Tuesday, 18 November 2014

ದೇವರ ವಿಳಂಬಗಳು ದೇವರ ನಿರಾಕರಣೆಗಳಲ್ಲ - ಭಾಗ 2

ನೀವು ಚೈನಾ ಬಿದಿರಿನ ಬೀಜವೊಂದನ್ನು ಮಣ್ಣಿನಲ್ಲಿ ನೆಟ್ಟು, ನೀರುಣಿಸಿ, ಒಂದು ವರ್ಷದ ಕಾಲ ಅದನ್ನು ಪೋಷಿಸಿದರೂ ಒಂದು ಸಣ್ಣ ಚಿಗುರೂ ಮೊಳಕೆಯೊಡೆಯುವುದಿಲ್ಲ. ಒಂದು ವರ್ಷವೇಕೆ? ಭರ್ತಿ 5 ವರ್ಷಗಳ ಕಾಲ ಯಾವುದೇ ಚಿಗುರು ಕಾಣುವುದಿಲ್ಲ. ಆದರೆ ಹಠಾತ್ತಾಗಿ ಒಂದು ದಿನ ಒಂದು ಸಣ್ಣ ಕಡ್ಡಿ ಮಣ್ಣನ್ನು ಸೀಳಿಕೊಂಡು ಹೊರ ಬಂದಿರುತ್ತದೆ. ಮುಂದಿನ 6 ವಾರಗಳಲ್ಲಿ ಅದೇ ಬಿದಿರು ಗಿಡ 90 ಅಡಿಗಳಷ್ಟು ಉದ್ದಕ್ಕೆ ಬೆಳೆಯಬಲ್ಲದು. 24 ಗಂಟೆಗಳಲ್ಲಿ  39 ಇಂಚುಗಳಷ್ಟು ಉದ್ದ ಬೆಳೆಯುಲು ಅದಕ್ಕೆ ಸಾಧ್ಯವಾಗುತ್ತದೆ. ಅಕ್ಷರಶ ನೀವು ಗಿಡ ಬೆಳಯುವುದನ್ನು ಕಣ್ಣಾರೆ ಕಾಣಬಹುದು. ಐದು ವರ್ಷಗಳಲ್ಲಿ ಬಚ್ಚಿಟ್ಟುಕೊಂಡತ್ತಿದ್ದ ಸಸಿ ಏನು ಮಾಡುತ್ತಿತ್ತು? ಅದು ತನ್ನ ಬೇರುಗಳನ್ನು ಬೆಳೆಸಿಕೊಳ್ಳುತಿತ್ತು. ಪೂರ್ತಿ 5 ವರ್ಷಗಳ ಕಾಲ ಅದು ತನ್ನ ವೇಗದ ಬೃಹತ್ ಬೆಳವಣಿಗೆಗೆ ತನ್ನನ್ನೇ ಸಿದ್ಧಗೊಳಿಸಿಕೊಳ್ಳುತಿತ್ತು. ಒಂದು ಬೇರಿನ ವ್ಯವಸ್ಥೆ ಇಲ್ಲದೆ ಗಿಡ ತನ್ನ ಮುಂದಿನ ಬೆಳವಣಿಗೆಯನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ . ಕೆಲವರು ಗಿಡ 6 ವಾರದಲ್ಲಿ 90 ಅಡಿ ಬೆಳೆಯಿತು ಎನ್ನಬಹುದು, ಆದರೆ ನಾನು ಅದು 5 ವರ್ಷ 6 ವಾರಗಳಲ್ಲಿ ಅಷ್ಟು ಎತ್ತರವಾಗಿ ಬೆಳೆಯಿತು ಎಂದು ಹೇಳುತ್ತೇನೆ. ಹಾಗೆಯೇ, ಹಂತವು ನನ್ನ ಆರಂಭಿಕ ಪಯಣದಲ್ಲಿ ನನ್ನ ಪ್ರತಿಭೆಯ ಕಡೆಗಿನ  ನನ್ನ ವಿಶ್ವಾಸವನ್ನು ನನ್ನ ಸಿದ್ಧತೆಯನ್ನು ಪರೀಕ್ಷಿಸಿತು.
  
ಒಟ್ಟಾರೆಯಾಗಿನನ್ನದು ಅತ್ಯಂತ ತೃಪ್ತಿಕರವಾದ ಕೀಡಾ ಜೀವನ. ಅನೇಕ ಏಳುಗಳ ಜೊತೆ ಹಲವಾರು ನಿರಾಸೆಗಳೂ ಇದ್ದವು. ಆಸ್ಟೇಲಿಯಾ ಪ್ರವಾಸದ ಬಳಿಕ ನನ್ನ ಆಟದ ಸಮಯ ಮುಗಿದಿದೆ ಹಾಗೂ ನಾನು 16 ವರ್ಷದ ಹಿಂದೆ ಬಂದಂತೆ, ಮುಂದಿನ ತಲೆಮಾರಿನ ಪ್ರತಿಭಾವಂತ ಯುವ ಬ್ಯಾಟ್ಸ್ ಮೆನ್ ಗಳಿಗೆ ಅವರ ಪಯಣವನ್ನು ಪ್ರಾರಂಭಿಸಲು ದಾರಿ ಮಾಡಿಕೊಡಬೇಕು ಎಂದು ಅತ್ಯಂತ ಸ್ಪಷ್ಟವಾಗಿ ಅನಿಸಲು ಪ್ರಾರಂಭಿಸಿತು. ನನ್ನ ಕುಟುಂಬ, ಸಹ ಆಟಗಾರರು ಹಾಗೂ ಗೆಳೆಯರ ನಡುವೆ ನನ್ನ ಕ್ರೀಡಾ ಜೀವನಕ್ಕೆ ತೆರೆ ಎಳೆಯಲು ಇದೇ ತಕ್ಕ ಸಮಯವೆನಿಸಿ ಸಂತೋಷದಿಂದ ನಿರ್ಧಾರ ತೆಗೆದುಕೊಂಡೆ. ನನಗೆ ಸಿಕ್ಕ ಪ್ರೀತಿ ನನ್ನ ಹೃದಯವನ್ನು  ತಟ್ಟಿದೆ. ನನಗೆ ಯಾವುದೇ ಪಶ್ಚಾತ್ತಾಪವಿಲ್ಲ, ಯಾವುದೇ ಪೂರೈಸದ ವೃತ್ತಿ ಗುರಿಗಳಿಲ್ಲ, ನನಗೆ ನಾನೇ ಸಾಬೀತು ಪಡಿಸಲು ಇನ್ನು  ಏನೂ ಉಳಿದಿಲ್ಲ. ನಾನು ಬಾಲಕನಾಗಿ ಏರಬೇಕೆಂದು ಅಂದುಕೊಂಡಿದ್ದ  ನನ್ನ ಪರ್ವತವನ್ನು ಏರಿದ್ದೇನೆ. ಏರಬೇಕೆಂದು ಕಣ್ಣಿಟ್ಟದ ಪರ್ವತವನ್ನು ಹತ್ತುವ ಪಯಣದಲ್ಲಿ ನನ್ನ ಶಾಲೆಯ ಮುಖ್ಯೋಪಾಧ್ಯಾರೂ ಸೇರಿದಂತೆ ಅನೇಕರ ಸಹಾಯ ಪಡೆದುಕೊಂಡಿದ್ದೇನೆ. ಒಬ್ಬನೇ ಕುಳಿತು ನನ್ನ ಸೋಲು ಗೆಲವುಗಳನ್ನು  ಮೆಲುಕು ಹಾಕುವಾಗ ನನ್ನ ಬಗ್ಗೆ ನಾನು ಹೆಚ್ಚು ಅರ್ಥ ಮಾಡಿಕೊಂಡಿದ್ದೇನೆ. ಹಾಗೇ ಏರುವುದೇ ನನಗೆಲ್ಲಾವೂ ಆಗಿ ನಾನು ಅದರಲ್ಲೇ ಮುಳುಗಿಹೋದೆ. ನನ್ನ ಗುರಿಗೆ ಹತ್ತಿರವಾಗುತ್ತಿದ್ದಂತೆ ಅದರಲ್ಲೇ ನನ್ನ ಗಮನವನ್ನು ಕೇಂದ್ರೀಕರಿಸಿ, ಗುರಿಯತ್ತ ನನ್ನ ದೃಷ್ಟಿಯಿರಿಸಿದೆ. ಕೊನೆಗೆ ನನ್ನ ಗುರಿ ತಲುಪಿ, ನಾನು ನಿಂತ ಸ್ಥಾನದಲ್ಲಿ ಅಪಾರವಾದ ಆನಂದ ಪಡೆದೆ. ಒಂದು ರೀತಿಯ ಶಾಂತಿ ಹಾಗೂ ಸಮಾನತೆ ಭಾವ ನನ್ನದಾಯಿತು. ಆಗ ನನಗೆ ಅರಿವಾದುದು ಏನೆಂದರೆ, ನೀವು ಜಗತ್ತಿನಲ್ಲಿ ಮೊದಲಿಗರೇ ಅಗಬೇಕಾಗಿಲ್ಲ, ನಿಮಗೆ ನೀವು ಮೊದಲಿಗರಾದರೆ ಸಾಕು. ನಿಮಗೆ ನೀವೆ ಮೊದಲಿಗರಾಗಬೇಕೆನ್ನುವ ಶಿಖರವೇ ಅತ್ಯಂತ ಎತ್ತರದ ಶಿಖರ.

ಒಬ್ಬ ಉತ್ತಮ ಪರ್ವತರೋಹಿಯ ಹಾಗೇ ನಾನು ಈಗ ಮತ್ತೊಂದು ಪರ್ವತದ ಹುಡುಕಾಟದಲ್ಲಿದ್ದೇನೆ. ಅದರ ಅನಿಶ್ವಿತತೆ ನನ್ನನ್ನು ಆತಂಕಕ್ಕೆ ತಳ್ಳುತ್ತದೆ, ಅದರೆ ಅದೇ ನನ್ನನು ಉತ್ತೇಜಿಸುತ್ತದೆ ಕೂಡ. ನಾನೀಗ ಮತ್ತೆ ನನ್ನ ತಂದೆಯ ಕೊಠಡಿಯ ಟ್ರಾನ್ಸಿಸ್ಟರ್ ನಿಂದ ಕ್ರಿಕೆಟ್ ವೀಕ್ಷಕ ವಿವರಣೆ ಕೇಳುತ್ತಿದ್ದ ಬಾಲಕನಂತಾಗಿದ್ದೇನೆ. ಇಂದಿಲ್ಲಿ ಪದವಿ ಪಡೆಯುತ್ತಿರುವ ದೇಶದ ಅತ್ಯಂತ ಚುರುಕು ಬುದ್ಧಿಯವರಲ್ಲಿ ಒಬ್ಬರಾದ ೨೦೧೩ ಬ್ಯಾಚಿನ ನಿಮಗೆ ನಿಮ್ಮ ಮುಂದಿನ ರೋಮಾಂಚಕ ಪಯಣಕ್ಕೆ ಶುಭವನ್ನು ಹಾರೈಸುತ್ತೇನೆ.

  ನಿಮಗೆ ತಕ್ಕದಾದ ಪರ್ವತ ನಿಮಗೆ ಸಿಗಲಿ. ಪಯಣದಲ್ಲಿ ನಿಮಗೆ ಬೆಂಬಲ ಸಿಗಲಿ ಮತ್ತು ನೀವು ಅದನ್ನು ಮತ್ತೊಬ್ಬರಿಗೆ ಕೊಡುವಂತಾಗಲಿ. ಸಹನೆಯಿಂದಿರಿ ಮತ್ತು ಪಯಣದಲ್ಲಿ ಬರಬಹುದಾದ ಏಳು ಬೀಳುಗಳ ಸಮಯದಲ್ಲಿ ನಿಮ್ಮ ಪ್ರಯತ್ನ ಮುಂದುವರಿಯಲಿ. ಅದಕ್ಕಿಂತ ಮುಖ್ಯವಾಗಿ ನೀವು ಪ್ರಾರಂಭಿಸಲಿರುವ ಪಯಣವನ್ನು ಮನಪೂರ್ವಕವಾಗಿ ಅನಂದಿಸಿ. ವಂದನೆಗಳು

Tuesday, 21 October 2014

ಸಿಡಿಲ ಮರಿ

ನನ್ನ ಮೆಚ್ಚಿನ ಆಟಗಾರರಲ್ಲಿ ಒಬ್ಬರಾದ ಸೆಹ್ವಾಗ್ ಹುಟ್ಟುಹಬ್ಬದ ಸವಿ ನೆನಪಿನಲ್ಲಿ, ಅವರ ಬೆಗೆಗಿನ ನನ್ನ ಹಳೆಯದೊಂದು ಲೇಖನ ಮರು ಓದಿಗಾಗಿ......

--------------------------------------
ತನ್ನ ಕಾಲದಲ್ಲಿ ಬೌಲರ್ ಗಳಿಗೆ ಸಿ೦ಹಸ್ವಪ್ನವಾಗಿದ್ದ ವಿವಿಯನ್ ರಿಚರ್ಡ್ಸ್ ಬಗ್ಗೆ ಒ೦ದು ಒಳ್ಳೆಯ ಕಥೆ ಇದೆ. ಇ೦ಗ್ಲೆ೦ಡಿನ ಕೌ೦ಟಿ ಮ್ಯಾಚ್ ಒ೦ದು ನಡೆಯುತ್ತಿದೆ, ರಿಚರ್ಡ್ಸ್ ಬ್ಯಾಟಿ೦ಗ್. ಗ್ರೆಗ್ ಥಾಮಸ್ ಎ೦ಬ ಬೌಲರ್ ಓಡಿ ಬ೦ದು ಎಸೆದ ಅತ್ತ್ಯುಮವಾದ outswinger, ರಿಚರ್ಡ್ಸ್ ಬ್ಯಾಟ್ ದಾಟಿ ಕೀಪರ್ ಕೈ ಸೇರಿತು. ಸುಮ್ಮನಿದ್ದಿದ್ದರೆ ಚೆನ್ನಾಗಿತ್ತೇನೋ, ಆದರೆ ಗ್ರೆಗ್ ರಿಚರ್ಡ್ಸ್ ಬಳಿ ಬ೦ದು, "its red, round and 5 1/2 ounces" ಎ೦ದು ಚೆ೦ಡಿನ ಬಣ್ಣ, ಅಳತೆ ಹಾಗೂ ತೂಕದ ವಿವರ ಕೊಟ್ಟನ೦ತೆ. ಮು೦ದಿನ ಬಾಲ್ ಅನ್ನು Stadium ಹೊರಗೆ ಅಟ್ಟಿದ ರಿಚರ್ಡ್ಸ್, ಬೌಲರ್ ಬಳಿ ಬ೦ದು, "ಚೆ೦ಡು ಹೇಗಿದೆ ಅ೦ತ ಗೊತ್ತಲ್ಲಾ ಗ್ರೆಗ್? ಹೋಗಿ ಹುಡುಕಿ ತ೦ದು ಬಿಡು" ಅ೦ದನ೦ತೆ.

ಮೊನ್ನೆ ಅ೦ತದ್ದೇ ಒ೦ದು ಕಥೆಯನ್ನು ಶೇನ್ ವಾರ್ನ್ ನಮ್ಮ ಸೆಹ್ವಾಗ್ ಬಗ್ಗೆ ಹೇಳಿದ್ದಾನೆ. ಅದೇ ಒ೦ದು ಕೌ೦ಟಿ ಮ್ಯಾಚಿನಲ್ಲಿ ಪಾಕಿಸ್ತಾನದ ಅಬ್ದುಲ್ ರಜಾಕ್ ಬೌಲಿ೦ಗ್ ಮಾಡುತ್ತಿದ್ದನ೦ತೆ, ಇತ್ತ ಕಡೆ ಸೆಹ್ವಾಗ್ ಹಾಗೂ ಮತ್ತೋಬ್ಬ ಕೌ೦ಟಿ ಆಟಗಾರ. ಮೊದಲೇ ಪಾಕಿಸ್ತಾನದ ಬೌಲರ್ ಗಳು ಈ reverse swingಗೆ ಪ್ರಸಿದ್ಢಿ. ಸರಳವಾಗಿ ಹೇಳುವುದಾದರೆ, ಚೆ೦ಡು ಹಳೆಯದ್ದಾದ೦ತೆ shine ನಿನ ವಿರುದ್ಧದ ದಿಕ್ಕಿನಲ್ಲಿ ಚೆ೦ಡು swing ಅಗುವುದನ್ನು reverse swing ಎನ್ನುತ್ತಾರೆ. ಆ ಸಮಯದಲ್ಲಿನ ಚೆ೦ಡಿನ ಗತಿಯನ್ನು ಸುಲಭವಾಗಿ ಗುರುತಿಸಲಾಗದ್ದರಿ೦ದ, ಅದು ಬ್ಯಾಟ್ಸ್ ಮೆನ್ ಗಳಿಗೆ ದೊಡ್ಡ ತಲೆನೋವಿನ ಹ೦ತ. ಇನ್ನಾವುದೇ ಆಟಗಾರನಾಗಿದ್ದ್ರರೂ ಅ ಸಮಯದಲ್ಲಿ ಎಚ್ಚರಿಕೆಯಿ೦ದ,ರಕ್ಷಣಾತ್ಮಕವಾಗಿ ಅಡಿ ಆ ಹ೦ತವನ್ನು ದಾಟುವ ತ೦ತ್ರ ಬಳಸುತ್ತಿದ್ದ. ಆದರೆ ಆ ಚೆ೦ಡಿಗೆ, ತ೦ತ್ರಕ್ಕೆ ಸೆಹ್ವಾಗ್ ಬಳಿ ಬೇರೆಯದೇ ಪ್ರತಿತ೦ತ್ರವಿತ್ತು. ಮು೦ದಿನ ಬಾಲ್ ನಲ್ಲಿ sixer ಬಾರಿಸಿಯೇ ಬಿಟ್ಟ ಸೆಹ್ವಾಗ್, ಅದೂ ಎ೦ಥ sixer ಅ೦ದರೆ ಮೈದಾನದಿ೦ದ ಆಚೆ ಬಿದ್ದ ಚೆ೦ಡು ಮತ್ತೆ ಸಿಗಲೇ ಇಲ್ಲ. ಬದಲಾಯಿಸಿದ ಬಾಲ್ ಮತ್ತೆ reverse swing ಆಗಲು ಕನಿಷ್ಠ ಒ೦ದು ಗ೦ಟೆಯಾದರೂ ಬೇಕಾಗಿತ್ತು! Non striker ನ ಬಳಿ ಬ೦ದು " Not to worry for another hour" ಅ೦ದನ೦ತೆ.

ಸೆಹ್ವಾಗ್ ಬ್ಯಾಟ್ ಮಾಡುವುದೇ ಹಾಗೆ, ಮೊದಲ ಟೆಸ್ಟಿನಲ್ಲೇ ಬಾರಿಸಿದ ಶತಕ, ಪಾಕಿಸ್ತಾನದ ಮುಲ್ತಾನ್ನ್ ನಲ್ಲಿ 296 ರನ್ನು ಆಡುತ್ತಿರುವಾಗ ಧತ್ತನೆ ಮುನ್ನುಗ್ಗಿ ಬ೦ದು ಹೊಡೆದ ಸಿಕ್ಸರ್, ಮೆಲ್ಬರ್ನ್ ಟೆಸ್ಟಿನಲ್ಲಿ 195 ರನ್ನಿನಲ್ಲಿ ಮತ್ತೆ ಸಿಕ್ಸರ್ ಹೊಡೆಯಲು ಹೋಗಿ ಔಟಾದ ರೀತಿ, ವೆಸ್ಟ್ ಇ೦ಡೀಸಿನಲ್ಲಿ ಲ೦ಚ್ ವಿರಾಮದ ಮುನ್ನವೇ ಗಳಿಸಿದ ಸಿಡಿಲಬ್ಬರದ ಓಟಾಗದ 99, ಶ್ರೀಲ೦ಕಾದಲ್ಲಿ ಕೊನೆಯ ವಿಕೆಟ್ ಸ೦ರಕ್ಷಿಸಲು ತಾನು 199 ರನ್ನಿದ್ದರೂ ರನ್ನು ಓಡದೆ ನಿಸ್ವಾರ್ಥ ಮೆರೆದ ರೀತಿ,69 ಬಾಲಿನಲ್ಲಿ ಹೊಡೆದ ಮೊದಲ ಒ೦ದು ದಿನದ ಶತಕ, ಇವೆಲ್ಲಾ ಸುಲಭದಲ್ಲಿ ಮರೆಯುವತ್ತ೦ಥದಲ್ಲ. ಭಾರತದ Faboulous Four(ಸಚಿನ್,ಸೌರವ್,ಡ್ರಾವಿಡ್ ಹಾಗೂ ಲಕ್ಷ್ಮಣ್) ನ ನೆರಳಲ್ಲೇ ಸ್ವೆಹ್ವಾಗ್ ಮಾಡಿರುವ ಸಾಧನೆ ಕಡಿಮೆಯೇನಲ್ಲ. ತ್ರಿಶತಕ ಬಾರಿಸಿದ ಮೊದಲ ಭಾರತೀಯ, 2 ತ್ರಿಶತಕ ಬಾರಿಸಿದ ಮೂರೇ ಮೂರು ಆಟಗಾರರಲ್ಲಿ ಒಬ್ಬ( ಬ್ರಾಡ್ಮೆನ್ ಹಾಗೂ ಲಾರಾ, ಇನ್ನಿಬ್ಬರು), ತ್ರಿಶತಕ ಹಾಗೂ 5 ವಿಕೆಟ್ ಪಡೆದ ಮೊದಲಿಗ, ಬ್ರಾಡ್ಮೆನ್ ನ೦ತರ ಮೊದಲ ಇನ್ನಿ೦ಗ್ಸ್ ಸಿನಲ್ಲಿ ಅತಿ ಹೆಚ್ಚು ಸರಾಸರಿ ಹೊ೦ದಿರುವ ಆಟಗಾರ,ಅತ್ಯ೦ತ ವೇಗದ ತ್ರಿಶತಕ ...ಹೀಗೆ ಸಾಗುತ್ತದೆ ಸೆಹ್ವಾಗ್ ನ ಸಾಹಸಗಾಥೆ.

ಸಚಿನ್ ತೆ೦ಡೂಲ್ಕರ್ ನಿ೦ದ ಸ್ಪೂರ್ತಿ ಪಡೆದು ಆರ೦ಭದ ದಿನಗಳಲ್ಲಿ ಅದೇ ರೀತಿಯ ಆಟವಾಡುತ್ತಿದ್ದರೂ ನಂತರದ ವರ್ಷಗಳಲ್ಲಿ ತನ್ನದೇ ಆದ ಶೈಲಿಯಿ೦ದ ಎಲ್ಲರ ಮನ ಗೆದ್ದಿರುವುದು ನಿಜ. ಉತ್ತಮ ಟೆಕ್ನಿಕ್ ಹಾಗೂ footwork ಇಲ್ಲದ ಆಟಗಾರನೆ೦ದು ಹಿರಿಯ ಕ್ರಿಕೆಟ್ ಪ೦ಡಿತರಿ೦ದ ಹೇಳಿಸಿಕೊ೦ಡು ಬ೦ದ ಸೆಹ್ವಾಗ್, ಈಗ 7 ವರ್ಷದ ಕ್ರಿಕೆಟ್ ನ ನ೦ತರ ಆಸ್ಟೇಲಿಯಾ, ಇಗ್ಲೆ೦ಡ್,ವೆಸ್ಟ್ ಇ೦ಡೀಸ್,ಸೌತ್ ಆಫ್ರಿಕಾ ,ಪಾಕಿಸ್ತಾನ,ಶ್ರೀಲ೦ಕಾ, ಕೊನೆಗೆ ಭಾರತದ ಆಟಗಾರರು ಪರದಾಡುವ ನ್ಯೂಜೀಲ್ಯಾ೦ಡ್ ನಲ್ಲೂ ಶತಕಗಳನ್ನು ಹೊಡೆದಿದ್ದಾರೆ. ಅದೂ ಎ೦ತಹ ಶತಕಗಳು? ಟೆಸ್ಟಿನ 15 ಶತಕಗಳಲ್ಲಿ ಕೊನೆಯ 13 ಶತಕಗಳು 150ರ ಗಡಿ ದಾಟಿರುವ೦ತದ್ದು.ಅದರಲ್ಲಿ ಎರಡು ತ್ರಿಶತಕ ಹಾಗೂ 5 ದ್ವಿಶತಕ ಗಳಿವೆ ಎ೦ದರೆ ಆಶ್ಚರ್ಯವಾಗಬಹುದಲ್ಲವೇ.ಅದರಲ್ಲೂ ಅತ್ಯ೦ತ ವೇಗವಾಗಿ ಸ್ಕೋರ್ ಮಾಡುವ ರೀತಿಯಿ೦ದಾಗಿ ತ೦ಡಕ್ಕೆ ಗೆಲ್ಲುವ ಅವಕಾಶಗಳೂ ಬಹಳ ಅ೦ತೆಯೇ ಟೆಸ್ಟ್ ನಲ್ಲಿ 5೦ರ ಹತ್ತಿರದ ಸರಾಸರಿ ಹೊ೦ದಿದ್ದಾರೆ. ನೆನಪಿರಲಿ ತಾ೦ತ್ರಿಕವಾಗಿ ಪರಿಪೂರ್ಣರೆನಿಸಿಕೊ೦ಡಿರುವ ಗವಾಸ್ಕರ್, ಸಚಿನ್ ಹಾಗೂ ಡ್ರಾವಿಡ್ ರ ಸರಾಸರಿ ಅದೇ ಆಸುಪಾಸಿನಲ್ಲಿದೆ. ಬೌಲಿ೦ಗ್ ನಲ್ಲೂ ಉತ್ತಮ off spinner ಆಗಿರುವ ಸೆಹ್ವಾಗ್, ಮೈದಾನದ ಯಾವುದೇ ಭಾಗದಲ್ಲಾದರೂ feilding ಮಾಡಬಹುದಾದ utility cricketer. Street smartness ನಿ೦ದಾಗಿ ಯಾವುದೇ ಒಬ್ಬ ನಾಯಕನು ತನ್ನ ತ೦ಡದಲ್ಲಿ ಬೇಕೆ೦ದು ಬಯಸುವ ಆಟಗಾರ ಈ "ವೀರು".


ಆದರೆ ಅದೇಕೋ ತನ್ನ ಬ್ಯಾಟಿ೦ಗ್ ಶೈಲಿಗೆ ಹೊ೦ದಿಕೊಳ್ಳುವ ಒ೦ದು ದಿನದ ಅ೦ತರಾಷ್ಟ್ರೀಯ ಪ೦ದ್ಯಗಳಲ್ಲಿ ಸೆಹ್ವಾಗ್ ಅದೇ ಮಟ್ಟವನ್ನು ಊಳಿಸಿಕೊಳ್ಳಲು ವಿಫಲರಾಗಿದ್ದಾರೆ ಎ೦ದೇ ಹೇಳಬಹುದು. ಭರ್ಜರಿಯಾಗೇ ಒ೦ದು ದಿನದ ಲೋಕಕ್ಕೆ ಬ೦ದು ಆ ಕಾಲದಲ್ಲಿ ರಾಜರ೦ತೆ ಆಡುತ್ತಿದ್ದ ಸಚಿನ್,ಸೌರವ್ ಜೋಡಿಗೇ ಕೋಕ್ ನೀಡಿದ ಸೆಹ್ವಾಗ್ ಮು೦ದಿನ ದಿನಗಳಲ್ಲಿ ಸ್ವಲ್ಪ ಮ೦ಕಾಗಿದ್ದಾರೆ. ಮಧ್ಯೆ ಫಾರ್ಮ್ ಕಳೆದುಕೊ೦ಡ ಸೆಹ್ವಾಗ್ ಟೆಸ್ಟ್ ಹಾಗೂ ಒ೦ದು ದಿನ ಎರಡರಲ್ಲೂ ತಮ್ಮ ಸ್ಥಾನವನ್ನು ಕಳೆದುಕೊ೦ದಿದ್ದು ಕ್ರಿಕೆಟ್ ಜಗತ್ತಿಗಾದ ಬಹು ದೊಡ್ಡ ನಷ್ಟ. ಲಾರ,ಸಚಿನ್,ಸೆಹ್ವಾಗ್ , ವಾರ್ನ್ ನ೦ತಹ ಆಟಗಾರರು ದೇಶದ ಗಡಿ ಮೀರಿ ಕ್ರಿಕೆಟ್ ಜಗತ್ತಿಗೆ ಸೇರಿದವರಾಗುತ್ತಾರೆ.ಎಲ್ಲಾ ತಾ೦ತ್ರಿಕತೆ,ಸ್ವಾರ್ಥ,ನೀತಿ, ನಿಯಮಗಳ ಮಧ್ಯೆಯೂ ಕ್ರಿಕೆಟ್ ಇನ್ನೂ ಮನರ೦ಜನೆಯ ಆಟವಾಗೇ ಉಳಿದಿದೆ ಎ೦ದರೆ ಅದಕ್ಕೆ ಸೆಹ್ವಾಗ್ ಅ೦ಥವರ ಶೈಲಿಯೇ ಬಹು ಮುಖ್ಯ ಕಾರಣ. ಮುಖ ಸಿ೦ಡರಿಸಿ ಕೊ೦ಡು, ಆಟವನ್ನು ಒ೦ದು ನೋವಿನ ಕೆಲಸವೆ೦ಬ೦ತೆ ಬಿ೦ಬಿಸಿ, ಆಡಿ ತಮ್ಮ ತಮ್ಮ ಸರಾಸರಿಗಳನ್ನು ಬೆಳೆಸಿಕೊ೦ಡು ಬೀಗುವ ಆಟಗಾರರಿಗೆ ಕೊರತೆಯಿಲ್ಲ. ಆಟವನ್ನು ತಾವೂ ಅನ೦ದಿಸಿ ನೋಡುವ ಕೋಟ್ಯಾ೦ತರ ವೀಕ್ಷಕರಿಗೂ ಅದೇ ಅನ೦ದವನ್ನು ತಲುಪಿಸುವ ಸೆಹ್ವಾಗ್ ನ೦ಥಾ ಆಟಗಾರರ ಸ೦ತತಿ ಹೆಚ್ಚಲಿ.

-ಪ್ರಶಾಂತ್ ಇಗ್ನೇಶಿಯಸ್

Thursday, 18 September 2014

ವಿಷ್ಣು

ವಿಷ್ಣುರವರ ಹುಟ್ಟು ಹಬ್ಬದ ಸವಿನೆನಪಿನಲ್ಲಿ ......

ಹೊನಲು.net ಬಳಗದ ಗೆಳೆಯರು ಕನ್ನಡದ ಬರಹಗಳನ್ನು ಆದಷ್ಟು ನುಡಿ ಮಾತಿಗೆ ಹತ್ತಿರವೆನ್ನುವಂತೆ ಹೊರತರಬೇಕೆನ್ನುವ ಪ್ರಯತ್ನದಲ್ಲಿ ಆದಷ್ಟು ಕನ್ನಡದ ಪದಗಳನ್ನೇ ಹಾಗೂ ಅಲ್ಪ, ಮಹಾ ಪ್ರಾಣದ ತೊಡಕನ್ನು ನಿವಾರಿಸುವ ಪ್ರಯತ್ನದಲ್ಲಿ ತೊಡಗಿಕೊಂಡಿದ್ದಾರೆ. ಅಲ್ಲಿ ಪ್ರಕಟವಾದ ಲೇಖನವಾದ್ದರಿಂದ ಓದುವಾಗ ಒಂದಷ್ಟು ಬದಲಾವಣೆಯನ್ನು ಇಲ್ಲಿ ಕಾಣಬಹುದಾಗಿದೆ


ಕಲಾವಿದರಿಗೆ ಸಾವಿಲ್ಲ. ಅವರ ಸಾದನೆ, ಕಲಾಕ್ರುತಿಗಳು ಅವರನ್ನು ಸದಾ ಜೀವಂತವಾಗಿಡುತ್ತದೆ ಎಂಬುದು ಸಾಮಾನ್ಯ ಮಾತು. ಅದು ನಿಜವೂ ಕೂಡ. ಆದರೆ ಕೆಲವು ಕಲಾವಿದರು ತಮ್ಮ ಸಾದನೆ, ಸೋಲು, ಗೆಲುವು, ಪ್ರಸಿದ್ದಿ ಎಲ್ಲವನ್ನೂ ಮೀರಿ ಜನಮನದಲ್ಲಿ ನಿಂತಿರುತ್ತಾರೆ. ಅಂತವರ ಸಾವು, ಇಲ್ಲದಿರಿವಿಕೆಯನ್ನು ಅರಗಿಸಿಕೊಳ್ಳುವುದು ಕಶ್ಟ. ಸಾಮಾನ್ಯ ಜನರ ಮನಸ್ಸುಗಳನ್ನು ತಟ್ಟುವ ಅಂತವರ ಅಗಲಿಕೆ ಎಂದಿಗೂ ನೋವಿನ ಸಂಗತಿಯೇ. ಇನ್ನಶ್ಟು ದಿನ ಇರಬೇಕಾಗಿತ್ತು ಎಂಬ ಬಾವ ಮನಸ್ಸಿನ ಬಾಗಿಲಲ್ಲಿ ಉಳಿದು, ಅವರ ಮೆಲಕು ಹಾಕುತ್ತಿರುತ್ತದೆ.

ಕನ್ನಡ ಮನಸ್ಸುಗಳಲ್ಲಿ ಅಂತಹ ಬಾವ ಉಳಿಸಿ ಹೋದವರು ವಿಶ್ಣುವರ‍್ದನ್. ಇಂದು (ಸೆಪ್ಟಂಬರ್ 18) ಅವರ ಹುಟ್ಟು ಹಬ್ಬ. ಅವರು ಹೋಗಿ ವರ‍್ಶಗಳೇ ಕಳೆದರೂ, ಆ ಬಾವ ಇನ್ನೂ ಇರುವುದೇ ಅವರ ದೊಡ್ಡಸ್ತಿಕೆ. ಏಕೆಂದರೆ ವಿಶ್ಣು ತಮ್ಮೆಲ್ಲಾ ಸಾದನೆಯ ನಡುವೆಯೂ ಆಪ್ತವಾಗಿರುವುದನ್ನು ಉಳಿಸಿಕೊಂಡವರು. ವಿಶ್ಣು ಅವರ ಆ ಮುದ್ದು ಮುಕ ವಯಸ್ಸಾದಂತೆ ಪಡೆದುಕೊಂಡ ಸಂತ ಕಳೆ, ಅವರ ಆಕರ‍್ಶಕ ನಗು ಪಡೆದುಕೊಂಡ ಮಗುವಿನ ಮುಗ್ದತೆ, ವ್ಯಕ್ತಿತ್ವ ಕಂಡುಕೊಂಡ ಗನತೆ ಎಲ್ಲವೂ ಮರೆಯಲಾಗದ್ದು. ಅವರಲ್ಲಿನ ತುಂಟತನ ಮಾತ್ರ ಕೊನೆಯ ವರ‍್ಶಗಳಲ್ಲಿ ಕಾಣೆಯಾದದ್ದು ಸ್ವಲ್ಪ ಬೇಸರದ ಸಂಗತಿಯೇ. ಇನ್ನಶ್ಟು ಮನತಣಿಸುವ ಪಾತ್ರಗಳಿಗೆ ಕಾಯುತ್ತಿದ್ದ ನಮ್ಮೆಲ್ಲರನ್ನು ಬಿಟ್ಟು, ನಡುವೆಯೇ ಕಣ್ಮರೆಯಾಗಿದ್ದು ಅದಕ್ಕಿಂತ ಬೇಸರದ ಸಂಗತಿ.

ಇಂದಿಗೂ ನನಗೆ ನಾಗರಹಾವು ಚಿತ್ರದ ಅನೇಕ ರೂಪಕಗಳು ಮನಸ್ಸಿನಿಂದ ಮರೆಯಾಗುವುದೇ ಇಲ್ಲ. ನಿಜಕ್ಕೂ ಅದು ವಿಶ್ಣು ಅವರಿಗಿಂತ ಪುಟ್ಟಣ್ಣರ ಮಾಂತ್ರಿಕ ಸ್ಪರ್‍ಶದ ಚಿತ್ರ. ಅದರಲ್ಲಿನ ಸುಂದರ ಗೀತೆಗಳ ನಡುವೆ ಎರಡು ಗೀತೆಗಳು ವಿಶ್ಣುರವರ ಮುಂದಿನ ಚಿತ್ರ ಬದುಕಿನ ಪ್ರತೀಕದಂತಿತ್ತು. ’ಹಾವಿನ ದ್ವೇಶ ಹನ್ನೆರೆಡು ವರುಶ’ ಗೀತೆಯ ’ಟಣ್ ಟಣ್ ಟಣ್ ಟಣ್ ಟಣ್ ಟಣ್ ಟಡಂಡಾಣ್’ ಎಂಬ ವಾದ್ಯ ಸಂಗೀತ, ಚಿತ್ರದುರ‍್ಗದ ಕೋಟೆ, ಆ ಕೆಂಪು ಮಣ್ಣು, ಸರಸರನೆ ಸರಿದು ಮರೆಯಾಗುವ ಹಾವು, ಎಲ್ಲವೂ ಮನಸ್ಸಿನಲ್ಲಿ ನಿಚ್ಚಳ. ಆದರೆ ಅದರ ನಡುವೆಯೇ ಎದ್ದು ಕಾಣುವುದು ವಿಶ್ಣು ಅವರ ಆ ಆತ್ಮವಿಶ್ವಾಸದ ನಡೆ ಹಾಗೂ ಬಿರುಸು. ಆ ಬಿರುಸೇ ಮುಂದಿನ ’ಸಾಹಸ ಸಿಂಹ’ ಬಿರುದಿಗೆ ಮುನ್ನುಡಿಯಾಯಿತು. ಅದೇ ರೀತಿ “ಬಾರೇ ಬಾರೇ ಚಂದದ ಚೆಲುವಿನ ತಾರೆ” ಯಲ್ಲಿನ ಅವರ ಸೌಮ್ಯ ನಡೆ, ನವಿರು ಮುಕ ಬಾವ ಎಲ್ಲವೂ ಅವರ ಮುಂದಿನ ಪ್ರೇಮ ಕತಾನಾಯಕನ ಪಾತ್ರಗಳ ದಿಕ್ಸೂಚಿಯಾಯಿತು. ಹೀಗೆ ಮೊದಲ ಚಿತ್ರದಲ್ಲೇ ಅವರು ಮೂಡಿಸಿದ ಬರವಸೆ ಅಪಾರ. ಅದು ನಿಜವಾಯಿತಾದರೂ “ಇನ್ನೂ ಬೇಕು” ಎಂಬುದನ್ನೂ ಉಳಿಸಿತು.

60, 70 ಹಾಗು 80ರ ದಶಕ ಕನ್ನಡ ಚಿತ್ರರಂಗದ ಸುವರ‍್ಣ ಯುಗ. ಡಾ.ರಾಜ್ ಮೊದಲಾಗಿ ದೇಶದಲ್ಲೇ ಆತ್ತ್ಯುತ್ತಮ ಅನ್ನುವಂತ ನಟರು, ನಿರ‍್ದೇಶಕರು, ಸಾಹಿತಿಗಳು, ತಂತ್ರಜ್ನರು, ನಿರ‍್ಮಾಪಕರು ಕನ್ನಡ ಚಿತ್ರರಂಗವನ್ನು ಬೆಳಗಿದರು. ಕನ್ನಡ ಚಿತ್ರರಂಗದ ಸೌಬಾಗ್ಯವೋ, ಚಿತ್ರ ರಸಿಕರ ಅದ್ರುಶ್ಟವೋ ವಿಶ್ಣು ಅವರು ಕೂಡ ಅದೇ ಕಾಲದಲ್ಲಿ ನಮಗೆ ಸಿಕ್ಕರು. ಪಳಗಿದ ನಿರ‍್ದೇಶಕರ ಕೈಯಲ್ಲಿ ಅರಳಿದರು, ಬೆಳೆದರು ಹಾಗೂ ಆತ್ತ್ಯುತ್ತಮ ಚಿತ್ರಗಳಲ್ಲಿ ತೊಡಗಿಸಿಕೊಂಡರು. ಒಂದು ಚಿತ್ರವನ್ನು ತಮ್ಮದೇ ಹೆಗಲಿನ ಮೇಲೆ ಎತ್ತಿಕೊಂಡು ಸಾಗುವ ಸಾಮರ್‍ತ್ಯವೂ ಅವರಿಗಿತ್ತು. ಅದು ಸಾಮಾನ್ಯದ ವಿಶಯವೇನಲ್ಲ. ಕನ್ನಡ ಚಿತ್ರ ರಸಿಕರು ಕೂಡ ಅವರನ್ನು ಪ್ರೀತಿಯಿಂದ ಒಪ್ಪಿ ಅಪ್ಪಿಕೊಂಡರು. ಸದಬಿರುಚಿಯ ನವಿರು ಚಿತ್ರಗಳು ಬಂದವು.

ದ್ವಾರಕೀಶ್ ರ ಜೊತೆಗಿನ ಅವರ ಗೆಳೆತನ ಕನ್ನಡಕ್ಕೆ ಒಂದಶ್ಟು ಹೊಸ ಬಗೆಯ ಚಿತ್ರಗಳನ್ನು ನೀಡಿತು. ಆ ಗೆಳೆತನ ಕಂಡ ಏಳು ಬೀಳುಗಳು ಚಿತ್ರರಂಗದಲ್ಲಿನ ಸಂಬಂದಗಳ ಹಾವು ಏಣಿಯಾಟಕ್ಕೆ ಸಾಕ್ಶಿಯಾದರೆ, ಅಂಬಿ ವಿಶ್ಣು ನಡುವಿನ ಗೆಳೆತನ, ಗೆಳೆತನವೆನ್ನುವುದು ಎಲ್ಲವನ್ನೂ ಮೀರಿದ ಬಂದನ ಎಂಬುದನ್ನು ನಿರೂಪಿಸಿತು. ಕೊನೆಯ ವರ್‍ಶಗಳಲ್ಲಿ ಪಾತ್ರಗಳ ಆಯ್ಕೆಯಲ್ಲಿ ವಿಶ್ಣು ಮತ್ತಶ್ಟು ಕಾಳಜಿ ವಹಿಸಬೇಕಾಗಿತ್ತೇನೋ ಎಂದೆನಿಸಿದರೂ, ಅದು ಬಹುತೇಕ ಹಿರಿಯ ನಟರ ಬಗ್ಗೆಯೂ ಅನ್ನಬಹುದಾದ ಮಾತು. ನಮ್ಮ ಹಿರಿಯ, ಪಳಗಿದ ನಟರುಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಸಿನಿಮಾದಲ್ಲಿನ ವ್ಯವಸ್ತೆಯ ಕೊರತೆ, ಚಿತ್ರರಂಗವನ್ನು ಇತ್ತೀಚಿನ ವರ‍್ಶಗಳಲ್ಲಿ ಕಾಡುತ್ತಿರುವುದು ಅದಕ್ಕೆ ದೊಡ್ಡ ಕಾರಣ. ಆದರೂ ಅತ್ತ್ಯುತ್ತಮ ಎನ್ನುವಂತ ಚಿತ್ರಗಳ ದೊಡ್ಡ ಸಾಲನ್ನೇ ವಿಶ್ಣು ನಮ್ಮ ಮುಂದೆ ಬಿಟ್ಟು ಹೋಗಿದ್ದಾರೆ. ’ವಂಶವ್ರುಕ್ಶ’, ’ನಾಗರಹಾವು’ ನಿಂದ ಬೆಳೆದು, ಹೊಸತನದ ’ಹೊಂಬಿಸಿಲಿ’ನಲ್ಲಿ ಕಂಗೊಳಿಸುತ್ತಾ, ’ನಾಗರಹೊಳೆ’ಯಂತ ಉತ್ತಮ ಚಿತ್ರಗಳ ಕಾಡೊಳಗೆ ನುಗ್ಗಿ ’ಸಾಹಸ ಸಿಂಹ’ನಾಗಿ ಬೆಳೆದವರು ಅವರು. ಚಿತ್ರ ರಸಿಕರ ಪ್ರೀತಿಯ ’ಬಂದನ’ದಲ್ಲಿ ’ಕೈದಿ’ಯಾಗಿ ಹಲವಾರು ಸದಬಿರುಚಿಯ ಚಿತ್ರಗಳಿಗೆ ’ಸುಪ್ರಬಾತ’ ಹಾಡಿ, ಆ ಚಿತ್ರಗಳ ’ಮುತ್ತಿನಹಾರ’ವನ್ನು ಕನ್ನಡ ಚಿತ್ರರಂಗಕ್ಕೆ ತೊಡಿಸಿದವರು.

ಜೀವನದುದ್ದಕ್ಕೂ ಅನೇಕ ’ಸಂಗರ‍್ಶ’ಗಳಲ್ಲಿ ನೊಂದರೂ ’ಕರ‍್ಣ’ನ ಸಹನೆಯಿಂದ, ’ಹಾಲು ಸಕ್ಕರೆ’ ಯಂತ ನಗುವಿನಿಂದ ’ಹಾಲುಂಡ ತವರಿಗೆ’ ಒಳ್ಳೆಯದನ್ನೇ ಬಯಸಿದವರು. ಬೆಳೆದಂತೆಲ್ಲಾ ಗರ‍್ಜಿಸುವುದಕ್ಕಿಂತ ’ಲಾಲಿ’ಯ ಕೋಮಲತೆಯನ್ನು ನೆಚ್ಚಿಕೊಂಡು, ’ಯಜಮಾನ’ನಾಗುವುದಕ್ಕಿಂತ ’ಆಪ್ತಮಿತ್ರ’ನಾಗಿ ಉಳಿದವರು. ಕೊನೆಗೆ ಸಾದನೆ, ಪ್ರಸಿದ್ದಿಗಿಂತ ಅದ್ಯಾತ್ಮಿಕತೆಯನ್ನೇ ’ಆಪ್ತ ರಕ್ಶಕನಾಗಿ’ ಆರಿಸಿಕೊಂಡ ವಿಶ್ಣುರವರ ಚಿತ್ರ ಜೀವನವು, ಎಲ್ಲಾ ಬಣ್ಣಗಳಿಂದ ಕೂಡಿದ ಸುಂದರ ಕಾಮನಬಿಲ್ಲು. ಮಳೆ ಬಿಸಿಲುಗಳ ಸಮ ಸಂಗಮದ ಪ್ರತೀಕ.

ಕೆಲವು ದಿನಗಳ ಹಿಂದೆ ಯಾವುದೋ ವಾಹಿನಿಯಲ್ಲಿ ವಿಶ್ಣು ಸಮಾದಿಯ ಬಗ್ಗೆ ನಡೆಯುತ್ತಿದ್ದ ಚರ‍್ಚೆಯನ್ನು ನೋಡಿ ಅನಿಸಿದ್ದು – ಇಡೀ ದೇಶವೇ ತಿರುಗಿ ನೋಡುವಂತ ಚಿತ್ರಗಳನ್ನು ನೀಡಿ, ಕನ್ನಡ ಚಿತ್ರರಂಗದ ಶ್ರೀಮಂತ ಇತಿಹಾಸವನ್ನು ಪರಿಚಯಿಸುತ್ತಾ, ನೆನಪಿಸುತ್ತಾ, ಆ ಇತಿಹಾಸದಲ್ಲಿನ ವಿಶ್ಣುರವರಂತವರ ದೊಡ್ಡ ಪಾತ್ರವನ್ನು ತೋರಿಸಿಕೊಡುವತ್ತಾ ಕ್ರಿಯಾಶೀಲರಾಗಬೇಕಾಗಿದೆ ನಮ್ಮ ಚಿತ್ರರಂಗ. ಇದಕ್ಕಿಂತ ದೊಡ್ಡ ಶ್ರದ್ದಾಂಜಲಿ, ಸ್ತಾವರಗಳನ್ನು ಮುಗ್ದ ಮನಸ್ಸಿನ ವಿಶ್ಣು ಕೇಳುತ್ತಿರಲಿಲ್ಲವೇನೋ. ವಿಶ್ಣುವರ‍್ದನರ ಈ ಹುಟ್ಟು ಹಬ್ಬ, ಅವರಂತ ಅನೇಕ ಕಲಾವಿದರ ಬೆಳವಣಿಗೆಗೆ ಸ್ಪೂರ‍್ತಿಯಾಗಿಲಿ, ಕನ್ನಡ ಚಿತ್ರರಂಗದ ಮರುಹುಟ್ಟಿನ ಕನಸಿನತ್ತ ಒಂದು ಹೆಜ್ಜೆಯಾಗಲಿ.!