚಿತ್ರದಲ್ಲಿತ್ತು. ಮಧ್ಯಮ ಕುಟುಂಬಗಳಲ್ಲಿ ಕಾಣಬರುವ ತಾಯಿ-ಮಗನ ಅನುಬಂಧ, ತಂದೆ ಜೊತೆಗಿನ ಸೈದ್ಧಾಂತಿಕ ಮುನಿಸು ಚಿತ್ರದಲ್ಲಿ ಪ್ರೇಮಕಥೆಯ ಜೊತೆ ಜೊತೆಗೆ ಸಾಗಿತ್ತು. ಇದರ ಜೊತೆಗೆ ಪುನೀತ್ ರ ಲವಲವಿಕೆಯ ಅಭಿನಯ, ಫೈಟ್ ಹಾಗೂ ಡ್ಯಾನ್ಸ್ ಯುವಕರನ್ನು, ಮಕ್ಕಳನ್ನು ಕ್ಷಣಮಾತ್ರದಲ್ಲಿ ಆಕರ್ಷಿಸಿತು. ಮುಜುಗರವಿಲ್ಲದೆ ನೋಡಬಹುದಾದ ಸಿನಿಮಾ ಎಂಬ ಖಾತ್ರಿ ಇಡೀ ಕುಟುಂಬವೇ ಚಿತ್ರಮಂದಿರಗಳತ್ತ ಮುಗಿಬೀಳುವಂತೆ ಮಾಡಿತು.

ಅಲ್ಲಿಂದ ಪುನೀತ್ ಹಿಂದಿರುಗಿ ನೋಡಲೇ ಇಲ್ಲ. ಕೌಟಂಬಿಕ ಪ್ರೇಕ್ಷಕ ಪುನೀತ್ ಕೈಬಿಡಲಿಲ್ಲ. ಪುನೀತ್ ಸಹ ತನ್ನ ಪಟ್ಟು ಸಡಿಲಿಸಲಿಲ್ಲ, ಯಶಸ್ಸನ್ನು ತಲೆಗೇರಿಸಿಕೊಳ್ಳಲಿಲ್ಲ. ತನ್ನ ಚಿತ್ರಗಳನ್ನು ಇಡೀ ಕುಟುಂಬವೇ ಬಂದು ನೋಡಲು ಯಾವುದೇ ಅಡ್ಡಿ ಇಲ್ಲದಂತಹ ಚಿತ್ರಕಥೆಗಳನ್ನು ಆಯ್ಕೆ ಮಾಡುವಲ್ಲಿ ಎಚ್ಚರವಹಿಸುತ್ತಾ, ಚಿತ್ರ ನಿರಾಸೆ ಮೂಡಿಸಿದರೂ ತಾನು ನಿರಾಸೆ ಮೂಡಿಸದಂತೆ ಪುನೀತ್ ಗಮನ ಹರಿಸಿದರು. ಡಾ.ರಾಜ್ ಪುತ್ರ, ಸೂಪರ್ ಸ್ಟಾರ್ ಎಂಬುದನ್ನು ನೆಚ್ಚಿಕೊಳ್ಳದೆ ದಿನದ ವ್ಯಾಯಮ, ಕಸರತ್ತು ತಪ್ಪಿಸಲಿಲ್ಲ. ಶ್ರಮ ಹಾಗೂ ಶ್ರದ್ಧೆಯನ್ನು ತೊರೆಯಲಿಲ್ಲ. ಇದರಿಂದಾಗಿ 20 ವರ್ಷ ಕಳೆದರೂ ಚಿತ್ರರಂಗದ ಅತ್ತ್ಯುತ್ತಮ ಫೈಟರ್, ಡ್ಯಾನ್ಸರ್ ಎಂಬ ಪಟ್ಟದ ಜೊತೆಗೆ ಬಾಕ್ಸ್ ಆಫೀಸ್ ನಲ್ಲಿ ತನ್ನತನವನ್ನು ಬಿಟ್ಟು ಕೊಡಲಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ವಿನಯ ಹಾಗೂ ತನ್ನ ಸಜ್ಜನಿಕೆಯನ್ನು ಬಿಡಲಿಲ್ಲ.

ಆದರೆ ಪುನೀತ್ ವ್ಯಕ್ತಿತ್ವ ಇಷ್ಟಕ್ಕೇ ಸೀಮಿತವಾಗಲಿಲ್ಲ. ಸೂಪರ್ ಸ್ಟಾರ್ ಗಿರಿ ಬರ ಮಾಡುವ ಎಲ್ಲಾ ಮಿತಿಗಳನ್ನು ಮೀರಿ ಹೊಸತನಕ್ಕೆ ತನ್ನನ್ನು ಒಡ್ಡಿಕೊಳ್ಳುವ ಪ್ರಯತ್ನವನ್ನು ಮಾಡುತ್ತಲೇ ಬಂದರು. ಕನ್ನಡದ ಕೋಟ್ಯಾಧಿಪತಿ ಆ ದಿಸೆಯಲ್ಲಿ ಒಂದು ಯಶಸ್ವಿ ಹೆಜ್ಜೆಯಾದರೆ, ’ಪೃಥ್ವಿ’ ’ಮೈತ್ರಿ’ ಅಂತ ಚಿತ್ರಗಳು ದಿಟ್ಟ ಹೆಜ್ಜೆಗಳಾದವು. ಪಿಆರ್ ಕೆ  ಸಂಸ್ಥೆಯ ಮೂಲಕ ಹೊಸ ಪ್ರತಿಭೆಗಳನ್ನು ತರುವ ಪ್ರಯತ್ನ ಮಾದರಿ ನಡೆಯಾಗಿತ್ತು.

ಅಷ್ಟೇ ಅಲ್ಲದೆ ಯಾವುದೇ ಇತರ ನಟರು ತಮ್ಮ ಚಿತ್ರಗಳಿಗೆ ಏನಾದರೂ ಪ್ರಮೋ ಬೇಕಾದರೆ ಅಥವಾ ಒಂದು ಹಾಡು ಹಾಡಬೇಕಾದರೆ ಪುನೀತ್ ಸದಾ ಸಿದ್ಧರಾಗಿರುತ್ತಿದ್ದರು. ಹಾಡಿನಿಂದ ಬಂದ ಸಂಭಾವನೆ ತಮ್ಮ ಟ್ರಸ್ಟ್ ಗೆ ಹೋಗುತ್ತಿದ್ದರೂ ಸಂಭಾವನೆಗಿಂತ ಇತರರ ಚಿತ್ರಗಳಿಗೆ  ತಮ್ಮ ಭಾಗವಹಿಸಿಕೆಯಿಂದ ಸಹಾಯವಾಗಲಿ ಎಂಬ ಭಾವನೆ ಹೆಚ್ಚಾಗಿತ್ತು. ಇದರಿಂದ ಅಪಾರವಾದ ಸ್ನೇಹಾವಲಯವನ್ನು ಸಂಪಾದಿಸುತ್ತಾ ಬಂದರು. ಸರ್ಕಾರದ ’ನಂದಿನಿ’ ಸಂಸ್ಥೆಗೆ ಮಾತ್ರವಲ್ಲದೆ, ಮತದಾನದ ಮಹತ್ವವೂ ಸೇರಿದಂತೇ ಅನೇಕ ಜಾಗೃತಿ ಮೂಡಿಸುವ ಕಾರ್ಯಕ್ರಮಗಳಿಗೆ ರಾಯಭಾರಿಯಾಗಿದ್ದರು.

ಒಂದೆಡೆ ತಮ್ಮ ಸಂಸ್ಥೆಯಿಂದ ಹತ್ತಾರು ಯುವ ನಿರ್ದೇಶಕರ ಹೊಸ ಪ್ರಾಜೆಕ್ಟುಗಳು,  ಯಾವ ಸ್ಟಾರ್ ನಟನೂ ಸುಲಭವಾಗಿ ಒಪ್ಪಿಕೊಳ್ಳಲಾಗದ ಪ್ರಾಯೋಗಿಕ ಚಿತ್ರಗಳಲ್ಲಿ ಅಭಿನಯಿಸುವ ಇಂಗಿತ, ಮತ್ತೊಂದೆಡೆ ಕರ್ನಾಟಕದ ಕಾಡುಗಳನ್ನು ಜಗತ್ತಿಗೆ ತೋರ ಬಯಸುವ ’ಗಂಧದ ಗುಡಿ’ ಎಂಬ ಸಾಕ್ಷ್ಯಚಿತ್ರ, ಮಲೆ ಮಾದೇಶ್ವರದ ಬಗೆಗಿನ ಒಂದು ವಿಡಿಯೋ ಸಾಂಗ್, ’ನಾ ನಿನ್ನ ಮರೆಯಲಾರೆ’ ಚಿತ್ರದ ರಿಮೇಕ್, ಕನ್ನಡ ಚಿತ್ರರಂಗವನ್ನು ತಾಂತ್ರಿಕವಾಗಿ ವಿಶ್ವಮಟ್ಟದಲ್ಲಿ ಏರಿಸುವಂತ ಚಿತ್ರಗಳು... ಹೀಗೆ ಸಾಲು ಸಾಲು ಕನಸುಗಳನ್ನು ಅರ್ಧಕ್ಕೆ ಬಿಟ್ಟು ಹೋಗಿರುವ ಪುನೀತ್ ಉಳಿಸಿರುವ ವಿಷಾದ ಸುಲಭದಲ್ಲಿ ಅಳಿಸಲಾಗದು. ಇವೆಲ್ಲಕ್ಕೂ ಮೀರಿದ ಸಾಮಾನ್ಯ ಜನರಿಗೆ ಬೇಕಾದ ರಂಜನೆ, ಒಬ್ಬ ಐಕಾನ್, ಒಂದು ಸಂಭ್ರಮ, ಒಂದು ಪ್ರೇರಣೆ ಎಲ್ಲವೂ ಕ್ಷಣಮಾತ್ರದಲ್ಲಿ ಮಾಯವಾಗಿದೆ. ದೊಡ್ಡಮಟ್ಟದಲ್ಲಿ ಅಭಿಮಾನಿಗಳಾಗಿದ್ದ ಮಕ್ಕಳು ಈ ಸಾವು ಎಂದರೆ ಏನು ಎಂದು ತಿಳಿಯದೆ ಗೊಂದಲದಲ್ಲಿವೆ.

ಅಂತೆಯೇ ಪುನೀತ್ ಏನೂ ತೀರ ಸರಳವಾಗಿ ಏನು ಬದುಕಲಿಲ್ಲ. ತಮ್ಮ ಜೀವನಶೈಲಿ, ತಮ್ಮ ನಡೆ ನುಡಿಯಿಂದಲೇ ಒಬ್ಬ ಐಕಾನ್ ಆಗಿ ಕಾಣಿಸಿಕೊಳ್ಳುತ್ತಾ ಹೋದರು. ಐಶಾರಾಮಿ ಜೀವನ ಶೈಲಿ, ಕಾರುಗಳು ತೋರಿಕೆಯಂತಾಗದೆ,  ಶ್ರಮ ಜೀವನ, ಶ್ರದ್ಧೆ ಹಾಗೂ ಶಿಸ್ತಿನ ಜೀವನದ  ಫಲಿತಾಂಶವೆಂಬಂತೆ ಬಿಂಬಿತವಾಯಿತು. ಎಲ್ಲರೊಂದಿಗೆ ಬರೆಯಬಹುದಾದ ಸ್ವಭಾವದಿಂದಾಗಿ ವಿಶಿಷ್ಟವಾದ ಒಂದು ಸ್ಥಾನವನ್ನು ಪುನೀತ್ ಜನಮನದಲ್ಲಿ ಗಳಿಸಿಕೊಳ್ಳುತ್ತ ಸಾಗಿದರು. ಬದುಕಿದ್ದಾಗ ಇದು ಮೇಲ್ಪದರದಲ್ಲಿ ಕಾಣುತ್ತಿದ್ದರೂ  ನಾಡಿನ ಜನರ ಮನಸ್ಸಿನಲ್ಲಿ  ಅವರು ಗಳಿಸಿದ ಸ್ಥಾನ ಅವರ ಅಕಾಲಿಕ ಅಗಲಿಕೆಯಿಂದ ಹೊರಬಂದಿತಷ್ಟೇ.  

ಇದರ ಜೊತೆಗೆ ಅವರ ಕಾಳಜಿ ಹಾಗೂ ಹೃದಯ ವೈಶಾಲ್ಯದ ಕಥೆಗಳು ಒಂದೊಂದೇ ಹೊರ ಬರುತ್ತಾ ಈ ನಾಲ್ಕು ತಿಂಗಳಲ್ಲಿ ಒಂದು ದಂತಕತೆಯಾಗಿ ಬೆಳೆಯುತ್ತಿರುವುದು ಆಶ್ಚರ್ಯವಾಗಿದೆ. ಎಲೆ ಮರೆಯ ಕಾಯಿಯಂತಿದ್ದ ಪುನೀತ್ ದಾನ-ಸಹಾಯ ಹಾಗೂ ಮುಂದಿನ ಕನಸುಗಳ ಕಥೆಗಳು ಜನರ ಮನಸ್ಸಿನಲ್ಲಿ ಅಳಿಸಲಾಗದ ಛಾಪನ್ನು ಮೂಡಿಸಿದೆ.

 ಒಬ್ಬ ವ್ಯಕ್ತಿಯ ಸಾವಿಗೆ ಮನಸ್ಸಿನಲ್ಲಿ ವ್ಯಥೆ ಪಡುವುದು ಸಹಜ, ಆದರೆ ಅಂತಹ ಉಸಿರುಗಟ್ಟುವ ಸಾಲಿನಲ್ಲೂ ಮಕ್ಕಳೊಂದಿಗೆ ನಿಲ್ಲುವುದು, ಬಿಸಿಲು ಚಳಿ ಲೆಕ್ಕಿಸದೆ ಸಮಾಧಿಯನ್ನು ಸಂಧಿಸುವುದು, ಪ್ರತಿ ಹತ್ತು ಇಪ್ಪತ್ತು ಅಡಿಗೆ ಬ್ಯಾನರ್ ಕಟ್ಟಿ ಶ್ರದ್ಧಾಂಜಲಿ ತೋರುವುದು, ಇದೆಲ್ಲವೂ ಯಾವದೋ ಒಂದು ಅನನ್ಯ ಸಾಂಸ್ಕೃತಿಕ ಸಂಗತಿಯಾಗಿ ಬೆಳೆದುಕೊಂಡು ಬಂದಿದೆ. ಮತ್ತೆ ಇದು ಕೇವಲ ಸಿನಿಮಾ ನಟನ ಮೇಲೆ ತೋರುವ ಸಿನಿಮಾ ಪ್ರೀತಿ ಮಾತ್ರದಂತೆ ಕಾಣುತ್ತಿಲ್ಲ.

ರಾಜ್ ಮಗನಾಗಿದ್ದರಿಂದ ಸಿನಿಮಾ, ನಾಯಕ ಪಟ್ಟ ಸುಲಭವಾಗಿ ಸಿಕ್ಕಿತು ಎಂಬ ತಮ್ಮ ಬಗೆಗಿನ ಮಾತಿಗೆ ಎಂದೂ ತಲೆಕೆಡಿಸಿಕೊಳ್ಳದೆ, ಬಂದದ್ದನ್ನು ಉಳಿಸಿಕೊಂಡು, ಬೆಳಿಸಿಕೊಂಡು, ಅದನ್ನು ಹಂಚಿಕೊಂಡು ಬದುಕಿ ಮರೆಯಾದ ಪುನೀತ್ ಅನೇಕ ಪಾಠಗಳನ್ನು ಸಮಾಜಕ್ಕೆ, ಯುವಕರಿಗೆ ಅದರಲ್ಲೂ ಸಾರ್ವಜನಿಕ ಬದುಕಿನಲ್ಲಿರುವವರಿಗೆ ಬಿಟ್ಟು ಹೋಗಿದ್ದಾರೆ. ಇಂದು ಪುನೀತ್ ಸಾವಿಗೆ ದು:ಖಿಸುತ್ತಿರುವವರು, ಅವರನ್ನು ಹೃದಯದಲ್ಲಿ ಇರಿಸಿಕೊಂಡಿರುವವರು, ಅವರ ಸಿನಿಮಾ ಅಭಿಮಾನಿಗಳು ಮಾತ್ರವಲ್ಲ, ಅವರಿಂದ ನೇರವಾಗಿ ಸಹಾಯ ಪಡೆದವರು ಮಾತ್ರವಲ್ಲ, ಅವರ ಒಡನಾಡಿಗಳು ಮಾತ್ರವಲ್ಲ, ಇದಕ್ಕೆ ಹೊರತಾದ ಲಕ್ಷಾಂತರ ಜನ. ಜನರ ಸರಳ ನಿರೀಕ್ಷೆಗಳಿಗೆ ಸ್ಪಂದಿಸುವ,  ಜನ ಸಮುದಾಯದ ಪರವಾಗಿ ನಿಲ್ಲುವ, ಮಿಡಿಯುವವರನ್ನು ಸಾಮಾನ್ಯ ಜನ ತಮ್ಮ ಮನಸ್ಸಿನಲ್ಲಿ  ಎತ್ತರಕ್ಕೆ ಇರಿಸುತ್ತಾರೆ ಎಂಬ ನಿತ್ಯ ಸತ್ಯವನ್ನು ಉಳಿಸಿ ಹೋಗಿರುವ ಪುನೀತ್  ಒಂದರ್ಥದಲ್ಲಿ ಈ ನಾಡಿನ ನಿಜ ಹೀರೋಗಳಲ್ಲಿ ಒಬ್ಬರು.

ಪುನೀತ್ ಅನ್ನು ’ಅಂಬಾಸಿಡರ್ ಆಫ್ ಲವ್ – ಪ್ರೀತಿಯ ರಾಯಭಾರಿ’ ಎಂದು ಕರೆದ ನಟ ಶಿವಾಜಿ ಪ್ರಭುವಿನ ಮಾತು ಎಷ್ಟು ನಿಜವಲ್ಲವೇ

-  ಪ್ರಶಾಂತ್ ಇಗ್ನೇಷಿಯಸ್ 








Friday, 25 June 2021

ಎಚ್ಎಸ್ವಿಯವರ ಹುಟ್ಟು ಹಬ್ಬ


ಪ್ರೀತಿಯ ಗುರುಗಳಾದ ಎಚ್ ಎಸ್ವಿ ಯವರ ಹುಟ್ಟು ಹಬ್ಬ ಜೂನ್ 23 ಎಂದು ತಿಳಿದಿರಲಿಲ್ಲ. ಅವರೊಬ್ಬ ಅಸಾಮಾನ್ಯ ಕವಿ, ಲೇಖಕ ಎಂದು ನನಗೆ ತಿಳಿಯುವ ಮೊದಲೇ ಸೆಂಟ್ ಜೋಸೆಫ್ಸ್ ಕಾಮರ್ಸ್ ಕಾಲೇಜಿನಲ್ಲಿ ಅವರ ಕನ್ನಡ ಪಾಠ ಕೇಳಿ ಅಭಿಮಾನಿಯಾಗಿದ್ದೆ. ಸರಿ ಸುಮಾರು ಮೂವತ್ತು ವರ್ಷಗಳ ನಂತರವೂ ಮುಂದುವರಿದಿದೆ.

ಅವರು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾದ ಸಮಯದಲ್ಲಿ ಅವರ ಬಗ್ಗೆ ಬರೆದ ಒಂದು ಸಣ್ಣ (ದೊಡ್ಡ) ಲೇಖನವನ್ನೇ ಮತ್ತೆ ಬಳಸುತ್ತಿದ್ದೇನೆ (ಒಂದಷ್ಟು ಸಣ್ಣ ಬದಲಾವಣೆಗಳೊಂದಿಗೆ).

Belated birthday wishes sir! (ಕನ್ನಡದಲ್ಲಿ ಅದನ್ನು ಹೇಗೆ ಹೇಳುವುದು ಎಂದು ತಿಳಿಯದೆ)

--------------------------------------

ಬರೆಯಲು ಕುಳಿತರೆ ಈ ಚಳಿಗೆ ಏನು ಬರೆಯೋದು ಅನ್ನೋದೇ ಗೊತ್ತಾಗೋದಿಲ್ಲ ಅನಿಸುತ್ತದೆ. ಬರೆಯಲು ಕುಳಿತಾಗಲೆಲ್ಲ ನನ್ನಂಥವರಿಗೆ ಹೀಗೆ ಅನಿಸುವುದು. ಬೇಸಿಗೆಯಲ್ಲಿ ಸೆಖೆಯಿಂದಾಗಿ ಬರೆಯಲು ಆಗುವುದಿಲ್ಲ. ಮಳೆಗಾಲದಲ್ಲಿ ಕಿಟಕಿಯ ಪಕ್ಕ ನಿಂತು ಮಳೆ ನೋಡಬೇಕೆನಿಸುತ್ತದೆ. ವಸಂತದಲ್ಲಿ ಬರೆಯುತ್ತಾ ಕೂರುವುದುಂಟೆ? .

ಕಾಲ ಯಾವುದಿರಲಿ ಪಟ್ಟಾಗಿ ಕುಳಿತು ಬರೆದವರು, ಬರೆಯುತ್ತಿರುವವರು   ತೇಜಸ್ವಿ, ಎಚ್ ಎಸ್ ವಿ ಮುಂತಾದವರು. ನಾವು ಮುಂದಿನ ಭವಿಷ್ಯತ್ ಕಾಲಕ್ಕಾಗಿ ಕಾಯುತ್ತೇವೆ. ಅಂದ ಹಾಗೆ ನಮ್ಮ ನೆಚ್ಚಿನ ಡಾ.ಎಚ್ ಎಸ್ ವೆಂಕಟೇಶ್ ಮೂರ್ತಿಯವರು ಮುಂದಿನ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಡಿಸೆಂಬರ್ ಚಳಿಗೆ ಬೇಕಾದ ಬೆಚ್ಚನೆಯ ಸಂತೋಷ ಮನಸ್ಸಿಗೆ. ನನಂಥ ಅವರ ಅನೇಕ ಅಭಿಮಾನಿಗಳಿಗೆ ಕೂಡ.

ಕಾವ್ಯ, ಕಥೆ, ಕಾದಂಬರಿ, ನಾಟಕ, ಅಂಕಣ, ಭಾವ ಗೀತೆ, ಸಿನಿಮಾ, ಸಿನಿಮಾ ಗೀತೆ ಕೊನೆಗೆ ಕಾದಂಬರಿ ಶೀರ್ಷಿಕೆ ಗೀತೆ ಹೀಗೆ ಎಲ್ಲಾ ಪ್ರಕಾರಗಳಲ್ಲೂ ತಮ್ಮ ಸಾಹಿತ್ಯಿಕ ಕೈ ಚಳಕ ತೋರಿದವರು ಎಚ್ ಎಸ್ ವಿ. ಅಲ್ಲದೇ ಅನೇಕ ವರ್ಷಗಳ ಕಾಲ ಸೊಗಸಾಗಿ ಕನ್ನಡ ಪಾಠವನ್ನು ಮಾಡಿ ವಿದ್ಯಾರ್ಥಿಗಳಿಗೆ ಕನ್ನಡ ಸಾಹಿತ್ಯದ ಸೊಬಗಿನ ರುಚಿ ತೋರಿಸಿದವರು.

ಪ್ರಸ್ತುತ  ಕನ್ನಡ ಸಾಹಿತ್ಯದ ಮಟ್ಟಿಗೆ ಅತ್ಯಂತ ಕ್ರಿಯಾಶೀಲವಾಗಿಯೂ, ಸೃಜನಶೀಲವಾಗಿಯೂ ತೊಡಗಿಸಿಕೊಂಡವರಲ್ಲಿ ಎಚ್ ಎಸ್ ವಿಯವರದು ಮೊದಲ ಸಾಲು. ಆಗೆಂದು ಪದ್ಮಾಸನ ಹಾಕಿ ಕುಳಿತು, ಘನ ಗಾಂಭೀರ್ಯದಿಂದ, ತಮ್ಮದೇ ಆದ ದ್ವೀಪದಲ್ಲಿ ಕುಳಿತು ಬರೆದವರೂ ಅಲ್ಲ. ಗಮನಿಸಿದರೆ ತಿಂಗಳಿಗೆ ನಾಲ್ಕಾರು ಸಮಾರಂಭಗಳಲ್ಲಿ ಅವರು ಭಾಗವಹಿಸಿದ, ಮಾತನಾಡಿದ ಚಿತ್ರಗಳನ್ನು ಪತ್ರಿಕೆಗಳಲ್ಲಿ ಕಾಣಬಹುದು. ಪುಸ್ತಕ ಬಿಡುಗಡಯಲ್ಲೂ ಇರುತ್ತಾರೆ, ಇನ್ಯಾವುದೋ  ಸಭೆ ಕವಿ ಸಮ್ಮೇಳನದಲ್ಲೂ ಇರುತ್ತಾರೆ.

ಇಷ್ಟೆಲ್ಲಾ ಸಮಾರಂಭಗಳಲ್ಲಿ ಭಾಗವಹಿಸಿದರೂ ಇಷ್ಟೆಲ್ಲಾ ಬರೆಯಲು ಹೇಗೆ ಸಾಧ್ಯವಾಗುತ್ತದೆ ಎಂಬುದಕ್ಕೂ ಅವರೇ  ಉತ್ತರಿಸುತ್ತಾರೆ. ದಿನಕ್ಕೊಂದು ಹೆಜ್ಜೆಯಿಟ್ಟರೆ ಕೈಲಾಸ” ಎಂಬಂತೆ ಪ್ರತಿದಿನ 1-2 ಗಂಟೆ ಬರೆದು ಬರೆದು 106 ಪುಸ್ತಕಗಳಾಗಿವೆ ಎಂಬ ಲೆಕ್ಕ ಕೊಡುತ್ತಾರೆ. 106 ಪುಸ್ತಕ ಅಷ್ಟು ಸುಲಭವಾಗಿ ಮೂಡಿ ಬಂದಿತೆ? ಎಂಬುದು ಪ್ರಶ್ನೆ. ಆದರೆ ಅದರ ಹಿಂದಿರುವುದು ಅವರ ಸಾಹಿತ್ಯ ಪ್ರೀತಿ ಮತ್ತು ಸಂಕಲ್ಪ ಶಕ್ತಿ. ಬರೆಯಬೇಕೆಂದರೆ ಎಲ್ಲಿ ಬೇಕಾದರೂ ಕುಳಿತು ಬರೆಯುತ್ತಾರೆ ಎಂಬುದಕ್ಕೆ ತಮ್ಮ ಮಗನ ಅನಾರೋಗ್ಯದ ಸಮಯದಲ್ಲಿ ಆಸ್ಪತ್ರೆಯಲ್ಲಿ ಕುಳಿತೂ ಬರೆದಿದ್ದರ ಬಗ್ಗೆ ಅವರ ಆಪ್ತರು ನೆನಪಿಸಿಕೊಳ್ಳುತ್ತಾರೆ.

ಹಿರಿಯರು ಬರೆಯದೆ ಉಳಿಸಿದ ಸಾಲುಗಳನ್ನು ನಾನು ಬರೆದೆ” ಎಂಬ  ವಿನೀತಭಾವವೂ ಅವರಲ್ಲಿದೆ. ಅವರ ಮಾತುಗಳನ್ನು, ಭಾಷಣಗಳನ್ನು ಕೇಳಿದಾಗಲೆಲ್ಲಾ ಒಂದು ಕವಿ  ಹೃದಯ ಹೇಗೆ ಕೆಲಸ ಮಾಡುತ್ತದೆ, ಹೇಗೆ ಯೋಚಿಸುತ್ತದೆ, ಒಬ್ಬ ಕವಿ ಲೇಖಕನ ಚಿಂತನಾಕ್ರಮದ ಬಗ್ಗೆ ಸ್ಪಷ್ಟ ಪರಿಚಯವಾಗುತ್ತದೆ.

ನಾನು ಓದಿದ ಸೆಂಟ್ ಜೋಸೆಫ್ ಕಾಲೇಜ್ ಆಫ್ ಕಾಮರ್ಸ್ ನಲ್ಲಿ ಎಚ್ ಎಸ್ ವಿ ಕನ್ನಡದ ಮೇಷ್ಟ್ರಾಗಿದ್ದರು ಎಂಬ ರೋಮಾಂಚನ ನನ್ನಲ್ಲಿ ಇನ್ನೂ ಇದೆ. ಅದು ಕಾಮರ್ಸ್ ಕಾಲೇಜಾಗಿದ್ದರೂ ಭಾಷಾ ವಿಷಯಗಳಲ್ಲಿ ಒಬ್ಬೊಬ್ಬರೂ ದಿಗ್ಗಜ ಪ್ರಾಧ್ಯಾಪಕರೇ. ಕನ್ನಡವನ್ನು ಎಚ್ ಎಸ್ ವಿ ಹೇಳಿ ಕೊಡುತ್ತಿದ್ದರೆ, ಇಂಗ್ಲಿಷ್ ಪಾಠ ಜಿ.ಕೆ.ಗೋವಿಂದರಾವ್ ರವರದು.  ಹಿಂದಿಗೆ  ಮತ್ತೊಬ್ಬ ಸಹೃದಯಿ ಅಮ್ಮಾನ್ನುಲ್ಲಾರವರ ಸಾರಥ್ಯ.      

ಜಿ ಕೆ ಗೋವಿಂದರಾಯರ ಗತ್ತು, ರಾಬರ್ಟ್ ಫ್ರಾಸ್ಟ್ ಕವಿತೆಗಳನ್ನು ವಿವರಿಸುತ್ತಿದ್ದ ಪರಿ, ಜೂಲಿಯಸ್ ಸೀಸರ್ ನಾಟವನ್ನು ಓದುತ್ತಿದ್ದ ಭಂಗಿ ಎಲ್ಲವೂ ರೋಮಾಂಚಕ ಅನುಭವವೇ.  ಇತ್ತ ಎಚ್ಎಸ್ವಿಯವರದು ನಿರ್ರಗಳವಾಗಿ ಸಣ್ಣದಾಗಿ ಹರಿಯುವಂತ ಝರಿಯಂತ ಪಾಠ. ಅವರ ಪಾಠ ಕೇಳುವುದೇ ಭಾಗ್ಯ ಎಂದುಕೊಳ್ಳುತ್ತಿದ್ದ  ನನ್ನಂಥವರ ಮಧ್ಯೆ ಅತ್ತ ಹಿಂದಿಯೂ ಬಾರದ ಇತ್ತ ಕನ್ನಡದ ಆಸಕ್ತಿಯೂ ಇಲ್ಲದ ವಿದ್ಯಾರ್ಥಿಗಳೂ ಇದ್ದರು. ಅವರ ಕೀಟಲೆಗೆ ಹೆಚ್ಚೆಂದರೆ ಎಚ್ಚೆಸ್ವಿಯವರ ಬಾಯಲ್ಲಿ ಬರುತ್ತಿದ್ದ ಬೈಗುಳ ಅವಿವೇಕಿ’.     

ನಿಟ್ಟಿನಲ್ಲಿ ಗೋವಿಂದರಾಯರದು ವ್ಯಾಘ್ರ ಕೋಪ. ಕಣ್ಣುಬಿಟ್ಟರೆ ವಿದ್ಯಾರ್ಥಿಗಳು ಗಪ್ ಚುಪ್. ಎಚ್ಚೆಸ್ವಿಯವರದು ಮಂದಹಾಸದ ಕೋಪ. ಇಂದಿಗೂ ಅವರು ವಿವರಿಸುತ್ತಿದ್ದ ಪಂಪ, ಕುಮಾರವ್ಯಾಸ, ಮುದ್ದಣ್ಣ, ಕುವೆಂಪು, ಬೇಂದ್ರೆ ನನ್ನ ಮನಸ್ಸಿನಲ್ಲಿ ಅಚ್ಚಳಿಯದೆ  ಕುಳಿತ್ತಿದ್ದಾರೆ. ಅದರಲ್ಲೂ ಯಶೋಧರ ಚರಿತೆ’ಯನ್ನೂ, ಅದರಲ್ಲಿನ ಅಷ್ಟಾವಕ್ರನ ಕ್ರೂರತೆಯನ್ನು ಎಚ್ಚೆಸ್ವಿಯವರ ಬಾಯಲ್ಲೇ ಕೇಳಬೇಕು. ಈಗದನ್ನು ಒಂದು ಪುಸ್ತಕವಾಗಿಯೂ ಹೊರ ತಂದಿದ್ದಾರೆ.   


ನಾನು
ಪಿಯುಸಿ ಓದುತ್ತಿದ್ದಾಗಲೇ ನಾಗಾಭರಣರ ಚಿನ್ನಾರಿಮುತ್ತ ಬಿಡುಗಡೆಯಾಗಿತ್ತು. ಅದರ ಹಾಡುಗಳ ಹುಚ್ಚು ನನಗಿಡಿದಿತ್ತು. ಆಡಿಯೋ ಕ್ಯಾಸೆಟ್ ತಂದು ನೋಡಿದ್ದರೆ ಅದರ ಹಾಡುಗಳೆಲ್ಲಾ ಎಚ್ ಎಸ್ ವಿ ಯವರದೇ.  “ನಾವು ಇರುವಾಗ ನಿನಗೇನು ಚಿಂತೆ” ಮಾರಿಷ ಮಾರಿಷಾ” “ಎಷ್ಟೊಂದು ಜನ ಇಲ್ಲಿ ಯಾರು ನನ್ನೋರು” ಹಾಡುಗಳೆಲ್ಲ ಇಂದಿಗೂ ಹಚ್ಚ ಹಸಿರು. ’ರೆಕ್ಕೆ ಇದ್ದರೆ ಸಾಕೆ’  ಹಾಡನ್ನು ನಾನಿಗಾಗಲೇ ಸಾವಿರ ಸಲ ಕೇಳಿರಬೇಕು.
 

ಅಧ್ಯಾಪಕರಾಗಿ ನಿವೃತ್ತರಾದ ಮೇಲಂತೂ ಎಚ್ಚೆಸ್ವಿಯವರ ಬರವಣಿಗೆ ಪಡೆದುಕೊಂಡಿರುವ ವೇಗ, ಅದಕ್ಕಿಂತ ಹೆಚ್ಚಾಗಿ ಅದರ ಆಳ ಅಗಲ ಅಚ್ಚರಿ ಮೂಡಿಸುವಂತದ್ದು. ಮೊನ್ನೆ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಅವರ 75ನೇ ಹುಟ್ಟು ಹಬ್ಬದ ಸಮಾರಂಭದಲ್ಲಿ ಸಿಕ್ಕ ಅವರ ಪುಸ್ತಕಗಳನ್ನು ಬಾಚಿಕೊಂಡು ಬಂದೆ. ಅವುಗಳಲ್ಲಿ  ’ಕುಮಾರವ್ಯಾಸ ಕಥಾಂತರ’ ಓದುತ್ತಿದ್ದೇನೆ. ಕಾಲೇಜಿನ ಅವರ ಪಾಠಗಳು ನೆನಪಾಗುತ್ತಿವೆ. ಮುನ್ನುಡಿಯಲ್ಲಿ ಕೆ.ಸತ್ಯನಾರಾಯಣರವರು ಹೇಳಿದಂತೆ ’ನಮ್ಮೆದುರಿಗೆ ಕುಳಿತು ಮಾತಾಡುವ ಆಪ್ತ ಬಂಧುವಿನ ಧಾಟಿ”ಯಲ್ಲಿದೆ. ಸಾಹಿತ್ಯದ ಹೊರತಾಗಿಯೂ ಎಚ್ ಎಸ್ ವಿಯವರ ವ್ಯಕ್ತಿತ್ವದಲ್ಲಿಯೂ ಆದೇ ಆಪ್ತ ಬಾಂಧುತ್ವ.

ಕಾಲೇಜಿನಲ್ಲಿ ನಾನೊಮ್ಮೆ ಸ್ಪರ್ಧೆಯಲ್ಲಿ ಮುತ್ತಿನ ಹಾರ’ ಚಿತ್ರದ ದೇವರು ಹೊಸೆದ ಹಾಡು” ಹಾಡಿದೆ.  ಬಹುಮಾನ ಬರಲಿಲ್ಲ. ಅದಕ್ಕಿಂತಲು ಮಿಗಿಲಾದುದು ಕಾದಿತ್ತು.  ಹಾಡು ಮುಗಿಸಿ ಸ್ಟಾಫ್ ರೂಮಿನ ಮುಂದಿನ ಅಂಗಳದಲ್ಲಿ ಕ್ರಿಕೆಟ್ ಆಡುತ್ತಿದ್ದೆ. ಸ್ಟಾಫ್ ರೂಮಿನ ಬಾಗಿಲ ಬಳಿ ನಿಂತಿದ್ದ ಎಚ್ಚೆಸ್ವಿ ನನ್ನನ್ನು ಕರೆದು ಚೆನ್ನಾಗಿ ಹಾಡಿದ್ರಿ ಅಭ್ಯಾಸ ಮಾಡಿದರೆ ಒಳ್ಳೆ ಗಾಯಕನಾಗಬಹುದು” ಎಂದರು. ನಾನು ಅಭ್ಯಾಸ ಮಾಡಲಿಲ್ಲ, ಒಳ್ಳೆಯ ಗಾಯಕನಾಗಲಿಲ್ಲ. ಇನ್ನೊಮ್ಮೆ ನಮ್ಮ ಚಿಗುರು ಕಾರ್ಯಕ್ರಮದಲ್ಲಿ ಅತಿಥಿಯಾಗಿ ಬಂದು ನನ್ನ ನಿರೂಪಣೆ ಕೇಳಿ ಭಾಷಣದಲ್ಲಿ ಭೇಷ್ ಅಂದಿದ್ದರು. ಅದರ ವಿಡಿಯೋದಲ್ಲಿ ಭೇಷ್’ ಅಂದ ಕಡೆ ಆಡಿಯೋ ಕಟ್ಟಾಗಿ, ವ್ಯಥೆ ಉಳಿದು ಹೋಗಿದೆ.     

ಒಂದಷ್ಟು ಯುವಕರನ್ನು ಅವರ ಮನೆಗೆ ಕರೆದುಕೊಂಡು ಹೋಗಿ ಕುವೆಂಪು-ಬೇಂದ್ರೆ ಕುಮಾರವ್ಯಾಸ ಮುಂತಾದವರ ಬಗ್ಗೆ ಅವರ ಮಾತುಗಳನ್ನು ಕೇಳಿಸಿಕೊಂಡು ಬರಬೇಕು ಎನ್ನುವ ಯೋಜನೆ ಕೈಗೂಡಲೇ ಇಲ್ಲ. ಬಾರಿಯ ಸಾಹಿತ್ಯ ಸಮ್ಮೇಳನ ನಿಜಕ್ಕೂ ಅವರಿಂದ ಹೆಚ್ಚು ಮೆರಗು ಪಡೆಯುತ್ತದೆ ಎಂಬುದು ಖಾತ್ರಿ. ಅಧ್ಯಕ್ಷ ಭಾಷಣ ಕೇಳಲು ಗುಲ್ಬರ್ಗಕ್ಕೆ ಹೋಗೋದೇ ಎಂದು ಮನಸ್ಸು ಕೇಳುತ್ತಿದೆ. ನಾನಿನ್ನೂ ಉತ್ತರಿಸಿಲ್ಲ.

-ಪ್ರಶಾಂತ್ ಇಗ್ನೇಷಿಯಸ್