Tuesday 13 October 2009

ಒಪ್ಪು-ತಪ್ಪು

ಪ್ರೀತಿಯ ಅನು...

ನನ್ನ ಹಾರೈಕೆಗಳ ಶುಭ್ರ ಕೋಮಲ ಗುಲಾಬಿಗಳು ನಿನ್ನ ಮಡಿಲಿಗೆ. ನೂರಾರು ಜನರ ಸ್ಫೂರ್ತಿಯ ಸೆಲೆ ನಿನ್ನ ಬದುಕು ಸುಂದರ ಸುಮಧುರ ಜಗತ್ತಿನ ಚುಂಬನದಲ್ಲಿ ತೇಲಾಡುತ್ತಿರಬಹುದು! ಮಂದಾರದ ಆ ನಿನ್ನ ಮೊಗವು ಅನೇಕರಲ್ಲಿ ಸಂತೋಷದ ಒರತೆಗಳನ್ನು ಹರಿಸುತ್ತಿರಬಹುದು. ನಾನು ಮತ್ತು ನನ್ನ ಬದುಕು ಉಪ್ಪೇ ಇಲ್ಲದ ಸಾರಿನಂತೆ ಸಪ್ಪೆ, ಸಪ್ಪೆ... ಆದರೂ ಅನ್ನಕ್ಕೆ ಸ್ವಲ್ಪ ಪುಡಿ ಉಪ್ಪು ಸೇರಿಸಿ ಬದುಕನ್ನು ಸರಿಪಡಿಸುವ ಹಂಬಲ. ಸರಿಪಡಿಸಿ ಬದುಕ ಊಟದ ಸವಿಯನ್ನು ಸವಿಯುವ ತೀವ್ರತೆ. ಸಾಲವೇನಾದರೂ ನೀನು ಕೊಡುವುದಾದರೆ ನಿನ್ನ ನಗುವನ್ನು ಸ್ವಲ್ಪ ನನಗೆ ಕೊಟ್ಟು ನನ್ನನು ನಿನ್ನ ಸಾಲಗಾರನಾಗಿಸಬೇಕೆಂದು ಕೇಳಿಕೊಳ್ಳುವ ನನ್ನ ಕಂಟು ಮೊಗ.

ಅನು ನಿನಗೆ ಪತ್ರ ಬರೆಯದೆಸುಮಾರು ದಿನಗಳಾಯ್ತು. ಪ್ರಾರಂಭಿಸುವ ಸಮಸ್ಯೆ ನನ್ನ ಪೆಡಂಭೂತವಾಗಿ ಕಾಡಿಸಿ, ಈ ದಿನ ಲೇಖನವನ್ನು ಕೈಯಲ್ಲಿಡಿಸಿದೆ. ಏನು ಬರೆಯುವುದು? ಪತ್ರದ ವಸ್ತು ಏನು? ಯಾವುದೇ ರೀತಿಯ preplanning ಇಲ್ಲದೆ ಈ ಪತ್ರ ಬರೆಯಲು ಕೈಹಾಕಿದ್ದೇನೆ.



ಮೊನ್ನೆ ನಾನು ಬೈಬಲ್ ಓದುವಾಗ, ತನ್ನ ತಪ್ಪು ಒಪ್ಪುಗಳನ್ನು ಮುಚ್ಚಿಕೊಳ್ಳುವ ಸಲುವಾಗಿ ನಿರಾಪರಾಧಿಯ ಮೇಲೆ ಗೂಬೆಕೂರಿಸಿ ಅವನ ಮೇಲೆ ಹಗೆತನ ಸಾಧಿಸುವ ಮನುಷ್ಯನ ಹೀನ ಮತ್ತು ಅಲ್ಪ ಬುದ್ಧಿಯ ಮಹಾದರ್ಶನ ನನಗಾಯಿತ್ತು. ಹೌದು ಅನು... ಈ ದುರ್ಬಲತೆ ಹಾವಿನ ವಿಷಕ್ಕಿಂತ ವಿಷಭರಿತ ಮತ್ತು ಅಪಾಯಕಾರಿ. ಏಕೆಂದರೆ ತನ್ನತನ ಮತ್ತು ಮನುಷ್ಯತ್ವವನ್ನು ಸಮಾಧಿಮಾಡಿ ತನ್ನನೇ ವಿಶ್ಲೇಷಣೆ ಮಾಡಿ ಸರಿಪಡಿಸಿಕೊಳ್ಳುವ ಅವಕಾಶವನ್ನೇ ಕಿತ್ತು ತಿಂದುಬಿಡುತ್ತದೆ. ಆದರಿಂದಲೇ ನಾನು ಹೇಳಿದ್ದು ಈ ಗುಣ ತುಂಬಾ dreadful ಅಂತಾ!



ಬೈಬಲ್‌ನಲ್ಲಿ ಸಂತ ಸ್ನಾನಿಕ ಯೊವಾನ್ನನ ಹುತಾತ್ಮತೆಯ ನಿರೂಪಣೆವಿದೆ. ಹೆರೋದನೆಂಬ ರಾಜ ತನ್ನ ಸಹೋದರ ಫಿಲಿಪ್ಪನ ಧರ್ಮಪತ್ನಿಯಾದ ಹೆರೋದಿಯಳನ್ನು ಇಟ್ಟುಕೊಂಡಿದ್ದನು.“ನಿನ್ನ ಸಹೋದರ ಧರ್ಮಪತ್ನಿಯನ್ನು ನೀನು ಇಟ್ಟುಕೊಂಡಿರುವುದು ನ್ಯಾಯಸಮ್ಮತವಲ್ಲ. ಅದು ಅಕ್ರಮ” ಎಂದು ಸ್ನಾನಿಕ ಯೊವಾನ್ನ ಹೆರೋದನನ್ನು ಮತ್ತು ಹೆರೋದಿಯಳನ್ನು ಖಂಡಿಸಿದ.ಕುಪಿತನಾದ ಹೆರೋದ ಮತ್ತು ಅವಮಾನಕ್ಕೀಡಾದ ಹೆರೋದಿ ಯೋವಾನ್ನನನ್ನು ಬಂಧಿಸುತ್ತಾರೆ. ಹೆರೋದನು ಯೊವಾನ್ನ ಕೊಲ್ಲಿಸಲು ಸಂಚುಮಾಡಿದನಾದರು ಜನರಿಗೆ ಹೆದರಿ, ಸುಮ್ಮನಿದ್ದನು. ಜನರು ಯೊವಾನ್ನನನ್ನು ಒಬ್ಬ ಪ್ರವಾದಿಯೆಂದೇ ತಿಳಿದಿದ್ದರು. ಹೀಗಿರುವಲ್ಲಿ ಹೆರೋದನ ಹುಟ್ಟು ಹಬ್ಬದ ಪ್ರಯುಕ್ತ ಹೆರೋದಿಯ ಮಗಳು ಆಹ್ವಾನಿತರ ಮುಂದೆ ನರ್ತನಮಾಡಿ, ಹೆರೋದನನ್ನು ಮೆಚ್ಚಿಸಿದಳು.


ನೃತ್ಯದಿಂದ ಮದಗೊಂಡ ಹೆರೋದ, “ಸಲೋಮೆ ಏನು ಕೇಳಿದರೂ ಕೊಡುವೆ” ಎಂದು ಪ್ರಮಾಣ ಪೂರ್ವಕವಾಗಿ ವಾಗ್ದಾನ ಮಾಡಿದ. ಇಂತಹ ಸಂದರ್ಭಕ್ಕೆ ಹೊಂಚುಹಾಕಿ ಕುಳಿತಿದ್ದ ಸಲೋಮೆಯ ತಾಯಿ ಸ್ನಾನಿಕ ಯೊವಾನ್ನನ ತಲೆಯನ್ನು ಕೇಳುವಂತೆ ಸಲೋಮೆಗೆ ಅಗ್ರಹಿಸುತ್ತಾಳೆ.ತನ್ನ ತಾಯಿಯ ಆಸೆಯನ್ನು ಸಲೋಮೆ ಹೆರೋದನ ಮುಂದಿಡುತ್ತಾಳೆ. ಅತಿಥಿಗಳ ಮುಂದೆ ಮಾಡಿದ ಪ್ರಮಾಣವನ್ನು ಮುರಿಯಲಾಗದೆ ಹೆರೋದಿಯಳ ಇಚ್ಛೆಯನ್ನು ಪೂರೈಸುವಂತೆ ಅಜ್ಞೆಮಾಡಿ, ಯೊವಾನ್ನನ ಸಾವಿಗೆ ಹೆರೋದ ಕಾರಣನಾಗುತ್ತಾನೆ.

ಈ ನಿರೂಪನೆಯ ಬಗ್ಗೆ ಓದುವಾಗ ನಾಲ್ಕು ಮುಖ್ಯ ವ್ಯಕ್ತಿಗಳ ಅಥವಾ ವ್ಯಕ್ತಿತ್ವಗಳ ಚಿತ್ರಣವನ್ನು ಕಾಣುತ್ತೇವೆ. ಮೊದಲನೆಯ ವ್ಯಕ್ತಿ ಸ್ನಾನಿಕ ಯೊವಾನ್ನ. ಒಬ್ಬ ಪ್ರವಾದಿ, ಅಸತ್ಯ, ಅನ್ಯಾಯಗಳನ್ನು ಖಂಡಿಸುವ ದೇವರ ವಕ್ತಾರ. ಎರಡನೇಯ ವ್ಯಕ್ತಿ ಹೆರೋದ. ತನ್ನ ಲೌಕಿಕ ರಾಜ್ಯಕ್ಕೆ ಅಂಟಿಕೊಂಡಿರುವ ಪ್ರಾಪಂಚಿಕ ಮನುಷ್ಯ. ಅಂಜುಬುರುಕ. ತಪ್ಪು ಮಾಡಿ ತಿದ್ದಿಕೊಳ್ಳಲು ಪ್ರಯತ್ನ ಪಡದ ನಿರ್ದಯಿ ಮತ್ತು ಸಂಕುಚಿತ ಮನುಷ್ಯ. ತನ್ನ ತಪ್ಪುಗಳನ್ನು ಮುಚ್ಚಿಸುವುದಕ್ಕಾಗಿ ಇನ್ನೊಬ್ಬರ ಮೇಲೆ ಗೂಬೆಕೂರಿಸುವ ಪ್ರಜ್ಞಹೀನ ಮನುಷ್ಯ. ತನ್ನ ತಮ್ಮನ ಹೆಂಡತಿಯನ್ನು ಮರಳು ಮಾಡಿ ಇಟ್ಟುಕೊಂಡಿದ್ದ ಆಸೆಬುರುಕ. ಮೂರನೆಯ ವ್ಯಕ್ತಿ ಹೆರೋದಿಯಳು.


ಹೆರೋದನನ್ನು ಅನೈತಿಕವಾಗಿ ಮದುವೆಯಾಗಿದ್ದ ನೀತಿಗೆಟ್ಟ ಮಹಿಳೆ. ತನ್ನ ತಪ್ಪನ್ನು ಒಪ್ಪಿಕೊಳ್ಳದೆ, ತಪ್ಪನ್ನು ತೋರಿಸಿದ ವ್ಯಕ್ತಿಯ ಮೇಲೆ ಸೇಡು ತೀರಿಸುಕೊಳ್ಳುವ ಮನುಷ್ಯೆ. ತನ್ನ ಛಲಸಾಧಿಸುವ ಸಲುವಾಗಿ ತನ್ನ ಮಗಳನ್ನು ಉಪಯೋಗಿಸಿಕೊಳ್ಳುವ ಲಜ್ಜೆಗೆಟ್ಟ ಮಹಿಳೆ. ನಾಲ್ಕನೇ ವ್ಯಕ್ತಿ ಹೆರೋದಿಯಳ ಮಗಳು ಸಲೋಮೆ. ಯುವರಾಣಿಯಾದರು, ತನ್ನ ತಾಯಿಯ ದುರ್ನೀತಿಯ ಆಸೆಯನ್ನು ಪೂರೈಸುವುದಕ್ಕಾಗಿ ನೃತ್ಯಗಾರ್ತಿಯಾದ ಸ್ವಂತಿಕೆ ಇಲ್ಲದ ಯುವಕಿ.


ಈ ನಾಲ್ಕು ವ್ಯಕ್ತಿತ್ವಗಳನ್ನು ನಮ್ಮಲ್ಲೂ ನಾವು ಕಾಣಬಹುದು. ಕೆಲವೊಮ್ಮೆ ಸತ್ಯ, ನ್ಯಾಯವನ್ನು ಪ್ರತಿಪಾದಿಸುವ ವ್ಯಕ್ತಿಗಳಾದರೆ ಮತ್ತೊಮ್ಮೆ ತಪ್ಪು ಮಾಡಿ ತಿದ್ದಿಕೊಳ್ಳಲು ಪ್ರಯತ್ನ ಪಡದ ವ್ಯಕ್ತಿಗಳಾಗಿರುತ್ತೇವೆ. ಇನ್ನೂ ಕೆಲವೊಮ್ಮೆ ತಪ್ಪನ್ನು ತೋರಿಸುವ ವ್ಯಕ್ತಿಗಳ ಮೇಲೆ ಸೇಡು ತೀರಿಸುಕೊಳ್ಳುವ ವಿಚಾರಹೀನ ವ್ಯಕ್ತಿಗಳಾಗಿರುತ್ತೇವೆ. ಮತ್ತೊಮ್ಮೆ ಬೇರೆಯವ ದುರ್ನೀತಿಯ ಆಸೆಗಳನ್ನು ಪೂರೈಸಲು ನಾವು ಅವರ ಕೈಗೊಂಬೆಗಳಾಗಿಬಿಟ್ಟಿರುತ್ತೇವೆ. ಆದರೆ ಈ ಸಂದೇಶದಲ್ಲಿ ತನ್ನ ಪ್ರಾಣಾಪಾಯವನ್ನು ಲೆಕ್ಕಿಸದೆ ಸತ್ಯಕ್ಕೆ ಸಾಕ್ಷಿಯಾಗಿದ್ದ ಸ್ನಾನಿಕ ಯೊವಾನ್ನನಂತಾಗಲು ಈ ನಿರೂಪಣೆ ನಮಗೆ ಕರೆಕೊಡತ್ತದೆ.


ಈ ಒಂದು ಘಟನೆ 2000 ವರ್ಷಗಳ ಹಿಂದೆ ನಡೆದ ಘಟನೆಯಲ್ಲ. ಇಂತಹ ಘಟನೆಗಳು ಈಗಲ್ಲೂ ನಮ್ಮ ಮಧ್ಯ ನಡೆಯುತ್ತಿದೆ. ಬಿನಾಯಕ್ ಸೇನ್ ಎಂಬ ಮಾನವ ಹಕ್ಕು ಹೋರಾಟಗಾರ ಸರ್ಕಾರದ ಕೆಟ್ಟ ನೀತಿಗಳ ವಿರುದ್ಧ ಧ್ವನಿಎತ್ತಿದಾಗ... ಅವರನ್ನು ಆನೇಕ ವರ್ಷಗಳ ಕಾಲ ಜೈಲಿನಲ್ಲಿರಸಲಾಗಿತ್ತು. ಮಂಗಳೂರು ವಿಶ್ವವಿದ್ಯಾಲಯ ಕಾಲೇಜಿನ ಅಧ್ಯಾಪಕರಾದ ಪಟ್ಟಾಭಿರಾಮ ಸೋಮಯಾಜಿಯವರು ಮಹಿಳೆಯರ ಮೇಲೆ ನಡೆದ ದೌರ್ಜನ್ಯವನ್ನು ಖಂಡಿಸಿದಾಗ, ಅವರಿಗೆ ಎಚ್ಚರಿಕೆಯ ಪತ್ರವನ್ನು ಕೊಡಲಾಯಿತ್ತು.


ಇವರೆಲ್ಲರು ನಮ್ಮ ವಾಸ್ತವಿಕ ಬದುಕುಗಳಲ್ಲಿ ಸತ್ಯದ ಸಾಕ್ಷಿಗಳಾಗಿ, ವಕ್ತಾರರಾಗಿ ನಿಲ್ಲುತ್ತಾರೆ. ಅವರಿಗೆ ಪ್ರಾಣಕ್ಕಿಂತ ಸತ್ಯ, ನ್ಯಾಯ ಮುಖ್ಯವಾಗುತ್ತದೆ. ಈ ಒಂದು ಪತ್ರವನ್ನು ಸಾಕ್ರಟೀಸ್ ಬಗ್ಗೆ ತಿಳಿಸುತ್ತಾ ಮುಕ್ತಾಯಗೊಳಿಸುತ್ತೇನೆ. ಸಾಕ್ರಟೀಸ್ ಗ್ರೀಸ್ ದೇಶದಲ್ಲಿದ್ದ ಅಪೂರ್ವ ತತ್ವಜ್ಞಾನಿ. ಧನದಾಸೆಯಿಂದ ಸತ್ಯ, ಧರ್ಮ, ನ್ಯಾಯ ಜ್ಞಾನ ಮುಂತಾದವುಗಳು ಇಲ್ಲವೆಂದೇ ಬೋಧಿಸಿ ಗ್ರೀಸ್ ದೇಶದ ಉದ್ದಾಗಲಕ್ಕೂ ಅವ್ಯವಸ್ಠೆ, ಅನೈತಿಕತೆ, ಅರಾಜಕತೆಯನ್ನು ಉಂಟುಮಾಡಿ ತಮಾಷೆ ನೋಡುತ್ತಿದ್ದ ಸೋಪಿಸ್ಟರ ವಿರುದ್ಧ ಮಾತನಾಡಿದ್ದು ಇದೇ ಸಾಕ್ರಟೀಸ್. ಸೋಪಿಸ್ಟರ ಎದುರಿಸಿ ಸತ್ಯ, ಧರ್ಮ, ನ್ಯಾಯ, ಜ್ಞಾನ, ಸೌಂದರ್ಯವನ್ನು ಪುನರ್‌ಸ್ಥಾಪಿಸಿದ ಪ್ರವಾದಿ ಸಾಕ್ರಟೀಸ್. ಸಮಾಜದಲ್ಲಿ ಒಂದು ವ್ಯವಸ್ಥೆಯನ್ನು ರೂಪಿಸಿ, ಸಮಾಜದ ಸಾರ್ವತ್ರಿಕ ಒಳಿತನ್ನು ಗುರುತಿಸಿ ಬೋಧಿಸುವ ಕೆಲಸ ಮಾಡಿದ ತತ್ವಜ್ಞಾನಿಯೇ ಸಾಕ್ರಟೀಸ್. ಅವನ್ನು ಹುಟ್ಟಿನಿಂದ ಶ್ರೀಮಂತನಲ್ಲ ಆದರೆ ಅವನದು ಶ್ರೀಮಂತ ವ್ಯಕ್ತಿತ್ವ. ಪಾದರಸದ ಚುರುಕು ಬುದ್ಧಿ, ಚಿಂತಕ, ನ್ಯಾಯಪಕ್ಷಪಾತಿ, ವಾದದಲ್ಲಿ ಗಟ್ಟಿಗ, ಪ್ರತಿಯೊಂದನ್ನು ವಿಮರ್ಶಿಸಿಸುವ ಸೂಕ್ಷ್ಮಿ. ನುಡಿದಂತೆ ನಡೆಯುವ ಯೋಗಿ.


ಗ್ರೀಕ್ ಸಮಾಜ ವಿಷಮ ಘಟದಲ್ಲಿದ್ದಾಗ, ಅನೈತಿಕತೆ, ಡಂಬಾಚಾರ, ಸ್ವೇಚ್ಛಾಚಾರ ಖಂಡಿಸಿ, ಸಮಾಜದ ಧ್ಯೇಯ ಆದರ್ಶಗಳನ್ನು ಎತ್ತಿ ಹಿಡಿದವನು ಸಾಕ್ರಟೀಸ್.“ಆತ್ಮವಿಮರ್ಶೆವಿಲ್ಲದ ಅವೈಚಾರಿಕ ಜೀವನ ಬಾಳಲು ಯೋಗ್ಯವಾದುದಲ್ಲ” ಎಂಬ ತತ್ವ ಇವನದು. ಸಾಕ್ರಟೀಸಿನ ವಿಮರ್ಶ ಅಥವಾ ತರ್ಕಬುದ್ಢಿ ಸಮಾಜದಲ್ಲಿ ಯಾರನ್ನು ಬಿಡಲಿಲ್ಲ. ಅವನು ರಾಜಕೀಯ ನಾಯಕನಿರಲಿ, ಆಡಳಿತ ಸೂತ್ರಧಾರಿಗಳಾಗಿರಲಿ, ಸಮಾಜದ ಪ್ರತಿಷ್ಠಿತ ವ್ಯಕ್ತಿಗಳಾಗಿರಲಿ ಅವರನ್ನು ತನ್ನ ವಿಚಾರ ವಿಮರ್ಶೆಗೆ ಒಳಪಡಿಸಿ ತೂಗದೆ ಇರುತ್ತಿರಲಿಲ್ಲ. ಅವನು ನಿರ್ಭಯದಿಂದ ತಪ್ಪನ್ನು ತಪ್ಪೆಂದು ಕಡ್ಡಿ ಮುರಿದಂತೆ ಹೇಳುತ್ತಿದ್ದ. ಜನರ ಮೌಡ್ಯವನ್ನು ದಯೆದಾಕ್ಷಣ್ಯವಿಲ್ಲದೆ ವಿಮರ್ಶೆಯಿಂದ ಬಟ್ಟ ಬಯಲಾಗಿಸುತ್ತಿದ್ದ. ಈ ಕ್ರಿಯೆಯಿಂದ ಕೆಲವರ ಸ್ವಾಭಿಮಾನಕ್ಕೆ ದಕ್ಕೆ ಉಂಟಾಗಿ, ಕೆಲ ಅಧಿಕಾರಿಗಳ, ಪ್ರತಿಷ್ಠಿತ ಜನರ ದ್ವೇಷಕ್ಕೆ ಗುರಿಯಾದ. ಯುವಕರನ್ನು ದುರ್ಮಾಗಕ್ಕೆ ಎಳೆಯುತ್ತಿದ್ದಾನೆ ಮತ್ತು ಸಂಪ್ರದಾಯ ವಿರೋಧಿ ಮತ್ತು ಅಥೆನ್ಸಿನ ದೇವರು ಮೇಲೆ ನಂಬಿಕೆಯಿಟ್ಟಿಲ್ಲ ಎಂಬ ಸುಳ್ಳು ಅಪವಾದಗಳನ್ನು ಆಧಾರಿಸಿ, ಸಾಕ್ರಟೀಸ್ ತಪ್ಪಿತಸ್ಠನೆಂದು ನಿರ್ಧರಿಸಿ ಅವನಿಗೆ ಮರಣದಂಡನೆಯನ್ನು ವಿಧಿಸಲಾಯಿತ್ತು. ಸಾವಿಗೆ ಅಂಜದ ಸಾಕ್ರಟೀಸ್ “ಸಾವು ಬಂದರೆ ಬರಲಿ, ಅಧರ್ಮವನ್ನಾಚರಿಸುವುದಿಲ್ಲ” ಎಂದು ಸಾವಿಗೆ ತಯಾರಾಗುತ್ತಾನೆ.

ಸಾಕ್ರಟೀಸ್ ಮರಣದಂಡನೆಯಿಂದ ಸುಲಭವಾಗಿ ತಪ್ಪಿಸಿಕೊಳ್ಳಬಹುದಾಗಿತ್ತು, ಅದರೆ ಯಾವುದೇ ವಿಧದಲ್ಲೂ ತಪ್ಪಿಸಿಕೊಳ್ಳುವುದಕ್ಕೆ ಸ್ವಲ್ಪವೂ ಪ್ರಯತ್ನಿಸದೆ,“ಹತ್ತು ಸಲ ಮರಣಯಾತನೆಯನ್ನು ಅನುಭವಿಸಬೇಕಾದರೂ ನನ್ನ ನಡತೆಯನ್ನೇನೂ ಬದಲಾಯಿಸುವುದಿಲ್ಲವೆಂದು ಮಾತ್ರ ತಿಳಿಯಿರಿ”ಎಂದು ಹೇಳುತ್ತಾ ಜೈಲಿನ ಸೇವಕನು ತಂದುಕೊಟ್ಟ ವಿಷದ ಬಟ್ಟಲಿಂದ ವಿಷವನ್ನು ನಿರ್ವಿಕಾರ ಚಿತ್ತದಿಂದ ಗಟಗಟನೆ ಕುಡಿದು ಸಾಯುತ್ತಾನೆ.

ಹೌದು, ಸಾಕ್ರಟೀಸ್ ರಣರಂಗದಲ್ಲಿ ನೂರಾಳುಗಳನ್ನು ಕೊಂದು ಗೆದ್ದ ವೀರನಲ್ಲ. ಬದಲಾಗಿ ತನ್ನನ್ನು ತಾನು ಗೆದ್ದ ಋಷಿ. ಜೂಲಿಯನ್ ಚಕ್ರವರ್ತಿಯ ಮಾತುಗಳನ್ನು ಇಲ್ಲಿ ನೆನೆಯುವುದು ಸೂಕ್ತವೆನ್ನಿಸುತ್ತದೆ. “ಸಾಫ್ರೊನಿಸ್ಕನ್ಸಿನ ಮಗನು (ಸಾಕ್ರಟೀಸ್) ಅಲೆಕ್ಸಾಂಡರನಿಗಿಂತ ಮಹತ್ವದ ಕೆಲಸಗಳನ್ನು ಮಾಡಿದ್ದಾನೆ. ಅಲೆಕ್ಸಾಂಡರನ ವಿಜಯದಿಂದ ಯಾರಿಗೆ ಮೋಕ್ಷ ದೊರೆತಿದೆ? ಆದರೆ ತತ್ವಜ್ಞಾನದಿಂದ ಮೋಕ್ಷವನ್ನು ಪಡೆದಿರುವರೆಲ್ಲರೂ ಸಾಕ್ರಟೀಸ್‌ನ ಋಣಿಗಳು.”


ಭಗವಂತ ನಮ್ಮನ್ನು ಸತ್ಯವನ್ನು ಪ್ರೀತಿಸುವ ವ್ಯಕ್ತಿಗಳಾಗುವಂತೆ ನಮ್ಮನ್ನು ರೂಪಾಂತರಿಸಲಿ, ಸಾವು ಬಂದರೆ ಬರಲಿ, ಅಧರ್ಮವನ್ನಾಚರಿಸುವುದಿಲ್ಲ ಎಂಬ ಸಾಕ್ರಟೀಸ್‌ನ ಮಾತುಗಳು ನಮ್ಮಲಿ ಸದಾ ಪ್ರತಿಧ್ವನಿಸುತ್ತಿರಲಿ ಎಂದು ಆಕಾಂಕ್ಷಿಸುತ್ತಾ ಈ ಪತ್ರವನ್ನು ಕೊನೆಗೊಳಿಸುತ್ತೇನೆ.


ಜೋವಿ