
ಇಂದು ಇಡೀ ವಿಶ್ವವನ್ನೇ ಆಟವಾಡಿಸುವ
ಈ ಕ್ರೀಡೆಯ ಮೊದಲ ಹೆಜ್ಜೆಗಳನ್ನು 1872ರಲ್ಲಿ ಗುರುತಿಸಲಾಗಿದೆ. ಸ್ಕಾಟ್ ಲೆಂಡ್ ಹಾಗೂ ಇಂಗ್ಲೆಂಡ್
ನಡುವೆ ನಡೆದ ಪಂದ್ಯವೇ ಮೊದಲ ಅಂತರರಾಷ್ಟ್ರೀಯ ಪಂದ್ಯ. ನಂತರ ಜನಪ್ರಿಯಗೊಳ್ಳುತ್ತಲೇ ಬಂದ ಈ ಆಟವನ್ನು 1900 ಹಾಗೂ 1904ರ ಒಲಂಪಿಕ್ಸ್ ನಲ್ಲೂ
ಆಡಿಸಲಾಯಿತು. ಪುಟ್ ಬಾಲ್ ಆಟದ ಅಧಿಕೃತ ಸಂಸ್ಥೆಯಾಗಿ ಫಿಫಾ 1904ರಲ್ಲಿ ಸ್ಥಾಪನೆಯಾಯಿತು. 1928ರಲ್ಲಿ
ಫಿಫಾ ತನ್ನದೇ ಆದ ವಿಶ್ವಕಪ್ ಅನ್ನು ನಡೆಸಲು ನಿರ್ಧರಿಸುವುದರೊಂದಿಗೆ 1930ರಲ್ಲಿ ಉರುಗ್ವೆಯಲ್ಲಿ
ಮೊದಲ ವಿಶ್ವಕಪ್ ನಡೆಯುತ್ತದೆ. ಒಟ್ಟು 13 ತಂಡಗಳು ಭಾಗವಹಿಸುತ್ತವೆ. ಫೈನಲ್ ನಲ್ಲಿ ಉರುಗ್ವೆ ಅರ್ಜೆಂಟೀನಾ
ತಂಡವನ್ನು 4-2ರಿಂದ ಸೋಲಿಸುವುದರೊಂದಿಗೆ ವಿಶ್ವಕಪ್ ಗೆದ್ದ ಮೊದಲ ದೇಶ ಎಂಬ ಖ್ಯಾತಿ ಅದಕ್ಕೆ ದೊರಕುತ್ತದೆ.
ಮುಂದೆ ಈ ವಿಶ್ವಕಪ್ ಹಾಗೂ ಫುಟಬಾಲ್ ಆಟ ಬೆಳೆದು ಬಂದಿರುವ ಪರಿ ಅಚ್ಚರಿ ಮೂಡಿಸುವಂತದ್ದು. 1942 ಹಾಗೂ 1946ರಲ್ಲಿ
ಎರಡನೇಯ ಮಹಾ ಯುದ್ಧದಿಂದಾಗಿ ರದ್ದುಗೊಂಡಿದ್ದು ಬಿಟ್ಟರೆ, ವಿಶ್ವಕಪ್ ನ ಜೈತ್ರ ಯಾತ್ರೆ ಅಭಾದಿತ. 9 ದಶಕಗಳ ಈ ಇತಿಹಾಸದಲ್ಲಿ ವಿಶ್ವಕಪ್ ಅನೇಕ ರೋಚಕ, ಅಚ್ಚರಿಯ, ವಿಸ್ಮಯಕಾರಿ ಹಾಗು ಅಷ್ಟೇ ವಿವಾದಮಯ ಕ್ಷಣಗಳನ್ನು
ಕಂಡಿದೆ. ಬ್ರೆಜಿಲ್ 5 ಬಾರಿ ವಿಶ್ವಕಪ್ ಗೆಲ್ಲುವುದರೊಂದಿಗೆ
ಅತ್ಯಂತ ಯಶಸ್ವಿ ತಂಡವೆನಿಸಿಕೊಂಡರೆ, ಜರ್ಮನಿಯ ಮಿರೊಸ್ಲಾವ್ ಕ್ಲೋಸ್ ಅತಿ ಹೆಚ್ಚು, ಅಂದರೆ 16 ಗೋಲನ್ನು
ಹೊಡೆದ ಆಟಗಾರ. ಆದರೆ ಕ್ರೀಡೆಗಳ ಜೀವಂತಿಕೆ ಹಾಗು ಸೊಗಸು ಇರುವುದು ಅಂಕಿ ಅಂಶಗಳನ್ನು ಮೀರಿದ ಆ ರೋಮಾಂಚಕ ಕ್ಷಣಗಳಲ್ಲಿ, ಆಟಗಾರರ ಚುಂಬಕ ವ್ಯಕ್ತಿತ್ವ ಹಾಗೂ ಕೌಶಲ್ಯದಲ್ಲಿ.

ಆದರೆ ಅದೇ 17 ವರ್ಷದ ಎಡಸನ್ ಆರೆಂಟಾಸ್
ಡೊ ನಾಸೆಮಿಂಟೊ ಎಂಬ ಉದ್ದ ಹೆಸರಿನ ಸಣ್ಣಗಿನ ಯುವಕ, ಪೀಲೆ ಎಂಬ ಹೆಸರೊಂದಿಗೆ ಮಾಡಿದ ಮೋಡಿಗೆ ಜಗತ್ತು ಮೊದಲು ಬೆಚ್ಚಿ ಬಿದ್ದು, ನಂತರ ಹುಚ್ಚೆದ್ದು ಕುಣಿಯಿತು, ಎದುರಾಳಿಗಳು ಮಾತ್ರ ತಬ್ಬಿಬ್ಬು. ಸೆಮಿಫೈನಲ್ ನಲ್ಲಿ ಫ್ರಾನ್ಸ್ ವಿರುದ್ಧ ಹ್ಯಾಟ್ರಿಕ್ ಸಿಡಿಸಿ ಜಗದ ಕಣ್ಮಣಿಯಾಗುವತ್ತ ಮೊದಲ
ಹೆಜ್ಜೆಯಿಡುತ್ತಾನೆ . ನಂತರದ ಫೈನಲ್ ನಲ್ಲಿ ಮತ್ತೊಮ್ಮೆ 2 ಗೋಲ್ ಬಾರಿಸಿ ರಾತ್ರೋರಾತ್ರಿ ಫುಟಬಾಲ್
ನ ದೈತ್ಯ ಪುರುಷನಾಗಿ ಎದ್ದಾಗ ವಯಸ್ಸು 18 ಆಗಲು ಇನ್ನು
116 ದಿನಗಳು ಬಾಕಿ ಇದ್ದವು. ಮುಂದೆ ಪೀಲೆ ಮಾಡಿದ
ಸಾಧನೆಗಳು ಅಜರಾಮರ.
ಇನ್ನೂ ಇದೇ ರೀತಿ ಇಡೀ ವಿಶ್ವದ ಗಮನವನ್ನೆಲ್ಲಾ ತನ್ನತ್ತಲೇ ಸೆಳೆದ ಇನ್ನೊಬ್ಬನೆಂದರೆ ಡಿಯಾಗೋ ಮರಡೋನ. 1986ರ ವಿಶ್ವಕಪ್
ಅನ್ನು ‘ಮರಡೋನ ವಿಶ್ವಕಪ್’ ಎಂದೇ ಕರೆಯಬಹುದು . ಪ್ರಾಯಶ:
ಯಾವುದೇ ಒಬ್ಬ ಆಟಗಾರ ಒಂದು ವಿಶ್ವಕಪ್ ಸರಣಿಯನ್ನು ಆ ರೀತಿ ಪೂರ್ಣವಾಗಿ ಆವರಿಸಿಕೊಳ್ಳಲಿಲ್ಲವೇನೋ. ಚೆಂಡು ಕಾಲಿಗೆ ಸಿಕ್ಕರೆ,
ಮತ್ತೆ ಅದನ್ನು ತಾನೇ ಇನ್ನೊಬ್ಬರಿಗೆ ಪಾಸ್ ಮಾಡುವ ತನಕ ಇಡೀ ವಿಶ್ವದ ಕಣ್ಣೇ ಆ ಪಾದಗಳು ಹಾಗೂ ಚೆಂಡಿನ
ಮೇಲೆಯೇ ಇರುವಂತೆ, ಕಾಲವನ್ನೇ ಆ ಕ್ಷಣದಲ್ಲಿ ಹಿಡಿದಿಟ್ಟುಕೊಳ್ಳುವ ಕಾವ್ಯಕ್ಕೆ ಮಾತ್ರವಿರುವ ಶಕ್ತಿಯನ್ನು ಕ್ರೀಡೆಗೆ ತಂದ ಮಹಾ
ಮಾಂತ್ರಿಕ ಮರಡೋನ.
ಮರಡೋನಾ ಸುತ್ತ ಭದ್ರಕೋಟೆಯಂತೆ ರಕ್ಷಣಾ ಆಟ ಯೋಜಿಸಲಾಗಿತ್ತು. ಆದರೆ ಎಲ್ಲವನ್ನು ದಾಟಿ 51ನೇ ನಿಮಿಷದಲ್ಲಿ ಗೋಲಿನ ಆವರಣದಲ್ಲಿ ಚೆಂಡು
ಮರಡೋನಾನಿಂದ ಗೋಲಿನ ನೆಟ್ಟಿನೊಳಗೆ ಬೀಳುತ್ತದೆ. ಇಡೀ ಇಂಗ್ಲೆಂಡ್ ತಂಡ ಅದು ಮರಡೋನಾ
ಕೈಯಿಂದ ಪುಟಿದ ಚೆಂಡು ಎಂದು ಪ್ರತಿಭಟಿಸುತ್ತದೆ . ಆದರೆ ರೆಫರಿ ಗೋಲ್ ಎಂದು
ತೀರ್ಪು ನೀಡುತ್ತಾನೆ. ಇಂದಿಗೂ
ಇಂಗ್ಲೆಂಡ್ ಮರಡೋನಾನನ್ನು ಈ ಗೋಲಿನಿಂದಾಗಿ
ಮೋಸಗಾರನೆಂದೇ ಕರೆಯುತ್ತದೆ. ಆದರೆ ಮರಡೋನಾ ಅದನ್ನು 'ದೇವರ ಹಸ್ತ' ಎಂದೇ ಕರೆಯುತ್ತಾನೆ.
ಇದರ ಬಿಸಿ ಆರುವ ನಾಲ್ಕೇ ನಿಮಿಷದಲ್ಲಿ ಮರಡೋನ ಸಿಡಿಸಿದ ಮತ್ತೊಂದು ಗೋಲನ್ನು ಶತಮಾನದ ಗೋಲೆಂದು
ಕರೆಯಲಾಗುತ್ತದೆ. ಅದನ್ನು ಪದಗಳಲ್ಲಿ
ಹೇಳಲು ಕಷ್ಟವೇ .
'ಮರಡೋನಾ ಗೋಲ್ ಆಫ್ ದಿ
ಸೆಂಚುರಿ'
ಎಂದು ಹುಡುಕಿದರೆ, ಯೂಟ್ಯೂಬ್ ನಲ್ಲಿ ಈ ಗೋಲನ್ನು, ಇಂಗ್ಲೆಂಡನ ಗೋಳನ್ನು ನೋಡಬಹುದು. ಮುಂದೆ ಇದೇ ಮರಡೋನಾ 1994ರ ವಿಶ್ವಕಪ್ ನಲ್ಲಿ ನಿಷೇಧಿತ ಮದ್ದು ಸೇವಿಸಿ ಸಿಕ್ಕಿಬಿದ್ದು ನಿಷೇದಕ್ಕೆ ಒಳಗಾಗಿ ಖ್ಯಾತಿ ಶಾಶ್ವತವಲ್ಲ ಎಂಬುದನ್ನು ನಿರೂಪಿಸಿದ. 1990ರ ವಿಶ್ವಕಪ್ ಜರ್ಮನಿ ಗೆದ್ದರೂ ಗಮನ ಸೆಳೆದದ್ದು ಕ್ಯಾಮರೂನ್ ಎಂಬ ಸಣ್ಣ ಆಫ್ರಿಕಾದ ದೇಶ.
ಆ ತಂಡದ ರೋಜರ್ ಮಿಲ್ಲರ್ 38ರ ಹರೆಯದಲ್ಲೂ ಆ ಸರಣಿಯ ಕಣ್ಮಣಿಯಾಗಿ ಮೆರೆದ.
ಇನ್ನೂ 1994ರ ವಿಶ್ವಕಪ್ ನ ಮರೆಯದ ಘಟನೆ ಎಂದರೆ
ಇಟಲಿಯ ಬ್ಯಾಜಿಯೋ ಫೈನಲ್ ಪಂದ್ಯದ ಪೆನಾಲ್ಟಿ ಶೂಟ್ ಔಟ್ ನಲ್ಲಿ ಪೆನಾಲ್ಟಿ ಕಿಕ್ ತಪ್ಪಿಸಿದ್ದು. ಇಡೀ ಪಂದ್ಯವು ಬ್ಯಾಜಿಯೋನ ಆ ಕಿಕ್ ಮೇಲೆ ಅವಲಂಬಿತವಾಗಿತ್ತು. ಇಡೀ ವಿಶ್ವದ ಕಣ್ಣು ಅವನ ಮೇಲಿತ್ತು. ಅಲ್ಲಿಯವರೆಗೂ ಇಟಲಿಯನ್ನು ಫೈನಲ್ ವರೆಗೂ ತಂದು ವೀರನಾಯಕನಾಗಿದ್ದ ಬ್ಯಾಜಿಯೋ ಚೆಂಡನ್ನು ಹೊರಗೆ
ಹೊಡೆಯುವುದರೊಂದಿಗೆ ಖಳನಾಯಕನೂ, ದುರಂತ ನಾಯಕನೂ ಆಗುತ್ತಾನೆ. ಚೆಂಡು ಸುಮಾರು ಏಳೆಂಟು ಅಡಿ ಗೋಲ್ ಪಟ್ಟಿಯಿಂದ ಮೇಲೆ ಹೋಗುವಷ್ಟು
ಕೆಟ್ಟ ಹೊಡೆತ ಅದಾಗಿತ್ತು. ನಾಲ್ಕು ವರ್ಷ ಇದೇ
ಕೊರಗಿನಲ್ಲಿ ಬದುಕಿದ ಬ್ಯಾಜಿಯೊಗೆ ಮತ್ತೆ 1998ರ ಕ್ವಾಟರ್ ಫೈನಲ್ ನಲ್ಲಿ ಮತ್ತೆ ನಿರ್ಣಾಯಕವಾದ ಪೆನಾಲ್ಟಿ ಕಿಕ್ ಮಾಡುವ ಅವಕಾಶ ದೊರೆಯುತ್ತದೆ.
ನೆನಪಿರಲಿ ಪೆನಾಲ್ಟಿ ಕಿಕ್ ತೆಗೆದುಕೊಳ್ಳಲು
ಯಾವ ಆಟಗಾರನಿಗೂ ನಿಯೋಜಿಸುವುದಿಲ್ಲ, ಆಟದ ಅತಿ ಒತ್ತಡದ ಭಾಗವಾಗಿರುವುದರಿಂದ ಸ್ವತಃ: ಆಟಗಾರನೇ ತಾನು ಕಿಕ್ ತೆಗೆದುಕೊಳ್ಳುತ್ತೇನೆ ಎಂದು ಮುಂದೆ ಬರಬೇಕಾಗುತ್ತದೆ. ಬೇರೆ ಯಾರಾದರೂ ಆಗಿದ್ದರೆ ಮುಂದೆ ಬರುತ್ತಿರಲಿಲ್ಲವೇನೋ . ನಾಲ್ಕು ವರ್ಷದ ಹಿಂದಿನ ಎಲ್ಲಾ ಕಹಿಯನ್ನು ಮರೆತು ಬ್ಯಾಜಿಯೋ ಕಿಕ್ ಮಾಡಲು ಒಪ್ಪಿ
ಮುಂದೆ ಬರುತ್ತಾನೆ, ಚೆಂಡನ್ನು
ಗುರಿ ತಲುಪಿಸುತ್ತಾನೆ. ಆದರೂ ಇಟಲಿ ಸೋಲುತ್ತದೆ. ಆದರೆ ಬ್ಯಾಜಿಯೋ ಮಣಿಯದ ಆಂತರಿಕ
ಶಕ್ತಿ, ವಿಶ್ವಾಸದ ಪ್ರತೀಕವಾಗಿ ನಿಲ್ಲುತ್ತಾನೆ. ತನ್ನ ಆತ್ಮ ಕತೆಯಲ್ಲಿ 'ಕೇವಲ ಪ್ರಯತ್ನಿಸುವ ಧೈರ್ಯ ತೋರುವವನು ಮಾತ್ರ ಸೋಲಬಲ್ಲ' ಎನ್ನುತ್ತಾ ಗೆಲುವಿನ ನಗೆ ಬೀರುತ್ತಾನೆ.

2002ರಲ್ಲಿ ಮೊತ್ತ ಮೊದಲ ಬಾರಿಗೆ ಜಪಾನ್ ಹಾಗೂ
ದಕ್ಷಿಣ ಕೊರಿಯಾದ
ಮೂಲಕ ಏಷ್ಯಾ ಖಂಡಕ್ಕೆ ವಿಶ್ವಕಪ್
ಆತಿಥ್ಯದ ಭಾಗ್ಯ ದೊರೆಯುತ್ತದೆ . ಮೂರೂ ಬಾರಿ ಪೆನಾಲ್ಟಿ ಶೂಟ್ ಔಟ್ ನಲ್ಲೇ ಹೊರ ನಡೆದಿದ್ದ ಇಟಲಿ 2006ರಲ್ಲಿ ಅದೇ ಪೆನಾಲ್ಟಿ ಶೂಟ್ ಔಟ್ ನ ಮೂಲಕ ವಿಶ್ವ ಕಪ್ ಗೆದ್ದು ಕಾಲ ಚಕ್ರದ ಸಮತೋಲನದ ಸವಿಯ ಭಾಗದ
ರುಚಿ ಪಡೆಯುತ್ತದೆ. ಇದೇ
ಫೈನಲ್ ನಲ್ಲಿ ಫ್ರಾನ್ಸ್ ನ ದಂತಕತೆ ಜಿನಿಡೇನ್ ಜಿಡೇನ್, ಇಟಲಿಯ ರಕ್ಷಣಾ ಆಟಗಾರನೊಬ್ಬನನ್ನು ತಲೆಯಿಂದ ಗುದ್ದಿ ಬೀಳಿಸಿ ರೆಡ್ ಕಾರ್ಡ್ ಪಡದು
ಹೊರಗೆ ಹೋಗುತ್ತಾನೆ. ಶೂಟ್ ಔಟ್ ನಲ್ಲಿ
ಫ್ರಾನ್ಸ್ ಸೋಲುತ್ತದೆ. ಜಿಡೇನ್ ತಾನು ಮಾತ್ರ ಯಾವುದೇ ಕಾರಣಕ್ಕೂ ಕ್ಷಮೆ ಕೇಳುವುದಿಲ್ಲ ಎಂದು ಹೇಳಿ ಅದಕ್ಕಿಂತ ಸಾಯುವುದೇ ಲೇಸು ಎನ್ನುತ್ತಾನೆ. ಇಡೀ ಫ್ರಾನ್ಸ್ ಅವನ ಬೆಂಬಲಕ್ಕೆ ನಿಲ್ಲುತ್ತದೆ. ಅದು ಅವನ ಕೊನೆಯ ಅಂತರರಾಷ್ಟ್ರೀಯ ಪಂದ್ಯವೂ ಆಗುತ್ತದೆ.
ದಕ್ಷಿಣ ಆಫ್ರಿಕಾದಲ್ಲಿ ನಡೆದ 2010 ವಿಶ್ವಕಪ್ ಸ್ಪೇನ್ ಗೆಲ್ಲುತ್ತದೆ. ಯುರೋಪ್ ನ ಸಾಂಪ್ರದಾಯಿಕ ಆಟಕ್ಕೆ ಸ್ಪೇನ್ ಹೆಸರುವಾಸಿ. ಆದರೆ ಫುಟಬಾಲ್ ಗಿಂತ ಹೆಚ್ಚು ಸುದ್ದಿ ಮಾಡಿದ್ದು ಪ್ರತಿ ಪಂದ್ಯದ ಗೆಲುವು ಯಾರದೆಂದು ಸರಿಯಾಗಿ ಮೊದಲೇ ಹೇಳುತ್ತಿದ್ದ ಪೌಲ್ ಎಂಬ ಆಕ್ಟೊಪಸ್.
ಈ ವಿಶ್ವಕಪ್ಪಿಗಾಗಿ ಶಕೀರಾ ಹಾಡಿದ 'ವಾಕ ವಾಕ' ಹಾಡು 186 ಕೋಟಿ ವೀಕ್ಷಣೆಗೆ ಒಳಗಾಗಿದೆ.
ಫುಟಬಾಲಿನ ತವರೆಂದೇ ಕರೆಸಿಕೊಳ್ಳುವ ಬ್ರೆಜಿಲ್ ನಲ್ಲಿ ನಡೆದ
2004ರ ವಿಶ್ವಕಪ್ ಜರ್ಮನಿಯ ಪಾಲಾಯಿತು. ಸೆಮಿಫೈನಲ್ ನಲ್ಲಿ 7-1ರಿಂದ
ಸೋತ ಬ್ರೆಜಿಲ್ ಪಾಲಿಗೆ ಆ ಪಂದ್ಯ ರಾಷ್ಟ್ರೀಯ
ಶೋಕವಾಗಿ ಪರಿಣಮಿಸಿತು.
ಅರ್ಜೆಂಟೀನಾಕ್ಕೆ ಮತ್ತೆ ವಿಶ್ವಕಪ್ ಗೆಲ್ಲಿಸಿಕೊಡುವ ಮೆಸ್ಸಿಯ ಕನಸು ನನಸಾಗಲಿಲ್ಲ.
ಫುಟಬಾಲ್ ನಲ್ಲಿ ತನ್ನದೇ ಆದ ವರ್ಚಸ್ಸು ಹೊಂದಿರುವ ರಷ್ಯಾದಲ್ಲಿ ನಡೆಯುವ ಈ ಬಾರಿಯ ವಿಶ್ವಕಪ್
ತೀವ್ರ ಕುತೂಹಲ ಕೆರಳಿಸಿದೆ. ಯಾರು ಗೆಲ್ಲುತ್ತಾರೋ? ಯಾರು ಗೆದ್ದು ಸೋಲುತ್ತಾರೋ? ಇನ್ನಾವ ಆಟಗಾರ ಕ್ರೀಡಾಪ್ರೇಮಿಗಳ ಕಣ್ಮಣಿಯಾಗಿ ಮೆರೆಯುತ್ತಾನೋ? ಇನ್ನಾವ ವೇದಾಂತದ
ಪಾಠ ನಮಗೆ ಸಿಗುತ್ತದೋ? ಒಂದು ತಿಂಗಳಲ್ಲಿ ಉತ್ತರ ಸಿಗುತ್ತದೆ. ಭಾರತ ಸ್ಪರ್ಧೆಯಲ್ಲಿ ಇಲ್ಲದಿರುವುದರಿಂದ 'ಲೇಟ್ ದ ಬೆಸ್ಟ್ ಟೀ ಮ್ ವಿನ್ ' ಎನ್ನುತ್ತಾ ಆಸ್ವಾದಿಸುವುದಷ್ಟೇ ನಮ್ಮ ಕೆಲಸ