ಹಾಲಿವುಡ್‍ನಲ್ಲಿ
ಬೈಬಲ್ ಅಧಾರಿತ ಅನೇಕ ಚಿತ್ರಗಳು ಬಂದಿವೆ. ಕಥಾವಸ್ತು, ವೈಭವಯುತ ನಿರ್ಮಾಣಗಳಿಂದ
ಜನಮನ ಸೆಳೆದಂತ ಈ ಚಿತ್ರಗಳಲ್ಲಿ ’ಟೆನ್ ಕಮ್ಯಾಂಡಮೆಂಟ್ಸ್’ ಹಾಗೂ ಬೆನ್‍ಹರ್ ಪ್ರಮುಖವಾದವು.
ವಿಮೋಚನಾಕಾಂಡದ ಇಸ್ರಯೇಲರ ದಾಸ್ಯ, ಬಿಡುಗಡೆ,
ಹತ್ತು ಆಜ್ಞೆಗಳು ಹಾಗೂ ವಾಗ್ದಾತ್ತ ನಾಡಿನತ್ತ ಪಯಣದ ಕಥೆ ’ಟೆನ್ ಕಮ್ಯಾಂಡಮೆಂಟ್ಸ್’ನದು. ಬೆನ್‍ಹರ್
ಯೇಸುಕ್ರಿಸ್ತನ ಸಮಕಾಲೀನ ಶ್ರೀಮಂತ ಯೆಹೂದ್ಯ ಕುಟುಂಬದ ಯುವಕನೊಬ್ಬನ ಕಥಾನಕ.
ಹಿನ್ನಲೆ ಹಾಗೂ ಪ್ರೇರಣೆ - 1959ರಲಿ ಬಿಡುಗಡೆಯಾದ ಈ ಚಿತ್ರಕ್ಕೆ 1880ರಲ್ಲಿ ಪ್ರಕಟವಾದ ಲ್ಯೂ ವಾಲೆಸನ ’ಬೆನಹರ್ : ದಿ ಟೇಲ್ ಆಫ್ ದಿ ಕ್ರೈಸ್ಟ್’ ಎಂಬ ಕಾದಂಬರಿಯೇ
ಸ್ಪೂರ್ತಿ. 1925ರಲ್ಲಿ ಇದೇ ಕಥಾವಸ್ತುವಿನ ಕಪ್ಪು ಬಿಳುಪಿನ ಮೂಕಿ ಚಿತ್ರವೊಂದು ಬಿಡುಗಡೆಯಾಗಿತ್ತು. ಇದೊಂದು ಕಾಲ್ಪಾನಿಕ ಕಥೆಯಾದರೂ ಅಂದಿನ ಕಾಲದ ಸಾಮಾಜಿಕ, ಧಾರ್ಮಿಕ, ರಾಜಕೀಯ ಪರಿಸ್ಥಿತಿ, ವಾತಾವರಣದ ಮೇಲೆ ಬೆಳಕನ್ನು
ಚೆಲ್ಲುತ್ತದೆ.
ಟ್ರೈಲರ್ ನೋಡಿ ಅಂದಿನ ರೋಮನ್
ಚಕ್ರಾಧಿಪತ್ಯ, ರಾಜಾಡಳಿತದ ಕ್ರೌರ್ಯ, ಅದರ ವಿರುದ್ಧದ ಯೆಹೂದ್ಯರ ಅಸಹನೆ, ದಂಗೆಯೇಳುವ ಹಂಬಲ, ಸಾಮಾನ್ಯ ಜನರ ಅಸಹಾಯಕತೆ, ನೊಂದವರ, ಸೆರೆವಾಸಿಗಳ , ಕುಷ್ಠ ರೋಗಿಗಳ ದುರ್ಬರ ಜೀವನವೆಲ್ಲವನ್ನು ಬಹಳ
ಮನಮುಟ್ಟುವಂತೆ ಚಿತ್ರಿಸಲಾಗಿದೆ. ಬೈಬಲ್ ಅಭ್ಯಸಿಸುವವರಿಗೆ ಈ ಚಿತ್ರ ಅನೇಕ ಒಳನೋಟಗಳನ್ನು ನೀಡುತ್ತದೆ. ಕ್ರಿಸ್ತ, ಆತನ ಬೋಧನೆ, ಮರಣ ಅಂದಿನ ಪರಿಸ್ಥಿಯಲ್ಲಿ
ಮಾಡಿದ ಪರಿಣಾಮಗಳು ಸಹಾ ಚಿತ್ರದ ಪ್ರಮುಖ ಭಾಗವಾಗಿದೆ. ತನ್ನ ಜನರ ರಾಜಕೀಯ ಸ್ವಾತಂತ್ರ್ಯಕ್ಕಾಗಿ
ಹಂಬಲಿಸುವ ಬೆನ್‍ಹರ್ ಹಾಗೂ ಅದೇ ಕಾಲಘಟ್ಟದಲ್ಲಿ ಜೀವಿಸಿದ ಕ್ರಿಸ್ತನ ಬದುಕುಗಳು ಕೆಲವೇ ಮೈಲುಗಳ ಅಂತರದಲ್ಲಿ
ಸಮನಾಂತರವಾಗಿ ಚಿತ್ರದಲ್ಲಿ ಸಾಗುತ್ತಿರುತ್ತದೆ.
ಕಥಾವಸ್ತು – ಬೆನ್‍ಹರ್ ಹಾಗೂ
ಮೆಸ್ಸಾಲ ಎಂಬ ಇಬ್ಬರು ಬಾಲ್ಯದ ಗೆಳೆಯರು ಬೆಳೆದಂತೆ ರಾಜಕೀಯ ಕಾರಣಗಳಿಗಾಗಿ ಶತ್ರುಗಳಾಗುತ್ತಾರೆ. ಬೆನ್‍ಹರ್
ನದು ತನ್ನ ಜನರ ಬಿಡುಗಡೆಯತ್ತ ಚಿತ್ತವಾದರೆ, ಮೆಸ್ಸಾಲನದು ರಾಜಕೀಯ ಅಧಿಕಾರದ
ಮನಸ್ಸು. ಒಂದು ಹಂತದಲ್ಲಿ ಎಲ್ಲವನ್ನು ಕಳೆದುಕೊಳ್ಳುವ ಬೆನ್‍ಹರ್ ಮುಂದೆ ಮೆಸ್ಸಾಲನನ್ನು ರಥದ ಸ್ಪರ್ಧೆಯಲ್ಲಿ
ಸೋಲಿಸುತ್ತಾನೆ. ಮುಂದಿನ ಅವರಿಬ್ಬರ ಜೀವನ ಏನಾಯಿತು ಎಂಬುದೇ ಉಳಿದ ಕಥೆ. ಇಲ್ಲಿ ಕ್ರಿಸ್ತನ ಪಾತ್ರವೇನು ಎಂಬುದೂ ಮನಮುಟ್ಟುವ
ಸಂಗತಿಯೇ.
ನಿರ್ಮಾಣ ಹಾಗೂ ತಾಂತ್ರಿಕತೆ – ಬೆನ್‍ಹರ್ ಎಲ್ಲಾ ರೀತಿಯಲ್ಲೂ ಒಂದು ಪರಿಪೂರ್ಣ
ಚಿತ್ರ. ಚಲನಚಿತ್ರ ಮಾಧ್ಯಮವನ್ನು ಅಭ್ಯಾಸಿಸುವವರಿಗೆ
ಒಳ್ಳೆಯ ಸಂಶೋಧನಾ ವಸ್ತು. 6 ದಶಕಗಳು ಕಳೆದರೂ ಇಂದಿಗೂ ಚಿತ್ರದ ಅನೇಕ ದೃಶ್ಯಗಳು ಚಲನ ಚಿತ್ರ ಜಗತ್ತಿನಲ್ಲಿ ಹಾಗೂ ಚಿತ್ರ
ಪ್ರೇಮಿಗಳ ಮನಸ್ಸಿನಲ್ಲಿ ಚಿರ ನೂತನವಾಗಿ ಉಳಿದುಕೊಂಡಿದೆ. ಪರದೆಯ ಮೇಲಿನ ದೃಶ್ಯಗಳು ಅದ್ಭುತವಾಗಿ ಮೂಡಿ
ಬಂದರೆ, ಚಿತ್ರದ ನಿರ್ಮಾಣವೇ ಒಂದು ದೊಡ್ಡ ಪವಾಡ.
![]() |
ವಿಖ್ಯಾತ ರಥದ ಸ್ಪರ್ಧೆ |
ಸಂಗೀತ - ಚಿತ್ರದ
ಮತ್ತೊಂದು ಹೈಲೈಟ್ ಎಂದರೆ ಚಿತ್ರದ ಸಂಗೀತ. ಮಿಕಲೋಸ್ ರೋಸ್ ಸಂಯೋಜಿಸಿದ ಚಿತ್ರದ ಹಿನ್ನಲೆ ಸಂಗೀತದ ಧ್ವನಿಸುರಳಿ 6 ದಶಕಗಳ ನಂತರವೂ
ಜನಪ್ರಿಯತೆ, ಬೇಡಿಕೆಯನ್ನು ಉಳಿಸಿಕೊಂಡಿದೆ.
ದಂತಕಥೆಯಾದ ದೃಶ್ಯಗಳು - ರೋಮನ್ ರಾಜ್ಯಪಾಲನ ಜೆರುಸಲೇಮಿನ ಪ್ರವೇಶ, ಬೆನ್‍ಹರ್ ಹಾಗೂ ಮೆಸ್ಸಲಾನ ಸಂಭಾಷಣೆಗಳು, ಹಡಗಿನಲ್ಲಿ ಬೆನ್‍ಹರ್ ನ ಗುಲಾಮಗಿರಿ, ಬಹಿಷ್ಕೃತಗೊಂಡ ಕುಷ್ಠರೋಗಿಗಳ ಕಣಿವೆಯ ದೃಶ್ಯಗೆಳೆಲ್ಲಾ 2000 ವರ್ಷಗಳ ಹಿಂದಿನ ಜೆರುಸಲೇಮನ್ನು ಕಣ್ಣಿನ ಮುಂದೆ ತರುತ್ತದೆ. ಅದರಲ್ಲೂ ಕ್ರಿಸ್ತ ಹಾಗೂ ಬೆನಹರ್ ನ ನಜರೇತಿನ ಮುಖಾಮುಖಿ, ರಥದ ಓಟದ ಸ್ಪರ್ಧೆ. ಕೊನೆಗೆ ಕ್ರಿಸ್ತನ ಕೊನೆಯ ಘಳಿಗೆಯ ದೃಶ್ಯಗಳು ಚಿತ್ರವನ್ನು ಅತ್ಯ್ತುತ್ತಮ ಚಿತ್ರಗಳ ಸಾಲಿನಲ್ಲಿ ನಿಲ್ಲಿಸುತ್ತದೆ.
![]() |
ನಾಯಕ ಚಾರ್ಲ್ಟನ್ ಹೆಸ್ಟನ್ |
ಚಿತ್ರದ
ನಾಲ್ಕೈದು ದೃಶ್ಯಗಳಲ್ಲಿ ಮಾತ್ರ ಬರುವ ಕ್ರಿಸ್ತನ ಪಾತ್ರಧಾರಿಯ ಮುಖವನ್ನು ತೋರದೆ ನಿರ್ದೇಶಕರು
ತಮ್ಮ ಜಾಣ್ಮೆಯನ್ನು ಪ್ರದರ್ಶಿಸುತ್ತಾರೆ. ಹಿನ್ನಲೆಯಲ್ಲಿ ಉಳಿದರೂ ಹೋಗುವ ಕ್ರಿಸ್ತನ ಪಾತ್ರ ಚಿತ್ರದ ಮೇಲೆ ಬೀರುವ ಪರಿಣಾಮ ಅದೆಷ್ಟು ಅಗಾಧವೆಂದರೆ
’ಕಾಣದಿದ್ದರೂ ಕ್ರಿಸ್ತನೇ ನಮ್ಮ ಜೀವನಾಡಿ’ ಎಂಬ ಸಂದೇಶವನ್ನು ಚಿತ್ರ ತೇಲಿ ಬಿಡುತ್ತದೆ. ಸುಮಾರು 3 ಗಂಟೆಗಳಷ್ಟು
ದೀರ್ಘವಾದ ಚಿತ್ರವನ್ನು ಒಮ್ಮೆ ಬಿಡುವು ಮಾಡಿಕೊಂಡು ನೋಡಿ. ಮತ್ತೆ ಮತ್ತೆ ನೋಡಬೇಕೆನಿಸುತ್ತದೆ.
No comments:
Post a Comment