Monday, 20 August 2018

ಕೀ ಕೀ ಚ್ಯಾಲೆಂಜ್ - ಭಾಗ 2

ನಮ್ಮದೇ ಪ್ರೇರಣೆಗಳು : ಇನ್ನೂ ನಮ್ಮ ಚಿತ್ರಗಳಲ್ಲೂ ಈ ಓಡುತ್ತಿರುವ ಕಾರ್, ರೈಲಿನ ಹಿಂದೆ ಓಡುವ ಅದೆಷ್ಟೋ ದೃಶ್ಯಗಳಿರಲಿಲ್ಲವೇ. ತಮಿಳಿನ ’ಮೂಂಡ್ರಾಮ್ ಪಿರೈ'’ ಚಿತ್ರದ ಕೊನೆಯಲ್ಲಿ ರೈಲಿನಲ್ಲಿ ಹೊರಟು ನಿಂತ ತನ್ನ ಪ್ರೇಯಸಿಗೆ ತನ್ನ ಬಗ್ಗೆ ನೆನಪಿಸಲು ಕಮಲ್ ಹಾಸನ್ ಮಾಡುವ ನೃತ್ಯ, ಕೋತಿ ಚೇಷ್ಟೆಗಳು ಈ ಕಿಕಿ ಚ್ಯಾಲೆಂಜಿನ ಕೆಲವು ವಿಡಿಯೋಗಳನ್ನು ನೋಡಿದಾಗ ನೆನಪಿಗೆ ಬರುತ್ತದೆ. 

ಅಂತೆಯೇ ’ದಿಲ್‍ವಾಲೆ ದುಲನಿಯಾ ಲೇ ಜಾಯಿಂಗೆ’ ಚಿತ್ರದ ಕೊನೆಯಲ್ಲಿ ಸಹಾ ಚಲಿಸುತ್ತಿರುವ ರೈಲಿನ ದೃಶ್ಯವಿದೆ. ಅಲ್ಲಿ ನಾಯಕಿ ಓಡಿ ಬರುವ ದೃಶ್ಯ ಚಿತ್ರ ರಸಿಕರ ಅದರಲ್ಲೂ ಕಾಜೋಲ್ ಅಭಿಮಾನಿಗಳ ಪಾಲಿಗೆ ನೃತ್ಯದಂತೆಯೇ ಇತ್ತು. ಸ್ಟೇಷನ್ ಮಾಸ್ಟರ್  ರೈಲಿಗೆ ಗ್ರೀನ್ ಸಿಗ್ನಲ್ ಕೊಟ್ಟ ಮೇಲೆ, ತಂದೆ ತನ್ನ ಮಗಳ ಪ್ರೀತಿಗೆ  ಗೀನ್ ಸಿಗ್ನಲ್ ಕೊಡುತ್ತಾನೆ. ನಾಯಕ ಚಲಿಸುತ್ತಿರುವ ರೈಲಿನ ಹಿಂದೆ ಸ್ಲೋಮೋಶನ್‍ನಲ್ಲಿ  ಓಡಿ ಬರುವ ನಾಯಕಿಯನ್ನು ನಾಯಕ ಎಳೆದು (ಬರಸೆಳೆದು) ರೈಲಿಗೆ ಹಾಕಿಕೊಳ್ಳುತ್ತಾನೆ. ಈ ದೃಶ್ಯಕ್ಕೆ ಈಗಿನ ಈ ಕೀಕಿ ಹಾಡು ಸರಿಯಾಗಿ ಹೊಂದಿಕೊಳ್ಳುತ್ತಿತು. ಎಲ್ಲದಕ್ಕೂ ನಿಂದಕರಿರುತ್ತಾರೆ ಎಂಬಂತೆ, ಅದು ಮದುವೆಯ ಮುಂಚಿನ ಮಾತು, ಮದುವೆ ಆದ ಮೇಲೆ ನಾಯಕ ಅದೇ ರೀತಿ ಹೆಂಡತಿಯನ್ನು ರೈಲಿನ ಒಳಗೆ ಎಳೆದುಕೊಳ್ಳುತ್ತಿದ್ದನೇ? ಎಂಬ ಕುಹಕದ ಪ್ರಶ್ನೆಯನ್ನು ಕೆಲವರು ಎತ್ತುತ್ತಾರೆ. ಮದುವೆ ಆಗದಿದ್ದವರು ಅನುಭವದ ಕೊರತೆಯಿಂದ ಇದಕ್ಕೆ ಉತ್ತರಿಸುವುದಿಲ್ಲ. ಮದುವೆಯಾದವರು ಅನುಭವವಿರುವುದರಿಂದ ಬೆದರಿ ಉತ್ತರಿಸುವುದಿಲ್ಲ. 

ವಿಷಯಾಂತರ ಬೇಡ. ಇತ್ತೀಚಿನ ’ಕಡ್ಡಿಪುಡಿ’ ಎಂಬ ಕನ್ನಡ ಚಿತ್ರದಲ್ಲಿ ಸಹಾ ಕಿಕೀ ಚಾಲೆಂಜನ್ನು ನೆನಪಿಸುವ ದೃಶ್ಯವೊಂದಿದೆ. ಚಿತ್ರದ ನಾಯಕಿ ಆಟೋದಲ್ಲಿ ಮನೆಗೆ ಹೋಗುತ್ತಿದ್ದಾಳೆ. ಜೊತೆಗೆ ಬಂದ ಗಂಡ ಎಲ್ಲಿ ಹೋದ ಎಂದು ಯೋಚಿಸುತ್ತಾ ಆಟೋದಲ್ಲಿ ಹೋಗುತ್ತಿರಬೇಕಾದರೆ, ಗಂಡ ಕೈಯಲ್ಲಿ ಮಚ್ಚು ಹಿಡಿದುಕೊಂಡು ಅದೇ ಆಟೋವಿನ ಪಕ್ಕ ರೌಡಿಗಳನ್ನು ಅಟ್ಟಿಸಿಕೊಂಡು ಹೋಗುತ್ತಿದ್ದಾನೆ. ಒಂದು ಹಂತದಲ್ಲಿ ಅಟೊವನ್ನು ಹಿಂದಿಕ್ಕಿ ನಾಯಕ ಓಡುತ್ತಾನೆ. ನಾಯಕಿಯ ಬಾಯಿಂದ ’ರೀರೀ’ ಎಂಬ ಮಾತುಗಳು ಬರುತ್ತಿದ್ದರೂ ಅದು ಕೇಳುವುದಿಲ್ಲ. ಈ ದೃಶ್ಯವನ್ನು ನಿರ್ದೇಶಕ ಸೂರಿ ಬಹಳ ಕಲಾತ್ಮಕವಾಗಿ ಚಿತ್ರಿಸಿದ್ದಾರೆ. ಅಂತೆಯೇ ಸುಂದರವಾದ ಸಂದೇಶವನ್ನು ಸಹಾ ನೀಡಿದ್ದಾರೆ. ಬೆಂಗಳೂರಿನಂತ ಟ್ರಾಫಿಕ್ಕಿರುವ ಊರುಗಳಲ್ಲಿ ಅವರಸದ ಕೆಲಸವಿರುವಾಗ ವಾಹನಗಳಿಗಿಂತ ಓಡಿ, ನಡೆದುಕೊಂಡು ಹೋಗುವುದೇ ಲೇಸು ಎಂಬ ಸಂದೇಶ ಅಲ್ಲಿದೆ.  

ಕಿಕೀ ಹಾಗೂ ಬೆಂಗಳೂರು : ಕಿಕೀ ಚ್ಯಾಲಿಂಜಿನಲ್ಲಿ ಸಹಾ ಬೆಂಗಳೂರಿಗರಿಗೆ ಅದೇ ರೀತಿಯ ಸಂದೇಶಗಳಿವೆ. ಟ್ರಾಫಿಕ್‍ನಲ್ಲಿ ಸಿಕ್ಕಿಕೊಂಡಾಗ ಅಥವಾ ಚಲನೆ ನಿಧಾನಗತಿಯಾದಾಗ ನಿಮ್ಮ ಮನಸ್ಸು ಬೇಸರಗೊಳ್ಳದಿರಲಿ. ದೈಹಿಕವಾಗಲ್ಲದಿದ್ದರೂ ನಿಮ್ಮ ಮಾನಸಿಕ ಸ್ಥಿತಿಯು ಆ ಕಾರಿನ ಸೀಮಿತ ಗಡಿಯನ್ನು ಮೀರಿ ಹಾಡಿ ಕುಣಿಯಲಿ, ಜಗತ್ತನ್ನು ಒಳಗಣ್ಣಿನಿಂದ ನೋಡಲಿ ಎಂಬುದು ಸಂದೇಶವಿರಬಹುದು. ಅಂತೆಯೇ ಸಿಗ್ನಲ್ಲು, ಜ್ಯಾಮಿನಲ್ಲಿ ಸಿಕ್ಕ ಕಾರುಗಳು ಮುಂದಕ್ಕೆ ಹೋಗವ ಸಣ್ಣ ಅವಕಾಶ ಸಿಕ್ಕರೂ ಕಾರಿನಲ್ಲಿರುವವರ ಆನಂದದ ಪ್ರತಿಬಿಂಬವನ್ನು ಈ ಚ್ಯಾಲಿಂಜಿನಲ್ಲಿ ಕಾಣಬಹುದು. ಮನಸ್ಸು ಸದಾ ಚಲನಾಸ್ಥಿಯಲ್ಲಿ, ಕ್ರಿಯಾಶೀಲವಾಗಿರಲಿ ಎಂಬ ಸಂದೇಶವೂ ಇದೆ. ಅದೇ ರೀತಿ ಎಷ್ಟೋ ಜನರು ಕಾರಿನಿಂದ ಇಳಿದು ಹೋಗುವಾಗ ಕಾರಿನಲ್ಲೆ ಕೀ ಮರೆತು ಬಿಟ್ಟು ಹೋಗುವ ಅಭ್ಯಾಸವೂ ಇದೆ. ಇಂಥವರಿಕೆ ’ಕಿಕೀ’ ಹಾಡು ಅಲಾರಂ ಇದ್ದ ಹಾಗೇ.

ಅದೇ ರೀತಿ ಯಾವುದೋ ಊರಿನಲ್ಲಿ ಗದ್ದೆಯಲ್ಲಿ ಊಳುತ್ತಿರುವ ರೈತ ನೇಗಿಲನ್ನು ಬಿಟ್ಟು ಈ ಹಾಡಿಗೆ ಡ್ಯಾನ್ಸ್ ಆಡಿರುವ ವಿಡಿಯೋ ಜನಪ್ರಿಯಾಗಿದೆ. ಎತ್ತುಗಳು ಅದೇ ರೀತಿ ಬ್ರೇಕ್ ತೆಗೆದುಕೊಂಡಿದ್ದರೆ ಏನಾಗುತ್ತಿತ್ತು ಕಲ್ಪಿಸಿಕೊಳ್ಳಬಹುದು. ಈ ಆವಾಂತರಗಳಿಂದ ರೋಸಿ ಹೋದ ಕೇರಳದ ಪೋಲಿಸ್ ಇಲಾಖೆ ಒಂದು ಉತ್ತಮ ವಿಡಿಯೋ ಬಿಡುಗಡೆ ಮಾಡಿದೆ. ಅದರಲ್ಲಿ ಯುವಕನೊಬ್ಬ ಚಲಿಸುತ್ತಿರುವ ತನ್ನ ಕಾರನ್ನು ಬಿಟ್ಟು ನೃತ್ಯ ಮಾಡಿ ಮರಳಿ ಬಂದಾಗ ತೆರೆದುಕೊಳ್ಳುವುದು ಪೋಲಿಸಿನ ಜೀಪ್ ಬಾಗಿಲು.

ಬದುಕೇ ಒಂದು ದೊಡ್ಡ ಚ್ಯಾಲೆಂಜಾಗಿರುವ ಕೋಟ್ಯಾಂತರ ಜನರು ನಮ್ಮಲ್ಲಿದ್ದಾರೆ. ಬೆಳಿಗ್ಗೆ ಎದ್ದು ಗಂಡ ಮಕ್ಕಳು ಶಾಲೆಗೆ, ಕಛೇರಿಗೆ ಹೋಗುವ ಮುನ್ನವೇ ಎಲ್ಲವನ್ನೂ ಮಾಡಿಡುವ ಚಾಲೆಂಗ್ ಹೆಣ್ಣು ಮಕ್ಕಳದ್ದಾದರೆ, ಹಳ್ಳ ಕೊಳ್ಳದ ರಸ್ತೆಗಳನ್ನು, ಸಪ್ತಸಾಗರದಂತೆ ಕಾಣುವ ಸಿಗ್ನಲ್ಲುಗಳನ್ನು ದಾಟಿ ಗತ್ತಿನಲ್ಲಿ ಆಫೀಸ್ ಸೇರಬೇಕಾದ ಚ್ಯಾಲೆಂಜ್ ಪುರುಷರದ್ದು. ಲಿಪ್ಟ್ ಇದ್ದರೂ ಅದು ಟೀಚರ್ಸ್‍ಗೆ ಮಾತ್ರ ಎಂಬ ನೋವಿನಲ್ಲೇ ೪ ಮಹಡಿಗಳನ್ನು ಹೆಣ ಭಾರದ ಸ್ಕೂಲ್ ಬ್ಯಾಗ್‍ನೊಂದಿಗೆ ಹತ್ತುವ ಶಾಲಾ ಮಕ್ಕಳು, ಮನೆ ಸುರಕ್ಷಿತವಾಗಿ ಸೇರಿದರೆ ಸಾಕು ಎಂದುಕೊಳ್ಳುತ್ತಲೇ ಹೊರಡುವ ನೈಟ್ ಶಿಫ್ಟಿನ ಹೆಣ್ಣು ಮಕ್ಕಳಿಗೆಲ್ಲಾ ಪ್ರತಿ ದಿನವೂ ಒಂದು ದೊಡ್ಡ ಚ್ಯಾಲೆಂಜೇ. ಅಂತಹುದರಲ್ಲಿ ಕೀಕಿ ರೀತಿಯ ಚ್ಯಾಲಂಜುಗಳು ಒಂದಷ್ಟು ಮನಸ್ಸಿಗೆ ಉಲ್ಲಾಸ ನೀಡುವಂತಾದರೆ ಅದು ಸ್ವಾಗತಾರ್ಹವೇ, ಮತ್ತೊಬ್ಬರಿಗೆ, ಸಮಾಜಕ್ಕೆ ಕಂಟಕವಾದರೆ ಅದೇ ಒಂದು ಚ್ಯಾಲೆಂಜ್‍ಆಗುತ್ತದೆಯಷ್ಟೇ. 

ಕಿಕೀ ಚ್ಯಾಲೆಂಜ್ - ಭಾಗ 1

ಇದು  ವಾಟ್ಸಾಪ್ ಮತ್ತು ಇಂಟರ್ನೆಟ್‍ಗಳಲ್ಲಿನ ಚ್ಯಾಲೆಂಜ್‍ಗಳ ಕಾಲ. ಚ್ಯಾಲೆಂಜ್ ಎಂಬುದಕ್ಕೆ ಕನ್ನಡದಲ್ಲಿ ಸವಾಲು ಎಂಬುದು ಸಮನಾರ್ಥಕ ಪದ. ಕನ್ನಡ ರಾಜ್ಯೋತ್ಸವಕ್ಕೆ ಇನ್ನು ಮೂರು ತಿಂಗಳ ಕಾಲ ಇರುವುದರಿಂದ ಇಲ್ಲಿ ’ಸವಾಲು’ ಎನ್ನುವ ಬದಲಾಗಿ ಚ್ಯಾಲೆಂಜ್ ಎಂಬುದನ್ನೇ ಬಳಸುತ್ತೇನೆ. 

ಮೊದಲೇ ಹೇಳಿದಂತೆ ವಾಟ್ಸಾಪ್ ಯುಟ್ಯೂಬ್‍ಗಳಲ್ಲಿ  ಅಗ್ಗಿಂದಾಗೆ ಕೆಲವೊಂದು ಚ್ಯಾಲೆಂಜ್ ವಿಡಿಯೋಗಳು ಹರಿದಾಡುತ್ತಿರುತ್ತವೆ. ಇತ್ತೀಚಿನದು ಕಿಕೀ ಚ್ಯಾಲೆಂಜ್. ಚಲಿಸುತ್ತಿರುವ ವಾಹನ, ಕಾರೊಂದರಿಂದ ಇಳಿದು, ಒಂದು ಹಾಡಿಗೆ ಡ್ಯಾನ್ಸ್ ಮಾಡುತ್ತಾ ಆ ಕಾರಿನ ಜೊತೆ ಜೊತೆಗೆ ಮುಂದೆ ಹೋಗುವುದು, ಅದನ್ನು ವಿಡಿಯೋ ರೆಕಾರ್ಡ್ ಮಾಡಿಕೊಳ್ಳುವುದು ಹಾಗೂ ಅದನ್ನು ಇಂಟರ್ನೆಟ್‍ನಲ್ಲಿ ಹಾಕಿಕೊಳ್ಳುವುದು ಇದರ ಉದ್ದೇಶ. ’ಕೋತಿ ತಾನು ಕೆಡುವುದಲ್ಲದೆ ವನವನ್ನು ಕೆಡಿಸಿತು’ ಎಂಬಂತೆ ’ನೀವೂ ಇದನ್ನು ಮಾಡಿ’ ಎಂದು ಚ್ಯಾಲೆಂಜ್ ಹಾಕುವುದು ಮತ್ತೊಂದು ಭಾಗ. 

ಐಸ್ ಚ್ಯಾಲೆಂಜ್  : ಒಂದೆರೆಡು ವರ್ಷಗಳ ಹಿಂದೆ ಇದೇ ರೀತಿಯ ಮತ್ತೊಂದು ಚ್ಯಾಲೆಂಜ್ ವೈರಲ್ ಆಗಿತ್ತು. ಅದರಲ್ಲಿ ಒಬ್ಬ ವ್ಯಕ್ತಿಯ ಮೇಲೆ ಮಂಜು ಗಡ್ಡೆ ಅಥವಾ ಅತಿ ತಣ್ಣಗಿರುವ ನೀರನ್ನು ಅವನಿಗೆ ಗೊತ್ತಿಲ್ಲದೆಯೋ ಗೊತ್ತಿದ್ದೋ ಸುರಿಯುವುದು. ಅದಕ್ಕೆ ಆ ವ್ಯಕ್ತಿ ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾನೆ ಹಾಗೂ ಆ ತಣ್ಣನೆ ನೀರನ್ನು ಹೇಗೆ ತಡೆದುಕೊಳ್ಳುತ್ತಾನೆ ಎಂಬುದು ಚ್ಯಾಲೆಂಜನ ಒಂದು ಭಾಗ. ಇದು ಒಂದಷ್ಟು ದಿನ ಬೇರೆ ದೇಶಗಳಲ್ಲಿ ಜನಪ್ರಿಯವೇನೋ ಅಯಿತು. ಅದರೆ ಭಾರತದಲ್ಲಿ ಅದಕ್ಕೆ ಅಷ್ಟೇನು ಉತ್ತಮ ಪ್ರತಿಕ್ರಿಯೆಗಳು ಸಿಕ್ಕಲಿಲ್ಲ. ಏಕೆಂದರೆ ಇಲ್ಲಿ ಒಬ್ಬರ ಆಸೆಗಳ ಮೇಲೆ ಮತ್ತೊಬ್ಬರು ತಣ್ಣೀರೆರೆಚುವುದು ಸರ್ವೇಸಾಮಾನ್ಯವಾದ್ದರಿಂದ ಇದು ಇಲ್ಲಿ ಚಾಲೆಂಜ್ ಅಥವಾ ಸವಾಲು ಎನಿಸಲಿಲ್ಲ. 

ತಾನೂ ಕೆಲಸ ಮಾಡಿ ದುಡಿಯುತ್ತೇನೆ ಎಂದಾಗ ಗಂಡ ಹೆಂಡತಿಗೆ ಎರಚುವ ತಣ್ಣೀರು, ಗೆಳೆಯರ ಜೊತೆ ಟ್ರಿಪ್ಪಿಗೆ ಹೋಗಿ ಬರುತ್ತೇನೆ ಎನ್ನುವ ಗಂಡನ ಆಸೆಯ ಮೇಲೆ ಹೆಂಡತಿ ಎರಚುವ ಅತಿ ತಣ್ಣನೆಯ ನೀರು, ಸಂಬಳ ಜಾಸ್ತಿ ಮಾಡಿ ಎಂದಾಗ ಬಾಸ್ ಇಡುವ ಐಸ್, ಸಾಫ್ಟ್ ‍ವೇರ್ ಬಿಟ್ಟು ಬೇರೆನಾದರೂ ಮಾಡುತ್ತೇನೆ ಎಂದು ಗೋಗರೆದರೂ ಬಿಡದೆ ಮಕ್ಕಳ ಆಸೆಗೆ ಮಿನಿರಲ್ ತಣ್ಣೀರೆರೆಚುವ ತಂದೆ ತಾಯಿಗಳಿರುವ ನಮ್ಮಲ್ಲಿ ಅದು ಅಷ್ಟೇನು ಜನಪ್ರಿಯವಾಗದ್ದಿದ್ದದು ಸಹಜವೇ.

ಫಿಟ್‍ನೆಸ್ ಚ್ಯಾಲೆಂಜ್ : ಹಾಗೆಯೇ ಇತ್ತೀಚಿನ ಎರಡು ಮೂರು ತಿಂಗಳಲ್ಲಿ ಬಂದ ಮತ್ತೊಂದು ಚ್ಯಾಲೆಂಜ್ ಎಂದರೆ ಫಿಟ್‍ನೆಸ್ ಚ್ಯಾಲೆಂಜ್.  ತಾವು ಮಾಡುತ್ತಿರುವ ದೈಹಿಕ ಕಸರತ್ತಿನ ಅಥವಾ ಎಕ್ಸಸೈಸ್‍ನ ಒಂದು ವೀಡಿಯೋ ತುಣುಕನ್ನು ಅಪ್ಲೋಡ್ ಮಾಡಿ ತಮ್ಮದೇ ಆದ ಗೆಳೆಯರಿಗೆ  ನೀವೂ ಮಾಡಿ  ಎಂಬುದು ಇದರ ಚ್ಯಾಲೆಂಜ್. ಇದು ಒಂದಷ್ಟು ದಿನ ಜನಪ್ರಿಯವಾಯಿತು. ಅದರಲ್ಲೂ ನಟರು. ಸೆಲೆಬ್ರಿಟಿಗಳು ಇದರಲ್ಲಿ ಹೆಚ್ಚಾಗಿ ಭಾಗಿಯಾದರು. ಒಂದಷ್ಟು ಜನರು ವಿಡಿಯೋಗಾಗಿ ಪಾಪ ಶ್ರಮಪಟ್ಟು ಅಪ್ಲೋಡ್ ಮಾಡಿದರು.  ಅದಾದ ಮೇಲೆ ಪ್ರಧಾನ ಮಂತ್ರಿಯವರು ತಮ್ಮ ವಿಡಿಯೋ ತುಣಕನ್ನು ಬಿಟ್ಟ ಮೇಲೆ ಯಾಕೋ ಈ ಚ್ಯಾಲೆಂಜ್ ವಿಡಿಯೋಗಳು ಕಡಿಮೆಯಾಗಲು 
ಪ್ರಾರಂಭಿಸಿದವು. 

ಮುಖ್ಯ ಕಾರಣವೇನೆಂದರೆ ಪ್ರಧಾನ ಮಂತ್ರಿಯವರ ತಮ್ಮ ವಿಡಿಯೋದಲ್ಲಿ ಮಾಡಿದ ಕಸರತ್ತು ಎಚ್ ಡಿ ಕ್ವಾಲಿಟಿಯಲ್ಲಿ ಬಹಳ ಮನಮೋಹಕವಾಗಿಯೂ, ಉತ್ತಮವಾದ ಛಾಯಾಗ್ರಹಣದಿಂದಲೂ, ಎಡಿಟಿಂಗ್‍ನಿಂದಲೂ ಕಂಗೊಳಿಸುತ್ತಿತ್ತು. ಅದರಲ್ಲೂ ಅವರು ಕಸರತ್ತು ಮಾಡಿದ ಪರಿಸರ ಉತ್ತಮ ಗಿಡಗಳ ನಡುವೆಯೂ, ತಿಳಿಕೊಳಗಳ ಬಳಿಯೂ, ಹಸಿರಾದ ಹುಲ್ಲಿನ ನಡುವೆಯೂ ಇತ್ತು. ’ಉಳ್ಳವರು ಹೀಗೆ ಮಾಡುವರಯ್ಯ, ನಾನೆಲ್ಲಿ ಮಾಡಲಿ ಸಾಮಾನ್ಯನಯ್ಯ’ ಎಂಬಂತೆ ನಮ್ಮ ನಿಮ್ಮಂಥವರು ಸುಮ್ಮನಾದೆವು. 

ಮುಂದುವರಿಯುತ್ತಾ ತಮ್ಮದೇ ಅದೆಷ್ಟೋ ಮುಖ್ಯ ಮಂತ್ರಿಗಳನ್ನೆಲ್ಲಾ ಬಿಟ್ಟು ನಮ್ಮ ಕರ್ನಾಟಕದ ಮುಖ್ಯ ಮಂತ್ರಿಗಳಗೆ ಈ ಫಿಟ್‍ನೆಸ್‍ನ ಚ್ಯಾಲೆಂಜ್ ಮಾಡಿದರು. ಹೇಳಿ ಕೇಳಿ ಈಗ ಇಲ್ಲಿ ಸಮಿಶ್ರ ಸರ್ಕಾರ. ’ಸರ್ಕಾರ ಉಳಿಸಿಕೊಳ್ಳುವುದೇ ಹಗ್ಗದ ಮೇಲಿನ ನಡಿಗೆಯಂತಿರುವಾಗ ನಿಮ್ಮ ಹಾಗೆ ಕೊಳದ ಕಲ್ಲುಗಳ ಮೇಲೆ ನಡೆಯಲು ನನಗೆಲ್ಲಿ ಸಮಯವಿದೆ’ ಎಂಬಂತೆ ಮಾನ್ಯ ಮುಖ್ಯ ಮಂತ್ರಿಗಳು ಅ ಚ್ಯಾಲೆಂಜನ್ನು ನಯವಾಗಿಯೇ ತಿರಸ್ಕರಿಸಿದರು.   

ಕಿಕೀ ಚ್ಯಾಲೆಂಜ್ – ಹಿನ್ನಲೆ  : ಈಗ ಕಿಕೀ ಚ್ಯಾಲಿಂಜಿನ ದರ್ಬಾರ್ ನಡೆಯುತ್ತಿದೆ. ಇಲ್ಲ... ಕಾರಿಳಿದು ಡ್ಯಾನ್ಸ್ ಮಾಡುತ್ತಾ ಓಡುತ್ತಿದೆ. ಕೆನೆಡಾದ ಡ್ರೇಕ್ಸ್ ಎಂಬ ಗಾಯಕನ “ಇನ್ ಮೈ ಫೀಲಿಂಗ್ಸ್’ ಎಂಬ ಹಾಡೇ ಈ ಚ್ಯಾಲಿಂಜಿನ ಮೂಲ ಪ್ರೇರಣೆ. ’ಕಿಕೀ’ ಎಂದು ಪ್ರಾರಂಭವಾಗುವ ಈ ಹಾಡಲ್ಲಿ ಗಾಯಕ ತನ್ನ ಗೆಳತಿಯನ್ನು ’ನೀನು ಕಾರು ಚಲಿಸುತ್ತಿದಿಯಾ’ ಎಂದು ಕೇಳುತ್ತಾ ತನ್ನ ಬಳಿಯಿಂದ ದೂರ ಹೋಗ ಬೇಡ ಎಂದು ಹಾಡುತ್ತಾನೆ. ಆದರೆ ಇಲ್ಲಿ ಜನರು, ಅದರಲ್ಲೂ ಹುಡಿಗಿಯರು ’ದೂರ ಹೋಗಬೇಡ’ ಎಂಬ ಸಾಲು ಬರವಾಗಲೇ ಕಾರಿನಿಂದಿಳಿದು ದೂರ ಹೋಗುತ್ತಾ ಡ್ಯಾನ್ಸ್ ಮಾಡುವುದು ಏಕೊ?  
ಡ್ರೇಕ್ಸ್‍ನ ಈ ಹಾಡೇನೋ ಜನಪ್ರಿಯವಾಯಿತು ಆದರೆ ಈ ಡ್ಯಾನ್ಸ್ ಹೇಗೆ ಎಲ್ಲಿ ಪ್ರಾರಂಭವಾಯಿತು ಎಂಬುದರ ಬಗ್ಗೆ ಸರಿಯಾದ ಮಾಹಿತಿಯಿಲ್ಲದಿದ್ದರೂ ಕೆಲವೇ ದಿನಗಳಲ್ಲಿ ಇಡೀ ವಿಶ್ವವನ್ನೇ ಆವರಸಿಕೊಂಡಿತು. ಹೇಗಿದೆ ಎಂದು ನೋಡಲು  ಯೂಟ್ಯೂಬಿನಲ್ಲಿ ಒಂದಷ್ಟು ವಿಡಿಯೋಗಳನ್ನು ನೋಡಿದೆ. ಹಾಡು ನಿಜಕ್ಕೂ  ಚನ್ನಾಗಿದೆ. ಕ್ಯಾಚಿ ಆಗಿದೆ. ಅದಕ್ಕೆ ಚ್ಯಾಲಿಂಜಿನಲ್ಲಿ ಆಡಿರುವ ಕೆಲವು ಡ್ಯಾನ್ಸ್ ‍ಗಳು ಸಹಾ ಚೆನ್ನಾಗಿವೆ. ಇನ್ನಷ್ಟು ವಿಡಿಯೋಗಳು ನೋಡಿದರೆ ಕಣ್ಣು ತೊಳೆದುಕೊಳ್ಳಬಹುದಾದಷ್ಟು ಕೆಟ್ಟದಾಗಿವೆ. ಅದೇನೇ ಇರಲಿ ಭಾರತದಂತ ಜನಬಿಡ ಹಾಗೂ ಟ್ರಾಫಿಕ್ ಇರುವ ದೇಶಗಳಲ್ಲಿ ಇದು ಮಾಡುತ್ತಿರುವ ಆವಾಂತರವಂತೂ ಒಂದೆರೆಡಲ್ಲ. ಜನರಿಗೆ, ಪೋಲಿಸಿನವರಿಗೆ ತಲೆನೋವಾಗಿ ಪರಿಣಮಿಸಿದೆ. 

ಬಿಗ್ ಬ್ಯಾಸ್ ಹಾಗೂ ನುಲಿಯುವ ಖ್ಯಾತಿಯ ನಿವೇದಿತಾ ಗೌಡ ತಾನೂ ಒಂದು ಕಿಕೀ ವಿಡಿಯೋ ಹರಿದಾಡಲು ಬಿಟ್ಟು ವಿವಾದಕ್ಕೆ ಗುರಿಯಾಗಿದ್ದಾರೆ. ಅಯಮ್ಮ ಮಾತಾನಾಡುವ ಕನ್ನಡ ಹಾಗೂ ನುಲಿಯುವ ಪರಿಗೆ ರೋಸಿಹೋಗಿ ಅವಕಾಶಕ್ಕಾಗಿ ಕಾಯುತ್ತಿದ್ದ ಜನರು ಟೀಕೆಗಳ ಸುರಿಮಳೆಯನ್ನೇ ಸುರಿಸಿದ್ದಾರೆ. ನಿವೇದಿತಾ ಮಾತ್ರ ತಮ್ಮದೇ ಆದ ಕನ್ನಡದಲ್ಲಿ ಅದಕ್ಕೆ ತಕ್ಕ ಉತ್ತರವನ್ನು ಕೊಟ್ಟಿದ್ದಾರೆ.
ಕೆನಡಾದ ಡ್ರೆಕ್ಸ್ 

ಈ ಹಾಡು ಮಾಡಲು ಪ್ರೇರಣೆ ಏನೇ ಇರಲಿ, ನಮಗಂತೂ ಇದೇನು ಹೊಸ ವಿಚಾರವೇನ್ನಲ್ಲ. ಮೊಬೈಲ್ ಅಥವಾ ನಮ್ಮ ಬಳಿಯೇ ಕ್ಯಾಮರ ಇಲ್ಲದಿರುವಾಗ ಈ ರೀತಿಯ ಎಷ್ಟು ದೃಶ್ಯ ಡ್ಯಾನ್ಸ್ ಗಳನ್ನು  ನಾವು ನೋಡಿಲ್ಲ. ಹಿಂದಿನ ಬಿ.ಟಿ.ಎಸ್ ಬಸ್‍ಗಳನ್ನೇ ಒಮ್ಮೆ ನೆನಪಿಸಿಕೊಳ್ಳಿ. ಸ್ಟಾಪಿನ ಬಳಿ ಬಸ್ ನಿಲ್ಲುತ್ತಿದ್ದಂತೆ, ಆಗ ತಾನೇ ಹೊರಡುತ್ತಿದ್ದಂತೆ ಅದೆಷ್ಟು ಜನರು ಹೀಗೆ ಓಡುತ್ತಾ,  ಒಂದು ರೀತಿಯ ಡ್ಯಾನ್ಸ್ ಮಾಡುತ್ತಲ್ಲೇ ಹತ್ತುತ್ತಿದ್ದರು, ಇಳಿಯುತ್ತಿದ್ದರು. ಒಮ್ಮೊಮ್ಮೆ ಕೆಲವರು ಹಿಂದೆ ಓಡುತ್ತಾ ಮುಂದಿನ ಸ್ಟಾಪಿನ ತನಕ ಬಂದಿರುತ್ತಿದ್ದರು. ನಾವು ಒಳಗೆ ಕೂತೋ, ನಿಂತಿರುವಾಗ ಇದನ್ನೆಲ್ಲಾ ವಿಡಿಯೋ ಮಾಡಿಕೊಂಡಿದ್ದರೆ ಈಗಿನ ಯೂಟ್ಯ್ಬ್ ತುಂಬಿ ಹೋಗಿರುತ್ತಿದ್ದವು.

Friday, 20 July 2018

’ಸ್ಪಾಸಿಬೋ’

’ಸ್ಪಾಸಿಬೋ’ ಎಂಬ ರಷ್ಯನ್ ಪದವನ್ನು ಬರೆದ ಚೀಟೊಯೊಂದನ್ನು ಡ್ರೆಸ್ಸಿಂಗ್ ಕೋಣೆಯಲ್ಲಿ  ಬಿಟ್ಟು ಹೋಗಲಾಗಿತ್ತು. ಹಾಗೆ ಹೋಗುವಾಗ ಇಡೀ ಕೋಣೆ ಆಗ ತಾನೇ ಸ್ವಚ್ಛಗೊಂಡಿತ್ತೇನೋ, ಇನ್ನೂ ಯಾರೂ ಉಪಯೋಗಿಸಿಲ್ಲವೇನೋ ಎಂಬಷ್ಟು ಸ್ವಚ್ಛಾತಿ ಸ್ವಚ್ಛ. ರಷ್ಯನ್ ಭಾಷೆಯಲ್ಲಿ ’ಸ್ಪಾಸಿಬೋ ಎಂದರೆ ’ವಂದನೆಗಳು ಎಂದು ಅರ್ಥ. ಈ ವಿಶ್ವಕಪ್‍ನ ಬೆಲ್ಜಿಯಂ ವಿರುದ್ಧದ ಪಂದ್ಯದ ನಂತರ ಟೋರ್ನಿಯಿಂದ ಹೊರ ನಡೆದ ಜಪಾನ್ ತಂಡ ತನ್ನ ಡ್ರೆಸ್ಸಿಂಗ್ ಕೋಣೆಯನ್ನು ಪೂರ ಸ್ವಚ್ಛ ಮಾಡಿಟ್ಟು ಹೋದ ಕೋಣೆಯ ಚಿತ್ರ ಇಡೀ ವಿಶ್ವದ ಮೆಚ್ಚುಗೆಗೆ ಪಾತ್ರವಾಗಿದೆ.

ಬಲಿಷ್ಠ ಬೆಲ್ಜಿಯಂ ತಂಡದ ವಿರುದ್ಧ ಕೆಚ್ಚೆದೆಯಿಂದ ಹೋರಾಡಿ ಮುನ್ನಡೆ ಕಾಯ್ದುಕೊಂಡು ಬಂದು ಕೊನೆಯ ಕ್ಷಣಗಳಲ್ಲಿ ಆಘಾತ ಅನುಭವಿಸಿ ಸೋತದ್ದು ಜಪಾನ್ ತಂಡ.  ದೊಡ್ಡ ನಿರಾಸೆ, ದುಖದ ನಡುವೆಯೂ ತಂಡದ ಸದಸ್ಯರು ತೋರಿದ ಸೌಜನ್ಯ, ಸಮಯ ಪ್ರಜ್ಞೆ, ಬದ್ಧತೆ ಇಂದು ವಿಶ್ವದ ಮನೆ ಮಾತಾಗುತ್ತಿದೆ.

 ಇದು ತಂಡದ ಆಟಗಾರರಿಗೆ ಮಾತ್ರ ಸೀಮಿತವಾಗಲಿಲ್ಲ. ಪಂದ್ಯವನ್ನು ವೀಕ್ಷಿಸಲು ಬಂದ ಜಪಾನ್ ಪ್ರೇಕ್ಷಕರು ಸಹಾ ಪಂದ್ಯದ ನಂತರ ಅಳುತ್ತಲೇ ತಾವು ಕೂತಿದ್ದ ಗ್ಯಾಲರಿಯ ಕಸ, ಕಾಗದಗಳನ್ನು ಚೀಲಗಳಲ್ಲಿ ತುಂಬಿಕೊಂಡು ಕಸದ ಬುಟ್ಟಿಗೆ ರವಾನಿಸಿದ್ದರು. ಇದು ತಾವು ಎಸೆದ ಕಸವಲ್ಲ ಇತರ ಪ್ರೇಕ್ಷಕರು ಎಸೆದು ಹೋಗಿದ್ದ ಕಸದ  ರಾಶಿ. ಜಪಾನ್ ತಂಡದ ಪ್ರತಿ ಪಂದ್ಯದ ನಂತರವೂ ಇದೇ ಪರಿಪಾಠವನ್ನು ಜಪಾನ್ ಅಭಿಮಾನಿಗಳು ಪಾಲಿಸಿದ್ದರು. 2014 ರಲ್ಲಿ ಸಹಾ ಇದೇ ರೀತಿ ಮಾಡಿ ವಿಶ್ವದ ಗಮನ ಸೆಳೆದಿದ್ದರು.  ಇದೆಲ್ಲಾ ನಮಗೆ, ಇತರರಿಗೆ ಅಚ್ಚರಿಯ, ಮೆಚ್ಚುಗೆಯ ವಿಷಯವಾಗಿರಬಹುದು. ಆದರೆ ಜಪಾನ್ ನಾಗರಿಕರಿಗೆ, ಅಲ್ಲಿ ವಾಸ ಮಾಡಿದವರಿಗೆ, ಪ್ರವಾಸ ಕೈಗೊಂಡವರಿಗೆ ಇದು ಸಾಮಾನ್ಯವೆಂಬಷ್ಟು ಸಹಜ ಸಂಗತಿ.

ಜಪಾನ್ ನಗರಗಳ ರಸ್ತೆಗಳು ಜಗತ್ತಿನ ಯಾವುದೇ ಜನಬಿಡ ನಗರಗಳ ಬೀದಿಗಳಷ್ಟೇ ಜನರಿಂದ ತುಂಬಿ ತುಳುಕುತ್ತವೆ. ಜನ ಸಂಖ್ಯೆ ಅಲ್ಲೂ ಹೆಚ್ಚಿದೆ. ಆದರೂ ಅಲ್ಲಿನ ಜನರ ಸ್ವಚ್ಛತೆಯೆಡೆಗಿನ ಬದ್ಧತೆ ಹಾಗೂ ಪ್ರೀತಿಯಿಂದಾಗಿ ಅಲ್ಲಿನ ರಸ್ತೆ, ಸಾರ್ವಜನಿಕ ಸ್ಥಳಗಳು Spotless and clean ಎಂದೇ ಹೆಸರುವಾಸಿ.

Going out of the way : ಇಂಗ್ಲಿಷಿನಲ್ಲಿ Going out of the way ಎಂಬ ಮಾತಿದೆ. ಸಹಾಯ ಮಾಡಲು ಒಂದಷ್ಟು ಹೆಚ್ಚು ಎನ್ನುವಷ್ಟು ಕಷ್ಟ, ಶ್ರಮವನ್ನು ತೆಗೆದುಕೊಳ್ಳುವುದು ಎಂಬುದು ಇದರ ಅರ್ಥ. ’ಯಾರಾದರೂ ನನ್ನೊಡನೆ ಒಂದು ಕಿಲೋಮೀಟರ್ ಬಾ ಎಂದರೆ ಎರಡು ಕಿಲೋಮೀಟರ್ ಹೋಗು’ ಎಂಬ ಕ್ರಿಸ್ತನ ಮಾತಂತೆ. ಜಪಾನ್ ಜನರಿಗೆ ಈ ಸೌಜನ್ಯ ಹಾಗೂ ನಿರೀಕ್ಷೆಗಿಂತ ಹೆಚ್ಚಿನ ಸಹಾಯ ಮಾಡುವ ಸ್ವಭಾವ ಅಭ್ಯಾಸವಾಗಿ ಹೋಗಿದೆ.

ಅಲ್ಲಿ ಪ್ರವಾಸ ಮಾಡಿದವರ ಅನುಭವದಂತೆ ಅಲ್ಲಿ ಯಾರ ಬಳಿಯಾದರೂ ಒಂದು ವಿಳಾಸದ ಬಗ್ಗೆ ವಿಚಾರಿಸಿದರೆ, 100ಕ್ಕೆ 90%ರಷ್ಟು ಬಾರಿ ನೀವು ವಿಚಾರಿಸಿದ ಜಪಾನ್ ವ್ಯಕ್ತಿ ನಿಮ್ಮನ್ನು ಆ ಸ್ಥಳಕ್ಕೆ ತಾನೇ ಕರೆದುಕೊಂಡು ಹೋಗುತ್ತಾನೆ ಎಂಬ ಮಾತಿದೆ . ನೀವು ಹುಡುಕುತ್ತಾ ಕಳೆದು ಹೋಗಬಹುದೆಂಬ ಕಾಳಜಿಯಿಂದ. ಇದು ಅತಿರೇಕವೆಂಬಂತೆ ಕಾಣಬಹುದು. ಇಲ್ಲವೇ ಭಾರತದಂತ ಜನಸಂಖ್ಯೆಯ ದೇಶದಲ್ಲಿ ವಾಸ್ತವಲ್ಲ ಎನ್ನಬಹುದು. ಆದರೆ ಜಪಾನ್ ಕೂಡ ಭಾರಿ ಜನಸಂಖ್ಯೆಯ ದೇಶವೇ. ಆ ದೇಶದ 65% ಜನರು ನಗರಗಳಲ್ಲೇ ವಾಸಿಸುತ್ತಾರೆ. ಅಲ್ಲಿನ ಯಾವುದೇ ಜನಬಿಡ ರಸ್ತೆಯಲ್ಲಿ ನೀವು ನಡೆದುಕೊಂಡು ಹೋದರೆ ಮತ್ತೊಬ್ಬರಿಗೆ ಡಿಕ್ಕಿಯೊಡೆಯದೆ ಸಾಗಲು ಸಾಧ್ಯವೇ ಇಲ್ಲ ಎಂಬ ಮಾತಿದೆ.

ಅದೇ ಕಾರಣಕ್ಕೇ ಏನೋ, ಅಲ್ಲಿನ ಜನರು ಅಲ್ಲಿನ ನಿಯಮಗಳ ಜೊತೆ ಜೊತೆಗೆ ಮೌಲ್ಯಗಳನ್ನು ಸಹಾ ಬಹಳ ಕಟ್ಟುನಿಟ್ಟಾಗಿ ಪಾಲಿಸುತ್ತಾರೆ. Thanks ಮತ್ತು Sorry ಇಲ್ಲಿನ ಜನರ ಬಾಯಲ್ಲಿ ಅತಿ ಹೆಚ್ಚು ಬಳಕೆಯಾಗುವ ಪದಗಳು. ಅದು ಕೇವಲ ಬಾಯಿಮಾತಿನ ಆಚರಣೆಯಲ್ಲ. ತೀರ ಸೌಜನ್ಯದಿಂದಲೂ, ಗೌರವಯುತವಾಗಿ ನಡೆದುಕೊಳ್ಳುವವರು ಎಂದೇ ಜಪಾನಿನ ಜನರು ಹೆಸರುವಾಸಿ.

ಇವುಗಳ ಮೂಲ ಯಾವುದು? ಈ ಸೌಜನ್ಯಕ್ಕೆ ಕಾರಣವಾದರೂ ಏನು ಎಂಬುದು ಕುತೂಹಲಕ್ಕಾರಿ ಪ್ರಶ್ನೆ. ಅದಕ್ಕೆ ಕಾರಣ ಧಾರ್ಮಿಕತೆಯೇ, ಅಲ್ಲಿನ ಸಂಸ್ಕೃತಿಯೇ, ಶಿಕ್ಷಣ ಪದ್ಧತಿಯೇ, ದೇಶದ ಭೌಗೋಳಿಕ ರಚನೆಯೇ? ಎಲ್ಲವೂ ಹೌದು, ಇಲ್ಲ ಯಾವುದೂ ಅಲ್ಲ. ಉತ್ತರ ತುಸು ಕಷ್ಟವೇ.

ಧಾರ್ಮಿಕ ನಂಬಿಕೆ ಹಾಗೂ ಸಂಸ್ಕೃತಿ : ಸಾರ್ವಜನಿಕವಾಗಿ ಉನ್ನತವಾದ ಮೌಲ್ಯಗಳಿಂದ ಬದುಕುವ ಜಪಾನ್ ಜನರಲ್ಲಿ ಸುಮಾರು 60 ರಿಂದ 70 ರಷ್ಟು ಜನರು ಯಾವುದೇ ಧರ್ಮದ ಹಿಂಬಾಲಕರಲ್ಲ ಎಂಬುದು ಆಶ್ಚರ್ಯದ ಸಂಗತಿ. ದಾಖಲೆಗಳ ಪ್ರಕಾರ ಯಾವುದೋ ಒಂದು ಧರ್ಮಕ್ಕೆ ಸೇರಿದವರಾಗಿದ್ದರೂ ನಿರ್ದಿಷ್ಠ ಧರ್ಮಕ್ಕೆ ಕಟ್ಟು ಬೀಳದ ಜನ ಸಂಖ್ಯೆ ಇಲ್ಲಿ ದೊಡ್ಡದಿದೆ. ಆದರೆ ಅಷ್ಟೇ ಆಶ್ಚರ್ಯದ ಸಂಗತಿ ಎಂದರೆ  ಇಲ್ಲಿನ ಯಾವುದೇ ಧಾರ್ಮಿಕ ಸಾರ್ವಜನಿಕ ಸಂಭ್ರಮದಲ್ಲಿ ಎಲ್ಲರೂ ಭಾಗವಹಿಸುತ್ತಾರೆ. ಆಗ್ಗಿಂದಾಗೆ ಇಲ್ಲೆ ಅನೇಕ ಸಾರ್ವಜನಿಕ ಆಚರಣೆ, ಸಂಭ್ರಮಗಳು ನಡೆಯುತ್ತಲೇ ಇದ್ದೂ, ಜನ ಸಂಭ್ರಮದಿಂದಲೇ ಪಾಲ್ಗೊಳ್ಳುತ್ತಾರೆ. ಬೌದ್ಧ ಧರ್ಮ, ಶಿಂಟೋಯಿಸಮ್, ಕ್ರೈಸ್ತ ಧರ್ಮದ ಜೊತೆ ಜೊತೆಯಲ್ಲೇ ಅತಿ ಪುರಾತನ ಜೀವನ ಕ್ರಮವಾದ ಕನಫ್ಯೂಷಿಸಮ್ ಇಲ್ಲಿ ಬಳಕೆಯಲ್ಲಿದೆ. ಈ ಎಲ್ಲಾ ಧರ್ಮಗಳಿಗಿಂತ ಕನ್‍ಫ್ಯೂಶಸ್‍ನ ಸಿದ್ಧಾಂತಗಳೇ ಇಲ್ಲಿ ಒಂದಷ್ಟು ಹೆಚ್ಚು ಜನನಿತ.

ಶಿಕ್ಷಣ : ಇನ್ನೂ ಜಪಾನಿಯರ ಜೀವನ ಕ್ರಮದ ಮೇಲೆ ಅಲ್ಲಿನ ಶಿಕ್ಷಣ ಪದ್ದತಿ ಬಹು ದೊಡ್ಡ ಪರಿಣಾಮವನ್ನು ಬೀರಿದೆ. ದೇಶದ ಶಿಕ್ಷಣದ ಪಠ್ಯಕ್ರಮದಲ್ಲಿ Moral Education ಬಹು ದೊಡ್ಡ ಭಾಗವಾಗಿದೆ. ಅಂದರೆ ನಮ್ಮ ಶಿಕ್ಷಣದಲ್ಲಿನ ನೀತಿ ಪಾಠದಂತೆ. ಆದರೆ ಅಲ್ಲಿ ಒಂದು  ಈ ಮಗುವಿನ ಮೊದಲ 9 ವರ್ಷಗಳಲ್ಲಿ ಈ ನೀತಿ ಪಾಠ ಅಥವಾ ನೈತಿಕ ಶಿಕ್ಷಣವನ್ನು ಒಂದು ಪ್ರಮುಖ ವಿಷಯವನ್ನಾಗಿ ಬೋಧಿಸಲಾಗುತ್ತದೆ. ಬೋಧನೆ ಎನ್ನುವುದಕ್ಕಿಂತ ವ್ಯವಸ್ಥಿತವಾಗಿ ಹೇಳಿಕೊಡಲಾಗುತ್ತದೆ. ಮಾಹಿತಿಗಳ ಪ್ರಕಾರ ಈ ನೀತಿ ಪಾಠಗಳಲ್ಲಿ  ಸುಮಾರು 70 ವಿಷಯಗಳು ಇರುತ್ತವೆ. ಅವುಗಳಲ್ಲಿ ನಾಲ್ಕು ಸಂಬಂಧ ಹಾಗೂ ಸಮುದಾಯ, ಸಮಾಜದೊಂದಿಗಿನ ಸಂಬಂಧ ಇಲ್ಲಿನ ವಿಷಯಗಳು. ಇವುಗಳ ಮೂಲಕ ಮಕ್ಕಳಿಗೆ ಸೌಜನ್ಯ, ಇತರರ ಬಗ್ಗೆ ಕಾಳಜಿ, ಸ್ನೇಹ-ಗೌರವ, ವಿನಯ-ವಿನಮ್ರತೆ, ಸಮಾಜಕ್ಕೆ ಕೊಡುಗೆ, ಸಂಸ್ಕೃತಿಯೆಡೆಗೆ ಗೌರವ ಈ ರೀತಿ ಅನೇಕ ಮೌಲ್ಯಗಳ ಬಗ್ಗೆ ಹೇಳಿಕೊಡಲಾಗುತ್ತದೆ. ಇವುಗಳನ್ನು ಮಕ್ಕಳಿಗೆ ಚಿಕ್ಕ ವಯಸ್ಸಿನಿಂದಲೇ ಹೇಳಿಕೊಡಲಾಗುವುದರಿಂದ ಹಾಗೂ ಹಿರಿಯರು ಈಗಾಗಲೇ ಅದನ್ನೆಲ್ಲಾ ಪಾಲಿಸಿಕೊಂಡು ಬರುತ್ತಿರುವುದರಿಂದ ಅದೊಂದು ಸಂಸ್ಕೃತಿಯಾಗಿಯೇ ಬೆಳೆದು ನಿಲ್ಲುತ್ತದೆ.

ಪ್ರಕೃತಿ : ಇವುಗಳ ಜೊತೆ ಜಪಾನಿನ ಭೌಗೋಳಿಕ ಪ್ರದೇಶವೂ ಅಲ್ಲಿನ ಜನರ ಮೇಲೆ ಪರಿಣಾಮ ಬೀರಿದಂತಿದೆ. ಸದಾ ಯಾವುದಾದರೂ ನೈಸರ್ಗಿಕ ವಿಕೋಪದ ಭಯದಲ್ಲೇ ವಾಸಿಸುವ ಇಲ್ಲಿನ ಜನತೆ ಅದೇ ಕಾರಣಕ್ಕೆ ಪ್ರಕೃತಿಯ ಶಕ್ತಿ, ಅಗಾಧತೆ, ಸೌಂದರ್ಯ ಹಾಗೂ ಉಪಯುಕ್ತತೆಯ ಸ್ಪಷ್ಟ ಜ್ಞಾನವನ್ನು ಪಡೆದಂತಿದೆ. ಆದರಿಂದಲೇ ಅಲ್ಲಿ ನಿಸರ್ಗದ, ಪರಿಸರದ ಕಡೆಗಿನ ಗೌರವವೂ ಹೆಚ್ಚು. ಕ್ರೀಡಾಂಗಣದಲ್ಲಿ ಕಸವನ್ನು ರಾಶಿ ಮಾಡಿ ಕಸದ ಬುಟ್ಟಿಗೆ ಎಸೆಯುವ ಅವರ ಮನೋಭಾವದ ಹಿಂದೆ ಇರುವುದು ಇದೇ ಪರಿಸರ ಕಾಳಜಿ.

ಏಳು ಬಾರಿ ಬಿದ್ದರೆ ಎಂಟು ಬಾರಿ ಏಳು : ಇದು ಜಪಾನಿನ ಒಂದು ನಾಣ್ಣುಡಿ. ಎರಡನೆಯ ಮಹಾಯುದ್ಧದ ನಂತರ ಅಕ್ಷರಶ: ನೆಲಕ್ಕೆ ಬಿದ್ದಿದ್ದ ಜಪಾನ್, ನಂತರ ಎದ್ದು ಜಗತ್ತಿನ ಪ್ರಮುಖ ಶಕ್ತಿಯಾಗಿ ಬೆಳೆದ ನಿಂತ ಪಯಣದಲ್ಲಿ ಈ ನೈತಿಕ ಮೌಲ್ಯ ಹಾಗೂ ಸಾರ್ವಜನಿಕ ಶಿಸ್ತು ದೊಡ್ಡ ಕೆಲಸ ಮಾಡಿದೆ. ಈ ರೂಪಾಂತರದಲ್ಲಿ ಭಾರತದಂತ ದೇಶಗಳು ಕಲಿಯುವಂತದ್ದು  ಬಹಳಷ್ಟಿದೆ.

ಇದು ಜಪಾನಿನ ಕಥೆ. ಹಾಗೆಂದ ಮಾತ್ರಕ್ಕೆ ಅಲ್ಲಿ ಎಲ್ಲವೂ ಸರಿಯಾಗಿದೆ, ನಮ್ಮಲ್ಲಿ ಎಲ್ಲವೂ ಹದೆಗಟ್ಟಿದೆ ಎಂಬುದಲ್ಲಾ. ಅಲ್ಲಿನ  ಈಗಿನ ಯುವ ಜನತೆಗೆ ಈ ಮೌಲ್ಯಗಳ ಬಗ್ಗೆ ಅಷ್ಟೇನು ಒಲವಿಲ್ಲ ಎಂಬ ಮಾತೂ ಕೇಳಿ ಬರುತ್ತಿದೆ. ಅದಕ್ಕಿಂತ ಕಳವಳಕ್ಕಾರಿಯಾದ ವಿಷಯವೆಂದರೆ ಇಳಿಮುಖಗೊಳ್ಳುತ್ತಿರುವ ಅಲ್ಲಿನ ಜನಸಂಖ್ಯೆ.
  
ನಮ್ಮಲ್ಲಿನ ಅನೇಕ ಸಾಮಾಜಿಕ, ರಾಜಕೀಯ ಸಮಸ್ಯೆಗಳಿಗೆ ಭ್ರಷ್ಟಾಚಾರ, ಆಡಳಿತ ವೈಫಲ್ಯ ಹೇಗೆ ಕಾರಣವೋ ಹಾಗೆಯೇ ನಾಗರಿಕರ ಸಾರ್ವಜನಿಕ ಅಶಿಸ್ತು, ನಿಯಮ, ಮೌಲ್ಯಗಳೆಡೆಗಿನ ನಿರ್ಲಕ್ಷ್ಯವೂ ಅಷ್ಟೇ ಕಾರಣ. ಶಿಕ್ಷಣವೂ ಒಳ್ಳೆಯ ಅಂಕಗಳನ್ನು ಪಡೆಯಲು ಸಹಾಯ ಮಾಡುವ ಸಂಸ್ಥೆಗಳಾಗಿಯೂ, ವ್ಯಾಪಾರಿ ಕೇಂದ್ರಗಳಾಗಿಯೂ ಕೆಲಸ ಮಾಡುತ್ತಿವೆ.

ಬೆಂಗಳೂರಿನ ಸಣ್ಣ ಸಣ್ಣ ರಸ್ತೆಯಲ್ಲೂ ಟ್ರಾಫಿಕ್ ಜ್ಯಾಮ್ ಆಗಲು ವಾಹನ ಸಂದಣಿ ಎಷ್ಟೋ ಕಾರಣವೋ, ಅಷ್ಟೇ ಕಾರಣ ಸವಾರರ ಲೇನ್ ಪಾಲಿಸದ ಅಶಿಸ್ತು. ಕಾಯುವ ಪೋಲಿಸನೊಬ್ಬ ಇಲ್ಲವೆಂದ ಮೇಲೆ ಟ್ರಾಫಿಕ್ ದೀಪಗಳು ಅಲಂಕಾರಿಕ ದೀಪಗಳಷ್ಟೇ. ಹೆಲ್ಮೆಟ್ ಬಳಸುವುದೂ ಕೇವಲ ದಂಡದ ಭಯಕ್ಕೆ. ನಮ್ಮ ನೈತಿಕ ಪ್ರಜ್ಞೆ ಎಚ್ಚರಗೊಳ್ಳುವುದು ಧಾರ್ಮಿಕತೆಯ ಸ್ವರ್ಗ ನರಕದ ಭಯದಲ್ಲಿ ಮಾತ್ರ.

ಅತ್ತ ತಂತ್ರಜ್ಞಾನದ ದೈತ್ಯ ಹೆಜ್ಜೆಗಳ ನಡುವೆಯೂ ಇಡೀ ಜಗತ್ತು ತನ್ನದೇ ಆದ ಅನೇಕ ಕಾರಣಗಳಿಂದ ನಿರಾಸೆಯಿಂದ ಬಳಲುತ್ತಿದೆ. ಭರವಸೆಯ ಆಶಾಕಿರಣಗಳನ್ನುಸಂಘರ್ಷದ ಕಾರ್ಮೋಡಗಳು ಅದುಮಿ ಮರೆಮಾಚುತ್ತಿವೆ. ಪರಪ್ರೀತಿ, ಸಹಿಷ್ಣುತೆ ಹಾಗೂ ಪರಸ್ಪರ ನಂಬಿಕೆ ಗೌರವಗಳೇ ಮುಂದಿನ ಪಯಣದ ಚಕ್ರಗಳಾಗಬೇಕು ಎಂಬ ಸಂದೇಶವನ್ನು ಜಪಾನಿನ ಪುಟ್ ಬಾಲ್ ತಂಡ, ಪ್ರೇಕ್ಷಕರು ತಮ್ಮದೇ ಅದ ರೀತಿಯಲ್ಲಿ ತೋರಿಸಿಕೊಟ್ಟಿದ್ದಾರೆ. ನಾವೆಲ್ಲ ಅದರಿಂದ ಒಂದಷ್ಟು ಏನದರೂ ಕಲಿಯಬೇಕಿದೆ.

Wednesday, 20 June 2018

ಫುಟಬಾಲ್ ವಿಶ್ವಕಪ್ ನ ರೋಚಕತೆಯೂ,ವೇದಾಂತವೂ ....

ವಿಶ್ವದ ಅತ್ಯಂತ ಜನಪ್ರಿಯ ಕ್ರೀಡಾ ಹಬ್ಬ ಇದೇ ಜೂನ್ 14ರಿಂದ ಜಗವನ್ನು ಆವರಿಸಿಕೊಳ್ಳಲಿದೆ.  'ಅತ್ಯಂತ ಜನಪ್ರಿಯ' ಎನ್ನುವುದರಲ್ಲಿ ಯಾವುದೇ ಉತ್ಪ್ರೇಕ್ಷೆ ಇಲ್ಲ. 2014ರ  ಫೈನಲ್ ಪಂದ್ಯವನ್ನು ಸುಮಾರು  72 ಕೋಟಿ ಜನ ವೀಕ್ಷಿಸಿದರು ಎನ್ನುತ್ತದೆ ವರದಿಗಳು. ಅದು ಅಂದಿನ ವಿಶ್ವದ ಒಟ್ಟು ಸಂಖ್ಯೆಯ ಶೇಕಡ 11ರಷ್ಟು.

ಇಂದು ಇಡೀ ವಿಶ್ವವನ್ನೇ ಆಟವಾಡಿಸುವ ಈ ಕ್ರೀಡೆಯ ಮೊದಲ ಹೆಜ್ಜೆಗಳನ್ನು 1872ರಲ್ಲಿ ಗುರುತಿಸಲಾಗಿದೆ. ಸ್ಕಾಟ್ ಲೆಂಡ್ ಹಾಗೂ ಇಂಗ್ಲೆಂಡ್ ನಡುವೆ ನಡೆದ ಪಂದ್ಯವೇ ಮೊದಲ ಅಂತರರಾಷ್ಟ್ರೀಯ ಪಂದ್ಯ. ನಂತರ  ಜನಪ್ರಿಯಗೊಳ್ಳುತ್ತಲೇ  ಬಂದ ಈ ಆಟವನ್ನು 1900 ಹಾಗೂ 1904ರ ಒಲಂಪಿಕ್ಸ್ ನಲ್ಲೂ ಆಡಿಸಲಾಯಿತು. ಪುಟ್ ಬಾಲ್ ಆಟದ ಅಧಿಕೃತ ಸಂಸ್ಥೆಯಾಗಿ ಫಿಫಾ 1904ರಲ್ಲಿ ಸ್ಥಾಪನೆಯಾಯಿತು.  1928ರಲ್ಲಿ  ಫಿಫಾ ತನ್ನದೇ ಆದ ವಿಶ್ವಕಪ್ ಅನ್ನು ನಡೆಸಲು ನಿರ್ಧರಿಸುವುದರೊಂದಿಗೆ 1930ರಲ್ಲಿ ಉರುಗ್ವೆಯಲ್ಲಿ ಮೊದಲ ವಿಶ್ವಕಪ್ ನಡೆಯುತ್ತದೆ. ಒಟ್ಟು 13 ತಂಡಗಳು ಭಾಗವಹಿಸುತ್ತವೆ. ಫೈನಲ್ ನಲ್ಲಿ ಉರುಗ್ವೆ ಅರ್ಜೆಂಟೀನಾ ತಂಡವನ್ನು 4-2ರಿಂದ ಸೋಲಿಸುವುದರೊಂದಿಗೆ ವಿಶ್ವಕಪ್ ಗೆದ್ದ ಮೊದಲ ದೇಶ ಎಂಬ ಖ್ಯಾತಿ ಅದಕ್ಕೆ ದೊರಕುತ್ತದೆ.  

ಮುಂದೆ ಈ ವಿಶ್ವಕಪ್  ಹಾಗೂ ಫುಟಬಾಲ್ ಆಟ ಬೆಳೆದು ಬಂದಿರುವ  ಪರಿ ಅಚ್ಚರಿ ಮೂಡಿಸುವಂತದ್ದು. 1942 ಹಾಗೂ 1946ರಲ್ಲಿ ಎರಡನೇಯ ಮಹಾ ಯುದ್ಧದಿಂದಾಗಿ ರದ್ದುಗೊಂಡಿದ್ದು ಬಿಟ್ಟರೆ, ವಿಶ್ವಕಪ್ ನ ಜೈತ್ರ ಯಾತ್ರೆ ಅಭಾದಿತ.  9 ದಶಕಗಳ ಈ ಇತಿಹಾಸದಲ್ಲಿ ವಿಶ್ವಕಪ್ ಅನೇಕ  ರೋಚಕ, ಅಚ್ಚರಿಯ, ವಿಸ್ಮಯಕಾರಿ ಹಾಗು ಅಷ್ಟೇ ವಿವಾದಮಯ ಕ್ಷಣಗಳನ್ನು ಕಂಡಿದೆ. ಬ್ರೆಜಿಲ್ 5 ಬಾರಿ ವಿಶ್ವಕಪ್ ಗೆಲ್ಲುವುದರೊಂದಿಗೆ ಅತ್ಯಂತ ಯಶಸ್ವಿ ತಂಡವೆನಿಸಿಕೊಂಡರೆ, ಜರ್ಮನಿಯ ಮಿರೊಸ್ಲಾವ್ ಕ್ಲೋಸ್ ಅತಿ ಹೆಚ್ಚು, ಅಂದರೆ 16 ಗೋಲನ್ನು ಹೊಡೆದ ಆಟಗಾರ. ಆದರೆ ಕ್ರೀಡೆಗಳ ಜೀವಂತಿಕೆ ಹಾಗು ಸೊಗಸು ಇರುವುದು ಅಂಕಿ ಅಂಶಗಳನ್ನು ಮೀರಿದ  ಆ ರೋಮಾಂಚಕ ಕ್ಷಣಗಳಲ್ಲಿ, ಆಟಗಾರರ  ಚುಂಬಕ ವ್ಯಕ್ತಿತ್ವ ಹಾಗೂ ಕೌಶಲ್ಯದಲ್ಲಿ.

ಅದೆಷ್ಟೇ ತಂಡ ಆಧಾರಿತ ಕ್ರೀಡೆಗಳೆಂದು ನಾವು ಕರೆದರೂ  ಆಯಾಯ ಕ್ರೀಡೆಗಳನ್ನು ಬೆಳಗುವುದು ಆಟಗಾರನೊಬ್ಬನ ವ್ಯಯಕ್ತಿಕ  ಪ್ರತಿಭೆಯ ತೇಜಸ್ಸೇ. ಫುಟಬಾಲ್ ಇದನ್ನು  1958ರ ವಿಶ್ವಕಪ್ ನಲ್ಲಿ ಮತ್ತೊಮ್ಮೆ ನಿರೂಪಿಸಿತು . ಫುಟಬಾಲ್  ಪ್ರಪಂಚದಲ್ಲಿ  ಬ್ರೆಜಿಲ್ ತನ್ನದೇ ಆದ ಹೆಸರನ್ನು ಪಡೆದಿದ್ದರೂ 28 ವರ್ಷಗಳ ಕಾಲ ವಿಶ್ವಕಪ್ ಗೆಲ್ಲುವ ಸೌಭಾಗ್ಯ ಬಂದಿರಲಿಲ್ಲ . 1958ರ ವಿಶ್ವಕಪ್ ನಲ್ಲೂ ಅದು ಗೆಲ್ಲುವ ವಿಶ್ವಾಸ ಯಾರಿಗೂ ಇರಲಿಲ್ಲ . ಅದರಲ್ಲೂ ವಿಶ್ವಕಪ್ ನಂತಹ ಸರಣಿಗೆ ೧೭ವರ್ಷದ ಆಟಗಾರರನ್ನೆಲ್ಲಾ ಕರೆದುಕೊಂಡು ಬಂದಿದ್ದಾರೆ ಎಂಬ ಕುಹಕದ  ಮಾತುಗಳು ಬ್ರೆಜಿಲ್ ತಂಡದ ಬಗ್ಗೆ ಕೇಳಿ ಬಂತು.

ಆದರೆ ಅದೇ 17 ವರ್ಷದ ಎಡಸನ್ ಆರೆಂಟಾಸ್ ಡೊ ನಾಸೆಮಿಂಟೊ ಎಂಬ ಉದ್ದ ಹೆಸರಿನ ಸಣ್ಣಗಿನ ಯುವಕ, ಪೀಲೆ ಎಂಬ ಹೆಸರೊಂದಿಗೆ  ಮಾಡಿದ ಮೋಡಿಗೆ ಜಗತ್ತು ಮೊದಲು ಬೆಚ್ಚಿ ಬಿದ್ದು, ನಂತರ  ಹುಚ್ಚೆದ್ದು ಕುಣಿಯಿತು, ಎದುರಾಳಿಗಳು ಮಾತ್ರ ತಬ್ಬಿಬ್ಬು.  ಸೆಮಿಫೈನಲ್ ನಲ್ಲಿ ಫ್ರಾನ್ಸ್  ವಿರುದ್ಧ ಹ್ಯಾಟ್ರಿಕ್ ಸಿಡಿಸಿ ಜಗದ ಕಣ್ಮಣಿಯಾಗುವತ್ತ ಮೊದಲ ಹೆಜ್ಜೆಯಿಡುತ್ತಾನೆ . ನಂತರದ ಫೈನಲ್ ನಲ್ಲಿ ಮತ್ತೊಮ್ಮೆ 2 ಗೋಲ್ ಬಾರಿಸಿ ರಾತ್ರೋರಾತ್ರಿ ಫುಟಬಾಲ್ ನ ದೈತ್ಯ ಪುರುಷನಾಗಿ ಎದ್ದಾಗ  ವಯಸ್ಸು 18 ಆಗಲು ಇನ್ನು 116 ದಿನಗಳು ಬಾಕಿ ಇದ್ದವು.  ಮುಂದೆ ಪೀಲೆ ಮಾಡಿದ ಸಾಧನೆಗಳು ಅಜರಾಮರ.

ಇನ್ನೂ ಇದೇ  ರೀತಿ ಇಡೀ ವಿಶ್ವದ ಗಮನವನ್ನೆಲ್ಲಾ ತನ್ನತ್ತಲೇ  ಸೆಳೆದ ಇನ್ನೊಬ್ಬನೆಂದರೆ ಡಿಯಾಗೋ ಮರಡೋನ. 1986ರ ವಿಶ್ವಕಪ್ ಅನ್ನು  ‘ಮರಡೋನ ವಿಶ್ವಕಪ್’ ಎಂದೇ ಕರೆಯಬಹುದು . ಪ್ರಾಯಶ: ಯಾವುದೇ ಒಬ್ಬ ಆಟಗಾರ ಒಂದು ವಿಶ್ವಕಪ್ ಸರಣಿಯನ್ನು ಆ ರೀತಿ  ಪೂರ್ಣವಾಗಿ ಆವರಿಸಿಕೊಳ್ಳಲಿಲ್ಲವೇನೋ. ಚೆಂಡು ಕಾಲಿಗೆ ಸಿಕ್ಕರೆ, ಮತ್ತೆ ಅದನ್ನು ತಾನೇ ಇನ್ನೊಬ್ಬರಿಗೆ ಪಾಸ್ ಮಾಡುವ ತನಕ ಇಡೀ ವಿಶ್ವದ ಕಣ್ಣೇ ಆ ಪಾದಗಳು ಹಾಗೂ ಚೆಂಡಿನ ಮೇಲೆಯೇ  ಇರುವಂತೆ,  ಕಾಲವನ್ನೇ ಆ ಕ್ಷಣದಲ್ಲಿ ಹಿಡಿದಿಟ್ಟುಕೊಳ್ಳುವ  ಕಾವ್ಯಕ್ಕೆ ಮಾತ್ರವಿರುವ ಶಕ್ತಿಯನ್ನು ಕ್ರೀಡೆಗೆ ತಂದ ಮಹಾ ಮಾಂತ್ರಿಕ ಮರಡೋನ.

ಆ ವಿಶ್ವಕಪ್ ನಲ್ಲಿ ಮರಡೋನಾ  ಗಳಿಸಿದ ಗೋಲು ಕೇವಲ  5.  ಆದರೆ ಗಳಿಸಿದ ಅಭಿಮಾನಿಗಳು ಕೋಟಿ ಕೋಟಿ. ‘ಫೈನಲ್ ಬಿಫೋರ್ ಫೈನಲ್’   ಎಂಬ ಮಾತಿದೆ. ಆ ವಿಶ್ವಕಪ್ ನ  ಅರ್ಜೆಂಟೀನಾ ಹಾಗೂ ಇಂಗ್ಲೆಂಡ್ ತಂಡದ ನಡುವಿನ ಪಂದ್ಯ ಅದೇ ರೀತಿಯದು . ಆ ಪಂದ್ಯಕ್ಕೊಂದು ಐತಿಹಾಸಿಕ ಮಹತ್ವವೂ ಇತ್ತು. ನಾಲ್ಕು ವರ್ಷಗಳ ಹಿಂದೆ ಅರ್ಜೆಂಟೀನಾ ಹಾಗೂ ಯುನೈಟೆಡ್ ಕಿಂಗಡಂ  ನಡುವೆ ನಡೆದಿದ್ದ ಫಾಕ್ ಲೆಂಡ್  ಯುದ್ಧದ ಕಹಿ ನೆನಪು ಹಾಗೂ ದ್ವೇಷ  ಇನ್ನೂ ಹೊಗೆಯಾಡುತ್ತಿತ್ತು . ಎರಡೂ ತಂಡಕ್ಕೆ ಇದು ಕೇವಲ ಫುಟಬಾಲ್ ಪಂದ್ಯವಾಗಿರಲಿಲ್ಲ.

ಮರಡೋನಾ ಸುತ್ತ ಭದ್ರಕೋಟೆಯಂತೆ ರಕ್ಷಣಾ ಆಟ ಯೋಜಿಸಲಾಗಿತ್ತು. ಆದರೆ ಎಲ್ಲವನ್ನು ದಾಟಿ 51ನೇ ನಿಮಿಷದಲ್ಲಿ ಗೋಲಿನ ಆವರಣದಲ್ಲಿ ಚೆಂಡು  ಮರಡೋನಾನಿಂದ ಗೋಲಿನ ನೆಟ್ಟಿನೊಳಗೆ ಬೀಳುತ್ತದೆ. ಇಡೀ ಇಂಗ್ಲೆಂಡ್ ತಂಡ ಅದು ಮರಡೋನಾ  ಕೈಯಿಂದ ಪುಟಿದ ಚೆಂಡು ಎಂದು ಪ್ರತಿಭಟಿಸುತ್ತದೆ . ಆದರೆ ರೆಫರಿ ಗೋಲ್ ಎಂದು  ತೀರ್ಪು ನೀಡುತ್ತಾನೆ. ಇಂದಿಗೂ  ಇಂಗ್ಲೆಂಡ್ ಮರಡೋನಾನನ್ನು ಈ ಗೋಲಿನಿಂದಾಗಿ  ಮೋಸಗಾರನೆಂದೇ ಕರೆಯುತ್ತದೆ. ಆದರೆ ಮರಡೋನಾ ಅದನ್ನು 'ದೇವರ ಹಸ್ತ' ಎಂದೇ ಕರೆಯುತ್ತಾನೆ.

ಇದರ ಬಿಸಿ ಆರುವ ನಾಲ್ಕೇ ನಿಮಿಷದಲ್ಲಿ ಮರಡೋನ ಸಿಡಿಸಿದ ಮತ್ತೊಂದು ಗೋಲನ್ನು ಶತಮಾನದ ಗೋಲೆಂದು  ಕರೆಯಲಾಗುತ್ತದೆ. ಅದನ್ನು ಪದಗಳಲ್ಲಿ  ಹೇಳಲು ಕಷ್ಟವೇ .  'ಮರಡೋನಾ ಗೋಲ್ ಆಫ್ ದಿ  ಸೆಂಚುರಿ'  ಎಂದು ಹುಡುಕಿದರೆ, ಯೂಟ್ಯೂಬ್ ನಲ್ಲಿ ಈ ಗೋಲನ್ನು, ಇಂಗ್ಲೆಂಡನ ಗೋಳನ್ನು ನೋಡಬಹುದು. ಮುಂದೆ ಇದೇ ಮರಡೋನಾ 1994ರ ವಿಶ್ವಕಪ್ ನಲ್ಲಿ ನಿಷೇಧಿತ ಮದ್ದು ಸೇವಿಸಿ ಸಿಕ್ಕಿಬಿದ್ದು ನಿಷೇದಕ್ಕೆ ಒಳಗಾಗಿ ಖ್ಯಾತಿ ಶಾಶ್ವತವಲ್ಲ ಎಂಬುದನ್ನು ನಿರೂಪಿಸಿದ. 1990ರ ವಿಶ್ವಕಪ್ ಜರ್ಮನಿ ಗೆದ್ದರೂ ಗಮನ ಸೆಳೆದದ್ದು ಕ್ಯಾಮರೂನ್ ಎಂಬ ಸಣ್ಣ ಆಫ್ರಿಕಾದ ದೇಶ.  ಆ ತಂಡದ ರೋಜರ್ ಮಿಲ್ಲರ್ 38ರ ಹರೆಯದಲ್ಲೂ ಆ ಸರಣಿಯ ಕಣ್ಮಣಿಯಾಗಿ ಮೆರೆದ.

ಇನ್ನೂ 1994ರ ವಿಶ್ವಕಪ್ ನ ಮರೆಯದ ಘಟನೆ ಎಂದರೆ  ಇಟಲಿಯ ಬ್ಯಾಜಿಯೋ ಫೈನಲ್ ಪಂದ್ಯದ ಪೆನಾಲ್ಟಿ ಶೂಟ್ ಔಟ್ ನಲ್ಲಿ ಪೆನಾಲ್ಟಿ ಕಿಕ್ ತಪ್ಪಿಸಿದ್ದು. ಇಡೀ ಪಂದ್ಯವು ಬ್ಯಾಜಿಯೋನ ಆ ಕಿಕ್ ಮೇಲೆ ಅವಲಂಬಿತವಾಗಿತ್ತು. ಇಡೀ ವಿಶ್ವದ ಕಣ್ಣು ಅವನ ಮೇಲಿತ್ತು. ಅಲ್ಲಿಯವರೆಗೂ ಇಟಲಿಯನ್ನು ಫೈನಲ್ ವರೆಗೂ ತಂದು ವೀರನಾಯಕನಾಗಿದ್ದ ಬ್ಯಾಜಿಯೋ ಚೆಂಡನ್ನು ಹೊರಗೆ  ಹೊಡೆಯುವುದರೊಂದಿಗೆ ಖಳನಾಯಕನೂ, ದುರಂತ ನಾಯಕನೂ ಆಗುತ್ತಾನೆ. ಚೆಂಡು ಸುಮಾರು ಏಳೆಂಟು ಅಡಿ ಗೋಲ್ ಪಟ್ಟಿಯಿಂದ ಮೇಲೆ ಹೋಗುವಷ್ಟು  ಕೆಟ್ಟ ಹೊಡೆತ ಅದಾಗಿತ್ತು. ನಾಲ್ಕು ವರ್ಷ ಇದೇ  ಕೊರಗಿನಲ್ಲಿ ಬದುಕಿದ ಬ್ಯಾಜಿಯೊಗೆ ಮತ್ತೆ 1998ರ ಕ್ವಾಟರ್ ಫೈನಲ್ ನಲ್ಲಿ ಮತ್ತೆ ನಿರ್ಣಾಯಕವಾದ ಪೆನಾಲ್ಟಿ ಕಿಕ್ ಮಾಡುವ ಅವಕಾಶ ದೊರೆಯುತ್ತದೆ.  ನೆನಪಿರಲಿ ಪೆನಾಲ್ಟಿ ಕಿಕ್ ತೆಗೆದುಕೊಳ್ಳಲು  ಯಾವ ಆಟಗಾರನಿಗೂ ನಿಯೋಜಿಸುವುದಿಲ್ಲ, ಆಟದ ಅತಿ ಒತ್ತಡದ ಭಾಗವಾಗಿರುವುದರಿಂದ ಸ್ವತಃ: ಆಟಗಾರನೇ ತಾನು ಕಿಕ್ ತೆಗೆದುಕೊಳ್ಳುತ್ತೇನೆ ಎಂದು ಮುಂದೆ ಬರಬೇಕಾಗುತ್ತದೆ. ಬೇರೆ ಯಾರಾದರೂ ಆಗಿದ್ದರೆ ಮುಂದೆ ಬರುತ್ತಿರಲಿಲ್ಲವೇನೋ . ನಾಲ್ಕು ವರ್ಷದ ಹಿಂದಿನ ಎಲ್ಲಾ ಕಹಿಯನ್ನು ಮರೆತು ಬ್ಯಾಜಿಯೋ ಕಿಕ್ ಮಾಡಲು ಒಪ್ಪಿ  ಮುಂದೆ ಬರುತ್ತಾನೆ, ಚೆಂಡನ್ನು  ಗುರಿ ತಲುಪಿಸುತ್ತಾನೆ. ಆದರೂ ಇಟಲಿ ಸೋಲುತ್ತದೆ. ಆದರೆ ಬ್ಯಾಜಿಯೋ ಮಣಿಯದ ಆಂತರಿಕ  ಶಕ್ತಿ, ವಿಶ್ವಾಸದ ಪ್ರತೀಕವಾಗಿ ನಿಲ್ಲುತ್ತಾನೆ. ತನ್ನ ಆತ್ಮ ಕತೆಯಲ್ಲಿ 'ಕೇವಲ ಪ್ರಯತ್ನಿಸುವ ಧೈರ್ಯ ತೋರುವವನು ಮಾತ್ರ ಸೋಲಬಲ್ಲ' ಎನ್ನುತ್ತಾ ಗೆಲುವಿನ ನಗೆ ಬೀರುತ್ತಾನೆ.

ಇದಕ್ಕಿಂತ  ದೊಡ್ಡ ದುರಂತವೆಂದರೆ , ಕೊಲಂಬಿಯಾ ಹಾಗೂ ಅಮೆರಿಕಾ  ನಡುವಿನ  ಪಂದ್ಯದಲ್ಲಿ ಗೋಲನ್ನು ತಡೆಯುವ ಭರದಲ್ಲಿ ತನ್ನದೇ ಗೋಲಿಗೆ ಹೊಡೆದ ರಕ್ಷಣಾ ಆಟಗಾರ ಎಸ್ಕೊಬಾರ್ ನ ತಪ್ಪಿನಿಂದ ಕೊಲಂಬಿಯಾ  1994ರ ಟೊರ್ನಿಯಿಂದ ಹೊರ ಹೋಗಬೇಕಾಯಿತು. ಈ ಕೋಪಕ್ಕೆ ಅಪರಿಚಿತನೊಬ್ಬ ಎಸ್ಕೊಬಾರ್ ನನ್ನು ಗುಂಡಿಕ್ಕಿ ಕೊಂದದ್ದು ಕ್ರೀಡಾ  ಲೋಕದ ಕರಾಳ ಅಧ್ಯಾಯಗಳಲ್ಲಿ ಒಂದು. ತನ್ನ ಗುಣದಿಂದ 'ಜೆ೦ಟಲ್ ಮೆನ್' ಎಂದೇ ಕರೆಸಿಕೊಳ್ಳುತ್ತಿದ್ದ ಎಸ್ಕೊಬಾರ್ ಎದೆಯಲ್ಲಿ ಸಿಕ್ಕಿದ್ದು  8 ಗುಂಡುಗಳು.   

2002ರಲ್ಲಿ ಮೊತ್ತ ಮೊದಲ ಬಾರಿಗೆ ಜಪಾನ್ ಹಾಗೂ  ದಕ್ಷಿಣ ಕೊರಿಯಾದ  ಮೂಲಕ ಏಷ್ಯಾ ಖಂಡಕ್ಕೆ ವಿಶ್ವಕಪ್  ಆತಿಥ್ಯದ ಭಾಗ್ಯ ದೊರೆಯುತ್ತದೆ . ಮೂರೂ ಬಾರಿ ಪೆನಾಲ್ಟಿ ಶೂಟ್ ಔಟ್ ನಲ್ಲೇ ಹೊರ ನಡೆದಿದ್ದ ಇಟಲಿ 2006ರಲ್ಲಿ ಅದೇ ಪೆನಾಲ್ಟಿ ಶೂಟ್ ಔಟ್ ನ ಮೂಲಕ ವಿಶ್ವ ಕಪ್ ಗೆದ್ದು ಕಾಲ ಚಕ್ರದ ಸಮತೋಲನದ ಸವಿಯ ಭಾಗದ  ರುಚಿ ಪಡೆಯುತ್ತದೆ. ಇದೇ  ಫೈನಲ್ ನಲ್ಲಿ ಫ್ರಾನ್ಸ್ ನ ದಂತಕತೆ ಜಿನಿಡೇನ್ ಜಿಡೇನ್, ಇಟಲಿಯ ರಕ್ಷಣಾ ಆಟಗಾರನೊಬ್ಬನನ್ನು ತಲೆಯಿಂದ ಗುದ್ದಿ ಬೀಳಿಸಿ ರೆಡ್ ಕಾರ್ಡ್ ಪಡದು  ಹೊರಗೆ ಹೋಗುತ್ತಾನೆ. ಶೂಟ್ ಔಟ್ ನಲ್ಲಿ  ಫ್ರಾನ್ಸ್ ಸೋಲುತ್ತದೆ. ಜಿಡೇನ್ ತಾನು ಮಾತ್ರ ಯಾವುದೇ ಕಾರಣಕ್ಕೂ ಕ್ಷಮೆ ಕೇಳುವುದಿಲ್ಲ ಎಂದು ಹೇಳಿ ಅದಕ್ಕಿಂತ ಸಾಯುವುದೇ ಲೇಸು ಎನ್ನುತ್ತಾನೆ. ಇಡೀ ಫ್ರಾನ್ಸ್ ಅವನ ಬೆಂಬಲಕ್ಕೆ ನಿಲ್ಲುತ್ತದೆ. ಅದು ಅವನ ಕೊನೆಯ ಅಂತರರಾಷ್ಟ್ರೀಯ ಪಂದ್ಯವೂ ಆಗುತ್ತದೆ. 

ದಕ್ಷಿಣ ಆಫ್ರಿಕಾದಲ್ಲಿ ನಡೆದ 2010 ವಿಶ್ವಕಪ್ ಸ್ಪೇನ್ ಗೆಲ್ಲುತ್ತದೆ. ಯುರೋಪ್ ನ ಸಾಂಪ್ರದಾಯಿಕ ಆಟಕ್ಕೆ ಸ್ಪೇನ್ ಹೆಸರುವಾಸಿ. ಆದರೆ ಫುಟಬಾಲ್ ಗಿಂತ ಹೆಚ್ಚು ಸುದ್ದಿ ಮಾಡಿದ್ದು ಪ್ರತಿ ಪಂದ್ಯದ ಗೆಲುವು ಯಾರದೆಂದು ಸರಿಯಾಗಿ ಮೊದಲೇ ಹೇಳುತ್ತಿದ್ದ ಪೌಲ್ ಎಂಬ ಆಕ್ಟೊಪಸ್.  ಈ ವಿಶ್ವಕಪ್ಪಿಗಾಗಿ ಶಕೀರಾ ಹಾಡಿದ 'ವಾಕ ವಾಕ' ಹಾಡು 186 ಕೋಟಿ ವೀಕ್ಷಣೆಗೆ ಒಳಗಾಗಿದೆ.

ಫುಟಬಾಲಿನ ತವರೆಂದೇ ಕರೆಸಿಕೊಳ್ಳುವ ಬ್ರೆಜಿಲ್ ನಲ್ಲಿ ನಡೆದ  2004ರ ವಿಶ್ವಕಪ್ ಜರ್ಮನಿಯ ಪಾಲಾಯಿತು. ಸೆಮಿಫೈನಲ್ ನಲ್ಲಿ 7-1ರಿಂದ  ಸೋತ ಬ್ರೆಜಿಲ್ ಪಾಲಿಗೆ ಆ ಪಂದ್ಯ ರಾಷ್ಟ್ರೀಯ  ಶೋಕವಾಗಿ ಪರಿಣಮಿಸಿತು.   ಅರ್ಜೆಂಟೀನಾಕ್ಕೆ ಮತ್ತೆ ವಿಶ್ವಕಪ್ ಗೆಲ್ಲಿಸಿಕೊಡುವ ಮೆಸ್ಸಿಯ ಕನಸು ನನಸಾಗಲಿಲ್ಲ.

ಫುಟಬಾಲ್ ನಲ್ಲಿ ತನ್ನದೇ ಆದ ವರ್ಚಸ್ಸು ಹೊಂದಿರುವ ರಷ್ಯಾದಲ್ಲಿ ನಡೆಯುವ ಈ ಬಾರಿಯ ವಿಶ್ವಕಪ್  ತೀವ್ರ ಕುತೂಹಲ ಕೆರಳಿಸಿದೆ. ಯಾರು ಗೆಲ್ಲುತ್ತಾರೋ? ಯಾರು ಗೆದ್ದು ಸೋಲುತ್ತಾರೋ? ಇನ್ನಾವ ಆಟಗಾರ ಕ್ರೀಡಾಪ್ರೇಮಿಗಳ ಕಣ್ಮಣಿಯಾಗಿ ಮೆರೆಯುತ್ತಾನೋ? ಇನ್ನಾವ ವೇದಾಂತದ   ಪಾಠ ನಮಗೆ ಸಿಗುತ್ತದೋ? ಒಂದು ತಿಂಗಳಲ್ಲಿ ಉತ್ತರ ಸಿಗುತ್ತದೆ. ಭಾರತ ಸ್ಪರ್ಧೆಯಲ್ಲಿ ಇಲ್ಲದಿರುವುದರಿಂದ 'ಲೇಟ್ ದ ಬೆಸ್ಟ್ ಟೀ ಮ್ ವಿನ್ ' ಎನ್ನುತ್ತಾ ಆಸ್ವಾದಿಸುವುದಷ್ಟೇ ನಮ್ಮ ಕೆಲಸ