Thursday, 5 March 2015

ಈ ಸಂಭಾಷಣೆ….ಇದು ಮೊಬೈಲುಗಳ ಸಂಭಾಷಣೆ

(ಸುಮಾರು ರಾತ್ರಿ 2ರ  ಸಮಯ. ಮನೆಯೊಂದರಲ್ಲಿ ಎಲ್ಲರೂ ಮಲಗಿದ್ದಾರೆ. ಆಗ ಮನೆಯ ಮೊಬೈಲ್ ಗಳೆಲ್ಲಾ ಸಭೆ ಸೇರಿವೆ, ಎಲ್ಲಾ ಮೊಬೈಲುಗಳ ಮುಖವೂ (Display) ಸೊರಗಿ ಹೋಗಿವೆ. ನಿದ್ದೆ ಇಲ್ಲದೆ ಬಾಡಿ ಹೋದ ಮುಖದ ತುಂಬೆಲ್ಲಾ ಗೀರು, ಏಟು.. ರಾತ್ರಿ ಆಗಿರೋದರಿಂದ ಕೈ ಕೋಳದಂತೆ ಪ್ರತಿ ಮೊಬೈಲ್ ಗೂ chargerಗಳ ವೈಯರನ್ನು ನೇತು ಹಾಕಲಾಗಿದೆ. ಆದರೂ ಹೇಗೋ ಸಮಯ ಮಾಡಿಕೊಂಡು ಕಷ್ಟ ಸುಖ ಹಂಚಿಕೊಳ್ಳುತ್ತಿವೆ ಮೊಬೈಲುಗಳು.....)

ಸ್ಮಾರ್ಟ್ ಫೋನ್ 1: 
ಏನಪ್ಪ ತುಂಬಾ Tired ಆದಂಗಿದೆ....

ಸ್ಮಾರ್ಟ್ ಫೋನ್ 2:
Tired ಏನ್ ಬಂತು.....ಸಾಯೋದೊಂದು ಬಾಕಿ, ಆಗಲಪ್ಪ ಈ ಕಷ್ಟ ತಡೆಯೋಕೆ ಆಗೊಲ್ಲ......

ಸ್ಮಾರ್ಟ್ ಫೋನ್ 1:
ಅದು ಸರಿ ಅನ್ನು, ನಮ್ಮೆಲ್ಲರದೂ ಅದೇ ಪಾಡು.  ಸ್ವಲ್ಪ ಆದ್ರು ಮನಷತ್ವ ಬೇಡ್ವ ಈ ಮನುಷ್ಯರಿಗೆ?
                                   
ನಾರ್ಮಲ್ ಫೋನ್ :
ಸ್ವಲ್ಪ ಮೆತ್ತಗೆ ಮಾತಾಡಪ್ಪ, ನಿದ್ದೇಲ್ಲಿ ಇದ್ದು ಮತ್ತೆ ನಮ್ಮನ್ನ ಇಟ್ಕೊಂಡು ಒತ್ತಕ್ಕೆ ಶುರು ಮಾಡ್ತಾರೆ

ಸ್ಮಾರ್ಟ್ ಫೋನ್ 1:
ಹೌದಪ್ಪ, ಎದ್ದ್ ತಕ್ಷಣ first ಮುಟ್ಟ್ ನೋಡ್ಕೊಳೋದೆ ನಮ್ಮನ್ನ!!!

ಸ್ಮಾರ್ಟ್ ಫೋನ್ 2: 
ನನಗಂತೂ ಜ್ವರ ಬಂದಂಗೆ ಹಾಗಿದೆ, ಮಾತಾಡಿ ಮಾತಾಡಿ ನಮ್ಮ್ ಹಿಂದೆ ಎಲ್ಲಾ ಬಿಸಿ ಮಾಡಿಬಿಡ್ತಾರೆ. ಸ್ವಲ್ಪ ತಣ್ಣಗೆ ಮಾಡ್ಕೊಳೋಣ ಅಂದ್ರೆ ರಾತ್ರಿ ಎಲ್ಲಾ charger ಬೇರೇ ಹಾಕಿರ್ತಾರೆ....

ನಾರ್ಮಲ್ ಫೋನ್:         
ಥೂ ಇವರ ಬೆರೆಳ್ ಸವದೋಗಾ.....

ಸ್ಮಾರ್ಟ್ ಫೋನ್ 1:
ಹೂ.. ಸವ್ದೋಗುತ್ತೆ…ನಮ್ಮ screen ಸವ್ದೋಗುತ್ತೆ ಅಷ್ಟೆ… factoryಇಂದ ಬಂದಾಗ ಹೇಗಿದ್ದೆ  ನಾನು , ಇವರ ಕೈ ಸೇರಿ ಹೆಂಗಾಗಿದ್ದೀನಿ ನೋಡು ನಾರ್ಮಲ್ ಫೋನ್ ನಾನು ಅಷ್ಟೇ, ಬಂದಾಗ ಎಷ್ಟು ಚೆನ್ನಾಗಿದ್ದೆ, ಈಗ ಮೈ ಮೇಲಿನ ನಂಬರೆಲ್ಲಾ ಅಳ್ಸೋಗಿದೆ

ಸ್ಮಾರ್ಟ್ ಫೋನ್ 2:

ಲೇ ನೀನು ಮಾಮೂಲಿ ಫೋನು,  ನಿನಗೇ ಅಷ್ಟು ಕಷ್ಟ ಇರೋವಾಗ , ಸ್ಮಾರ್ಟ್ ಫೋನ್ ನಮಗೆ ಹೆಂಗೆ ಆಗಬೇಡ?

ಸ್ಮಾರ್ಟ್ ಫೋನ್ 1:      

ಅದೇ ಮತ್ತೆ.. ನಿನ್ನ ಬರೀ ಫೋನು ಮೆಸ್ಸೇಜ್ ಗೇ ಉಪಯೋಗಿಸ್ತಾರೆ, ನಮ್ನ ಯಾವ್ ಯಾವ್ದಕ್ಕೆ ಉಪಯೋಗಿಸ್ತಾರೆ ಅಂತೆ ಈ ಬಾಯಲ್ಲಿ ಹೇಳೋಕೆ ಆಗೊಲ್ಲ ಬಿಡು

ನಾರ್ಮಲ್ ಫೋನ್ : 

ಆಹಾ     ನನ್ನ್ ಮಕ್ಳಾ … ಮೊದಲು ಬಂದಾಗ ನಮ್ನ ನೋಡಿ ರೇಗಿಸ್ತಿದ್ರಿ.. ನೀವೇ ದೊಡ್ಡು ಸ್ಮಾರ್ಟ್ ಅಂತಾ ..ಈಗ ಅನುಭವಿಸಿ

ಸ್ಮಾರ್ಟ್ ಫೋನ್ 2:    

ಹೌದಪ್ಪ ಏನ್ ಮಾಡೋದು, ನೀವುಗಳು ಮಾತ್ರ ಇದ್ದಾಗ ಫೋನು, ಮೆಸ್ಸೇಜು ಸ್ವಲ್ಪ ಹಾಡು ಇದಕ್ಕೆ ಮಾತ್ರ ಮೊಬೈಲ್ ಗಳನ್ನ ಉಪಯೋಗಿಸ್ತಿದ್ರು, ಕಂಪನಿಗಳು ನಮ್ಮನ್ನ ತಯಾರು ಮಾಡೋಕೆ ಶುರು ಆದ್ಮೇಲೆ ಆಯ್ತು ನೋಡಪ್ಪ….

ಸ್ಮಾರ್ಟ್ ಫೋನ್ 1: 

ಈ ವಾಟ್ಸ್ ಆಪ್ಪ್ ಬಂದ ಮೇಲಂತೂ ನಮ್ಮ ಪಾಡು ಯಾಕೆ ಹೇಳ್ತೀಯಾ. ರಾತ್ರಿ ಹಗಲು ಬಿಡದೆ ನಮ್ಮ ಮುಖ ತಿವಿತ್ತಾರೆ.

ಸ್ಮಾರ್ಟ್ ಫೋನ್ 2:      

ಮೊದಲು ಮೆಸೇಜ್ ಮಾಡೋವಾಗ ಭಯ ಭೀತಿ ಇತ್ತು ಬಿಲ್ಲು ಜಾಸ್ತಿ ಬರುತ್ತೆ ಅಂತಾ, ಈಗ ನೋಡ್ರಪ್ಪ ಭಯನೂ ಇಲ್ಲ , ಭೀತಿನೂ ಇಲ್ಲ. ಸಮಯ ಸಂದರ್ಭ ಅಂತೂ ಇಲ್ವೇ ಇಲ್ಲ ನಾರ್ಮಲ್ ಫೋನ್ ಯಾವಾಗ್ ನೋಡಿದ್ರೂ ಕುಟ್ಟ್ತಾ ಇರೋದೇ ಕೆಲ್ಸ

ಸ್ಮಾರ್ಟ್ ಫೋನ್ 1:

ಸರಿ ಯಾವ್ದಾದ್ರೂ ಒಳ್ಳೆ ವಿಚಾರ ಮಾತಾಡಿದ್ರೆ ಅಂತೂ ಪರವಾಗಿಲ್ಲ, ಬರೀ ಕೆಲ್ಸಕ್ಕೆ ಬಾರದೆ  ಇರೋದೆ….

ಸ್ಮಾರ್ಟ್ ಫೋನ್ 1:

ಆಗೇನಿಲ್ಲ , ನಿಜಕ್ಕೂ ಒಳ್ಳೆ ಕೆಲ್ಸಗಳಿಗೂ ಉಪಯೋಗ ಮಾಡ್ಕೊಬಹುದು ನಮ್ಮನ್ನ, ಆದರೆ ಮಂಗನ ಕೈಗೆ ಸಿಕ್ಕ ಮಾಣಿಕ್ಯ ಆಗೋಗಿದ್ದೀವಿ ನಾವು

ನಾರ್ಮಲ್ ಫೋನ್ :

ನೀವು ಬಂದ ಮೇಲೆ ಸಾಮಾನ್ಯ ಫೋನಾದ ನಮಗಂತೂ ಮರ್ಯಾದೆನೇ ಇಲ್ಲ ಬಿಡು. ಅಯ್ಯೋ ಮೊನ್ನೆ ಒಂದು ಹುಡುಗಿ         ನನ್ನ ನೋಡಿ ಇದರಲ್ಲಿ ಕಲರಿಲ್ಲ, ಫೇಸ್ ಬುಕ್ ಇಲ್ಲ, ವಾಟ್ಸ್ಅಪ್ಪ್ ಇಲ್ಲ, ಇದೂ ಒಂದು ಫೋನಾ ಅಂತಾಳೆ…ಕಾಲ್ ಮಾಡೋದು ಬಿಟ್ಟು ಎಲ್ಲಾ ಬೇಕು ಅವಳಿಗೆ ಫೋನಲ್ಲಿ

ಸ್ಮಾರ್ಟ್ ಫೋನ್ 1:

ಇನ್ನು ಸ್ವಲ್ಪ ದಿನ ಬಿಟ್ರೆ, ಇದರಲ್ಲಿ ಬಟ್ಟೆ ಒಗಿಬಹುದಾ? ಮಸಾಲೆ ಅರಿಬಹುದಾ ಅಂತನೂ ಕೇಳ್ತವೆ

ಸ್ಮಾರ್ಟ್ ಫೋನ್ 2:

ಹುಡುಗ್ರುದಂತೂ ಇನ್ನೂ ಮೋಸಪ್ಪ, ಈ ಗಾಡೀಲಿ ಹೋಗೊವಾಗ ಕೆನ್ನೆ, ಭುಜ ಮಧ್ಯೆ ನಮ್ಮನ್ನಾಕ್ಕೊಂಡು ಮಾತಾಡ್ಕೊಂಡು ಹೋಗ್ತಾವೆ




ಸ್ಮಾರ್ಟ್ ಫೋನ್ 1:

ಸರಿಯಾಗಿ ಮುಖ ತೊಳ್ದಿರಲ್ಲಾ, ಗಡ್ಡ ಶೇವ್ ಮಾಡ್ಕೊಂಡಿರಲ್ಲ…ಥೂ..ನಮ್ಮ ಸ್ಪೀಕರ್ ಒಳೆಗೆಲ್ಲಾ ಸಣ್ಣ ಸಣ್ಣ ಕೂದಲು…..

ಸ್ಮಾರ್ಟ್ ಫೋನ್ 2:

ಮೊನ್ನೆ ಹಿಂಗೇ ಕತ್ತು ವಾಲ್ಸ್ ಕೊಂಡು ಹೋಗಿ ಯಾರೋ   ರೋಡಲ್ಲಿ ನಡ್ಕೊಂಡು ಹೋಗ್ತಿರೋರಿಗೆ ಗುದ್ದ್ ಬಿಟ್ಟ ನಮ್ಮ ಓನರ್ರು. ಗುದ್ದಿದ್ದ ಆ ಯಮ್ಮನೂ ಫೋನಲ್ಲಿ ಮಾತಾಡ್ಕೊಂಡು ಹೋಗ್ತಿದ್ಲು, ಒಂದು ನಿಮಿಷ ಅಂತಾ ಫೋನಲ್ಲಿ ಹೇಳಿ ಇವನಿಗೆ ಬಾಯಿಗೆ ಬಂದಂಗೆ ಬೈದು ಮತ್ತೆ ಮಾತಾಡ್  ಕೊಂಡು ಹೋದ್ಲು. ಪೋಲಿಸ್ ಬಂದು “ಎಲ್ಲಾ ಈ ಹಾಳಾದ್ ಫೋನಿಂದ” ಅಂತ ನನ್ನ ಬೈದ
       
ಸ್ಮಾರ್ಟ್ ಫೋನ್ 1:
ಇವರು ಮಾಡೋ ತಪ್ಪಿಗೆ ನಾವು ಬೈಸ್ಕೋಬೇಕು

ಸ್ಮಾರ್ಟ್ ಫೋನ್ 2:
ಆಹಾ ನನ್ನ ಓನರ್ರು ಇದ್ದಾಳಲ್ಲ ಹುಡುಗಿ, ಅವರಪ್ಪ ಇವಳ ಹುಟ್ಟು ಹಬ್ಬಕ್ಕೆ ಅಂತಾ ನನ್ನ ತಕ್ಕೊಟ್ರು.  ಅವಳ ಇನ್ನೊಂದು ಹುಟ್ಟು ಹಬ್ಬ ನಾನು ನೋಡಲ್ಲ ಬಿಡು.. ಹಂಗೆ ಮಾಡಾಕಿದ್ದಾಳೆ ನನ್ನ.

ಸ್ಮಾರ್ಟ್ ಫೋನ್ 1:
ಅದೇನು ಮಾತಾಡ್ತಾರೋ…ದಿನ ಎಲ್ಲಾ ಜೊತೆಗೆ ಇರ್ತಾರೆ, ಆ ಕಡೆ ಹೋಗ್ತಾ ಇದ್ದಂಗೆ ಮತ್ತೆ                                          ಶುರು ಮಾಡ್ಕೋತಾರೆ ಊಟ ಆಯ್ತಾ, ನಿದ್ದೆ ಆಯ್ತಾ ಅಂತ. ಕಿವಿ ಕಚ್ಚ್ ಬಿಡ್ಬೇಕು ಅನ್ಸುತ್ತೆ.

ಸ್ಮಾರ್ಟ್ ಫೋನ್ 2:
ಈ ಹಾಡುಗಳನ್ನ ಕೇಳೋದ್ ಬೇರೆ …ಆ ಹಾಡುಗಳನ್ನ ಜೋರಾಗಿ ಹಾಕಿ ಹಾಕಿ ನನ್ನ ಸ್ಪೇರ್ ಪಾರ್ಟ್ಸ್ ಎಲ್ಲಾ ಹಾಳಾಗ್ ಹೋಗಿದೆ.

ಸ್ಮಾರ್ಟ್ ಫೋನ್ 1:
ನಮ್ದೂ ಅದೇ ಗೋಳಪ್ಪ. ಮೊನ್ನೆ ಹಾಡ್ ಹಾಕ್ಕೊಂಡು ಹಂಗೆ ನಡ್ಕೊಂಡು ಹೋಗ್ತಿದ್ದ ನಮ್ಮ್ ಯಜಮಾನ. ಮುಂದೆ ಮೋರಿ ಕಲ್ಲು ತೆಗೆದಿದ್ರು. ಜನ ಎಲ್ಲಾ ಕೂಗ್ತಿದ್ರು ’ಮೋರಿ ಮೋರಿ’ ಅಂತಾ, ಹಂಗೆ ಡ್ಯಾನ್ಸ್ ಮಾಡ್ಕೊಂಡು ಬಿದ್ದೇ ಬಿಟ್ಟ ಮೋರಿಗೆ. ಸಂತೋಷ ಏನೂಂದ್ರೆ ಬಿದ್ದು ಮೈ ಕೈ ಎಲ್ಲಾ ರಕ್ತ ಬಂದ್ರೂ, “ನನ್ನ್ ಫೋನ್ ಎಲ್ಲಿ ಎಲ್ಲಿ “ ಅಂತ ನನ್ನ ಬಗ್ಗೆ ಕೇಳ್ತಿದ್ದ

ನಾರ್ಮಲ್ ಫೋನ್ :
ನಾನಿದಿದ್ರೆ ಕೇಳ್ತಾ ಇರಲಿಲ್ಲ ಪಾಪಿಗಳು, ನಾರ್ಮಲ್ ಫೋನ್ ಬಿಡು ಅಂತ ಮೋರಿಲೇ ಬಿಟ್ಟು ಬರ್‍ತಿದ್ರು.

ಸ್ಮಾರ್ಟ್ ಫೋನ್ 1:
ನಿಂದೆ ಸ್ವಲ್ಪ ಆರಾಮ್ ಬಿಡಪ್ಪ.. ನಮಷ್ಟು ಕೆಲ್ಸ ಇಲ್ಲ.

ನಾರ್ಮಲ್ ಫೋನ್:
ಏನ್ ಆರಾಮು? ನಮ್ಮಂತವರನ್ನೆಲ್ಲಾ ಈ ವಯಸ್ಸಾದವರಿಗೆ ಕೊಟ್ಟು ಬಿಟ್ಟಿರ್‍ತಾರೆ. ಅವರು ನಮ್ಮ ನಂಬರ್ ಗಳನ್ನು  ಒತ್ತದ್ದು ನೋಡಬೇಕು ನೀನು. ಒಳಗೆ ಇರೋ circuit ಎಲ್ಲಾ ಕೈಗೆ ಬರಬೇಕು ಹಂಗೆ ಒತ್ತುತ್ತಾರೆ. ಸೈಲಂಟ್ ಮೋಡಲ್ಲಿ ಇಡೋಕೆ ಬರೋಲ್ಲ, ಒಂದು ಫೋನು ಬಂದ್ರೆ ಸಾಕು ಇಡೀ ಏರಿಯಾಗೆ ಕೇಳಿಸ್ ಬೇಕು. ಮೊನ್ನೆ ನಮ್ಮ ಬಾಸು ನನ್ನ ಯಾವ್ದೋ ಭಾಷಣಕ್ಕೆ ಕರ್ಕೊಂಡು ಹೋಗಿದ್ದ. ಮನೆಯಿಂದ ದೊಡ್ಡ ಬಾಸ್, ಅವರ ಹೆಂಡ್ತಿ ಫೋನ್ ಬಂತು ನೋಡು, ಎಲ್ಲಾ ನನ್ನ ಬಯ್ಯೋಕೆ ಶುರು ಮಾಡಿದ್ರು, ಬಿಸಾಕ್ರಿ ಫೋನು ಅಂತಾ.. “ಮುಚ್ರಯ್ಯ ಸಾಕು ಅನಿಸ್ತು” ಯಾಕೆ ಅಂತ ಸುಮ್ನೆ ಆದೆ. ಇನ್ಮೇಲೆ ಯಾವ್ದಾದ್ರು important ಕಾಲ್ ಬರಲಿ, ನಾನೇ dead ಆಗ್ ಬಿಡ್ತೀನಿ.

ಸ್ಮಾರ್ಟ್ ಫೋನ್ 1:
ನಿನಗೆ ದೊಡ್ಡೋರಾ ಕಾಟ, ನಮ್ಗೆ ಮಕ್ಕಳ ಕಾಟ ಬೇರೆ. ನಮ್ಮ ಯಜಮಾನ office ಯಿಂದ ಬರ್‍ತಾ ಇದ್ದ ಹಾಗೆ ಫೋನ್ ಎತ್ತಿ ಮಕ್ಕಳಿಗೆ ಕೊಡ್ತಾನಪ್ಪ. ಅವು ಮಕ್ಕಳೇನಯ್ಯಾ? ರಾಕ್ಷಸರು ..ಥೂ... ನನಗ್ ಬೇಕು ನನಗ್ ಬೇಕು ಅಂತಾ ಕಿತ್ಲಾಡ್ತವೆ. ಮೊನ್ನೆ ಹಂಗೆ ಜಗಳ ಆಡ್ಕೊಂಡ್ ಆಡ್ಕೊಂಡು ಮನೆ ಸೊಪ್ಪು ಸಾರಲ್ಲಿ ನನ್ನ ಬೀಳಿಸ್ ಬಿಟ್ವು. ಥೂ ಮೈಯೆಲ್ಲಾ ಸೊಪ್ಪು. ಕೋಪ ಬಂದು ಕೆಲ್ಸ ಮಾಡೋದೆ ನಿಲ್ಲಿಸ್ ಬಿಟ್ಟೆ. ಅಮೇಲೆ ರಿಪೇರಿ ಮಾಡಿಸ್ದ ನನ್ನ..

ಸ್ಮಾರ್ಟ್ ಫೋನ್ 2:
ಹೌದಪ್ಪ, ನಮ್ಮ್ ಒಳಗೆ ಇರೋ ಗೇಮ್ಸೆಲ್ಲಾ ಗೊತ್ತು ಅವಕ್ಕೆ. ಮನೆಯಿಂದ ಹೊರಕ್ಕೆ ಹೋಗೊಲ್ಲ, ಯಾವಾಗ್ಳೂ ನಮ್ಮನ್ನ ಹಾಕ್ಕೊಂಡು ಉಜ್ಜ್ ತಿರೋದೆ…. ಸರಿಯಾಗಿ ಆಡೋಲ್ಲ ಆಮೇಲೆ ಗೇಮಲ್ಲಿ ಸೋತ್ರೆ.. ಅಪ್ಪ ಮೊಬೈಲ್ ಚೆನ್ನಾಗಿಲ್ಲ ಬೇರೆ ತಗೋ ಅನ್ನೋದು

ಸ್ಮಾರ್ಟ್ ಫೋನ್ 1:
ಗೇಮ್ಸ್ ಆಡೋಕೆ ಬಿಟ್ರೆನೇ ಊಟ ಮಾಡೋದು. ನಮ್ಮನ್ನ ಇಟ್ಕೋಂಡ್ ಊಟ ಮಾಡೋದು. ಒಂದೊಂದ್ ಸಲ ಅನ್ನ ನೀರು ಎಲ್ಲಾ ನನ್ನೊಳಗೆ ಹೋಗಿ ಬಿಡುತ್ತಪ್ಪ. ನಾರ್ಮಲ್ ಫೋನ್ ನಮಗೂ ರೆಸ್ಟ್ ಬೇಡ್ವಾ, ನಾವೇನ್ charge ಅಗೋದು ಬೇಡ್ವಾ? ಒಂದು ಸಲ ತಗೊಂಡ್ ಮೇಲೆ ಪೂರ್ತಿ ಇವರ ಗುಲಾಮ್ರಾ?

ಸ್ಮಾರ್ಟ್ ಫೋನ್ 1:
ನಾವ್ ಇವರಿಗೆಲ್ಲಿ ಗುಲಾಮ್ರು? ಇವ್ರು ನಮ್ಮ ಗುಲಾಮ್ರು, ಮಾಡೋ ಕೆಲ್ಸ ಎಲ್ಲ ಬಿಟ್ಟು ನಮ್ಮ್ ಹಿಂದೆನೇ ಬಿದಿರ್‍ತಾರೆ

ಸ್ಮಾರ್ಟ್ ಫೋನ್ 2:
ಈಗಂತೂ, ಪಿಚ್ಚರ್ರು, ಗ್ಯಾಸ್, ಬ್ಯಾಂಕು, ಲೈಟು ಬಿಲ್ಲು ಎಲ್ಲದಕ್ಕೂ ನಾವೇ ಬೇಕು ನಾರ್ಮಲ್ ಫೋನ್ ಏನ್ ನಮ್ಮನ್ನ ಬಿಟ್ರೆ ಜೀವನನೇ ಇಲ್ಲ ಅನ್ನೋ ಹಾಗೆ. ಮಧ್ಯೆದಲ್ಲಿ ಕರೆನ್ಸಿ ಮುಗ್ದೋಬೇಕು ಅವಾಗ ಇವರ ಮುಖ ನೋಡ್ಬೇಕು..

ಸ್ಮಾರ್ಟ್ ಫೋನ್ 1:
ನಮ್ಮನ್ನ charge ಮಾಡೋವಾಗ್ಲೂ ಏನಪ್ಪ ಇವರ ಗೋಳು,ಆವಗ್ಲೂ ಮಾತಾಡ್ ಬೇಕಾ? ನಾರ್ಮಲ್ ಫೋನ್ ಅದಕ್ಕೆ ನಮ್ಮವನೊಬ್ಬ ಮೊನ್ನೆ ಒಳ್ಳೆ ಕೆಲ್ಸ ಮಾಡಿದ್ದಾನೆ. Charge ಮಾಡ್ಕೋಂಡು ಮಾತಾಡ್ತಿನಂತೆ ಒಬ್ಬ, ಕೆನ್ನೆಗೆ ಸರಿಯಾಗಿ ಕರೆಂಟ್ ಹೊಡಿಯೋ ಹಾಗೇ ಮಾಡಿದ್ದಾನೆ.. ಸುಟ್ಟೋಯ್ತೋಂತೆ ಮುಖ

ಸ್ಮಾರ್ಟ್ ಫೋನ್ 1:
ಏನೋಪ್ಪ ಜಗತ್ತು ಎಷ್ಟು ಚೆನ್ನಾಗಿದೆ, ನೋಡ್ರೋ ಅಂದ್ರೆ ನೋಡಲ್ಲ, ಎಲ್ಲಾ ಫೋಟೋನೇ ಹಿಡಿಬೇಕು. ನನ್ನೊಳಗಂತೂ ಅದೆಷ್ಟು ಫೋಟೊಗಳು ತುಂಬಿಸಿದ್ದಾರೆ ಅಂದ್ರೆ ನಾನು ಎಷ್ಟು ಭಾರ ಇದ್ದೀನೋ ನನಗೆ ಗೊತ್ತಿಲ್ಲ

ಸ್ಮಾರ್ಟ್ ಫೋನ್ 2:
ಅದರಲ್ಲಿ ಈ Selfieಗಳು ಬೇರೆ. ಎಲ್ಲಿ ಹೋದ್ರೂ ಎಲ್ಲರಿಗೂ ಗೊತ್ತಾಗ್ ಬೇಕಲ್ಲಾ?angle angle ನಲ್ಲಿ ಹಿಡಿಯೋದು ಆ ಫೇಸ್ ಬುಕ್ಕಿಗೆ ಹಾಕೋದು. ಈಗೀಗ ನಾವು ಕನ್ನಡಿ ಬೇರೆ ಆಗೋಗಿದ್ದೀವಿ. ವಿಡಿಯೋ ಆನ್ ಮಾಡ್ಕೋಳೋದು ಮೇಕಪ್ಪ್ ಮಾಡ್ಕೋಳೊದು. ಸರಿ ಹೋಯ್ತು.

ಸ್ಮಾರ್ಟ್ ಫೋನ್ 1:
ಹಿಂಗೆ ಮಾಡ್ಕೊಳ್ಳೋವಾಗ್ಲೇ ನನ್ನ ಯಾರೋ ಕದ್ದು ಮಾರಿಕೊಂಡಿದ್ದು, ಈಗ ನಾನು ಇರೋದು ಮೂರನೇ ಬಾಸ್ ಹತ್ರ.

ನಾರ್ಮಲ್ ಫೋನ್ ಹೋಗ್ಲಿ ಬಿಡ್ರಪ್ಪ, ಯಾರತ್ರ ಹೇಳ್ಕೊಳಣ್ಣ ನಮ್ಮ problem. ನಂದಂತೂ ಮುಗಿತಾ ಬಂತು ಜೀವನ, ಇನ್ನೊಂದು ಎರಡು ನಂಬರ್ ಅಳಿಸೋದ್ರೆ , ನೆಮ್ಮದಿಯಿಂದ ಕಣ್ಣ್ ಮುಚ್ಚ್ಕೋತ್ತೀನಿ.

ಸ್ಮಾರ್ಟ್ ಫೋನ್ 2:   
ಆಯ್ಯೋ ನಮ್ದುನೂ ಅಷ್ಟೇ ಬಾರಪ್ಪ.ಮೊದಲಿನ ಥರ ನಾಲ್ಕೈದು ವರ್ಷ ಎಲ್ಲಾ ಬರೋಲ್ಲ ನಾವು. ಬರೋವಾಗ್ಲೇ ಕಂಪನಿಯವರು ಹೇಳಿ ಕಳ್ಸಿದ್ದಾರೆ ಎರಡು ವರ್ಷ ಆದ್ ಮೇಲೆ ನಾಟಕಗಳು ಶುರು ಮಾಡ್ಕೊಳ್ಳಿ ಅಂತಾ

ಸ್ಮಾರ್ಟ್ ಫೋನ್ 1: 
ನನಗೂ ಅಷ್ಟೆ.ಅದಕ್ಕೆ ನಾನು ಒಳ್ಳೆ ಟೈಮ್ ನೋಡ್ಕೊಂಡು ಸ್ವಿಚ್ಚ್ ಆಫ್ ಆಗೋದು, ನೆಟ್ ವರ್ಕ್ ಕೆಡಿಸ್ಕೊಳ್ಳೋದು ಎಲ್ಲಾ ಮಾಡ್ತಿನಿ. ಅವರಿಗೇ ಬೇಜಾರ್ ಆಗಿ ನಮಗೆ ಮುಕ್ತಿ ಕೊಡ್ಲಿ ಅಂತ ನಾರ್ಮಲ್ ಫೋನ್ ನಮಗೇನೋ ಮುಕ್ತಿ ಬಿಡು, ಪಾಪ ಅವರ ಕತೆ ಹೇಳು, ನಮ್ಮಿಂದ ಯಾವಾಗ ಅವರಿಗೆ ಮುಕ್ತಿ?

ಸ್ಮಾರ್ಟ್ ಫೋನ್ 2: 
ನಮ್ಮನ್ನ ಪಕ್ಕಕ್ಕಿಟ್ಟು, ಎಷ್ಟು ಬೇಕೋ ಅಷ್ಟು ಉಪಯೋಗಿಸಿಕೊಂಡು ಕಣ್ಣ್ ಮುಂದೆ ಇರೋ ಪ್ರಕೃತಿ ಪರಿಸರ, ಜನ, ಪ್ರಾಣಿ ವಾತವಾರಣ ಎಲ್ಲಾ ಪ್ರೀತಿಸಿ  ಮನುಷತ್ವ ಕಾಪಾಡ್ ಕೊಂಡ್ರೆ ಉಳಿತ್ತಾರೆ. Selfieಗಳನ್ನ ಕ್ಲಿಕ್ ಮಾಡ್ಕೋಂಡು selfish ಆಗಿ ಮುಂದುವರಿದರೆ ನಮ್ಮ ಥರನೇ ಯಂತ್ರಗಳಾಗ್ತಾರೆ ಅಷ್ಟೆ. ಎಲ್ಲಾ ಅವರ ಕೈಲೇ ಇದೆ.

ಸ್ಮಾರ್ಟ್ ಫೋನ್ 1: 
ಸರಿ .. ಬನ್ರಪ್ಪ ಬೆಳಗಾಯ್ತು ಇನ್ನೂ ಶುರು ನಮ್ಮ ವನವಾಸ…….ದಿನಾ ಎಲ್ಲಾ ಏನೇನು ಕಾದಿದ್ಯೋ?

-ಪ್ರಶಾಂತ್ ಇಗ್ನೇಶಿಯಸ್

Friday, 13 February 2015

ವಿಶ್ವಕಪ್ ಕ್ರಿಕೆಟ್ ಹಾಗೂ ಭಾರತ

ಪ್ರತಿ ನಾಲ್ಕು ವರ್ಷಕ್ಕೊಮ್ಮೆ ಬರುವ ಕ್ರಿಕೆಟ್ ವಿಶ್ವ ಕಪ್ ಬಂದಿದೆ. ಕ್ರಿಕೆಟ್ ಹುಚ್ಚಿನ ಭಾರತದ ಜನರ ದಿನಚರಿ ಕ್ರಿಕೆಟ್ ಮ್ಯಾಚಿನ ವೇಳಾಪಟ್ಟಿಗೆ ಅನುಗುಣವಾಗಿ ಬದಲಾಗುವುದರಲ್ಲಿ ಸಂಶಯವೇ ಇಲ್ಲ. ಮುಂದಿನ ಒಂದೆರೆಡು ತಿಂಗಳು ಈ ರೀತಿಯ ಮಾತುಗಳನ್ನು ಕೇಳಬಹುದು :

 ತಂದೆ: ಹೇ ಏನೋ ಇನ್ನೂ ಮಲಗಿದ್ದಿಯಾ, ನಡಿ ನಡಿ ದೇವಸ್ಥಾನಕ್ಕೆ ಹೋಗಿ ಬರೋಣ, ಜವಬ್ದಾರಿ ಇಲ್ಲ, ದೇವರು ದಿಂಡರು ಭಯ ಭಕ್ತಿ ಇಲ್ಲ
ಮಗ : ಅಯ್ಯೋ ಹೋಗಪ್ಪ ನಾನು ದೇವಸ್ಥಾನಕ್ಕೆ ಸಾಯಂಕಾಲ ಹೋಗೀನಿ, ಇವತ್ತು ಇಂಡಿಯಾ ಪಾಕಿಸ್ತಾನ್ ಮ್ಯಾಚ್ ಇದೆ
ತಂದೆ : ಹೌದ??? ಸರಿ ನಾನೂ ಸಾಯಂಕಾಲನೇ ಹೋಗ್ತಿನಿ ಬಿಡು..ದೇವಸ್ಥಾನ ರಾತ್ರಿ ತನಕ ತೆಗ್ದಿರುತ್ತೆ

ತಾಯಿ ಮಗಳಿಗೆ : ಅದೇನು ಓದ್ಕೋಬೇಕೋ ಎಲ್ಲಾ ಇವತ್ತೇ ಓದ್ಕೋ ನಾಳೆ ಮ್ಯಾಚ್ ಇದೆ. ಅದಿದ್ರೆ ಬುಕ್ಕ್ ಮುಟ್ಟೋಲ್ಲ ನೀನು.

ಗಂಡ ಹೆಂಡತಿಗೆ : ಅದೇನ್ ಮಾಡ್ತಿಯೋ ಗೊತ್ತಿಲ್ಲ, ಎಲ್ಲಿ ಟೀವಿ ನೋಡ್ತಿಯೋ ಗೊತ್ತಿಲ್ಲಮ್ಯಾಚ್ ಬಿಟ್ಟು ನಾನು ಬೇರೆ ಚಾನೆಲ್ಲ್ , ಸೀರಿಯಲ್ ಹಾಕೊಲ್ಲ
ಹೆಂಡತಿ ಗಂಡನಿಗೆ : ನೀವು ಅದೇನು ಮಾಡ್ತೀರೋ ಗೊತ್ತಿಲ್ಲ, ಎಲ್ಲಿ ತಿಂತಿರೋ ಗೊತ್ತಿಲ್ಲ, ನಾನೂ ಮ್ಯಾಚ್ ನೋಡ್ಕೊಂಡ್, ಉಪ್ಪಿಟ್ಟು ಬಿಟ್ಟು ಬೇರೆ ಅಡುಗೆ ಮಾಡೊಲ್ಲ

ವೃದ್ಧ ಹೆಂಡತಿ : ರೀ ನೋಡ್ರಿ ನಿಮ್ಮ ಫೋನ್ ಹೊಡ್ಕೊತ್ತಿದೆ, ಮಗ ಅಮೆರಿಕಾ ಇಂದ ಫೋನ್ ಮಾಡಿದ್ದಾನೆ
ವೃದ್ಧ ಗಂಡ   : ಅಯ್ಯೋ ಇರ್‍ಲಿ ಇರೆ, ಒಳ್ಳೆ Power Play ನಡಿವಾಗ್ಲೇ ಯಾವಾಗ್ಲೂ ಫೋನ್ ಮಾಡ್ತಾನೆ, ಅಪ್ಪ ಮಲ್ಗಿದ್ದಾರೆ ಅಂತ ಹೇಳ್ಬಿಡೆ.

ಪಕ್ಕದ ಮನೆಯವರು : ರೀ ಸುಜಾತ , ನೋಡ್ರಿ ನಿಮ್ಮ ಪಾಪು ಮಣ್ಣಲ್ಲಿ ಆಟ ಆಡ್ತಿದೆ, ಮೈಯೆಲ್ಲಾ ಮಣ್ಣ್ ಮಾಡ್ಕೊಂಡಿದೆ
ಸುಜಾತ : ಅಯ್ಯೋ ಆಡ್ಲಿ ಬಿಡ್ರಿ, ನೀರು ಕಾಯ್ಸೋಕ್ಕೆ ಇಟ್ಟಿದ್ದೀನಿ, last 5 overs ನೋಡ್ಕೊಂಡು ಸ್ನಾನ ಮಾಡಿಸ್ತೀನಿ. ಮಕ್ಕಳಿಗೆ ಮಣ್ಣ್ ಒಳ್ಳೆದೇ.

ಇವೆಲ್ಲಾ ತಮಾಷೆ ಅನಿಸಿದರೂ ಭಾರತದ ಮಟ್ಟಿಗೆ ಸ್ವಲ್ಪ ಮಟ್ಟಿಗೆ ನಿಜವೂ ಹೌದು. ಕ್ರಿಕೆಟ್ ಆಡುವುದು ಕೆಲವೇ ದೇಶಗಳು ಮಾತ್ರ ಎನ್ನುವುದು ನಿಜವಾದರೂ ಕಳೆದ ವರ್ಷಗಳಲ್ಲಿ ಅದು ಪಡೆದಿರುವ ಜನಪ್ರಿಯತೆ ಅಗಾಧ. ನೂರಾರು ದೇಶಗಳಲ್ಲಿ ಕ್ರಿಕೆಟ್ ಹುಚ್ಚು ಈಗಾಗಲೇ ಹರಡಿ ನಿಂತಿದೆ. ಇನ್ನೂ ಭಾರತಕ್ಕೂ ಕ್ರಿಕೆಟ್ಟಿಗೂ ದಶಕಗಳ ನಂಟಿದ್ದರೂ ಕಳೆದ 30  ವರ್ಷಗಳಲ್ಲಿ ಅದು ಬೆಳೆದು ನಿಂತಿರುವ ಪರಿ ಅಚ್ಚರಿ ಮೂಡಿಸುತ್ತದೆ.

ಅದು 1983ರ ಜೂನ್ 25 ರ ಭಾನುವಾರ. ಭಾರತ ಹಾಗೂ ವೆಸ್ಟ್ ಇಂಡೀಸ್ ತಂಡಗಳ ನಡುವಿನ ವಿಶ್ವ ಕಪ್ ಫೈನಲ್ ಪಂದ್ಯ. ಭಾರತ ಫೈನಲಿಗೆ ಬಂದಿರುವುದೇ ಅಚ್ಚರಿ, ಅದೃಷ್ಟ ಎಂಬ ಹಿಯಾಳಿಕೆಯ ಮಾತುಗಳು ಕೇಳಿ ಬರುತ್ತಿದ್ದವು. ತನ್ನಗಿಂತ ಬಲಿಷ್ಠವಾದ ಇಂಗ್ಲೆಂಡ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್ , ಪಾಕಿಸ್ತಾನ ತಂಡಗಳನ್ನು ಹಿಂದಿಕ್ಕಿ ಭಾರತ ಫೈನಲ್ ತಲುಪಿತ್ತು. ಎದುರಾಳಿಯಾಗಿದ್ದು ಆ ಕಾಲದ ದೈತ್ಯ ತಂಡವಾದ ವೆಸ್ಟ್ ಇಂಡೀಸ್. ಸೋಲ್ಲಿಲ್ಲದ ಸರದಾರರಂತೆ ಮೆರೆಯುತ್ತಿದ್ದ ವಿಂಡೀಸ್ ಆಗಾಗಲೇ ಹಿಂದಿನ ಎರಡೂ ವಿಶ್ವಕಪ್ಪನ್ನು ಗೆದ್ದು ಮೂರನೆಯದತ್ತ ದಾಪುಗಾಲಿಕ್ಕಿತ್ತು. ಎಲ್ಲರೂ ಭಾರತ ಧೂಳಿಪಟವಾಗುತ್ತದೆ ಎಂದು ನಿರೀಕ್ಷಿಸಿದಂತೆಯೇ ಮೊದಲು ಬ್ಯಾಟ್ ಮಾಡಿದ ಭಾರತ ಕೇವಲ 183ಕ್ಕೆ ಔಟಾಗಿತ್ತು.


ಇದನ್ನು ಬೆನ್ನೆತ್ತಿ, ಕೇವಲ 27 ಚೆಂಡುಗಳಲ್ಲಿ 33 ರನು ಚಚ್ಚಿದ್ದ ಅಂದಿನ ಮಿಂಚಿನ ಬ್ಯಾಟ್ಸ್ ಮೆನ್ ವಿವಿಯನ್ ರಿಚರ್ಡ್ಸ್ ಸಿಕ್ಸರ್ ಹೊಡೆಯುವ ಭರದಲ್ಲಿ ಗಾಳಿಯಲ್ಲಿ ಎತ್ತಿದ್ದ ಚೆಂಡು ಮೇಲೆ ಸಾಗುತ್ತಿದ್ದಂತೆ ಎಲ್ಲರ ಕಣ್ಣು ಬೌಂಡರಿಯತ್ತ. ಆದರೆ ನೆಲದ ಮೇಲೆ ಸುಮಾರು 30 ಮೀಟರಿನಷ್ಟು ದೂರ ಚೆಂಡಿನ ಮೇಲೆಯೇ ಕಣ್ಣಿಟ್ಟು ಹಿಂದೆ ಹಿಂದೆ ಓಡಿ ಬರುತ್ತಿದ್ದದ್ದು ಭಾರತದ ನಾಯಕ ಕಪಿಲ್ ದೇವ್. ಅತನೊಬ್ಬ ಅದ್ಭುತ ಫೀಲ್ಡರ್. ಚೆಂಡು ಬೌಂಡರಿ ದಾಟದೇ ಸುರಕ್ಷಿತವಾಗಿ ಕಪಿಲ್ ಕೈ ಸೇರಿತು. ಕ್ರೀಡಾಂಗಣದಲ್ಲಿ ಮಿಶ್ರ ಪ್ರತಿಕ್ರಿಯೆ. ವಿಂಡೀಸ್ ನ  ಪ್ರೇಕ್ಷಕರ ಮುಖದಲ್ಲಿ ದಿಗ್ಭ್ರಮೆ, ಭಾರತದ ಪ್ರೇಕ್ಷಕರು ಹುಚ್ಚೆದ್ದು ಕುಣಿಯುತ್ತಾ, ಮೈದಾನದೊಳಗೆ ನುಗ್ಗಿ , ಸಿಕ್ಕ ಸಿಕ್ಕವರನ್ನು ಅಪ್ಪಿ ಮುದ್ದಾಡಿದರು.  ತಟಸ್ಥ ಅಭಿಮಾನಿಗಳ ಮನದಲ್ಲಿ ಕಾತರ.
ಮುಂದೆ ಭಾರತ ಪಂದ್ಯ ಗೆದ್ದೇ ಬಿಡುತ್ತದೆ. ಇತಿಹಾಸವೊಂದು ನಿರ್ಮಾಣವಾಗಿ, ಮುಂದೆ ಕ್ರಿಕೆಟ್ ಜಗತ್ತಿನಲ್ಲಾದ ಅನೇಕ ಚಾರಿತ್ರಿಕ
ಬದಲಾವಣೆಗಳಿಗೆ ಈ ಗೆಲುವು ಮುನ್ನುಡಿಯಾಗುತ್ತದೆ. ಮೊದಲೇ ಕ್ರಿಕೆಟ್ ಹುಚ್ಚಿದ್ದ ದೇಶದ ಗಲ್ಲಿ ಗಲ್ಲಿಯಲ್ಲೂ ಆಟಗಾರರು ಹುಟ್ಟಿಕೊಳ್ಳುತ್ತಾರೆ. ಟಿ.ವಿ ಪ್ರೇಕ್ಷಕ ವೃಂದ ದುಪ್ಪಟ್ಟಲ್ಲ ಹತ್ತರಷ್ಟಾಗುತ್ತದೆ.

ಭಾರತ್ದ ಈ ಜಯಭೇರಿ ಅನೇಕ ಬದಲಾವಣೆಗಳನ್ನು ತಂದಿತು. ಇಂಗ್ಲೆಂಡ್ ಬಿಟ್ಟು ಎಂದೂ ಹೊರಗೆ ನಡೆಯದ ವಿಶ್ವಕಪ್ 1987ರಲ್ಲಿ ಭಾರತದ ಉಪಖಂಡದಲ್ಲಿ ನಡೆಯುತ್ತದೆ. ಭಾರತ, ಶ್ರೀಲಂಕಾ, ಪಾಕಿಸ್ತಾನದಲ್ಲಿ ನಡೆದ ಆ ಟೊರ್ನಿ ದೊಡ್ಡ ಮಟ್ಟದ ಯಶಸ್ಸು ಪಡೆದು ಈ ವಿಶ್ವ ಮಟ್ಟದ ಸರಣಿಗಳು ಆಸ್ಟ್ರೇಲಿಯಾ, ಇಂಗ್ಲೆಂಡ್ ಗೆ ಮಾತ್ರ ಸಾಧ್ಯ ಎಂಬ ನಂಬಿಕೆಯನ್ನು ಅಳಿಸಿ ಹಾಕುತ್ತದೆ. ಒಂದು ದಿನದ ಕ್ರಿಕೆಟ್ಟಿನಲ್ಲಿ ವೆಸ್ಟ್ ಇಂಡೀಸ್ ನ ಆಧಿಪತ್ಯವನ್ನು ಅಳಿಸಿದ ಭಾರತ, ಕ್ರಿಕೆಟ್ ಆಡಳಿತದಲ್ಲೂ ತಾವು ಸಮರ್ಥರು ಎಂಬುದನ್ನು ಸಾಬೀತು ಪಡಿಸುತ್ತದೆ.

ಮುಂದೆ ಕೇಬಲ್ ಹಾಗೂ ಸ್ಯಾಟಲೈಟ್ ಟಿ.ವಿ ಬಂದ ಮೇಲಂತೂ ಟಿ.ವಿ ಪ್ರೇಕ್ಷಕರಿಂದಾಗಿ ಭಾರತ ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಮಂಡಳಿಯಾಗುತ್ತದೆ. ಇಂದು ವಿಶ್ವ ಕ್ರಿಕೆಟ್ ಮೇಲೆ ಭಾರತದ ಪ್ರಭಾವ ಎಷ್ಟಿದೆ ಎಂದರೆ, ಭಾರತ ಕ್ರಿಕೆಟ್ ಪ್ರೇಕ್ಷಕರ ಮೇಲೆಯೇ ಒಂದು ಇಡೀ ಟೋರ್ನಿ ಅವಲಂಬಿತವಾಗಿದೆ. ವಿಶ್ವ ಕ್ರಿಕೆಟ್ ಅನ್ನು ನಡೆಸುತ್ತಿರುವ ಐ.ಸಿ.ಸಿ ಯ ಆದಾಯದಲ್ಲಿ ಸುಮಾರು 60ಕ್ಕಿಂತಲೂ ಹೆಚ್ಚು ಪಾಲು ಭಾರತದ ಪ್ರಾಯೋಜಕರಿಂದಲೇ ಬರುತ್ತಿದ್ದೂ, ಭಾರತ ತಂಡದ ಭಾಗವಹಿಸುವಿಕೆಯ ಮೇಲೆ ಅದು ನಿಂತಿದೆ. 2007ರಲ್ಲಿ ಲೀಗ್ ಹಂತದಲ್ಲೇ ಭಾರತ ಸೋತು ಮರಳಿದ ಮೇಲೆ, ವಿಶ್ವಕಪ್ ನ ಮುಂದಿನ ಪಂದ್ಯಗಳು ತನ್ನ ಕಳೆಯನ್ನೇ ಕಳೆದುಕೊಂಡಿದ್ದು ಮಾತ್ರವಲ್ಲದೆ ಟಿ.ವಿ ಪ್ರಾಯೋಜಕರ ನಿರುತ್ಸಾಹವನ್ನು ವಿಶ್ವ ಕ್ರಿಕೆಟ್ ಪ್ರಿಯರು ಮರೆತಿರಲಾರರು.

ಇದು ವ್ಯವಹಾರದ ಮಾತಾದರೆ, ವಿಶ್ವಕಪ್ ಅಂಗಳದ ಆಟದಲ್ಲಿ ಸಹಾ ಭಾರತದ್ದು ಮಿಂಚಿನ ಸಾಧನೆಯೇ. ವೆಸ್ಟ್ ಇಂಡೀಸ್ ನ ಪಾರಪತ್ಯ ಮುರಿದಂತೆ, ಹಿಂದಿನ ಮೂರು ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಗಲೋಟವನ್ನು ಕಳೆದ ವಿಶ್ವಕಪ್ಪಿನ ಕ್ವಾಟರ್ ಫೈನಲ್ಲಿನಲ್ಲಿ ತಡೆದದ್ದು ಸಹಾ ಭಾರತವೇ. ತನ್ನದೇ ನೆಲದಲ್ಲಿ ವಿಶ್ವಕಪ್ ಗೆದ್ದ ಏಕಮೇವ ದೇಶ ಭಾರತ. ಅಷ್ಟು ಮಾತ್ರವಲ್ಲದೆ ಭಾರತದ ಸಚಿನ್ ತೆಂಡೂಲ್ಕರ್ ರದು ವಿಶ್ವಕಪ್ಪಿನಲ್ಲಿ ಅಚ್ಚರಿಯ ಸಾಧನೆ. ಅತಿ ಹೆಚ್ಚು ರನ್ನು, ಅತಿ ಹೆಚ್ಚು ಶತಕ, ಅತಿ ಹೆಚ್ಚು ಅರ್ಧ ಶತಕ, ಅತಿ ಹೆಚ್ಚು ಪಂದ್ಯ ಶ್ರೇಷ್ಠ ಪ್ರಶಸ್ತಿ, ಒಂದು ಸರಣಿಯಲ್ಲಿ ಅತಿ ಹೆಚ್ಚು ರನ್ನ್ ಹೀಗೆ ಸಾಗುತ್ತದೆ ಸಚಿನ್ ಸಾಧನೆ. ಆದರಿಂದಲೇ ಈ ವರ್ಷವೂ ಸೇರಿದಂತೆ ಸಚಿನ್ ವಿಶ್ವಕಪ್ಪಿನ ರಾಯಭಾರಿಯಾಗಿ ಸತತವಾಗಿ ಎರಡನೆಯ ಬಾರಿ ಆಯ್ಕೆಯಾಗಿದ್ದಾರೆ. ಇನ್ನೂ ಭಾರತದ ಸೆಹ್ವಾಗ್, ಯುವರಾಜ್, ಗಂಗೂಲಿ, ಡ್ರಾವಿಡ್, ದೋನಿ ಯಾವಾಗಲೂ ಕ್ರಿಕೆಟ್ ಪ್ರಿಯರ ಅಚ್ಚು ಮೆಚ್ಚಿನ ಆಟಗಾರರು ಎಂದು ಅಂಕಿ ಅಂಶಗಳು ಹೇಳುತ್ತದೆ. ಈ ಬಾರಿ ವಿರಾಟ್ ಕೊಹ್ಲಿ ವಿಶ್ವವು ಅತ್ಯಂತ ಭರವಸೆಯಿಂದ ನೋಡುತ್ತಿರುವ ಆಟಗಾರನಾಗಿ ಹೊರ ಹೊಮ್ಮಿದ್ದಾರೆ.

ಈ ಬಾರಿಯ ವಿಶ್ವಕಪ್ಪ್ ನಿಜಕ್ಕೂ ಅತ್ಯಂತ ಸ್ಪರ್ಧಾತ್ಮಕವಾದ ಸರಣಿಯಾಗುವುದರಲ್ಲಿ ಸಂಶಯವಿಲ್ಲ. ಎಲ್ಲಾ ತಂಡಗಳಲ್ಲಿಯೂ ಪ್ರತಿಭಾವಂತ ಯುವ ಆಟಗಾರರು ಪ್ರಶಸ್ತಿಯನ್ನು ತಮ್ಮದಾಗಿಸಿಕೊಳ್ಳಲು ತುದಿಗಾಲಿನಲ್ಲಿ ಇದ್ದಾರೆ. ತನ್ನದೇ ನೆಲದಲ್ಲಿ ಆಡುತ್ತಿರುವ ಅಸ್ಟ್ರೇಲಿಯಾ, ಯುವ ತಂಡವಾದ ನ್ಯೂಜಿಲೆಂಡ್ ಬಲಿಷ್ಠ ತಂಡಗಳೆನಿಸಿಕೊಂಡರೂ, ಶ್ರೀಲಂಕಾ, ದಕ್ಷಿಣ ಆಫ್ರಿಕಾ, ಪಾಕಿಸ್ತಾನವನ್ನು ಎಂದಿಗೂ ಸ್ಪರ್ಧೆಯಿಂದ ಹಿಂದೆಗೆಯುವಂತಿಲ್ಲ. ವೆಸ್ಟ್ ಇಂಡೀಸ್ ಕೂಡ ಉತ್ತಮವಾದ ತಂಡವೇ. ಆಸ್ಟ್ರೇಲಿಯಾದ ಪುಟಿದೇಳುವ ಪಿಚ್ ಗಳಲ್ಲಿ ತಂಡಗಳು ಹೇಗೆ ತಮ್ಮನ್ನೇ ಒಗ್ಗಿಸಿಕೊಂಡು ಆಡುತ್ತವೆ ಎನ್ನುವುದರ ಮೇಲೆ ಅವುಗಳ ಯಶಸ್ಸು ಇದೆ.

ಒಟ್ಟಿನಲ್ಲಿ ಮುಂದಿನ ಒಂದು ತಿಂಗಳು ಕ್ರಿಕೆಟ್ ಹಬ್ಬ. ಈ ನಡುವೆ ನಮ್ಮ ವಿದ್ಯಾರ್ಥಿಗಳ ಪರೀಕ್ಷೆಯೂ ಬರುತ್ತದೆ. ಪೋಷಕರಿಗೆ, ಶಾಲೆಯ ಶಿಕ್ಷಕರಿಗೆ ಇದು ಇಕ್ಕಟಿನ ಪರಿಸ್ಥಿತಿ. ವಿದ್ಯಾರ್ಥಿಗಳು ಓದಿನ ಕಡೆ ಹೆಚ್ಚು ಗಮನ ಕೊಟ್ಟು ಸಮತೋಲನ ಕಾಪಾಡಿಕೊಳ್ಳಬೇಕಾಗುತ್ತದೆ.

ಕೊನೆಯಲ್ಲಿ, ಈ ಬಾರಿ ಭಾರತ ತಂಡದಲ್ಲಿ ಸ್ಥಾನ ಪಡೆದಿರುವ ನಮ್ಮ ಕರ್ನಾಟಕದ ಆಲ್ರೌಂಡರ್ ಸ್ಟುವರ್ಟ್ ಬಿನ್ನಿಗೆ ವಿಶೇಷವಾಗಿ ಹಾರೈಸೋಣ. ಅವರು ಸಹಾ ತಮ್ಮ ತಂದೆ ರೋಜರ್ ಬಿನ್ನಿಯವರ ರೀತಿಯಲ್ಲಿಯೇ ಯಶಸ್ವಿಯಾಗಲಿ ಎಂಬುದು ನಮ್ಮ ಹಾರೈಕೆ. 1983 ರಲ್ಲಿ ಭಾರತ ವಿಶ್ವಕಪ್ ಗೆದ್ದಾಗ, ಆ ಸರಣಿಯಲ್ಲಿ ರೋಜರ್ ಬಿನ್ನಿಯವರೇ ಅತ್ಯಂತ ಯಶಸ್ವಿ ಬೌಲರ್ ಎಂಬುದನ್ನು ಮರೆಯಲು ಸಾಧ್ಯವೇ?


-ಪ್ರಶಾಂತ್ ಇಗ್ನೇಶಿಯಸ್

Tuesday, 23 December 2014

ಆಡಿಯೋ ಅನಿಸಿಕೆ - ಮಿ & ಮಿಸ್ಸಸ್ ರಾಮಚಾರಿ



ಒಟ್ಟಾಗಿಯೇ ಚಿತ್ರರಂಗ ಪ್ರವೇಶಿಸಿ, ತಮ್ಮದೇ ಆದ ಭದ್ರವಾದ ಸ್ಥಾನಗಳನ್ನು ಪಡೆದುಕೊಂಡಿರುವ ಯಶ್ ಹಾಗೂ ರಾಧಿಕ ಪಂಡಿತ್ ರದು ಒಟ್ಟಾಗಿಯೂ ಯಶಸ್ವಿ ಜೋಡಿಯೇ. ಇಬ್ಬರಿಗೂ ತಮ್ಮದೇ ಆದ ಅಭಿಮಾನಿ ಪ್ರೇಕ್ಷಕ ವೃಂದವಿದ್ದೂ ಅದು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಎಲ್ಲಾ ರೀತಿಯ ಪಾತ್ರಗಳನ್ನು ಲೀಲಾಜಾಲವಾಗಿ ನಿರ್ವಹಿಸಬಲ್ಲ ರಾಧಿಕ ಪಂಡಿತ್ತ್ ಒಂದು ಕಡೆ ಆದರೆ, ಯುವ ಹಾಗೂ ಮಾಸ್ ಪ್ರೇಕ್ಷಕರನ್ನು ಸೆಳೆಯುತ್ತಿರುವ ಯಶ್ ಚಿತ್ರದಿಂದ ಚಿತ್ರಕ್ಕೆ ಕನ್ನಡದ ಅಗ್ರ ನಾಯಕರಲ್ಲಿ ಒಬ್ಬರಾಗಿ ಬೆಳೆಯುತ್ತಿದ್ದಾರೆ. ಇವರಿಬ್ಬರಿದ್ದು, ವಿಭಿನ್ನ ಹೆಸರುಳ್ಳ ಮಿ&ಮಿಸಸ್ಸ್ ರಾಮಾಚಾರಿ ಚಿತ್ರ ಸಹಜವಾಗಿಯೇ ಕನ್ನಡ ಬಹು ನಿರೀಕ್ಷೆಯ ಚಿತ್ರಗಳಲ್ಲಿ ಒಂದಾಗಿದೆ. ಹರಿಕೃಷ್ಣ ನಿರ್ದೇಶನದ ಚಿತ್ರದ ಹಾಡುಗಳು  ಹೇಗಿವೆ ಎಂಬ ಕುತೂಹಲ ನಿಮ್ಮದಾಗಿದ್ದರೆ, ಒಮ್ಮೆ  ಇತ್ತ ಕಣ್ಣಾಡಿಸಿ. 


ಯಾರಲ್ಲಿ ಸೌಂಡು ಮಾಡೋದು?
ಗಾಯನ - ರಂಜಿತ್
ಸಾಹಿತ್ಯ - ಸಂತೋಶ್ ಆನಂದ್ ರಾಮ್ 
ಹರಿಕೃಷ್ಣರ ಗೀತೆಗಳಲ್ಲಿರುವ ವಾದ್ಯ ಸಂಯೋಜನೆ, ಜೋಶ್ ತುಂಬಿದ ರಿದಮ್, ಕೋರಸ್ ಜೊತೆಗೆ  ’ಎಲ್ಲೋ ಕೇಳಿದಂತೆ ಅನಿಸುವ ಭಾವ’ ಎಲ್ಲವೂ ಇರುವ ಗೀತೆ. ನಡು ನಡುವೆ ಬರುವ ’ಹಾವಿನ ದ್ವೇಷ’ ಹಾಡಿನ ಛಾಯೆಯಿಂದಾಗಿ ಗೀತೆ ಹೊಸ ರೂಪ ಪಡೆದುಕೊಳ್ಳುತ್ತದೆ. ಸಂತೋಶ್ ಆನಂದ್ ರಾಮ್ ರ ಸಾಹಿತ್ಯ, ಸಂಗೀತಕ್ಕೆ ತಕ್ಕ ಹಾಗಿದೆ.  ರಂಜಿತ್ ಕೂಡ ಉತ್ತಮವಾಗಿ ಹಾಡುವುದರಿಂದ ಹಾಡು ರಂಜಿಸುತ್ತದೆ.

ಮಿ & ಮಿಸಸ್ಸ್  ರಾಮಾಚಾರಿ
ಗಾಯನ - ಟಿಪ್ಪು
ಸಾಹಿತ್ಯ - ಎ.ಪಿ.ಅರ್ಜುನ್ 
ಸೋಬಾನೆ ಶೈಲಿಯಲ್ಲಿ ವಿಭಿನ್ನವಾಗಿ ಪ್ರಾರಂಭವಾಗುವ ಗೀತೆ ಕೆಲವೇ ಕ್ಷಣದಲ್ಲೇ ಮತ್ತೆ ಹರಿಕೃಷ್ಣ, ಟಿಪ್ಪು ಸ್ಟೈಲ್ ಗೆ ಹೊರಳುತ್ತದೆ. ಲವಲವಿಕೆಯ ಸಾಹಿತ್ಯ ಹಾಗೂ ಸಂಗೀತದಿಂದ ಕೇಳಿಸಿಕೊಂಡು ಹೋಗುತ್ತದೆ. ಟಿಪ್ಪು ಈ ರೀತಿಯ ಗೀತೆಗಳಲ್ಲಿ ಎತ್ತಿದ ಕೈ ಆಗಿರುವುದರಿಂದ ಅವರ ಗಾಯನ ಬಗ್ಗೆ ಹೆಚ್ಚೇನು ಹೇಳುವಂತಿಲ್ಲ.

ಉಪವಾಸ
ಗಾಯನ - ಸೋನು ನಿಗಮ್ ಹಾಗೂ ಶ್ರೇಯ ಘೋಷಲ್
ಸಾಹಿತ್ಯ - ಗೌಸ್ ಪೀರ್
ಗಮನ ಸೆಳೆಯುವ ಸಾಹಿತ್ಯ, ಸರಳ ಹಾಗೂ ಅಬ್ಬರವಿಲ್ಲದ ಸಂಗೀತ ಈ ಗೀತೆಯ ವಿಶೇಷತೆ.  ಸೋನು ನಿಗಮ್ ರವರು ಉತ್ತಮವಾಗಿ ಹಾಡಿದ್ದರೂ ಶ್ರೇಯರವರ ಗಾಯನ ಹೆಚ್ಚು ಇಷ್ಟವಾಗುತ್ತದೆ. ಇತ್ತೀಚಿನ ಗೀಳಾಗಿರುವ ಹಿಂದಿ ಸಾಹಿತ್ಯ, ಕೋರಸ್ ರೂಪದಲ್ಲಿ ಇಲ್ಲಿಯೂ ಇದೆ. ಗೌಸ್ ಪೀರರ ಸಾಹಿತ್ಯ ವಿಭಿನ್ನವಾಗಿದ್ದು,  ಮನ ಸೆಳೆಯುತ್ತದೆ.

ಏನಪ್ಪ
ಗಾಯನ - ಟಿಪ್ಪು
ಸಾಹಿತ್ಯ - ಗೌಸ್ ಪೀರ್
’ಇವನು ಸನ್ನು ಅವಳು ಮೂನು ಇಬ್ಬರೂ ವೆಲ್ಲು ನೋನ್ನು’ ಎಂಬ ಸಾಲುಗಳುಳ್ಳ ಗೌಸ್ ಪೀರ್ ರ ಸಾಧರಣ ಸಾಹಿತ್ಯದ ಹಾಡು ಸಂಗೀತದಲ್ಲೂ ಅದೇ ಮಟ್ಟವನ್ನು ಉಳಿಸಿಕೊಳ್ಳುತ್ತದೆ. ಹೆಚ್ಚೇನು ಏರಿಳಿತಗಳಿಲ್ಲದ್ದರಿಂದ ಟಿಪ್ಪು ಕೂಡ ಎಂದಿನಂತೆ ಹಾಡಿದ್ದಾರೆ. ತೆರೆಯ ಮೇಲೆ ನೃತ್ಯದಿಂದಾಗಿ ಕಳೆಗಟ್ಟಬಹುದೇನೋ ಎಂಬ ಆಶಾಭಾವನೆ ಹುಟ್ಟಿಸುವ ಹಾಡಿದು.  

ಕಾರ್ಮೋಡ
ಗಾಯನ - ರಾಜೇಶ್ ಕೃಷ್ಣನ್
ಸಾಹಿತ್ಯ - ಗೌಸ್ ಪೀರ್
ಇಷ್ಟವಾಗಲು ಅನೇಕ ಕಾರಣಗಳಿರುವ ಗೀತೆ. ಅದರಲ್ಲಿ ಮೊದಲಿಗೆ, ಬಹಳ ದಿನಗಳ ನಂತರ ಕೇಳ ಸಿಗುವ ರಾಜೇಶ್ ರವರ ಕಂಠ. ರಾಜೇಶ್ ರ ಭಾವಪೂರ್ಣ ಗಾಯನ  ಗೌಸ್ ಪೀರ್ ರವರ ಉತ್ತಮ ಸಾಹಿತ್ಯದ ಅರ್ಥಗಳನ್ನು ಸುಲಭವಾಗಿ ಕೇಳುಗರಿಗೆ ತಲುಪಿಸುತ್ತದೆ. ಸಂಗೀತ ಮಧುರವಾಗಿದ್ದು, ವಾದ್ಯ ಸಂಯೋಜನೆ ಸಾಹಿತ್ಯಕ್ಕೆ, ಗಾಯನಕ್ಕೆ ಅಡ್ಡ ಬರದಂತಿದೆ. 
ಒಂದೆರೆಡು ಕಡೆ ಸಾಹಿತ್ಯ ಹಾಗೂ ರಾಗದ ಹೊಂದಣಿಕೆಯಲ್ಲಿ ಕೊರತೆ ಕಾಣುತ್ತದೆ.     

ಅಣ್ಣ್ ತಮ್ಮ
ಗಾಯನ - ಯಶ್ 
ಸಾಹಿತ್ಯ - ಯೋಗರಾಜ್ ಭಟ್ಟ್
ಇತ್ತೀಚೆನ ಗೀತೆಗಳಲ್ಲಿ ’ಅಣ್ಣ್ ತಮ್ಮ’ನಂತಾಗಿರುವ ಹರಿಕೃಷ್ಣರ ಸಂಗೀತ ಹಾಗೂ ಯೋಗರಾಜ್ ಭಟ್ಟರ ಸಾಹಿತ್ಯ ಇಲ್ಲಿ ಮತ್ತೆ ಒಂದಾಗಿದೆ. ಅದರಲ್ಲೇನು ವಿಶೇಷ? ಎಂಬ ಪ್ರಶ್ನೆಗೆ ’ಯಶ್ ಗಾಯನ’ ಎಂಬ ಸಿದ್ಧ ಉತ್ತರ ಈ ಗೀತೆಯ ಮೂಲಕ ಕೊಡಬಹುದು. ಸರಳವಾದ ಸಾಹಿತ್ಯ ಸಂಗೀತಕ್ಕೆ ಅಷ್ಟೇ ಸರಳವಾಗಿ ಯಶರ ಗಾಯನ ಒದಗಿ ಬಂದಿದೆ. ’ಹಂಗೂ ಹಿಂಗೂ  ಹೆಂಗೋ ಇದ್ದೆ’ಎನ್ನುವ ಹಾಡಿನ ಸಾಲುಗಳನ್ನು ಯಶ್ ರ ನಾಯಕ, ಗಾಯಕವರೆಗಿನ ಬೆಳವಣಿಗೆಯ ಬಗ್ಗೆಯೂ ಹೇಳಬಹುದು 

Tuesday, 18 November 2014

ದೇವರ ವಿಳಂಬಗಳು ದೇವರ ನಿರಾಕರಣೆಗಳಲ್ಲ - ರಾಹುಲ್ ಡ್ರಾವಿಡ್

2013ರ ಮಧ್ಯ ಭಾಗದಲ್ಲಿ ಭಾರತದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಬಿಟ್ಸ್ ಪಿಲಾನಿ ವಿಧ್ಯಾರ್ಥಿಗಳ ಪದವಿ ಸ್ವೀಕಾರ ಸಮಾರಂಭದ ಮುಖ್ಯ ಅತಿಥಿಯಾಗಿ ಕ್ರಿಕೆಟ್ ಪಟು ರಾಹುಲ್ ಡ್ರಾವಿಡ್ ಮಾಡಿದ ಭಾಷಣ ಅಪಾರ ಮೆಚ್ಚುಗೆಯನ್ನು ಪಡೆಯಿತು. ಗುರಿಯನ್ನು ಹಿಡಿದು ಸಾಗುವ ಯುವ ಮನಸ್ಸುಗಳು ಪಡೆಯಬೇಕಾದ ಸ್ಪೂರ್ತಿ, ತೋರಬೇಕಾದ ಸಹನೆ, ಶ್ರಮ ಹಾಗೂ ದೇವರು ಹಾಗೂ ತಮ್ಮ ಸಾಮರ್ಥ್ಯದ ಬಗ್ಗೆ ಇಟುಕೊಳ್ಳಬೇಕಾದ ವಿಶ್ವಾಸದ ಬಗ್ಗೆ ಸುವಿಸ್ತಾರವಾಗಿ ಮಾತನಾಡಿದ್ದಾರೆ. ಉಪಯೋಗವಾಗಬಹುದು ಎಂಬ ಆಶಯದೊಂದಿಗೆ ಸರಳವಾಗಿ ಕನ್ನಡಕ್ಕೆ ತರುವ ಒಂದು ಪ್ರಯತ್ನ 
- ಪ್ರಶಾಂತ್ ಇಗ್ನೇಶಿಯಸ್
----------------------------------------------------------------------------------------------------------------------------

ಪದವಿ ಸ್ವೀಕಾರದ ದಿನದಂದು ನಿಮ್ಮೆಲ್ಲರ ನಡುವೆ ನಿಂತು ಮಾತನಾಡುವುದು ನಿಜಕ್ಕೂ ನನಗೆ ದೊಡ್ಡ ಗೌರವ ಹಾಗೂ ಅನಂದದ ಸಂಗತಿಯಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ಉನ್ನತ ಮಟ್ಟದ ಸಾಧನೆಯೊಂದಿಗೆ ದೇಶದ ಪ್ರಗತಿಯಲ್ಲಿ ತನ್ನದೆ ಆದ ಕೊಡುಗೆಯನ್ನು ನೀಡುತ್ತಿರುವ  ಬಿಟ್ಸ್ ನಂಥ ಸಂಸ್ಥೆಗೆ ಭೇಟಿ ಕೊಡುವುದು ನನ್ನನ್ನು ವಿನೀತನನ್ನಾಗಿಸಿದೆ. ಸಂಸ್ಥೆಯಲ್ಲಿ ಪ್ರವೇಶ ಪಡೆಯ ಬೇಕಾದರೆ ಗಣಿತ ಹಾಗೂ ಭೌತ ವಿಜ್ಞಾನದಲ್ಲಿ  (Physics) ಕನಿಷ್ಟ 75 ಅಂಕ ಪಡೆದಿರಬೇಕು ಎಂಬ ಮಾಹಿತಿ ಇದೆ. ಆದರೆ ಆರ್ಹತೆ ಇಲ್ಲಿ ಬರುವ ಮುಖ್ಯ ಆತಿಥಿಗಳಿಗೆ ಅನ್ವಯಿಸುವುದಿಲ್ಲ ಎಂಬುದು ಸಮಾಧಾನಕರ ವಿಷಯ. ಮಟ್ಟಿಗೆ ನಾನಿಂದು ಅದೃಷ್ಟಶಾಲಿ.

ಕ್ರಿಕೆಟ್ ನಿಂದ ನಿವೃತ್ತಿ ಪಡೆದ ಕಳೆದ ಒಂದುವರೆ ವರ್ಷವು ಆತ್ಮಾವಲೋಕನದ ಅತ್ತ್ಯುತ್ತಮವಾದ ಕಾಲವಾಗಿದ್ದೂ, ನನ್ನ ವೃತ್ತಿ ಜೀವನವನ್ನು ಹಿಂದುರುಗಿ ನೋಡುವ ಸದವಕಾಶವನ್ನು ನೀಡಿದೆಹಿಂದಿರುಗಿ ನೋಡಿದಾಗ, ಕ್ರಿಕೆಟ್ ನನ್ನನ್ನು ಮತ್ತಷ್ಟು ಉತ್ತಮ ಹಾಗೂ ಪರಿಪೂರ್ಣ ವ್ಯಕ್ತಿಯನ್ನಾಗಿಯೂ, ನನ್ನ ವ್ಯಕ್ತಿತ್ವಕ್ಕೆ ಪಕ್ವತೆಯನ್ನೂ, ಯಶಸ್ಸು ಹಾಗೂ ಸೋಲನ್ನು ನೋಡುವ ವೇದಿಕೆಯನ್ನು ಒದಗಿಸಿ, ಅದರಿಂದ ಕಲಿಯುತ್ತ ಎರಡನ್ನೂ  ಜೀವನದ ಅಂಗವಾಗಿ ತೆಗೆದುಕೊಳ್ಳುವದನ್ನು ಕಲಿಸಿದೆ. ಯಶಸ್ಸನ್ನು ಹೇಗೆ ಸಾಧಿಸಬಹುದು ಎಂಬ ಪ್ರಶ್ನೆಯನ್ನು ನನಗೆ ಹಲವಾರು ಬಾರಿ ಕೇಳಲಾಗಿದೆಪ್ರಾಮಾಣಿಕವಾಗಿ ಹೇಳಬೇಕಾದರೆ ಯಶಸ್ಸನ್ನು ಸಾಧಿಸಲು ಲಕ್ಷಾಂತರ ದಾರಿಗಳಿವೆ ಹಾಗೂ ಯಾವುದು ಸರಿ ಎಂಬುದನ್ನು ಹೇಳಲು ನಾನ್ಯಾರು? ಇಲ್ಲಿರುವ ಪ್ರತಿಯೊಬ್ಬನೂ ತನ್ನದೇ ಆದ ದಾರಿಯನ್ನು ಕಂಡುಕೊಳ್ಳಬೇಕಾಗಿದೆ. ನಿಮ್ಮ ಮುಂದೆ ಮಾತನಾಡುವ ಅವಕಾಶ ಸಿಕ್ಕಿರುವ ಸಂದರ್ಭದಲ್ಲಿ ನನ್ನದೇ ಜೀವನ ಪಯಣದ ಕೆಲವೊಂದು ಕಥೆಗಳನ್ನು ಹೇಳುತ್ತಾ ಅದು ನಿಮ್ಮಲ್ಲಿ ಪ್ರತಿಧ್ವನಿಸಬಹುದು ಎಂಬ ಆಶಯ ನನ್ನದಾಗಿದೆ.

ಒಬ್ಬ ಸಾಧರಣ ಮಧ್ಯಮ ವರ್ಗದ ಹುಡುಗನೊಬ್ಬನನ್ನು ಕಲ್ಪಿಸಿಕೊಳ್ಳಿ. ಹುಡುಗ ನಾನಾಗಿದ್ದೆ. ಒಂದಷ್ಟು ಭಿನ್ನವಾದದ್ದೇನೆಂದರೆ ನನ್ನ ಮಾವ ಸಿ.ಕೆ. ನಾಯ್ಡು ಅವರೊಟ್ಟಿಗೆ ಕ್ರಿಕೆಟ್ ಆಡಿದವರು ಹಾಗೂ ನನ್ನ ತಂದೆ ತಮ್ಮ ವಿಶ್ವವಿದ್ಯಾಲಯ ತಂಡವನ್ನು ಪ್ರತಿನಿಧಿಸಿದ್ದರು . ಕ್ರಿಕೆಟ್ ಎಂಬುದು ಅವರ ಗೀಳಾಗಿತ್ತು. ಮನೆಯಲ್ಲಿ ರೇಡಿಯೋ ಕಾಮೆಂಟ್ರಿ ಸದಾ ಓಡುತ್ತಿತ್ತು ಹಾಗೂ ಅದು ಅಂತರರಾಷ್ಟ್ರೀಯವಾಗಿರಲಿ, ದೇಶಿಯ ಕ್ರಿಕೆಟ್ ಪಂದ್ಯವಾಗಿರಲಿ, ಪ್ರತಿಯೊಂದು ಕ್ರಿಕೆಟ್ ಪಂದ್ಯವನ್ನೂ ನನ್ನ ತಂದೆ ಆಸಕ್ತಿಯಿಂದ ಅನುಸರಿಸುತ್ತಿದ್ದರು, ಕೇಳುತ್ತಿದ್ದರುನನ್ನನ್ನು ಹಾಗೂ ನನ್ನ ತಮ್ಮನನ್ನು ಅವಕಾಶ ಸಿಕ್ಕಾಗಲೆಲ್ಲಾ ಕ್ರೀಡಾಂಗಣಕ್ಕೆ ಕರೆದು ಹೋಗುವುದನ್ನು ತಪ್ಪಿಸುತ್ತಿರಲಿಲ್ಲ.

ಅವರ ಪ್ರಕಾರ ಸಮಯವನ್ನು ಅದಕ್ಕಿಂತ ಉತ್ತಮವಾಗಿ ಬಳಸಲು ಸಾಧ್ಯವಿರಲಿಲ್ಲ. ಒಬ್ಬ ಬಾಲಕನಾಗಿ ನನ್ನ ತಂದೆ ನನಗೆ ಅರಾಧ್ಯ ದೈವವಾಗಿದ್ದರಿಂದ ಅವರು ಅಷ್ಟು ಮೆಚ್ಚುತ್ತಿದ್ದ ಕ್ರೀಡೆಯ ಬಗ್ಗೆ ಸಹಜವಾದ ಕುತೂಹಲ ಬೆಳೆಯುತ್ತಾ ಸಾಗಿತು. ಕ್ರಿಕೆಟನ್ನು ನೋಡುತ್ತಾ ಬೆಳೆಯುತ್ತ , ಮನೆಯ ಮುಂದೆ ಆಡುತ್ತಾ ಹೆಚ್ಚು ಸಮಯ ಕಳೆದಂತೆ ಕುತೂಹಲ ಆಸಕ್ತಿಯಾಗಿ ಬೆಳೆಯಲಾರಂಭಿಸಿತು. ಸ್ವಲ್ಪ ಸಮಯದಲ್ಲೇ ಆಸಕ್ತಿ ಅಮರಮಿತವಾದ ಪ್ರೀತಿಗೆ ತಿರುಗಿತು. ನನಗೆ ನೆನಪಿರುವಂತೆ ಒಂದು ಘಟ್ಟದಲ್ಲಿ ನಾನು ಏನಾಗಬೇಕೆಂಬ ಭಾವನೆ ನನ್ನ ಅಂತರಾಳದಲ್ಲಿ ರೂಪ ತಳೆಯಲು ಪ್ರಾರಂಭಿಸಿತು. ದ್ರಾವಿಡ್ ಕುಂಟುಂಬದಲ್ಲಿನ ನನ್ನ ಜನನ ಆಕಸ್ಮಿಕವಲ್ಲವೆಂಬ ಭಾವನೆ ಮೂಡಲಾರಂಭಿಸಿತು.ಕೆಲವೊಮ್ಮ ಸ್ಪೂರ್ತಿ ನಮ್ಮ ಮುಂದೆಯೇ ನಮ್ಮನ್ನು ದಿಟ್ಟಿಸಿ ನೋಡುತ್ತಿರುತ್ತದೆ.

ನನ್ನ ಶಾಲ ದಿನಗಳಲ್ಲಿ ನನ್ನದೇ ಆದ ಕ್ರಿಕೆಟ್ ಲೋಕದೊಳಗೆ ಹೆಚ್ಚು ಹೆಚ್ಚು ಹೋಗಲಾರಂಭಿಸಿದೆ. ಅಂತರ ಶಾಲಾ ಟೋರ್ನಿಗಳನ್ನು ಗೆಲ್ಲುವುದು ವಿಶ್ವ ಕಪ್ಪನ್ನೇ ಗೆದ್ದಂತ ಅನುಭವ ನೀಡುತ್ತಿತ್ತು. ಶಾಲೆ ಹಾಗೂ ರಾಜ್ಯ ತಂಡಗಳ ನಾಯಕತ್ವ ವಹಿಸುವುದೇ ದೊಡ್ಡ ಗುರಿಯಾಗಲಾರಂಭಿಸಿತು. ಅದರೂ, ಶಾಲ ದಿನದಲ್ಲಿನ ಅದೊಂದು ಆಸಕ್ತಿದಾಯಕ ಕಥೆಯೊಂದನ್ನು ನಿಮಗೆ ಹೇಳಲೇ ಬೇಕು. ನನ್ನ ಕ್ರಿಕೆಟ್ ಪ್ರೇಮದ ನಡುವೆಯೇ , ನನ್ನ ತಂದೆ ತಾಯಿಗೆ ಅಂದಿನ ಇತರ ಪೋಷಕರಂತೆಯೇ ಆತಂಕ, ಅನುಮಾನಗಳು ಶುರುವಾದವು. ಕೇವಲ ಕ್ರಿಕೆಟ್ಟನ್ನೇ ಯೋಚಿಸಿಕೊಂಡರೆ ಮುಂದೇ ಹೇಗೆ ಎಂಬ ಸಣ್ಣ ಭಯವದು.

ನಾನು 8ನೇ ತರಗತಿಯಲ್ಲಿದ್ದಾಗ, ನನ್ನ ಶಾಲೆಯ ಮುಖ್ಯೋಪಾಧ್ಯರಾದ ಫಾದರ್ ಕೊಹಿಲೋ ಬಳಿ ಬಂದು ತಮ್ಮ ಕಳವಳವನ್ನು ಹೇಳಿಕೊಂಡರು. ನಾನಾಗಲೇ 15 ವರ್ಷದೊಳಗಿನ ತಂಡಕ್ಕೆ  ಸತತ ಎರಡನೆಯ ಬಾರಿಗೆ ಆಯ್ಕೆಯಾಗಿದ್ದೂ, ಪಂದ್ಯಗಳು ಇತರ ರಾಜ್ಯಗಳಲ್ಲಿ ಹಾಗೂ ನಮ್ಮ ಶಾಲೆಯ ಪರೀಕ್ಷೆಗಳ ಸಮಯದಲ್ಲೇ ನಡೆಯುತ್ತಿದ್ದವು. ನನ್ನ ತಂದೆ ತಾಯಿಗಳು ನಮ್ಮ ಮುಖ್ಯೋಪಾಧ್ಯಾರ ಮುಂದೆ ವಿನಮ್ರವಾಗಿಯೇ ನನ್ನ ಕ್ರಿಕೆಟ್ ನನ್ನ ಶಿಕ್ಷಣದ ದಾರಿಗೆ ಹಾಗೂ ನನ್ನ ಶಾಲೆಯ ಹಾಜರಾತಿಗೆ ತೊಡಕಾಗಬಹುದೆಂಬ  ಶಂಕೆ ವ್ಯಕ್ತಪಡಿಸುತ್ತಾ, ಕ್ರಿಕೆಟ್ ಸರಣಿಗೆ  ಕಳುಹಿಸದೇ ಇರುವ ನಿರ್ಧಾರವನ್ನು ತಿಳಿಸಿದರು. ಅಂತೆಯೇ ಅವರ ಮುಂದಿನ ಸಲಹೆಯನ್ನೂ ಕೇಳಿದರು. ಎಲ್ಲವನ್ನೂ ಸಹನೆಯಿಂದ ಕೇಳಿಸಿಕೊಂಡ ಫಾದರ್ ಕೊಹಿಲೋ, “ನಿಮ್ಮ ಮಗನ ಶಿಕ್ಷಣದ ವಿಷಯ ನನಗೆ ಬಿಟ್ಟು ಅವನನ್ನು ಕ್ರಿಕೆಟ್ ಆಡಲು ಬಿಡಿ, ಒಂದು ದೊಡ್ಡ ಸಾಹಸಕ್ಕೆ ಅವನು ಮುಂದಾಗಿದ್ದಾನೆ, ನಾವು ಅವನನ್ನು ಬೆಂಬಲಿಸೋಣಎಂದರು. ನಾನಂದು ಕೋಣೆಯಲ್ಲಿ ಸಂತೋಷದಿಂದ ಜಿಗಿದೆ ಎಂಬ ನೆನಪು ಇದೆ. ಅಂದೇನಾದರೂ ನನ್ನ ಮುಖ್ಯೋಪಾಧ್ಯಾಯರು ನನ್ನ ಪೋಷಕರ ಮಾತಿಗೆ ಒಪ್ಪಿದ್ದರೆ, ನಾನು ವೃತ್ತಿ ಕ್ರಿಕೆಟ್ ಆಡುವುದನ್ನು ಬಿಟ್ಟು, ಒಳ್ಳೆಯ ಅಂಕಗಳೊಂದಿಗೆ ಇನ್ಯಾವುದೋ ಹೊಸ ಅಧ್ಯಾಯಕ್ಕೆ ತೆರೆದುಕೊಳ್ಳುತ್ತಿದ್ದೆ. ಒಮ್ಮೊಮ್ಮೆ ಬಯಸದ ಕಡೆಗಳಿಂದ ಬರುವ ಬೆಂಬಲವೇ ನಮಗೆ ದೊಡ್ಡ ತಿರುವಾಗುತ್ತದೆ ಎಂಬುದನ್ನು ನಾನು ಅಂದು ಅರಿತುಕೊಂಡೆ.

ಗೆಳೆಯರಿಂದ ನೋಟ್ಸ್ ಗಳನ್ನು ತೆಗೆದುಕೊಂಡು , ಕೊನೆಯ ಸಮಯದಲ್ಲಿ ಅವಸವಸರವಾಗಿ ಶಾಲಾ ಹಾಗೂ ಕಾಲೇಜು ಪರೀಕ್ಷೆಗಳಿಗೆ ಸಿದ್ಧಗೊಳ್ಳುತ್ತಾ, ಕ್ರಿಕೆಟ್ ಆಟಗಾರನಾಗಿ ಬೆಳೆಯುತ್ತಾ ಬಂದೆ. ಸಮಯದಲ್ಲಿ ಅನೇಕ ಲೀಗ್ ಹಾಗೂ ಕಿರಿಯ ಟೋರ್ನಿಗಳನ್ನು ಪುಟಿದೇಳುವ ಪಿಚ್ಚುಗಳ ಮೇಲೆ ಆಡುತ್ತಿದ್ದೆವು. ದೇಶದ ಉದ್ದಗಲ್ಲಕ್ಕೂ ರೈಲುಗಳಲ್ಲಿ ಪ್ರಯಾಣ ಮಾಡುತ್ತಾ, ಒಂದೇ ಕೋಣೆಯಲ್ಲಿ 5,6 ಜನ ಇರುತ್ತಿದ್ದೆವು. ಇಡೀ ದೇಶವನ್ನು ಹಾಗೂ ವೈವಿಧ್ಯಮಯ ಜನವನ್ನು ನೋಡುವ ಒಳ್ಳೆಯ ಅವಕಾಶ ನಮಗೆ ಸಿಕ್ಕಿತು. ಕಠಿಣ ಅಭ್ಯಾಸ ಹಾಗೂ ಕಿರಿಯರ ಸರಣಿಗಳಲ್ಲಿನ ನನ್ನ ಸಾಧನೆಯಿಂದಾಗಿ ರಾಜ್ಯಕ್ಕೆ ಆಡುವ ಅವಕಾಶವೂ ದೊರಕಿತು. ಅದು ನನಗೆ ಅರಿವಾಗುವ ಮೊದಲೇ ಕರ್ನಾಟಕ ರಾಜ್ಯಕ್ಕೆ ರಣಜಿ ಪಂದ್ಯಗಳನ್ನೂ ಸಹಾ ಆಡಲು ಪ್ರಾರಂಭಿಸಿದ್ದೆ. ನನಗೆ ಸಿಕ್ಕ ಅವಕಾಶಗಳನ್ನು ಉತ್ತಮವಾಗಿಯೇ ಬಳಸಿಕೊಂಡೆ ಮತ್ತು ಅತ್ತ್ಯುತ್ತಮ ಎನ್ನಬಹುದಾದ ಬೌಲರ್ ಹಾಗೂ ಎಸೆತಗಳನ್ನು ಎದುರಿಸುವ ಅವಕಾಶವೂ ರಾಷ್ಟ್ರೀಯ ಪಂದ್ಯಗಳಲ್ಲೇ ದೊರಕಿತು.

 ಅಂತರರಾಷ್ಟ್ರೀಯ ವೇಗದ ಬೌಲರಗಳನ್ನು ಎದುರಿಸುವ ಅವಕಾಶ ಅಷ್ಟಾಗಿ ಸಿಗದ ಕಾರಣ ನನ್ನದೇ ಆದ ಭಿನ್ನವಾದ ತಯಾರಿಗಳನ್ನು ಮಾಡುವ ನಿರ್ಧಾರ ಮಾಡಿದೆ. ನನ್ನ ಸಹಾ ಆಟಗಾರರಿಗೆ ೧೫ ಗಜಗಳಷ್ಟು ದೂರದಿಂದ ನೀರಲ್ಲಿ ನೆನಸಿದ ಟೆನಿಸ್ ಬಾಲನ್ನು ಎಸೆಯಲು ವಿನಂತಿಸುತ್ತಿದ್ದೆ. ಮೂಲಕ ಅತ್ತ್ಯುತ್ತಮ ವೇಗದ  ಬೌಲರ್ ಗಳನ್ನು ಎದುರಿಸುವ ಕೃತಕ ಸನ್ನಿವೇಶವನ್ನು ಸೃಷ್ಟಿಸಿಕೊಂಡು ಅದಕ್ಕೆ ತಯಾರಾದೆ. ನನ್ನ ತಯಾರಿಯನ್ನು ಅಚ್ಚರಿ ಹಾಗೂ ಗೊಂದಲಗೊಂಡ ಕಣ್ಣುಗಳು ಗಮನಿಸಿದವು ಮತ್ತು ಅನೇಕರಿಗೆ ಇದು ಸಮಯ ವ್ಯರ್ಥ ಕಸರತ್ತಾಗಿತ್ತು. ಆದರೆ ನನಗೆ ಮಾತ್ರ ಇದು ಅವಶ್ಯಕವಾದ ತಯಾರಿಯಾಗಿತ್ತು. ಅಷ್ಟರಲ್ಲಾಗಲೇ ರಾಷ್ಟ್ರೀಯ ತಂಡದಲ್ಲಿನ್ನ ಸಂಭವನೀಯರ ಪಟ್ಟಿಯಲ್ಲಿ ನನ್ನ ಹೆಸರು ಕೇಳಿ ಬರುತ್ತಿತ್ತು. ಭಾರತ ೧೯ ವರ್ಷದೊಳಗಿನವರ ತಂಡಕ್ಕೆ ನಾಯಕನೂ ಆಗಿದ್ದೆ. ಎಲ್ಲೇ ಹೋದರೂ, “ಭಾರತ ತಂಡದಲ್ಲಿ ಆಡುವುದು ಯಾವಾಗ”? ಎಂಬ ಪ್ರಶ್ನೆ ಎದುರಾಗುತ್ತಿತ್ತು. ಅದು ನನ್ನ  ನಿಯಂತ್ರಣದಲ್ಲಿ ಇರದ ಸಂಗತಿಯಾದರೂ ನನ್ನ ಜೀವನ ಹಾಗೂ ಆಟದ ಮೇಲೆ ಪ್ರಶ್ನೆ ಪ್ರಭಾವ ಬೀರಲಾರಂಭಿಸಿತು. ನಾನು ದೇಶಕ್ಕೆ ಆಡುವ ಮೊದಲು ಆಗಾಗಲೇ ಐದು ವರ್ಷಗಳ ಕಾಲ ದೇಶೀಯ ಕ್ರಿಕೆಟ್ ಪಂದ್ಯಗಳನ್ನು ಆಡಿದ್ದೆ. ಇದರಿಂದ  ನಿಧಾನವಾಗಿ ಹತಾಶೆಗೊಳಗಾದೆ. ನನಗಿನ್ನೂ ನೆನಪಿದೆ, ನನ್ನ ಕೈನಟಿಕ್ ಹೋಂಡ ಬೈಕಿನ ಮೇಲೊಂದು ಬರಹ ಅಂಟಿಸಿಕೊಂಡೆ. ದೇವರ ವಿಳಂಬಗಳು ದೇವರ ನಿರಾಕರಣೆಗಳಲ್ಲಎಂಬರ್ಥದ ಸ್ಟಿಕರ್ ಅದು. ಪ್ರತಿದಿನ ನನ್ನ ಕ್ರಿಕೆಟ್ ಕಿಟ್ ಅನ್ನು ಬೈಕಿನ ಮೇಲೆ ಇಟ್ಟು ಅದನ್ನು ಪ್ರಾರಂಭಿಸುವಾಗಲೆಲ್ಲಾ ನೆನಪಿಸುವಂತೆ ಹಾಗೂ ಭರವಸೆ, ವಿಶ್ವಾಸ  ಕಳೆದು ಕೊಳ್ಳದಂತೆ ನೆನಪಿಸಲು ಅದನ್ನು ಅಂಟಿಸಿಕೊಂಡಿದ್ದೆ.

ಈಗ ಹಿಂದಿರುಗಿ ನೋಡಿದಾಗದೇಶೀಯ ಕ್ರಿಕೆಟ್ ನನಗೆ ನೀಡಿದ ಕೊನೆಯ ಪಾಠಗಳು ಇಲ್ಲದಿದ್ದರೆ, ಅಂತರರಾಷ್ಟ್ರೀಯ ಕ್ರಿಕೆಟ್ ನಲ್ಲಿ ನನಗೆ ಲಭಿಸಿದ ಯಶಸ್ಸಿಗೆ ನಾನು ಸಿದ್ಧನಾಗಿರುತ್ತಿರಲಿಲ್ಲ ಎನಿಸುತ್ತದೆ. ಸ್ಪಿನ್, ವೇಗ, ಸುಲಭದ, ಕಷ್ಟದ ಯಾವುದೇ ಪರಿಸ್ಥಿತಿಗೂ ನಾನು ಸಿದ್ಧನಿದ್ದೆರಣಜಿಯಲ್ಲಿ ನನಗೆ ಅನುಭವಿ ಸ್ಪಿನ್ನರ್ ಗಳನ್ನು ಎದುರಿಸಲು ಸಿಕ್ಕ ಅವಕಾಶ ವಾರ್ನ್ , ಮುರಳೀಧರನ್ ರಂತವರನ್ನು ಆತ್ಮವಿಶ್ವಾಸದಿಂದ ಎದುರಿಸಲು ಸಹಾಯಕವಾಯಿತುಟಿನ್ನಿಸ್ ಬಾಲುಗಳಲ್ಲಿ ನಾನು ಮಾಡಿದ ಅಭ್ಯಾಸ ವ್ಯರ್ಥವಾಗದೆ, ಮ್ಯಾಕ್ ಗ್ರಾತ್, ಅಕ್ರಮ್ ಹಾಗೂ ಡೋನಲ್ಡ್ ರವರನ್ನು ಕಷ್ಟದ ಪಿಚ್ ಗಳಲ್ಲಿ ಎದುರಿಸಲು ಸಹಾಯಕ್ಕೆ ಬಂತು. ಯುವಕರನ್ನು ಮಾತನಾಡಿಸುವಾಗ, ನನ್ನ ಜೀವನದ ಹಂತವನ್ನು ಮೋಹಕವಾದ ಚೈನೀಸ್ ಬಿದಿರಿಗೆ ಹೋಲಿಸಲು ಇಷ್ಟ ಪಡುತ್ತೇನೆ.
(ಮುಂದುವರಿಯುತ್ತದೆ)