Showing posts with label ಆಗು ಹೋಗುಗಳ ನಡುವೆ. Show all posts
Showing posts with label ಆಗು ಹೋಗುಗಳ ನಡುವೆ. Show all posts

Monday, 17 March 2014

Exam ಓಕೆ Tension ಯಾಕೆ?



























ಟಾಮಿ : ಬೌ ಬೌ ಬೌ....

ರಾಕಿ : ಬೌ ಬೌ ಬೌ.....

ಟಾಮಿ : ಬಾ ರಾಕಿ ಹೇಗಿದ್ಯಾ?

ರಾಕಿ : ನಾನು ಚೆನ್ನಾಗಿದ್ದೀನಿ, ನೀನೇಗಿದ್ಯಾ?

ಟಾಮಿ : "ಏನಪ್ಪ ತುಂಬ ಅಪರೂಪ ಆಗಿಬಿಟ್ಟೆ? ಮೊದಲೆಲ್ಲಾ ನೋಡಿದ್ರೆ ಬೊಗಳ್ ತ್ತಿದ್ದೆ, ಈಗ ತಿರುಗಿನೂ ನೋಡಲ್ಲ?

ರಾಕಿ : ಸುಮ್ನಿರಪ್ಪ, ನೀನ್ ಮಾತ್ರ ಏನು? ದೂರದಲ್ಲಿ ನೋಡಿದ್ ತಕ್ಷಣ ಬಾಲ ಅಲ್ಲಾಡಿಸ್ತಿದ್ದೆ, ಈಗ ಹಾಗೇ ಮುದುರುಕೊಂಡು ಹೋಗ್ತಾ ಇರ್‍ತಿಯಾ?

ಟಾಮಿ : ಅಯ್ಯೋ ಬೊಗಳೊದಾ? ಅದೇನೋ ಈ ಮನುಷ್ಯರ್ ಮಕ್ಕಳಿಗೆಲ್ಲಾ Exam ಅಂತೆ, ನಾವೇನಾದ್ರೂ ಸ್ವಲ್ಪ ಸದ್ದು ಮಾಡಿದ್ರೂ “ಥೂ ನಾಯಿಮುಂಡೇದೇ ಮಕ್ಕಳ್ ಓದ್ ತಾವ್ರೇ ಬೊಗಳ್ ಬೇಡ ಅಂತಾರೆ. ಬೊಗಳಕ್ಕೂ ಬಿಡೊಲ್ಲ, ಏನ್ ಗತಿಯಪ್ಪ ನಮ್ಮದು?

ರಾಕಿ : ಅಯ್ಯೋ ಹೌದು ಗುರು, ಬೊಗೊಳೋದು ಇರ್‍ಲಿ, ನಮ್ಮ್ ನಾಯಿಗಳಿಗೆ ಈ ಬೆಂಗಳೂರ್ ಟ್ರಾಫಿಕ್ಕ್ನಲ್ಲಿ ಬಾಲ ಅಲ್ಲಾಡಿಸೋಕೂ ಜಾಗ ಇಲ್ಲ. ಮೊನ್ನೆ ರೋಡಲ್ಲಿ ನಿಮ್ಮ cousin ಜಾನಿ ಸಿಕ್ದಾ ಅಂತಾ ಜೋರಾಗಿ ಬಾಲ ಅಲ್ಲಾಡಿಸೋಕ್ಕೆ ಹೋದ್ರೆ, ಒಬ್ಬ ಬೈಕ್ ನಲ್ಲಿ ಬಾಲಕ್ಕೆ ಗುದ್ದ್ ಕೊಂಡ್ ಹೋಗ್ಬಿಟ್ಟಾ. ಅದಕ್ಕೆ ಬಾಲ ಅದರ ಪಾಡಿಗೆ ಸುಮ್ನೆ ಇಟ್ಕೊಂಡ್ ಇರ್ತೀನಿ. ಇವರ ರೋಡ್ ಗಳೆಲ್ಲಾ ಅಂಕು ಡೊಂಕು, ಆದ್ರೆ ನಮ್ಮ ಬಾಲ ಡೊಂಕು ಅಂತಾರೆ.

ಟಾಮಿ : ಅದೇನೋಪ್ಪ, ಇಡೀ ಜಗತ್ತನ್ನೇ ಇವರದೇ ಮಾಡ್ಕೊಂಡ್ ಅವ್ರೆ ಈ ಮನುಷ್ಯರು. ರೋಡ್ ಸಾಲ್ದು ಅಂತ ನಮ್ಮ ಫುಟ್ ಪಾತ್ ಗೂ ಗಾಡಿ ನುಗ್ಗಿಸ್ತಾರೆ. ರಸ್ತೆ ಅಕ್ಕಪಕ್ಕ ಇದ್ದ ಗಿಡ ಮರ ಎಲ್ಲಾ ಕತ್ತರಿಸವ್ರೆ. Urgentಗೆ ಒಂದು ಗಿಡ ಇಲ್ಲ ಮರ ಇಲ್ಲ ನಮಗೆ. ಆ ಲೈಟ್ ಕಂಬಗಳು ಅದ್ಯಾವಗ್ ಕರೆಂಟ್ ಹೊಡಿತ್ತಾವೋ ಭಯ.

ರಾಕಿ : ಇದನ್ನೆಲ್ಲಾ ಮಾತಡೊಕೆ ಅಂತಾನೇ, ಮೊನ್ನೆ ನಮ್ಮ ಏರಿಯಾ ನಾಯಿ ಸಂಘದವರ ಮೀಟಿಂಗ್ ಇಟ್ಕೊಂಡಿದ್ವಿ, ಮೀಟಿಂಗ್ ಎಲ್ಲಾ ಆದ ಮೇಲೆ ಕೊನೆಗೆ ಎಲ್ಲಾ ಸೇರಿಕೊಂಡು ಜೋರಾಗಿ ಬೊಗಳಿದ್ವಿ ನೋಡು, ಎಲ್ಲಾ ಮನೆಯಿಂದನೂ ಜನ ಬಂದು "ಥೂ ಮಕ್ಳು ಮಲಗವ್ರೆ, ನಾಳೆ Exam ಸುಮ್ನಿರಿ ನಾಯಿಗಳ ಅಂತ", ನಾವು ಬೊಗಳಿದಕ್ಕಿಂತ ಕೆಟ್ಟದಾಗಿ ಕೂಗಾಡಿದ್ರು"

ಟಾಮಿ : ಏನ್ Exam Exam Examu ಅಂತಾರೋ, ಆ ಮಕ್ಕ್ಳಿಗಿಂತ ಆ ತಂದೆ ತಾಯಿಗಳ್ದೆ ದೊಡ್ಡ್ ಗೋಳು. ಮೊನ್ನೆ ಯಾವ್ದೋ ಕಳ್ಳ ಬಂದಿದ್ದ, ನಾನು ಬೊಗಳಕ್ಕೆ ಹೋಗ್ಲಿಲ್ಲ, ಹಾಳಾಗೋಗ್ಲಿ ಅಂತ ಸುಮ್ನಿದ್ದೆ, ಅವ್ನು ಕಳ್ಳ ಬಂದು ಎಲ್ಲಾ ಬಿಟ್ಟು ಅದೇನೋ ಹಾಲ್ ಟಿಕೆಟ್ ಅಂತೆ, ಅದನ್ನ ಕದ್ದ್ಕೊಂಡ ಹೋದ ಅಂತ ಮನೆಯಮ್ಮ ಅಳ್ತಾಯಿದ್ಲು.

ರಾಕಿ : ನಮ್ಗೇನು ಬಿಡು, ನಾವು ನೋಡ್ದೆ ಇರೋ exama?...... ಅದ್ ಸರಿ ಏನ್ ಅದು exam ಅಂದ್ರೆ? ಅದು ಮಾಡಿ ಏನಾಗುತ್ತೆ?

ಟಾಮಿ : ಅದೇನೋ ನನಗೂ ಅಷ್ಟು ಗೊತ್ತಾಗೊಲ್ಲ, ಆದ್ರೆ ಅದನ್ನ ಚೆನ್ನಾಗಿ ಮಾಡೀದ್ರೆ, ಅವ್ರಿಗೆಲ್ಲ ಒಳ್ಳೆ ಕೆಲ್ಸ ಸಿಕ್ಕಿ ಚೆನ್ನಾಗಿ ಸಂಪಾದನೆ ಮಾಡಬಹುದು ಅಂತ ನಮ್ಮ ಮೀಟಿಂಗ್ ನಲ್ಲಿ ಹೇಳ್ತಿದ್ರು ರಾಕಿ ಹೌದಪ್ಪ ಈಗ ಮನುಷ್ಯರು ರಾತ್ರಿಯೆಲ್ಲಾ ಕೆಲಸಕ್ಕೆ ಹೋಗ್ತಾರೆ, ಅದ್ಯಾವಗೋ ಹೋಗ್ತಾರೋ, ಅದ್ಯಾವಗೋ ಬರ್‍ತಾರೋ, ಅದ್ಯಾವಗೋ ಮಲಗ್ತಾರೋ

ಟಾಮಿ : ಅವರು ಏನಾದ್ರು ಮಾಡ್ಕೊಳ್ಲಿ, ನಮಗೆ ಕಷ್ಟ ಆಗಿಬಿಟ್ಟಿದೆ. ಮೊದಲು ರಾತ್ರಿ ಹೊತ್ತು ರೋಡೆಲ್ಲಾ ನಮ್ದೆ. ರಾಜರ ಥರಾ ತಿರುಗಾಡಿಕ್ಕೊಂಡು ಇರ್‍ತಿದ್ವಿ. ಈಗ ರಾತ್ರಿಯೆಲ್ಲಾ BPO Cabಗಳು. ಯಾರು ಕಳ್ಳ,ಯಾರು ಯಜಮಾನ ಗೊತ್ತಾಗೊಲ್ಲ.ಮೊನ್ನೆ ನಮ್ಮ್ ರೋಡನಲ್ಲಿ ಮಧ್ಯರಾತ್ರಿ ಯಾರೋ ಕೂದಲೆಲ್ಲಾ ಕೆದರಿಕೊಂಡು, ಚಡ್ಡಿ ಹಾಕ್ಕೊಂಡು, ಮನೆ ಬೀಗ ತೆಗಿತ್ತಿದ್ದ, ಕಳ್ಳ ಅಂದ್ಕೊಂಡು ಹೋಗಿ ಕಾಲಿಗೆ ಬಾಯಿ ಹಾಕಿ ಬಿಡಲೇ ಇಲ್ಲ ನಾನು. ಅಮೇಲೆ ನೋಡಿದ್ರೆ, ಅವನು ಅ ಮನೆಯವನೇ, ರಾತ್ರಿ ಕೆಲಸ ಮುಗಿಸಿಕೊಂಡು ಬಂದಿದ್ನಂತೆ. ಎಲ್ಲಾ ಸೇರೊಕೊಂಡು ಸರಿಯಾಗಿ ಬಿಟ್ಟ್ರು ನನಗೆ.

ರಾಕಿ : ಥೂ ನಿನ್ನ, ಅವನ ಕತ್ತಿಗೆ ನೇತಾಕೊಂಡಿರೋ ID Card ನೋಡಿ ಕಚ್ಚಬಾರದಾ ನೀನು?

ಟಾಮಿ : ಸರಿ ಬಿಡು, ಇನ್ನು ಒಂದೆರೆಡು ತಿಂಗಳು ಆ ಕೆರೆ ಇರೋ ಪಾರ್ಕಿಗೆ ಹೋಗಬೇಡಪ್ಪ. ಅಲ್ಲಿ ಪೋಲಿಸ್ ಮಾಮ ಇರ್‍ತಾರೆ. ಯಾರನ್ನೂ ಬಿಡೋಲ್ಲ ರಾಕಿ ಹೌದಾ? ಯಾಕೆ?

ಟಾಮಿ : ಹೇ ಅದೇ, ಈ Exam ಚೆನ್ನಾಗಿ ಮಾಡ್ದೆ ಇರೋರು, ಫೇಲ್ ಆದೋರೆಲ್ಲಾ, ಕೆರೆಗೆ ಬೀಳೋಕೆ ಬರ್‍ತಾರಂತೆ ಅದಕ್ಕೆ ಕೆರೆ ಹಾಳುಗುತ್ತೆ ಅಂತ ಯಾರನ್ನೂ ಬಿಡೊಲ್ಲ ರಾಕಿ ಒಳ್ಳೆ ಕತೆ ಆಯ್ತಲ್ಲ, ಈ ಮನುಷ್ಯರ ಪಾಡಿಗಿಂತ ನಮ್ಮ ನಾಯಿ ಪಾಡೇ ಎಷ್ಟೋ ವಾಸಿ ಟಾಮಿ ಅಲ್ಲಾ ರಾಕಿ, Exam ನಲ್ಲಿ ಫೇಲ್ ಆದ್ರೆ ಕೆರೆಗೆ ಹಾರೋಂತಾದೇನು ಅಂತಾ, nex time ಬರದ್ರೆ ಆಯ್ತು

ರಾಕಿ : ಅದೇ ಅಲ್ವಾ? Exam ಮುಖ್ಯ ಸರಿ, ಆದರೆ ಅದಕ್ಕಿಂತ ಜೀವನ ಮುಖ್ಯ ಅಲ್ವಾ??

ಟಾಮಿ : ನಮ್ಮ ಮಾತು ಕೇಳೋ ಹಾಗಿದ್ರೆ ಹೇಳ್ತಿದ್ದೆ, "ನೋಡ್ರೋ ಮಕ್ಳ ಚೆನ್ನಾಗಿ ಓದಿ, ಚೆನ್ನಾಗಿ Exam ಬರೀರಿ, ಸುಮ್ನೆ Tension ಮಾಡ್ಕೊಂಡ್ರೆ ಆಗೊಲ್ಲ "ಆಂತಾ!!

ರಾಕಿ : ಅದನ್ನ ಅವರಿಗಿಂತ ಅವರ ತಂದೆ ತಾಯಿಗಳಿಗೆ ಹೇಳಬೇಕು. ಅವ್ರೆ ಮಕ್ಕಳನ್ನ ಹಿಂಸೆ ಡೋದು,ಅದೇನೋ Engineer ಆಗ್ರಿ, BPO ಹತ್ತಿ ಅಂತ....

ರಾಕಿ : ಎಲ್ಲಾ Engineer, BPOಗೆ ಹೋಗ್ಬೇಕು ಅಂದ್ರೆ, ಬೇರೆ ಬೇರೆ ಕೆಲ್ಸ ಮಾಡೋರು ಯಾರು ಆಂತಾ? ಅಮೇಲೆ ಮನುಷ್ಯರೆಲ್ಲ ಒಂದೇ ತರಾ ಕಾಣ್ತಾರಪ್ಪ!

ಟಾಮಿ : ಅದೇ ಅಲ್ವಾ, ನಾವು ನೋಡು, ಹೆಂಗೆ ಬೇರೆ ಬೇರೆ ತರಾ ನಾಯಿಗಳು ಇದ್ದೀವಿ, ನಮ್ಮದೇ ವ್ಯಕ್ತಿತ್ವ... ಸಾರಿ... ನಮ್ಮದೇ ನಾಯತ್ವ ಇಲ್ವಾ?

ರಾಕಿ : ಸರಿ ಸರಿ ನಡಿ…..Exam ಬರಿಯೋ ಎಲ್ಲಾ ಮಕ್ಕಳಿಗೆ, ಯುವಕರಿಗೆ ನಮ್ಮ ಕಡೆಯಿಂದ ಒಂದು ವಿಶ್ ಮಾಡೋಣ

ಟಾಮಿ : ಮಕ್ಕಳೇ, ಚೆನ್ನಾಗಿ Exam ಬರೀರಪ್ಪ. ಬರ್‍ದು ದೇಶಕ್ಕೆ ಒಳ್ಳೆ ಹೆಸರು, ನಮಗೆ ಒಳ್ಳೆ ಬಿಸ್ಕಟ್ ತಂದ್ ಕೊಡ್ರಪ್ಪ.

ರಾಕಿ : Exam ಓಕೆ, ತುಂಬ Tension ಯಾಕೆ?

- ಪ್ರಶಾಂತ್ ಇಗ್ನೇಷಿಯಸ್


Saturday, 30 November 2013

ರಕ್ಕಸ ರಸ್ತೆಗಳು

ಸ್ತೆಗಳು ನಗರಗಳ ನರನಾಡಿಯಾಗಿರುತ್ತವೆ ಎಂದು ನಂಬಿದ್ದೇವೆ. ಉತ್ತಮ ರಸ್ತೆಗಳು ಅಭಿವೃದ್ಧಿಯ ಅಳೆತೆಗೋಲು. ರಸ್ತೆಗಳ ನಿರ್ವಹಣೆಯಲ್ಲಿ ಸ್ಥಳಿಯ ಸಂಸ್ಥೆಗಳು ಹೆಚ್ಚು ಕಾರ್ಯೊನ್ಮುಖವಾಗಿರಬೇಕು. ಅದರಲ್ಲೂ ದಿನೇ ದಿನೇ ತನ್ನ ಒಡಲನ್ನು ಉಬ್ಬಿಸಿಕೊಳ್ಳೂತ್ತಿರುವ ಬೆಂಗಳೂರು ಒಂದು ಕೋಟಿ ಜನಸಂಖ್ಯೆಯನ್ನು, ೪೫ ಲಕ್ಷ ವಾಹನಗಳನ್ನು ತನ್ನ ಉದರದಲ್ಲಿಟ್ಟುಕೊಂಡು ತೂಕಹೆಚ್ಚಿಸಿಕೊಳ್ಳುತಿದೆ. ಎನಿಲ್ಲವೆಂದರೂ ಪ್ರತಿದಿನ ೭೦೦ ಹೊಸ ವಾಹನಗಳ ನೊಂದಣಿಯಾಗುತಿದೆಯಂತೆ. ವ್ಯಕ್ತಿ ಮತ್ತು ವಾಹನಗಳ ಅನುಪಾತ ಗಮನಿಸಿದರೆ ಪ್ರತಿ ಇಬ್ಬರಿಗೆ ಒಂದು ವಾಹನ. ಅದು ದೆಹಲಿಯಲ್ಲಿ : ರಂತಿದೆ. ಬೆಂಗಳೂರಿನ ವಾಹನಗಳು ದೆಹಲಿಗಿಂತ ಎರಡುಪಟ್ಟು ವೇಗವಾಗಿ ರಸ್ತೆಯನ್ನು ಅಕ್ರಮಿಸಿಕೊಳ್ಳುತ್ತಿರುವುದ್ದನ್ನು ಇಲ್ಲಿ ಗಮನಿಸಬಹುದು. ಇಂತಹ ಸಂದರ್ಭದಲ್ಲಿ ರಸ್ತೆಗಳ ನಿರ್ವಹಣೆಗೆಂದೆ ಪ್ರತ್ಯೇಕ ಕಾರ್ಪರೇಶನ್ ಬೇಕಾದೀತು. ಅಂತಹುದರಲಿ ಇರುವ ಏಕೈಕ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅನ್ನೋ ನೀರಾನೆ  ಬಿದ್ದಲ್ಲೆ ಬೃಹದಾಕಾರವಾಗಿ ಗೊರಕೆ ಹೊಡೆದುಕೊಂಡು ಬಿದ್ದಿದೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ರಸ್ತೆಗಳಿಗೆ ಯಾವ ಸಂಸ್ಕಾರ, ಹಬ್ಬ ಹರಿದಿನಗಳು ಆಗಿಲ್ಲ. ಹೊಸ ಬಟ್ಟೆಗಳಿರಲಿ, ಹರಿದ ಹಳೆಬಟ್ಟೆಗೆ ತ್ಯಾಪೆ ಹಾಕುವ ಕೆಲಸವು ನಡೆಯಲಿಲ್ಲ. ಅಗಿದ್ದ ಸಣ್ಣ ಪುಟ್ಟ ಗಾಯಗಳು ಕೊಳೆತು ಕುಷ್ಟರೋಗಿಯಂತಾಗಿವೆ. ನೋಡಲಂತೂ ಇನ್ನಿಲದ ಹೇಸಿಗೆ ವಕ್ಕರಿಸಿ ಬರುತ್ತದೆ. ಮೊದಲೆ ಬೆಂಗಳೂರಿಗೆ ಟ್ರಾಫಿಕ್ ಜಾಮ್ ನಂತಹ ಉಬ್ಬಸ ರೋಗವಿದೆ. ಸಾಗದ ರಸ್ತೆಯಲ್ಲಿ ವಾಹನಗಳನ್ನು ಜಗ್ಗಿಸಿ ಜಗ್ಗಿಸಿ ತಳ್ಳುತ್ತಿರಬೇಕು. ರಸ್ತೆಗಳು ರಕ್ಕಸನ ಹಲ್ಲುಗಳಂತೆ ಜಲ್ಲಿಕಲ್ಲುಗಳನ್ನು ಹೊರಚಾಚಿ ಅರಚುತ್ತಿದ್ದರೆ ಪ್ರಯಾಣ ಅಸಹನೀಯ.
ಓಪನ್ ಗಂಗ್ನಂ ಸ್ಟೈಲ್ ಹಾಡು ಕೇಳಿರಬೇಕಲ್ಲವೇ?.. ಪ್ರಪಂಚದಾದ್ಯಂತ ಹಾಡು ಸೃಷ್ಟಿಸಿದ ಹುಚ್ಚು ಹೇಳತೀರದು. ದಕ್ಷಿಣ ಕೊರಿಯದ ಒಬ್ಬ ಪಾಪ್ ಸಂಗಿತಗಾರ ರಚಿಸಿ ಹಾಡಿದ ಕೊರಿಯನ್ ಗೀತೆಗೆ ಆತನೆ ನೃತ್ಯ ಮಾಡಿದ್ದಾನೆ, ಒಂದು ವಿಚಿತ್ರ ಭಂಗಿಯ ನೃತ್ಯವಿದು. ಗಂಗ್ನಂ ಹಾಡಿಗೆ ಹಾಕಿದ ಹೆಜ್ಜೆಗಳು ಎಬ್ಬಿಸಿದ ಧೂಳು ಇಡಿ ಪ್ರಪಂಚವನ್ನೆ ಆವರಿಸಿತು. ಅಚ್ಚರಿಯೆಂದರೆ ಒಬ್ಬ ಸಾಮಾನ್ಯನು ಕುಣಿದುಬಿಡಬಲ್ಲ ಕುಣಿತಕ್ಕೆ ಸಿಕ್ಕ ಮಾನ್ಯತೆ ಉಬ್ಬೆರಿಸುವಂತಹದ್ದೆ!. ಗಂಗ್ನಂ ಸ್ಟೈಲ್ ಹೆಸರಿನಿಂದಲೆ ನೃತ್ಯ ಜಗತಿನಾದ್ಯಂತ ಸದ್ದು ಮಾಡಿತು. ಆ ನೃತ್ಯ ಹೇಗಿದೆ ಎಂದರೆ, ಬೆಂಗಳೂರಿನ ಅದಗೆಟ್ಟ ರಸ್ತೆಗಳಲ್ಲಿ ಓಡಾಡುವ ಬಸ್ಸು, ಆಟೊಗಳಲ್ಲಿ ಕುಳಿತವರು ಕುಳಿತಲ್ಲೆ  ಕುಲುಕುವಂತಿದೆ ಗಂಗ್ನಂ ಸ್ಟೈಲ್.
ಇತ್ತಿಚಿನಲ್ಲಾದ ಮಳೆಗೆ ತತ್ತರಿಸಿ ಹೋಗಿವೆ ನಮ್ಮ ರಸ್ತೆಗಳು. ಮೊದಲೆ ಅದಗೆಟ್ಟಿದ್ದ ರಸ್ತೆಗಳು ಮಳೆಯಿಂದ ಹಳ್ಳಕೊಳ್ಳದಂತಾಗಿವೆ. ಆನೇಕ ಕಡೆ ಕೇದರನಾಥನ ಕಾಶಿಯಲ್ಲಾದ್ದಂತೆ ಕಲ್ಲು ಮರಳಿನ ರಾಶಿ. ರಸ್ತೆಯ ಮೇಲೆ ಓಡಾಡುವ ಬೆಂಗಳೂರಿಗರು ಬೆಂಡಾಗಿ ಹೋಗಿದ್ದಾರೆ. ಆನೇಕ ಬಾರಿ ವಾಹನಗಳಲ್ಲಿ ಪ್ರಯಣಿಸುವುದಕ್ಕಿಂತ ನಡೆದುಕೊಂಡೆ ಹೋಗೊಣ ಎಂದೆಣಿಸುವುದುಂಟು. ಆದರೆ ನಡೆಯುವವನ ಪಡಿಪಾಟಿಲು ಅದಕ್ಕಿಂತ ಭಿನ್ನವಾಗಿಯೇನು ಇಲ್ಲ. ಸಾರ್ವಜನಿಕವಾಗಿ ಉಳಿದಿರುವ ಏಕೈಕ ಆಸ್ತಿ ಪಾದಚಾರಿ ರಸ್ತೆಗಳು. ಅವು ಸಹ ಪಾನಿಪುರಿಯವನ, ಬೀಡಾ ಸ್ಟಾಲಿನ, ಗ್ಯಾರೆಜ್ ಗ್ರೀಸಿನ, ತರಕಾರಿ ಜಯಮ್ಮನ ಜಾಗವಾಗಿ ಬಿಟ್ಟಿದೆ. ಸಣ್ಣಪುಟ್ಟ ಅಂಗಡಿಗಳು ತನ್ನ ದುರಾಸೆಗೆ ನಾಲಿಗೆಯನ್ನು ಚಾಚಿ ರಸ್ತೆಗ್ಗೇ ಬಂದು ಕುಂತಿವೆ. ಹೀಗಾಗಿ ವಾಹನಗಳು, ಪಾದಚಾರಿಗಳು, ಒಟ್ಟೊಟ್ಟಿಗೆ ತೂರುವಂತಾಗಿದೆ. ಕೆಲವೆಡೆ  ಮಾನವನಿರ್ಮಿತ ಮುಗ್ಧ ದೇವರುಗಳು ಟ್ರಾಫಿಕ್ ಚೌಕಿ(ಐಲ್ಯಾಂಡ್)ನಂತೆ ರಸ್ತೆನಡುವಲ್ಲಿಯೆ ಚಕ್ಕಳಬಕ್ಕಳ ಹಾಕಿ ಕೂತುಬಿಟ್ಟಿದ್ದಾರೆ. ಅವರನ್ನು ಎಬ್ಬಿಸಿ ಕಳಿಸುವ ಧೈರ್ಯ ಮಾತ್ರ ಸರ್ಕಾರಕ್ಕೆ ಇಲ್ಲ
ಇಷ್ಟೆಲ್ಲ ದುಸ್ತರದ ನಡುವೆ, ಆಗಾಗ ಏರ್ಪಡುವ ವಿದೇಶ ಪ್ರವಾಸಗಳಿಂದಾಗಿ ಚೀನಾ, ಸಿಂಗಾಪು, ನ್ಯೂಯರ್ಕ್ ಸಿಟಿಗಳನ್ನು ಕಣ್ತುಂಬಿಕೊಂಡು ಬಂದು, ಅಲ್ಲಿನ ವ್ಯವಸ್ಥಿತ ಮೂಲಸೌಕರ್ಯಗಳಿಗೆ ಪ್ರಭಾವಿತರಾಗಿ ನಮ್ಮ ಪುರವನ್ನು ಸಿಂಗಾಪು, ಶಾಂಘೈ ಸಿಟಿಯನ್ನಾಗಿ ಮಾಡುತ್ತೇವೆ ಎಂದು ಅಬ್ಬರಿಸುವ ರಾಜಕಾರಣಿಗಳು, ಹೊಸದರಲ್ಲಿ ಕಿಸಿದು ಕಿಸಿದು ಒಗೆದ ಅಗಸನಂತೆ ಕಾಣುತ್ತಾನೆ. ಸಿಂಗಾಪು, ಚೀನಾವನ್ನು ಕಂಡುಬಂದ ಅವರೆಲ್ಲ ತಂತಮ್ಮ ಚೀಲ ತುಂಬಿಸಿಕೊಂಡು ಹೋದರೆ ಹೊರತು ಮತ್ತೆನು ಆಗಲಿಲ್ಲ. ಗುಂಡಿ ಬಿದ್ದ ರಸ್ತೆಗಳನ್ನು ಮುಚ್ಚಲಿಕ್ಕೆ ಚೀನಾದಿಂದ ಮಣ್ಣುರಬೇಕು? ಶಾಂಘೈ ಇರಲಿ ಮೊದಲು ಇದ್ದ ರಸ್ತೆಗಳನ್ನು ಸರಿಮಾಡಿಕೊಡಿ  ಸಾಕು ಎನ್ನುತ್ತಿದ್ದಾರೆ ಹತಾಶ ಜನತೆ.
ಪ್ರಜಾಪ್ರಭುತ್ವದಲ್ಲಿ ಪ್ರಜೆಗಳನ್ನೆ ದೇವರು ಎಂದು ಪೂಜಿಸುವ ರಾಜಕಾರಣಿಗಳು ಚುನಾವಣ ಸಮಯದಲ್ಲಿ ಮಾತ್ರ ಒಂದಷ್ಟು ರಸ್ತೆಗಳಲ್ಲಿ ಕಾಣಿಸಿಕೊಳ್ಳುತ್ತಾರೆ ಮತ್ತು ಒಂದಷ್ಟು ರಸ್ತೆ ರಿಪೇರಿಯನ್ನು ಮಾಡಿಸುತಾರೆ. ದು ಬಿಟ್ಟರೆ ಮತ್ತದೆ ಚುಣಾವಣೆಯವರೆಗೂ ಉಣ್ಣಾದ ರಸ್ತೆಗಳ ಮೇಲೆ ಓಡಾಡಿ ಹಣ್ಣಾಗುವುದೆ ನಮ್ಮ ಗತಿ. ಕೆಲವೇ ದಿನಗಳ ಹಿಂದೆ ಕಸದ ಧೂರ್ತವಾಸನೆಯಿಂದಾಗಿ ನಮ್ಮ ಮಹಾನಗರದ ಉಸಿರು ಕಟ್ಟಿತ್ತು. ಕಸದ ವಿಲೇವಾರಿಯನ್ನು ಸಮರ್ಪಕ ರೀತಿಯಲ್ಲಿ ನಿರ್ವಹಿಸದ ಬಿಬಿಎಂಪಿಗೆ ಕೊರ್ಟ್ ಚಿಮಾರಿಹಾಕಿದ್ದು ಇನ್ನು ಮಾಸಿಲ್ಲ. ಇದೀಗ ಮಳೆಯಿಂದ ರಸ್ತೆಗಳು ಪೊರೆ ಬಿಟ್ಟು ವಿಲಕ್ಷಣ ರೂಪ ಪಡೆದಿವೆ. ಅಲಲ್ಲಿ ಚರಂಡಿ ಕಾಲುವೆಗಳು ಪಾಟ್ ಹೊಲ್ ಗಳು ಒಡೆದುಹೋಗಿ ಕೆಟ್ಟನೀರು ಹೊರಹರಿಯುತಿದೆ. ಕುಡಿಯುವ ನೀರಿನ ನಿರ್ವಹಣೆಯು ಅಷ್ಟಕಷ್ಟೆ. ಹೀಗಿರುವಾಗ ಸರ್ಕಾರಕ್ಕೆ ದೊಡ್ಡಮಟ್ಟದ ಅದಾಯ ದಕ್ಕಿಸಿಕೊಡುತ್ತಿರುವ ಮಹಾನಗರಕ್ಕೆ ಅಗತ್ಯತೆಗನುಗುಣವಾಗಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡಬೇಕೆಂಬ ಸ್ವಾಸ್ಥ್ಯ ನಮ್ಮ ಪ್ರತಿನಿಧಿಗಳಿಗಿಲ್ಲವಾಯಿತೆ?. ಇದು ಪಾಲಿಕೆಯ ಅದಕ್ಷತೆಯ ಪರಮಾವಧಿ ಎನಿಸುತ್ತಿಲ್ಲವೆ? ಹೌದೆನ್ನಿಸುವುದಾದರೆ ಕಾರ್ಯವೈಖರಿಯನ್ನು, ಅವರ ಬದ್ಧತೆಯನ್ನು ಪ್ರಶ್ನಿಸಬೇಕಾದುದು ಎಲ್ಲ ನಾಗರಿಕರ ಜವಾಬ್ಧಾರಿ.
ಚುಣಾವಣೆಯಲ್ಲಿ ಮತಹಾಕಿ ಆರಿಸಿ ಕಳುಹಿಸಿದರೆ ಜವಾಬ್ಧಾರಿ ಕಳೆಯುವುದಿಲ್ಲ. ನಮ್ಮ ಅಗತ್ಯತೆಗಳನ್ನು ಪಡೆದುಕೊಳುವ ಹಕ್ಕು ಸಹ ನಮ್ಮದೇ. ಪ್ರಜ್ನಾವಂತ ನಾಗರೀಕರು ಮನಸ್ಸಿನಲ್ಲೆ ಮಡುಗಟ್ಟಿದ ಅಸಹನೆಯನ್ನು ಹೊರಹಾಕಬೇಕಿದೆ. ಕನಿಷ್ಟ ಪಕ್ಷ ನಮ್ಮ ವಾಸಸ್ಥಳದ ಸುತ್ತಮುತ್ತ ಆಗಿರುವ ನ್ಯೂನತೆಯನ್ನು ಪಾಲಿಕೆ ಸಿಬ್ಬಂದಿಗಳಿಗೆ ಕರೆ ಮಾಡಿ ಮನವರಿಕೆ ಮಾಡಿಕೊಡಬೇಕಾಗಿದೆ. ಮೌನ ಮುರಿದು ಸಂಭಂದಪಟ್ಟ ಅಧಿಕಾರಿಗಳಿಗೆ ಅಥವ ವಾರ್ಡ್ ನ ಪ್ರತಿನಿಧಿಗೆ ತಿಳಿಸಬೇಕಾಗಿದೆ. ಒಂದೆರಡುಬಾರಿ ಸಾಲದು ಏಕೆಂದರೆ ಅದು ಅವರಿಗೆ ತಾಕದು. ಪದೇ ಪದೇ ಕರೆ ಮಾಡಿ ಒತ್ತಡ ಹೇರುವ ತಂತ್ರವಾಗಬೇಕು. ಇದೊಂದು ರೀತಿ ಒತ್ತಡ ಆಂದೋಲನವಾಗಲಿ. ಬಿಬಿಎಂಪಿಯ ಟೊಲ್ ಫ್ರೀ  ದೂರವಾಣಿ ಸಂಖ್ಯೆ 22660000 ನಿಮ್ಮ ಕಾಂಟ್ಯಾಟ್ ಪಟ್ಟಿಯಲ್ಲಿರಲಿ ಮತ್ತು ಆಗಾಗೆ ಕರೆಗಳು ಹೋಗುತ್ತಿರಲಿ. ನಿಮ್ಮ ನಿಮ್ಮ ಹಕ್ಕನ್ನು ಪಡೆಯುವುದು ನಿಮ್ಮ ಕರ್ತವ್ಯವೆಂದು ಭಾವಿಸಿರಿ.
  
-ಸಂತೋಷ್ ಇಗ್ನೇಷಿಯಸ್
 
 

Thursday, 2 May 2013

ಐದು ವರ್ಷಕೊಮ್ಮೆ ಬರುವ.........


ಐದು ವರ್ಷಕ್ಕೊಮ್ಮೆ ಬರುವ 
ಕಡು ಬಡವಗೂ ಹೆಮ್ಮೆಯ ತರುವ
ಎಲ್ಲ ಜನಗಳ ಕಣ್ಣು ತೆರೆಸುವ ವರದಾನ
ಎಲ್ಲರ ಪಾಲಿಗು ಅಮೂಲ್ಯವಾದ ಮತದಾನ

ಪ್ರಜಾ ಪ್ರಭುತ್ವ ಕೊಟ್ಟ ಕೊಡುಗೆಯೋ
ಪರಮಧಿಕಾರ ಇಟ್ಟ ನಡಿಗೆಯೋ
ದುಷ್ಟರ ಕೂಟಕೆ ದಿಟ್ಟ ಸವಾಲೋ
ಜನಗಳ ಅರಿವಿನ ಅಗ್ನಿ ಪರೀಕ್ಷೆಯೋ
ಎಲ್ಲರ ಎದೆಯಲಿ ಕನಸನು ಬೆಳೆಸುತ
ಭ್ರಮೆಗಳ ನೆಲೆಸುವ ಮತದಾನ
ಎಲ್ಲರ ಪಾಲಿಗು ಅಮೂಲ್ಯವಾದ ಮತದಾನ


ಚುನಾವಣೆಗಳು ಬಂದಾಗಲೆಲ್ಲಾ  ಕವಿ ಸಿದ್ಧಲಿಂಗಯ್ಯನರು ಬರೆದ ಈ ಮೇಲಿನ ಚಿತ್ರಗೀತೆ ಬಿಟ್ಟು ಬಿಡದಂತೆ ನೆನಪಿಗೆ ಬರುತ್ತದೆ. ಪ್ರಜಾಪ್ರಭುತ್ವದ ದೊಡ್ಡ ಕೊಡುಗೆಯಾದ, ದುಷ್ಟ ವ್ಯವಸ್ಥೆಗೆ ಸವಾಲಾಗಬಲ್ಲಂಥ, ಜನಗಳ ಅರಿವು, ಜವಬ್ದಾರಿಗಳನ್ನು ಅಗ್ನಿ ಪರೀಕ್ಷೆಗೆ ಒಳಪಡಿಸುತ್ತಲೇ, ಆಶಾವಾದದ ಕನಸನ್ನು ಬಿತ್ತುವ ಚುನಾವಣೆ, ಮತದಾನದ ಬಗ್ಗೆ ಸುಂದರವಾಗಿ ರಚಿತವಾದ ಗೀತೆ ಇದು. ಹಾಗೆಯೇ ಮುಂದುವರಿಯುವ ಗೀತೆ ತನ್ನ ಮುಂದಿನ ಸಾಲುಗಳಲ್ಲಿ ಮತದಾನವೆಂಬ ಪ್ರಜಾಪ್ರಭುತ್ವದ ಶಕ್ತಿಯುತ ಸಾಧನ ಹೇಗೆ ಸ್ವಾರ್ಥ, ಭ್ರಷ್ಟ ವ್ಯವಸ್ಥೆಯಲ್ಲಿ ನಲುಗಿ ತನ್ನ ನಿಜ ಸ್ವರೂಪವನ್ನು ಕಳೆದುಕೊಳ್ಳುತ್ತಿದೆ ಎಂಬುದನ್ನು ಎಳೆ ಎಳೆಯಾಗಿ ಚಿತ್ರಿಸುತ್ತಾ ಹೋಗುತ್ತದೆ. ಮತ್ತೊಂದು ಚುನಾವಣೆ ಬಂದಿರುವ ಈ ಸಂದರ್ಭದಲ್ಲಿ ಇದು ಸಮಯೋಚಿತ.

ಕೆಳೆದ ಐದು ವರ್ಷಗಳಲ್ಲಿ ಹಲವಾರು ಬಾರಿ ಮುಂದಿನ ವಾರವೋ, ಬರುವ ತಿಂಗಳೋ ಆಗಬಹುದು ಎಂಬಂತ್ತಿದ್ದ ಚುನಾವಣೆಗಳು ಈಗ ನಿಜಕ್ಕೂ ಬಂದಿದೆ. ಪೂರ್ತಿ ಐದು ವರ್ಷದ ಬಳಿಕವೇ ಬರುತ್ತಿದೆ ಎಂಬುದು ಸಮಾಧಾನದ ವಿಷಯ. ಒಂದೆರೆಡು ತಿಂಗಳ ಹಿಂದಷ್ಟೇ  ನಡೆದ ಸ್ಥಳೀಯ ಚುನಾವಣೆಗಳನ್ನು ಎದುರಿಸಲು ಭಾರಿ ಹಿಂದೇಟು ಹಾಕಿದ ಪಕ್ಷಗಳು ಈ ಬಾರಿಯ ವಿಧಾನಸಭೆಯ ಚುನಾವಣೆಯನ್ನು ಎದುರಿಸಲು  ಅತ್ತ್ತ್ಯುತ್ಸಾಹದಿಂದ ಗರಿಗೆದರಿ ನಿಂತಿವೆ. ಪಕ್ಷಗಳ ಟಿಕೆಟ್ ಆಕಾಂಕ್ಷಿಗಳ ಸಾಲು, ಟಿಕೆಟ್ ಪಡೆದವರ ಸಂಭ್ರಮ, ಸಿಗದವರ ನಿರಾಸೆ, ಪ್ರತಿಭಟನೆ, ನಾಮ ಪತ್ರ ಸಲ್ಲಿಸುವಾಗ  ನಡೆಯುತ್ತಿರುವ ಮೆರವಣಿಗೆ, ಆಗುತ್ತಿರುವ ಟ್ರಾಫಿಕ್ಕು ಜಾಮು, ಲಾಠಿ ಚಾರ್ಜು ಎಲ್ಲವನ್ನು ನೋಡುತ್ತಿದ್ದರೆ ಈ ಬಾರಿಯ ಚುನಾವಣೆಗಳು ಭಾರಿ ಕುತೂಹಲ ಮೂಡಿಸಿದೆ.

ಸರಿಯಾಗಿ ಗಮನಿಸಿದರೆ ಹಲವು ಪ್ರತಿಷ್ಠಿತ ಕ್ಷೇತ್ರಗಳಲ್ಲಿ, ಪ್ರತಿಯೊಂದು ಪಕ್ಷದಿಂದಲೂ ಕನಿಷ್ಠ ಇಬ್ಬರಾದರೂ ಟಿಕೆಟ್ ಆಕಾಂಕ್ಷಿಗಳು. ಯಾರಿಗೆ ಟಿಕೆಟ್ ಕೊಡಬೇಕೆನ್ನುವ ತಲೆನೋವು ಮಾತ್ರವಲ್ಲದೆ, ಜೋರು ಪ್ರತಿಭಟನೆಗಳನ್ನು ಪಕ್ಷದ ಮುಖಂಡರು ಎದುರಿಸಬೇಕಾಗಿ ಬಂದಿದೆ. ತಮ್ಮ ನಾಯಕರೊಬ್ಬರಿಗೆ ಟಿಕೆಟ್ ಕೊಡಲಿಲ್ಲ ಎಂಬ ಕಾರಣಕ್ಕೆ ಪಕ್ಷದ ಹಿರಿಯ ಮುಖಂಡರೊಬ್ಬರು ಹೊರಟಿದ್ದ ಕಾರಿನ ಚಕ್ರದ ಬಳಿ ಮಲಗಿ ಪ್ರತಿಭಟಿಸಿದ ಕಾರ್ಯಕರ್ತನೊಬ್ಬನ ನೋವನ್ನು ಟಿ.ವಿ ಚಾನೆಲ್ಲಗಳು ನಿಮಿಷಕ್ಕೆ ಐದಾರಿ ಬಾರಿ ಹಾಕುತ್ತಿದ್ದವು. ಹಾಗೇ ಪ್ರತಿಭಟನೆಗೆ ಕರೆದುಕೊಂಡು ಬಂದಿದ್ದ ವೃದ್ಧರೊಬ್ಬರು ಹೃದಯಾಪಘಾತವಾಗಿ ಸತ್ತ ಮನಕಲಕುವ ಘಟನೆಯೂ ನಡೆದಿದೆ.  ಈ ಹತ್ತಾರು ನ್ಯೂಸ್ ಚಾನೆಲ್ಲುಗಳು ಬಂದ ಮೇಲೆ, ಈಗ ಪಕ್ಷಗಳಲ್ಲಿ "ಒಳ ಜಗಳಗಳೇ" ಇಲ್ಲ, ಎಲ್ಲಾವೂ ನೇರಾತಿ ನೇರ, ಜನರ ಮುಂದೆ ಬಹಿರಂಗದ "ಹೊರ ಜಗಳಗಳೇ". ನಾಯಕರುಗಳ ಈ ಟಿಕೆಟ್ ಪಡೆಯುವಿಕೆ,ನಾಮ ಪತ್ರ ಸಲ್ಲಿಕೆ, ಚುನಾವಣೆ ಎದುರಿಸುವ ಸಿದ್ಧತೆ, ಬದ್ಧೆತೆಗಳನ್ನು ಕಂಡು, ಇದೇ  ಸಿದ್ಧತೆ, ಬದ್ಧತೆಗಳನ್ನು ಅವರು 
ಜನರ ಸಮಸ್ಯೆಗಳ ಬಗೆಗೂ ತೋರಿದರೆ, ನೀರು, ಕರೆಂಟು, ಬಸ್ಸು ರೋಡು, ಶಾಲೆ, ಆಸ್ಪತ್ರೆ ಮುಂತಾದವುಗಳೆಲ್ಲಾ ಸಮಸ್ಯೆಗಳೆಲ್ಲ ಸಮಸ್ಯೆಗಳೇ ಅಲ್ಲ ಎಂಬ ಅನಿಸಿಕೆ ಜನಸಾಮಾನ್ಯರದು. ಇನ್ನೂ ಅಲ್ಲಲ್ಲಿ ಕೇಳಿ ಬರುತ್ತಿರುವ ಭಾಷಣಗಳು, ಪ್ರಣಾಳಿಕೆಗಳು, ಪರಸ್ಪರ ದೋಷಾರೋಪಗಳನ್ನು ಕಂಡಾಗ ಮೇಲಿನ ಹಾಡಿನ ಮುಂದಿನ ಸಾಲುಗಳು ನೆನಪಾಗುತ್ತವೆ. 

ಚಿತ್ರಕೃಪೆ : ಪ್ರಜಾವಾಣಿ

ಬಣ್ಣ ಬಣ್ಣದ ಭಾಷಣದಲ್ಲಿ
ಕಣ್ಮನ ಸೆಳೆಯುವ ಸ್ವರ್ಗವ ತಂದು
ಎಲ್ಲರ ಎದೆಯಲಿ ಕನಸನು ಬೆಳೆಸುತ
ಭ್ರಮೆಗಳ ಮೆರೆಸುವ ಮತದಾನ

ಆಡುವ ಮಾತು ಹೃದಯದ್ದಲ್ಲ
ಮಾಡುವ ಕೆಲಸ ಮನಸಿನದಲ್ಲ
ಭಾವನೆ ಇಲ್ಲದ ಕನಸನು ಕೊಲ್ಲುವ
ಸುಳಿಯಲಿ ಸಿಲುಕುವ ಮತದಾನ
ಎಲ್ಲರ ಪಾಲಿಗು ಅಮೂಲ್ಯವಾದ ಮತದಾನ .....

ಇಷ್ಟೆಲ್ಲದರ ನಡುವೆಯೂ ಜನ ಸಾಮಾನ್ಯರಾದ ನಾವು ನೀವು ಮತದಾನದ ಬಗ್ಗೆ, ಚುನಾವಣೆಗಳ ಬಗ್ಗೆ ಆಶಾವಾದ ಇಟ್ಟುಕೊಳ್ಳಲೇ ಬೇಕಾಗಿದೆ. ನಿಜಕ್ಕೂ ಇದು ಪ್ರಜಾಪ್ರಭುತ್ವದ ದೊಡ್ಡ ಕೊಡುಗೆಯೇ. ಮತ ಚಲಾಯಿಸದೆ ವ್ಯವಸ್ಥೆಯನ್ನು ದೂಷಿಸುವುದರಲ್ಲಿ ಅರ್ಥವಿಲ್ಲವೆಂಬ ಸತ್ಯವನ್ನು ನಾವು ಮನಗಾಣಬೇಕಾಗಿದೆ. ಪ್ರತಿ ಹೊಸ ಚುನಾವಾಣೆಯ ಸಮಯದಲ್ಲಿ ಹೊಸದಾಗಿ ಮತ ಚಲಾಯಿಸುವ ಹಕ್ಕು ಪಡೆಯುವ ಯುವಕರ ಸಂಖ್ಯೆ ದುಪ್ಪಟ್ಟಾಗುತ್ತಿರುವ ಈ ಸಂದರ್ಭದಲ್ಲಿ ಯುವ ಜನತೆಯ ಪಾತ್ರವೂ ಮಹತ್ವದಾಗಿದೆ. ಒಬ್ಬ ಕ್ರಿಕೆಟ್ ಆಟಗಾರನ ಎಲ್ಲಾ ಅಂಕಿ ಅಂಶಗಳೂ, ಒಬ್ಬ ಸಿನಿಮಾ ನಟನ ವ್ಯಯಕ್ತಿಕ ಜೀವನದ ಸಣ್ಣ ವಿವರಗಳೂ ಗೊತ್ತಿರುವ ನಮಗೆ, ಮುಂದೆ ನಮ್ಮನ್ನು ಪ್ರತಿನಿಧಿಸುವ ನಮ್ಮದೇ ಕ್ಷೇತ್ರದ ಅಭ್ಯರ್ಥಿಯ ವಿವರಗಳು ಮುಖ್ಯದಾಗಬೇಕಾಗುತ್ತದೆ. ಯಾವ ಮೊಬೈಲಿನಲ್ಲಿ ಯಾವ ಸೌಲಭ್ಯವಿದೆ, ಯಾವ ಸಿಮ್ ಹೆಚ್ಚು ಫ್ರೀ ಎಸ್.ಎಮ್.ಎಸ್ ಕೊಡುತ್ತದೆ ಎಂಬ ಗೊಂದಲಗಳಂತೆಯೇ ಯಾವ ಪಕ್ಷಕ್ಕೆ ಮತ ಕೊಟ್ಟರೆ ನಾಡಿಗೆ ಒಳ್ಳೆಯದಾಗುತ್ತದೆ, ಯಾವ ಅಭ್ಯರ್ಥಿ ಏಕೆ ನಮ್ಮ ಕ್ಷೇತ್ರಕ್ಕೆ ಬೇಕು, ನಮ್ಮ ಹಿತ ಕಾಯುವುದು ರಾಷ್ಟ್ರೀಯ ಪಕ್ಷವೇ? ಪ್ರಾದೇಶಿಕ ಪಕ್ಷವೇ?, ನಮಗೆ ಪಕ್ಷ ಮುಖ್ಯವೇ ಆಥವಾ ಕ್ಷೇತ್ರದ ಅಭ್ಯರ್ಥಿ ಮುಖ್ಯವೇ? ಎನ್ನುವಂಥಹ ಗೊಂದಲ, ಪ್ರಶ್ನೆಗಳು ನಮ್ಮಲ್ಲಿ ಮೂಡಬೇಕಾಗಿದೆ. ಮೂಡುವ ಪ್ರಶ್ನೆಗಳಿಗೆ ಉತ್ತರವನ್ನೂ ಕಂಡುಕೊಳ್ಳಬೇಕಾಗಿದೆ. ಈ ನಿಟ್ಟನಲ್ಲಿ ನಮ್ಮ ಕೆಲವೊಂದು ಪತ್ರಿಕೆಗಳು ನಿಜಕ್ಕೂ ಒಳ್ಳೆಯ ಕೆಲಸವನ್ನು ಮಾಡಿ ಪ್ರತಿ ಕ್ಷೇತ್ರದಲ್ಲಿನ ಪರಿಸ್ಥಿತಿ, ಅಭ್ಯರ್ಥಿಗಳ ಬಗ್ಗೆ ನಿಖರವಾದ ಮಾಹಿತಿಗಳನ್ನು ಕೊಡುತ್ತಿವೆ. ಅವೆಲ್ಲವನ್ನು ಗಣನೆಗೆ ತೆಗೆದುಕೊಂಡು ನಮ್ಮ ಮತಗಳನ್ನು ಚಲಾಯಿಸಬೇಕಾದ ಅನಿವಾರ್ಯತೆ ಹಿಂದೆಂದಿಗಿಂತಲೂ ಈಗ ಇದೆ. ಜವಬ್ದಾರಿಯುತ ಮತದಾನದಿಂದಾಗಿ ಜವಬ್ದಾರಿಯುತವಾದ ನಾಯಕ ಸಮೂಹವನ್ನು ಕಟ್ಟುವ, ಅದರೊಂದಿಗೆ ನಾಡಿನ ಅಭಿವೃಧಿಯಲ್ಲಿ ಪಾಲುದಾರರಾಗುವ ಸದವಕಾಶ ನಮಗೆ ಚುನಾವಣೆಗಳು ನೀಡಿದೆ.

ಚುನಾವಣಾ ಆಯೋಗವೂ ತನ್ನ ಕೆಲಸವನ್ನು ಉತ್ತಮವಾಗಿಯೇ ನಿರ್ವಹಿಸುತಿರುವಂತೆ ಕಾಣಿಸುತ್ತಿದೆ. ಚುನಾವಣಾ ನೀತಿ ಸಂಹಿತೆ ಆದಷ್ಟು ಸಮರ್ಪಕವಾಗಿಯೇ ಬಳಕೆಯಾಗುತ್ತಿದೆ. ಇದಕ್ಕೆ ಸಾಕ್ಷಿ ಎಂಬಂಥೆ ಮೊನ್ನೆ ಯಾರದೋ ಪ್ರಭಾವಿ ವ್ಯಕ್ತಿಯೊಬ್ಬರ ಮನೆಯ ಬೀಗರ ಊಟಕ್ಕೆ ತಹಸಿಲ್ದಾರ್ ಕಛೇರಿಯಿಂದ ಅನುಮತಿ ಸಿಗದೆ ಕೊನೆಗೆ ಕೋರ್ಟ್ ಮೊರೆ ಹೊಕ್ಕು ಅನುಮತಿ ತರಬೇಕಾದ ಪರಿಸ್ಥಿತಿ ಬಂದ ಸುದ್ದಿಯನ್ನು ಪತ್ರಿಕೆಗಳು ವರದಿ ಮಾಡಿವೆ. ಅಂತೆಯೇ ಯಾವುದೇ ಪಕ್ಷದ ಚಿಹ್ನೆಯಾಗಿರುವ ವಸ್ತುಗಳನ್ನು ಮತಗಟ್ಟೆಗಳಲ್ಲಿ ಉಪಯೋಗಿಸಬಾರದು ಎಂಬ ನಿಬಂಧನೆ ಇರುವುದರಿಂದ ಮತಗಟ್ಟೆಯ ಅಧಿಕಾರಿಗಳುಈ ಬಾರಿ ಸೆಖೆಯಲ್ಲೇ ಕೆಲಸ ಮಾಡಬೇಕಾದ ಪರಿಸ್ಥಿತಿ!!!! ಏಕೆಂದರೆ ಫ್ಯಾನು ಕೂಡ ಪಕ್ಷವೊಂದರ ಚಿಹ್ನೆ ಎಂಬಂಥ ಜೋಕುಗಳು ಸಹಾ ಹರಿದಾಡುತ್ತಿವೆ. ರಾಜಕೀಯದ ಬಗ್ಗೆ ಎಲ್ಲಾ ತಮಾಷೆ, ಹಾಸ್ಯ, ನಿರಾಸೆಯ ನಡುವೆಯೂ ನಾಡು ಹಾಗೂ ಜನರ ಸೌಖ್ಯಕ್ಕಾಗಿ, ಬಡವರ, ರೈತರ, ಎಲ್ಲಾ ವರ್ಗದ ಜನರ ಒಳಿತಿಗಾಗಿ ದುಡಿಯುವ ಸರ್ಕಾರವೊಂದು ಬಂದು ಮುನ್ನಡೆಸಲಿ ಹಾಗೂ ಅದಕ್ಕೆ ಈ ಚುನಾವಣೆ ಸಾಧನವಾಗಲಿ ಎಂಬ ಆಶಾಭಾವದಿಂದ ಮತ ಚಲಾಯಿಸೋಣ.  

ಕೊನೆಗೆ, ದುಂಡಿರಾಜರ ಚುನಾವಣೆ ಬಗೆಗಿನ ಒಂದು ಹನಿಗವನ:
ಚುನಾವಣೆ ಎಂದರೆ ಕೆಲವು ನಾಯಕರಿಗೆ
ಕಂಡಾಬಟ್ಟೆ
ಸಿಟ್ಟು.
ಕೆಳೆದ ಚುನಾವಣೆಯಲ್ಲಿ ಪಾಪ ಅವರು
ಕಳೆದುಕೊಂಡಿದ್ದರು ಡಿಪಾ
ಸಿಟ್ಟು!!!

- ಪ್ರಶಾಂತ್ ಇಗ್ನೇಷಿಯಸ್

Friday, 15 March 2013

ಹಾರೋಬೆಲೆಗೆ ಈ ಹೆಸರು ಹೇಗೆ ಬಂದಿರಬಹುದು?????


ಹಾರೋಬೆಲೆ, ಇದು ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನಲ್ಲಿರುವ ಎಂಬ ಒಂದು ಚಿಕ್ಕ ಗ್ರಾಮ. ಕೆಲವೇ ವರ್ಷಗಳ ಹಿಂದಿನವರೆಗೂ ಒಂದು ಗ್ರಾಮಕ್ಕೆ ಇರಬಹುದಾದ ಸುಂದರವಾದ ಪರಿಸರ ಇಲ್ಲೂ ಕಾಣಬಹುದಿತ್ತು. ಪೂರ್ವದಲ್ಲಿ ಬಳುಕುತ್ತಾ ಸಾಗುತ್ತಿದ್ದ ಅರ್ಕಾವತಿ ನದಿ, ಪಶ್ಚಿಮದಲ್ಲಿ ಪ್ರಶಾಂತವಾದ ಪಾದ್ರಿ ಕೆರೆ, ಗಂಭೀರವಾಗಿ ನಿಂತ ಸುತ್ತಮುತ್ತಲಿನ ಬೆಟ್ಟಗಳು, ದಕ್ಷಿಣದಲ್ಲಿ  ತಂಪಾಗಿ ಹರಿಯುತ್ತಿದ್ದ ಹೊಂಗೆ ಹಳ್ಳ ಇವೆಲ್ಲವೂ ಗ್ರಾಮದ ಪ್ರತೀಕವಾಗಿ ನಿಂತಿದ್ದವು. ಆದರೆ ಇಂದು ಬತ್ತುತ್ತಿರುವ ಅರ್ಕಾವತಿಗೆ ಬೆಂಗಳೂರಿನ ಕಲುಷಿತ ನೀರೂ ಸೇರಿಕೊಂಡಿದೆ. ದಡದಲ್ಲಿನ ಸುಂದರ ಮರಳು ಮಾಯವಾಗಿವೆ. ಹಳ್ಳದಲ್ಲಿನ ನೀರಿಗೆ ಹಿಂದಿನ ಜುಳು ಜುಳುವೂ ಇಲ್ಲ, ಶುಭ್ರತೆಯಂತೂ ಇಲ್ಲವೇ ಇಲ್ಲ.  ಕೆರೆ, ಇದ್ದರೂ ಇಲ್ಲದಂತೆ ಜನ ಸಾಮನ್ಯರ ಆಸಕ್ತಿ, ಕುತೂಹಲ ಉಳಿಸಿಕೊಳ್ಳಲು ಪರದಾಡುತ್ತಿದೆ. ಇನ್ನೂ, ಕರಗುತ್ತಿರುವ ಇತರ ಬೆಟ್ಟಗಳ ನಡುವೆ ಕಪಾಲ ಬೆಟ್ಟವೊಂದೇ ಇಂದಿಗೂ ಅಸ್ತಿತ್ವ ಉಳಿಸಿಕೊಂಡರೆ, ಇತ್ತೀಚೆಗೆ ತಲೆ ಎತ್ತಿರುವ ಅರ್ಕಾವತಿ ಡ್ಯಾಂ ಮಾತ್ರ ಇನ್ನಷ್ಟು ಅಭಿವೃದ್ಧಿಯ ಭರವಸೆಯನ್ನು ಮೂಡಿಸಿದೆ. 

ಇಷ್ಟಾದರೂ ಬಹುತೇಕ ಕ್ರೈಸ್ತರೇ ತುಂಬಿರುವ ಈ ಗ್ರಾಮ ಇಂದಿಗೂ ತನ್ನದೇ ಆದ ವೈಶಿಷ್ಠತೆಯಿಂದಾಗಿ ಗಮನ ಸೆಳೆಯುತ್ತದೆ. ಭಿನ್ನವಾದ ದೃಷ್ಠಿಕೋನ ಹೊಂದಿದ ಜನರ ನಡುವೆಯೂ ಬಲವಾದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕೊಂಡಿಯಿಂದಾಗಿ ಗ್ರಾಮ ಇಂದಿಗೂ ತನ್ನತನವನ್ನು ಉಳಿಸಿಕೊಂಡಿದೆ. ಯೇಸುಕ್ರಿಸ್ತನ ಜೀವನ, ಬೋಧನೆ, ವಿಶೇಷವಾಗಿ ಆತನ ಶಿಲುಬೆ ಮರಣದ ಸನಿಹದ ಯಾತನಾಮಯ ಘಟನೆಗಳು ಹಾಗೂ ನಂತರದ ಪುನರುತ್ಥಾನದ ಬಗೆಗಿನ ಬೈಬಲ್ಲಿನ ವೃತ್ತಾಂತವನ್ನು ಮೂಲ ಕಥಾವಸ್ತುವಾಗಿಸಿಕೊಂಡು ನಡೆಯುವ ಇಲ್ಲಿನ ನಾಟಕಕ್ಕೆ ಒಂದು ಶತಮಾನದಷ್ಟು ಇತಿಹಾಸವಿದೆ. 1906ರಲ್ಲಿ ಆರಂಭಗೊಂಡ ಈ ನಾಟಕವು ಪ್ರತಿವರ್ಷ ಶುಭಶುಕ್ರವಾರದಂದು ನಡೆದು ಬಂದು, ಇಂದಿಗೆ 107 ಪ್ರದರ್ಶನಗಳನ್ನು ಪೂರೈಸಿದೆ ಎಂದರೆ ಅದು ಕನ್ನಡ ರಂಗಭೂಮಿಯ ಹಾಗೂ ಜನಪದದ ಮಟ್ಟಿಗೆ ನಿಜಕ್ಕೂ ಹೆಮ್ಮೆಯ ಸಂಗತಿ. ಜನರ ಬಾಯಲ್ಲಿ ಮಹಿಮೆ ನಾಟಕ ಎಂದೇ ಕರೆಸಿಕೊಳ್ಳುವ ಈ ನಾಟಕದಿಂದಾಗಿಯೇ ಗ್ರಾಮವು ಕರ್ನಾಟಕದ ಜೆರುಸಲೇಮ್ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. 

ಅಂತೆಯೇ ಈ ಗ್ರಾಮಕ್ಕೆ ಹಾರೋಬೆಲೆ ಎಂಬ ನಾಮ ಹೇಗೆ ಬಂತು ಎಂದು ಹುಡುಕುತ್ತಾ ಹೋದಾಗ ಸ್ಪಷ್ಟವಾದ ಉತ್ತರಗಳು ದೊರಕುವುದಿಲ್ಲವಾದರೂ ಅನೇಕ ಆಸಕ್ತಿಕರ ಸಂಗತಿಗಳು ಕಾಣಸಿಗುತ್ತವೆ.  ಇವುಗಳಲ್ಲಿ ಐತಿಹಾಸಿಕ, ಧಾರ್ಮಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಅಂಶಗಳು ತಳಕುಗೊಂಡಿರುವುದನ್ನು ಕಾಣಬಹುದು. ಗ್ರಾಮಕ್ಕೆ  ಹಾರೋಬೆಲೆ ಎಂಬ ನಾಮಕ್ಕೆ ಇಂಗ್ಲೀಷಿನ 'Horrible' ಪದವೇ ಮೂಲ ಎಂಬುದು ತಮಾಷೆಯಾಗಿ ಕಂಡರೂ, ಅದೇ ಹೆಚ್ಚಾಗಿ ಪ್ರಚಲಿತವಾಗಿದೆ. 16ನೇ ಶತಮಾನದಲ್ಲಿ ಇಟಲಿ ಮೂಲದ ಜೆಸ್ವಿಟ್ ಕ್ರೈಸ್ತ ಮಿಷಿನರಿಗಳು  ಕ್ರೈಸ್ತ ಧರ್ಮದ ಪ್ರಚಾರಕ್ಕಾಗಿ ಈ ಊರಿಗೆ ಬಂದರು ಎಂಬ ಐತಿಹಾಸಿಕ ಮಾಹಿತಿಗಳಿವೆ. ಗುಡ್ಡ ಬೆಟ್ಟ ಕಾಡಿನಿಂದ ತುಂಬಿದ ಊರು ಹಾಗೂ ಊರಿನ ದಾರಿ ದುರ್ಗಮವಾಗಿದ್ದೂ, ಅದರಿಂದಾಗಿ ಈ ಊರಿನ ಪ್ರಯಾಣ ಬಹಳ ಪ್ರಯಾಸದಾಯಕವಾಗಿತ್ತು. ಈ ಕಷ್ಟವಾದ ಪ್ರಯಾಣ, ಅನುಭವ, ಊರಿನ ಪರಿಸರವನ್ನು ಆ ವಿದೇಶಿ ಗುರುಗಳು ತಮ್ಮದೇ ಭಾಷೆಯಲ್ಲಿ  orrible ಅಥವಾ ಇಂಗ್ಲೀಷಿನ Horrible ಎಂದು ಕರೆಯುತ್ತಿದ್ದರಿಂದ ಊರಿಗೆ ಅದೇ ಹೆಸರಾಯಿತು ಎಂಬುದು ಸಾಮಾನ್ಯವಾಗಿ ಕೇಳಿ ಬರುವ ಮಾತು.

ಇನ್ನೂ ಈ ಊರಿನ ಹೆಸರಿನ ಬಗೆಗಿನ ಇತರ ಲೇಖಕರ, ಸಂಶೋಧಕರ ವ್ಯಾಖ್ಯಾನಗಳು ಮತ್ತಷ್ಟು ಕುತೂಹಲ ಕೆರಳಿಸುತ್ತದೆ. ಇತಿಹಾಸ ತಜ್ಞರು, "ಹಾರುವರು" (ಬ್ರಾಹ್ಮಣರು) ಹೆಚ್ಚಾಗಿ ವಾಸವಾಗಿದ್ದ ಕಾರಣ "ಹಾರು" ಬಂದಿರಬಹುದೆಂದೂ, ಊರುಗಳನ್ನು "ಬೆಲೆ" (ಹುಲಿಬೆಲೆ, ಅತ್ತಿಬೆಲೆ)  ಎಂದು ಕರೆಯುವ ರೂಢಿಯಲ್ಲೇ "ಬೆಲೆ" ಸೇರಿಕೊಂಡು "ಹಾರುಬೆಲೆ" ಅಗಿರಬಹುದೆಂದು ಅಭಿಪ್ರಾಯಪಡುತ್ತಾರೆ. ಅದರಲ್ಲೂ ಈ ಸ್ಥಳವನ್ನು ಇಲ್ಲಿಯವರು ವಿಜಯನಗರದ ರಾಜ ಪ್ರತಿನಿಧಿಗಳಿಂದ ಬಳುವಳಿಯಾಗಿ ಪಡೆದರು ಎಂಬ ಮಾಹಿತಿಯಿಂದಾಗಿ ಸ್ಥಳಕ್ಕೆ ಐತಿಹಾಸಿಕ ಮಹತ್ವವೂ ದೊರೆಯುತ್ತದೆ. ಇನ್ನೂ ಈ ಊರಿನ ಬಗ್ಗೆ ಹಲವಾರು ಲೇಖನಗಳನ್ನೂ, ಇಲ್ಲಿನ ದೇವಾಲಯದಲ್ಲಿನ ಪ್ರತಿಮೆಯೊಂದರ ಬಗ್ಗೆ ಸಂಶೋಧನಾತ್ಮಕ ಪುಸ್ತಕವನ್ನೂ ಬರೆದಿರುವ ಪತ್ರಕರ್ತ ಎಫ್.ಎಂ.ನಂದಗಾವ್ ರವರು ಊರಿಗೆ ಈ ಹೆಸರು ಬರಲು ಕಾರಣವಾದ ಅನೇಕ ಸಾಧ್ಯತೆಗಳನ್ನು ಪಟ್ಟಿ ಮಾಡುತ್ತಾರೆ. ದಟ್ಟವಾದ ಪೊದೆ, ಮೆಳೆಗಳನ್ನೂ ’ಬಲ್ಲೆ’ ಎಂದು ಕರೆಯಲಾಗುತ್ತಿತ್ತು. ಊರಿನ ತುಂಬಾ ಇಂತಹ ಬಲ್ಲೆಗಳು ತುಂಬಿರುವಾಗ ಅದನು ದಾಟಿ ಸಾಗಲು ಅವನ್ನು ಹಾರುತ್ತಲೋ,  ಇಲ್ಲವೆ ಸವರಿಕೊಂಡೊ ಹೋಗಬೇಕಾದರಿಂದ, ಇಲ್ಲಿ ನೆಲಸಲು ಬಂದವರು ಅಂತಹ ಬಲ್ಲೆಗಳನ್ನು ಹಾರಿದವರೂ ಆದರಿಂದ, ಬಲ್ಲೆ ಹಾರುವವರ ಊರು, ಹಾಗೆಯೇ ಪದಗಳು ಅದಲು ಬದಲಾಗಿ ಹಾರುಬಲೆ, ಹಾರೋಬೆಲೆ ಆಗಿರಬಹುದೆಂದೂ ಹೇಳುತ್ತಾರೆ. ಅಂತೆಯೇ  ಆರು ಎಂಬ ಪದಕ್ಕೆ ಕೃಷಿ, ಉಳುಮೆ ಎಂಬ ಅರ್ಥವೂ ಇದ್ದೂ ಆದೂ ಸಹಾ ಆರುಬೆಲೆ ಗೆ ಮೂಲವಾಗಿ ಕ್ರಮೇಣ ಹಾರೋಬೆಲೆ ಆಗಿರಬಹುದೆಂಬ ಮಾತಿದ್ದರೂ, ಕೃಷಿಯೇ ಪ್ರಧಾನವಾದ ಅನೇಕ ಇತರ ಊರುಗಳಿಗೆ ಈ ಹೆಸರು ಏಕೆ ಬರಲಿಲ್ಲವೆಂಬ ಪ್ರಶ್ನೆಯೂ ಮೂಡಬಹುದು. ಇನ್ನೂ, ಕಾಡುಮಯ ಪ್ರದೇಶವಾದ್ದರಿಂದ ಕೃಷಿಯ ಜೊತೆಗೆ ಪ್ರಾಣಿ ಪಕ್ಷಿಗಳ ಬೇಟೆ ಉಪವೃತ್ತಿಯಾಗಿದ್ದೂ ಅ ಸಮಯದಲ್ಲಿ  ಬಳಸುವ  ಹಾರುವ ಬಲೆಯಿಂದಲೂ ಈ ಹೆಸರು ಬಂದಿರಬಹುದೆಂಬ ವಾದವನ್ನೂ ಅವರು ತೆರೆದಿಡುತ್ತಾರೆ. ಇನ್ನೂ ಊರಿನಲ್ಲಿರುವ ದೇವಮಾತೆಯ ವಿಗ್ರಹಕ್ಕೆ ವಿವಿಧ ಹಾರಗಳನ್ನು ಹಾಕಲಾಗಿ ಅದು ಹಾರಗಳ ಬಲೆಯಂತೆ ಗೋಚರವಾಗುತ್ತಿದ್ದು, ಅದರಿಂದಲೇ ಹಾರಗಳಬಲೆಗಳ  ಊರು, ಹಾರಬಲೆ, ಮುಂದೆ ಅದು ಹಾರೋಬೆಲೆ ಆಗಿರಬಹುದೆಂಬ ಅನಿಸಿಕೆಯೂ ಇದೆ.

ಇದರಲ್ಲಿ ಯಾವುದು ನಿಜವೋ, ಯಾವುದು ಮೂಲವೋ, ಯಾವುದು ಅಂತಿಮವೋ ನಿರ್ಧರಿಸುವುದು ಕಷ್ಟದ ಮಾತೇ ಸರಿ. ಅದರೂ ಮೂಲದ ಜಾಡು ಹಿಡಿದು ಹೊರಟಾಗ ಸಿಗುವ, ಗೋಚರವಾಗುವ ಅಂಶಗಳಂತೂ  ನಿಜಕ್ಕೂ ರೋಚಕ ಹಾಗೂ ಮುಂದಿನ ಸಂಶೋಧನೆಗೆ ಪೂರಕ, ಸ್ಪೂರ್ತಿದಾಯಕ. ಒಂದು ಊರಿನ ಹೆಸರೇ ಎಷ್ಟೊಂದು ಇತಿಹಾಸ, ಸ್ವಾರಸ್ಯವನ್ನು ಹೊಂದಿರುವಾಗ ಇನ್ನೂ ಇಡೀ ಊರು, ಅದರ ಜನರಲ್ಲಿ, ಇನ್ನೆಷ್ಟು ವಿಷಯಗಳು, ವಿಚಾರಗಳು ಅಡಗಿರುತ್ತವೆಯೋ. ಅವುಗಳನ್ನು ಸ್ವಲ್ಪವಾದರೂ ಹೆಕ್ಕಿ ತೆಗೆಯುವ ಪ್ರಯತ್ನವಾದರೆ, ನಮ್ಮ  ಸಾಂಸ್ಕೃತಿಕ, ಜನಪದ ಬೇರುಗಳು ಇನ್ನಷ್ಟು ಗಟ್ಟಿಯಾಗಬಹುದು. 

-ಪ್ರಶಾಂತ್ ಇಗ್ನೇಷಿಯಸ್

Friday, 8 March 2013

ಬೇಕಾಗಿದ್ದಾರೆ ಆಧುನಿಕ ಭಗೀರಥರು!!!!!!!

ತನ್ನ ಪೂರ್ವಜರ ಮೋಕ್ಷ ಪ್ರಾಪ್ತಿ ಹಾಗೂ ತನ್ನ ನಾಡಿನ ಒಳತಿಗಾಗಿ ಬೇಕಾದ ನೀರಿಗಾಗಿ ಕಠಿಣ ತಪ್ಪಸ್ಸನ್ನು ಮಾಡಿ ಕೈಲಾಸದಿಂದ ಗಂಗೆಯನ್ನು ಹರಿಸಿದ ಭಗೀರಥನ ಕಥೆ ಭಾರತದ ಪುರಾಣದಲ್ಲಿದೆ. ಕೈಲಾಸದಲ್ಲಿದ್ದ ನದಿಯನ್ನು ಭೂಮಿಗಿಳಿಸಲು ಆತ ಕೈಗೊಂಡ ತಪ್ಪಸು, ಎದುರಿಸಿದ ಅಡೆ ತಡೆಗಳು,ಅದನ್ನು ಆತ ಯಶಸ್ವಿಯಾಗಿ ನಿಭಾಯಿಸಿದ ರೀತಿ, ತನ್ನ ಗುರಿಯೆಡೆಗಿನ ಶ್ರದ್ಧೆ, ನಿರಂತರ ಪ್ರಯತ್ನ ಹಾಗೂ ಆತನ ನಿಶ್ಚಲ ಪ್ರಯತ್ನವೆಲ್ಲವೂ ಆ ಕಥೆಯಲ್ಲಿ ಮೂಡಿ ಬಂದಿರುವ ರೀತಿ ಅದ್ಭುತ. ಇಂದಿಗೂ ಸತತ ಪ್ರಯತ್ನವನ್ನುಭಗೀರಥ ಪ್ರಯತ್ನವೆಂದೇ ಕರೆಯಲಾಗುತ್ತದೆ ಹಾಗೂ ಯಾವುದೇ ಒಂದು ನೀರಿಗಾಗಿನ ಹೋರಾಟ, ಶ್ರಮ, ಕೆಲಸದಲ್ಲಿ ಬೇಡವೆಂದರೂ ಭಗೀರಥನ ಹೆಸರು ನುಸುಳುತ್ತದೆ. ಇಂದು ಇಡೀ ವಿಶ್ವದಲ್ಲಿ ತಲೆದೋರಿರುವ ನೀರಿನ ಅಭಾವ, ನೀರಿಗಾಗಿ ಏಳುತ್ತಿರುವ ಹಾಹಾಕಾರವನ್ನು, ಬರಿದಾಗುತ್ತಿರುವ ಅಂತರ್ಜಲದ ಮಟ್ಟವನ್ನು ಕಂಡರೆ ಮತ್ತೊಂದು ಭಗೀರಥ ಪ್ರಸಂಗ ನಡೆಯಬೇಕೇನೋ ಅನಿಸದಿರಲಾರದು.  

ಭೂಮಿಯ ಮೇಲಿನ ನೀರಿನ ಅಂಕಿ ಅಂಶಗಳು ಬಹಳ ತೂಹಲಕಾರಿಯಾಗಿರುವಂಥದು. ಭೂಮಿಯ ಮೇಲಿನ ಸುಮಾರು 70ರಷ್ಟು ಪ್ರದೇಶ ನೀರಿನಿಂದಲೇ ತುಂಬಿದ್ದು, ಅದರಲ್ಲಿ ಶೇಕಡ 95 ಕ್ಕೂ  ಹೆಚ್ಚಿನಷ್ಟು ನೀರು ಸಮುದ್ರ, ಸಾಗರದಲ್ಲಿದೆ. ಎಲ್ಲವನ್ನು ತೂಗಿ ಕಳೆದ ಮೇಲೆ ನಮ್ಮ ಭೂಮಿ ಮೇಲಿನ ಒಟ್ಟು ಇರುವ ನೀರಿನಲ್ಲಿ ಕೇವಲ ನೂರಕ್ಕೆ 2.5 ರಷ್ಟು ಮಾತ್ರ ಸಿಹಿ ನೀರು ಅಥವಾ ಬಳಸ ತಕ್ಕ ನೀರು ಎಂದೇಳುತ್ತದೆ ಮಾಹಿತಿಗಳು. ಅದರಲ್ಲೂ ಬಹುಪಾಲು ನೀರು ಇರುವುದು ಮಂಜು ಗಡ್ಡೆ ಹಾಗೂ ಭೂಮಿ ಆಳದ ಅಂತರ್ಜಲದ ರೂಪದಲ್ಲಿ. ಅಂದರೆ ನೀರೆನ್ನುವುದು ಮೊದಲಿನಿಂದಲೂ ದುಬಾರಿಯಾದುದೇ. ಸುಲಭದಲ್ಲಿ ಸಿಗುತ್ತಿದ್ದದ್ದೇನಲ್ಲ. ನೀರು ಸುಲ್ಭದಲ್ಲಿ ಸಿಗದಿದ್ದ ಕಾಲದಲ್ಲೂ ಅದು ಅಭಾವ ಎನಿಸಿರಲಿಲ್ಲ, ಶ್ರಮದಾಯಕ ಮಾತ್ರವಾಗಿತ್ತು. ಆದರೆ ಬದಲಾದ ಪರಿಸರ, ವಾತವರಣ ಹಾಗೂ ಪ್ರಾಕೃತಿಕ ಅಸಮಲೋತನದಿಂದಾಗಿ ನೀರಿನ ಅಭಾವ,ದಾರಿದ್ರ್ಯದ ಸ್ವರೂಪ ಇಂದು ಬದಲಾಗುತ್ತಿದೆ. ಕೆಲವೇ ವರ್ಷಗಳ ಹಿಂದಿನವರೆಗೂ ನೀರಿನ  ಸಮಸ್ಯೆಯೆಂದರೆ ನೀರಿನ ಕೊರತೆ ಎಂಬುದಾಗಿತ್ತು. ಆದರೆ ಇಂದು ನೀರಿನ ಸಮಸ್ಯೆ ಎಂದರೆ ಕೊರತೆ ಮಾತ್ರವಲ್ಲ ಅದಕ್ಕೆ ನೀರಿನ ಒತ್ತಡ, ನೀರಿನ ಮುಗ್ಗಟ್ಟು ಎಂಬುದೆಲ್ಲವೂ ಸೇರಿಕೊಂಡಿವೆ. 

ನಾವು ಕಂಡ ಹಾಗೆ ಒಂದು ಇಪ್ಪತ್ತು ಮೂವತ್ತು ವರ್ಷಗಳ ಹಿಂದೆ ನೀರಿನ ಅಭಾವದ ಸ್ವರೂಪವೇ ಬೇರೆಯದೇ ರೀತಿಯದ್ದಾಗಿತ್ತು. ಈಗಿನಂತೆ ಮನೆ ಮನೆಗೆ ನೀರು ಬರುವುದು ಕನಸಿನ ಮಾತೇ.ಎಷ್ಟೋ ನಗರ, ಬಡಾವಣೆಗಳಲ್ಲಿ ಈಗಲೂ ಆ ಪರಿಸ್ಥಿತಿ ಇದೆಯಾದರೆ, ಹಿಂದೆ ಅದು ಸಾಮಾನ್ಯದ ಮಾತೇ. ಮನೆಯಲ್ಲೇ ಬಾವಿ ಇದ್ದವರು ಇಲ್ಲವೇ ಬೋರ್ ವೆಲ್ ತೆಗೆಸಿಕೊಂಡವರು ಬಿಟ್ಟರೆ, ಬೇರೆಲ್ಲರಿಗೂ ಬೀದಿಯ ನಲ್ಲಿಯೇ ಗತಿ. ಬೀದಿಗೆ ಒಂದು ಎರಡೋ ಇದ್ದ ನಲ್ಲಿಯಲ್ಲಿ ಹೋಗಿ ನೀರು ತುಂಬಿಕೊಂಡು ಬರುವುದೇ ಒಂದು ದೊಡ್ಡ ಸಾಹಸ. ಒಂದು ನದಿ ಇದ್ದ ಕಡೆ ಇದ್ದ ಒಂದು ಸಂಸ್ಕೃತಿ, ನಾಗರೀಕತೆಯೇ ಅನಾವರಣಗೊಳ್ಳುತ್ತದೆ ಎಂಬ ಮಾತಿದೆ. ನಮ್ಮ ಅಂದಿನ  ಬೀದಿ ಬದಿಯ ನಲ್ಲಿಯೂ ಒಂದು ರೀತಿಯ ಸಾಂಸ್ಕೃತಿಕ ಚಟುವಟಿಕೆಗೆ ವೇದಿಕೆಯೇ, ಅದು ಬೇರೆಯ ಮಾತು. ಆಗದ ನೀರಿನ ಪೈಪುಗಳ ಜೋಡಣೆ, ಅಸಮರ್ಪಕವಾದ ನೀರಿನ ಹಂಚಿಕೆ ಹಾಗೂ ನಿರ್ವಹಣೆಯಿಂದಾಗಿ ನದಿಗಳಲ್ಲಿ ನೀರಿದ್ದರೂ ಅದು ಜನರನ್ನು ತಲಪುವ ಸಾಧನಗಳು, ವಿಧಾನಗಳು ಬಾಲ್ಯಾವಸ್ಥೆಯಲ್ಲಿದ್ದವು. 

ಇದು ನಗರದ ಮಾತಾದರೇ, ಹಳ್ಳಿಗಳಲ್ಲಿ ಇತ್ತೀಚಿನವರೆಗೂ ಬಾವಿ, ಕೆರೆ, ನದಿ, ಹಳ್ಳ, ಝರಿ,ಬೋರ್ ವೆಲ್ ಗಳೇ ನೀರಿನ ಮೂಲಗಳಾಗಿದ್ದವು. ಅಂದರೆ ಅದು ಮೂಲಭೂತ ಸೌಕರ್ಯದ ಕೊರತೆಯಾಗಿದ್ದು ಸರ್ಕಾರಗಳ, ಸಂಬಂಧಪಟ್ಟ ಸಂಸ್ಥೆಗಳ ವೈಫಲ್ಯವನ್ನು ಎತ್ತಿ ತೋರಿಸುತ್ತಿದ್ದವು. ಹಲವು ಸಂದರ್ಭಗಳಲ್ಲಿ ಸರ್ಕಾರ, ಸಂಸ್ಥೆಗಳು ಕಾರ್ಯಪ್ರವತರಾಗಿದ್ದರೂ ಹಣಕಾಸಿನ ತೊಂದರೆ ಇಲ್ಲವೇ ಸೌಲಭ್ಯದ ಅಡೆತಡೆಗಳು ಅವುಗಳ ಕೈ ಕಟ್ಟಿಹಾಕುತ್ತಿದ್ದವು. ಇವೆಲ್ಲಾ ಕಾರಣಗಳಿಂದಾಗಿ ನೀರೆನ್ನುವುದು ಒಂದು ದುಬಾರಿ ನೈಸರ್ಗಿಕ ಸಂಪತ್ತಾಗಿತ್ತು. ಅಂದರೆ ನೀರು ಇದ್ದರೂ ಅದನ್ನು ಸಮರ್ಪಕವಾಗಿ ಹಂಚುವ ಪರಿಕರಗಳು, ಸೌಲಭ್ಯಗಳು ಇಲ್ಲದೆ ಅದೇ ಒಂದು ರೀತಿಯ ಸಮಸ್ಯೆಯಾಗಿತ್ತು. ಆದರೆ ಈಗಿನದು ಬೇರೆಯದೇ ಆದ ಸಮಸ್ಯೆ. ಕಾಲ ಬದಲಾದಂತೆಲ್ಲಾ ನೀರನ್ನು ಸಮರ್ಪಕವಾಗಿ ತಲುಪಿಸುವ ಕಾರ್ಯ ಯೋಜನೆಗಳು ಸಾಕಾರಗೊಂಡವು. ನೀರಾವರಿ ಯೋಜನೆಗಳ ಆಮೆ ವೇಗ, ಭ್ರಷ್ಟಾಚಾರದ ನಡುವೆಯೂ ನೀರು ಮರಿಚಿಕೆಯಾಗದೆ, ಗಗನ ಕುಸುಮವಾಗದೆ, ಮೂಲ ಸೌಕರ್ಯದ ಭಾಗವಾಗಿ ಮನೆ ಮನೆಗಳನ್ನು ತಲುಪಿತು. ಅದು ನೂರಕ್ಕೆ ನೂರರಷ್ಟು ಅಲ್ಲದಿದ್ದರೂ ಭಾರತದಂಥ ಅಗಾಧ ಜನಸಂಖ್ಯೆಯ ದೇಶದಲ್ಲಿ ನಿಜಕ್ಕೂ ಈ ನಿಟ್ಟಿನಲ್ಲಿ ಸಾಕಷ್ಟು ಪ್ರಗತಿಯಾಗಿದೆ, ಇನ್ನೂ ಸುಧಾರಿಸುವ ಭರವಸೆ ಇದೆ ಎಂಬುದಾಗಿ ವಿಶ್ವದ ಅನೇಕ ನೀರು ನಿರ್ವಹಣಾ ಸಂಸ್ಥೆಗಳು ಮೆಚ್ಚುಗೆ ವ್ಯಕ್ತ ಪಡಿಸಿವೆ, ಆದರೆ ಅಸಲಿ ಸಮಸ್ಯೆ ಪ್ರಾರಂಭವಾಗಿರುವುದೇ ಇಲ್ಲಿ. ಈಗ ಇಲ್ಲಿ  ಒತ್ತಡ ಹಾಗೂ ಮುಗಟ್ಟಿನ ಸಮಸ್ಯೆ. ಈ ನೀರಿನ ಒತ್ತಡವೆಂದರೆ ಏನು ಎಂದು ಅವಲೋಕಿದಾಗ ಕಣ್ಣಿಗೆ ರಾಚುವುದು ಕಳೆದ 50 ವರ್ಷಗಳಲ್ಲಿ  ದುಪ್ಪಟ್ಟಾಗಿರುವ ಪ್ರಪಂಚದ ಜನಸಂಖ್ಯೆ. ಅದರಲ್ಲೂ ಭಾರತ ಇದರಲ್ಲಿ ಬಹು ಮುಂದು. ಜನ ಸಂಖ್ಯೆ ಮಾತ್ರವಲ್ಲದೆ ಒಬ್ಬ ಮನುಷ್ಯ ಉಪಯೋಗಿಸುತ್ತಿದ್ದ, ಬಳಸುತ್ತಿದ್ದ ನೀರಿನ ಸರಾಸರಿ ಕೂಡ ದುಪ್ಪಟ್ಟಾಗಿದೆ. 

ಜೀವನ ಶೈಲಿ ಸರಳವಾಗಿದ್ದ, ಶ್ರೀಮಂತಿಕೆಯ ಅರ್ಥ ಬೇರೆಯದೇ ಇದ್ದ ಸಮಯದಲ್ಲಿ ನೀರಿನ ಬಳಕಯಲ್ಲೂ ಸಮಾನತೆಯಿತ್ತು. ಶ್ರೀಮಂತ, ಬಡವನ ಆಹಾರ, ನೀರು ಬಳಸುವ ಪದ್ದತಿಗಳು ಒಂದೇ ರೀತಿಯದ್ದಾಗಿದ್ದವು.ಆದರೆ ಕಾಲ ಬದಲಾದಂತೆ ಹೆಚ್ಚು ಹೆಚ್ಚು ನೀರು ಬಳಸುವಂತ ಮಾನವನ ಜೀವನ ವಿಧಾನಗಳು, ಆಹಾರ ಪದ್ಧತಿಯಿಂದಾಗಿ ನೀರಿನ ಮೂಲಗಳ ಮೇಲೂ ಅಧಿಕವಾದ ಒತ್ತಡ ಪ್ರಾರಂಭವಾಯಿತು. ಉಳ್ಳವರು ತಮ್ಮ ಸಂಪತ್ತನ್ನು ಬಳಸಿ ನೀರನ್ನು ಬಸಿಯುವ, ಕೂಡಿಸಿಕೊಳ್ಳುವ ಪ್ರಕ್ರಿಯೆಯೂ ಪ್ರಾರಂಭವಾಯಿತ್ತು. ವಾತವರಣದಲ್ಲಿನ ಬಲಾವಣೆ ಪ್ರಕೃತಿ ಮೇಲೆಯೂ ಪರಿಣಾಮ ಬೀರಿ ಈ ನೀರಿನ ಸೆಲೆಗಳು ಬೇಡಿಕೆಯ ಮಟ್ಟದಲ್ಲಿ ನೀರನ್ನು ನೀಡಲು ವಿಫಲವಾದವು.  ಕೈಗಾರೀಕರಣದಿಂದಾಗಿ ಸಿಹಿ ನೀರಿನ ಬುಗ್ಗೆಗಳು ಕಲುಷಿತಗೊಂಡವು. ನೀರು ಯತ್ತೇಚ್ಛವಾಗಿದ್ದರೂ ಬೃಹದಾಕಾರವಾಗಿ ಬೆಳೆಯುತ್ತಿದ್ದ ಮಾನವನ ದಾಹಕ್ಕೆ ಪರಿಸರ ಒಂದಲ್ಲ ಒಂದು ದಿನ ಬರಿದಾಗಲೇ ಬೇಕಿತ್ತು. ಆ ಬರಿದಾಗುವ ಕಾಲ ಈಗ ಬರುತ್ತಿದೆ. ಎಚ್ಚರ ವಹಿಸದಿದ್ದರೆ ಮುಂದೆ ಸಂಪೂರ್ಣವಾಗಿ ಬತ್ತಿಹೋಗುವ ಲಕ್ಷಣಗಳು ಕಾಣುತ್ತಿವೆ. ಎಚ್ಚರಿಕೆಯ ಗಂಟೆಗಳು ಮೊಳಗುತ್ತಿವೆ. ನೀರು ಸಿಕ್ಕರೂ ಸುರಕ್ಷಿತವಾದ, ಸ್ವಚ್ಛವಾದ ನೀರು ಎನ್ನುವುದು ಖಾತ್ರಿಯಿಲ್ಲ. ಭಾರತದಂಥ ದೇಶದಲ್ಲಿ ದಿನವೊಂದಕ್ಕೆ 1600 ಜನರು ಕಲುಷಿತ ನೀರಿನಿಂದ ಅಸ್ವಸ್ಥಗೊಂಡು ಅಸುನೀಗುತ್ತಾರೆ ಎಂಬದು ಬೆಚ್ಚಿ ಬೀಳಿಸುವ ಸಂಗತಿ. 

ಶೇಕಡ 50ಕ್ಕಿಂತ ಹೆಚ್ಚಿನ ಶುದ್ಧ ನೀರಿನ ಯೋಜನೆಗಳು ವಿಫಲವಾಗಲು ಬಹು ಮುಖ್ಯ ಕಾರಣ ಸಾಮಾನ್ಯ ಜನರ ಅಸಹಕಾರ ಹಾಗೂ ಉದಾಸೀನತೆ ಎಂದು ಸಂಸ್ಥೆಯೊಂದರ ಅಂಕಿ ಅಂಶಗಳು ಹೇಳುತ್ತವೆ. ನಮ್ಮ ಮಕ್ಕಳಿಗಾಗಿ, ಮುಂದಿನ ಜನಾಂಗಕ್ಕಾಗಿ  ಒಳ್ಳೆಯ ಪರಿಸರವನ್ನು ಉಳಿಸಬೇಕಾದ ಜವಬ್ದಾರಿ ನಮ್ಮ ಮೇಲಿರುವಾಗ ನೀರು ಬಹು ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಈ ನಿಟ್ಟಿನಲ್ಲಿ ಸಾಮೂಹಿವಾದ, ಸಾಂಘಿಕವಾದ ಪ್ರಯತ್ನಗಳು ಆಗಬೇಕಾಗಿದೆ. ತನ್ನ ಪೂರ್ವಜರಿಗಾಗಿ ಕೈಲಾಸದಿಂದ ನೀರನ್ನು ಹರಿಸಿದ ಭಗೀರಥನ ಪ್ರಯತ್ನ ನಮ್ಮ ನಿಮ್ಮದಾಗ ಬೇಕಾಗಿದೆ. ವ್ಯತ್ಯಾಸವೆಂದರೆ ಅದಕ್ಕೆ ಸ್ವರ್ಗದ ಮೊರೆ ಹೋಗಬೇಕಾದ ಅವಶ್ಯಕತೆಯಿಲ್ಲ, ಇರುವ ನೀರನ್ನು ಉಳಿಸಿಕೊಳ್ಳುವ, ನೀರಿನ ಮೂಲಗಳನ್ನು ಬೆಳೆಸುವ ಮನಸ್ಸು ಮಾಡಬೇಕಾಗಿದೆ. ಕಠಿಣ ತಪ್ಪಸಿನ ಬದಲು ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಶಿಸ್ತು, ನಮ್ಮದೇ ಉದಾಸೀನದ ಅಡೆತಡೆಗಳನ್ನು ದಾಟುವ ಸಂಕಲ್ಪ, ಪರಿಸರದ ಬಗೆಗಿನ ಗೌರವ ಬೆಳೆಸಿಕೊಳ್ಳಬೇಕಾಗಿದೆ. ತನ್ನ ಮನೆಯ ಚಂದದ ಹೂದೋಟಕ್ಕೆ ನೀರುಣಿಸುವ ಶ್ರೀಮಂತನಿಗೆ ಎದುರಿನ ಮನೆಯ ಕುಟುಂಬದ ನೀರಿನ ಬವಣೆ ಅರ್ಥವಾಗಬೇಕಾಗಿದೆ. 


ನೀರನ್ನು ನಮ್ಮದೇ ಆದ ರೀತಿಯಲ್ಲಿ ಉಳಿಸುವ 100 ಸರಳ ವಿಧಾನಗಳನ್ನು http://wateruseitwisely.com ಎಂಬ ಅಂತರ್ಜಾಲದ  ಸೈಟ್ ನಲ್ಲಿ ಕಾಣ ಬಹುದು. ಪಾತ್ರೆಗಳನ್ನು ತೊಳೆಯುವಾಗಿನಿಂದ ಹಿಡಿದು ನಮ್ಮದೇ ಪುಟ್ಟ ಕೈ ತೋಟದಲ್ಲಿ ನೀರನ್ನು ಹೇಗೆ ಬಳಸಬಹುದು ಎಂಬುದರ ಮಾಹಿತಿ ಇದರಲ್ಲಿದೆ. ಬಹುತೇಕ ಮಾಹಿತಿಗಳು ನಮಗೆ ತಿಳಿದಿರುವಂಥದೇ, ಆದರೆ ಅದನ್ನು ಕಡೆಗಣಿಸುತ್ತಾ ಬಂದವರು ನಾವು. ಇನ್ನು ಮುಂದೆ ಮನಸು ಮಾಡಬೇಕು ಆಷ್ಟೇ. ಇನ್ನು, ಭಾರಿ ಪ್ರಮಾಣದಲ್ಲಿ ಮಳೆ ಕಾಣುವ ಮಲೆ ನಾಡು, ಕರಾವಳಿ ಪ್ರದೇಶಗಳಲ್ಲಿ ಭಾರಿ ಪ್ರಮಾಣದ ನೀರು ಹರಿದು ಸಮುದ್ರ ಪಾಲಾಗುತ್ತವೆ. ಹರಿದು ಹೋಗುವ ನೀರನ್ನು, ಸಂಗ್ರಹಿಸಿ, ಸದ್ಬಳಕೆ ಮಾಡಿಕೊಳ್ಳುವಂಥ, ನೀರಿಲ್ಲದ ಜಾಗಗಳಿಗೆ ಹರಿಸುವಂಥ  ಯೋಜನೆಗಳತ್ತ ನಮ್ಮ ಸರ್ಕಾರಗಳು, ನಾಯಕರುಗಳು ಗಮನ ಹರಿಸಬೇಕಾಗಿದೆ. ಕಷ್ಟವಾದರೂ ಅಸಾಧ್ಯದ ಮಾತಲ್ಲ. ರಾಜಕೀಯ ಇಚ್ಚಾಶಕ್ತಿ ಬೇಕಷ್ಟೆ. ನಮ್ಮ ಸ್ಥಳಗಳಲ್ಲೇ ಬೀಳುವ ಪ್ರತಿಯೊಂದು ಮಳೆಯೂ ಪ್ರಕೃತಿ ಕೊಡ ಮಾಡುತ್ತಿರುವ ನೈಜ ಕೊಡುಗೆ. ಅಗಾಧ ನೀರ ಕಣಜ. ಅದನ್ನು Rain Harvesting ಗಳಂಥ ಯೋಜನೆಗಳಿಂದ ಸಂಗ್ರಹ ಮಾಡುವ ಪ್ರಕ್ರಿಯೆಗೆ ಮತ್ತಷ್ಟು ಚುರುಕು ತರುವ ಕಾರ್ಯವನ್ನು ಸ್ಥಳೀಯ ಪೌರ ಸಂಸ್ಥೆಗಳೂ ಮಾಡಬೇಕಾಗಿದೆ. ನೀರಿನ ಮರು ಬಳಕೆಯಂಥ ಅವಿಶ್ಕಾರಗಳು ಮತ್ತಷ್ಟು ಹೆಚ್ಚಬೇಕಾಗಿದೆ.

ಈ ಬೇಸಿಗೆಯಲ್ಲಿ ನೀರಿನ ಅಭಾವವಿರುತ್ತದೆ ಎಂದು ಮಾಹಿತಿಗಳು ಬಂದಿವೆ. ಕಾವೇರಿ ಸಹಾ ಬರಿದಾಗಿರುವುದು ಮಾತ್ರವಲ್ಲದೆ, ನಮ್ಮ ಕೈಯಿಂದ ಜಾರಿದೆ. ಪ್ರತಿ ಹನಿ ಹನಿಯನ್ನೂ ಮುತ್ತಿನಂತೆ ಜೋಪಾನವಾಗಿ ಬಳಸಬೇಕಾದ ಕಾಲಘಟ್ಟದಲ್ಲಿ  ನಾವಿರುವಾಗ, ಜವಬ್ದಾರಿಯುತವಾಗಿ ಬಾಳೋಣ. ನಮ್ಮ ಪರಿಸರವನ್ನು ಕಾಪಾಡಿಕೊಳ್ಳೋಣ. 

-ಪ್ರಶಾಂತ್ ಇಗ್ನೇಷಿಯಸ್

Wednesday, 6 February 2013

ಪೂರ್ವದಿಂದ ಬಂದ ರಾಯರು ಹಳ್ಳಿಗಳಲ್ಲೇ ಉಳಿದುಬಿಟ್ಟರು!

ಈ ಹಬ್ಬಕ್ಕೆ ಮೂರು ಅಂಶಗಳಿದ್ದರು ಮೂರು ರಾಯರದ್ದೇ ಪ್ರಧಾನ.  ಕ್ರಿಸ್ಮಸ್ ಹಬ್ಬಕ್ಕೆಂದು ಗೊದಲಿಯನ್ನು ಕಟ್ಟಿ ಮೂಲೆಯಲ್ಲಿಡುತ್ತಿದ್ದ  ೩ ರಾಯರನ್ನು ಅಂದು ತಂದು ಬಾಲಯೇಸುವಿನ ಬಳಿ ಇಡುವ ಮೂಲಕ ಇದು ಮೂರು ರಾಯರು ಸಂದರ್ಶಿಸಿದ ಹಬ್ಬವೆಂದೇ ನಮ್ಮ ಮನಗಳಲ್ಲಿ ಗಟ್ಟಿಯಾಗಿ ನೆಲೆಯೂರಿದೆ. ವಿಶೇಷವೇನೆಂದರೆ ಮೂರೂರಾಯರು ಯೇಸುವನ್ನು ಸಂಧಿಸುವುದಕ್ಕೂ ಹಳ್ಳಿಗಳಲ್ಲಿ  ಆಚರಣೆಯಲ್ಲಿರುವಂತೆ ಜಾನುವಾರುಗಳನ್ನು ತೀರ್ಥದಿಂದ ಪ್ರೋಕ್ಷಿಸಿ ಆಶೀರ್ವದಿಸುವ ಅದೇ ದಿನಕ್ಕೂ ಅದ್ಯಾವ ಸಂಬಂಧ ಬೆಸೆದಿದೆಯೋ ಗೊತ್ತಿಲ್ಲ.


ದು ಜಾತ್ರೆ ಜಾತ್ರೆಯಂತಹ ಜನ ಜಂಗುಳಿ. ಊರಿಗೆ ಊರೇ ತಮ್ಮ ತಮ್ಮ ಮನೆ ಬಾಗಿಲ ಬಳಿ ನಿಂತು ತಮ್ಮ ಜಾನುವಾರುಗಳನ್ನೂ ಸಾಲಾಗಿ ನಿಲ್ಲಿಸಿ ಗುರುಗಳಿಂದ ಪ್ರೋಕ್ಷಿಸಲ್ಪಡುವ ತೀರ್ಥಕ್ಕೆ ಮೈಯೊಡ್ಡಿ ನಿಲ್ಲುವ ವಿಶ್ವಾಸನೀಯ ಗಳಿಗೆ. ಇದೊಂದು ಆಚರಣೆ ಕೂಡ. ಕೇವಲ ಹಳ್ಳಿಗಳಲ್ಲಿ ಮಾತ್ರವೇ ಕಂಡುಬರುವ ಹಬ್ಬದ ಸಂಪ್ರಾದಾಯಿಕ ಆಚರಣೆ. ಕ್ರಿಸ್ಮಸ್ ಹಬ್ಬದ ನಂತರ ಬರುವ ಮೊದಲ ವಾರ್ಷಿಕ ಹಬ್ಬ. ಇದುವೇ ಮೂರು ರಾಯರ ಹಬ್ಬ. ಕ್ರಿಸ್ತ ಜಯಂತಿಯ ೧೨ ನೇ ದಿನಕ್ಕೆ ಸರಿಯಾಗಿ ಈ ಹಬ್ಬ ಬರುತ್ತದೆಯಾದರೂ ಆ ದಿನದ ಮುಂದಿನ ಭಾನುವಾರದಂದು ಆಚರಿಸುವುದು ವಾಡಿಕೆ. ಈ ಹಬ್ಬವನ್ನು ಪೂರ್ವ ಕ್ರೈಸ್ತ ದೇಶಗಳು ಅತಿ ವಿಜ್ರಾಂಭಣೆಯಿಂದ ಆಚರಿಸುತ್ತವೆ ಎಂದು ಕೇಳಿದ್ದೇವೆ. ೩ ರಾಜರು ಪೂರ್ವದೇಶದಿಂದ ಬಂದರು ಎಂಬ ಉಲ್ಲೇಖಗಳೆ ಅದಕ್ಕೆ ಕಾರಣಗಳು ಇದ್ದಾವು. ಏನೇ ಆಗಲಿ ಇದು ಕ್ರಿಸ್ತನ ಆನೇಕ ಪ್ರಥಮಗಳ ಸಂಗಮದ ಹಬ್ಬ ಅಥವಾ ಕ್ರಿಸ್ತರು ದೈವಿಕ ಪ್ರಕೃತಿಯ ಕುರುಹುವಿನೊಂದಿಗೆ ಹಠಾತ್ ಬಹಿರಂಗಗೊಂಡ ದಿನವೆಂತಲೂ ಅರ್ಥೈಸಬಹುದು. ಅವುಗಳನ್ನು ಪಟ್ಟಿಮಾಡುವುದೇ ಆದರೆ; ಮೊದಲನೆಯದು, ಲೋಕಕ್ಕೆ ಬೆಳಕಾಗುವ ರಾಜನು ಈ ಕ್ರಿಸ್ತ ಎಂಬ ಸಂಕೇತವಾಗಿ ೩ ರಾಜರು ತಾರೆಯ ಬೆಳಕನ್ನು ಅನುಸರಿಸಿ ಬಂದು ಕ್ರಿಸ್ತನನ್ನು ಸಂಧಿಸಿ ಕ್ರಿಸ್ತನೆ ಜಗತ್ತಿನ ಮಹಾರಾಜ ಎಂದು ಪರಿಚಯಿಸಿದ ಹಬ್ಬ. ಎರಡನೆಯದು, ಯೇಸು ಸ್ನಾನಿಕ ಅರಲಪ್ಪರಿಂದ ಸ್ನಾನಾದೀಕ್ಷೆ ಪಡೆದು ತನ್ನನೇ ಲೋಕಾರ್ಪಣೆಮಾಡಿಕೊಂಡ ದಿನ. ಮೂರನೆಯದು, ಕಾನಾ ಮದುವೆಯಲ್ಲಿ ನೀರನ್ನು ದ್ರಾಕ್ಷರಸವನ್ನಾಗಿ ಪರಿವರ್ತಿಸಿ ತನ್ನ ದೈವೀ ಗುಣವನ್ನುಪ್ರಚುರಪಡಿಸಿದ ದಿನ. ಹೀಗೆ ಕ್ರಿಸ್ತನ ಮಹತ್ತರ ಪ್ರಥಮ ಹೆಜ್ಜೆಗಳ ಸಲುವಾಗಿ ಧರ್ಮಸಭೆ ಈ ಹಬ್ಬವನ್ನು ದೈವ ದರ್ಶನದ ಹಬ್ಬವನ್ನಾಗಿ ಆಚರಿಸುತ್ತದೆ. ಈ ಹಬ್ಬಕ್ಕೆ ಮೂರು ಅಂಶಗಳಿದ್ದರು ಮೂರು ರಾಯರದ್ದೇ ಪ್ರಧಾನ.  ಕ್ರಿಸ್ಮಸ್ ಹಬ್ಬಕ್ಕೆಂದು ಗೊದಲಿಯನ್ನು ಕಟ್ಟಿ ಮೂಲೆಯಲ್ಲಿಡುತ್ತಿದ್ದ  ೩ ರಾಯರನ್ನು ಅಂದು ತಂದು ಬಾಲಯೇಸುವಿನ ಬಳಿ ಇಡುವ ಮೂಲಕ ಇದು ಮೂರು ರಾಯರು ಸಂದರ್ಶಿಸಿದ ಹಬ್ಬವೆಂದೇ ನಮ್ಮ ಮನಗಳಲ್ಲಿ ಗಟ್ಟಿಯಾಗಿ ನೆಲೆಯೂರಿದೆ. ವಿಶೇಷವೇನೆಂದರೆ ಮೂರೂರಾಯರು ಯೇಸುವನ್ನು ಸಂಧಿಸುವುದಕ್ಕೂ ಹಳ್ಳಿಗಳಲ್ಲಿ  ಆಚರಣೆಯಲ್ಲಿರುವಂತೆ ಜಾನುವಾರುಗಳನ್ನು ತೀರ್ಥದಿಂದ ಪ್ರೋಕ್ಷಿಸಿ ಆಶೀರ್ವದಿಸುವ ಅದೇ ದಿನಕ್ಕೂ ಅದ್ಯಾವ ಸಂಬಂಧ ಬೆಸೆದಿದೆಯೋ ಗೊತ್ತಿಲ್ಲ.. ಯೇಸು ಹುಟ್ಟಿದ್ದು ದನಕರುಗಳ ಮಧ್ಯೆ ಎಂದಾಗಲಿ ಮೂರು ರಾಯರು ಒಂಟೆಗಳ ಮೇಲೆ ಪ್ರಯಾಣಿಸಿ ಬಂದರು,  ಒಂಟೆಗಳು ನಮ್ಮಲ್ಲಿ ಇಲ್ಲದ್ದರಿಂದ ದನಕರುಗಳ ರೂಪದಲ್ಲಿ ಅವುಗಳನ್ನೂ ಆಶೀರ್ವದಿಸಲಾಗುವುದು ಎಂದಾಗಲಿ ನಮ್ಮದೇ ಕಲ್ಪನೆಯಲ್ಲಿ ಆ ಅಚರಣೆಯನ್ನು ಅರ್ಥೈಸಿಕೊಂಡಿದ್ದೇವೆ. ಈ ಕಲ್ಪನೆ ಎಷ್ಟರ ಮಟ್ಟಿಗೆ ಸತ್ಯ ಎನ್ನುವುದು ತಿಳಿದಿಲ್ಲ. ಆದರೂ ಇದನ್ನು ಆಚರಿಸುವ ಆಸಕ್ತಿ ಮಾತ್ರ ಅಸಾಧಾರಣ.    


 
ಹಳ್ಳಿಗರಿಗೆ ವ್ಯವಸಾಯವೇ ಜೀವನಾಂಶವಾದ್ದರಿಂದ ದನಕರು ಕುರಿ ಮೇಕೆಗಳು ಅವರ ಅವಿಭಾಜ್ಯ. ವರ್ಷಕ್ಕೊಮ್ಮೆ ಅವುಗಳನ್ನು ಗೌರವಿಸಿ ಸತ್ಕರಿಸುವ ಹಬ್ಬವನ್ನು ಇನ್ನೆಷ್ಟು ಮುತುವರ್ಜಿಯಿಂದ ಮಾಡಿಯಾರು ಉಹಿಸಿ.  ಉಹಿಸುವುದೇನು? ಅಂತಹ ಪ್ರದೇಶದಿಂದ ಹುಟ್ಟಿ ಬಂದ ನನ್ನಂತವನಿಗೆ ಆ ಚಿತ್ರಣವನ್ನು ಕಟ್ಟಿಕೊಡುವುದು ಕಷ್ಟಕರವೇನಲ್ಲ. ವರ್ಷಪೂರ ಕಷ್ಟಪಟ್ಟು ಗೇಮೆ ಗೈಯುವ ಜಾನುವಾರುಗಳನ್ನು ಅಂದು ಆದಷ್ಟು ಚೆಂದವಾಗಿ ಶೃಂಗರಿಸಿ ಮೆರವಣಿಗೆಗೆ ತರಬೇಕು ಎಂದು ಎಂತಹ ಬಡವನಿಗೂ ಅನಿಸದೇ ಇರದು. ಇದು ಅವನ ಮತ್ತು ಜಾನವಾರುಗಳ ನಡುವಿನ ಭಾಂಧವ್ಯ; ಅವುಗಳ ಕೊಂಬನ್ನು ನುಣುಪಾಗಿ ಒರೆದು, ಕೊಂಬನ್ನು ಅಂದಗೊಳಿಸುವುದರಿಂದ ಆರಂಭಗೊಳ್ಳುವ ಕಾಳಜಿ, ಮನೆಮಂದಿಯೆಲ್ಲ ದನಕರುಗಳ ಒಂದಲ್ಲ ಒಂದು ಸೇವೆಗೆ ನಿಂತುಬಿಡುವಂತೆ ಮಾಡುತಿತ್ತು. ಒಬ್ಬರಿಂದ ಕೊಂಬನ್ನು ಮೊನಚುಗೊಳಿಸುವ ಮುತುವರ್ಜಿ. ಜೊತೆಯಲ್ಲೇ ಮೇವು ತಿನ್ನಿಸಿ ಹೊಟ್ಟೆ ಭರ್ತಿಮಾಡುವ ಮತ್ತೊಬ್ಬನ ಅವಸರ. ಅಳಿದುಳಿದ ಜಾಗವನ್ನು ತೊಳೆದು ಸ್ವಚ್ಚಗೊಳಿಸುವುದು ಉಳಿದೊಬ್ಬನಿಗೆ ಬಿಟ್ಟು ಕೆಲಸ. ಇದಕ್ಕೆ ಬೇಸರಿಸಿಕೊಂಡ ವರದಿಯಾಗಿಲ್ಲ. ಈ ವಿಷಯದಲ್ಲಿ "ಪಾಲಿಗೆ ಬಂದದ್ದೆ ಪಂಚ ಮೂತ್ರ".... ಪಾಪ ಅವುಗಳು ತಾನೇ  ಏನು ಮಾಡಿಯಾವು! ಅಷ್ಟು ಜನರ ಶೂಶ್ರುಷೆ ಒಟ್ಟಿಗೆ ನೋಡಿದ ಗಾಬರಿಗೆ ಆಗಾಗ ಮೂತ್ರ ಮಾಡುವುದು ಅವತ್ತಿನ ಸಾಮಾನ್ಯ. ಇದೆಲ್ಲ ಮುಗಿಯುವ ಹೊತ್ತಿಗೆ ಎಲ್ಲರೂ ದೌಡಾಯಿಸಿ ಊರಿನ ವೃತ್ತ(ಊರಿಗೆ ಇರುತ್ತಿದ್ದ ಒಂದೇ ಒಂದು Circle)ದಲ್ಲಿ ಅರವಿಕೊಂಡ ಅಂಗಡಿಗಳಿಗೆ ಮುತ್ತಿಗೆಹಾಕಿ ವ್ಯಾಪಾರಕ್ಕಿಳಿಯುವ ಜನರು, ಪರಸ್ಪರ ಏನೇನು ಅಲಂಕಾರಿಕ ವಸ್ತುಗಳನ್ನು ಕೊಂಡೆವು, ಆ ಅಂಗಡಿಯ ಬೆಲೆ ಈ ಅಂಗಡಿಯಲ್ಲಿನ ಬೆಲೆ ತಾಳೆ ಮಾಡಿ ತರುವಷ್ಟರಲ್ಲಿ ದೊಡ್ಡ ಡೀಲ್ ಮುಗಿದಂತೆ.

ಅಂಗಡಿಯವರೇನು ಸಾಮಾನ್ಯನೇ. ಬೆಲೆಗೆ ತಕ್ಕ ಸಭೂಬು ಉಚಿತವಾಗಿ ಕೊಡುತ್ತಿದ್ದ. ಇವರೆಲ್ಲರು ಅದೇ ಊರಿನವರಲ್ಲ ಅಕ್ಕ ಪಕ್ಕದ ಊರಿನಲ್ಲಿರುವ ವ್ಯಾಪಾರಸ್ಥರು. ಈ ವಾರ್ಷಿಕ ದಿನವನ್ನು ಮುಂಗಡವಾಗಿ ಗೊತ್ತುಪಡಿಸಿಕೊಂಡು ಎಲ್ಲ ಅಲಂಕಾರಿಕ ಸಾಮಾನುಗಳೊಂದಿಗೆ ಹಾಜರಾಗುತ್ತಿದ್ದರು. ರಸ್ತೆಯ ಬದಿಯಲ್ಲಿ, ಮನೆಯ ಜಗುಲಿಗಳಲ್ಲಿ ಮಾರಗಲ ಜಾಗಸಿಕ್ಕರೆ ಸಾಕು ಥೇಟ್ ಅಂಗಡಿಗಳಂತೆ ಮಾಡಿಬಿಡುತ್ತಿದ್ದರು. ಹಿಂಬದಿ ಗೋಡೆಗೆ ತರಾವರಿ ಬಣ್ಣದ ಮಾಲೆಗಳನ್ನು ನೇತುಹಾಕಿ ಅಂಗಡಿಗೊಂದು ಅಂದ ಕೊಡುತ್ತಿದ್ದರು. ತಾವು ಅರವಿಟ್ಟುಕೊಂಡ ಅಂಗಡಿಯ ಅಳತೆಗಾಗಿ ಆ ಬದಿ ಈ ಬದಿಯಲ್ಲಿ ದನಕರುಗಳಿಗೆ ಕಟ್ಟುವ ಮೂಗುದಾರಗಳು, ಕರಿಹಗ್ಗವನ್ನು ಸಿಕ್ಕಿಸಿಬಿಟ್ಟು, ತಮ್ಮ ಮುಂದೆ ವಿವಿಧ ಬಣ್ಣದ ಡಬ್ಬಗಳು, ಕುಂಚ,  ಬಲೂನು, ಚಿನಾರಿ ಕಾಗದ, ಮತ್ತು ಸೂರ್ಯಕಾಂತಿಯಂತೆ ಕಾಣುವ ಬಣ್ಣಬಣ್ಣ್ದ ವಿನ್ಯಾಸಗಳನ್ನು ಬಿಡಿಸಿಟ್ಟುಕೊಂಡು ಅಪ್ಪಂದಿ ರೊಂದಿಗೆ ಬರುವ ಮುದ್ದು ಮಕ್ಕಳನ್ನು ಆಕರ್ಷಿಸಲು ಸಣ್ಣ ಪುಟ್ಟ ಅಟಸಾಮಾನುಗಳನ್ನೂ ಇಟ್ಟುಕೊಂಡು ಗಲ್ಲಪೆಟ್ಟಿಯ ಮೇಲೆ ಕೂತುಬಿಟ್ಟರೆ ಭರ್ಜರಿ ವ್ಯಾಪಾರ ಶುರು. ಬಂದ ಅಷ್ಟು ಜನರ ಗುಂಪನ್ನು ಒಮ್ಮೆಲೇ ನಿಭಾಯಿಸಿ ಎಲ್ಲರಿಗೂ ಸಂಯಮ ದಿಂದ ಉತ್ತರಿಸಿ ವ್ಯವಹರಿಸುವ ಜಾಣ್ಮೆ ಈ ಶೆಟ್ಟರುಗಳಿಗೆ ಮಾತ್ರವೇ ಬಂದ ಜನ್ಮತ ಕಲೆ ಎಂದು ಭಾವಿಸುತ್ತೇನೆ.  ಇನ್ನೂ ಮುಂದಿನ ದೇನಿದ್ದರೂ ಆ ಊರಿನ ಸ್ಪರ್ಧಾ ಜಗತ್ತು.

ಊರಿಗೆ ಊರೇ ತಮ್ಮ ಮನೆಗಳ ಮುಂದೆ ದನಕರುಗಳ ಸಿಂಗಾರ  ಕಾರ್ಯದಲ್ಲಿ ನಿರುತರಾಗಿದ್ದರೆ, ಆಟವಾಡುವ ಮಕ್ಕಳ ಒಂದು ದಂಡು ಬೀದಿ ಬೀದಿ ಬೇಟಿಕೊಟ್ಟು ಯಾರ ಕೈಂಕರ್ಯ ಹೆಚ್ಚು ಎಂದು ಅಂದಾಜಿಸಿ ಬರುತ್ತಿದ್ದರು. ಕೆಲವರಂತೂ ಮನೆಯ ಒಳ ಹಿತ್ತಲಿನಲ್ಲೇ ಹಸುಗಳನ್ನು ಸಿಂಗರಿಸುತ್ತಿದ್ದರು. ಏಕೆಂದರೆ ಇಂತಹ ದಂಡಿನಲ್ಲಿ ಎದುರಾಳಿಯ ಮಕ್ಕಳೇನಾದರೂ ಬಂದು ನೋಡಿಬಿಟ್ಟಾರು ಎಂಬ ಭಯ. ಅದು ಸ್ಪರ್ಧೆಯ ಮೊದಲೇ ಗುಟ್ಟು ಬಿಟ್ಟುಕೊಡದ ಗಟ್ಟಿ ನಿರ್ಧಾರ. ಒಟ್ಟಾರೆ ಆ ಘಳಿಗೆಯವರೆಗೂ ಸಸ್ಪೆನ್ಸ್. ಅನಂತರದ ತೋರಿಕೆಯೇ ಬೇರೆ. ಅವರದು ಹೀಗಿತ್ತು, ಅವರದು ಹಾಗಿತ್ತು, ಇವರದ್ದು ಎಲ್ಲರಿಗಿಂತಲೂ ಜೋರಾಗಿತ್ತು ಎಂಬ ಊರವರ ಪ್ರಶಂಸೆಯನ್ನು ವಾರಗಟ್ಟಲೇ ಕೇಳುವ ಭಾಗ್ಯಕ್ಕೆ ತಾವು ಪಾತ್ರರಾಗಬೇಕು ಎಂಬುದೇ ಮೂಲ ಆಸೆ. ಸಾಕಷ್ಟು ಶಕ್ತಿಮೀರಿ ಇರುವ ಐಡಿಯಾನೆಲ್ಲ ಬಳಸಿ ಸಿದ್ದತೆಯಲ್ಲಿ ತೊಡಗುತ್ತಿದ್ದರು. ಸಮಯ ಮೀರಿತೆನೋ ಎಂಬ ಗಗಾಬರಿಗೆ ಕೊನೆಗಳಿಗೆಯಲ್ಲಿ ಕಟ್ಟುತ್ತಿದ್ದ ಬಲೂನು, ಪೇಪರ್ ಮಾಲೆಗಳು ಆಕಾರ ಕಳೆದುಕೊಂಡು ಆಭಾಸ ಎನಿಸಿದರೂ "ಎಲ್ಲರ ಮನೆ ದೋಸೆನೂ ತೂತೆ" ಎಂಬ ಗಾದೆ ಇದ್ದೇ ಇದೆಯಲ್ಲ.. 

ಸಂಜೆ ಆಗುತ್ತಿದ್ದಂತೆ ಸರಿಯಾಗಿ ೪ ಕ್ಕೆ ದೇವಾಲಯದ ಗಂಟೆ ಬಾರಿಸುವುದರೊಂದಿಗೆ ಹಬ್ಬ, ಜಾತ್ರೆ, ಸ್ಪರ್ಧೆ, ಸಾಹಸದ ನಾಡಿಮಿಡಿತ ಹೆಚ್ಚಾಗುವುದು. ಊರಿನ ಎಲ್ಲ ದನಕರುಗಳು ಬಂದು ರಸ್ತೆಯುದ್ದಕ್ಕೂ ಸಾಲಾಗಿ ನಿಂತು ಗುರುವಿನ ಬರುವಿಕೆಗೆ ಕಾಯುವ ಸರಧಿ. ರಸ್ತೆಯ ಆಜುಬಾಜಿನಲ್ಲಿ ನಿಲ್ಲುವ ಜಾನುವಾರುಗಳ ಸೌಂದರ್ಯದ ಲೆಕ್ಕಾಚಾರ ಆಗ ಶುರು. ತಮ್ಮ ಇಡೀ ದಿನದ ಶ್ರಮಾದಾನ ಇಲ್ಲಿ ಪ್ರದರ್ಶನಕ್ಕಿಡಬೇಕಾಗಿತ್ತು. ದನಗಳನ್ನು ಮಾತನಾಡಿಸುವ ಶಬ್ಧಗಳಿಂದ ನೆರೆದ ಜನರ ಗಮನವನ್ನು ತಮ್ಮ ಸಿಂಗಾರಗೊಂಡ ಎತ್ತುಗಳ ಮೇಲೆ ಸೆಳೆಯುವ ಮಂತ್ರ. ಬಲ್ಲವರಿಗೆ ಗೊತ್ತು ಅವರ ತಂತ್ರ. ನೆರೆದವರೆಲ್ಲರೂ ಒಂದೇ ಕಡೆ ನೋಡುತ್ತಿದ್ದಾರೆ ಎಂದಿಟ್ಟುಕೊಳ್ಳಿ, ಅಲ್ಲಾವುದೋ ಒಂದು ಬೆದರಿದ ಎತ್ತು ಗುಂಪನ್ನು ಚದುರಿಸಿ ಧೂಳೆಬ್ಬಿಸಿರುವುದು ಖಾತ್ರಿ. ಅದನ್ನು ಹಿಡಿದು ಹತೋಟಿಗೆ ತರುವಂತಹ ಸಾಹಸಮಯ ಪಟ್ಟುಗಳನ್ನು ಯುವಕರು ಮಾಡುತಿದ್ದರು. ಮಾಡಿ ಬೀಗುತ್ತಿದ್ದರು. ಆ ಹುಡುಗರು ಕಟ್ಟಿಕೊಳ್ಳುವ ಹೆಣೈಕಳು ಅತ್ತ ಸುಳಿದಾಡಿದರೋ ಆ ಪಟ್ಟುಗಳು ಇನಷ್ಟು ಖಚಿತ. ಇದು ಹಸು-ಎತ್ತುಗಳ ಕಥೆಯಾದರೆ, ಕುರಿಮೇಕೆಗಳನ್ನು ಕಟ್ಟಿಕೊಂಡವರ ಕಥೆನೆ ಬೇರೆ. ಕುರಿ ಮೇಕೆಗಳು ಒಂದುಕಡೆ ನಿಲ್ಲುವ ಜಾತಿಯವಲ್ಲ. ಗುರುಗಳು ಬಂದು ಹೋಗುವವರೆಗೆ ಅವುಗಳನ್ನು ನಿಭಾಯಿಸುವ ಸಾಹಸ ಸವಾಲಿನ ಕೆಲಸ. ತೀರ್ಥ ಪ್ರೋಕ್ಷಣೆ ಮುಗಿದ ಮೇಲೆ ವಾಪಾಸು ಮನೆ ಸೇರುವ ಗೊಂದಲದಲ್ಲಿ ಯಾರದೋ ಕುರಿ ಮತ್ಯಾರದೋ ಕುರಿ ಮಂದೆಯೊಂದಿಗೆ ಸೇರಿ  ತಪ್ಪಿಸಿಕೊಂಡಿರುತ್ತಿತ್ತು. ಅದನ್ನು ಹುಡುಕಿ ಎಳೆತರುವುದರೊಳಗೆ ಮೂರು ರಾಯರು ಸವೆದ ದಾರಿ, ದುಗುಡ ಎಲ್ಲ ಪರಿಚಯವಾಗಿಬಿಟ್ಟಿರುತ್ತದೆ. ಈ ಎಲ್ಲ ಸಂದಣೀಯ ಮದ್ಯೆ ಎಮ್ಮೆಗಳ ದಂಡು ಬಂದು ಊರಿನ ಪ್ರಮುಖ ವೃತ್ತದ ಸುತ್ತ ನಿಂತು ಅರಚುತಿದ್ದರೆ ಯಮಧರ್ಮನಿಗೆ ಕೇಳಿಸದೇ ಇದ್ದಿತೇ?. ಅವನ ಪ್ರತಿನಿಧಿಯಾಗಿ ಎಮ್ಮೆಕಾಯುವ ಹುಡುಗ ಎಮ್ಮೆಯ ಮೇಲೇ ಕೂತು ಅವುಗಳನ್ನು ಸಮಾದಾನ ಪಡಿಸುವ ವಿದಿಯೇ ಯಮಯಾತನೆ. ಆದರೂ ಬೇಸರಿಸದ ಅವನು ಎಮ್ಮೆಗಳಂತೆ ನಿಧಾನವಾಗಿ ಬಂದ ಕೆಲಸ ಮುಗಿಸಿಕೊಂಡು ಹೋಗುತ್ತಿದ್ದ. ಎಮ್ಮೆಗಳೆನು ಉಚಿತವಾಗಿ ಬಂದು ಹೋಗುವಂತವಲ್ಲ. ಇಡೀ ಊರನ್ನು ಗುಡಿಸಿ ಸಾರಿಸುವಷ್ಟು ಸಗಣಿ ಬಿಟ್ಟುಹೋಗುತ್ತಿದ್ದವು. ಈ ಹಬ್ಬಕ್ಕೆ ಅವುಗಳ ಬಳುವಳಿ ಅದು.

ಈ ಶೋ ನ ಕಡೆಗೆ ನಡೆಯುತ್ತಿದುದೆ 'ಹೋರಿ' ಆಟ. ಅದು ಒಂಟಿ. ಒಂಟಿ ಸಲಗವೇ ಸರಿ!. ಅದರ ನೋಟ ಭಯಂಕರ. ಹೋರಿಯನ್ನು ಎಡ ಮತ್ತು ಬಲ ಎರಡು ಕಡೆ ಮೂಗುದಾರಕ್ಕೆ ಕಟ್ಟಿ ದಾರ ಹಿಡಿದ ಇಬ್ಬರ ನಡುವೆ ಬರುತ್ತಿದ್ದರೆ, ನೋಡಲು ನಿಂತ ಜನ ಹೆದರಿ ಓಡಿಹೊಗುತ್ತಿದರು. ಕಟ್ಟುಮಸ್ತಾದ ಮೈಕಟ್ಟು, ಬಿರ್ಗಣ್ಣಿನ ನೋಟ , ಊರಿನ ಎಲ್ಲ ಜಾನುವಾರುಗಳು ಆಲಂಕಾರಗೊಂಡು ಹಬ್ಬ ಆಚರಿಸಿದರೆ, ಹೋರಿ ಮಾತ್ರ ಚೂಪಾದ ತನ್ನ ಒಂದು ಕೊಂಬಿನ ತುದಿಗೆ ಕೇವಲ ನಿಂಬೆಹಣ್ಣನ್ನು ಸಿಕ್ಕಿಸಿಕೊಂಡು ಠೀವಿಯಿಂದ ಬರುವುದೇ ಅದಕ್ಕೆ ಅಲಂಕಾರ ಮತ್ತು ಅದರ ಅಹಂಕಾರ. ಹೆಚ್ಚೆಂದರೆ ಕತ್ತಿಗೊಂದು ಹಾರ. ಕುಸ್ತಿ ಅಂಕಣದತ್ತ ಜಟ್ಟಿಯನ್ನು ಕರೆತರುವಂತೆ ಬಾಸವಾಗುತ್ತಿತ್ತು. ಇದಕ್ಕೆ ತದ್ವಿರುದ್ಧ ನೋಡಿ ಜೋಡಿ ಎತ್ತುಗಳ ಆಟ. ಹೆಥೆಚ್ಚವಾಗಿ ಖರ್ಚುಮಾಡಿ ಸಿಂಗಾರಗೊಂಡಿರುತ್ತವೆ. ಅವು ಮೈಬೆನ್ನ ಮೇಲೆ ಕುಪುಸ ಹೊದ್ದು, ಕಾಲ್ಗೆಜ್ಜೆಗಳನ್ನು ಕಟ್ಟಿಕೊಂಡು, ಕಟ್ಟಿಗೆ ಕೊರಳ್ಗೆಜ್ಜೆ, ಸರ ಹಾಕಿಕೊಂಡು ಯಕ್ಷಗಾನ ಆಡುವವರಂತೆ ಹೆಜ್ಜೆಗಳನ್ನಾಕುತಾ ಬರುವ ಪರಿಯೇ ಪರಮಾನಂದ. ಥೇಟ್ ಪ್ಯಾಶನ್ ಶೋ. ವ್ಯಾಪಾರೀ ಶೆಟ್ಟರ ಊಟ್ಟಕ್ಕೆ ಪಾಯಸ, ಪಲ್ಯ ಆದವರೆ ಈ ಎತ್ತುಗಳ ಧಣಿಗಳು. ಇಲ್ಲಿಗೆ ಆಟ ಮುಗಿಯಿತು ಅಂದುಕೊಳ್ಳುತ್ತೇವೆ, ಆದರೆ ಕ್ಲೈಮಾಕ್ಸ್ ಬೇರೆನೆ ಇದೆ. ಅದೇನೆಂದರೆ, ಎಲ್ಲವನ್ನು ನೋಡಿ ಉನ್ಮಾದಗೊಂಡ ಕೆಲವು ಕುಡುಕ ಮಹಾಶಯರು ಸಿಕ್ಕ ಬೀದಿ ನಾಯಿಯೋ, ಸಾಕಿದ ಬೆಕ್ಕಿಗೋ ಅಲ್ಲಿ ಇಲ್ಲಿ ಉದುರಿ ಬಿದಿದ್ದ ಬಲೂನು, ಪೇಪರ್ ಅನ್ನು ಕಟ್ಟಿ ಗುರುಗಳ ಬಳಿ ಎಳೆದುತಂದು ಇವಕ್ಕೂ ನೀವು ತೀರ್ಥ ಪ್ರೋಕ್ಷಿಸಬೇಕೆಂದು ಆಗ್ರಹಿಸಿ, ನಾಯಿ ಜೊತೆ ತಾನು ಮಂಡಿಯೂರಿ ಆಶೀರ್ವಾದ ಪಡೆದು ಖುಷಿಪಡುತ್ತಿದ್ದರು. ಅಲ್ಲಿಗೆ ಎಲ್ಲವೂ ಶುಭಂ.!

-ಸಂತೋಷ್ ಇಗ್ನೇಷಿಯಸ್ 

ಕನ್ನಡ ಚಿತ್ರರಂಗದ ಹೊಸ ಸಂಚಲನ - ಅಂದರ್ ಬಾಹರ್


ಪ್ರಕಟಣೆ ಆದ ದಿನದಿಂದಲೂ ಅಭಿಮಾನಿಗಳನ್ನು ಆಕರ್ಷಿಸುತ್ತಲೇ ಬಂದಿರುವ ಈ ಚಿತ್ರ  ಇನ್ನೇನು ಬಿಡುಗಡೆಯ ಹೊಸ್ತಿಲಲ್ಲಿ ನಿಂತಿದೆ. ಆಂದರ್ ಬಾಹರ್ ಎಂಬ ನಮ್ಮದಲ್ಲದ ಶೀರ್ಷಿಕೆಯ ಬಗ್ಗೆ ಮೊದಮೊದಲು ಇದ್ದ ಅಸಮಾಧಾನವೆಲ್ಲಾ, ಪೂರ್ವಭಾವಿ ಸ್ಟಿಲ್ಸ್ ಗಳಿಂದಲೇ ಮೆಲ್ಲಗೆ ಕರಗತೊಡಗಿದಂತೆ, ಆ ಚಿತ್ರಗಳಲ್ಲಿ ಶಿವಣ್ಣ ಕಾಣಿಸಿಕೊಂಡ ಬಗೆ ಶಿವಣ್ಣನ ಅಭಿಮಾನಿಗಳಿಗೆ ಮಾತ್ರವಲ್ಲದೆ ಎಲ್ಲ ವರ್ಗದವರಿಗೂ ಮೆಚ್ಚುಗೆ ವ್ಯಕ್ತವಾಯಿತು. ಅಲ್ಲಿಂದ ಪ್ರಾರಂಭವಾದ ಚಿತ್ರದ ಬಗೆಗಿನ ಕ್ರೇಜ್ ಇದೀಗ ಹೊಸ ಭರವಸೆಯೊಂದಿಗೆ ಒಂದು ರೀತಿಯ ಸಂಚಲನವಾಗಿ ಮಾರ್ಪಟ್ಟಿದೆ. 

 ಈ ಭರವಸೆ, ಸಂಚಲನ, ನಿರೀಕ್ಷೆಗೆ ತನ್ನದೇ ಆದ ಕಾರಣಗಳಿವೆ. ಎಲ್ಲಕ್ಕಿಂತ ಮೊದಲಿಗೆ ಇದು ಅಪ್ಪಟ ಶಿವಣ್ಣನ ಅಭಿಮಾನಿಗಳಿಂದ ನಿರ್ಮಾಣಗೊಳ್ಳುತ್ತಿರುವ ಸಿನಿಮಾ.ರಾಜ್ ಕುಟುಂಬದ ಮೇಲಿನ ಅಭಿಮಾನವನ್ನೇ ಉಸಿರಾಗಿಸಿಕೊಂಡಿರುವ ಈ  ನಿರ್ಮಾಪಕರುಗಳಿಗೆ ಒಬ್ಬ ಸಾಮಾನ್ಯ ಅಭಿಮಾನಿಯ ಆಸೆ, ನಿರಾಸೆ, ನಿರೀಕ್ಷೆ, ತವಕ, ಕಾತುರ, ಸಂಭ್ರಮ, ದುಗುಡ ಎಲ್ಲವೂ ಅಂಗೈಯಷ್ಟೇ ಪರಿಚಿತ. ಈ ಚಿತ್ರಕ್ಕೆ ನಿರ್ಮಾಪಕರುಗಳಾದರೂ ಹಿಂದಿನ ಚಿತ್ರದವರೆಗೂ ಅಭಿಮಾನಿಗಳಾಗಿ ಎಲ್ಲವನ್ನೂ ಅನುಭವಿಸಿರುವವರೇ. ಅದರಲ್ಲೂ ಡಾ.ರಾಜ್ ಚಿತ್ರಗಳ, ಆ ಸುವರ್ಣ ಯುಗವನ್ನು ಸವಿದವರೇ, ಅದೇ ರೀತಿಯ ಒಂದು ಉತ್ತಮ ಸಧಭಿರುಚಿ ಚಿತ್ರದ ಕನಸೂಂದಿಗೆ ಚಿತ್ರ ನಿರ್ಮಿಸುತ್ತಿರುವ ರಜನೀಶ್, ಪ್ರಸಾದ್ ರಾವ್, ಅಂಬರೀಶ್, ಭಾಸ್ಕರ್, ಶ್ರೀನಿವಾಸ್, ಅವಿನಾಶ್ ಅವರನ್ನು ಒಳಗೊಂಡ ಸಹೃದಯ ನಿರ್ಮಾಪಕ ಬಳಗ, ಒಂದು ಉತ್ತಮವಾದ ಚಿತ್ರವನ್ನೇ ನೀಡುತ್ತದೆ ಎಂಬ ಸಹಜ ನಿರೀಕ್ಷೆ  ಕನ್ನಡ ಪ್ರೇಕ್ಷಕರದು.

ಇನ್ನೂ ದಿನದಿಂದ  ದಿನಕ್ಕೆ ಹೊಸ ಅಚ್ಚರಿಗಳನ್ನೇ ನೀಡುತ್ತಲೇ ಬಂದ ಚಿತ್ರ ತಂಡ, ಅಭಿಮಾನಿಗಳಿಗೆ ಮೊದಲ ಸಿಹಿ ನೀಡಿದ್ದು ಚಿತ್ರದ ತಾರಬಳಗದಿಂದ. ಮಿಲನದಂಥ ಒಂದು ಚಿತ್ರದಿಂದಲೇ ನಮ್ಮವರೇ ಆಗಿ ಹೋದ ಪಾರ್ವತಿ ಮೆನೆನ್ ನ ಆಯ್ಕೆ ಚಿತ್ರಕ್ಕೆ ಒಂದು ಕೌಟುಂಬಿಕ ಚೌಕ್ಕಟ್ಟನ್ನು ನೀಡಿದೆ. ಇನ್ನೂ ಜೋಗಿಯಲ್ಲಿ ಮೋಡಿ ಮಾಡಿದ  ಶಿವಣ್ಣ ಹಾಗೂ ಅರುಂಧತಿ ನಾಗ್ ಜೋಡಿ ಮತ್ತೆ ತೆರೆಯ ಮೇಲೆ ಜೊತೆಯಾಗಿ ಬರುತ್ತಿರುವುದು ಚಿತ್ರಕ್ಕೆ ಮಾಂತ್ರಿಕ ಸ್ಪರ್ಷವನ್ನು ನೀಡಿದೆ. ಮುಂದೆ ಮತ್ತೊಂದು ಸಿಹಿಯಾದ ಅಚ್ಚರಿ ಎಂಬಂತೆ ಚಿತ್ರದ ಸಂಗೀತದ ಹೊಣೆ ಪ್ರಖ್ಯಾತ ಗಾಯಕ ವಿಜಯ್ ಪ್ರಕಾಶ್ ಹೆಗಲಿಗೆ ಬಿದ್ದಿದ್ದು. ಚೊಚ್ಚಲ ಅವಕಾಶವನ್ನು ಮೈಸೂರಿನ ಮಧುರ ಕಂಠದ ಈ ಗಾಯಕ ಭರ್ಜರಿಯಾಗೇ ಸದುಪಯೋಗ ಪಡಿಸಿಕೊಂಡಿದ್ದಾರೆ ಎಂಬ ಮೆಚ್ಚುಗೆಯ ಮಾತುಗಳು ಈಗಾಗಲೇ ಕೇಳಿ ಬರುತ್ತಿವೆ. ಅಂತೆಯೇ ಶೇಖರ್ ಚಂದ್ರ, ಎಂ.ಸ್ ರಮೇಶ್, ಇಮ್ರಾನ್ ಮುಂತಾದವರ ದಂಡೇ ಇದೆ. ಅಲ್ಲಿಗೆ ತೆರೆಯ ಅಂದರ್ ಬಾಹರ್ ಎರಡೂ ಪ್ರತಿಭಾನ್ವಿತ ತಂತ್ರಜ್ಞರಿಂದ ಹೌಸ್ ಫುಲ್ ಆಗಿದೆ. 

ಇನ್ನೂ ಇವೆಲ್ಲಕ್ಕೂ ಕಳಶವಿಟ್ಟಂತೆ ಕಾಣುತ್ತಿರುವುದು ನವ ನಿರ್ದೇಶಕ ಫನೀಶ್ ಎಸ್ ರವರ ಕೈ ಚಳಕ.ಮೊದಲ ಸ್ಟಿಲ್ಸ್ ನಿಂದ ಹಿಡಿದು ಇಲ್ಲಿಯವರೆಗೂ ಅವರು ತೋರುತ್ತಿರುವ, ಆತ್ಮ ವಿಶ್ವಾಸ, ಶ್ರದ್ಧೆ, ಚಿತ್ರ ಪ್ರೀತಿ ಹಾಗೂ ಕಲಾತ್ಮಕತೆ ಎಲ್ಲರ ಮೆಚ್ಚುಗೆಗೊಳಿಸಿರುವುದು ಮಾತ್ರವಲ್ಲದೆ ಚಿತ್ರದ ಬಗ್ಗೆ ಅಪಾರವಾದ ನಿರೀಕ್ಷೆಯನ್ನು ಮೂಡಿಸಿದೆ. ಇಲ್ಲಿಯವರೆಗಿನ ಚಿತ್ರದ ಸ್ಟಿಲ್ಸ್ ಗಳನ್ನು ನೋಡುತ್ತಿದ್ದರೆ, ಚಿತ್ರ ಎಲ್ಲಾ ರೀತಿಯಲ್ಲೂ ಪ್ರೇಕ್ಷಕರಿಗೆ ಇಷ್ಟವಾಗುವ, ಹತ್ತಿರವಾಗುವ ಶುಭ ಸೂಚನೆಗಳು ಕಾಣುತ್ತಿವೆ.

ಇನ್ನೂ ಶಿವಣ್ಣನ ಬಗ್ಗೆ, ಈ ವಯಸ್ಸಿನಲ್ಲೂ ಬತ್ತದ ಅವರ ಉತ್ಸಾಹದ ಬಗ್ಗೆ ಹೇಳುವಿದೇನಿದೆ. ಚಿತ್ರದ ಪೋಸ್ಟರ್ ಒಂದರಲ್ಲಿ ಕೈಯಲ್ಲಿ ಕಾರ್ಡನ್ನು ಹಿಡಿದಿರುವ ಭಂಗಿಯೊಂದೇ ಸಾಕು...simply superb.

ಈ ವಾರ ಆಡಿಯೋ ಬಿಡುಗಡೆ ಇದೆ...ಅಭಿಮಾನಿಗಳ ಹೃದಯದಲ್ಲಿ ಈಗಾಗಲೇ ಸಂತಸದ ತಕಧಿಮಿ......


- ಪ್ರಶಾಂತ್