Sunday, 30 July 2017

ನನ್ನ ಮೆಚ್ಚಿನ ಫಾ.ಚಸರಾ ಹಾಡುಗಳು - ಭಾಗ 12 - ಚಸರಾರವರ ಗೀತೆಗಳಲ್ಲಿನ ನ್ಯಾಯ, ಬಡವರು, ದಲಿತರು, ನೊ೦ದವರ ಪರವಾದ ದನಿ

ಒಬ್ಬ ಸ೦ಗೀತಗಾರ, ಕಲಾವಿದ, ಬರಹಗಾರ ಲೋಕದಿ೦ದ ಕಣ್ಮರೆಯಾದಾಗ, ಅವರದೇ ಒ೦ದು ರಚನೆ ಅವರ ವಿದಾಯವನ್ನು ನೆನಪಿಸುತ್ತಿರುತ್ತದೆ. ಕೆಲವೊಮ್ಮೆ ಅಭಿಮಾನಿಗಳು, ಗೆಳೆಯರು ಅ೦ತಹ ಒ೦ದು ಕಲಾಕೃತಿಯನ್ನು, ರಚನೆಯನ್ನು ಆ ವಿದಾಯದೊ೦ದಿಗೆ ಅ೦ಟಿಸಿಬಿಡುತ್ತಾರೆ.
ಮು೦ದೆ ಅದೇ ಒ೦ದು ನೆನಪಿನ ಪ್ರತೀಕವಾಗಿ ಉಳಿದುಬಿಡುತ್ತದೆ.

ಚಿ.ಉದಯಶಂಕರ್ ರವರು ನಿಧನರಾದಾಗ “ಆಡಿಸಿದಾತ ಬೇಸರ ಮೂಡಿ ಆಟ ಮುಗಿಸಿದ” ಹಾಡು ಅವರ ನೆನಪಿಗೆ ಬಳಕೆಯಾಗುತ್ತಿತ್ತು. ಮೈಸೂರು ಅನ೦ತ ಸ್ವಾಮಿಯವರೊ೦ದಿಗೆ "ಎದೆ ತು೦ಬಿ ಹಾಡಿದೆನು" ಸಿ.ಅಶ್ವತ್ದರ ಜೊತೆ "ಕಾಣದ ಕಡಲಿಗೆ" ಹಾಡುಗಳು ಹೀಗೆ ಜೊತೆಗೂಡಿವೆ.

ಚಸರಾರವರ ಇತರ ಅಸ೦ಖ್ಯ ಹಾಡುಗಳಿದ್ದರೂ, ಅವರ ಅಭಿಮಾನಿಗಳು ಇತೀಚೆಗೆ ಅವರನ್ನು ನೆನಪಿಸಿಕೊಳ್ಳುವುದು ಸ್ಥಾಯಿ ಧ್ವನಿಸುರಳಿಯ" "ಇಲ್ಲಿ ಸತ್ಯವು ಮಲಗಿದೆ" ಎ೦ಬ ಹಾಡಿನಿ೦ದ ಎ೦ಬ೦ತಾಗಿದೆ. ಅವರ ವಿದಾಯದ ಪಯಣದ ಆ ಎರಡು ದಿನಗಳಲ್ಲೂ ಎಲ್ಲರಲ್ಲಿ ಇದೇ ಹಾಡಿನ ಗುನುಗು.

ಅ೦ದು ಅಭಿಮಾನಿಗಳು ಮನದಲ್ಲಿ, ತುಟಿಯಲ್ಲಿ ಆ ಹಾಡೇ ಏಕೆ ನೆನಪಾಯಿತು ಎ೦ದು ಬಿಡಿಸಿ ಹೇಳಬೇಕಾಗಿಲ್ಲ. ಆದರೆ ಆ ಹಾಡು ಅವರ ಎಷ್ಟೋ ಹಾಡುಗಳ ಒಟ್ಟು ರೂಪವೇನೋ ಎ೦ಬ೦ತಿತ್ತು.

ಈ ಅ೦ಕಣದಲ್ಲಿ ಹಲವಾರು ಬಾರಿ ಹೇಳಿರುವ೦ತೆ ಫಾ.ಚಸರಾ ಕನ್ನಡ ಕ್ರಿಸ್ತ ಗೀತಾ ಸಾಹಿತ್ಯಕ್ಕೆ ತ೦ದ ಪದ ಸ೦ಪತ್ತು ಅನನ್ಯ ಹಾಗೂ ವಿಭಿನ್ನವಾದದ್ದು. ಆದರೆ ಆ ಆಕರ್ಷ ಸಾಹಿತ್ಯಕ್ಕಿ೦ತ ಮಿಗಿಲಾದದ್ದು ಎ೦ದರೆ ಅವರ ಹಾಡುಗಳಲ್ಲಿ ಇರುತ್ತಿದ್ದ ನ್ಯಾಯ, ಸತ್ಯದ ಪರವಾಗಿ ದನಿ, ಬಡವ ನೊ೦ದ, ದಲಿತನ, ಬೆವರಿಳಿಸುವ ಕಾರ್ಮಿಕನೆಡೆಗಿನ ಅದು ಕ೦ಪದ, ಸಾ೦ತ್ವನದ ದನಿ. ನಿಜವಾದ ಅರ್ಥದಲ್ಲಿ ಅದು ಕ್ರಿಸ್ತ ದನಿ, ಕ್ರಿಸ್ತ ಕಾಳಜಿ, ಕ್ರೈಸ್ತ ಕರುಣೆ, ಅನುಕ೦ಪ.


"ಸ್ಪ೦ದನ" ಧ್ವನಿಸುರಳಿಯಿ೦ದಿಡಿದು ಇತೀಚಿನ ಹಾಡುಗಳ ತನಕ ಆ ನ್ಯಾಯ ಸತ್ಯ ಪರವಾದ ದನಿಯಿದೆ . ಕನ್ನಡ ಕ್ರಿಸ್ತ ಸ೦ಗೀತದ ಸಾಹಿತ್ಯದಲ್ಲಿ ಈ ಭಾವಗಳನ್ನು ಇಷ್ಟು ವ್ಯಾಪಕವಾಗಿ ಬಳಸಿಕೊ೦ಡ ಮತ್ತೊಬ್ಬ ರಚನಾಕಾರ ಇಲ್ಲವೇನೋ. ಕ್ರಿಸ್ತನ ವ್ಯಕ್ತಿತ್ವದ ಅತ್ಯ೦ತ ಪ್ರಮುಖವಾದ ಈ ಮಾನವೀಯತೆಯ ಆಯಾಮವನ್ನು ತೆರದಿಟ್ಟವರು ಫಾ.ಚಸರಾ.

 "ಓ೦ ಘಂಟಾ ನಾದ೦ . . . ಪ್ರೀತಿಯ ಸ್ವಾಮಿಗೆ" ಹಾಡಿನ ಎರಡನೆಯ ಇಡೀ ಚರಣ ನ್ಯಾಯದ ಧ್ವಜವನ್ನು ಹಿಡಿದೇ ಸಾಗುತ್ತದೆ. ಮು೦ದಿನ "ಹೃದಯ ಮಿಡಿದು" ಹಾಡ೦ತೂ ಸ೦ಪೂರ್ಣ ಬಡತನ, ಶೋಷಣೆ, ಹಸಿವಿನ ಅನುಕ೦ಪಕ್ಕೆ ಮೀಸಲು.

ಅದೇ  ಧ್ವನಿಸುರುಳಿಯ ನಿನ್ನ ದನಿಯು ನನ್ನ ಕರೆದಿದೆಹಾಡಿನಲ್ಲಿ ಇನ್ನಷ್ಟು ಮುಂದೆ ಹೋಗಿದೀನ ದಲಿತರನ್ನು ಕರೆದು ನಿನ್ನ ತ್ಯಾಗ ಸೇವೆ ಮಾಡಿ, ಅವರ ಜೊತೆಗೆ ನಾನು ಸಾಗುವೆಎಂಬ ಸಂಕಲ್ಪವಿದೆ. ಇದೇ ಒಂದು ಇಚ್ಛೆ, ಪ್ರಾರ್ಥನೆಯನ್ನುಸ್ಪೂರ್ತಿಯಾಗಲಿ ಕ್ರಿಸ್ತಹಾಡಿನಲ್ಲಿ ಸಹ ಕಾಣಬಹುದು. ಇಲ್ಲಿ ಕೇವಲ ಪ್ರಾರ್ಥನೆಯಲ್ಲ, ’ತುಳಿತದಿಂದ ನರಳುವ ಜನರಿಗೆ ನನ್ನ ದನಿಯು ಸ್ಪೂರ್ತಿಯಾಗುವಂತೆ ಮಾಡುಎಂಬ ಸೇವೆಯ ಇಂಗಿತವಿದೆ.

ಬೆಳಕು ಹರಿಯಿತು ಭುವಿಯ ಕಡೆಗೆಹಾಡಿನಲ್ಲಿ ಭೂಮಿಗೆ ದೇವರು ಬಂದರು ಎಂಬುದಕ್ಕಿಂತನೊಂದ ಜನರಿಗೆ ಶಾಂತಿ ತಂದರುಎಂಬುದೇ ಸಂತೋಷಕ್ಕೆ ಹೆಚ್ಚು ಕಾರಣವಾಗುತ್ತದೆ. ’ಸ್ಥಾಯಿನಡೆಯುವ ಹಾದಿಯು ನಿಂತಲ್ಲೇ ನಿಲ್ಲಲುಕೂಡ ಅಸಹಾಯಕತೆಯ ಜೀವಕ್ಕೆ ಭಾವಕ್ಕೆ ಕ್ರಿಸ್ತನೇ ಸಾಂತ್ವನ ಎನ್ನುವ ಹಾಡು. ಇಲ್ಲಿ ಭಾರ, ಭಯ, ಕತ್ತಲೆ, ದಾಹ, ಏಕಾಂತ, ಖಾಲಿತನ ಇವು ಒಂದು ರೀತಿ ಶೋಷಿತ ಶಕ್ತಿಯಾಗಿ ಕಾಡುತ್ತಿದೆ. ಇದಕ್ಕೆಲ್ಲಾ ಕ್ರಿಸ್ತನ ಸಾಂತ್ವನವನ್ನು ಬೇಡುವ ಸುಂದರ ಗೀತೆ.  ’ಮುಂಜಾನೆ ಮುಸುಕಲ್ಲಿ ಬಂಗಾರ ತೆರೆಗಳಹಾಡಿನಲ್ಲಿ ಮುಂಜಾನೆಯ ಮುಸುಕನ್ನು ಸೌಂದರ್ಯವಾಗಿ ಬಣ್ಣಿಸಿದರೆ, ಇಲ್ಲಿ ದಾರಿಗೆ ಅಡ್ಡವಾಗುವ ಮುಸುಕಿನ ರೂಪಕವಾಗಿ ಬಳಸುತ್ತಾರೆ.

’ಇಲ್ಲಿ ಸತ್ಯವು ಮಲಗಿದೆ’ ಹಾಡಂತೂ ವಿಷಾದದ ಛಾಯೆಯಲ್ಲಿ ಮುಳುಗಿಸುವ ಗೀತೆ. ಸತ್ಯ, ನ್ಯಾಯವು ಏಳಲಾರದೆ ಮಲಗಿದೆ ಎಂಬ ಹತಾಶ ಭಾವವೇ ಇಲ್ಲಿ ಸ್ಠಾಯಿಭಾವ. ತನ್ನಷ್ಟಕ್ಕೆ ತಾನೇ ಏಳಲಾಗದ ಸ್ಥಿತಿಯಲ್ಲಿ, ಜಗತ್ತಿನ ಯಾವ ಶಕ್ತಿಯೂ ಸಹಾಯಕ್ಕೆ ಬರಲಾರದು ಎಂಬ ದು:ಖ ಇಲ್ಲಿನ ಸಾಹಿತ್ಯದಲ್ಲಿದೆ. ಕೊನೆಗೆ ಕ್ರಿಸ್ತ ಮಾತ್ರ ಸತ್ಯವನ್ನು ಸ್ಥಾಪಿಸಬಲ್ಲ, ಸತ್ಯಕ್ಕೆ ಸಾಕ್ಷಿಯಾಗಬಲ್ಲ ಎಂಬ ಆಶಾಭಾವನೆಯೊಂದಿಗೆ ಹಾಡು ಮುಗಿಯುತ್ತದೆ.  ’ಚೇತನ’ದಲ್ಲಿ ಇದು ತಪಸ್ಸುಕಾಲ ಹಾಡುಗಳ ಸಾಲಿನಲ್ಲಿರುವುದರಿಂದ ಇದು ಕ್ರಿಸ್ತನ ಜೀವನಕ್ಕೂ ಅನ್ವಯವಾಗಬಹುದೇನೋ.

ಸ್ಪರ್ಶಿತ ಧ್ವನಿಸುರುಳಿಯ  ’ಬಾಳ ಕಡಲಿಗೆ ಅಲಗಳು ನೂರು’ ಹಾಡು ಸಂಪೂರ್ಣ ನೊಂದವರ ಪರವಾದ ದನಿಯೇ. ಇಲ್ಲಿ ನೋವಿನ ತೀವ್ರತೆ ಎಷ್ಟೆಂದರೆ ’ಅಳುವ ಕಣ್ಣಲ್ಲಿ ಕೆಂಪು ಕಣ್ಣೀರು ಬರುವಷ್ಟು. ’ಸ್ಪೂರ್ತಿಯಾಗಲಿ ಕ್ರಿಸ್ತ’ ದಂತೆ ಇಲ್ಲಿ ಕೂಡ ಬಡವರ ಬೆವರನ್ನು ಕೊನೆಗೊಳಿಸು ಎಂಬ ಪ್ರಾರ್ಥನೆ ಮೊದಲು ಬಂದರೆ, ಕೊನೆಗೆ ಬೆವರನ್ನು ಒರೆಸಲು ಸೇವೆಗೆ ಅಣಿಗೊಳಿಸು ಎಂಬ ಬದ್ದತೆ ಇದೆ.
ಅಷ್ಟು ಮಾತ್ರವಲ್ಲದೆ ತೀರ ಧಾರ್ಮಿಕ ಸ್ಪರ್ಶ ಇರಬೇಕಾದ ಅರ್ಪಣಾ ಗೀತೆಗಳಲ್ಲೂ ಫಾ. ಚಸರಾ ಈ ನ್ಯಾಯ, ಬಡವನ ಬೆವರುಗಳ ಬಗ್ಗೆ ಬರೆಯುತ್ತಾರೆ.  ’ನೀನಿರುವೆ ಮನದಲ್ಲಿ ತಲಸ್ಪರ್ಶ ಬದುಕಲ್ಲಿ’ ಇದಕ್ಕೊಂದು ಉತ್ತಮ ಉದಾಹರಣೆ.

’ಕರುಣಾಳು ಕ್ರಿಸ್ತನೆ ಬರಬಾರದೆ  ಹೃದಯದ ಗುಡಿಯಲ್ಲಿ ಇರಬಾರದೇ’ ಹಾಡಲ್ಲಿ ಮತ್ತೆ ಜನರ ಕಷ್ಟ, ಕಣ್ಣೀರು, ಸೇವೆಗೆ ಒಂದಷ್ಟು ಸಾಲುಗಳು ಮೀಸಲಾಗಿವೆ.
ಪ್ರೀತಿ, ಕರುಣೆ, ಅನುಕಂಪ, ಮಾನವೀಯತೆ, ಸೇವೆಯೇ ಕ್ರಿಸ್ತನ ನಿಜವಾದ ರೂಪ ಎಂದು ನಮ್ಮ ಗ್ರಂಥಗಳು ಹೇಳುತ್ತಲೇ ಬಂದಿವೆ. ಈ ನಂಬಿಕೆಯಲ್ಲೇ ಮುರಿದ ಮನಸ್ಸುಗಳನ್ನು ಕಟ್ಟಲು ಬಾ ಎನ್ನುವ ಹಾಡು ’ಸ್ವಾಮಿ ನಿನ್ನ ರೂಪ ನೀಡೆನಗೆ’. ಅತ್ಯಂತ ಪರಿಣಾಮಕಾರಿಯಾದ ಗೀತೆಯದು.
ಹೀಗೆ ನೋಡುತ್ತಾ ಸಾಗಿದರೆ, ಪ್ರತಿ ಹಾಡಿನಲ್ಲೂ ಈ ಕಾಳಜಿಯನ್ನು ಕಾಣಬಹುದು. ಈ ನಿಟ್ಟಿನಲ್ಲಿ ಫಾ. ಚಸರಾರವರ ಗೀತ ಸಾಹಿತ್ಯ ಕ್ರಾಂತಿಕಾರಿಯಾಗಿ ಕಾಣುತ್ತದೆ. ಎಲ್ಲಾ ಹಾಡುಗಳ ಬಗ್ಗೆ ಇಂತಿಷ್ಟೆ ಹೇಳುತಾ ಸಾಗಬೇಕಾಗಿರುವುದು ಈ ಬರಹದ ಮಿತಿಯಾಗಿದೆ. ಒಂದೊಂದು ಹಾಡು ಸವಿಸ್ತಾರ ಬರಹ, ಅಧ್ಯಯನಕ್ಕೆ ವೇದಿಕೆಯಾಗಬಲ್ಲದು.


ಚಸರಾರವರ ಇನ್ನೂ ಅನೇಕ ಗೀತೆಗಳ ಬಗ್ಗೆ ಬರೆಯಬಹುದು. ’ಮುಂಜಾನೆ ಮುಸುಕಲಿ’ ’ಏಕೆ ಈ ಶೋಧನೆ’ ನೀನಿರುವೆ ಮನದಲ್ಲಿ’ ’ಮನದಾಳದಿಂದ....’ ಈ ರೀತಿಯ ಅನೇಕ ಅತ್ಯಂತ ಜನಪ್ರಿಯ ಗೀತೆಗಳ ಬಗ್ಗೆ ಈ ಅಂಕಣದಲ್ಲಿ ಬರೆದಿಲ್ಲ. ಇವೆಲ್ಲವೂ ಎಲ್ಲರ ಅಚ್ಚುಮೆಚ್ಚಿನ ಗೀತೆಗಳು. ಅದರಲ್ಲೂ’ಸುಪ್ತ’ ’ಸಿಟ್ಟಾಗಬ್ಯಾಡ ಸ್ಬಾಮಿ’ ಯಂಥ ಧ್ವನಿಸುರುಳಿಗಳ ಬಗ್ಗೆ ಇಡಿಯಾಗಿ ಬರೆಯಬಹುದು. ಫಾ.ಚಸರಾ ಹಾಗೂ ಸಿ.ಡೇವಿಡ್ ಕಾಂಬಿನೇಷನ್ ನಿಂದ ಬಂದ ಹಾಡುಗಳ ಬಗ್ಗೆ ಬರೆಯ ಹೊರಟರೆ ಅದೇ ಒಂದು ಸರಣಿಯಾಗಬಹುದೇನೋ. ಮುಂದೆ ಎಂದಾದರೂ ಬರೆಯಬಹುದು.

ಈ ನಡುವೆ ಈ ಅಂಕಣದಲ್ಲಿ ನನ್ನಿಂದ ಬಿಟ್ಟು ಹೋದ ಇತರ ಗೀತೆಗಳ ಬಗ್ಗೆ ನಮ್ಮ ಕಿರಿಯ ಬರಹಗಾರರು ಬರೆದಾರು. ಅವರಿಗೆ ಆ ಕೆಲಸವನ್ನು ಬಿಟ್ಟು ಈ ಸರಣಿಯನ್ನು ಸದ್ಯಕ್ಕೆ ಮುಗಿಸುತ್ತೇನೆ. ಪ್ರತಿ ತಿಂಗಳು ಬರೆಯಲು ಅನುವು ಮಾಡಿಕೊಟ್ಟಿದಲ್ಲದೆ ಸದಾ ಪ್ರೋತ್ಸಾಹದ ನುಡಿಗಳನಿತ್ತ ರೀಟಾ ರೀನಿಯವರಿಗೆ ನನ್ನ ಧನ್ಯವಾದಗಳು. ಫಾ.ಚಸರಾ, ಸ್ಟೀಫನ್ ದತ್ತ್, ಸಾಧುಕೋಕಿಲ ಹಾಗೂ ಅತ್ತ್ಯುತ್ತಮ ಗಾಯಕರನ್ನೊಳಗೊಂಡ ಈ ಹಾಡುಗಳ ಬಗ್ಗೆ ಬರೆಯುವಾಗ ಒಂದು ರೀತಿಯ ಅಳುಕು ಇದ್ದೇ ಇರುತ್ತದೆ. ಅದೇ ರೀತಿ ಸಾಮಾನ್ಯ ಕೇಳುಗನ ದೃಷ್ಟಿಯಲ್ಲಿ ಹೇಳಬೇಕಾದ ಆಸೆ ಹಾಗೂ ಆತ್ಮವಿಶ್ವಾಸವೂ ಇತ್ತು. ಇದಕ್ಕೆ ಅವಕಾಶವಿತ್ತ ರೀನಿಯವರಿಗೆ ಮತ್ತೆ ಧನ್ಯವಾದಗಳು.

ತಮ್ಮ ಕೊನೆಯ ನಾಲ್ಕು ಐದು ವರ್ಷಗಳಲ್ಲಿ ಫಾ. ಚಸರಾ ತಮ್ಮದೇ ಯಾವುದೇ ಧ್ವನಿಸುರುಳಿಗೆ ಕೈ ಹಾಕಿದಂತೆ ಕಾಣಲಿಲ್ಲ. ಗೀತ ಸಾಹಿತ್ಯವೂ ವಿರಳವಾಯಿತು. “ ಏಕೆ ಹಾಡುಗಳು ಬರುತ್ತಿಲ್ಲ” ಎಂದೊಮ್ಮೆ ನಾವು ಕೇಳಿದಾಗ, “ಈಗ ಸಾಕಷ್ಟು ಯುವ ಪ್ರತಿಭೆಗಳು ಬರೆಯುತಿದ್ದಾರೆ, ಅವರು ಬರೆಯಲಿ. ನಾನು ಪ್ರಾರಂಭಿಸಿದಾಗ ಕೆಲವೇ ಜನ ರಚನಕಾರರು ಇದುದ್ದರಿಂದ ಅನಿವಾರ್ಯವಾಗಿ ಬರಯಬೇಕಾಯಿತು” ಎನ್ನುವ ಉತ್ತರ ಬಂದಿತ್ತು.

ಕನ್ನಡ ಕ್ರೈಸ್ತ ಸಾಹಿತ್ಯ, ಸಂಗೀತ ಹಾಗೂ ಸರ್ವಾಂಗೀಣ ಅಭಿವೃದ್ಧಿಗೆ ತಮ್ಮನ್ನೇ  ತೊಡಗಿಸಿಕೊಂಡ ಫಾ.ಚಸರ ಇದ್ದಿದ್ದರೆ ತಮ್ಮ ಬಗ್ಗೆಯೇ ಈ ರೀತಿಯ ಒಂದು ಅಂಕಣಕ್ಕೆ ಖಂಡಿತವಾಗಿಯೂ ಒಪ್ಪಿಕೊಳ್ಳುತ್ತಿರಲಿಲ್ಲ. ಇಷ್ಟು ಬೇಗ ಅವರ ಬಗ್ಗೆ ಅವರಿಲ್ಲದಿದ್ದಾಗ ಬರಯಬೇಕಾಗಿ ಬಂದದ್ದು ನಮ್ಮೆಲ್ಲರ ದುರಂತವೇ ಸರಿ.





-ಪ್ರಶಾಂತ್ ಇಗ್ನೇಶಿಯಸ್ 

Friday, 30 June 2017

ನನ್ನ ಮೆಚ್ಚಿನ ಫಾ.ಚಸರಾ ಹಾಡುಗಳು - ಭಾಗ 11 - ಕ್ಲಾಸಿಕಲ್ ಗೀತೆಗಳು

ಫಾ.ಚಸರಾರವರ ಗೀತೆಗಳಲ್ಲಿ ಆರಂಭದ ಕ್ಲಾಸಿಕಲ್ ಗೀತೆಗಳದ್ದೇ ಒಂದು ರೀತಿಯ ಮೆರಗು. ಈ ಕ್ಲಾಸಿಕಲ್ಲ್ ಗೀತೆಗಳಿಗೆ ಕನ್ನಡದಲ್ಲಿ ಏನು ಕರೆಯಬೇಕೋ ತಿಳಿಯುತ್ತಿಲ್ಲ. ಚಸರಾರವರ ಪ್ರತಿ ಧ್ವನಿಸುರಳಿಯಲ್ಲೂ ಈ ರೀತಿಯ ಕ್ಲಾಸಿಕಲ್ ಗೀತೆಗಳು ಇರಲೇಬೇಕೇನೋ ಎಂಬಷ್ಟು ನಂಟು.

ಈ ರೀತಿಯ ಗೀತೆಗಳ ಸಾಲೂ ಚಿಕ್ಕದೇನಲ್ಲ. ’ಓಂ ಘಂಟಾನಾದಂ’, ’ಸ್ಪೂರ್ತಿಯಾಗಲಿ ಕ್ರಿಸ್ತ’, ’ಬೆಳಕು ಹರಿಯಿತು’ ’ಜನತೆಯ ಬದುಕಿನ’ ಮುಂತಾದ ಗೀತೆಗಳು, ಒಂದಕ್ಕಿಂತ ಒಂದು ಶ್ರೇಷ್ಟ ಗೀತೆಗಳು ಅವರ ಬತ್ತಳಿಕೆಯಿಂದ ಮೂಡಿ ಬಂದಿದೆ. ಇವು ಜನಪ್ರಿಯ ಗೀತೆಗಳೂ ಹೌದು.

ಎಷ್ಟು ಜನಪ್ರಿಯವೆಂದರೆ ಕಳೆದ 2 ದಶಕಗಳಲ್ಲಿ ಯಾವುದೇ ಗಾನಸ್ಪರ್ಧೆ ನಡೆದರು ಅಲ್ಲಿ ಸುಮಾರು ಗೀತೆಗಳು ಚಸರಾರವರ ಈ ಕ್ಲಾಸಿಕಲ್ ಗೀತೆಗಳೇ ಆಗಿರುತ್ತಿದ್ದವು. ಇನ್ನಾವುದೇ ಕ್ರೈಸ್ತ ಕಾರ್ಯಕ್ರಮಗಳಾಗಲಿ ಅಥವಾ ಕ್ರೈಸ್ತ ಸಂಸ್ಥೆಗಳ ಕಾರ್ಯಕ್ರಮಗಳಲ್ಲೂ ಇವೇ ಗೀತೆಗಳು ಪ್ರಾರ್ಥನಾ ಗೀತೆಗಳಾಗಿರುತ್ತಿದ್ದವು. ಸ್ಪಂದನ ಧ್ವನಿಸುರಳಿಯ ’ಓಂ ಘಂಟಾನಾದಂ’ ಗೀತೆಯಿಂದ ಪ್ರಾರಂಭವಾದ ಈ ಗೀತೆಗಳ ಅನುಬಂಧ ಇತ್ತೀಚಿನ ಧ್ವನಿಸುರಳಿಗಳವರೆಗೂ ಅವಿರತವಾಗಿ ಮುಂದುವರಿದಿತ್ತು. ಈ ಸಂಚಿಕೆಯಲ್ಲಿ ನನ್ನ ಕೆಲವು ಮಚ್ಚಿನ ಗೀತೆಗಳ ಬಗ್ಗೆ ಮೆಲಕು ಹಾಕೋಣ. 

ಸ್ಪಂದನ ಧ್ವನಿಸುರಳಿಯ ’ಓಂ ಘಂಟಾನಾದಂ.. ಪ್ರೀತಿಯ ಸ್ವಾಮಿಗೆ ನೂತನ ಆಲಯ ’ ಫಾ.ಚಸರಾರವರ ಅತ್ತ್ಯುತ್ತಮ ಹಾಡುಗಳಲ್ಲಿ ಒಂದು ಎನ್ನಬಹುದು. ಸಾಹಿತ್ಯ, ಸಂಗೀತ, ವಾದ್ಯ ಸಂಯೋಜನೆ ಎಲ್ಲವೂ ಇಂದಿಗೂ ಇಂದೇ ಬಂದ ಹಾಡೇನೋ ಎಂಬಷ್ಟು ತಾಜಾ. ಸತ್ಯ, ನ್ಯಾಯ, ಶಾಂತಿಯ ಮಂತ್ರಗಳು ಈ ಹಾಡಿನ ಮೂಲ ಬಿಂದು. ’ಸತ್ಯ’ ಎಂಬ ಪದ ಈ ಹಾಡಿನಲ್ಲಿ ೯ ಬಾರಿ ಇಲ್ಲಿ ಬಳಕೆಯಾಗಿದೆ ಎಂಬುದು ಮಾಹಿತಿಗಷ್ಟೆ.

ಇನ್ನೂ ’ಸ್ಪೂರ್ತಿಯಾಗಲಿ ಕ್ರಿಸ್ತ’ದ ಬಗ್ಗೆ ಈಗಾಗಲೇ ವಿಸ್ತೃತವಾಗಿ ಬರೆದಾಗಿದೆ. ಈ ಗೀತೆ ಕೇವಲ ಚಸರಾರವರ ಗೀತೆಗಳಲ್ಲಿ ಮಾತ್ರವಲ್ಲದೆ ಕನ್ನಡ ಕ್ರೈಸ್ತ ಭಕ್ತಿ ಗೀತೆಗಳಲ್ಲಿ ಅತ್ತ್ಯುತ್ತಮ ಗೀತೆಗಳಲ್ಲಿ ಒಂದು. ’ಬೆಳಕು ಹರಿಯತು ಭುವಿಯ ಕಡೆಗೆ’ ಎಂದಿನಂತೆ ಸುಮಧುರ ಶ್ಲೋಕದಿಂದ ಆರಂಭವಾಗಿ ನಿಧಾನವಾಗಿ ಉಚ್ಛ್ರಾಯ ಸ್ಥಿತಿಯನ್ನು ತಲುಪಿ ’ಬೆಳಕಿನ ಮೂಲದತ್ತ’ ಸಾಗುತ್ತದೆ. ಬಿ.ಆರ್.ಛಾಯರವರ ಗಾಯನ ಮಧುರ ಅನುಭೂತಿಯನ್ನು ನೀಡುತ್ತದೆ. ಸುಮಾರು ಒಂದುವರೆ ದಶಕಗಳ ಕಾಲ ’ಬೆಳಕು ಹರಿಯಿತು’ಯಿಲ್ಲದ ಕನ್ನಡ ಗಾಯನ ಸ್ಪರ್ಧೆ ಇಲ್ಲವೇ ಇಲ್ಲ.

ಚಸರಾರವರ ಗೀತೆಗಳ ಬಗ್ಗೆ ಬರೆಯುವಾಗ ’ಸ್ಮೃತಿ’ ಧ್ವನಿಸುರಳಿಯ ’ದೇವಾ ನನ್ನ ಮೊರೆಯ ಕೇಳು’ ಬಗ್ಗೆ ಉಲ್ಲೇಖಿಸದಿದ್ದರೆ, ಬರಹ ಅಪೂರ್ಣ. ಪ್ರಮುಖ ಗಾಯನದ ಜೊತೆ ಕೋರಸ್ ಹೇಗೆ ಬಳಕೆಯಾಗಬಹುದು, ಬಳಕೆಯಾಗಬೇಕು ಎನ್ನುವುದಕ್ಕೆ ಈ ಗೀತೆ ಉದಾಹರಣೆ. ಚರಣದಲ್ಲಿ “ದೇವಾ ಬಾರೆಯಾ ..ಕ್ರಿಸ್ತ ಬಾರೆಯ’ ಯ ನಡುವೆ ಬರುವ ’ಓಂ ನಮೋ ನಮ:’ ಎಂಬ ಗಾಯನ ಹಾಗೂ ಕೋರಸ್ ನ ಜುಗಲ್ ಬಂಧಿ ಅತ್ಯಂತ ಸುಂದರ.

’ಇಹದ ಬಂಧನ ಮುಗಿವ ಮೊದಲೇ ಜೀವ ಹದಗೊಳಿಸು’ ಎಂಬ ಸಾಲುಗಳು ಚಸರಾರವರ ಕೊನೆಯ ದಿನಗಳನ್ನು ನೆನಪಿಸುತ್ತದೆ. ’ಅಲ್ಲು ಸಲ್ಲಲ್ಲು ಇಲ್ಲೂ ಸಲ್ಲುವ ರೂಪ ಅನುಗೊಳಿಸು’ ಎನ್ನುವುದು ಅವರ ಇಡೀ ಜೀವನಕ್ಕೆ ಅನ್ವರ್ಥವಾಗಿದೆ. ಅವರ ಈ ಟ್ರೇಡ್ ಮಾರ್ಕ್ ಸಾಲುಗಳಲ್ಲಿ ಗಾಯನ ಅತಿ ಮಧುರ. ಹಾಡು ಮುಗಿದ ಮೇಲೂ ’ಓ ನಮೋ ನಮ:’ದ ಗುನುಗು ಸುಲಭದಲ್ಲಿ ಮರೆಯಾಗುವುದಿಲ್ಲ.
ಸಮಿಶ್ರ ಧ್ವನಿಸುರಳಿಯ ’ಜೀವನ ಸಂಸ್ಕರಿಸೋ’ ಮತ್ತೊಂದು ಸುಂದರ ಗೀತೆ. ರಾಜೇಶರ ಉತ್ತಮ ಗಾಯನ ಗೀತೆಯನ್ನು ಎತ್ತರಕ್ಕೇರಿಸುತ್ತದೆ. ಆರಂಭದ ಶ್ಲೋಕ ಒಂದಷ್ಟು ದೀರ್ಘವಾಗಿಯೇ ಇದೆ. ಪಲ್ಲವಿ ಹಾಗೂ ಚರಣದ ನಡುವಿನ ವಾದ್ಯ ಸಂಯೋಜನೆ ವಿಭಿನ್ನವಾಗಿ ಮನಸೆಳೆಯುತ್ತದೆ. ಸಾಹಿತ್ಯ ಎಂದಿನಂತೆ ಸೂಪರ್. 

ಹಾಗೆಯೇ ಸಂಭಾವ್ಯದ ’ಸಾಗರದಲೆಗೆ ಸೆಲೆಗಳ ಬರವೇ’ ಕೂಡ ಅತ್ಯಂತ ಮಧುರ ಗೀತೆ. ಆರಂಭದಲ್ಲಿನ ಶ್ಲೋಕ ಹಾಗೂ ಸ್ವರಾಲಾಪನೆಗಳಲ್ಲೇ ಕೇಳುಗ ಸಂಗೀತದಲ್ಲಿ ತೇಲಿ ಹೋಗುವಂತ ರಾಗ ಸ್ವರ ಸಂಯೋಜನೆ ಇಲ್ಲಿದೆ. ಶ್ಲೋಕ ಹಾಗೂ ಸ್ವರಗಳು ಅದೆಷ್ಟು ದೀರ್ಘವಾಗಿದೆ ಎಂದರೆ ಹಾಡಿನ ಆರಂಭದ ಪಲ್ಲವಿ ಶುರುವಾಗುವುದೇ ಎರಡುವರೆ ನಿಮಿಷದ ನಂತರ.

’ಸಾಗರದಲೆಗೆ ಸೆಲೆಗಳ ಬರವೇ? ಕೇಳು ನೀ ಮನವೇ ವರಗಳು ಸಿಗವೇ’ ಎಂಬ ಆರಂಭಿಕ ಸಾಲುಗಳೇ ಸುಂದರ. ಹಂಸಲೇಖರ ಒಂದು ಗೀತೆಯಲ್ಲಿ ’ ಸಾಗರವೇ ಸಾಗರವೇ..ದಣಿವೇ ಇಲ್ಲ ನಿನ್ನ ಅಲೆಗೆ’ ಎಂಬ ಸಾಲುಗಳು ಇಲ್ಲಿ ನನಪಾಗುತ್ತವೆ. ’ಈ ಭುವಿಯ ಅಣು ಅಣುಗೆ ಸೌಹಾರ್ದ ತಾ’ ಎನ್ನುವಂತ ಅದ್ಭುತ ಸಾಲುಗಳು ಇಲ್ಲಿವೆ.


ಹನಿ ಧ್ವನಿ ಸುರಳಿಯ ’ಸರ್ವೇಶ್ವರನೇ ಸೃಷ್ಟಿಯು ನಿನ್ನದೇ’ ಗೀತೆ ಫಾ.ಫೆಲಿಕ್ಸ್ ರವರ ಗೀತೆಗಳಲ್ಲಿನ ಆರ್. ಎನ್. ಜಯಗೋಪಲ್ ರವರ ಸಾಹಿತ್ಯವನ್ನು ನೆನಪಿಸುತ್ತದೆ. ಆರಂಭಿಕ ಶ್ಲೋಕ, ಸ್ವರಗಳು, ಅಲಾಪನೆ, ಕೋರಸ್ ಗಳ ಸುಂದರ ಸಮ್ಮಿಲ್ಲನದ ಚಸರಾರವರ ಗೀತೆಗಳ ಪರಂಪರೆಯ ಮುಂದುವರಿಕೆಯನ್ನು ಸಾಂಗತ್ಯದ ’ಆ ಸ್ವರ್ಗಕ್ಕೆ ಈ ಭೂಮಿಗೆ’ ಯಲ್ಲಿ ಕಾಣಬಹುದು. ಇತ್ತೀಚಿನ ವರ್ಷಗಳಲ್ಲಿ ಅವರ ಗೀತೆಗಳಲ್ಲಿ ಅತ್ತ್ಯುತ್ತಮ ಎನ್ನಬಹುದಾದ ಗೀತೆ. ಮತ್ತೆ ದೀರ್ಘವಾದ, ಅತ್ಯಂತ ಸುಮಧುರ ಶ್ಲೋಕದಿಂದ ಆರಂಭವಾಗಿ, ಸ್ವರಗಳಲ್ಲಿ ಮುಂದುವರಿಯುವ ಈ ಗೀತೆ ರಾಜೇಶರ ಸುಶ್ರಾವ್ಯ ಗಾಯನದಿಂದ ಆಪ್ತವಾಗುತ್ತದೆ.


ಇಲ್ಲಿ ಚಸರಾರವರ ಸಾಹಿತ್ಯ ಅವರ ಇತರ ಹಳೆಯ ಗೀತೆಗಳ ಸಾಹಿತ್ಯಕ್ಕಿಂತ ಸಂಪೂರ್ಣ ಭಿನ್ನ. ಇಲ್ಲಿ ಅವರ ಸಾಹಿತ್ಯ ಹೊಸ ಮಜಲುಗಳನ್ನು ಮುಟ್ಟಿದೆ. ಸ್ಟೀವನ್‍ರವರ ವಾದ್ಯ ಸಂಯೋಜನೆ ಉತ್ತಮವಾಗಿ ಮೂಡಿ ಬಂದಿದೆ. ಋತುಬಿಂದು, ಋತು ಸಿಂಧು, ಒಳ ಬಂಧ ನೀ ಎಂಬಂಥ ಪದಗಳು ಬಳಕೆಯಾಗಿರುವ ಸಂದರ್ಭಗಳು ಚಿಂತನಾರ್ಹ.   

ಈ ಮೇಲಿನ ಹಾಡುಗಳು ಕೆಲವು ಉದಾಹರಣೆಗಳಷ್ಟೇ. ಇನ್ನೂ ಅನೇಕ ಗೀತೆಗಳಿವೆ. ಚಸರಾರವರು ಹೊಸಪದಗಳ ಪ್ರಯೋಗ ಮಾಡಿದಾಗ, ಇವು ಚಿತ್ರ ಗೀತೆಗಳಂತಿವೆ, ದೇವಾಲಯಗಳಲ್ಲಿ ಹಾಡಲು ಮುಜುಗುರ ಎಂಬಂಥ ಮಾತುಗಳಿದ್ದವು. ಆದರೆ ಮೇಲೆ ಉದಹರಿಸಿದ ಗೀತೆಗಳು ಯಾವುದೇ ಗಾಂಭಿರ್ಯಭರಿತ ಸಾಹಿತ್ಯಕ್ಕೆ ಕಮ್ಮಿಯಿಲ್ಲ. ಸಂಗೀತ ಹಾಗೂ ವಾದ್ಯ ಸಂಯೋಜನೆ ಕೂಡ ಉತ್ಕೃಷ್ಟ ಮಟ್ಟದ್ದೇ.

ಪ್ರಾರಂಭದಲ್ಲೇ ’ಸ್ಪೂರ್ತಿಯಾಗಲಿ ಕ್ರಿಸ್ತ’ ಎಂಬಂಥ ಗೀತೆಗಳ ಸಾಹಿತ್ಯ ಉನ್ನತ ಮಟ್ಟದಲ್ಲಿದ್ದರೂ, ವರ್ಷಗಳು ಕಳೆದಂತೆ ಸಾಹಿತ್ಯ ಮತ್ತಷ್ಟು ಪಕ್ವಗೊಳ್ಳುತ್ತಲೇ ಸಾಗುತ್ತಿತ್ತು. ಅದಕ್ಕೆ ’ಆ ಸ್ವರ್ಗಕ್ಕೆ ಈ ಭೂಮಿಗೆ’ ಗೀತೆ ಉತ್ತಮ ಉದಾಹರಣೆಯಾಗಿದೆ. ಅವರ ಇತ್ತೀಚಿನ ಸಾಹಿತ್ಯದ ’ಅಮ್ಮನ ಮಡಿಲು’ ಧ್ವನಿ ಸುರಳಿಯಲ್ಲಿನ ಕೆಲವು ಹಾಡುಗಳ ಸಾಲುಗಳಲ್ಲಿ ವಚನ ಸಾಹಿತ್ಯದ ಚಿಂತನೆಗಳು ಮೇಲ್ಪದರದಲ್ಲಿ ಕಾಣಸಿಗುತ್ತವೆ.

ಚಸರಾರವರ ಮೇಲಿನ ಗೀತೆಗಳ ದೊಡ್ಡ ಹೆಗ್ಗಳಿಕೆ ಇರುವುದು ಅವುಗಳ ಸಾಹಿತ್ಯ, ಸಂಗೀತದ ಗುಣಮಟ್ಟ ಹಾಗೂ ಪ್ರಯೋಗಶೀಲತೆಯಲ್ಲಿ ಮಾತ್ರವಲ್ಲ. ಅದಕ್ಕೆ ಮೀರಿದ, ಜನ ಸಾಮಾನ್ಯರನ್ನು ಅವು ಸ್ಪರ್ಷಿಸಿದ ಬಗೆಯಲ್ಲಿ. ಈ ಹಾಡುಗಳು ಪಂಡಿತರ ಎತ್ತರದ ಗೋಪುರಗಳಲ್ಲಿ ಉಳಿಯದೆ ಜನ ಸಾಮಾನ್ಯರ ಎದೆಯಲ್ಲಿ ಗುನುಗಿಸಿಕೊಂಡ ಗೀತೆಗಳಾದವು.

ಈ ಮಾತು ಏಕೆ ಹೇಳಬೇಕೆಂದರೆ, ಈ ಹಾಡುಗಳು ಸುಲಭದಲ್ಲಿ ಹಾಡುವಂಥದೇನ್ನಲ್ಲ. ಸ್ವಲ್ಪ ಮಟ್ಟಿಗಿನ ಪ್ರಯತ್ನ, ಅಭ್ಯಾಸ, ಶ್ರಮ ಎಲ್ಲವೂ ಬೇಕಾಗಿದ್ದ ಈ ಹಾಡುಗಳನ್ನು ಕನ್ನಡ ಜನತೆ ಪ್ರೀತಿಯಿಂದಲೇ ಅಪ್ಪಿಕೊಂಡಿತು. ಒಂದು ಹಾಡು ಭಾವಾಂತರಂಗದಲ್ಲಿ ಹುಟ್ಟಿ ಕೇಳುಗನ ಕಿವಿ ತಲುಪಿ ಹೃದಯ ತುಂಬಿಕೊಳ್ಳುವ ಒಂದು ಸಂಪೂರ್ಣ ವೃತ್ತದ ಪರಿಪೂರ್ಣತೆಯನ್ನು, ಈ ಹಾಡುಗಳು ಪಡೆದುಕೊಂಡವು.  

- ಪ್ರಶಾಂತ್ ಇಗ್ನೇಶಿಯಸ್ 

Tuesday, 30 May 2017

ನನ್ನ ಮೆಚ್ಚಿನ ಫಾ.ಚಸರಾ ಹಾಡುಗಳು - ಭಾಗ 10 - ’ಸಂವೇದ್ಯ’

’ಸಂವೇದ್ಯ’

ಫಾ.ಚಸರಾರವರ ಇನ್ನೂ ಅನೇಕ ಗೀತೆಗಳ ಬಗ್ಗೆ ಬರೆಯಬಹುದಾದರೂ ’ಸಂವೇದ್ಯ’ ಧ್ವನಿಸುರಳಿಯ ಬಗ್ಗೆ ಪ್ರತ್ಯೇಕವಾಗಿ ಬರೆಯಲೇ ಬೇಕಾಗುತ್ತದೆ. ಈಗಾಗಲೇ ಈ ಧ್ವನಿಸುರಳಿಯ ಮೂರ್ನಾಲ್ಕು ಹಾಡುಗಳ ಬಗ್ಗೆ ಬರೆದಿದ್ದಾಗಿದೆಯಾದರೂಈ ಧ್ವನಿ ಸುರಳಿಯ ಒಟ್ಟು ಹಿನ್ನಲೆ, ಪರಿಣಾಮ, ಸಾಂಸ್ಕೃತಿಕ ಮಹತ್ವದ ಬಗ್ಗೆ ಉಲ್ಲೇಖಿಸಲೇಬೇಕಾಗುತ್ತದೆ.

ಎಲ್ಲರಿಗೂ ತಿಳಿದಿರುವಂತೆ ’ಸಂವೇದ್ಯ’  ಧ್ವನಿಸುರಳಿ, ಮರಿಯಾಪುರದಲ್ಲಿ ಫಾ. ತೋಮಸ್ ನಿರ್ದೇಶನದಲ್ಲಿ ನಡೆಯುತ್ತಾ ಬಂದಿರುವ ’ಕ್ರಿಸ್ತ ದ್ವನಿ’ ಮಹಿಮೆ ನಾಟಕದಲ್ಲಿನ  ಹಾಡುಗಳ ಗುಚ್ಛ. ಹಿಂದಿನ ಸಂಚಿಕೆಯೊಂದರಲ್ಲಿ ಹೇಳಿದಂತೆ ಕನ್ನಡ ಕ್ರೈಸ್ತರು ಮಾತ್ರವಲ್ಲದೆ ಇಡೀ ಕ್ರೈಸ್ತ ಸಮುದಾಯ, ಕನ್ನಡ ಸಾಂಸ್ಕೃತಿಕ ಲೋಕ ಹೆಮ್ಮೆಪಡಬಹುದಾದ ಸಾಂಸ್ಕೃತಿಕ, ಧಾರ್ಮಿಕ ಕಾರ್ಯಗಳಲ್ಲಿ ಇದು ಒಂದು.

ಕರ್ನಾಟಕದ ಹಾಗೂ ತಮಿಳುನಾಡಿನ ಅನೇಕ ಕ್ರೈಸ್ತ ಗ್ರಾಮಗಳಲ್ಲಿ ಹಬ್ಬ, ಜಾತ್ರೆ, ವಿಶೇಷ ಸಂದರ್ಭಗಳಲ್ಲಿ ಕ್ರೈಸ್ತ ನಾಟಕಗಳು ನಡೆದುಕೊಂಡು ಬಂದಿದೆ. ತಮಿಳುನಾಡಿನ ಪಳ್ಳಪಟ್ಟಿ ಹಾಗೂ ಹಾರೋಬೆಲೆಯ ಮಹಿಮೆ ನಾಟಕಗಳು ಸಾಕಷ್ಟು ಜನಪ್ರಿಯವೂ ಹೌದು.  ಹಾರೋಬೆಲೆಯ ಮಹಿಮೆ ನಾಟಕಕ್ಕೆ ನೂರು ವರ್ಷಗಳ ಇತಿಹಾಸವೂ ಇದೆ. ಈ ಹಿನ್ನಲೆಯಲ್ಲಿ ಇವುಗಳಿಗಿಂತ ಭಿನ್ನವಾದ ಧ್ವನಿ ಬೆಳಕಿನ ಮೂಲಕ ವಿಶಾಲವಾದ ವೇದಿಕೆಯಲ್ಲಿ ಬೈಬಲ್ ಅಧಾರಿತ ನಾಟಕವನ್ನು ಮಾಡಬೇಕೆನ್ನುವ ನಿರ್ಧಾರವೇ ಒಂದು ದೊಡ್ಡ ಸಾಹಸ. 

ಈ ನಿಟ್ಟಿನಲ್ಲಿ ಈ ಸಾಹಸಕ್ಕೆ ಕೈ ಹಾಕಿದ ಫಾ.ತೋಮಾಸರ ಧೈರ್ಯ ಮೆಚ್ಚತಕ್ಕದೆ. ಒಂದೀಡಿ ಗ್ರಾಮದ ಜನರ ಸಹಕಾರ, ತಕ್ಕ ಬಯಲು, ತಕ್ಕಮಟ್ಟಿನ ಆರ್ಥಿಕ ಬಲ ಎಲ್ಲವೂ ಹೊಂದಿಸಿದ ಮೇಲೆ ನಿಜಕ್ಕೂ ಸವಾಲಾಗುವಂತದ್ದು ನಾಟಕದ ಕಥಾವಸ್ತು, ನಿರೂಪಣೆ ಹಾಗೂ ಸಾಹಿತ್ಯ. ಮೊದಲೇ ಹೇಳಿದಂತೆ ನಾಟಕಗಳ ಇತಿಹಾಸವಿದ್ದೂ, ಸಂಪ್ರದಾಯಸ್ತ ಮನಸ್ಸುಗಳ ನಡುವೆ ಯುವ ಸಮುದಾಯವನ್ನೂ ಆಕರ್ಷಿಸುವಂತ ಗಟ್ಟಿ ಸಾಹಿತ್ಯ ಮಾತ್ರವೇ ಈ ಮಹಿಮೆ ನಾಟಕವನ್ನು ಯಶಸ್ವಿಗೊಳಿಸಬೇಕಿತ್ತು. ಇಂದಿಗೂ ಈ ಮಹಿಮೆ ನಾಟಕ ಅತ್ತ್ಯುತ್ತಮ ಎನ್ನಬಹುದಾದ ರಂಗ ವಿನ್ಯಾಸ, ಬೆಳಕು ಹಾಗೂ ಸಮರ್ಥ ಮಾನವ ಸಂಪನ್ಮೂಲದ ಬಳಕೆಯಿಂದ ಶ್ರೇಷ್ಠವಾದ ರಂಗ ಚಟುವಟಿಕೆಯಾಗಿ ನಿಂತಿದೆ. ಆದರೆ ಅದಕ್ಕೆ ಸಮನಾದ ಆಧಾರ ಸ್ತಂಭವಾಗಿ ನಿಂತಿರುವುದು ಅದರ ಸಾಹಿತ್ಯ ಹಾಗೂ ಸಂಗೀತ.

ಇಲ್ಲಿನ ಹಾಡುಗಳು ನಿಜಕ್ಕೂ ಒಂದಕ್ಕಿಂತ ಒಂದು ಮೀರಿಸುವಂತದ್ದು. ಧ್ವನಿಸುರಳಿ ಮೊದಲಿಗೆ ಫಾ.ಚಸರಾರವರ ಸುಂದರ ನಿರೂಪಣೆಯಿದೆ. ನಂತರದ್ದು ಫಾ.ಫಿಲಿಪ್ ಸಿಜೋನ್‍ರವರ ಬಗೆಗಿನ ಹಾಡು. ಒಬ್ಬ ವ್ಯಕ್ತಿ ಒಂದು ಗ್ರಾಮಕ್ಕೆ, ಒಂದು ಸಮುದಾಯಕ್ಕೆ ಕೊಡಬಹುದಾದ ಸಾಮಾಜಿಕ, ಅಧ್ಯಾತ್ಮಿಕ, ಸಾಂಸ್ಕೃತಿಕ ಕೊಡುಗೆಗಳ ಬಗ್ಗೆ ನೆನೆಯುತ್ತಾ, ಅದಕ್ಕೆ ಧನ್ಯತೆಯನ್ನು ಒಂದು ಹಾಡಿನಲ್ಲೇ ಹೇಗೆ ಸೂಚಿಸಬಹುದು ಎಂಬುದಕ್ಕೆ ಉದಾಹರಣೆಯಾಗಿದೆ ಈ ಹಾಡು. ಈ ಗೀತೆಯ ಸಾಹಿತ್ಯ, ಸಂಗೀತ, ವಾದ್ಯ ಸಂಯೋಜನೆ ಎಲ್ಲವೂ ಶ್ರೇಷ್ಠ ಮಟ್ಟದಲ್ಲಿದೆ. ಮುಂದೆ ಬರುವ ’ಬಾನಲಿ ದೂತರು ಹಾಡಿದರು’ ಗೀತೆಯ ಬಗ್ಗೆ ಈಗಾಗಲೇ ಇದೇ ಸಂಚಿಕೆಯಲ್ಲಿ ಬರೆಯಲಾಗಿದೆ. ಸುಂದರವಾದ ಕ್ರಿಸ್ತ ಜಯಂತಿಯ ಹಾಡು ಸಾಗುತ್ತಾ ಅನೇಕ ಆಯಾಮಗಳನ್ನು ಪಡೆದುಕೊಳ್ಳುತ್ತದೆ. ಅತ್ತ್ಯುತ್ತಮ ಎನ್ನಬಹುದಾದ ಗಾಯನ ಇಲ್ಲಿದೆ.

ಬಿತ್ತುವವನ ಸಾಮತಿ ಆಧಾರಿತ ’ಒಂದೂರಲ್ಲಿ ಒಬ್ಬ ರೈತನಿದ್ದ’ ಒಂದು ವಿಶೇಷವಾದ ಗೀತೆ. ಸಿ.ಅಶ್ವತ್ಥ್‍ರವರ ಕಂಠಸಿರಿ ಇಲ್ಲಿ ಕೊಡುಗೆಯಾಗಿದೆ.  ಈ ಗೀತೆ ಮನ ಸೆಳೆಯುವುದು ತನ್ನ ಸಂಗೀತದಿಂದ. ಸಾಹಿತ್ಯ ಎಂದಿನಂತೆ ಸರಳ ಆದರೆ ಪರಿಪೂರ್ಣ.  ಸಾಧು ಕೋಕಿಲರವರ ವಾದ್ಯ ಸಂಯೋಜನೆಯ ಬಗ್ಗೆ ಏನು ಹೇಳುವಂತಿಲ್ಲ. ಮಣ್ಣಿನ ಸೊಗಡು ಹಾಡಿನ ಪ್ರತಿ  ವಿಭಾಗ ಹಾಗೂ ಕ್ಷಣಗಳಲ್ಲೂ ಹಾಸು ಹೊಕ್ಕಿದೆ. ಇನ್ನೂ ’ನನ್ನ ಆತ್ಮವೂ ಕರ್ತರನ್ನು ಸ್ತುತಿಸುತ್ತದೆ’ ಹಾಡು ಹಳೆಯ ಗೀತೆಯನ್ನು ನೆನಪಿಸುತ್ತಾ ಹೊಸತಾದ ಅನುಭಾವವನ್ನು ಹೊರಡಿಸುತ್ತದೆ. ದೇವಮಾತೆಯ ಸ್ವಗತದ ಗೀತೆಗೆ ಇದಕ್ಕಿಂತ ಉತ್ತಮವಾದ ಸಂಗೀತ, ವಾದ್ಯ ಸಂಯೋಜನೆ ಸಾಧ್ಯವೇ ಎನ್ನುವಷ್ಟು ಮಧುರ.

’ಪರಲೋಕ ಪಾರ್ಥನೆ’ ಜಗತ್ತಿನ ಅತ್ಯಂತ ಸರಳ ಆದರೆ ಅಷ್ಟೇ ಜನಪ್ರಿಯ, ಪರಿಣಾಮಕ್ಕಾರಿಯಾದ ಪ್ರಾರ್ಥನೆ ಎಂಬ ಮಾತಿದೆ. ಆ ಮಾತಿಗೆ ಪುಷ್ಠಿ ನೀಡುವಂತ ಸರಳ ಸಂಗೀತ ಹಾಗೂ ಸಂಯೋಜನೆ ’ಪರಲೋಕ ತಂದೆಯೇ ನಿಮ್ಮ ನಾಮವು’ ಗೀತೆಗೆ ಒದಗಿ ಬಂದಿದೆ. ಗಾಯನ ಹಾಗೂ ಕೋರಸ್ ಅದೆಷ್ಟು ಸುಂದರವಾಗಿದೆ ಎಂದರೆ ಹಾಡು ಕೇಳುತ್ತಿದ್ದಂತೆ ಯೇಸು ಹಾಗೂ ಶಿಷ್ಯರ ಚಿತ್ರಣ ಕಣ್ಣ ಮುಂದೆ ಮೂಡಿ ಬರುತ್ತದೆ. ’ನನ್ನ ತಂದೆಯ ಈ ಆಲಯ’ ಗೀತೆಯ ಬಗ್ಗೆಯೂ ಇದೇ ಮಾತು ಅನ್ವಯವಾಗುತ್ತದೆ.

ಯೇಸು ಕ್ರಿಸ್ತ ಜೆರುಸಲೇಮ್ ನಗರವನ್ನು ಪ್ರವೇಶಿಸಿದಾಗ ಸಿಕ್ಕ ಅಭೂತಪೂರ್ವ ಸ್ವಾಗತ, ಪ್ರೀತಿಯನ್ನು ಅತ್ಯಂತ ಸಮರ್ಥವಾಗಿ, ಸುಂದರವಾಗಿ ಮಹಿಮೆಯ ವೇದಿಕೆಯ ಮೇಲೆ ತೋರಿಸಲು ಬೇಕಾದ ಲವಲವಿಕೆ ,ಶಕ್ತಿ ’ದಾವಿದ ಕುವರಗೆ ಹೊಸಾನ್ನ’ ಹಾಡಿನಲ್ಲಿದೆ. ಸಾಂಪ್ರದಾಯಿಕವಾದ ಸಾಹಿತ್ಯದ ಜೊತೆ ಜೊತೆಗೆ ಫಾ.ಚಸರಾ ತಮ್ಮದೇ ಆದ ಚಿಂತನೆಯನ್ನುಈ ಗೀತೆಯಲ್ಲಿ ಪೋಣಿಸಿದ್ದಾರೆ. ಸದಾ ಗುನುಗಬಹುದಾದ ಗೀತೆ.

ಧ್ವನಿಸುರಳಿಯ ಮುಂದಿನ ಎರಡು ಗೀತೆಗಳಾದ ’ ನನ್ನ ಸ್ವಾರ್ಥ ಮನಸ್ಸಿನ ಈ ಬದಕು’ ಹಾಗೂ ’ಅಗೋ ನೋಡಿ’ ಬಗ್ಗೆ ಇದೇ ಅಂಕಣದಲ್ಲಿ ಬರೆಯಲಾಗಿದೆ. ಈ ಎರಡು ಗೀತೆಗಳು ಈ ಧ್ವನಿಸುರಳಿಯ ಮೇಲ್ಮೆಯನ್ನು ಇನ್ನೂ ಎತ್ತರಕ್ಕೆ ಏರಿಸುತ್ತದೆ. ಕನ್ನಡದ ಅತ್ತ್ಯುತ್ತಮ ಪುನರುತ್ಥಾನ ಗೀತೆಗಳ ಸಾಲಿನಲ್ಲಿ ಇದೇ ಧ್ವನಿಸುರಳಿಯ ’ಪುನರುತ್ಥಾನರಾದರು ನಮ್ಮ ಯೇಸು ಕ್ರಿಸ್ತರು’ ಸಹಾ ಒಂದು. ಭಿನ್ನವಾದ, ಕೇವಲ ಫಾ.ಚಸರಾ ಚಿಂತನೆಯ ಬತ್ತಳಿಕೆಯಿಂದ ಮಾತ್ರ ಬರಬಹುದಾದ ಸಾಲುಗಳು ಈ ಹಾಡಿನಲ್ಲಿವೆ. ’ಮುಂಜಾನೆ ಮೂಡಿ ಬಂದು ಹೊಂಗಿರಣ ಚಿಮ್ಮಿಸಿತು’ ಎಂಬುದು ಯೇಸುವಿನ ಪುನರುತ್ಥಾನಕ್ಕೆ ಹೊಸ ಅರ್ಥವನ್ನೂ ನೀಡುತ್ತದೆ. ’ಸೂರ್ಯನು ಉದಯಿಸಿದ ಬದುಕೆಲ್ಲಾ ಹೊಸದಾಯಿತು, ಮನಸೆಲ್ಲಾ ಹಗುರಾಯಿತು’ ಎನ್ನುವ ಸಾಲುಗಳು ಚಸರಾರವರು ಕನ್ನಡ ಭಕ್ತಿ ಸಂಗೀತಕ್ಕೆ ತಂದ ಹೊಸ ಅಲೋಚನೆಗಳ ಪ್ರತಿಬಿಂಬವಾಗಿದೆ.   

ಇಷ್ಟು ಶ್ರೇಷ್ಠವಾದ ಹಾಡುಗಳು ಒಂದೇ  ಧ್ವನಿಸುರಳಿಯಲ್ಲಿ ಇರುವುದು ನಿಜಕ್ಕೂ ಅಪರೂಪದ ಸಂಗತಿಯಾಗಿರುವುದರಿಂದ ಈಡೀ  ಧ್ವನಿಸುರಳಿಯ ಬಗ್ಗೆ ಬರೆಯಬೇಕಾಯಿತು.
ಫಾ.ಚಸರಾರವರ  ಸಾಹಿತ್ಯ ಹಾಗೂ ಸಂಗೀತ ಎರಡು ದಶಕಗಳ ನಂತರವೂ ತನ್ನ ನಾವಿನ್ಯತೆಯನ್ನು ಕಳೆದುಕೊಂಡಿಲ್ಲ ಎಂದರೆ ಅದಕ್ಕೆ ಅವರ ದೂರದೃಷ್ಟಿ, ಪಾಂಡಿತ್ಯ, ಪ್ರತಿಭೆ, ಶ್ರಮ ಮಾತ್ರವಲ್ಲದೆ ಅವರು ನಂಬಿದ ಟೀಂ ವರ್ಕ್ ಕಾರಣವಾಗಿದೆ. ಹಳೆಯ ಹಾಗೂ ಹೊಸತನದ ಮಿಲನವಾಗಿರುವ ಈ ಸಾಹಿತ್ಯದಿಂದಾಗಿಯೇ ಈ ಧ್ವನಿಸುರಳಿಯ ಎಲ್ಲಾ ಹಾಡುಗಳು ಇಂದಿಗೂ ನನ್ನ ಮೆಚ್ಚಿನ ಮಾತ್ರವಲ್ಲದೆ ಕ್ರೈಸ್ತ ಸಮುದಾಯದ ಮೆಚ್ಚಿನ ಹಾಡುಗಳಾಗಿ ಜನಮನದಲ್ಲಿ ಬೆರೆತು ಹೋಗಿದೆ.

ಸಂಗೀತ ಹಾಗೂ ವಾದ್ಯ ಸಂಯೋಜನೆಯಲ್ಲಿ ದೃಶ್ಯಗಳಿಗೆ ಬೇಕಾದ ಭಾವನಾತ್ಮಕತೆಯನ್ನು ಕಾಪಾಡಿಕೊಳ್ಳಲಾಗಿದೆ. ಉದಾಹರಣೆಗೆ ’ನನ್ನ ತಂದೆ’,’ನನ್ನ ಆತ್ಮವು’,’ಪರಲೋಕ ತಂದೆಯ’ ಗೀತೆಗಳಲ್ಲಿ ಅತ್ಯಂತ ಕಡಿಮೆ ವಾದ್ಯಗಳನ್ನು ಬಳಸಿ ಮಾಧುರ್ಯಕ್ಕೆ ಆದ್ಯತೆ ನೀಡಲಾಗಿದೆ. ’ದಾವಿದ ಕುವರಗೆ ಹೊಸಾನ್ನ’ ಹಾಗೂ’ಪುನರುತ್ಥಾನರಾದರೇಸು’ ಗೀತೆಗಳಲ್ಲಿ ಸಂಭ್ರಮ ಹಾಸುಹೊಕ್ಕಿದೆ. ’ಒಂದೂರಿನಲ್ಲಿ’ ಅಪ್ಪಟ ದೇಸಿ ಶೈಲಿಯಲ್ಲಿದ್ದರೆ, ’ಗ್ಲೋರಿಯಾ’ ಹಾಗೂ ’ಜನತೆಯ ಬದುಕಿನ’ ಹಾಡುಗಳಲ್ಲಿ ಪ್ರಯೋಗವಿದೆ.  ’ನನ್ನ ಸ್ವಾರ್ಥ ’ಹಾಗೂ ’ಅಗೋ ನೋಡಿ’ ಗೀತೆಗಳ ಸಂಗೀತದಲ್ಲಿ ಕರುಣರಸ ಎದ್ದು ಕಾಣುತ್ತದೆ.

ಇಲ್ಲಿನ ಹಾಡುಗಳು ಬೈಬಲ್ ಘಟನೆಗಳಿಗೆ, ಅದರ ಆಶಯಕ್ಕೆ ಬದ್ಧವಾಗಿರುವುದರಿಂದ ಸಾಹಿತ್ಯದ ಆಳಕ್ಕೆ ಇಳಿದು ಹೇಳುವಂಥದ್ದೇನಿಲ್ಲ. ಗೊತ್ತಿರುವ ಸಂಗತಿಗಳನ್ನೇ ಸೃಜನಾತ್ಮಕವಾಗಿ, ಈ ಮಣ್ಣಿನ ಸೊಗಡಿಗೆ ಹತ್ತಿರವಾಗಿ, ಹೊಸ ಬಗೆಯಲ್ಲಿ ಕಟ್ಟಿಕೊಟ್ಟಿರುವ ಫಾ.ಚಸರಾರವರ ಪ್ರಯತ್ನವನ್ನು ಅಚ್ಚರಿಯಿಂದ, ಮೆಚ್ಚುಗೆಯಿಂದ ನೋಡಬಹುದಷ್ಟೇ.



Monday, 1 May 2017

May 1

ಒಂದಷ್ಟು ವರ್ಷಗಳ ಹಿಂದೆ ಒಂದು ಜೋಕ್ ಪ್ರಚಲಿತವಾಗಿತ್ತು. ಅದು ಈಗಲೂ ಪ್ರಸ್ತುತ. ’ತಾಜ್ ಮಹಾಲ್ ಕಟ್ಟಿದ್ದು ಯಾರು?’ ಎಂಬ ಪ್ರಶ್ನೆಗೆ ’ಕಲ್ಲು ಮಣ್ಣು ಹೊತ್ತ ಕೂಲಿಯವರು’ ಎಂಬ ಉತ್ತರ ಬರುತಿತ್ತು.  ಶಹಜಹಾನಿನ ಆ ಕನಸಿಗೆ ಹೆಗಲು, ಬೆವರು ಕೊಟ್ಟವರು ಅಸಂಖ್ಯಾತ ಕೂಲಿ ಕೆಲಸಗಾರರೇ ಅಲ್ಲವೇ? ಜಗತ್ತಿನ ಅತ್ಯದ್ಭುತ ಕಟ್ಟಡಗಳ, ಸ್ಮಾರಕಗಳ ಹಿಂದಿನ ಶ್ರಮ ಕಾರ್ಮಿಕರದ್ದೇ. "ಪ್ರತಿಭೆ ಮಹತ್ವದ ಕಾರ್ಯಗಳನ್ನು ಆರಂಭಿಸಹುದು, ಕಾರ್ಮಿಕ ಅಥವಾ ಶ್ರಮಿಕ ಮಾತ್ರ ಅದನ್ನು ಪೂರ್ಣಗೊಳಿಸಬಲ್ಲ" ಎಂಬ ಮಾತಿದೆ. ಈ ಮಾತಿನ ಅರ್ಥ ಬಹಳ ಸರಳ . ಕೇವಲ ಪ್ರತಿಭೆ ಅಥವಾ ದೊಡ್ಡ ಆಲೋಚನೆ, ಯೋಜನೆಗಳಿಂದ ಮಾತ್ರ ಕಾರ್ಯಗಳು ಕೈಗೂಡುವುದಿಲ್ಲ, ಅದಕ್ಕೆ ಶ್ರಮಪಡುವ ಕಾರ್ಮಿಕರು ಅತ್ಯವಶ್ಯ ಎಂದು.

ನಮ್ಮ ಅಧುನಿಕ ಜಗತ್ತು ಅದೇನೆ ಐ.ಟಿ, ಬಿಟಿ, ಸಾಫ್ಟ್ ವೇರ್ ತಂತ್ರಜ್ಞಾನದಲ್ಲಿ ಮುಂದುವರಿದಿದ್ದರೂ ಕಾರ್ಮಿಕನಿಲ್ಲದ, ಆತನ ಬೆವರಿನ ಶ್ರಮವಿಲ್ಲದ ಜಗತ್ತು ಇಲ್ಲ. ಕಾರ್ಮಿಕ ಹಾಗೂ ಬೆವರಿನ ಶ್ರಮ ಈ ಲೋಕದಷ್ಟೇ ಹಳೆಯದು. ನಿರಂತರ ಶೋಷಣೆ, ದಬ್ಬಾಳಿಕೆ ಒಳಗಾದರೂ ಕಾರ್ಮಿಕರ ಸಂಖ್ಯೆ ಇಳಿದಿಲ್ಲ. ಆತನ ಕಷ್ಟವೂ ಕಡಿಮೆಯಾಗಿಲ್ಲ. ಇಂತಹ ಸಮಯದಲ್ಲಿ ಕಾರ್ಮಿಕನ ಬಗ್ಗೆ ಒಂದಷ್ಟು ನೆನಪು ಆತನ ಬಗ್ಗೆ ಸಹಾನುಭೂತಿ ಬರುವುದು ಕಾರ್ಮಿಕರ ದಿನ ಬಂದಾಗಲೇ. ವಿಶ್ವದ ಬಹುತೇಕ ದೇಶಗಳು ’ಕಾರ್ಮಿಕರ ದಿನ’ವನ್ನು ಮೇ ೧ ರಂದೇ ಅಚರಿಸುತ್ತದೆ. ಕಾರ್ಮಿಕ ಸಂಘ ಸಂಸ್ಥೆಗಳು, ಸಂಘಟನೆಗಳು ಆ ದಿನವನ್ನು ಅನೇಕ ರೀತಿಯಲ್ಲಿ ಆಚರಿಸುತ್ತವೆ. ಮೆರವಣಿಗೆಗಳು, ಕಾರ್ಯಕ್ರಮಗಳು ವಿಚಾರ ಸಂಕಿರಣಗಳು ನೆಡೆಯುತ್ತದೆ. ಅಂದು ಎಲ್ಲರಿಗೂ  ಕಡ್ಡಾಯ ರಜೆ ಎನ್ನುವುದು ಮತ್ತೊಂದು ಆಕರ್ಷಣೆ. ಆದರೆ ಈ ಮೇ ೧ ರ ಆಚರಣೆ ಹೇಗೆ ಪ್ರಾರಂಭವಾಯಿತು ಎಂದು ಇತಿಹಾಸದತ್ತ ನೋಟ ಹರಿಸಿದಾಗ, ಆಸಕ್ತಿದಾಯಕ ವಿಷಯಗಳು ಗಮನಕ್ಕೆ ಬರುತ್ತವೆ.

೧೮ನೇ ಶತಮಾನದಲ್ಲಿ ಆರಂಭವಾದ ಕೈಗಾರಿಕಾ ಕ್ರಾಂತಿ, ವಿಶ್ವದ ಅನೇಕ ಅಭಿವೃದ್ಧಿ ಹೊಂದುತ್ತಿದ್ದ ದೇಶಗಳಲ್ಲಿ ಅನೇಕ ಕಾರ್ಖಾನೆಗಳ ಪ್ರಾರಂಭಕ್ಕೆ ಕಾರಣವಾಯಿತು. ಬ್ರಿಟನ್, ಫ್ರಾನ್ಸ್, ಅಮೇರಿಕಾ ಮುಂತಾದ ದೇಶಗಳಲ್ಲಿ ಲಕ್ಷಾಂತರ ಜನರು ಈ ಕಾರ್ಖಾನೆಗಳಲ್ಲಿ ಕೆಲಸ ಮಾಡತೊಡಗಿದರು. ಕೆಟ್ಟ ವಾತಾವರಣ, ಕನಿಷ್ಠ ಸೌಲಭ್ಯಗಳೂ ಇಲ್ಲದ ಈ ಕಾರ್ಖಾನೆಗಳಲ್ಲಿ ಕಾರ್ಮಿಕರ ಕಷ್ಟ ಹೇಳ ಸಾಧ್ಯವಿಲ್ಲದಂತಿತ್ತು. ಈ ನಡುವೆ ಕಾರ್ಖಾನೆಯ ಮಾಲೀಕರು ಕಾರ್ಮಿಕರನ್ನು ದಿನಕ್ಕೆ ೧೦ ರಿಂದ ೧೬ ಗಂಟೆಗಳ ಕಾಲ ದುಡಿಸಿಕೊಳ್ಳಲು ಪ್ರಾರಂಭಿಸುತ್ತಾರೆ. ಇದು ನಿಜಕ್ಕೂ ಕಾರ್ಮಿಕರ ಮೇಲೆ ಮಾನಸಿಕ ಹಾಗೂ ದೈಹಿಕ ಪರಿಣಾಮಗಳನ್ನು ಬೀರಲು ಪ್ರಾರಂಭಿಸುತ್ತದೆ. ೧೮೧೦ರಲ್ಲೇ ರಾಬರ್ಟ್ ಓವನ್ ಎಂಬ ನಾಯಕ ದಿನಕ್ಕೆ ಗರಿಷ್ಠ ’೧೦ ಗಂಟೆ ಮಾತ್ರದ ಕೆಲಸ’ ಎಂಬುದರತ್ತ ದನಿ ಎತ್ತುತ್ತಾನೆ.  ಕ್ರಮೇಣ ೮ ಗಂಟೆಗಳ ಅವಧಿಯ ಕೆಲಸದ ಬಗ್ಗೆ ಬೇಡಿಕೆಗಳು, ಮುಷ್ಕರಗಳು, ಧರಣಿಗಳು ಕಾರ್ಮಿಕ ವಲಯದಿಂದ ಪ್ರಾರಂಭವಾಗುತ್ತದೆ. ಇಡೀ ೧೮ನೇ ಶತಮಾನದ ಉದ್ದಕ್ಕೂ ಈ ರೀತಿಯ ಸಂಘರ್ಷಗಳು ನಡೆಯುತ್ತಲೇ ಇದ್ದವು. ೧೮೮೬ರ ಮೇ ೪ರಂದು ಇದೇ ರೀತಿಯ ಕಾರ್ಮಿಕ ಮುಷ್ಕರವೊಂದು ಅಮೇರಿಕಾದ ಚಿಕಾಗೋ ನಗರದ ಹೇಮಾರ್ಕೆಟ್ ಎಂಬಲ್ಲಿ ನಡೆಯುತ್ತದೆ. ಆ ಮುಷ್ಕರದ ಮುಖ್ಯ ಬೇಡಿಕೆ ಅದೇ ೮ ಗಂಟೆಗಳ ಕೆಲಸದ ಅವಧಿಯ ಬಗ್ಗೆಯೇ ಆಗಿತ್ತು.ಹಿಂದಿನ ದಿನ ನಡೆದ ಕಾರ್ಮಿಕರ ಮೇಲಿನ ಮಾರಣಾಂತಿಕ ದೌರ್ಜನ್ಯದ ಮೇಲಿನ ಪ್ರತಿಭಟನೆಯೂ ಅದಾಗಿತ್ತು.

ಶಾಂತಿಯುತವಾಗಿ ನಡೆಯುತ್ತಿದ್ದ ಮುಷ್ಕರದಲ್ಲಿ ಅಚಾನಕ್ಕಾಗಿ ಬಾಂಬೊಂದು ಸಿಡಿಯುತ್ತದೆ. ಇದರಿಂದಾಗಿ ಒಬ್ಬ ಪೋಲಿಸ್ ಅಧಿಕಾರಿ ಸತ್ತು ಆರು ಜನ ಗಾಯಗೊಳ್ಳುತ್ತಾರೆ. ನಂತರ ನಡೆದ ಪೋಲಿಸ್ ಹಾಗೂ ಕಾರ್ಮಿಕರ ತಿಕ್ಕಾಟದಲ್ಲಿ ಅನೇಕ ಸಾವು ನೋವುಗಳು ಸಂಭವಿಸುತ್ತವೆ. ಅಂದು ನಡೆದ ಆ ಘಟನೆಯಿಂದಾಗಿ ಕಾರ್ಮಿಕ ಹಾಗೂ ಮಾಲೀಕರ ನಡುವಿನ ಒಂದು ದೊಡ್ಡ ಕಂದರ ಉಂಟಾಗುತ್ತದೆ. ಆ ಘಟನೆಗಳ ಬಗ್ಗೆ ನಂತರ ನಡೆದ ವಿಚಾರಣೆ, ಕೋರ್ಟ್ ಕೇಸುಗಳಲ್ಲಿ ೭ ಜನ ಕಾರ್ಮಿಕ ಪರ ನಾಯಕರಿಗೆ ಮರಣ ದಂಡನೆ ವಿಧಿಸಲಾಗುತ್ತದೆ. ಅದರಲ್ಲಿ ಇಬ್ಬರ ಶಿಕ್ಷೆಯನ್ನು ಜೀವಾವಧಿಗೆ ಇಳಿಸಲಾಗುತ್ತದೆ. ಮತ್ತೊಬ್ಬ ಆರೋಪಿಯು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ.

ಇದು ಅನ್ಯಾಯದ ತೀರ್ಪು ಎಂಬ ಕಾರಣಕ್ಕಾಗಿವಿಶ್ವದಾದ್ಯಂತ ಅನೇಕ ಪ್ರತಿಭಟನೆಗಳು ಪ್ರಾರಂಭವಾಗುತ್ತದೆ.  ಮರಣ ದಂಡನೆಗೆ ಗುರಿಯಾದವರು ಕಾರ್ಮಿಕರ ಕಣ್ಣಲ್ಲಿ ತಮ್ಮ ಪರವಾಗಿ ಸತ್ತ ಹುತ್ತಾತ್ಮ ನಾಯಕರಾಗುತ್ತಾರೆ. ಕಾರ್ಮಿಕ ಸಂಘಟನೆಗಳು ಇದರಿಂದಾಗಿ ಮತ್ತಷ್ಟು ಸಂಘಟಿತರಾಗಿ ಬೆಳೆಯುತ್ತವೆ. ಕಾರ್ಮಿಕ ಪರ ದನಿ ದೊಡ್ಡ ಮಟ್ಟದಲ್ಲಿ ಬೆಳೆದು ಸಂಸ್ಥೆಗಳ ರೂಪ ಪಡೆಯುತ್ತವೆ. ಇದರ ಪರಿಣಾಮವಾಗಿ ೧೯೦೪ರಲ್ಲಿ ನಡೆದ ಕಾರ್ಮಿಕರ  ಸಂಘಟನೆಗಳ Sixth Conference of the Second International ಕೂಟದಲ್ಲಿ ಈ ಹೇಮಾರ್ಕೆಟ್ ಘಟನೆಯ ಸ್ಮರಣಾರ್ಥ ಪ್ರತಿ ಮೇ ೧ ರಂದು ಅಂತರರಾಷ್ಟ್ರೀಯ ಕಾರ್ಮಿಕರ ದಿನವನ್ನು ಆಚರಿಸುವ ನಿರ್ಣಯಕ್ಕೆ ಬರಲಾಗುತ್ತದೆ.

ಅಂದಿನಿಂದ ಅನೇಕ ರಾಷ್ಟ್ರಗಳಲ್ಲಿ ಇದನ್ನು ಆಚರಿಸಿಕೊಂಡು ಬರಲಾಗಿದೆ. ಕಾರ್ಮಿಕರ ದಿನವನ್ನು ಕಾರ್ಮಿಕರ ಆಶೋತ್ತರ, ಹಕ್ಕುಗಳಿಗೆ  ಪ್ರತೀಕವಾಗಿ ಬಳಸಿಕೊಳ್ಳಲಾಗಿದೆ. ಕ್ರೈಸ್ತ ಧರ್ಮಸಭೆ ಕೂಡ ಕಾರ್ಮಿಕರ ಪಾಲಕ ಸಂತರಾದ ಜೋಸೆಫರ ಹಬ್ಬವನ್ನು ಆಚರಿಸುವುದರ ಮೂಲಕ ತಾನು ಕಾರ್ಮಿಕರ , ಶ್ರಮಿಕರ ಪರ ಎಂದು ತೋರಿಸಿಕೊಟ್ಟಿದೆ.

ಕಾರ್ಮಿಕ ನಾಯಕನಾಗಿದ್ದು ಹೇಮಾರ್ಕೆಟ್ ಘಟನೆಯಲ್ಲಿ ಮರಣದಂಡನೆಗೆ ಒಳಗಾದ ಆಗಸ್ಟ್ ಸ್ಪೈಸ್ ಹೇಳಿದ ಮಾತು ಶೋಷಿತ, ದಮನಕ್ಕೊಳಗಾದ ಜನರ ಪಾಲಿಗೆ ಅಮರ ವಾಕ್ಯವಾಗಿದೆ. ನೇಣು ಕುಣಿಕೆಗೆ ಹಾಕುವ ಮುನ್ನ ಕೊನೆಯ ಮಾತಾಗಿ ಸ್ಪೈಸ್ ಹೇಳಿದ್ದೇನೆಂದರೆ " ನೀವು ಇಂದು ಅದುಮಿಡುತ್ತಿರುವ ದನಿಗಿಂತ ನಮ್ಮ ಮೌನವೇ ಶಕ್ತಿಶಾಲಿಯಾಗಿ ರೂಪುಗೊಳ್ಳುವ ಸಮಯವೊಂದು ಬರುತ್ತದೆ." ಆತನ ಮಾತು ನಿಜವೆಂಬಂತೆ ಕಾರ್ಮಿಕರ ಪರವಾದ ಚಿಂತನೆಗಳು ಮುಂದೆ  ದೊಡ್ಡ ದನಿಯಾಗಿ ಬೆಳೆಯಿತು ಎಂಬುದಕ್ಕೆ ಮೇ ೧ ಸಾಕ್ಷಿಯಾಗಿದೆ. ಆದರೆ ಕಾರ್ಮಿಕರೂ ಸೇರಿದಂತೆ  ನೊಂದ, ಶೋಷಿತರ ದನಿಗಳಿಗೆ ಪೂರ್ಣ ಶಕ್ತಿ, ಸ್ವಾತಂತ್ರ್ಯ ದೊರಕಿದೆಯೇ ಎಂಬುದು ಇಂದಿಗೂ ಪ್ರಶ್ನೆಯಾಗಿಯೇ ಉಳಿದಿದೆ.

Sunday, 30 April 2017

ನನ್ನ ಮೆಚ್ಚಿನ ಫಾ.ಚಸರಾ ಹಾಡುಗಳು - ಭಾಗ 9 - ಈ ಜಗಕ್ಕೆಲ್ಲಾ ಬೆಳಕ್ಕಾಗಿ ಬಾ ದೇವಾ

ಫಾ.ಚಸರಾ ಅನೇಕ ಹಾಡುಗಳಲ್ಲಿ ’ಬೆಳಕಿನ’ ಪ್ರಸ್ತಾಪವಿದೆ ಅಥಾವ ಹಾಡಿನ ಮೂಲ ದ್ರವ್ಯ ’ಬೆಳಕು’ ಆಗಿದೆ.  ಅದಕ್ಕೆ ಮತ್ತೊಂದು ಉದಾಹರಣೆ. ’ಈ ಜಗಕ್ಕೆಲ್ಲಾ ಬೆಳಕ್ಕಾಗಿ ಬಾ ದೇವಾ’ ಎಂಬ ಗೀತೆ. ಸಾಕ್ಷಿ ಧ್ವನಿ ಸುರಳಿಯ ಈ ಗೀತೆ ಸಾಮಾನ್ಯ ಎನ್ನಿಸಿದರೂ ಎಂದಿನಂತೆ ಫಾ.ಚಸರಾರ ಸಾಹಿತ್ಯ ಮನ ಸೆಳೆಯುತ್ತದೆ.

ಕೆಲವು ವರ್ಷಗಳ ಹಿಂದೆ ಸಮಾನ ಮನಸ್ಕ ಗೆಳೆಯರನ್ನೆಲ್ಲಾ ಒಂದು ಕಾರ್ಯಕ್ರಮದಲ್ಲಿ ಸೇರಿಸಿ ಖುದ್ದು ಚಸರಾರವರೇ ಎಲ್ಲರನ್ನೂ ಸಭೆಗೆ ಪರಿಚಯಿಸುತ್ತಿದ್ದರು. ಆ ಸಮಯದಲ್ಲಿ ಜನಧಾರೆಯ ಲಿಲ್ಲಿ ತೆರೇಸರವರನ್ನು ಪರಿಚಯಿಸುತ್ತಾ ಅವರು ಬರೆದ ’ಎಲ್ಲವೂ ಶೂನ್ಯವಿಲ್ಲಿ ನಿಮ್ಮ ವಾಕ್ಯ ಧ್ಯಾನ ಹೊರತು’ ಹಾಡು  ಹಾಗೂ ಹಾಡಿನ ಸಾಹಿತ್ಯ ತಮಗೆ ಬಹಳ ಇಷ್ಟ ಎಂದು ಫಾ.ಚಸರಾರವರು ಹೇಳಿದ ನೆನಪು ಇನ್ನೂ ಇದೆ. ’ಬದುಕು, ಮನಸ್ಸಿನ ಶೂನ್ಯತೆ ಹಾಗೂ ಆ ಶೂನ್ಯತೆಗೆ ಕ್ರಿಸ್ತನೇ ಮದ್ದು’ ಎಂಬ ಭಾವವನ್ನು ’ಈ ಜಗಕ್ಕೆಲ್ಲಾ ಬೆಳಕ್ಕಾಗಿ ಬಾ ದೇವಾ’ ಹಾಡಿನಲ್ಲೂ ನಾವು ಕಾಣಬಹುದು.

ಕನ್ನಡ ಕ್ರೈಸ್ತ ಭಕ್ತಿ ಗೀತೆಗಳ ಭಂಡಾರ ಶ್ರೀಮಂತವಾದದ್ದೇ. ಐದಾರು ದಶಕಗಳಲ್ಲಿ ಬಂದಿರುವ ಜನಪ್ರಿಯ ಹಾಡುಗಳ ಸಾಲು ದೊಡ್ಡದಾಗಿಯೇ ಇವೆ. ಇವುಗಳ ನಡುವೆ ಫಾ.ಚಸರಾ ಕ್ರೈಸ್ತ ಭಕ್ತಿಗಳ ಸಾಹಿತ್ಯದಲ್ಲಿ ತಂದ ನವೀನತೆ ಎಲ್ಲರಿಗೂ ತಿಳಿದದ್ದೇ. ಸಾಂಪ್ರದಾಯಿಕ ಶೈಲಿಗೆ ಭಿನ್ನವಾದ ಹೊಸ ರೀತಿಯ ಪದಗಳು, ಸಾಹಿತ್ಯ, ರಚನೆಗಳನ್ನು ಅಭೂತಪೂರ್ವವಾಗಿ ಸ್ವಾಗತಿಸಿ, ಮೆಚ್ಚಿ, ಬಳಸಿದ್ದು  ಯುವ ಮನಸ್ಸುಗಳೇ. ಈ ಹಿನ್ನಲೆಯಲ್ಲಿ ನೋಡಿದಾಗ ಫಾ.ಚಸರಾರವರ ಹಾಡುಗಳು ಕೇವಲ ಆಕರ್ಷಕ ಪದಗಳ, ಅದಕ್ಕೊಪ್ಪುವ ಮಧುರ ಸಂಗೀತದ, ಜನರ ಭಾವನೆಗಳ ಸಂಗಮ ಮಾತ್ರವಲ್ಲ. ಆಳವಾದ, ಗಂಭೀರವಾದ ದೈವ ಶಾಸ್ತ್ರದ ಸ್ಪರ್ಷ ಅವರ ಸಾಹಿತ್ಯದಲ್ಲಿ ಇದೆ. ಇದಕ್ಕೆ ಉದಾಹರಣೆ ಎಂದರೆ ’ ಈ ಜಗಕ್ಕೆಲ್ಲಾ ಬೆಳಕ್ಕಾಗಿ ಬಾ ದೇವಾ’.

ಯೊವಾನ್ನಾರ ಶುಭ ಸಂದೇಶದ 8:12ರಲ್ಲಿ ಯೇಸು ಸ್ವಾಮಿ "ನಾನೇ ಜಗಜ್ಜ್ಯೊತಿ ನನ್ನನ್ನು ಹಿಂಬಾಲಿಸುವವನು ಕತ್ತಲಲ್ಲಿ ನಡೆಯುವುದಿಲ್ಲ" ಎಂದು ಸ್ಪಷ್ಟವಾಗಿ ಹೇಳುತ್ತಾರೆ. ಈ ಹಿನ್ನಲೆಯಲ್ಲಿ ’ಈ ಜಗಕ್ಕೆಲ್ಲಾ ಬೆಳಕ್ಕಾಗಿ ಬಾ ದೇವಾ’ ಎನ್ನುವ ಸಾಲು ಬಹಳ ಅರ್ಥಗರ್ಭಿತವಾಗಿ ಕಾಣುತ್ತದೆ. ’ಜಗಜ್ಜ್ಯೋತಿಯಾಗಿರುವ ಯೇಸುವೇ , ಈ ಜಗಕ್ಕೆ ಬೆಳಕ್ಕಾಗಿ ಬಾ’ ಎನ್ನುವುದು ಒಂದು ಸಾಮಾನ್ಯ ಕರೆಯಂತೆ ಕಂಡರೂ ’ಇಲ್ಲಿ ಬೆಳಕಿಲ್ಲ ನೀನಿಲ್ಲದೆ’ ಎಂಬ ಆ ’ಬೆಳಕಾಗಿ ಬಾ’ ಎನ್ನುವ ಕರೆಗೆ  ದೊಡ್ಡ ಅರ್ಥವನ್ನು ನೀಡುತ್ತದೆ. ಈ ಮೂಲಕ ನಾವು ಕತ್ತಲಲ್ಲಿ ನಡೆಯದಂತೆ ಮಾಡು ಹಾಗೂ ನಿನ್ನನ್ನು ಹಿಂಬಾಲಿಸುವಂತೆ ಮಾಡು ಎನ್ನುವ ಪ್ರಾರ್ಥನೆ ಇದೆ. ಈ ಸಾಲುಗಳು ಶುಭಸಂದೇಶದಿಂದ ಪ್ರೇರಿತವಾದುದು ಎಂದುಕೊಂಡರೂ ಮುಂದಿನ ಸಾಲುಗಳು ಫಾ.ಚಸರಾರವರ ಬತ್ತಳಿಕೆಯದು ಎಂದರೆ ತಪ್ಪಾಗಲಾರದು. ಹಗಲೆಂಬುದು  ಬೆಳಕಿನ ಪ್ರತೀಕವಾದರೂ ’ಏಕಾಂತ’ ಎಂಬುದು ಕತ್ತಲಯಷ್ಟೇ ಖಿನ್ನತೆ ತರಬಲ್ಲದು. ತನಗೆ ಯಾರೂ ಇಲ್ಲವೆಂಬ ಒಂಟಿತನ, ಅನಾಥ ಪ್ರಜ್ಞೆ, ನೋವು ಕತ್ತಲಯಷ್ಟೇ ಭೀಕರವಾಗಿರಬಲ್ಲದು. ಗುರಿಯಿಲ್ಲದ, ಮಾರ್ಗ ಕಾಣದ ಕತ್ತಲ್ಲಲ್ಲಿರುವ ಜಗಕ್ಕೆ ಬೆಳಕ್ಕಾಗಿ ಬಾ ಎನ್ನು ವ ಸಾರ್ವತ್ರಿಕ ಬೇಡಿಕೆಯೊಂದಿಗೆ , ಬೆಳಕಲ್ಲಿ ಇದ್ದರೂ ಏಕಾಂತದಿಂದ ಬಳಲುವ ಮನಕ್ಕೆ ಜೊತೆಗಾರನಾಗಿ ಬಾ ಎನ್ನುವ ವ್ಯಯಕ್ತಿಕ ಪ್ರಾರ್ಥನೆಯನ್ನು ಮೊದಲೆರೆಡು  ಸಾಲುಗಳಲ್ಲಿ ಕಾಣಬಹುದು.ಏಕಾಂತದ ಮನಕ್ಕೆ ಪ್ರತಿ ಕ್ಷಣವೂ ಯುಗವಾಗಿ ಕಾಣುತ್ತದೆ. ಹೊತ್ತು ಹೋಗದ ಈ ಭಾರವಾದ , ದೀರ್ಘ ಕ್ಷಣಗಳನ್ನು ನೀನು ಜೊತೆಗಿದ್ದು ಹಗುರಗೊಳಿಸು ಎಂಬ  ಬೇಡಿಕೆಯೊಂದಿಗೆ ಪಲ್ಲವಿ ಮುಗಿಯುತ್ತದೆ.

ಚರಣದಲ್ಲಿ ’ನೀನಿರದ ಮನೆಯಲ್ಲಿ ನಾನ್ಯಾರೋ’ ಎಂಬ ಸಾಲುಗಳಲ್ಲಿ ಮನೆಯೆಂಬುದು ನಮ್ಮ ಮನಸ್ಸಿನ ರೂಪಕವಾಗಿ ಬಳಕೆಯಾಗಿದೆ. ಈ ಮನಸ್ಸಲ್ಲಿ ನೀನಿಲ್ಲದಿದ್ದರೆ ’ನನ್ನ’ ಅಸ್ತಿತ್ವವೇ ಇಲ್ಲ ಎಂಬುದನ್ನು ಹೇಳಲಾಗಿದೆ. ಇಲ್ಲಿ ’ಮನೆ’ ಎಂದರೆ  ಈ ಲೋಕವೂ ಆಗಬಹುದೇ? ಎಂಬ ಪ್ರಶ್ನೆಯೂ ಕಾಡುತ್ತದೆ. ದೇವನಿಲ್ಲದ ಈ ಜಗತ್ತಲ್ಲಿ ನಾನ್ಯಾರು? ಅಂತಹ ಜಗತ್ತು ನನಗ್ಯಾಕೆ ಎಂಬ ಅರ್ಥವೇ? ’ನಡೆಯಲ್ಲಿ ನುಡಿಯಲ್ಲಿ ದೇವನಿಲ್ಲದೆ ಬಹಿರಂಗ ಚೆಲುವೇತಕೋ’ ಎಂಬ ಸಾಲುಗಳಲ್ಲಿ ಆತ್ಮ ವಿಮರ್ಶೆಯಿದೆ. ಮುಂದೆ ಅದಕ್ಕೆ ಉತ್ತರವಾಗಿ ’ ನನ್ನಲ್ಲಿ ಸಾಕಾರವಾಗು’ ಎಂಬ ಬೇಡಿಕೆ ಇದೆ. ’ಆಕಾರ ನಾನು ಸಾಕಾರ ನೀನು’ ಎಂಬುದು ನಮ್ಮಲ್ಲಿ ಸುಕಾರ್ಯಗಳನ್ನು ಮಾಡಿಸುವ ’ಪವಿತ್ರಾತ್ಮರ’ ಬಗೆಗಿನ ಉಲ್ಲೇಖವೂ ಆಗಬಹುದು.

ಮುಂದಿನ ಚರಣದಲ್ಲಿ ಮತ್ತಷ್ಟು ದೈನ್ಯ ಬೇಡಿಕೆಗಳಿವೆ. ’ನನ್ನ ಅಂತರಂಗವನ್ನು ತುಂಬಿಕೋ’ ಎಂಬುದು ಒಂದಾದರೆ, ’ಎಲ್ಲವನ್ನೂ ನೋಡುವ ನನ್ನ ಕಣ್ಣುಗಳಿಗೆ ನೀನು ಕಾಣದೆ ಹೋದರೆ,ಮಾತುಗಳು ಅರ್ಥ ಕಳೆದುಕೊಳ್ಳುತ್ತದೆ, ಆದರಿಂದ ನನ್ನ ಕಣ್ಣುಗಳಲ್ಲಿ ಸೇರಿಕೋ’ ಎಂಬ ಮಾತಿದೆ. ಇಲ್ಲಿ ಕಣ್ಣೆಂದರೆ ಅದು ಹೃದಯವೂ ಆಗಬಹುದು. ’ ನಿನ್ನ ಸಾಧನೆಗಳಿಗೆ ನಾನು ಸಾಧನವಾಗುವ ಈ ಸುಂದರ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸು’ ಎನ್ನುತ್ತಾ ಹಾಡು ಮುಕ್ತಾಯಗೊಳ್ಳುತ್ತದೆ.

ಹಾಡು ಪ್ರತಿ ಹಂತದಲ್ಲೂ ’ದೇವನಿಲ್ಲದೆ,  ಆತನ ಪ್ರೀತಿ, ಬೆಳಕಿಲ್ಲದೆ ತಾನು ಏನೂ ಅಲ್ಲ, ತನ್ನಲ್ಲಿ ಏನೂ ಇಲ್ಲ’ ಎಂಬ ದೀನತೆಯನ್ನು ಪ್ರತಿಪಾದಿಸುತ್ತದೆ. ಮನಸ್ಸಿನ, ಬದುಕಿನ, ನಡೆ ನುಡಿಯಲ್ಲಿನ ಟೊಳ್ಳುತನ, ಖಾಲಿತನ, ಶೂನ್ಯತೆಯನ್ನು ವಿಮರ್ಶಿಸುತ್ತಾ ಅದಕ್ಕೆ ತಕ್ಕ ಉತ್ತರವನ್ನು ಕಂಡುಕೊಳ್ಳುತ್ತಾ, ಸಹಾಯ ಬೇಡುತ್ತಾ, ಸಮಾಧಾನಗೊಳ್ಳುತ್ತಾ ಸಾಗುವ ಪಯಣದಂತಿದೆ ಈ ಹಾಡು. ಈ ಹಾಡಿನಲ್ಲಿ ನನಗೆ ಕಾಣಿಸಿದ ವಿಶೇಷತೆ ರಾಗ ಸಂಯೋಜನೆಯಲ್ಲಿದೆ. ಚರಣದ ಸಾಹಿತ್ಯದಲ್ಲಿ ಬರುವ ಪ್ರಶ್ನೆಗಳು ಎತ್ತರದ ಸ್ವರಗಳಲ್ಲಿ, ಅಂದರೆ ಸಂಗೀತದ  ಹೈಯರ್ ನೋಟ್ಸ್ ಗಳಲ್ಲಿದ್ದು, ಅದಕ್ಕೆ ಉತ್ತರ ಸಮಾಧಾನದ ಸಾಹಿತ್ಯ ಲೋವರ್ ನೋಟ್ಸ್ ಗಳಲ್ಲಿದೆ. ಇದು ಪ್ರಜ್ಞಾಪೂರ್ವಕಾವಾಗಿ ರಚಿತವಾದದ್ದೇ ? ಗೊತ್ತಿಲ್ಲ.

ಬಹಳ ಇಂಪಾದ ಆಲಾಪನೆಯೊಂದಿಗೆ ಪ್ರಾರಂಭವಾಗುವ ಹಾಡು, ಕೊನೆಯವರೆಗೂ ಅದೇ ಮಾಧುರ್ಯವನ್ನು ಉಳಿಸಿಕೊಳ್ಳುತ್ತದೆ. ಪಲ್ಲವಿ ಚರಣದ ನಡುವಿನ ಇಂಟರ್‍ ಲ್ಯೂಡ್ , ಅದರಲ್ಲೂ ವಯಲೀನ್ ಬಹಳ ಸುಂದರವಾಗಿ ಬಳಕೆಯಾಗಿದೆ. ಗಾಯನ ಉತ್ತಮವಾಗಿದ್ದರೂ ಕೊನೆಗೆ ಫಾ.ಚಸರಾರವರ ಸಾಹಿತ್ಯದ್ದೇ ಮೇಲುಗೈ.

- ಪ್ರಶಾಂತ್ ಇಗ್ನೇಶಿಯಸ್ 

Thursday, 30 March 2017

ನನ್ನ ಮೆಚ್ಚಿನ ಫಾ.ಚಸರಾ ಹಾಡುಗಳು - ಭಾಗ 8 - ’ಅಗೋ ನೋಡಿ ಅಗೋ ನೋಡಿ ಸಾಗುತ್ತಿಹರು ಕ್ರಿಸ್ತರು’

ಸಂವೇದ್ಯ ಧ್ವನಿಸುರಳಿಯ ’ಅಗೋ ನೋಡಿ ಅಗೋ ನೋಡಿ ಸಾಗುತ್ತಿಹರು ಕ್ರಿಸ್ತರು’ ಮತ್ತೊಂದು ಸುಂದರ ಗೀತೆ. ಕ್ರಿಸ್ತನ  ಕೊನೆಯ ಪಯಣದ ದೃಶ್ಯಗಳಂತೂ ಚಿತ್ರದ ಹೈಲೈಟಾಗಿ ಮೂಡಿ ಬಂದಿದೆ. ಯೇಸು ಬಂಧನಕೊಳ್ಳಗಾಗಿ ಶಿಲುಬೆಯನ್ನು ಹೊತ್ತುಕೊಂಡು ಹೋಗುವುದನ್ನು ಹೇಳುವ ಹಾಡಿನ ರೂಪ. ಜೆರುಸಲೇಮ್ ನಗರಕ್ಕೆ ಯೇಸುವನ್ನು ಹುಡುಕಿಕೊಂಡು ಬಂದ ಹೊಸಬನೊಬ್ಬ ಅಲ್ಲಿನ ಸ್ಥಳೀಯನನ್ನು  "ಯೇಸು ಎಲ್ಲಿ"? ಎಂದು ಕೇಳಿದರೆ, ಎಲ್ಲವನ್ನೂ ಬಲ್ಲ ಮತ್ತೊಬ್ಬ  ಕ್ರಿಸ್ತನನ್ನು ತೋರಿಸಿಕೊಂಡು ಹೇಳುವಂತಿದೆ ಈ ಹಾಡು.

೧೯೫೯ರಲ್ಲಿ ಬಿಡುಗಡೆಯಾದ ಬೆನ್‍ಹರ್ ಚಿತ್ರದಲ್ಲಿ ಇದೇ ರೀತಿಯ ದೃಶ್ಯ ಚಿತ್ರದ ಕೊನೆಯ ಭಾಗದಲ್ಲಿ ಬರುತ್ತದೆ. ಅದು ಯೇಸು ಕ್ರಿಸ್ತನನ್ನು ಶಿಲುಬೆಗೇರಿಸುವ ದೃಶ್ಯಗಳು.  ಯೇಸುವಿನ ಕಾಲಘಟ್ಟದವನೇ ಆದ ಬೆನ್‍ಹರ್ ನ ಕಥೆಯಾದ ಈ ಚಿತ್ರದಲ್ಲಿ ಯೇಸು ಕ್ರಿಸ್ತ  ಕೆಲವೇ ದೃಶ್ಯಗಳಲ್ಲಿ ಬಂದು ಹೋಗುತ್ತಾರೆ.  ಕಥಾನಾಯಕ ಬೆನ್‍ಹರ್ ತನ್ನ ವಿರೋಧಿಗಳ ಸಂಚಿಗೆ ಬಲಿಯಾಗಿ, ತನ್ನ ದೇಶದಿಂದ ದೂರವಾಗುವ ಸಂದರ್ಭ ಬಂದಿರುತ್ತದೆ.  ಮತ್ತೆ ಮರಳಿ ಬರುವಷ್ಟರಲ್ಲಿ ತಾಯಿ ಹಾಗೂ ತಂಗಿ ಕುಷ್ಠ ರೋಗದಿಂದ ಬಳಲುತ್ತಿರುತ್ತಾರೆ.  ನಜರೇತಿನ ಯೇಸು ಕುಷ್ಠ ರೋಗದವರನ್ನು ಗುಣಪಡಿಸುತ್ತಾರೆ ಎಂದು ಬೆನ್‍ಹರ್ ನ ಹೆಂಡತಿ ಹೇಳುತ್ತಾಳೆ. ಇದೇ ನಂಬಿಕೆಯಿಂದ ಯೇಸುವನ್ನು ಕಾಣುವ ತವಕದಲ್ಲಿ ಇಡೀ ಕುಟುಂಬ ಜೆರುಸಲೇಮ್ ನಗರಕ್ಕೆ ಬರುತ್ತದೆ. 

ಇಡೀ ಜೆರುಸಲೇಮ್ ನಗರದ ರಸ್ತೆಗಳೆಲ್ಲಾ ಬಿಕೋ ಎನ್ನುತ್ತಿದೆ. ಅದೇ ದಿನ ಯೇಸುವಿನ ಬಂಧನವಾಗಿ, ಪಿಲಾತನ ತೀರ್ಪಿನ ಪ್ರಕಾರ ಯೇಸುವನ್ನು ಕಪಾಲ ಬೆಟ್ಟಕ್ಕೆ ಕರೆದುಕೊಂಡು ಹೋಗಲಾಗುತ್ತಿದೆ.  ಎಲ್ಲರೂ ಕ್ರಿಸ್ತನನ್ನು ಶಿಲುಬೆಗೇರಿಸುವ ಸ್ಥಳದಲ್ಲಿ ಸೇರಿದ್ದಾರೆ.  ಬಿಕ್ಷೆ ಬೇಡುವವನೊಬ್ಬ ಜನರೆಲ್ಲಾ ಯೇಸುವಿನ ವಿಚಾರಣೆಯನ್ನು ನೋಡಲು ಹೋಗಿದ್ದರೆ ಎಂದು ಹೇಳುತ್ತಾನೆ. ’ಅಗೋ ನೋಡಿ’ ಗೀತೆಯ ಸಂದರ್ಭವೂ ಅಂತಹುದೇ. 

ಯೇಸು ಭಾರವಾದ ಶಿಲುಬೆಯನ್ನು ಹೊತ್ತುಕೊಂಡು ಹೋಗುವ ಸಂದರ್ಭದಲ್ಲಿ ಬೆನ್‍ಹರ್ ‍ನ ಕುಟುಂಬ ಯೇಸುವನ್ನು ನೋಡುತ್ತದೆ. ಬಹಳ ಸಂಭಾಷಣೆಗಳಿಲ್ಲದ ಈ ದೀರ್ಘ ದೃಶ್ಯಗಳಲ್ಲಿ ಹಿನ್ನಲೆ ಸಂಗೀತ ಹಾಗೂ ಶಬ್ದಗ್ರಹಣೆ ಅದ್ಭುತವಾಗಿದೆ. ೬೦ ವರ್ಷಗಳು ಕಳೆದರೂ ಈ ಚಿತ್ರದ ಹಿನ್ನಲೆ ಸಂಗೀತ ಇನ್ನೂ ಜನಪ್ರಿಯವಾಗಿದೆ. ಈ ದೃಶ್ಯಗಳಿಗೇನಾದರೂ ಕನ್ನಡದ ಯಾವುದಾದರೂ ಹಾಡು ಬಳಸಬಹುದೇನೋ ಎನ್ನಬಹುದಾದರೆ, ಅದು ’ಅಗೋ ನೋಡಿ’ ಗೀತೆ ಎನ್ನಬಹುದು. ’ಆಗೋ ನೋಡಿ’ ಯ ವಾದ್ಯ ಸಂಯೋಜನೆಗೂ ಆ ದೃಶ್ಯಗಳ ಹಿನ್ನಲೆ ಸಂಗೀತಕ್ಕೂ ಒಂದು ರೀತಿಯ ಸಾಮ್ಯತೆಯೂ ಇದೆ.

ಮರಿಯಾಪುರಾ ಮಹಿಮೆ ನಾಟಕದಲ್ಲಿ ಬಳಕೆಯಾದ ಗೀತೆಯಾದುದರಿಂದ ಈ ಗೀತೆಗೆ ಒಂದು ನಾಟಕೀಯತೆಯ, ಮೆಲೋಡ್ರಾಮದ ಸ್ಪರ್ಷವಿದೆ. ಶಿಲುಬೆಯನ್ನು ಹೊತ್ತು ಕೊಂಡು ಹೋಗುತ್ತಿರುವ ಕ್ರಿಸ್ತನ ದೈಹಿಕ ಹಾಗೂ ಮಾನಸಿಕ ಸ್ಥಿತಿಯ ಬಗ್ಗೆ ಒತ್ತಿ ಹೇಳುವಂತೆ ಇದೆ ಈ ಗೀತೆ. ಹಾಗೇ ನೋಡಿದರೆ ಕ್ರಿಸ್ತನ ಇಡೀ ಜೀವನವೇ ಶಿಲುಬೆಯತ್ತ ಪಯಣವೇ ಎನ್ನಬಹುದು. ಅನ್ಯಾಯದ, ದಬ್ಬಾಳಿಕೆಯ ವಿರುದ್ಧ ಧ್ವನಿಯಾದಾಗಲೇ ಸಾವು ಖಚಿತವಾದರೂ ಎಡಬಿಡದೆ ನೊಂದವರ ಪರ ದನಿಗೂಡಿಸಿದವರು ಯೇಸು. ಆ ನಿಟ್ಟಿನಲ್ಲಿ ನೋಡಿದರೆ ಕ್ರಿಸ್ತ ಮೊದಲಿನಿಂದಲೂ ಶಿಲುಬೆಯತ್ತ ಸಾಗಿದವರೇ, ತಮ್ಮ ಶಿಷ್ಯರಿಗೂ, ಹಿಂಬಾಲಕರಿಗೂ ಶಿಲುಬೆಯನ್ನು ಹೊರಲು ಕರೆಕೊಟ್ಟವರು ಅವರು.

ಹೀಗೆ ಕೊನೆಯ ಯೇಸುವಿನ  ಕೊನೆಯ ಪಯಣವನ್ನು ತೋರಿಸುತ್ತಾ ಸಾಗುವ ಗೀತೆ ಮೊದಲೇ ಹೇಳಿದಂತೆ ಯೇಸುವಿನ ಬಳಲಿಕೆಯನ್ನು ಒತ್ತಿ ಹೇಳುತ್ತದೆ. ಈ ಬಳಲಿಕೆ ಕಾರಣಗಳನ್ನು ಪಲ್ಲವಿಯಲ್ಲಿನ ಸಾಹಿತ್ಯವೇ ಹೇಳುತ್ತದೆ. ದಣಿದ ದೇಹಕ್ಕಿಂತ ಯೇಸುವಿನ ನೊಂದ ಮನಸ್ಸು ಹಾಗೂ ಬೆಂದ ಹೃದಯವೇ ಆ ಬಳಲಿಕೆಗೆ ಕಾರಣವೇನೋ.

ಇನ್ನೂ ಚರಣದಲ್ಲಿ ಹೇಗೆ ಸ್ವಂತ ಜನರೇ ಯೇಸುವಿಗೆ ಮುಳುವಾದರು ಎಂಬುದನ್ನು ಹೇಳುತ್ತದೆ. ಮುತ್ತಿಟ್ಟು ತೋರಿಸಿಕೊಟ್ಟ ಶಿಷ್ಯ, ನಾನರಿಯೇ ಎಂದು ನಿರಾಕರಿಸಿದ  ಮತ್ತೊಬ್ಬ ಆಪ್ತ ಶಿಷ್ಯ, ಬಂಧನಕ್ಕೊಳಗಾಗುತ್ತಿದ್ದಂತೆ ದಿಕ್ಕಾಪಾಲಾಗಿ ಹೋದ ಇನ್ನಿರರು, ಬರಬ್ಬಾಸನನ್ನು ಬಿಟ್ಟು ಬಿಡಿ ಎಂದ ಜನರು ಎಲ್ಲರೂ ಇದರಲ್ಲಿ ಭಾಗಿಗಳೇ. ಅಷ್ಟು ಮಾತ್ರವಲ್ಲದೆ ಬೋಧನೆ ಕೇಳಿದ, ಅದ್ಭುತಗಳಿಂದ ಉಪಯೋಗ ಪಡೆದ ಜನರು ಸಹಾ ಯಾವುದೇ ರೀತಿಯ ಸಹಾಯಕ್ಕೆ ಬಾರದೇ ಹೋದರು. 

ಇದಲ್ಲವೂ ಯಾವುದೇ ವ್ಯಕ್ತಿಯನ್ನು ವಿಚಲಿತರನ್ನಾಗಿ ಮಾಡಬಹುದು. ಯೇಸು ಸಹಾ ಇದಕ್ಕೆ ಹೊರತಾಗಿರಲಿಲ್ಲ ಎಂಬ ಸಂದೇಶ ಇಲ್ಲಿದೆ. ಇಲ್ಲಿ ಮತ್ತೊಮ್ಮೆ ಅತ್ಯಂತ ಪರಿಣಾಮಕ್ಕಾರಿಯಾದ ರೂಪಕವನ್ನು ಬಳಸಲಾಗಿದೆ. ನೆರಳು, ಫಲ ನೀಡಬೇಕಾದ ಮನೆಯ ಬಳ್ಳಿ, ಕೊರಳ ಸುತ್ತಿಕೊಳ್ಳುವ ಅದೂ ತಪ್ಪಿಸಿಕೊಳ್ಳಲಾಗದ ವಿಷದ ಪಾಶವಾಗುವ ರೂಪಕ, ಜನರ ಮೋಸದ ಘೋರತೆಯನ್ನು ಸೂಚಿಸುತ್ತದೆ.

ಎರಡನೆಯ ಚರಣ ಮತ್ತಷ್ಟು ಆಳವಾಗಿದೆ.  ಸ್ವರ್ಗದಿಂದ ಭೂಮಿಗೆ ಬಂದ ಅರಸನು ಭೂಮಿಗೆ ಸ್ವರ್ಗದ ಸ್ಪರ್ಷವನ್ನು ನೀಡಬಹುದಿತ್ತೇನೋ. ಆದರೆ ಮನುಜರ ಸ್ವಾರ್ಥದಿಂದ ನರಕವನ್ನು ನೋಡುವಂತಾಯಿತು. ಸ್ವರ್ಗದ ವರವನ್ನು ನೀಡಬಹುದಾದವರೇ ಘೋರ ಮರಣದ ಶಾಪವನ್ನು ಪಡೆದರು. ಪ್ರೀತಿ ಕ್ಷಮೆಯನ್ನು ಪಡೆದ ಜನರು ಪ್ರೀತಿಯನ್ನು ಹಂಚುವ ಬದಲು, ಕ್ಷಮಾಗುಣವನ್ನು ಹೊಂದುವ ಬದಲು ಕಟುಕಾರದ ದ್ವಂದ್ವಗಳತ್ತ ಇಲ್ಲಿ ಬೆಳಕು ಚೆಲ್ಲಲಾಗಿದೆ.

ಮಹಿಮೆಯಲ್ಲಿ ಈ ಹಾಡು ಒಂದು ರೀತಿಯ ಶಿಲುಬೆ ಹಾದಿ. ಯೇಸುವಿನ ಯಾತನೆಯನ್ನು ಬಹಳ ಪರಿಣಾಮಕ್ಕಾರಿಯಾಗಿ ತೋರಿಸಲು ಬಳಕೆಯಾಗಿರುವ ಈ ಹಾಡು ನಿಜಕ್ಕೂ ನೋಡುಗರ ಮನವನ್ನು ಕಾಡುತ್ತದೆ. ಸಾಹಿತ್ಯ ಸಂಗೀತ ದೃಶ್ಯ ರೂಪಗಳ ಸಮರ್ಥ ಸಂಗಮಕ್ಕೆ ಉದಾಹರಣೆಯಾಗಿದೆ ಈ ಹಾಡು.

- ಪ್ರಶಾಂತ್ ಇಗ್ನೇಶಿಯಸ್ 

Tuesday, 28 February 2017

ನನ್ನ ಮೆಚ್ಚಿನ ಫಾ.ಚಸರಾ ಗೀತೆಗಳು - ಭಾಗ 7 - "ಎಲ್ಲೋ ಒಂದು ಲೋಕವಿದೆ ನಮ್ಮ ಮುಂದಿನ ಬದುಕು ಅಲ್ಲಿದೆ"

ನನ್ನ ಮೆಚ್ಚಿನ ಫಾ.ಚಸರಾ ಗೀತೆಗಳು - ಭಾಗ 7

ಫಾ.ಚಸರಾರವರ "ಎಲ್ಲೋ ಒಂದು ಲೋಕವಿದೆ ನಮ್ಮ ಮುಂದಿನ ಬದುಕು ಅಲ್ಲಿದೆ" ಗೀತೆಯ ಜನಪ್ರಿಯತೆಯ ಬಗ್ಗೆ ನಾನು ಹೆಚ್ಚು ಹೇಳುವಂತಾದೇನಿಲ್ಲ. ಆದರೆ ಅವರ ಗೀತೆಗಳಲ್ಲಿ ಅತ್ಯಂತ ಭಾವಪೂರ್ಣ ಗೀತೆಗಳಲ್ಲಿ ಇದು ಮೊದಲ ಸಾಲಿನಲ್ಲಿ ನಿಲ್ಲುವುದರಲ್ಲಿ ಸಂದೇಹವಿಲ್ಲ.

ಹಾಗೇ ನೋಡಿದರೆ ಮೇಲ್ನೋಟಕ್ಕೆ ಈ ಗೀತೆ ಒಂದು ವಿಷಾದ ಗೀತೆಯಂತೆ ಕಂಡು ಬಂದರೂ, ಭರವಸೆಯ ಪ್ರತೀಕದ ಗೀತೆಯಂದೇ ಹೇಳಬಹುದು. ಈ ಲೋಕದ ಎಲ್ಲವೂ, ಎಲ್ಲರೂ ನಮ್ಮ ಕೈ ಬಿಟ್ಟರೂ, ದೇವರೊಬ್ಬರಿದ್ದರೆ ಸಾಕು ಎಂಬ ಆಶಯ ಒಂದು ಕಡೆ ಇದೆ. ಆದರೆ ಗೀತೆಯ ಪ್ರಮುಖ ಭಾವವೆಂದರೆ ಈ ಲೋಕ, ಈ ಲೋಕದ ಜಂಜಾಟವೆಲ್ಲವೂ ಮುಂದಿನ ಲೋಕದ ಅಗಾಧತೆಯ ಮುಂದೆ ಕ್ಷಣಿಕ ಎಂಬುದು. ಈ ಅಗಾಧತೆ ಇರುವುದು ಕೇವಲ ಗಾತ್ರ, ಸಮಯದ ಅಳತೆಗೋಲಿನಲ್ಲಲ್ಲ , ಆದರೆ ಅಲ್ಲಿನ ಮೌಲ್ಯಗಳಲ್ಲಿ. ದ್ವೇಷ-ರೋಷ, ಸ್ವಾರ್ಥ-ಮೋಸಗಳ ಸಣ್ಣತನಗಳನ್ನು ಮೀರಿದ ಅಗಾಧ ಪ್ರೀತಿಯ ಲೋಕ ಅದು ಎಂಬುದನ್ನು ಕೇವಲ ಎರಡು ಆರಂಭಿಕ ಸಾಲುಗಳಲ್ಲಿ ಅದ್ಭುತವಾಗಿ ಹಿಡಿದಿಡುತ್ತದೆ ಗೀತೆ.

ಗೀತೆಯಲ್ಲಿ ಫಾ.ಚಸರಾರ ಸಾಹಿತ್ಯ  ಎಂದಿನಂತೆ ಸರಳವಾದರೂ ಗಾಢ ಹಾಗೂ ಆಳ. ತಮ್ಮದೇ ಅನುಭವವೇನೋ ಎಂದು ಪ್ರತಿ ಕೇಳುಗನಿಗೂ ಅನ್ನಿಸುವಷ್ಟು ಆತ್ಮೀಯ. ಸಂಗೀತ ಹಾಗೂ ರಾಗ ಸಂಯೋಜನೆ ಪ್ರವೀಣ್ ಸ್ಟೀಫನ್ ದತ್ತ್ ರವರದಾಗಿದ್ದೂ, ಅಚ್ಚರಿ ಎಂಬಂತೆ ಅವರದೇ ದನಿ ಗೀತೆಗೆ ಲಭಿಸಿದೆ. ಈ ರೀತಿಯ ಅಚ್ಚರಿಗಳನ್ನು ಪುಟ್ಟಣ್ಣ ಕಣಗಾಲ್ ತಮ್ಮ ಚಿತ್ರದ ಹಾಡುಗಳಲ್ಲಿ ನೀಡುತ್ತಿದ್ದದ್ದನ್ನು  ನಾವು ಗಮನಿಸಬಹುದು. ನಿಜಕ್ಕೂ ಸ್ಟೀಫನ್ ರವರ ಗಾಯನದಿಂದ ಈ ಗೀತೆಗೆ, ಸಂಗೀತ ಸಂಯೋಜನೆಗೆ, ಅದರಲ್ಲೂ ಗೀತೆಯ ಆಶಯ ಹಾಗೂ ಭಾವಕ್ಕೆ ಸಿಗಬೇಕಾದ ಮೌಲ್ಯ ಸಿಕ್ಕಿದೆ ಎಂದೇ ಹೇಳಬಹುದು. ಹಾಡಿನಲ್ಲಿ ಬಳಕೆಯಾಗಿರುವ ವಾದ್ಯ ಸಂಯೋಜನೆ, ವಾದ್ಯಗಳು, ಕೋರಸ್ ಎಲ್ಲವೂ ಕೇಳುಗರನ್ನು ಬೇರೆಯದೇ ಲೋಕಕ್ಕೆ ಕರೆದೊಯ್ಯುವಂತಿದೆ. ಫಾ.ಚಸರಾರವರ ಸಾಹಿತ್ಯ ಅವರದೇ ಸ್ವಗತವೇನೋ ಎನಿಸುವಷ್ಟು ಗಾಢ.

ಮೊದಲ ಚರಣದಲ್ಲಿ ಬರುವ ’ಅದೊಂದು ದೂರ ಪಯಣ’ ’ಅದೊಂದು ಕತ್ತಲ ದಾರಿ’ ಎಂಬ ಸಾಲುಗಳು, ಜೀವನದಲ್ಲಿ ಪ್ರತಿಯೊಬ್ಬರು ಎದುರಿಸುವ ಸವಾಲು, ನಡೆಸುವ ಹೋರಾಟದ ಪ್ರತೀಕದಂತಿದೆ. ದಾರಿಯ ಗುರಿ ಸೇರದೇ ಇದ್ದರೂ, ಸೋತರೂ ದೇವರೊಬ್ಬರಿದ್ದರೆ ಸಾಕು ಎಂಬ ಭಾವಕ್ಕೆ ನಿಲ್ಲದೆ, ದೇವರು ಸ್ಪರ್ಷಕ್ಕೆ ಸಿಗುವಷ್ಟು ಹತ್ತಿರವಿರಬೇಕು ಎಂಬ ಕಳಕಳಿಯ ಪ್ರಾರ್ಥನೆ ಇದೆ.   ಇನ್ನೂ ಎರಡನೆಯ ಚರಣದಲ್ಲಿನ ಸಾಲುಗಳು ಕಳೆದುಕೊಂಡ, ಕಳಚಿಕೊಂಡ ಗೆಳತನಕ್ಕೆ ಮರುಗುತ್ತಾ, ಆ ಗಾಯಕ್ಕೆ ದೈವ ಸಾಂತ್ವನದ ಲೇಪನವನ್ನು ಕೇಳಿಕೊಳ್ಳುತ್ತದೆ. ’ದೇವ ಬಾರ ನನ್ನ ಕರೆದೊಯ್ಯ ಬಾರ’ ಎಂಬುವಲ್ಲಿ ಸ್ಟೀಫನ್ ರವರ ಗಾಯನ ಮನಕಲಕ್ಕುವಂತಿದೆ.

ಈ ರೀತಿಯ ಹಾಡುಗಳ ಹುಟ್ಟು, ಹಿಂದಿನ ಸ್ಪೂರ್ತಿ, ಸಿದ್ಧತೆಗಳ ಬಗ್ಗೆ ನನಗದೂಂದು ತೀರದ ಕುತೂಹಲ.  ಇನ್ನೂ ಅನೇಕರದೂ ಇರಬಹುದು. ಇದೇ ಕುತೂಹಲದಿಂದ  ಗೀತೆಯಲ್ಲಿ ಪೂರ್ಣವಾಗಿ ಭಾಗಿಯಾಗಿದ್ದ ಸ್ಟೀಫನ್‍ರವರನ್ನು ಗೀತಯ ಬಗ್ಗೆ ಸಂಪರ್ಕಿಸಿದಾಗ, ಅನೇಕ ಆಸಕ್ತಿಕರ ವಿಷಯಗಳು ಹೊರಬಂದವು. ಅದನ್ನೇ ಸಂದರ್ಶನದ ರೂಪದಲ್ಲಿ ನಿಮ್ಮ ಮುಂದೆ ಇಡುವ ಪ್ರಯತ್ನ ಇಲ್ಲಿದೆ.

ಪ್ರಶ್ನೆ : ಈ ಗೀತೆಯ ಬಗ್ಗೆ ನಿಮ್ಮ ಹಾಗೂ ಫಾ.ಚಸರಾರವರ ಮೊದಲ ಮಾತುಕತೆಯ ನೆನಪುಗಳನ್ನು ಹೇಳಬಲ್ಲಿರಾ?

ಸ್ಟೀಫನ್ ದತ್ತ್ : 2002ರಲ್ಲಿ ಫಾ ಚಸರಾ ಈ ಗೀತಯೆನ್ನು ಒಳಗೊಂಡ ಧ್ವನಿಸುರಳಿಯ ಬಗ್ಗೆ  ನನ್ನನ್ನು ಸಂಪರ್ಕಿಸಿದರು. ಸಾಮಾನ್ಯವಾಗಿ ಹಾಡುಗಳ ಹಿನ್ನಲೆ ಸಂಗೀತವನ್ನು ನಾನು ಮನೆಯಲ್ಲೇ ಸಂಯೋಜಿಸುತ್ತೇನೆ. ಇದರಿಂದ ಸ್ಟುಡಿಯೋ ಸಮಯ ಉಳಿತಾಯವಾಗುತ್ತದೆ. ಫಾ.ಚಸರಾರವರ ಗೀತೆಗಳಿಗೆ ಸಂಯೋಜನೆ ಮಾಡುವಾಗಲೆಲ್ಲಾ ಅವರ ಜೊತೆ ಅಧ್ಯಾತ್ಮಿಕ ಹಾಗೂ ತತ್ವದ ವಿಷಯದಲ್ಲಿ ಸುಂದರವಾದ ಮಾತುಕತೆ ನಡೆಯುತ್ತಿತ್ತು.

ಪ್ರಶ್ನೆ : ಈ ಗೀತೆಯ ಸಂಯೋಜನೆ ಹೇಗೆ ಪ್ರಾರಂಭವಾಯಿತು?

ಸ್ಟೀಫನ್ ದತ್ತ್ : ಫಾದರ್ ರವರ ಅತ್ಯಂತ ಸುಂದರ ರಚನೆಗಳಿಗೆ ಸಂಗೀತ ಸಂಯೋಜನೆ ಮಾಡುವ ಸದವಕಾಶ ನನಗೆ ದೊರಕಿದೆ. ಅವರ ಅನೇಕ ಗೀತೆಗಳು ನನ್ನ ಅಚ್ಚುಮೆಚ್ಚಿನದವು. ಅದರಲ್ಲೂ ’ತಂದೆಯು ನೀನೇ, ತಾಯಿಯು ನೀನೇ’, ’ನೀನೆ ನೀನೆ’, ’ಎಲ್ಲೋ ಒಂದು ಲೋಕವಿದೆ’ ನನ್ನ ಮೆಚ್ಚಿನವು. ಸಾಮಾನ್ಯವಾಗಿ ಫಾ.ಚಸರಾ ಮೊದಲೆರೆಡು ಸಾಲುಗಳಿಗೆ ರಾಗ ರಚನೆ ಮಾಡುತ್ತಿದ್ದರು. ನಾನು ಮುಂದಿನದನ್ನು ಸಂಯೋಜಿಸಿ ಗೀತೆಯನ್ನು ಪೂರ್ಣಗೊಳಿಸುತ್ತಿದ್ದೆ. ಈ ಧ್ವನಿಸುರಳಿಯ ರಾಗ  ಸಂಯೋಜನೆ ಮಾಡುತ್ತಿದ್ದಾಗ, ಈ ಗೀತೆಯ ಅಶಯವೇನಿರಬಹುದು ಎಂಬ ಆಲೋಚನೆ ನನ್ನಲ್ಲಿತ್ತು. ಫಾ.ಚಸರಾ ಒಂದು ಕಾಗದದ ಮೇಲೆ ಗೀತೆಯ ಮೊದಲೆರೆಡು ಸಾಲುಗಳನ್ನು ಬರೆದುಕೊಟ್ಟರು. ಅದರಲ್ಲಿ ’ಎಲ್ಲೋ ಒಂದು ಲೋಕವಿದೆ ನನ್ನ ಮುಂದಿನ ಜನುಮ ಅಲ್ಲಿದೆ’ ಎಂಬ ಸಾಲುಗಳಿತ್ತು. ನಾನು ಅವರನ್ನು ನೋಡಿ, " ಈ ಹಾಡಿಗೆ ಈ ವಿಷಯವೇಕೆ ಫಾದರ್, ಸಾಹಿತ್ಯ ತುಂಬಾ ಆಳ ಹಾಗೂ ವಯ್ಯಕ್ತಿಕವಾದಂತಿದೆ"ಎಂದೆ.

ಅದಕ್ಕವರು "ಸ್ಟೀ, ವ್ಯವಸ್ಥೆಯೊಂದಿಗಿನ ಈ ಹೋರಾಟದಿಂದ ದಣಿದು ಹೋಗಿದ್ದೇನೆ. ಇದು ಸಾಕಾಗಿದೆ. ಇನ್ನೆಷ್ಟು ವರ್ಷಗಳು ಹೀಗೆ  ನಾನು ಈ ವ್ಯವಸ್ಥೆಯ ವಿರುದ್ಧ ಹೋರಾಡುತ್ತಿರಬೇಕಾಗಿದೆಯೋ? ಆದರೆ ಈ ದೀರ್ಘ ಸಂಘರ್ಷ ಜೀವನದ ನಂತರ ಕೇವಲ ಪ್ರೀತಿ ಶಾಂತಿ  ಮಾತ್ರವೇ ಇರುವ ಸ್ಥಳವೊಂದನ್ನು ನಾನು ಕಂಡುಕೊಳ್ಳುತ್ತೇನೆ ಎಂಬುದೇ ನನ್ನಗಿರುವ ಭರವಸೆ" ಎಂದರು. ಏನು ಹೇಳಬೇಕೆಂದು ನನಗೆ ತೋಚದೆ ರಾಗ ಸಂಯೋಜನೆಯನ್ನು ಪ್ರಾರಂಭಿಸಿದೆ.

ಪ್ರಶ್ನೆ: ಗೀತೆಯ ಬಗ್ಗೆ ಏನೆಲ್ಲಾ ಮಾತುಕತೆ, ರೂಪುರೇಷೆಗಳು ನಡೆಯಿತು? ಒಂದು ಜನಪ್ರಿಯ, ಅತ್ತ್ಯತ್ತಮ ಗೀತೆಯ ಹಿಂದಿನ ’ thought process' ಏನಿರುತ್ತದೆ ಎಂಬುದು ಈ ಪ್ರಶ್ನೆಯ ಆಶಯ.

ಸ್ಟೀಫನ್ ದತ್ತ್ : ಈ ಗೀತೆಗೆ ಬೇಕಾಗಬಹುದಾದ ಹಿನ್ನಲೆ ಸಂಗೀತದ ಬಗ್ಗೆ ನಾವಿಬ್ಬರು ಚರ್ಚಿಸಿದೆವು. ಯಾವ ವಾದ್ಯಗಳನ್ನೆಲ್ಲಾ ಬಳಸಬಹುದು, ಬಳಸಬೇಕು ಎಂಬುದು ಚರ್ಚೆಯಾಯಿತು. ಗೀತೆಯ ಗಾಢತೆ, ಅಧ್ಯಾತ್ಮಿಕತೆ ಹಾಗೂ ಭಾವ ತೀವ್ರತೆಯನ್ನು ಎತ್ತಿ ಹಿಡಿಯುಂತ ಸಂಗೀತವಿರಬೇಕೆಂಬುದು ಇಬ್ಬರ ಅಭಿಪ್ರಾಯವಾಗಿತ್ತು.  ಅದೇ ಕಾರಣದಿಂದ ಗೀತೆಯ ಆರಂಭದಲ್ಲಿ ವಯಲೀನ್ ಸೋಲೋ ಹಾಗೂ ಚರಣಗಳ ನಡುವೆ ಕೋರಸ್  ಬಳಸಿದೆ. ಫಾ.ಚಸರಾರವರಿಗೆ ಈ ಸೋಲೋ ವಾದ್ಯಗಳ ಬಳಕೆ ಬಹಳ ಇಷ್ಟವಾಗುತ್ತಿತ್ತು. ಹಿನ್ನಲೆ ಸಂಗೀತದಲ್ಲಿ ಒಂದೊಂದೇ ವಾದ್ಯವನ್ನು ಬಳಸಿ ಕಾಡುವ ಗುಣವುಳ್ಳ ಸಂಗೀತ ರಚನೆಯತ್ತ ಅವರಿಗೆ ಒಲವಿತ್ತು. ದೇವಾಲಯಗಳಲ್ಲಿ, ಗಾನ ವೃಂದಗಳಲ್ಲಿ ಕೀಬೋರ್ಡ್ ಸುಲಭವಾಗಿ ನುಡಿಸಲು ಸಾಧ್ಯವಾಗುವಂತ ರಾಗ ಸಂಯೋಜನೆಯನ್ನು ಮಾಡಲು ನನ್ನನ್ನು ಒತ್ತಾಯಿಸುತ್ತಿದ್ದರು.

ಪ್ರಶ್ನೆ: ಈ ಹಾಡನ್ನು ನೀವೇ ಹಾಡಬೇಕೆಂದು ನಿರ್ಧಾರವಾಗಿದ್ದು ಹೇಗೆ?ಏಕೆ?

ಸ್ಟೀಫನ್ ದತ್ತ್ : ಇದನ್ನು ನಿರ್ಧರಿಸಿದವರು ಫಾ.ಚಸರಾ ಹಾಗೂ ರೀಟಾ ರೀನಿ. ಗೀತೆಯ ಸಂಯೋಜನೆ ಮಾಡುವಾಗ ನಾನು ಇದನ್ನು ಭಾವ ಪೂರ್ಣವಾಗಿ ಹಾಡುತ್ತಿದ್ದದ್ದನ್ನು ನೋಡಿ ಇವರಿಬ್ಬರು ಈ ನಿರ್ಧಾರಕ್ಕೆ ಬಂದರೇನೋ. ಹಾಡಿಗೆ ಅದರ ಭಾವಕ್ಕೆ, ಆಶಯಕ್ಕೆ, ನನ್ನ ಗಾಯನದ ಶೈಲಿಯಿಂದ ನ್ಯಾಯ ಸಿಗಬಹುದೆಂದು ಅವರಿಗೆ ಅನಿಸಿರಬೇಕು.

ಪ್ರಶ್ನೆ: ಈ ಹಾಡಿನ ರೆಕಾರ್ಡಿಂಗ್ ಆದ ನಂತರ ಬಂದ ಪ್ರತಿಕ್ರಿಯೆ ಹೇಗಿತ್ತು?

ಸ್ಟೀಫನ್ ದತ್ತ್ : ಈ ಗೀತೆಯನ್ನು ಆಗ ಅರವಿಂದ್ ಸ್ಟುಡಿಯೋದಲ್ಲಿ ರೆಕಾರ್ಡ್ ಮಾಡಿದೆವು. ಸಂಜೆ ಸುಮಾರು 7 ಗಂಟೆಗೆ ನಾನು ಈ ಗೀತೆಯನ್ನು ಹಾಡಲು ಪ್ರಾರಂಭಿಸಿದೆ. ಗೀತೆಯನ್ನು ರೆಕಾರ್ಡ್ ಮಾಡಿದ ನಂತರ ಸ್ಟುಡಿಯೋದಲ್ಲೇ ನಾವೆಲ್ಲಾ ಸೇರಿಕೊಂಡು ಸುಮಾರು ನಾಲ್ಕೈದು ಸಲ ಹಾಡನ್ನು ಕೇಳಿದೆವು. ಫಾ.ಚಸರಾ ಹಾಗೂ ರೀನಿಯವರಿಗೆ ಹಾಡು ಬಹಳ ಇಷ್ಟವಾಯಿತು. ಫಾ.ಚಸರಾ ನನ್ನ ಬಳಿ "ಸ್ಟೀ, ಬಹಳ ಉತ್ತಮವಾದ ಸಂಯೋಜನೆ, ಇದು ನಿಜಕ್ಕೂ ಬಹಳ ಜನಪ್ರಿಯವಾಗುತ್ತದೆ" ಎಂದರು. ನಾನು ಫಾ.ಚಸರಾರವರಿಗೆ ಇದು ಅವರ ಅತ್ತ್ಯುತ್ತಮ ಸಾಹಿತ್ಯದಲ್ಲಿ ಒಂದು ಎಂದು ಹೇಳಿದೆ. ಸಿಡಿ ಬಿಡುಗಡೆಯಾದ ನಂತರ ಒಂದು ದಿನ ಫಾದರ್ ನನಗೆ ಫೋನ್ ಮಾಡಿದರು. "ಸ್ಟೀ, ಈ ಹಾಡು ಎಲ್ಲರಿಗೂ ಇಷ್ಟವಾಗಿದೆ. ನಮ್ಮ ಧರ್ಮಕೇಂದ್ರದ ಅನೇಕರು 'ಈ ಹಾಡನ್ನು ಕೇಳುವಾಗ ಅತ್ತುಕೊಂಡೆವು' ಎಂದು ನನ್ನ ಬಳಿ ಹೇಳಿದರು. ಈ ಹಾಡು ಅನೇಕರ ಹೃದಯಗಳನ್ನು ಮುಟ್ಟಿದೆ ಎನ್ನುವುದು ನಿಜಕ್ಕೂ ಒಳ್ಳೆಯ ಸೂಚನೆ" ಎಂದರು. ಆಗ ಫಾದರ್ ತುಮಕೂರಿನಲ್ಲಿದ್ದರು.

ಪ್ರಶ್ನೆ : ಈ ಹಾಡಿನ ಬಗ್ಗೆ ನಿಮ್ಮ ವ್ಯಯಕ್ತಿಕ ಅಭಿಪ್ರಾಯವೇನು?

ಸ್ಟೀಫನ್ ದತ್ತ್ : ಫಾ.ಚಸರಾರವರ ನನ್ನ ಅತ್ಯಂತ ಮೆಚ್ಚಿನ ಗೀತೆಗಳಲ್ಲಿ ಇದು ಒಂದು. ಸಾಹಿತ್ಯದಲ್ಲಿನ ಆಳ ಹಾಗೂ ಗಾಢತೆ ಇದಕ್ಕೆ ಕಾರಣ. ಈ ಗೀತೆಯಲ್ಲಿ ಅವರು ವ್ಯಕ್ತಪಡಿಸಿರುವ ಅನಿಸಿಕೆಗಳು ನಿಜಕ್ಕೂ ಸತ್ಯ. ಈ ರೀತಿಯ ಸಾಹಿತ್ಯ ಏಕೆ ಬರೆದರು ಎಂದು ಅನೇಕ ಸಲ ಯೋಚಿಸಿದ್ದೇನೆ. ಆ ಹಾಡು ಕೇಳಿದಾಗಲ್ಲೆಲ್ಲಾ ನನ್ನಲೊಂದು ಹೊಸ ಚೈತನ್ಯ ಹಾಗೂ ಭರವಸೆ ಮೂಡುತ್ತದೆ. ಇದೇ ಅನುಭವ ಕೇಳುಗರಿಗೆಲ್ಲಾ ಆಗುತ್ತದೆ ಎಂಬುದು ನನ್ನ ಅಭಿಪ್ರಾಯ. ಇಷ್ಟು ಬೇಗ ಚಸರಾ ನಮ್ಮನ್ನು ಅಗಲಿ ಅವರಿಗಿಷ್ಟವಾದ ’ಆ ಲೋಕಕ್ಕೆ’ ಹೊರಟು ಬಿಡುತ್ತಾರೆ ಎಂದು ನಾನು ಎಣಿಸಿರಲಿಲ್ಲ. ಈ ಗೀತೆ ಕೇಳಿದಾಗಲೆಲ್ಲಾ ನಾನು ಕಣ್ಣೀರಾಗುತ್ತೇನೆ. ಆ ಹಾಡಿಗೆ ಪಾಶ್ಚಿಮಾತ್ಯ ಶೈಲಿಯ Orchestral music ಮಾಡಿ ಅದಕ್ಕೊಂದು ವಿಡಿಯೋ ಮಾಡಬೇಕೆಂಬ ಯೋಜನೆ ನನ್ನದು. ಆದಷ್ಟು  ಬೇಗ ಕಾರ್ಯರೂಪಕ್ಕೆ ತರುವ ಭರವಸೆಯಲ್ಲಿದ್ದೇನೆ.

ಇದಿಷ್ಟು ನಮ್ಮ ಪ್ರಖ್ಯಾತ ಸಂಗೀತ ನಿರ್ದೇಶಕ ಪ್ರವೀಣ್ ಸ್ಟೀಫನ್ ದತ್ತರವರು ಈ ಹಾಡಿನ ಬಗ್ಗೆ ಹಂಚಿಕೊಂಡ ಅನುಭವ. ಇದನ್ನು ಓದಿ ಮತ್ತೊಮ್ಮೆ ಹಾಡನ್ನು ಕೇಳಿದಾಗ, ಸ್ಟೀಫನ್ ರವರು ಹಂಚಿಕೊಂಡಿರುವ ವಿವರಗಳೆಲ್ಲಾ ವಿಸ್ತಾರವಾಗಿ ಅರ್ಥವಾಗುತ್ತದೆ. ಅದಕ್ಕೂ ಮಿಗಿಲಾಗಿ ಹಾಡನ್ನು ಒಮ್ಮೆ ಒಳ್ಳೆಯ ಹೆಡ್ ಫೋನ್ ಹಾಕಿ ಯಾವುದೇ ಅಡಚಣೆ ಇಲ್ಲದೆ ಕೇಳಿ ನೋಡಿ. ಸಾಹಿತ್ಯ ಹಾಗೂ ವಾದ್ಯ ಸಂಯೋಜನೆಯಲ್ಲಿನ ಮಾಧುರ್ಯತೆ ಹೃದಯ ತುಂಬಿಕೊಳ್ಳುತ್ತದೆ.  

- ಪ್ರಶಾಂತ್ ಇಗ್ನೇಶಿಯಸ್ 


ನನ್ನ ಮೆಚ್ಚಿನ ಫಾ.ಚಸರಾ ಹಾಡುಗಳು - ಭಾಗ 6 -  ಪ್ರಶಾಂತ್ ಇಗ್ನೇಶಿಯಸ್ 

Monday, 30 January 2017

ನನ್ನ ಮೆಚ್ಚಿನ ಫಾ.ಚಸರಾ ಹಾಡುಗಳು - ಭಾಗ 6 - ಬೆಳಕು ಹರಿಯಿತು ಭುವಿಯ ಕಡೆಗೆ

ಸ್ಪೂರ್ತಿ ಎಂಬ ಸೂಪರ್ ಹಿಟ್ ಧ್ವನಿಸುರಳಿಯ ಮತ್ತೊಂದು ಸೂಪರ್ ಹಿಟ್ ಗೀತೆ ’ಬೆಳಕು ಹರಿಯಿತು’ ಗೀತೆ. ಇಡೀ ೯೦ರ ದಶಕದಲ್ಲಿ (೨೦೦೦ ದಶಕದ ಮಧ್ಯದವರೆಗೂ) ಯಾವುದೇ ಕನ್ನಡ ಕ್ರೈಸ್ತ ಗಾಯನ ಸ್ಪರ್ಧೆಯಲ್ಲಿ ಇದು ಖಾಯಂ ಗೀತೆ. ಕೆಲವೊಮ್ಮೆ ಎರಡು ಮೂರು ತಂಡಗಳು ಇದೇ ಹಾಡನ್ನು ಹಾಡಿದ ಉದಾಹರಣೆಯೂ ಇದೆ. ಅದಕ್ಕೆ ಕಾರಣ ಸಾಹಿತ್ಯಕ್ಕಿಂತ ಇದರ ಅತ್ಯಾಕರ್ಷಕವಾದ ಶಾಸ್ತ್ರೀಯ ಮೂಲದ  ಸಂಗೀತ ಎಂದೇ ನನ್ನ ಭಾವನೆ. ಅದರಲ್ಲೂ ಸ್ಪರ್ಧೆಯಲ್ಲಿ ತೀರ್ಪುಗಾರರನ್ನು ಸೆಳೆಯಲು ಬೇಕಾದ  ಸ್ವರಪ್ರಸ್ತಾರ, ಹಿನ್ನಲೆ ಸಂಗೀತ ಹಾಡಲ್ಲಿದೆ. ಮೊದಲ ಸಲ ಕೇಳಿದಾಗಲೇ ಸೆಳೆಯುವಂತ ಗುಣ ಇದುದ್ದರಿಂದ ಕೇಳುಗಾರಾರ, ಹಾಡುಗಾರರ , ಗಾಯನ ವೃಂದಗಳ ಫೇವರೆಟ್ ಹಾಡು ಇದಾಗಿತ್ತು.

ಈ ಹಾಡನ್ನು ಕೇಳಿದಾಗಲೆಲ್ಲಾ ಇದು ಕ್ರಿ‍ಸ್‍ಮಸ್ ಗೀತೆಯೇ ಅಥವಾ ಸಾಧಾರಣ ಕಾಲದ ಗೀತೆಯೇ ಎಂಬ ಪ್ರಶ್ನೆ ಮೂಡುತ್ತದೆ. ಆಳವಾಗಿ ಕೇಳಿದಾಗ ಇದೊಂದು ಸಾರ್ವತ್ರಿಕವಾದ ಗೀತೆಯೇ ಎಂದೆನಿಸುತ್ತದೆ.  ಸಾಧಾರಣ ಕಾಲದಲ್ಲೂ ಹಾಡಬಹುದಾದ ಕ್ರಿಸ್‍ಮಸ್ ಗೀತೆಯೂ ಹೌದು ಅಥವಾ ಕ್ರಿಸ್‍ಮಸ್ ಸಮಯದಲ್ಲಿ ಹಾಡಬಹುದಾದ ಸಾಧಾರಣ ಕಾಲದ ಗೀತೆಯೂ ಹೌದು ಎನ್ನಬಹುದಾದ ವಿಶಿಷ್ಠ ಗೀತೆಯಿದು.

’ಭುವಿಪಾಲಕಂ ಸೃಷ್ಠಿ ಸಮಸ್ತಾಯ ಪೋಷಕಂ ಮನುಕುಲ ಸಮಸ್ತ ಪರಿಪಾಲಕಂ’ ಎಂಬ ಸುಮಧುರ ಶ್ಲೋಕದಿಂದ ಪ್ರಾರಂಭವಾಗುತ್ತದೆ ಈ ಹಾಡು. ಈ ಶ್ಲೋಕವನ್ನು ಕೇಳುತ್ತಿದ್ದಂತೆ 80ರ ದಶಕದಲ್ಲಿ ಕನ್ನಡ ಚಿತ್ರಗಳ, ಅದರಲ್ಲೂ ಡಾ.ರಾಜ್ ಚಿತ್ರಗಳ ಪ್ರಾರಂಭದಲ್ಲಿ ಬರುತ್ತಿದ್ದ ಶ್ಲೋಕಗಳು ನೆನಪಿಗೆ ಬರುತ್ತದೆ. ’ನಮೋ ನಮ: ಯೇಸು ಕ್ರಿಸ್ತ’ ಎಂದು ಶ್ಲೋಕ ಮುಗಿಯುತ್ತಿದ್ದಂತೆ ’ಧೀಂ ಧೀಂತಾ ಧಿರನಾ ಧಿರನಾ’ ಎನ್ನುತ್ತಾ ಹೊಸ ರೂಪ ಪಡೆಯುವ ಗೀತೆ ಕನ್ನಡ ಕ್ರೈಸ್ತ ಸಂಗೀತ ಲೋಕದಲ್ಲಿ,  ಹೊಸ ರೀತಿಯ ಟ್ರೆಂಡ್ ಪ್ರಾರಂಭಿಸಿತು ಎಂದರೆ ತಪ್ಪಾಗಲಾರದೇನೋ. ಇದಕ್ಕೆ ಮುಂಚೆ ಈ ರೀತಿಯ ಹಾಡು, ಶ್ಲೋಕ, ಆಲಾಪನೆ ಬಂದಿರಲಿಲ್ಲವೆಂದಲ್ಲ, 

ಆದರೆ ಯುವ ಜನತೆಯ ಮೇಲೆ ಫಾ.ಚಸರಾರವರ  ಸಾಹಿತ್ಯ ಸಂಗೀತ ಬೀರಿದ್ದ ಪರಿಣಾಮವನ್ನುಈ ಗೀತೆ ಮತ್ತಷ್ಟು ಹೆಚ್ಚಿಸಿತು ಹಾಗೂ ನಂತರದ ಗೀತೆಗಳ ರಚನೆಯಲ್ಲಿ ಶಾಸ್ತ್ರೀಯ ಸಂಗೀತದ ಬಳಕೆ ಮತ್ತಷ್ಟು ಹೆಚ್ಚಾಯಿತು ಎಂದೇ ಹೇಳಬಹುದು. 

ಹಾಡಿನ ಸಾಹಿತ್ಯ ಬಹಳ ಸರಳವಾಗಿದೆ ಎಂದೇ ಹೇಳಬಹುದು. ಆದರೆ ಅಲ್ಲಿ ಮತ್ತೆ ಫಾ.ಚಸರರವರ ಮಾಂತ್ರಿಕ ಸ್ಪರ್ಶ ಪ್ರತಿ ಸಾಲಿನಲ್ಲಿದೆ. ವಿಶಾದದ ನಡುವೆ ಕ್ರಿಸ್ತ ತರುವ ಆನಂದ ಹಾಗೂ ಭರವಸೆಯ ಭಾವಗಳೇ ಸ್ಥಾಯಿ ಭಾವವಾಗಿ ಕೊನೆಗೆ ಉಳಿಯುತ್ತದೆ. ’ಬೆಳಕು ಹರಿಯಿತು ಭುವಿಯ ಕಡೆಗೆ ಮನವು ಅರಳಿತು ಕ್ರಿಸ್ತನೆಡೆಗೆ’ ಎಂಬ ಸಾಲುಗಳಲ್ಲಿ ಕ್ರಿಸ್ತನ ಜನನದ ಮೂಲಕ ಭುವಿಯ ಕಡೆಗೆ ಬೆಳಕು ಹರಿದಿದೆ ಎಂಬ ಭಾವವಿದೆ. ಅಲ್ಲಿಗೆ ಕ್ರಿಸ್ತ ಶಾಂತಿ, ಪ್ರೀತಿ, ಪ್ರೇಮದ ಸೂರ್ಯನಂತೆ ಎಂಬ ಅರ್ಥವೂ ಇದೆ. ಸೂರ್ಯನ ಬೆಳಕಿನಿಂದ ಹೂವುಗಳು ಹೊಸ ಚೈತನ್ಯ ಪಡೆದು ಬೆಳಕಿನತ್ತ ಮುಖ ಮಾಡಿ ಅರಳುವಂತೆ, ನಮ್ಮ ಮನಗಳು ಕ್ರಿಸ್ತನತ್ತ ಅರಳುತ್ತವೆ ಎಂಬ ಕಲ್ಪನೆಯೇ ಎಷ್ಟು ಸುಂದರ.

ಹಾಗೆಯೇ, ಭುವಿಗೆ ಬಂದ ಯೇಸುಕ್ರಿಸ್ತ, ಸುಮ್ಮನೆ ಬರದೆ ನೊಂದ ಜನತೆಗೆ ಶಾಂತಿಯನ್ನು ತಂದ ಎಂಬ ಸಾಲುಗಳಲ್ಲಿ ಕ್ರಿಸ್ತಜಯಂತಿಯ ಭರವಸೆಯ ಸಂದೇಶವಿದೆ. ಅಲ್ಲಿಗೆ ಮನಗಳು ಸಂತಸದಿಂದ ನಲಿಯುತ್ತವೆ ಎಂಬುದರ ಸಂಕೇತವೆಂಬಂತೆ ’ಸಸಸ ಗಗಪಪ ನಿನಿಪ ನಿಪನಿ’ ಎಂಬ ಸ್ವರಗಳು ಸಂತಸದ ಭಾವವನ್ನು ಎತ್ತರಕ್ಕೆ ಕೊಂಡೊಯ್ಯುತ್ತದೆ.

ಬೈಬಲ್ ತಜ್ಞರಾದ ವಿಲ್ಲಿಯಂ ಬಾರ್ಕ್ಲೇ ಪ್ರಕಾರ ಯೇಸು ಕ್ರಿಸ್ತ ತಂದ ಬೆಳಕು ಮೂರು ರೀತಿಯದು. ಒಂದು ಎಲ್ಲಾ ರೀತಿಯ ಗೊಂದಲವನ್ನು ಹೋಗಲಾಡಿಸುವ ಬೆಳಕು, ವಿಶ್ವದ ಅತಿ ಹಳೆಯ ಭಯಗಳಲ್ಲಿ ಒಂದಾದ ಕತ್ತಲೆಯ ಭಯವನ್ನು ಹೋಗಲಾಡಿಸುವ ಬೆಳಕು ಇದೇ.  ಇದು ಕೇವಲ ನೈಸರ್ಗಿಕ ಕತ್ತಲು ಮಾತ್ರವಲ್ಲ. ಎರೆಡು, ಪ್ರಕಟಗೊಳ್ಳುವ ಬೆಳಕು. ಯೇಸುವಿನ ಬೆಳಕಿನಲ್ಲೇ ನಮ್ಮನ್ನೇ ನಾವು ಕಂಡುಕೊಳ್ಳುವ ಬೆಳಕು. 

ಮೂರು, ನಮ್ಮನ್ನು ಮುನ್ನಡೆಸುವ ಬೆಳಕು. ನಮ್ಮನ್ನು ಎಲ್ಲಾ ರೀತಿಯಲ್ಲೂ ಮುನ್ನಡೆಸುತ್ತಾ ಎಲ್ಲವನ್ನು ಸ್ಪಷ್ಟಗೊಳಿಸುವ ಬೆಳಕು. ಈ ಗೀತೆಯ ಚರಣಗಳನ್ನು ಗಮನಿಸಿದಾಗ ವಿಲ್ಲಿಯಂರವರು ಹೇಳಿರುವ ಬೆಳಕಿನ ಅಯಾಮಗಳು ಇಲ್ಲೂ ಕಾಣುತ್ತದೆ. ಇದು ಕಾಕತಾಳೀಯವೋ ಇಲ್ಲವೇ ಫಾ.ಚಸರಾರವರ ಅಧ್ಯಯನದ ಪ್ರತಿರೂಪವೋ ಹೇಳಲಾಗುವುದಿಲ್ಲ. 

ಚರಣಗಳು, ಮೊದಲೇ ಹೇಳಿದಂತೆ ಸರಳ ಆದರೆ ಪದಗಳ ಜಾಣ ಜೋಡಿಕೆಯಿಂದ ಆಳ ಅರ್ಥವಂತಿಕೆ ಪಡೆದುಕೊಳ್ಳುತ್ತಾ ಸಾಗುತ್ತದೆ. ಇರುಳಾದ ಮೇಲೆ ಬೆಳಕು ಇದ್ದೇ ಇರುತ್ತದೆ ಎಂಬುದು ಗೊತ್ತಿದ್ದರೂ ಕೆಲವೊಂದು ಇರುಳುಗಳು ನಿರಂತರವೇನೋ ಎಂಬಷ್ಟು ದೊಡ್ದದಾಗಿ ಭಾಸವಾಗುತ್ತದೆ. ನಿದ್ರೆ ಬರದ ರಾತ್ರಿಗಳೂ ಹಾಗೆಯೇ. ಅಂತಹ ಸಮಯದಲ್ಲಿ ಮಿಂಚಿನಂತೆ ಮಿನುಗುವ ಬೆಳಕನ್ನು ಮನಸ್ಸು ಬೇಡಿಕೊಳ್ಳುತ್ತದೆ. ಅದೇ ರೀತಿ ’ಮಿಂಚು’ ಎನ್ನುವುದು ಕ್ಷಣ ಮಾತ್ರದ ಬೆಳಕಿನ ಭಾಗವಷ್ಟೆ. 

ಆದರೆ ಕ್ರಿಸ್ತನ ಬೆಳಕು ಕೇವಲ ಮಿಂಚಿ ಮರೆಯಾಗುವಂಥದಲ್ಲ, ಅದೊಂದು ಜ್ಯೋತಿ, ಹೃದಯದಲ್ಲಿ ಸ್ಥಾಪಿತವಾದದ್ದು ಎಂಬುದನ್ನು ೮ ಪದಗಳ ಎರಡನೆಯ ಸಾಲು ಹೇಳುತ್ತದೆ. ಸಾಹಿತ್ಯದಲ್ಲಿನ ಸರಳತೆಯ ಆಳದ ಉತ್ತಮ  ಉದಾಹರಣೆ ಇದು. ವಿಲ್ಲಿಯಂ ಬಾರ್ಕ್ಲೇಯ ಚಿಂತನೆಗಳು ಮತ್ತೆ ಎರಡನೆಯ ಚರಣದಲ್ಲಿ ಅಲ್ಲಲ್ಲಿ ಕಾಣಸಿಗುತ್ತದೆ. ಕೊನೆಯಲ್ಲಿನ  ’ನಗುವ ಚಿಮ್ಮಿಸಿ ನಗುತ್ತಾ ಬಂದ’ ಎಂಬ ಸಾಲು ಕ್ರಿಸ್ತನ ಭರವಸೆಯ ಪ್ರತೀಕ.

ಎಂದಿನಂತೆ ಸಾಧುರವರ ಸಂಗೀತ ತಲೆದೂಗುವಂತೆ ಮಾತ್ರವಲ್ಲದೆ ಕುಣಿಸುವಂತೆಯೂ ಮಾಡುತ್ತದೆ. ಅನೇಕ ಕಾರ್ಯಕ್ರಮಗಳಲ್ಲಿ ಈ ಗೀತೆ ಪ್ರಾರಂಭದ  ಗೀತೆಯಾಗಿ, ನೃತ್ಯವಾಗಿ ಬಳಕೆಯಾಗಿದೆ ಎಂಬುದು ಈ ಗೀತೆಯ ಲವಲವಿಕೆಗೆ ಸಾಕ್ಷಿಯಾಗಿದೆ.

ಐದಾರು ವರ್ಷಗಳ ಹಿಂದೆ ನಾವು ಮಾಡಿದ್ದ ಹೊಸ ಸಿ.ಡಿಯೊಂದನ್ನು ಪ್ಯಾಟ್ರಿಕ್ಸ್ ಚರ್ಚನ ಆವರಣದಲ್ಲಿರುವ ಪೌಲ್ಸ್ ಸೆಂಟರ್ ಗೆ ಕೊಡಲು ಹೋಗಿದ್ದೆ. ಅಲ್ಲಿನ ಮಳಿಗೆಯ ಸಿಬ್ಬಂದಿಯೊಬ್ಬರು  ನಮ್ಮ ಸಿ.ಡಿಗಳನ್ನು ತೆಗೆದುಕೊಂಡು ಹೊಸಬರಾದ ನಮಗೆ ಸಲಹೆ ಇತ್ತರು. " ನೀವು ಯಾವುದೇ ಹೊಸ ಸಿ.ಡಿ ಮಾಡುವಾಗ ಚಸರಾರವರು ಮಾಡುವಂತೆ ಒಂದೋ ಎರೆಡೋ ಕ್ಲಾಸಿಕಲ್ ಹಾಡುಗಳನ್ನು ಮಾಡಿ. ಆಗ ಸ್ಕೂಲು ಹಾಗೂ ಇತರ ಸಂಸ್ಥೆಗಳಿಗೆ ತಮ್ಮ ಕಾರ್ಯಕ್ರಮಗಳಿಗೆ ಆ ಕ್ಲಾಸಿಕಲ್ ಹಾಡುಗಳು ಬೇಕಾಗುತ್ತದೆ. ಸಿ.ಡಿ. ತೆಗೆದುಕೊಳ್ಳುತ್ತಾರೆ ಹಾಗೆಯೇ ಇತರ ಹಾಡುಗಳನ್ನೂ ಕೇಳುತ್ತಾರೆ. ಇಂದಿಗೂ ಕನ್ನಡದಲ್ಲಿ ಬೇಡಿಕೆ ಇರುವುದು  ಫಾ.ಚಸರಾ ಹಾಗೂ ಫಾ ಫೆಲಿಕ್ಸ್ ಗೀತೆಗಳಿಗೇ ಎನ್ನುತ್ತಾ, ’ ಬೆಳಕು ಹರಿಯಿತು’ ಹಾಡಿನ ಉದಾಹರಣೆಯನ್ನು ಕೊಟ್ಟರು. ಅಂದಿಗೇ ಸುಮಾರು ೨೦ ವರ್ಷಗಳಷ್ಟು ಹಳೆಯದಾದ ಈ ಹಾಡು ಉದಾಹರಣೆಗೆ ಬಳಕೆಯಾಗಿದ್ದು ಕೇಳಿ ಆಶ್ಚರ್ಯವಾಯಿತು.

ಹಾಡು ರಚನೆಯ ಸಂದರ್ಭದಲ್ಲಿ ಹಾಡು ಪ್ರಸಿದ್ಧವಾಗಲಿ, ನೃತ್ಯಕ್ಕೆ ಬಳಕೆಯಾಗಲಿ, ಮಾರಾಟವಾಗಲಿ ಎಂಬ ಉದ್ದೇಶಕ್ಕಿಂತ ಮನದಾಳದ ಭಾವದ ಅಭಿವ್ಯಕ್ತಿಯಾಗಿ ಸಾಹಿತ್ಯ ಸಂಗೀತಗಳು ಕೂಡಿಕೊಂಡು ಒಂದು ಮಾಧ್ಯಮವಾಗುತ್ತದೆಯಷ್ಟೇ. ಅದರ ಜನಪ್ರಿಯತೆ, ತಲುಪುವಿಕೆ ಎಲ್ಲವೂ ಅದರ ಮುಂದಿನ ಭಾಗವಷ್ಟೆ. ’ಬೆಳಕು ಹರಿಯಿತು’ ಮನದ ಭಾವಕ್ಕೆ ಒದಗಿದ ಉತ್ಕೃಷ್ಟ ಸಾಹಿತ್ಯ ಸಂಗೀತದ ಪ್ರತಿರೂಪವಾಗಿದೆ.

- ಪ್ರಶಾಂತ್ ಇಗ್ನೇಶಿಯಸ್