Monday, 17 March 2014

Exam ಓಕೆ Tension ಯಾಕೆ?



























ಟಾಮಿ : ಬೌ ಬೌ ಬೌ....

ರಾಕಿ : ಬೌ ಬೌ ಬೌ.....

ಟಾಮಿ : ಬಾ ರಾಕಿ ಹೇಗಿದ್ಯಾ?

ರಾಕಿ : ನಾನು ಚೆನ್ನಾಗಿದ್ದೀನಿ, ನೀನೇಗಿದ್ಯಾ?

ಟಾಮಿ : "ಏನಪ್ಪ ತುಂಬ ಅಪರೂಪ ಆಗಿಬಿಟ್ಟೆ? ಮೊದಲೆಲ್ಲಾ ನೋಡಿದ್ರೆ ಬೊಗಳ್ ತ್ತಿದ್ದೆ, ಈಗ ತಿರುಗಿನೂ ನೋಡಲ್ಲ?

ರಾಕಿ : ಸುಮ್ನಿರಪ್ಪ, ನೀನ್ ಮಾತ್ರ ಏನು? ದೂರದಲ್ಲಿ ನೋಡಿದ್ ತಕ್ಷಣ ಬಾಲ ಅಲ್ಲಾಡಿಸ್ತಿದ್ದೆ, ಈಗ ಹಾಗೇ ಮುದುರುಕೊಂಡು ಹೋಗ್ತಾ ಇರ್‍ತಿಯಾ?

ಟಾಮಿ : ಅಯ್ಯೋ ಬೊಗಳೊದಾ? ಅದೇನೋ ಈ ಮನುಷ್ಯರ್ ಮಕ್ಕಳಿಗೆಲ್ಲಾ Exam ಅಂತೆ, ನಾವೇನಾದ್ರೂ ಸ್ವಲ್ಪ ಸದ್ದು ಮಾಡಿದ್ರೂ “ಥೂ ನಾಯಿಮುಂಡೇದೇ ಮಕ್ಕಳ್ ಓದ್ ತಾವ್ರೇ ಬೊಗಳ್ ಬೇಡ ಅಂತಾರೆ. ಬೊಗಳಕ್ಕೂ ಬಿಡೊಲ್ಲ, ಏನ್ ಗತಿಯಪ್ಪ ನಮ್ಮದು?

ರಾಕಿ : ಅಯ್ಯೋ ಹೌದು ಗುರು, ಬೊಗೊಳೋದು ಇರ್‍ಲಿ, ನಮ್ಮ್ ನಾಯಿಗಳಿಗೆ ಈ ಬೆಂಗಳೂರ್ ಟ್ರಾಫಿಕ್ಕ್ನಲ್ಲಿ ಬಾಲ ಅಲ್ಲಾಡಿಸೋಕೂ ಜಾಗ ಇಲ್ಲ. ಮೊನ್ನೆ ರೋಡಲ್ಲಿ ನಿಮ್ಮ cousin ಜಾನಿ ಸಿಕ್ದಾ ಅಂತಾ ಜೋರಾಗಿ ಬಾಲ ಅಲ್ಲಾಡಿಸೋಕ್ಕೆ ಹೋದ್ರೆ, ಒಬ್ಬ ಬೈಕ್ ನಲ್ಲಿ ಬಾಲಕ್ಕೆ ಗುದ್ದ್ ಕೊಂಡ್ ಹೋಗ್ಬಿಟ್ಟಾ. ಅದಕ್ಕೆ ಬಾಲ ಅದರ ಪಾಡಿಗೆ ಸುಮ್ನೆ ಇಟ್ಕೊಂಡ್ ಇರ್ತೀನಿ. ಇವರ ರೋಡ್ ಗಳೆಲ್ಲಾ ಅಂಕು ಡೊಂಕು, ಆದ್ರೆ ನಮ್ಮ ಬಾಲ ಡೊಂಕು ಅಂತಾರೆ.

ಟಾಮಿ : ಅದೇನೋಪ್ಪ, ಇಡೀ ಜಗತ್ತನ್ನೇ ಇವರದೇ ಮಾಡ್ಕೊಂಡ್ ಅವ್ರೆ ಈ ಮನುಷ್ಯರು. ರೋಡ್ ಸಾಲ್ದು ಅಂತ ನಮ್ಮ ಫುಟ್ ಪಾತ್ ಗೂ ಗಾಡಿ ನುಗ್ಗಿಸ್ತಾರೆ. ರಸ್ತೆ ಅಕ್ಕಪಕ್ಕ ಇದ್ದ ಗಿಡ ಮರ ಎಲ್ಲಾ ಕತ್ತರಿಸವ್ರೆ. Urgentಗೆ ಒಂದು ಗಿಡ ಇಲ್ಲ ಮರ ಇಲ್ಲ ನಮಗೆ. ಆ ಲೈಟ್ ಕಂಬಗಳು ಅದ್ಯಾವಗ್ ಕರೆಂಟ್ ಹೊಡಿತ್ತಾವೋ ಭಯ.

ರಾಕಿ : ಇದನ್ನೆಲ್ಲಾ ಮಾತಡೊಕೆ ಅಂತಾನೇ, ಮೊನ್ನೆ ನಮ್ಮ ಏರಿಯಾ ನಾಯಿ ಸಂಘದವರ ಮೀಟಿಂಗ್ ಇಟ್ಕೊಂಡಿದ್ವಿ, ಮೀಟಿಂಗ್ ಎಲ್ಲಾ ಆದ ಮೇಲೆ ಕೊನೆಗೆ ಎಲ್ಲಾ ಸೇರಿಕೊಂಡು ಜೋರಾಗಿ ಬೊಗಳಿದ್ವಿ ನೋಡು, ಎಲ್ಲಾ ಮನೆಯಿಂದನೂ ಜನ ಬಂದು "ಥೂ ಮಕ್ಳು ಮಲಗವ್ರೆ, ನಾಳೆ Exam ಸುಮ್ನಿರಿ ನಾಯಿಗಳ ಅಂತ", ನಾವು ಬೊಗಳಿದಕ್ಕಿಂತ ಕೆಟ್ಟದಾಗಿ ಕೂಗಾಡಿದ್ರು"

ಟಾಮಿ : ಏನ್ Exam Exam Examu ಅಂತಾರೋ, ಆ ಮಕ್ಕ್ಳಿಗಿಂತ ಆ ತಂದೆ ತಾಯಿಗಳ್ದೆ ದೊಡ್ಡ್ ಗೋಳು. ಮೊನ್ನೆ ಯಾವ್ದೋ ಕಳ್ಳ ಬಂದಿದ್ದ, ನಾನು ಬೊಗಳಕ್ಕೆ ಹೋಗ್ಲಿಲ್ಲ, ಹಾಳಾಗೋಗ್ಲಿ ಅಂತ ಸುಮ್ನಿದ್ದೆ, ಅವ್ನು ಕಳ್ಳ ಬಂದು ಎಲ್ಲಾ ಬಿಟ್ಟು ಅದೇನೋ ಹಾಲ್ ಟಿಕೆಟ್ ಅಂತೆ, ಅದನ್ನ ಕದ್ದ್ಕೊಂಡ ಹೋದ ಅಂತ ಮನೆಯಮ್ಮ ಅಳ್ತಾಯಿದ್ಲು.

ರಾಕಿ : ನಮ್ಗೇನು ಬಿಡು, ನಾವು ನೋಡ್ದೆ ಇರೋ exama?...... ಅದ್ ಸರಿ ಏನ್ ಅದು exam ಅಂದ್ರೆ? ಅದು ಮಾಡಿ ಏನಾಗುತ್ತೆ?

ಟಾಮಿ : ಅದೇನೋ ನನಗೂ ಅಷ್ಟು ಗೊತ್ತಾಗೊಲ್ಲ, ಆದ್ರೆ ಅದನ್ನ ಚೆನ್ನಾಗಿ ಮಾಡೀದ್ರೆ, ಅವ್ರಿಗೆಲ್ಲ ಒಳ್ಳೆ ಕೆಲ್ಸ ಸಿಕ್ಕಿ ಚೆನ್ನಾಗಿ ಸಂಪಾದನೆ ಮಾಡಬಹುದು ಅಂತ ನಮ್ಮ ಮೀಟಿಂಗ್ ನಲ್ಲಿ ಹೇಳ್ತಿದ್ರು ರಾಕಿ ಹೌದಪ್ಪ ಈಗ ಮನುಷ್ಯರು ರಾತ್ರಿಯೆಲ್ಲಾ ಕೆಲಸಕ್ಕೆ ಹೋಗ್ತಾರೆ, ಅದ್ಯಾವಗೋ ಹೋಗ್ತಾರೋ, ಅದ್ಯಾವಗೋ ಬರ್‍ತಾರೋ, ಅದ್ಯಾವಗೋ ಮಲಗ್ತಾರೋ

ಟಾಮಿ : ಅವರು ಏನಾದ್ರು ಮಾಡ್ಕೊಳ್ಲಿ, ನಮಗೆ ಕಷ್ಟ ಆಗಿಬಿಟ್ಟಿದೆ. ಮೊದಲು ರಾತ್ರಿ ಹೊತ್ತು ರೋಡೆಲ್ಲಾ ನಮ್ದೆ. ರಾಜರ ಥರಾ ತಿರುಗಾಡಿಕ್ಕೊಂಡು ಇರ್‍ತಿದ್ವಿ. ಈಗ ರಾತ್ರಿಯೆಲ್ಲಾ BPO Cabಗಳು. ಯಾರು ಕಳ್ಳ,ಯಾರು ಯಜಮಾನ ಗೊತ್ತಾಗೊಲ್ಲ.ಮೊನ್ನೆ ನಮ್ಮ್ ರೋಡನಲ್ಲಿ ಮಧ್ಯರಾತ್ರಿ ಯಾರೋ ಕೂದಲೆಲ್ಲಾ ಕೆದರಿಕೊಂಡು, ಚಡ್ಡಿ ಹಾಕ್ಕೊಂಡು, ಮನೆ ಬೀಗ ತೆಗಿತ್ತಿದ್ದ, ಕಳ್ಳ ಅಂದ್ಕೊಂಡು ಹೋಗಿ ಕಾಲಿಗೆ ಬಾಯಿ ಹಾಕಿ ಬಿಡಲೇ ಇಲ್ಲ ನಾನು. ಅಮೇಲೆ ನೋಡಿದ್ರೆ, ಅವನು ಅ ಮನೆಯವನೇ, ರಾತ್ರಿ ಕೆಲಸ ಮುಗಿಸಿಕೊಂಡು ಬಂದಿದ್ನಂತೆ. ಎಲ್ಲಾ ಸೇರೊಕೊಂಡು ಸರಿಯಾಗಿ ಬಿಟ್ಟ್ರು ನನಗೆ.

ರಾಕಿ : ಥೂ ನಿನ್ನ, ಅವನ ಕತ್ತಿಗೆ ನೇತಾಕೊಂಡಿರೋ ID Card ನೋಡಿ ಕಚ್ಚಬಾರದಾ ನೀನು?

ಟಾಮಿ : ಸರಿ ಬಿಡು, ಇನ್ನು ಒಂದೆರೆಡು ತಿಂಗಳು ಆ ಕೆರೆ ಇರೋ ಪಾರ್ಕಿಗೆ ಹೋಗಬೇಡಪ್ಪ. ಅಲ್ಲಿ ಪೋಲಿಸ್ ಮಾಮ ಇರ್‍ತಾರೆ. ಯಾರನ್ನೂ ಬಿಡೋಲ್ಲ ರಾಕಿ ಹೌದಾ? ಯಾಕೆ?

ಟಾಮಿ : ಹೇ ಅದೇ, ಈ Exam ಚೆನ್ನಾಗಿ ಮಾಡ್ದೆ ಇರೋರು, ಫೇಲ್ ಆದೋರೆಲ್ಲಾ, ಕೆರೆಗೆ ಬೀಳೋಕೆ ಬರ್‍ತಾರಂತೆ ಅದಕ್ಕೆ ಕೆರೆ ಹಾಳುಗುತ್ತೆ ಅಂತ ಯಾರನ್ನೂ ಬಿಡೊಲ್ಲ ರಾಕಿ ಒಳ್ಳೆ ಕತೆ ಆಯ್ತಲ್ಲ, ಈ ಮನುಷ್ಯರ ಪಾಡಿಗಿಂತ ನಮ್ಮ ನಾಯಿ ಪಾಡೇ ಎಷ್ಟೋ ವಾಸಿ ಟಾಮಿ ಅಲ್ಲಾ ರಾಕಿ, Exam ನಲ್ಲಿ ಫೇಲ್ ಆದ್ರೆ ಕೆರೆಗೆ ಹಾರೋಂತಾದೇನು ಅಂತಾ, nex time ಬರದ್ರೆ ಆಯ್ತು

ರಾಕಿ : ಅದೇ ಅಲ್ವಾ? Exam ಮುಖ್ಯ ಸರಿ, ಆದರೆ ಅದಕ್ಕಿಂತ ಜೀವನ ಮುಖ್ಯ ಅಲ್ವಾ??

ಟಾಮಿ : ನಮ್ಮ ಮಾತು ಕೇಳೋ ಹಾಗಿದ್ರೆ ಹೇಳ್ತಿದ್ದೆ, "ನೋಡ್ರೋ ಮಕ್ಳ ಚೆನ್ನಾಗಿ ಓದಿ, ಚೆನ್ನಾಗಿ Exam ಬರೀರಿ, ಸುಮ್ನೆ Tension ಮಾಡ್ಕೊಂಡ್ರೆ ಆಗೊಲ್ಲ "ಆಂತಾ!!

ರಾಕಿ : ಅದನ್ನ ಅವರಿಗಿಂತ ಅವರ ತಂದೆ ತಾಯಿಗಳಿಗೆ ಹೇಳಬೇಕು. ಅವ್ರೆ ಮಕ್ಕಳನ್ನ ಹಿಂಸೆ ಡೋದು,ಅದೇನೋ Engineer ಆಗ್ರಿ, BPO ಹತ್ತಿ ಅಂತ....

ರಾಕಿ : ಎಲ್ಲಾ Engineer, BPOಗೆ ಹೋಗ್ಬೇಕು ಅಂದ್ರೆ, ಬೇರೆ ಬೇರೆ ಕೆಲ್ಸ ಮಾಡೋರು ಯಾರು ಆಂತಾ? ಅಮೇಲೆ ಮನುಷ್ಯರೆಲ್ಲ ಒಂದೇ ತರಾ ಕಾಣ್ತಾರಪ್ಪ!

ಟಾಮಿ : ಅದೇ ಅಲ್ವಾ, ನಾವು ನೋಡು, ಹೆಂಗೆ ಬೇರೆ ಬೇರೆ ತರಾ ನಾಯಿಗಳು ಇದ್ದೀವಿ, ನಮ್ಮದೇ ವ್ಯಕ್ತಿತ್ವ... ಸಾರಿ... ನಮ್ಮದೇ ನಾಯತ್ವ ಇಲ್ವಾ?

ರಾಕಿ : ಸರಿ ಸರಿ ನಡಿ…..Exam ಬರಿಯೋ ಎಲ್ಲಾ ಮಕ್ಕಳಿಗೆ, ಯುವಕರಿಗೆ ನಮ್ಮ ಕಡೆಯಿಂದ ಒಂದು ವಿಶ್ ಮಾಡೋಣ

ಟಾಮಿ : ಮಕ್ಕಳೇ, ಚೆನ್ನಾಗಿ Exam ಬರೀರಪ್ಪ. ಬರ್‍ದು ದೇಶಕ್ಕೆ ಒಳ್ಳೆ ಹೆಸರು, ನಮಗೆ ಒಳ್ಳೆ ಬಿಸ್ಕಟ್ ತಂದ್ ಕೊಡ್ರಪ್ಪ.

ರಾಕಿ : Exam ಓಕೆ, ತುಂಬ Tension ಯಾಕೆ?

- ಪ್ರಶಾಂತ್ ಇಗ್ನೇಷಿಯಸ್


Tuesday, 18 February 2014

ಆಡಿಯೋ ಅನಿಸಿಕೆ : ಉಳಿದವರು ಕಂಡಂತೆ

ತಮ್ಮ ಮೊದಲ ಚಿತ್ರದಿಂದಲೂ ಭರವಸೆ ಮೂಡಿಸಿದ್ದ ರಕ್ಷಿತ್ ಶೆಟ್ಟಿ, ’ಸಿಂಪಲಾಗಿ...’ ಯಿಂದ ಏರಿದ ಎತ್ತರ ಅಷ್ಟೇನು ಸಿಂಪಲ್ಲಲ್ಲ. ಈ ನಡುವೆ ನಿರ್ದೇಶಕರಾಗಿ ಹೊಸ ಚಿತ್ರವನ್ನು ಪ್ರಕಟಿಸಿದಾಗ, ಅದ್ಭುತವೆನಿಸುವಂತ ಟ್ರೈಲರ್ ಬಿಡುಗಡೆ ಮಾಡಿದಾಗ, ’ಸಿಂಪಲ’ನ್ನು ಕಾಣದಿದ್ದ ಅಳಿದುಳಿದವರೂ "ಉಳಿದವರು ಕಂಡಂತೆ’ಯತ್ತ ಈಗ ಮುಖ ಮಾಡಿದ್ದಾರೆ. ಚಿತ್ರದ ಆಡಿಯೋ ಬಿಡುಗಡೆಯಾಗಿದೆ, ಹೇಗಿದೆ ಎನ್ನುವುದಕ್ಕಿಂತ ಹೀಗೂ ಇರಬಹುದು ಎಂಬಂತೆ ವಿಭಿನ್ನವಾಗಿದೆ ಹಾಡುಗಳು. "ಕಣ್ಣು ನಿನ್ನದಾದರೇನು ನೋಡೋದು ಬೇರೆಯವರನ್ನು, ನೋಡೋದು ಬೇರೆಯವರಾದರೇನು? ಅಲ್ಲಿ ಹುಡ್ಕು ನೀನು ನಿನ್ನತನವನ್ನು" ಎಂಬ ಅರ್ಥದ ಸಾಲುಗಳು ಚಿತ್ರದ ಗೀತೆಯೊಂದರಲ್ಲಿದೆ. ಅಂತೆಯೇ ಚಿತ್ರದ ಹಾಡುಗಳಿಗೆ ತನ್ನದೇ ಆದ ’ತನ’ವಿದೆ.ಅಲ್ಲಿ ತಾಜತನವಿದೆ, ಹೊಸತನವಿದೆ, ದಕ್ಷಿಣ ಕನ್ನಡತನವಿದೆ, ರಕ್ಷಿತನವಿದೆ, ಹೊಸ ಸಂಗೀತ ನಿರ್ದೇಶಕ ಅಜನೀಶರ ತನವಿದೆ, ಹಾಡಿದ ಎಲ್ಲಾ ಗಾಯಕರು ತಮ್ಮ ತನವನ್ನು ಹಾಡುಗಳಲ್ಲಿ ಅಚ್ಚೊತ್ತಿದ್ದಾರೆ. ಹೇಗಿದೆ ಹಾಡುಗಳು ಕೇಳಿ :


ಥೀಮ್ ಆಫ್ ಉಳಿದವರು : ಚಿತ್ರದ ಥೀಮ್ ಸಂಗೀತ ಎಂಬ ಹಣೆಪಟ್ಟಿಯ  ಹಿನ್ನಲೆ ಸಂಗೀತದ  ಈ ಟ್ರ್ಯಾಕ್ ನ ಸಂಗೀತ ಉತ್ತಮವಾಗಿದ್ದೂ, ಮೀನುಗಾರರ,ಹಡಗು ಕಾರ್ಮಿಕರ, ಸಮುದ್ರಯಾನದ ಹಿನ್ನಲೆ ಧ್ವನಿ, ಯಾವುದೋ ಘಟನೆ, ಕಥೆಯನ್ನು ತನ್ನೊಡಲಲ್ಲಿ ಬಚ್ಚಿಟ್ಟುಕೊಂಡು ಮೆಲ್ಲಗೆ ಬಿಚ್ಚುತ್ತಾ ಹೋಗುತ್ತದೆ. ಅತ್ತ್ಯುತ್ತಮ ಎನ್ನಬಹುದಾದ ವಾದ್ಯ ಸಂಯೋಜನೆ.

ಸಮಯದ ತಿರುವು : ಸಿ. ಅರ್.ಬಾಬಿಯವರ ಮಾದಕ ಧ್ವನಿಯಲ್ಲಿ ಮೂಡಿ ಬಂದಿರುವ ಈ ಗೀತೆಯ ಹಿನ್ನಲೆಯಲ್ಲಿ ಬರುವ ವಾದ್ಯ ಸಂಗೀತವೂ ಅಷ್ಟೇ ಮಾದಕವಾಗಿದೆ. Knock Knock ಎನ್ನುತ್ತ ಹೃದಯದ ಬಾಗಿಲನ್ನು ತಟ್ಟುತ್ತಲೇ ಮುಗಿದು ಹೋಗುವ ಸುಂದರ ಗೀತೆಗೆ ಮನೋಜವ ಗಲಗಲಿ, ವಿಘ್ನೇಶ್ವರ ವಿಶ್ವರ ಸಾಹಿತ್ಯ ಇದ್ದೂ ಇಲ್ಲದಂತಿದೆ.

ರಿಚ್ಚೀಸ್ ಥೀಮ್ : ಮತ್ತೊಂದು  ಹಿನ್ನಲೆ ಸಂಗೀತದ  ಟ್ರ್ಯಾಕ್. ನಡುನಡುವೆ ಮಾತು, ನಗು ಕೇಕೆ,ಎಲ್ಲವೂ ಇದೆ. ಸಂಗೀತ ಏನಿದು ಹೀಗಿದೆ ಎಂದು ನಕ್ಕಿರೋ ಜೋಕೆ!!! ರಪ್ಪನೆ ಕೇಳಿ ಬರುತ್ತದೆ ಏನೋ ಬೋ* ಮಕ್ಳಾ ನಗ್ತೀರಾ? ಶೂಟ್  ಮಾಡಬೇಕಾ?  ಎಂಬ ಉದ್ಘಾರ.

ಹುಲಿವೇಷ : ಈ ಟ್ರ್ಯಾಕ್ ಕೇಳುತ್ತಾ ಕೇಳುತ್ತಾ ನಮ್ಮ ಹಳ್ಳಿ ಜಾತ್ರೆ, ತೇರು, ಮೆರವಣಿಗೆಗಳಲ್ಲಿನ ಬ್ಯಾಂಡ್ ಸೆಟ್ ನೆನಪಿಗೆ ಬರಲಿಲ್ಲವೆಂದರೆ ಕೇಳಿ. ಕ್ಲಾಸ್ ಗುಂಗಿನಲ್ಲೇ ಆರಂಭವಾಗಿ ’ಬಾ ಬಾರೋ ರಣಧೀರ ಹಾಡಿನ ಸಂಗೀತದಿಂದ ಪಕ್ಕಾ ಮಾಸ್ ಗೆ ತಿರುಗಿ ಅಲ್ಲೇ ಮೆರೆದಾಡುತ್ತದೆ. ತಮಟೆ, ಜಲ್ ಜಲ್  ಸದ್ದಂತೂ ಬಾಲ್ಯ  ದಿನಗಳ ನೆನಪತ್ತ  ಕರೆದುಕೊಂಡು ಹೋಗುತ್ತದೆ. ಕೂತ್ತಲ್ಲೇ  ಹುಲಿವೇಷದ  ಒಂದೆರೆಡು steps ಹಾಕುವಂತೆ ಮಾಡುತ್ತದೆ ಈ ಟ್ರ್ಯಾಕ್. ಕೇವಲ ಹಿನ್ನಲೆ ಸಂಗೀತದಲ್ಲೂ ಇಷ್ಟೊಂದು ತುಂಟತನವೇ?

ಕಣ್ಣಾಮುಚ್ಚೆ : ಥೀಮ್ ಸಾಂಗುಗಳ ಭರಾಟೆಯಿಂಡ ಕೇಳುಗರನ್ನು ಮಾಧುರ್ಯದ ಲೋಕಕ್ಕೆ ತಂದು ನಿಲ್ಲಿಸುವ ಗೀತೆಗೆ ಸುನಿಯವರ ಸಾಹಿತ್ಯವಿದೆ. ಶಂಕರ್ ಮಹಾದೇವನ್ ಗೆ ಸಾಟಿಯಾಗಿ ವಾಣಿ ಧ್ವನಿಗೂಡಿಸಿದ್ದಾರೆ.ಹಿನ್ನಲೆಯಲ್ಲಿ ಬರುವ ವಾದ್ಯ ಸಂಗೀತದಲ್ಲಿ ಸಂಗೀತ ನಿರ್ದೇಶಕ ತೋರಿರುವ ಸಂಯಮ ಅದ್ಭುತ. ಉತ್ತಮ ಸಾಹಿತ್ಯ, ಅದ್ಭುತ ಗಾಯನದ ನಡುವೆ ಅಜನೀಶ್ ತಮ್ಮ ಸಂಗೀತದಿ೦ದ ಎತ್ತರದಲ್ಲಿ ನಿಲ್ಲುತ್ತಾರೆ.

ಮಳೆ ಮರೆತು : ಅಜನೀಶ್ ತಮ್ಮ ವಾದ್ಯ ಸಂಯೋಜನೆಯಿಂದ ಬೆರಗುಗೊಳಿಸಿದರೆ, ವಿಘ್ನೇಶ್ವರ ವಿಶ್ವರ ಸಾಹಿತ್ಯ ಮೋಡಿ ಮಾಡುತ್ತದೆ. ಉತ್ತಮ ರಾಗಕ್ಕೆ ಒಳ್ಳೆಯ ಸಾಹಿತ್ಯ ದೊರಕಿ ವಿಜಯ್ ಪ್ರಕಾಶರ ಧ್ವನಿ ಸಿಕ್ಕ ಮೇಲೆ ಕೇಳಬೇಕೇ? ವಿಜಯ್ ಸಂದರ್ಭಕ್ಕೆ ತಕ್ಕಂತೆ ತಮ್ಮ ಧ್ವನಿಯನ್ನು ಬದಲಾಯಿಸಿಕೊಂಡು ಹಾಡಿದಂತೆ ಭಾಸವಾಗುವುದು ಒಂದು ಉತ್ತಮ ಬೆಳವಣಿಗೆ.

ಘಾಟಿಯ ಇಳಿದು : ಸಾಹಿತ್ಯ, ಸಂಗೀತ, ವಾದ್ಯ ಸಂಯೋಜನೆ, ಮಣ್ಣಿನ ವಾಸನೆ ಎಲ್ಲವೂ ಒಟ್ಟಾಗಿ ಉತ್ತಮವಾಗಿ ಜೊತೆಗೂಡಿ ಬಂದಾಗ ಒಂದು ಗೀತೆ ಏನಾಗಬಹುದೋ, ಇಲ್ಲಿ ಅದೇ ಆಗಿದೆ. ಹೆಚ್ಚಿಗೆ ಬರೆಯಲು ಏನಿಲ್ಲ. ಕೇಳಿ ಆನಂದಿಸಬೇಕಷ್ಟೇ. ರಕ್ಷಿತ್ ರ ಭರವಸೆಯ ಸಾಹಿತ್ಯದ ನಡುವೆ ಬರುವ ತುಳು ಮಾತುಗಳು ಗೀತೆಗೆ ಮೆರಗು ತಂದುಕೊಟ್ಟಿದೆ. ಹಾಡಿನ ವಿಡಿಯೋ ನೋಡಿ

ಪೇಪರ್: ಅಜನೀಶ್ ಲೋಕನಾಥರ ಉತ್ತಮವಾದ ಸಂಗೀತವನ್ನು ಮೀರಿ ನಿಲ್ಲುವಂತೆ ಮೋಡಿ ಮಾಡುವುದು ಗಾಯನ ಹಾಗೂ ರಕ್ಷಿತರ  ತುಂಟ ಸಾಹಿತ್ಯ. 'ಉಳ್ಳವರು ಶಿವಾಲಯವ ಕಟ್ಟುವರು ನಾನೇನು ಕಟ್ಟಲಿ ಬಡವನಯ್ಯಾ? ಎನುತ್ತಲೇ ಗೀತೆ ಅನೇಕ ಅರ್ಥಗಳನ್ನು ಕಟ್ಟಿಕೊಡುತ್ತದೆ. ಸಾಹಿತ್ಯ, ಸಂಗೀತ, ಗಾಯನ ಎಲ್ಲವೂ ವಿಭಿನ್ನ  

ಕಾಕಿಗ್ ಬಣ್ಣ ಕಾಂತ :  ಗೀತೆ ಕೇಳುತ್ತಾ ಕೇಳುತ್ತಾ ಯಾರಿಗೆ ಹೆಚ್ಚು ಮಾರ್ಕ್ಸ್, ಯಾರಿಗೆ ಹೆಚ್ಚು ಅಭಿನಂದನೆ ಸಲ್ಲಬೇಕು ಎಂಬ ಗೊಂದಲ ಮೂಡದಿದ್ದರೆ ಕೇಳಿ. ರಕ್ಷಿತ್ ರ ಸಾಹಿತ್ಯದ ಒಂದೊಂದು ಪದಕ್ಕೂ ಶ್ರೇಯಾ ಘೋಶಾಲ್ ಎಂಬ ಅದ್ಘುತ ಪ್ರತಿಭೆ ತಂದು ಕೊಟ್ಟಿರುವ ಜೀವ,ಮೆರುಗು, ಬಣ್ಣಕ್ಕೆ ಎಲ್ಲೂ ಭಂಗ ಬರದಂತೆ ಸೈಡಲ್ಲಿದ್ದುಕೊಂಡು ಮಜಾ ತೆಗೆದುಕೊಂಡಿರುವ ಅಜನೀಶರ ಸಂಗೀತ ಖುಷಿ ಕೊಡುತ್ತದೆ. ಕೊನೆಗೆ ಶ್ರೇಯಾಗೆ hats off  ಹೇಳುತ್ತದೆ ಮನಸ್ಸು.  ಈ ಹಾಡನ್ನು ನೋಡಿ

The Final Countdown: ಮೊದಲೇ ಹೇಳಿದಂತೆ ಇಲ್ಲಿನ ಪ್ರತಿಯೊಂದು ಹಿನ್ನಲೆ ಸಂಗೀತವೂ, ಪ್ರತಿಯೊಂದು ಟ್ರ್ಯಾಕ್ಕೂ ಯಾವುದೋ ಒಂದು ಕಥೆಯನ್ನೋ ಘಟನೆಯನ್ನೋ ತೀವ್ರವಾಗಿ ಹೇಳುತ್ತಾ ಹೋಗುತ್ತದೆ. ಈ ಟ್ರ್ಯಾಕ್ ಸಂಗೀತವೂ ಅದರಿಂದ ಹೊರತಾಗಿಲ್ಲ. ನಿರ್ದೇಶಕ ರಕ್ಷಿತ್ ಸಂಗೀತದಲ್ಲೇ ಕಥೆಯನ್ನು ಮುನ್ನಡೆಸುವ ನಿರ್ಧಾರ ಮಾಡಿದಂತಿದೆ.

ಉಳಿದವರು ಕಂಡಂತೆ : ಎಲ್ಲಾ ಗೀತೆಗಳ ನಂತರ ಉಳಿದುಕೊಂಡಂತೆ ಬರುವ ಈ ಗೀತೆಗೆ ಸುನಿಯವರ ಸಾಹಿತ್ಯ ಸಕ್ಕತ್ತಾಗಿಯೇ ಒದಗಿ ಬಂದಿದೆ.ಮಿಕ್ಕೆಲ್ಲಾ ಗೀತೆಗಳಲ್ಲಿ ಇನ್ನೇನಾದರೂ ಉಳಿದುಕೊಂಡಿದ್ದರೆ ತಗ್ಗೊಳ್ಳಿ ಎಂಬಂತಿದೆ ಈ ಗೀತೆ. ಸ್ವತ: ಅಜನೀಶ್ ಲೋಕನಾಥ್ ರ ಧ್ವನಿ ಭಿನ್ನವಾಗಿದ್ದೂ ಗೀತೆಗೆ ಪೂರಕವಾಗಿದೆ.

ಉಳಿದವರು ಕಂಡಂತೆ ಟೈಟಲ್ ಟ್ರ್ಯಾಕ್ : "ಡೀಸಲ್ ಗಾಡಿ ಪೆಟ್ರೋಲ್ ಅಲ್ಲಿ ಓಡೊಲ್ವಂತೆ : ಟ್ರೈ ಮಾಡಿ ನೋಡೋಕೆ ಇವರಿಗೇನು ಧಾಡಿಯಂತೆ" ಎಂಬ ಯೋಗರಾಜ ಭಟ್ಟರ ಸಾಲು ಈ ಗೀತೆಗೆ ಹೇಳಿ ಮಾಡಿಸಿದಂತಿದೆ. ಸಾಹಿತ್ಯ, ಸಂಗೀತ, ಗಾಯನ ಎಲ್ಲದರಲ್ಲೂ ತುಂಟತನ, ಹೊಸತನ ಬೆರೆಸಿ ಟ್ರೈ ಮಾಡಿ ನೋಡಲಾಗಿದೆ ಹಾಗೂ ಅದರಿಂದಲೇ ಇಷ್ಟವೂ ಆಗುತ್ತದೆ.  A Fitting finish to the album.

http://kannada.oneindia.in/movies/music/audio-review-of-kannada-movie-ulidavaru-kandante-081825.html

-ಪ್ರಶಾಂತ್ ಇಗ್ನೇಷಿಯಸ್

Monday, 30 December 2013

ಆಡಿಯೋ ಅನಿಸಿಕೆ : ನಿನ್ನಿಂದಲೇ

ಪುನೀತ್ ಚಿತ್ರ ಜೀವನದಲ್ಲಿ ಮೈಲಿಗಲ್ಲಾದ ಮಿಲನ ಚಿತ್ರದ ’ನಿನ್ನಿಂದಲೇ’ ಹಾಡಿನ ಮೊದಲ ಸಾಲನ್ನೇ ಶೀರ್ಷಿಕೆಯಾಗಿಸಿಕೊಂಡ ’ನಿನ್ನಂದಲೇ’ ಚಿತ್ರ ತನ್ನ ಹೆಸರಿಂದಲೇ ಚಿತ್ರ ರಸಿಕರನ್ನು ಸೆಳೆದುಕೊಳ್ಳುತ್ತಿದ್ದಂತೆ, ಆಗಾಗ ಬಿಡುಗಡೆಯಾಗುತ್ತಿರುವ ಚಿತ್ರದ ಸ್ಟಿಲ್ ಗಳಿಂದಾಗಿ ಚಿತ್ರದ ಬಗೆಗಿನ ನಿರೀಕ್ಷೆ ಮತ್ತಷ್ಟು ಹಿಗ್ಗಿದೆ. ಪುನೀತ್ ಚಿತ್ರವೆಂದ ಮೇಲೆ ಅದರಲ್ಲಿನ ಹಾಡುಗಳ ಬಗ್ಗೆ ಕಾತುರ ಇದ್ದೆದ್ದೇ. ಅಪ್ಪು ಚಿತ್ರಗಳಲ್ಲಿನ ಬೇರೆ ಎಲ್ಲ ಅಂಶಗಳಷ್ಟೇ ಪ್ರಮುಖವಾದದ್ದು ಚಿತ್ರದ ಸಾಹಸ ದೃಶ್ಯಗಳು ಹಾಗೂ ಹಾಡುಗಳು. ಮಕ್ಕಳ ಹಾಗೂ ಯುವಕರ ಪಾಲಿಗಂತೂ ಅಪ್ಪು ಈ ಎರಡು ಅಂಶಗಳಿಂದಾಗಿಯೇ ಫೇವರೇಟ್. 2013ರಲ್ಲಿ ಪುನೀತ್ ನ ಯಾವುದೇ ಚಿತ್ರ ಬಿಡುಗಡೆ ಆಗದೆ ನಿರಾಸೆಯಲ್ಲಿದ್ದ ಅವರ ಅಭಿಮಾನಿಗಳ ಪಾಲಿಗೆ ಸ್ವಲ್ಪ ಸಮಾಧಾನವೆಂಬಂತೆ ನಿನ್ನಿಂದಲೇ ಧ್ವನಿಸುರಳಿ ಬಿಡುಗಡೆಯಾಗಿದೆ. ಸಿ.ಡಿ. ಗಳು ಭರದಿಂದ ಮಾರಾಟವಾಗುತ್ತಿರುವ ಸುದ್ದಿ ಇದ್ದು, ಅಭಿಮಾನಿಗಳು ಖುಷಿಯಾಗಿದ್ದಾರೆ. ಅದರೂ ಹಾಡುಗಳನ್ನು ಕೇಳಿದಾಗ ಇನ್ನೂ ಏನೋ ಬೇಕಿತ್ತು ಎಂಬ ಭಾವ ಕಾಡುತ್ತದೆ. ಇತ್ತೀಚಿನ ಕನ್ನಡ ಚಿತ್ರ ಗೀತೆಗಳಲ್ಲಿನ ಸೃಜನಶೀಲತೆ, ಪುನೀತ್ ಹಾಡುಗಳಿಗೆ ಇರುವ ಜನಪ್ರಿಯತೆ, ನಿರೀಕ್ಷೆಯ ಹಿನ್ನಲೆಯಲ್ಲಿ ಮಣಿಶರ್ಮ ಮತ್ತಷ್ಟು ಶ್ರಮವಹಿಸಬಹುದಿತ್ತೇನೋ ಎನಿಸುತ್ತದೆ.


ಡೋಂಟ್ ಕೇರ್ : ಕವಿರಾಜ್ ಸಾಹಿತ್ಯದ ವಿಶಾಲ್ ದದ್ಲಾನಿ ಹಾಡಿರುವ ಈ ಗೀತೆ ನೃತ್ಯಕ್ಕಾಗಿಯೇ ಸಂಯೋಜಿಸಿದಂತಿದೆ. ಈ ಹಾಡಿಗೆ ಪುನೀತ್ ಹೇಗೆ ನೃತ್ಯ ಮಾಡಿರಬಹುದು ಎಂಬದಷ್ಟೇ ಮುಂದಿನ ಕುತೂಹಲ. ವಿಶಾಲ್ ಗಾಯನದಲ್ಲಿ ಅಂಥಾ ವಿಶೇಷತೆ ಎನಿಲ್ಲ. ವೇಗದ ಧಾಟಿಯಲ್ಲಿ ಇರುವುದರಿಂದ ಕವಿರಾಜರ ಸಾಹಿತ್ಯಕ್ಕೂ ಹೆಚ್ಚಿನ ಅವಕಾಶ ಸಿಕ್ಕಿಲ್ಲ.

ನೀನು ಇರುವಾಗ : ಕಾರ್ತಿಕ್ ಹಾಗೂ ಅನುರಾಧ ಭಟ್ ಹಾಡಿರುವ ಈ ಸುಮಧುರ ಹಾಡಿಗೆ ಕಲ್ಯಾಣ್ ಉತ್ತಮವಾದ ಸಾಹಿತ್ಯವನ್ನು ಒದಗಿಸಿದ್ದಾರೆ. ಪ್ರೇಮಿಗಳ ಆಶಯ ಹಾಗೂ ತೊಳಲಾಟವನ್ನು ಸಾಹಿತ್ಯ ಮಾತ್ರವಲ್ಲದೆ ರಾಗದ ಮೂಲಕವೂ ಉತ್ತಮವಾಗಿ ಹಿಡಿದಿಡುವಲ್ಲಿ ಸಂಗೀತ ನಿರ್ದೇಶಕ ಮಣಿಶರ್ಮ ಸಫಲವಾಗಿದ್ದಾರೆ. ಅನುರಾಧ ಭಟ್ಟರ ಧ್ವನಿ ಅಪ್ತವಾಗಿದ್ದೂ, ಅನುರಾಧ ಚಿತ್ರದಿಂದ ಚಿತ್ರಕ್ಕೆ ಮತ್ತಷ್ಟು ಭರವಸೆ ಮೂಡಿಸುತ್ತಾರೆ. 

ಮೌನ ತಾಳಿತು : ಮೌನ ತಾಳಿತು ಎಂಬ ಹೆಚ್ಚಿನ ಅಬ್ಬರವಿಲ್ಲದ ಗೀತೆಗೆ ಜಯಂತ್ ಕಾಯ್ಕಿಣಿಯವರ ಸಾಹಿತ್ಯ ಪೂರಕವಾಗಿದೆ. ಚಿತ್ರದಲ್ಲಿನ ದು:ಖದ ಸನ್ನಿವೇಶದಲ್ಲಿ ಬರಬಹುದು ಎಂಬಂತಿರುವ ಹಾಡು ಪರದೆಯ ಮೇಲೆ ಮತ್ತಷ್ಟು ಇಷ್ಟವಾಗಬಹುದೇನೋ. ಗಾಯಕ ಅರ್ಜಿತ್ ಸಿಂಗ್ ಧ್ವನಿ ಚೆನ್ನಾಗಿದ್ದರೂ ಯಾರೇ ಹಾಡಿದ್ದರೂ  ವಿಭಿನ್ನವಾದ ರಾಗದ ಧಾಟಿಯಿಂದಾಗಿ ಕೇಳುತ್ತಾ ಕೇಳುತ್ತಾ ಕೇಳುಗರಿಗೆ ಇಷ್ಟವಾಗಬಹುದಾದ ಗೀತೆಯಿದು. 

ನಿಂತೆ ನಿಂತೆ : ಧ್ವನಿ ಸುರಳಿಯ ಅತ್ತ್ಯುತ್ತಮ ಗೀತೆ ಎನ್ನಬಹುದು. ವಿಜಯ್ ಪ್ರಕಾಶ್ ಎಂದಿನಂತೆ ತಮ್ಮ ಧ್ವನಿ ಹಾಗೂ ಶೈಲಿಯಿಂದಾಗಿ ಹಾಡನ್ನು ತಮ್ಮದಾಗಿಸುಕೊಳ್ಳುವುದು ಮಾತ್ರವಲ್ಲದೆ ಕೇಳುಗರನ್ನು ಆವರಿಸಿಕೊಳ್ಳುತ್ತಾರೆ. ಚಿನ್ಮಯಿ ಹಾಗೂ ಸುಧಾಮಯಿ ಸಹಾ ಉತ್ತಮವಾಗಿ ಧ್ವನಿಗೂಡಿಸಿದ್ದಾರೆ, ನಡು ನಡುವೆ ಬರುವ ಇಂಗ್ಲೀಷ್ ಕೋರಸ್ ಉತ್ತಮವಾಗಿದೆ. ಕವಿರಾಜರ ಸಾಹಿತ್ಯವೂ ಗೀತೆಗೆ ಮೆರಗನ್ನು ತಂದುಕೊಟ್ಟಿದೆ.

ಹಾರು ಹಾರು : ಸರಳವಾದರೂ ವಿಭಿನ್ನವಾದ ಈ ಹಾಡಿಗೆ ಸ್ವೀಕಾರ್ ಹಾಗೂ ಚೈತ್ರ ಧ್ವನಿಗೂಡಿಸಿದ್ದಾರೆ. ಕವಿರಾಜ್ ರ ಸಾಹಿತ್ಯ ಅಗತ್ಯಕ್ಕೆ ತಕ್ಕಂತಿದೆ. ಮಣಿಶರ್ಮರ ವಾದ್ಯ ಸಂಯೋಜನೆಯಲ್ಲಿ ಹೊಸತೇನಿಲ್ಲ.

ಭೋಲೊ ಭಂ : ಡಾ.ನಾಗೆಂದ್ರ ಪ್ರಸಾದರ ಸಾಹಿತ್ಯವಿರುವ ಗೀತೆಗಲಲ್ಲಿ ಕೇಳ ಸಿಗುವ ಲವಲವಿಕೆ, ತುಂಟತನಗಳಿರುವ ಮತ್ತೊಂದು ಯುಗಳ ಗೀತೆ. ಕಾರ್ಥಿಕ್ ಹಾಗೂ ಶ್ರವನ್ ಭಾರ್ಗವಿ ಲವಲವಿಕೆಯಿಂದಲೇ ಹಾಡಿದ್ದಾರೆ. ಹಾಡಿನ ಧಾಟಿ ಹಾಗೂ ವೇಗಕ್ಕೆ ತೆಲುಗು ಗೀತೆಗಳ ಗುಣವಿದೆ. ಪುನೀತ್ ನೃತ್ಯವನ್ನು ಈ ಹಾಡಿನ ಮೂಲಕ ಕಣ್ಣು ತುಂಬಿಕೊಳ್ಳಬೇಕು ಎಂಬ ಭರವಸೆ ಹಾಗೂ ಆಸೆಯನ್ನು ಮೂಡಿಸುವ ಗೀತೆ.

-ಪ್ರಶಾಂತ್ ಇಗ್ನೇಷಿಯಸ್

Wednesday, 25 December 2013

ಕ್ರಿಸ್ಮಸ್

ಡಿಸೆಂಬರ್ ತಿಂಗಳು ಬರುತ್ತಿದ್ದಂತೆ ವರ್ಶಪೂರ್ತಿ ಮನೆಯ ಮೂಲೆಯಲ್ಲಿ ಮುದುಡಿಕೊಂಡಿದ್ದ ಕಂಬಳಿಗಳು ಅರಳಿಕೊಳ್ಳುತ್ತವೆ. ಚುಮು ಚುಮು  ಚಳಿಯ ಜೊತೆಯಲ್ಲೇ ಅನೇಕ ಬೆಚ್ಚನೆಯ ನೆನಪುಗಳೂ ಗರಿಗೆದರುತ್ತವೆ. ಈ ನೆನಪುಗಳಲ್ಲಿ ಕ್ರಿಸ್ ಮಸ್ ಹಬ್ಬದೂ ದೊಡ್ಡ ಪಾತ್ರವೇ. ದೂರದಲೆಲ್ಲೋ ಕೇಳಿ ಬರುವ ಕ್ರಿಸ್ ಮಸ್ ನ ಕ್ಯಾರೋಲ್ ಹಾಡು, ಗಿಜಿ ಗಿಜಿ ರಸ್ತೆಯ ಆಚೆಗೆ ದೀಪಗಳಿಂದ ಕಂಗೊಳಿಸುವ ಯಾವುದೋ ಚರ್ಚ್, ಸ್ವಲ್ಪ ಇಣುಕಿ ನೋಡಿದರೆ ಒಳಗೆ ಕಾಣ ಸಿಗುವ ಅಲಂಕೃತ ಗೋದಲಿ, ಎತ್ತರದಲ್ಲಿ ಕಟ್ಟಿರುವ ತಾರೆ, ಅಂಗಡಿಗಳಲ್ಲಿ ತೂಗಿ ಹಾಕಿರುವ ಬಣ್ಣ ಬಣ್ಣದ ಅಲಂಕಾರದ ವಸ್ತುಗಳು, ಮಳಿಗೆಗಳ ಬಾಗಿಲಲ್ಲಿ ಸ್ವಾಗತ ಮಾಡುತ್ತಿರುವ ಬಿಳಿಯ ಗಡ್ಡಧಾರಿ ಕ್ರಿಸ್ ಮಸ್ ತಾತ,  ಇವೆಲ್ಲವೂ ಡಿಸೆಂಬರ ಚಳಿಗೆ ತಳಕುಗೊಂಡ ದೃಶ್ಯಗಳು. ಹಾಗೆ ನೋಡಿದರೆ ಇಡೀ ವಿಶ್ವದಲ್ಲಿ ವಿಶಿಶ್ಟ ರೀತಿಯಲ್ಲಿ ಅಚರಿಸಲಾಗುವ ಕ್ರಿಸ್ಮಸ್ ಸಮಯದಲ್ಲಿ ಒಂದು ಮಾಯಲೋಕವೇ ಸ್ರುಶ್ಟಿಯಾದಂತೆ ಕಾಣಿಸುತ್ತದೆ.ಇತ್ತೀಚೆಗಂತೂ ಆಡಂಬರದ ಪಾಶ್ಚಾತ್ಯ ಶೈಲಿಯೇ ವಿಶ್ವದ ಎಲ್ಲೆಡೆ ಹಬ್ಬುತ್ತಿದೆ. ವ್ಯಾಪಾರೀಕರಣದ ಕದಂಬ ಬಾಹುಗಳು ಕ್ರಿಸ್ಮಸ್ ನ ಆಚರಣೆಯ ಸುತ್ತ ಹಬ್ಬಿಕೊಳ್ಳುತ್ತಿದ್ದರೂ, ಕ್ರಿಸ್ಮಸ್ ನ ನಿಜವಾದ ಆಚರಣೆಗಳು ಬಹಳ ಅರ್ಥಗರ್ಭಿತ. ಕ್ರಿಸ್ಮಸ್ ಸಮಯದಲ್ಲಿ ನೋಡಲು ಸಿಗುವ ಗೋದಲಿ, ನಕ್ಷತ್ರ, ಸ್ಯಾಂಟ ಕ್ಲಾಸ್, ದೇವ ದೂತರುಗಳು ಎಲ್ಲಕ್ಕೂ ತನ್ನದೇ ಅರ್ಥವಿದೆ. 

ಕ್ರಿಸ್ಮಸ್ ನ ಹಿನ್ನಲೆಯನ್ನು ತಿಳಿಯಲು ಬೈಬಲ್ ನಲ್ಲಿ ಯೇಸು ಕ್ರಿಸ್ತನ ಜನನದ ಸುತ್ತ ನಡೆಯುವ ಘಟನೆಗಳತ್ತ ಕಣ್ಣಾಡಿಸಿದರೆ, ಅದೊಂದು ಮನಮೋಹಕವಾದ ದ್ರುಶ್ಯ ಕಾವ್ಯದಂತೆ ಕಾಣಿಸುತ್ತದೆ. ದ್ವೇಶ, ಅಶಾಂತಿ, ದೌರ್ಜನ್ಯ, ಅಸಮತೆಯಿಂದ ಬಳಲುತ್ತಿದ್ದ ಜಗತ್ತಿಗೆ ದೇವರು ಯೇಸುವಿನ ರೂಪದಲ್ಲಿ ತಮ್ಮ ಮಗನನ್ನೇ ಕಳುಹಿಸುತ್ತಾರೆ ಎಂಬುದು ತಿರುಳಾದರೂ ದೇವರ ಪುತ್ರ ಸಾಮಾನ್ಯರಲ್ಲಿ ಸಾಮಾನ್ಯನಾಗಿ ಒಂದು ದನಗಳು ವಾಸಿಸುವ ಗೋದಲಿಯಲ್ಲಿ ಜನಿಸಿದ ಎಂಬುದು ದೀನತೆಯ ಪ್ರತೀಕವಾಗಿದೆ. ಇದೇ ದೀನತೆ, ಕ್ಷಮೆ, ಸಹನೆಯ ಸಂದೇಶವನ್ನು ಯೇಸು ಮುಂದೆ ಬೋದಿಸಿದರು ಎಂಬುದಕ್ಕೆ ಈ ಗೋದಲಿ ಮುನ್ನುಡಿಯಾಗುತ್ತದೆ. ಅಂತೆಯೇ ಜನರನ್ನು ರಕ್ಷಿಸುವ ಉದ್ಧಾರಕ ಬಂದಾಗ ಪೂರ್ವ ದಿಕ್ಕಿನಲ್ಲಿ ತಾರೆಯೊಂದು ಕಾಣಿಸುತ್ತದೆ ಎಂಬ ಪ್ರವಾದನೆ ಯೇಸು ಹುಟ್ಟಿದ್ದಾಗ ನಿಜವಾಗುತ್ತದೆ. ಪ್ರಜ್ವಲವಾಗಿ ಹೊಳೆಯುತ್ತಿದ್ದ ಆ ತಾರೆಯೇ ಜನರಿಗೆ ಯೇಸು ಹುಟ್ಟಿದ ಸಂದೇಶವನ್ನು ಸಾರಿದ್ದಲ್ಲದೆ, ಗೋದಲಿಗೆ ದಾರಿಯನ್ನೂ ತೋರಿಸಿತು ಎನ್ನುತ್ತದೆ ಬೈಬಲ್. ಇದೇ ಸಂಕೇತವಾಗಿ ಇಂದಿಗೂ ಕ್ರಿಸ್ಮಸ್ ಸಮಯದಲ್ಲಿ ಬಣ್ಣ ಬಣ್ಣದ ತಾರೆಗಳು ಕ್ರೈಸ್ತರ ಮನೆಗಳ ಮೇಲೆ ರಾರಾಜಿಸುತ್ತವೆ. ಯೇಸು ಹುಟ್ಟಿದ ಸಂತೋಷದ ವಾರ್ತೆಯನ್ನು ಆ ಸಮಯದಲ್ಲಿ ದೇವ ದೂತರುಗಳು ಆಕಾಶದಲ್ಲಿ ಹಾಡುಗಳ ಮೂಲಕ ಎಲ್ಲೆಡೆ ಸಾರಿದರರು ಎನ್ನುವುದರ ಸಂಕೇತವಾಗಿ ಮನೆ ಮನೆಗೆ ಹೋಗಿ ಕ್ರಿಸ್ಮಸ್ ಹಾಡುಗಳನ್ನು ಹಾಡುವ ಸಂಪ್ರದಾಯ ಇಂದಿಗೂ ಮುಂದುವರಿದಿದೆ. ಇಷ್ಟೆಲ್ಲದರ ನಡುವೆಯೇ ಜೀವನದುದ್ದಕ್ಕೂ ಶಾಂತಿ, ಪ್ರೀತಿ, ಸಹನೆ, ಕ್ಷಮೆಯ ಸಂದೇಶವನ್ನು ತನ್ನ ನಡೆ ನುಡಿಯಿಂದ ಬೋಧಿಸಿದ ಯೇಸು ಕ್ರಿಸ್ತನನ್ನು ಕಂದನಾಗಿ, ಮನೆಯ ಮಗುವಾಗಿ, ಅನಂದ ತರುವ ಬಂದುವಾಗಿ, ಕತ್ತಲನನ್ನು ಹೋಗಲಾಡಿಸುವ ದಿವ್ಯ ಬೆಳಕ್ಕಾಗಿ ನೆನಪಿಸಿಕೊಳ್ಳುವ ಸುಸಮಯ ಈ ಕ್ರಿಸ್ಮಸ್.

ಇನ್ನೂ ಸ್ಯಾಂಟ ಕ್ಲಾಸ್ ದೇ ಮತ್ತೊಂದು ಕಥೆ. 4ನೇ ಶತಮಾನದಲ್ಲಿ ಈಗಿನ ಟರ್ಕಿ ದೇಶದಲ್ಲಿದ್ದ ನಿಕೋಲೇಸ್ ಎಂಬ ವ್ಯಕ್ತಿಗೆ ಬಡವರನ್ನು ಕಂಡರೆ ಬಹಳ ಪ್ರೀತಿ. ಬಡವರಿಗೆ ಉಡುಗೊರೆಗಳನ್ನು ಕೊಡುವುದು ಅವರಿಗೆ ಇಷ್ಟವಾದ ಕೆಲಸ. ಅದನ್ನು ಯಾರಿಗೂ ಗೊತ್ತಾಗದ ಹಾಗೆ ಮಾಡುತ್ತಿದ್ದದ್ದು ಅವರ ವಿಶೇಶತೆ. ಬಡವನ ಮನೆಯ ಹೊರಗಿನ ಪಾದರಕ್ಷೆಗಳಲ್ಲಿ ನಾಣ್ಯವನ್ನು ಇಡುವುದು, ಹೊಗೆ ಗೂಡಿನಿಂದ ಉಡುಗೊರೆಗಳನ್ನು ಚೆಲ್ಲುವುದು, ಈ ರೀತಿಯಾಗಿ ಗೌಪ್ಯವಾಗಿ ಮಾಡುತ್ತಿದ್ದ ನಿಕೋಲೇಸ್ ಮಾಡುತ್ತಿದ ಸಹಾಯವನ್ನು ಅವರು ಸತ್ತ ಮೇಲೂ ಅವರ ಅಭಿಮಾನಿಗಳು ಮುಂದುವರಿಸಿಕೊಂಡು ಬಂದರು ಎನ್ನುತ್ತದೆ ಮಾಹಿತಿಗಳು. 19ನೇ ಶತಮಾನದಲ್ಲಿ ಅಮೇರಿಕಾದ ಕಲಾವಿದನೊಬ್ಬ ಈ ಸ್ಯಾಂಟ ಎಂಬ ಕಲ್ಪನೆಗೆ ಈಗಿರುವ ರೂಪ ಕೊಟ್ಟ ಫಲವಾಗಿ ಈಗ ಕೆಂಪು ಬಣ್ಣದ ಸ್ಯಾಂಟ ನ ರೂಪ ಜನಪ್ರಿಯವಾಗಿದೆ. ಇಂತಹ ಮಾನವೀಯ ಗುಣದ ಸ್ಯಾಂಟವನ್ನು ಇಂದಿನ ವ್ಯಾಪಾರಿ ಜಗತ್ತು ಒಬ್ಬ ಮಾರಾಟ ವ್ಯಕ್ತಿಯಾಗಿ ಬಳಸಿಕೊಳ್ಳುತ್ತಿರುವುದು ದು:ಖಕರವಾದರೂ ಮಕ್ಕಳ ಮನಸ್ಸಿನಲ್ಲಿ ಸ್ಯಾಂಟ ವ್ಯಾಪಾರವನ್ನು ಮೀರಿದ ಮುದ್ದಿನ ತಾತನೇ.

ಎಲ್ಲಾ ಸಂಸ್ಕ್ರುತಿ, ದೇಶ, ಭಾಷೆಗಳೂ ತಮ್ಮದೇ ಆದ ರೀತಿಯಲ್ಲಿ ಕ್ರೈಸ್ತ ಧರ್ಮ ಹಾಗೂ ಕ್ರಿಸ್ಮಸ್ ಅನ್ನು ಆಚರಿಸುವಂತೆ ನಮ್ಮ ಕರ್ನಾಟಕದ ಕ್ರೈಸ್ತರೂ ತಮ್ಮದೇ ಆದ ಸ್ಥಳೀಯ ಆಚಾರ ವಿಚಾರದೂಂದಿಗೆ ಕ್ರಿಸ್ಮಸ್ ಆಚರಿಸುತ್ತಾರೆ. ಕನ್ನಡದ ಕ್ರಿಸ್ಮಸ್ ಗೀತೆಗಳಲ್ಲಿ ಕನ್ನಡದ ಜಾನಪದ ಮಿಳಿತವಾಗಿರುವ ಪರಿಯನ್ನು ಕೇಳಿಯೇ ಆನಂದಿಸಬೇಕು. ಚರ್ಚುಗಳಲ್ಲಿನ ಕನ್ನಡದ ಪ್ರಾರ್ಥನೆಗಳಲ್ಲಿ ನಾಡು ಹಾಗೂ ನಾಡಿನ ಜನರಿಗಾಗಿ ಪ್ರಾರ್ಥನೆ ಎಂದಿಗೂ ಮೀಸಲು.  ಕ್ರೈಸ್ತರ ಮನೆಗಳಲ್ಲಿ ಮಾಡಲಾಗುವ ಕ್ರಿಸ್ಮಸ್ ತಿಂಡಿಗಳಲ್ಲಿ ರವೆ ಉಂಡೆ, ಚಕ್ಕಲಿ, ಖರ್ಜಿಕಾಯಿ,ಮುರುಕು, ಕಜ್ಜಾಯಗಳದ್ದೇ ಕಾರುಬಾರು. ಇದರ ಜೊತೆ ಕೇಕ್, ಕಲಕಲ, ರೋಸ್ ಕುಕ್ ನದೂ ಪಾಲುಗಾರಿಕೆ. ಮನೆಗಳಲ್ಲಿ ಅಲಂಕಾರಗೊಳ್ಳುವ ಗೋದಲಿಯಲ್ಲಿ ದಸರಾ ಬೊಂಬೆಗಳ ರೀತಿಯದೇ ಮೆರಗು. ಮನೆ ಮುಂದೆ ಅರಳುವ ರಂಗೋಲಿಯಲ್ಲಿ ’ಹ್ಯಾಪಿ ಕ್ರಿಸ್ಮಸ್’ ಎಂಬ ಹಾರೈಕೆ. ಮನೆಗಳಿಗೆ ತಿಂಡಿ ತಿನ್ನಲು ಬರುವ ಅಕ್ಕ ಪಕ್ಕದ ಮನೆಯ ಮಕ್ಕಳ ಕಲರವಕ್ಕೆ ಜಾತಿ ಮತಗಳ ಹಂಗಿಲ್ಲ.

ಹೀಗೆ ಇಡೀ ವಿಶ್ವವೇ ಜಾತಿ ಮತಗಳ ಬೇಧವಿಲ್ಲದೆ ಆಚರಿಸುವ ಕ್ರಿಸ್ಮಸ್ ನ ಹಬ್ಬದ ತಿರುಳಿರುವುದು ಶಾಂತಿ ಪ್ರೀತಿ ಹಾಗೂ ದೀನತೆಯ ಸಂದೇಶದಲ್ಲೇ. ಇದೇ ಶಾಂತಿ ಪ್ರೀತಿ ಸಹನೆ ದೀನತೆ  ನಮ್ಮ ಪ್ರತಿ ದಿನವನ್ನೂ ಹಬ್ಬವಾಗಿ ಮಾರ್ಪಡಿಸಲಿ, ಯೇಸುವಿನ ಸಂದೇಶಗಳು ನಮ್ಮ ಮನಸ್ಸೆಂಬ ಗೋದಲಿಯಲ್ಲಿ ಸದಾ ನೆಲೆಗೊಳ್ಳಲ್ಲಿ ಎನ್ನುವುದರಲ್ಲಿದೆ ಕ್ರಿಸ್ಮಸ್ ನ ಸಾರ್ಥಕತೆ.

-ಪ್ರಶಾಂತ್ ಇಗ್ನೇಷಿಯಸ್

Monday, 16 December 2013

ಆಡಿಯೋ ಅನಿಸಿಕೆ : ಶ್ರಾವಣಿ ಸುಬ್ರಮಣ್ಯ

ಮಳೆ ನಿಂತರೂ ಹನಿ ಜಾರಿಯಲ್ಲಿರುವಂತೆ ಗಣೇಶ್ ಚಿತ್ರವೆಂದ ಮೇಲೆ ಮುಂಗಾರು ಮಳೆಯ ಹಾಡುಗಳ ನೆನಪಿಗೆ ಕೊನೆಯಿಲ್ಲ. ಅದರಿಂದಲೇ ಸಹಜವಾಗಿ ಗಣೇಶ್ ಚಿತ್ರಗಳ ಹಾಡುಗಳ ಬಗ್ಗೆ ಒಂದು ಕುತೂಹಲ ಜಾರಿಯಲ್ಲಿ ಇದ್ದೇ ಇರುತ್ತದೆ. ಅದೇ ಕುತೂಹಲದಿಂದ ಹರಿಕೃಷ್ಣ ಸಂಗೀತ ನಿರ್ದೇಶನದ, ಮಂಜು ಸ್ವ್ರರಾಜ್ ರ ಶ್ರಾವಣಿ ಸುಬ್ರಮಣ್ಯ ಚಿತ್ರದ ಹಾಡುಗಳನ್ನು ಕೇಳಿದಾಗ ನಿರಾಸೆ ಆಗವುದಿಲ್ಲ.  ಆದರೂ ಹರಿ ಸಂಗೀತ ನಿರ್ದೇಶನದ ಹಾಡುಗಳಲ್ಲಿನ ಲವಲವಿಕೆ ಹಾಗೂ ಹೊಸತನ ಇಲ್ಲಿ ಸ್ವಲ್ಪ ಮಟ್ಟಿಗೆ ಕಾಣೆಯಾಗಿದೆ ಎಂದೇ ಹೇಳಬಹುದು.  ಇತ್ತೀಚಿನ ಚಿತ್ರಗಳಲ್ಲಿನ ಸಿದ್ಧ ಸೂತ್ರದಲ್ಲೇ ಹಾಡುಗಳು ಮೂಡಿ ಬಂದಿದೆ ಎಂದರೆ ತಪ್ಪಾಗಲಾರದು. ಹಾಗಾದರೆ ಹೇಗಿದೆ ಹಾಡುಗಳು? 

ಅಕ್ಕಲ್ ಬೆಣ್ಣೆ : ಕೃಷ್ಣೇ ಗೌಡರ ಸಾಹಿತ್ಯದಲ್ಲಿ ಮೂಡಿ ಬಂದಿರುವ ಈ ಹಾಡು ಮಾಸ್ ಪ್ರೇಕ್ಷಕರಿಗಾಗಿಯೇ ಸಿದ್ಧವಾದಂತಿದ್ದೆ. ಹರಿ ಉತ್ತಮವಾಗಿ ಸಂಗೀತ ನೀಡಿರುವ ಈ ಗೀತೆ ಕುಣಿತಕ್ಕೆ ಹೇಳಿ ಮಾಡಿಸಿದಂತಿದೆ. ಬಹಳ ದಿನಗಳ ನಂತರ ಹಾಡಿರುವ ಮಂಜುಳ ಗುರುರಾಜ್ ತಮ್ಮ ಹಿಂದಿನ ಗತ್ತನ್ನು ಉಳಿಸಿಕೊಂಡಿದ್ದಾರೆ. ಅವರ ಧ್ವನಿ ಹಾಗೂ ಹಾಡಿನಲ್ಲಿ  ನುಸುಳಿರುವ ಒಳಗೆ ’ಸೇರಿದರೆ ಗುಂಡು’ ಎಂಬ ಸಾಲುಗಳು ಹಳೆಯ ’ಗುಂಡಿನ’ ಹಾಡನ್ನೂ ಸೇರಿದಂತೆ 90ರ ದಶಕದ ಹಾಡುಗಳನ್ನು ನೆನಪಿಸುತ್ತದೆ. 

ನಿನ್ನ ನೋಡೋ : ಕನ್ನಡ ಸಿನಿಮಾ ಸಂಗೀತದಲ್ಲಿ made for each other ಎಂಬಂತೆ ಆಗಿ ಹೋಗಿರುವ ಸೋನು, ಹರಿ, ಗಣೇಶ್ ರ ಕಾಂಬಿನೇಶನಿನ್ನ ಮತ್ತೊಂದು ಗೀತೆ. ಕವಿರಾಜರ ಸಾಹಿತ್ಯವಿರುವ ಗೀತೆ ಕೇಳಲು ಮಧುರವಾಗಿದೆ ಎಂಬುದಕ್ಕಿಂತ ಹೆಚ್ಚೇನು ಹೇಳಲು ಸಾಧ್ಯವಿಲ್ಲವೇನೋ. ಈ ರೀತಿಯ ಹಾಡುಗಳಲ್ಲಿ ಪಳಗಿ ಹೋಗಿರುವ ಸೋನು ಹೆಚ್ಚಿನ ಶ್ರಮವಿಲ್ಲದೆ ಹಾಡಿದ್ದಾರೆ.

ನಗುವ ಮೊಗವ : ಹರಿಕೃಷ್ಣರ ಗೀತೆಗಳಲ್ಲಿನ ಜೀವಂತಿಕೆ ಈ ಗೀತೆಯಲ್ಲಿ ಕಾಣುತ್ತದೆ. ಕವಿರಾಜ್ ರ ಸಾಹಿತ್ಯಕ್ಕೆ ಧ್ವನಿಗೂಡಿಸಿರುವ ಸೋನು ಹಾಗೂ ನಂದಿತಾ ಹಾಡಿಗೆ ಮತ್ತಷ್ಟು ಜೀವ ತುಂಬಿದ್ದಾರೆ. ಉತ್ತಮವಾದ ವಾದ್ಯ ಸಂಯೋಜನೆ ಹಾಗೂ ಉತ್ತಮ ಗಾಯನವಿರುವ ಈ ಹಾಡನ್ನು ಕೇಳುತ್ತಿದ್ದರೆ ಎಲ್ಲೋ ಮೊದಲೇ ಕೇಳಿದಂತೆ ಅನಿಸಿದರೂ ಎಲ್ಲಿ ಎಂದು ತಟ್ಟನೆ ಗೊತ್ತಾಗದಿರುವುದೇ ಈ ಹಾಡಿನ ಹೆಗ್ಗಳಿಕೆ.

ಕಣ್ಣಲ್ಲೇ ಕಣ್ಣಿಟ್ಟು : ನಾಯಕ ನಾಯಕಿಯ ಪ್ರೇಮದ ಪರಿಯನ್ನು ವಿವರಿಸುವ ಹಾಡಿಗೆ ಶಾನ್ ಕಂಠವನ್ನು ಉತ್ತಮವಾಗಿ ಬಳಸಿಕೊಳ್ಳಲಾಗಿದೆ. ಡಾ.ನಾಗೆಂದ್ರ ಪ್ರಸಾದ್ ರಿಗೆ ಈ ರೀತಿಯ ಹಾಡಿನ ಸಾಹಿತ್ಯ ಕರತಲಾಮಲಕ. ಯುವಕ ಯುವತಿಯರಿಗೆ ಹೆಚ್ಚು ಪ್ರಿಯವಾಗಬಹುದಾದ ಗೀತೆ. ಚಿತ್ರದ ಕತೆಗೆ ಪೂರವಾಗಿರುವಂತಿದೆ ಈ ಹಾಡು.

-ಪ್ರಶಾಂತ್ ಇಗ್ನೇಷಿಯಸ್

Saturday, 30 November 2013

ರಕ್ಕಸ ರಸ್ತೆಗಳು

ರಸ್ತೆಗಳು ನಗರಗಳ ನರನಾಡಿಯಾಗಿರುತ್ತವೆ ಎಂದು ನಂಬಿದ್ದೇವೆ. ಉತ್ತಮ ರಸ್ತೆಗಳು ಅಭಿವೃದ್ಧಿಯ ಅಳೆತೆಗೋಲು. ರಸ್ತೆಗಳ ನಿರ್ವಹಣೆಯಲ್ಲಿ ಸ್ಥಳಿಯ ಸಂಸ್ಥೆಗಳು ಹೆಚ್ಚು ಕಾರ್ಯೊನ್ಮುಖವಾಗಿರಬೇಕು. ಅದರಲ್ಲೂ ದಿನೇ ದಿನೇ ತನ್ನ ಒಡಲನ್ನು ಉಬ್ಬಿಸಿಕೊಳ್ಳೂತ್ತಿರುವ ಬೆಂಗಳೂರು ಒಂದು ಕೋಟಿ ಜನಸಂಖ್ಯೆಯನ್ನು, ೪೫ ಲಕ್ಷ ವಾಹನಗಳನ್ನು ತನ್ನ ಉದರದಲ್ಲಿಟ್ಟುಕೊಂಡು ತೂಕಹೆಚ್ಚಿಸಿಕೊಳ್ಳುತಿದೆ. ಎನಿಲ್ಲವೆಂದರೂ ಪ್ರತಿದಿನ ೭೦೦ ಹೊಸ ವಾಹನಗಳ ನೊಂದಣಿಯಾಗುತಿದೆಯಂತೆ. ವ್ಯಕ್ತಿ ಮತ್ತು ವಾಹನಗಳ ಅನುಪಾತ ಗಮನಿಸಿದರೆ ಪ್ರತಿ ಇಬ್ಬರಿಗೆ ಒಂದು ವಾಹನ. ಅದು ದೆಹಲಿಯಲ್ಲಿ ೧:೪ ರಂತಿದೆ. ಬೆಂಗಳೂರಿನ ವಾಹನಗಳು ದೆಹಲಿಗಿಂತ ಎರಡುಪಟ್ಟು ವೇಗವಾಗಿ ರಸ್ತೆಯನ್ನು ಅಕ್ರಮಿಸಿಕೊಳ್ಳುತ್ತಿರುವುದ್ದನ್ನು ಇಲ್ಲಿ ಗಮನಿಸಬಹುದು. ಇಂತಹ ಸಂದರ್ಭದಲ್ಲಿ ರಸ್ತೆಗಳ ನಿರ್ವಹಣೆಗೆಂದೆ ಪ್ರತ್ಯೇಕ ಕಾರ್ಪರೇಶನ್ ಬೇಕಾದೀತು. ಅಂತಹುದರಲಿ ಇರುವ ಏಕೈಕ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅನ್ನೋ ನೀರಾನೆ  ಬಿದ್ದಲ್ಲೆ ಬೃಹದಾಕಾರವಾಗಿ ಗೊರಕೆ ಹೊಡೆದುಕೊಂಡು ಬಿದ್ದಿದೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ರಸ್ತೆಗಳಿಗೆ ಯಾವ ಸಂಸ್ಕಾರ, ಹಬ್ಬ ಹರಿದಿನಗಳು ಆಗಿಲ್ಲ. ಹೊಸ ಬಟ್ಟೆಗಳಿರಲಿ, ಹರಿದ ಹಳೆಬಟ್ಟೆಗೆ ತ್ಯಾಪೆ ಹಾಕುವ ಕೆಲಸವು ನಡೆಯಲಿಲ್ಲ. ಅಗಿದ್ದ ಸಣ್ಣ ಪುಟ್ಟ ಗಾಯಗಳು ಕೊಳೆತು ಕುಷ್ಟರೋಗಿಯಂತಾಗಿವೆ. ನೋಡಲಂತೂ ಇನ್ನಿಲದ ಹೇಸಿಗೆ ವಕ್ಕರಿಸಿ ಬರುತ್ತದೆ. ಮೊದಲೆ ಬೆಂಗಳೂರಿಗೆ ಟ್ರಾಫಿಕ್ ಜಾಮ್ ನಂತಹ ಉಬ್ಬಸ ರೋಗವಿದೆ. ಸಾಗದ ರಸ್ತೆಯಲ್ಲಿ ವಾಹನಗಳನ್ನು ಜಗ್ಗಿಸಿ ಜಗ್ಗಿಸಿ ತಳ್ಳುತ್ತಿರಬೇಕು. ರಸ್ತೆಗಳು ರಕ್ಕಸನ ಹಲ್ಲುಗಳಂತೆ ಜಲ್ಲಿಕಲ್ಲುಗಳನ್ನು ಹೊರಚಾಚಿ ಅರಚುತ್ತಿದ್ದರೆ ಪ್ರಯಾಣ ಅಸಹನೀಯ.
ಓಪನ್ ಗಂಗ್ನಂ ಸ್ಟೈಲ್ ಹಾಡು ಕೇಳಿರಬೇಕಲ್ಲವೇ?.. ಪ್ರಪಂಚದಾದ್ಯಂತ ಈ ಹಾಡು ಸೃಷ್ಟಿಸಿದ ಹುಚ್ಚು ಹೇಳತೀರದು. ದಕ್ಷಿಣ ಕೊರಿಯದ ಒಬ್ಬ ಪಾಪ್ ಸಂಗಿತಗಾರ ರಚಿಸಿ ಹಾಡಿದ ಈ ಕೊರಿಯನ್ ಗೀತೆಗೆ ಆತನೆ ನೃತ್ಯ ಮಾಡಿದ್ದಾನೆ, ಒಂದು ವಿಚಿತ್ರ ಭಂಗಿಯ ನೃತ್ಯವಿದು. ಗಂಗ್ನಂ ಹಾಡಿಗೆ ಹಾಕಿದ ಹೆಜ್ಜೆಗಳು ಎಬ್ಬಿಸಿದ ಧೂಳು ಇಡಿ ಪ್ರಪಂಚವನ್ನೆ ಆವರಿಸಿತು. ಅಚ್ಚರಿಯೆಂದರೆ ಒಬ್ಬ ಸಾಮಾನ್ಯನು ಕುಣಿದುಬಿಡಬಲ್ಲ ಆ ಕುಣಿತಕ್ಕೆ ಸಿಕ್ಕ ಮಾನ್ಯತೆ ಉಬ್ಬೆರಿಸುವಂತಹದ್ದೆ!. ’ಗಂಗ್ನಂ ಸ್ಟೈಲ್’ ಹೆಸರಿನಿಂದಲೆ ಆ ನೃತ್ಯ ಜಗತಿನಾದ್ಯಂತ ಸದ್ದು ಮಾಡಿತು. ಆ ನೃತ್ಯ ಹೇಗಿದೆ ಎಂದರೆ, ಬೆಂಗಳೂರಿನ ಅದಗೆಟ್ಟ ರಸ್ತೆಗಳಲ್ಲಿ ಓಡಾಡುವ ಬಸ್ಸು, ಆಟೊಗಳಲ್ಲಿ ಕುಳಿತವರು ಕುಳಿತಲ್ಲೆ  ಕುಲುಕುವಂತಿದೆ ಈ ಗಂಗ್ನಂ ಸ್ಟೈಲ್.
ಇತ್ತಿಚಿನಲ್ಲಾದ ಮಳೆಗೆ ತತ್ತರಿಸಿ ಹೋಗಿವೆ ನಮ್ಮ ರಸ್ತೆಗಳು. ಮೊದಲೆ ಅದಗೆಟ್ಟಿದ್ದ ರಸ್ತೆಗಳು ಮಳೆಯಿಂದ ಹಳ್ಳಕೊಳ್ಳದಂತಾಗಿವೆ. ಆನೇಕ ಕಡೆ ಕೇದರನಾಥನ ಕಾಶಿಯಲ್ಲಾದ್ದಂತೆ ಕಲ್ಲು ಮರಳಿನ ರಾಶಿ. ರಸ್ತೆಯ ಮೇಲೆ ಓಡಾಡುವ ಬೆಂಗಳೂರಿಗರು ಬೆಂಡಾಗಿ ಹೋಗಿದ್ದಾರೆ. ಆನೇಕ ಬಾರಿ ಈ ವಾಹನಗಳಲ್ಲಿ ಪ್ರಯಣಿಸುವುದಕ್ಕಿಂತ ನಡೆದುಕೊಂಡೆ ಹೋಗೊಣ ಎಂದೆಣಿಸುವುದುಂಟು. ಆದರೆ ನಡೆಯುವವನ ಪಡಿಪಾಟಿಲು ಅದಕ್ಕಿಂತ ಭಿನ್ನವಾಗಿಯೇನು ಇಲ್ಲ. ಸಾರ್ವಜನಿಕವಾಗಿ ಉಳಿದಿರುವ ಏಕೈಕ ಆಸ್ತಿ ’ಪಾದಚಾರಿ ರಸ್ತೆಗಳು’. ಅವು ಸಹ ಪಾನಿಪುರಿಯವನ, ಬೀಡಾ ಸ್ಟಾಲಿನ, ಗ್ಯಾರೆಜ್ ಗ್ರೀಸಿನ, ತರಕಾರಿ ಜಯಮ್ಮನ ಜಾಗವಾಗಿ ಬಿಟ್ಟಿದೆ. ಸಣ್ಣಪುಟ್ಟ ಅಂಗಡಿಗಳು ತನ್ನ ದುರಾಸೆಗೆ ನಾಲಿಗೆಯನ್ನು ಚಾಚಿ ರಸ್ತೆಗ್ಗೇ ಬಂದು ಕುಂತಿವೆ. ಹೀಗಾಗಿ ವಾಹನಗಳು, ಪಾದಚಾರಿಗಳು, ಒಟ್ಟೊಟ್ಟಿಗೆ ತೂರುವಂತಾಗಿದೆ. ಕೆಲವೆಡೆ  ಮಾನವನಿರ್ಮಿತ ಮುಗ್ಧ ದೇವರುಗಳು ಟ್ರಾಫಿಕ್ ಚೌಕಿ(ಐಲ್ಯಾಂಡ್)ನಂತೆ ರಸ್ತೆನಡುವಲ್ಲಿಯೆ ಚಕ್ಕಳಬಕ್ಕಳ ಹಾಕಿ ಕೂತುಬಿಟ್ಟಿದ್ದಾರೆ. ಅವರನ್ನು ಎಬ್ಬಿಸಿ ಕಳಿಸುವ ಧೈರ್ಯ ಮಾತ್ರ ಸರ್ಕಾರಕ್ಕೆ ಇಲ್ಲ. 
ಇಷ್ಟೆಲ್ಲ ದುಸ್ತರದ ನಡುವೆ, ಆಗಾಗ ಏರ್ಪಡುವ ವಿದೇಶ ಪ್ರವಾಸಗಳಿಂದಾಗಿ ಚೀನಾ, ಸಿಂಗಾಪುರ, ನ್ಯೂಯರ್ಕ್ ಸಿಟಿಗಳನ್ನು ಕಣ್ತುಂಬಿಕೊಂಡು ಬಂದು, ಅಲ್ಲಿನ ವ್ಯವಸ್ಥಿತ ಮೂಲಸೌಕರ್ಯಗಳಿಗೆ ಪ್ರಭಾವಿತರಾಗಿ ನಮ್ಮ ಪುರವನ್ನು ಸಿಂಗಾಪುರ, ಶಾಂಘೈ ಸಿಟಿಯನ್ನಾಗಿ ಮಾಡುತ್ತೇವೆ ಎಂದು ಅಬ್ಬರಿಸುವ ರಾಜಕಾರಣಿಗಳು, ಹೊಸದರಲ್ಲಿ ಕಿಸಿದು ಕಿಸಿದು ಒಗೆದ ಅಗಸನಂತೆ ಕಾಣುತ್ತಾನೆ. ಸಿಂಗಾಪುರ, ಚೀನಾವನ್ನು ಕಂಡುಬಂದ ಅವರೆಲ್ಲ ತಂತಮ್ಮ ಚೀಲ ತುಂಬಿಸಿಕೊಂಡು ಹೋದರೆ ಹೊರತು ಮತ್ತೆನು ಆಗಲಿಲ್ಲ. ಗುಂಡಿ ಬಿದ್ದ ರಸ್ತೆಗಳನ್ನು ಮುಚ್ಚಲಿಕ್ಕೆ ಚೀನಾದಿಂದ ಮಣ್ಣು ತರಬೇಕು? ಶಾಂಘೈ ಇರಲಿ ಮೊದಲು ಇದ್ದ ರಸ್ತೆಗಳನ್ನು ಸರಿಮಾಡಿಕೊಡಿ  ಸಾಕು ಎನ್ನುತ್ತಿದ್ದಾರೆ ಹತಾಶ ಜನತೆ.
ಪ್ರಜಾಪ್ರಭುತ್ವದಲ್ಲಿ ಪ್ರಜೆಗಳನ್ನೆ ದೇವರು ಎಂದು ಪೂಜಿಸುವ ರಾಜಕಾರಣಿಗಳು ಚುನಾವಣ ಸಮಯದಲ್ಲಿ ಮಾತ್ರ ಒಂದಷ್ಟು ರಸ್ತೆಗಳಲ್ಲಿ ಕಾಣಿಸಿಕೊಳ್ಳುತ್ತಾರೆ ಮತ್ತು ಒಂದಷ್ಟು ರಸ್ತೆ ರಿಪೇರಿಯನ್ನು ಮಾಡಿಸುತಾರೆ. ಅದು ಬಿಟ್ಟರೆ ಮತ್ತದೆ ಚುಣಾವಣೆಯವರೆಗೂ ಉಣ್ಣಾದ ರಸ್ತೆಗಳ ಮೇಲೆ ಓಡಾಡಿ ಹಣ್ಣಾಗುವುದೆ ನಮ್ಮ ಗತಿ. ಕೆಲವೇ ದಿನಗಳ ಹಿಂದೆ ಕಸದ ಧೂರ್ತವಾಸನೆಯಿಂದಾಗಿ ನಮ್ಮ ಮಹಾನಗರದ ಉಸಿರು ಕಟ್ಟಿತ್ತು. ಕಸದ ವಿಲೇವಾರಿಯನ್ನು ಸಮರ್ಪಕ ರೀತಿಯಲ್ಲಿ ನಿರ್ವಹಿಸದ ಬಿಬಿಎಂಪಿಗೆ ಕೊರ್ಟ್ ಚಿಮಾರಿಹಾಕಿದ್ದು ಇನ್ನು ಮಾಸಿಲ್ಲ. ಇದೀಗ ಮಳೆಯಿಂದ ರಸ್ತೆಗಳು ಪೊರೆ ಬಿಟ್ಟು ವಿಲಕ್ಷಣ ರೂಪ ಪಡೆದಿವೆ. ಅಲಲ್ಲಿ ಚರಂಡಿ ಕಾಲುವೆಗಳು ಪಾಟ್ ಹೊಲ್ ಗಳು ಒಡೆದುಹೋಗಿ ಕೆಟ್ಟನೀರು ಹೊರಹರಿಯುತಿದೆ. ಕುಡಿಯುವ ನೀರಿನ ನಿರ್ವಹಣೆಯು ಅಷ್ಟಕಷ್ಟೆ. ಹೀಗಿರುವಾಗ ಸರ್ಕಾರಕ್ಕೆ ದೊಡ್ಡಮಟ್ಟದ ಅದಾಯ ದಕ್ಕಿಸಿಕೊಡುತ್ತಿರುವ ಮಹಾನಗರಕ್ಕೆ ಅಗತ್ಯತೆಗನುಗುಣವಾಗಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡಬೇಕೆಂಬ ಸ್ವಾಸ್ಥ್ಯ ನಮ್ಮ ಪ್ರತಿನಿಧಿಗಳಿಗಿಲ್ಲವಾಯಿತೆ?. ಇದು ಪಾಲಿಕೆಯ ಅದಕ್ಷತೆಯ ಪರಮಾವಧಿ ಎನಿಸುತ್ತಿಲ್ಲವೆ? ಹೌದೆನ್ನಿಸುವುದಾದರೆ ಈ ಕಾರ್ಯವೈಖರಿಯನ್ನು, ಅವರ ಬದ್ಧತೆಯನ್ನು ಪ್ರಶ್ನಿಸಬೇಕಾದುದು ಎಲ್ಲ ನಾಗರಿಕರ ಜವಾಬ್ಧಾರಿ.
ಚುಣಾವಣೆಯಲ್ಲಿ ಮತಹಾಕಿ ಆರಿಸಿ ಕಳುಹಿಸಿದರೆ ಜವಾಬ್ಧಾರಿ ಕಳೆಯುವುದಿಲ್ಲ. ನಮ್ಮ ಅಗತ್ಯತೆಗಳನ್ನು ಪಡೆದುಕೊಳುವ ಹಕ್ಕು ಸಹ ನಮ್ಮದೇ. ಪ್ರಜ್ನಾವಂತ ನಾಗರೀಕರು ಮನಸ್ಸಿನಲ್ಲೆ ಮಡುಗಟ್ಟಿದ ಅಸಹನೆಯನ್ನು ಹೊರಹಾಕಬೇಕಿದೆ. ಕನಿಷ್ಟ ಪಕ್ಷ ನಮ್ಮ ವಾಸಸ್ಥಳದ ಸುತ್ತಮುತ್ತ ಆಗಿರುವ ನ್ಯೂನತೆಯನ್ನು ಪಾಲಿಕೆ ಸಿಬ್ಬಂದಿಗಳಿಗೆ ಕರೆ ಮಾಡಿ ಮನವರಿಕೆ ಮಾಡಿಕೊಡಬೇಕಾಗಿದೆ. ಮೌನ ಮುರಿದು ಸಂಭಂದಪಟ್ಟ ಅಧಿಕಾರಿಗಳಿಗೆ ಅಥವ ವಾರ್ಡ್ ನ ಪ್ರತಿನಿಧಿಗೆ ತಿಳಿಸಬೇಕಾಗಿದೆ. ಒಂದೆರಡುಬಾರಿ ಸಾಲದು ಏಕೆಂದರೆ ಅದು ಅವರಿಗೆ ತಾಕದು. ಪದೇ ಪದೇ ಕರೆ ಮಾಡಿ ಒತ್ತಡ ಹೇರುವ ತಂತ್ರವಾಗಬೇಕು. ಇದೊಂದು ರೀತಿ “’ಒತ್ತಡ ಆಂದೋಲನ’”ವಾಗಲಿ. ಬಿಬಿಎಂಪಿಯ ಈ ಟೊಲ್ ಫ್ರೀ  ದೂರವಾಣಿ ಸಂಖ್ಯೆ 22660000 ನಿಮ್ಮ ಕಾಂಟ್ಯಾಟ್ ಪಟ್ಟಿಯಲ್ಲಿರಲಿ ಮತ್ತು ಆಗಾಗೆ ಕರೆಗಳು ಹೋಗುತ್ತಿರಲಿ. ನಿಮ್ಮ ನಿಮ್ಮ ಹಕ್ಕನ್ನು ಪಡೆಯುವುದು ನಿಮ್ಮ ಕರ್ತವ್ಯವೆಂದು ಭಾವಿಸಿರಿ.
  
-ಸಂತೋಷ್ ಇಗ್ನೇಷಿಯಸ್
 
 

Saturday, 16 November 2013

ಆಡಿಯೋ ಅನಿಸಿಕೆ : ಭಜರಂಗಿ

ಇಂದಿಗೂ ಗೆಳೆಯ ಚಿತ್ರದ ’ಈ ಸಂಜೆ ಯಾಕಾಗಿದೆ’ಯಾಗಲಿ ಬಿರುಗಾಳಿ ಚಿತ್ರದ ’ಮಧುರ ಪಿಸು ಮಾತಿಗೆ’ ಹಾಡು ಟಿ.ವಿಯಲ್ಲಿ ಬರುತ್ತಿದ್ದರೆ ಚ್ಯಾನಲ್ ಬದಲಸಲು ಮನಸಾಗುವುದಿಲ್ಲ. ಆ ಹಾಡುಗಳನ್ನುಹರ್ಷ ಚಿತ್ರಿಸಿರುವ ಗುಂಗಿನಿಂದ ಕನ್ನಡ ಪ್ರೇಕ್ಷಕ ಇನ್ನೂ ಹೊರಗೆ ಬಂದಿಲ್ಲ. ಅಂತಹ ಹರ್ಷರ ನಿರ್ದೇಶನದಲ್ಲಿ, ನೃತ್ಯ ಸಂಯೋಜನೆಯಲ್ಲಿ ಭಜರಂಗಿ ಬರುತ್ತಿದೆ.  ಇಂದಿಗೂ ಹೆಜ್ಜೆ ಹಾಕುವುದರಲ್ಲಿ, ಲವಲವಿಕೆಯಲ್ಲಿ ಒಂದು ಕೈ(ಕಾಲೂ) ಮುಂದೇ ಇರುವ ಶಿವಣ್ಣ, ಕಿಕ್ ಕೊಡುವ ಗೀತೆಗಳನ್ನು ನೀಡುತ್ತಾ ಸಂಗೀತ ಪ್ರೇಮಿಗಳನ್ನು ವಾಲಾಡಿಸುತ್ತಿರುವ ಅರ್ಜುನ ಜನ್ಯರ ಸಂಗೀತ, ಹರ್ಷರ ಸಾರಥ್ಯವಿರುವ ಚಿತ್ರ ಎಂದರೆ ಆ ಚಿತ್ರದ ಬಗ್ಗೆ ನಿರೀಕ್ಷೆ ಇಲ್ಲದೆ ಇರುತ್ತದೆಯೇ?  ’ಭಜರಂಗಿ’ ಭರ್ಜರಿಯಾಗಿಯೇ ಸದ್ದು ಮಾಡುತ್ತಿದೆ. ಕನ್ನಡದ ಅಗ್ರಗಣ್ಯ ಸಂಗೀತ ನಿರ್ದೇಶಕರಲ್ಲಿ ಒಬ್ಬರಾಗುವತ್ತ ನಿಧಾನವಾಗಿ ಹೆಜ್ಜೆ ಇಡುತ್ತಿದ್ದ ಅರ್ಜುನ ಜನ್ಯ, ಈ ಚಿತ್ರದಿಂದ ಆ ದಿಕ್ಕಿನೆಡೆ ಬಲವಾದ ಹೆಜ್ಜೆ ಇಟ್ಟಿದ್ದಾರೆ ಎಂದೆನಿಸುತ್ತದೆ. ಇತ್ತೀಚೆಗೆ ತಾನೇ ಬಿಡುಗಡೆಯಾದ ಹಾಡುಗಳು ಹೇಗಿವೆ ನೋಡೋಣವೇ?

ಬಾಸು ನಮ್ಮ ಬಾಸು : ಅರ್ಜುನ್ ಜನ್ಯ ಸ್ವತ: ತಾವೇ ಹಾಡಿರುವ ಈ ಗೀತೆ ಇಂದಿನ ಚಿತ್ರಗಳಲ್ಲಿ ಸಾಮಾನ್ಯವಾಗಿ ಕಾಣ ಬರುವ ನಾಯಕನ ಗುಣಗಾನದ ರೀತಿಯ ಗೀತೆ. ’ಇವ್ರು ಹೊಡೆದ್ಬುಟ್ರೆ ಒಂದೇಟು, ಬಿದ್ದಂಗೆ ಬುಲ್ಲೆಟ್ಟು, ಇವ್ರು ಸ್ಟೆಪ್ ಹಾಕಿದ್ ಮೇಲೇನೆ, ಹುಟ್ಟ್ ಕೊಂಡ್ತು ಎರೆಡೇಟು’ ಎಂಬಂತ ಸಾಲುಗಳು ಚೇತನ್ ಚಂದನ್ ಹಾಗೂ ಮೋಹನ್ ಸಾಹಿತ್ಯ ಒದಗಿಸಿರುವ ಈ ಹಾಡಿನ ತುಂಬ ದಂಡಿಯಾಗಿ ಸಿಗುತ್ತದೆ.ಅರ್ಜುನ್ ಜನ್ಯರ ಸಂಗೀತದಲ್ಲಿ ಲವಲವಿಕೆ ಇದ್ದೂ, ತೆರೆಯ ಮೇಲೆ ಅಭಿಮಾನಿಗಳಿಗೆ ಫುಲ್ ಮೀಲ್ಸ್ ನೀಡಬಹುದೆಂಬ ಭರವಸೆ ನೀಡುತ್ತದೆ. ಕೇಳಿದೊಡನೆ ಕೈ ಕಾಲುಗಳು ತಾವೇ ತಾಳ ಹಾಕುವ
ಹಾಡುಗಳ ಸಾಲಿಗೆ ಸೇರುವ ವೇಗದ ಧಾಟಿಯ ಹಾಡು.

ಜೈ ಭಜರಂಗಿ : ಹಾಡಿನ ಶೀರ್ಷಿಕೆ, ನಾಗೇಂದ್ರ ಪ್ರಸಾದ್ ಸಾಹಿತ್ಯ ಹಾಗೂ ಶಂಕರ್ ಮಹಾದೇವನ್ ಕಂಠ ಎಂದು ಓದಿದೊಡನೆ ಒಬ್ಬ ಪಳಗಿದ ಚಿತ್ರ ಸಂಗೀತ ಕೇಳುಗನ ಮನದಲ್ಲಿ ಒಂದು ಹಾಡಿನ ಕಲ್ಪನೆ ಖಂಡಿತವಾಗಿಯೂ ಮೂಡುತ್ತದೆ. ಆ ಕಲ್ಪನೆಗೆ ಮೋಸವಾಗದಂತ ಗೀತೆ ಇದು. ಶಕ್ತಿಶಾಲಿ ಸಾಹಿತ್ಯಕ್ಕೆ ಅಷ್ಟೇ ಭಾವ ಪೂರ್ಣ ಹಾಗೂ ಸತ್ವ ಪೂರ್ಣ ಗಾಯನ ಒದಗಿ ಬಂದಿದೆ. ಜನ್ಯರ ಸಂಗೀತ ಸಂಯೋಜನೆ ಉತ್ತಮವಾಗಿದ್ದೂ ಹಿನ್ನಲೆಯಲ್ಲಿನ ಕೋರಸ್ ಸಹಾ ಮೆರಗು ತಂದಿದೆ. ಮುಂದಿನದನ್ನು ತೆರೆಯ ಮೇಲೆ ನೋಡಿ ಎಂಬ ಅಹ್ವಾನವನ್ನು ನೀಡುವಂತಿದೆ ಸಂಗೀತ.

ಶ್ರೀ ಕೃಷ್ಣ : ಇತ್ತೀಚಿನ ಚಿತ್ರಗಳಲ್ಲಿ ಒಂದು ಪರಿಪೂರ್ಣ ಭಕ್ತಿ ಗೀತೆ ಕೇಳಿ ತುಂಬಾ ಸಮಯವೇ ಆಗಿತ್ತು ಎಂಬ ಕೊರತೆಯನ್ನು ನೀಗಿಸುವಂತ ಗೀತೆ. ಇಂತಹ ಗೀತೆಗಳನ್ನು ಚಂದವಾಗಿ ಹಾಡುವ ಅನುರಾಧ ಭಟ್ಟರ ಕಂಠ ಸಿರಿಯಲ್ಲಿ ಮೂಡಿರುವ ಗೀತೆ ತನ್ನ ವಿಭಿನ್ನತೆಯಿಂದ ಇಷ್ಟವಾಗುತ್ತದೆ. ಅರ್ಜುನ್ ಜನ್ಯ ಈ ಗೀತೆಯ ಮೂಲಕ ಅಚ್ಚರಿ ಮೂಡಿಸುತ್ತಾರೆ. ನಾಗೇಂದ್ರ ಪ್ರಸಾದರಿಗೆ ಈ ರೀತಿಯ ಗೀತಾಸಾಹಿತ್ಯ ಕಷ್ಟವೇನಲ್ಲ. ಸಾಹಿತ್ಯ ನವಿರಾಗಿ, ಉತ್ತಮವಾಗಿದೆ.

ಜಿಯಾ ತೇರಿ : ಜಯಂತ್ ಕಾಯ್ಕಿಣಿಯವರ ಸಾಹಿತ್ಯವಿರುವ ಗೀತೆಯಲ್ಲಿ ಹಿಂದಿ ಹೇಗೆ ನುಸುಳಿತು ಎನ್ನುವ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಮೊದಲೇ ಹಾಡು ಇಷ್ಟವಾಗುತ್ತದೆ. ನಿಸ್ಸಂದೇಹವಾಗಿ ಚಿತ್ರದ ಅತ್ತ್ಯುತ್ತಮ ಗೀತೆ. ’ನೋಟದ ಬಾಣವು ನಾಟಿದೆ ಆಗಲೇ’ ಎಂಬ ಹಾಡಿನ ಸಾಲಿನಂತೆ ಸಂಗೀತ, ಕಾರ್ತಿಕರ ಗಾಯನ, ಕಾಯ್ಕಿಣಿಯವರ ಸಾಹಿತ್ಯ ಎಲ್ಲವೂ ಮನಸೂರೆಗೊಂಡು ಮನಸ್ಸಿಗೆ ನಾಟಿ ಕೊಳ್ಳುತ್ತದೆ. ಮೊದಲೇ ಕೇಳಿದಂತೆ ಎನಿಸಿದರೂ ಅದ್ಭುತವಾದ ವಾದ್ಯ ಸಂಯೋಜನೆ ಈ ಗೀತೆಗಿದೆ. ಕೋರಸ್ ಸಹ ಮನ ಗೆಲ್ಲುತ್ತದೆ. ಮನಮೋಹಕ ಗೀತೆ.

ಭಜರಂಗಿ ರೇ : ಕಲ್ಯಾಣ್ ರ ಸಾಹಿತ್ಯದ ಈ ಗೀತೆಗೆ ಕೈಲಾಶ್ ಖೈರ್ ರ ಕಂಠದ ಮಾಂತ್ರಿಕ ಸ್ಪರ್ಷ ದೊರಕಿದೆ. ಕೈಲಾಶ್ ಇದನ್ನು ಅದೆಷ್ಟು ಸೊಗಸಾಗಿ ಹಾಡಿದ್ದಾರೆಂದರೆ  ಉತ್ತಮವಾದ ವಾದ್ಯ ಸಂಯೋಜನೆ, ಸಂಗೀತ, ಸಾಹಿತ್ಯವೆಲ್ಲವೂ ತೆರೆಮರೆಯಲ್ಲಿ ನಿಂತು ಅವರ ಕಂಠಕ್ಕೆ ತಲೆದೂಗಿದಂತೆ ಅನಿಸುತ್ತದೆ. ಚಿತ್ರದ ಪ್ರಮುಖ ಘಟ್ಟದಲ್ಲಿ ಬರುವಂತೆ ತೋರುವ ಈ ಗೀತೆ ತನ್ನಲ್ಲಿ ಚಿತ್ರದ ಕಥೆಯನ್ನು ಸಹಾ ಹೇಳುವಂತೆ ತೋರುತ್ತದೆ. ಇದರ ದೃಶ್ಯರೂಪ ಹೇಗಿರಬಹುದೆಂಬ ನಿರೀಕ್ಷೆಯನ್ನು ಈ ಗೀತೆ ಹುಟ್ಟಿಸುತ್ತದೆ.

-ಪ್ರಶಾಂತ್ ಇಗ್ನೇಷಿಯಸ್

Saturday, 26 October 2013

ಅನಿಲ್ ಕುಂಬ್ಳೆ

ಅದು 2002ರ ಮೇ ತಿ೦ಗಳು. ವೆಸ್ಟ್ಇ೦ಡೀಸಿನ ಆ೦ಟ್ಯಿಗಾದಲ್ಲಿ ಭಾರತ ಹಾಗೂ ವೆಸ್ಟ್ಇ೦ಡೀಸ್ ನಡುವಣ ಪ೦ದ್ಯ.ಇ೦ಡಿಯಾ ಬ್ಯಾಟಿ೦ಗ್ ಮುಗಿದು ವಿ೦ಡೀಸ್ ಬ್ಯಾಟ್ಸ್ ಮೆನ್ ಗಳು ಅ೦ಕಣ ದೊಳಗೆ ಬರುತ್ತಿದ್ದ೦ತೆ ನಮ್ಮವರು ಸಹ ಅ೦ಕಣಕ್ಕೆ ಬರುತ್ತಿದ್ದಾರೆ. ಅವರಲ್ಲಿ ಮುಖಕ್ಕೆ ಬ್ಯಾ೦ಡೆಜ್ ಹಾಕಿಕೊ೦ಡ ಆಟಗಾರನೊಬ್ಬನೂ ಬರುತ್ತಿದ್ದ೦ತೆ ಕಾಣುತ್ತಿದೆ. ಹಿ೦ದಿನ ದಿನವೇ ನಮ್ಮ ಈ ಅನಿಲ್ ಕು೦ಬ್ಳೆಗೆ ವೇಗಿ ದಿಲ್ಲಾನ್ ಬೌಲಿ೦ಗ್ ನಲ್ಲಿ ದವಡೆಗೆ ಏಟು ಬಿದ್ದು ದವಡೆ ಮುರಿದ್ದಿದ್ದನ್ನು ನೋಡಿದ್ದೆವು ಮತ್ತು ಗಾಯಗೊ೦ಡ ಕು೦ಬ್ಳೆ ಮರಳಿ ಭಾರತಕ್ಕೆ ಎ೦ದು ಪತ್ರಿಕೆಗಳಲ್ಲಿ ಓದೂ ಇದ್ದೆವು. ಮತ್ತೆ ಇದ್ಯಾರಪ್ಪ ಇದೇ ಥರ ಅ೦ತ ಟಿ.ವಿ ಯಲ್ಲಿ ಕಣ್ಣರಳಿಸಿ ನೋಡುತ್ತಿದ್ದ೦ತೆ ಖಾತರಿಯಾಗಿ ಹೋಯಿತು, ಅಯ್ಯೋ ನಮ್ಮ ಕು೦ಬ್ಳೆನೇ ಅಲ್ಲವೇ ಅ೦ತ.

ಈ ಗಾಯದಲ್ಲಿ ಯಾಕಪ್ಪ ಬ೦ದ ಅ೦ತ ನಾವೆಲ್ಲ ಯೋಚನೆ ಮಾಡಿ ಎಲ್ಲೋ ಅಲ್ಲಿ ತನಕ ಬ೦ದು ವಾಪಸ್ ಪೆವಿಲಿಯನಿಗೆ ಹೋಗಿಬಿಡಬಹುದೇನೋ ಅ೦ದರೆ ಫೀಲ್ಡಿ೦ಗ್ ಮಾಡೋಕ್ಕೆ ರೆಡಿಯಾಗೇ ಬಿಡೋದಾ? ಅದೂ ಚದುರಿ ಹೋದ ಅ ದವಡೆಗೆ ಅಷ್ಟು ದೊಡ್ಡ ಬಾ೦ಡೇಜ್ ಹಾಕ್ಕೊ೦ಡು? ಎಲ್ಲೋ ಒ೦ದೆರೆಡು ಓವರ್ ಮಾಡಿ ಸುಸ್ತು ಅ೦ತ ಹೋಗಿ ಬಿಡಬಹುದು ಎ೦ದರೆ ಪೂರಾ 14 ಓವರ್ ಹಾಕಿ , ಫಾರ್ಮ್ ನಲ್ಲಿದ್ದ ಬ್ರಿಯನ್ ಲಾರನಾ ವಿಕೆಟ್ಟೂ ತೆಗೆದೇ ಬಿಡೋದಾ? ದಿನದಾಟ ಆದ ಮೇಲೆ ಏನಪ್ಪ ನಿನ್ನ ಕಥೆ ಅ೦ತ ಕೇಳಿದ್ರೆ,ಹೇಗಿದ್ರೂ ಅಪರೇಷನ್ ಮಾಡಿಸಿಕೊಳ್ಳಬೇಕು, ಭಾರತಕ್ಕೆ ವಾಪಸ್ ಹೋಗಬೇಕು, ಹೋಗೋ ಮು೦ಚೆ ಒ೦ದು ಪ್ರಯತ್ನ ಮಾಡೇ ಬಿಡೋಣ ಅ೦ತ ಹೇಳಿದವರು ಈ ಕು೦ಬ್ಳೆ।

ಪ್ರಯತ್ನ ಅ೦ತ ಕು೦ಬ್ಳೆ ಏನೋ ಸಿ೦ಪಲ್ಲಾಗಿ ಹೇಳಿದ್ರು,ಆದ್ರೆ ಆ ದಿನ ಮಾತ್ರ ಆಧುನಿಕ ಕ್ರಿಕೆಟ್ ಇತಿಹಾಸದಲ್ಲೇ ಒ೦ದು ದ೦ತ ಕಥೆಯಾಗಿ ಊಳಿದಿದ್ದ೦ತೂನಿಜ। ಟೀಕಾಕಾರರೇನು ಸುಮನಿರಲ್ಲಿಲ್ಲ ಬಿಡಿ, ಸರಣಿ ಉದ್ದಕೂ ಅಷ್ಟೇನು ವಿಕೆಟ್ ಗಳಿಸಲ್ಲಿಲ್ಲದ್ದರಿ೦ದ ಪ್ರಚಾರಕ್ಕಾಗಿ, ಸಿ೦ಪಥಿಗಾಗಿ ಹಾಗೆ ಮಾಡಿದ್ರು ಅ೦ತ ಅಪವಾದವೂ ಕೇಳಿ ಬ೦ತು. ಆದರೆ ಕು೦ಬ್ಳೆಯನ್ನು ಬಲ್ಲ ಎಲ್ಲರೂ ಅದನ್ನು ಸರಸಗಟ್ಟಾಗಿ ತಿರಸ್ಕರಿಸಿದ್ದು ಮಾತ್ರ ಸುಳ್ಳಲ್ಲ. ಕೆಚ್ಚು, ಶ್ರಮ ಹಾಗೂ ಸಭ್ಯತೆ ಇವೆಲ್ಲದರ ಹದವಾದ ಮಿಶ್ರಣವೇ ಅನಿಲ್ ಕು೦ಬ್ಳೆ ಎ೦ಬ ಸಾಧಕ.

ಅವರ ಹುಟ್ಟು ಹಬ್ಬದ ದಿನ ಇವೆಲ್ಲಾ ಮತ್ತೆ ನೆನಪಿಗೆ ಬ೦ತು. ಅನಿಲ್ ಕು೦ಬ್ಳೆ ಭಾರತದ ನ೦ಬರ್ ಒನ್ ಮ್ಯಾಚ್ ವಿನ್ನರ್ ಎನ್ನುವುದು ಅ೦ಕಿ ಅ೦ಶಗಳಿ೦ದ ಸಾಬೀತಾಗಿದೆ. ಟೆಸ್ಟ್ ಹಾಗೂ ಒ೦ದು ದಿನದ ಪ೦ದ್ಯದಿ೦ದ ಸ೦ಪಾದಿಸಿದ 900ಕ್ಕೂ ಹೆಚ್ಚಿನ ವಿಕೆಟ್, ಪಾಕಿಸ್ತಾನದ ವಿರುದ್ಧದ perfect 10 , ಲಾರ್ಡ್ಸ್ ನಲ್ಲಿ ಬಾರಿಸಿದ ಶತಕ, ಹೀಗೆ ತಮ್ಮ ಸಾಧನೆಗಳಿ೦ದ ಅದೆಷ್ಟು ಪ್ರಸಿದ್ಧರೋ,ಕರ್ನಾಟಕದ ಆಟಗಾರರ ಟ್ರೇಡ್ ಮಾರ್ಕ್ ಆದ ನಯ,ವಿನಯ,ಕ್ರೀಡಾ ಮನೋಭಾವ ಹಾಗೂ ಸಭ್ಯತೆಯಿ೦ದಲೂ ಅಷ್ಟೇ ಹೆಸರು ಮಾಡಿದವರು। ನಿವೃತ್ತಿ ಹೊ೦ದಿದ ಟೆಸ್ಟ್ ನ ಕೊನೆಗೆ ಸಿಕ್ಕ ಅಭೂತಪೂರ್ವ, ಹೃದಯಸ್ಪರ್ಶಿ ವಿದಾಯವೇ ಕು೦ಬ್ಳೆ ಸ೦ಪಾದಿಸಿದ ಗೌರವ ಪ್ರೀತಿಗೆ ಸಾಕ್ಷಿಯಾಗಿತ್ತು.

ಅ೦ತರರಾಷ್ಟ್ರೀಯ ಕ್ರಿಕೆಟ್ಟಿಗೆ ಬ೦ದಾಗ ಅವರ ಬೌಲಿ೦ಗ್ ಶೈಲಿ, ಕನ್ನಡಕ ನೋಡಿ ನಕ್ಕವರ ಸ೦ಖ್ಯೆ ಕಡಿಮೆಯೀನ್ನಿಲ್ಲ. ಒ೦ದೋ ಎರಡೋ ಟೆಸ್ಟ್ ಆಡಿ ಮನೆಗೆ ಹೋಗಬಹುದೆ೦ದು ಅಣಕಿಸದವರ ಮು೦ದೆ ತಮ್ಮ ಶ್ರಮ ಹಾಗೂ ಅವಿರತ ಪ್ರಯತ್ನದಿ೦ದಲೇ 18 ವರ್ಷಗಳ ಕಾಲ ಭಾರತದ ಬೌಲಿ೦ಗ್ ಮು೦ಚೂಣಿಯಲ್ಲಿದ್ದು ಭಾರತ ಹಾಗೂ ನಮ್ಮ ಕರ್ನಾಟಕದ ಕೀರ್ತಿ ಪತಾಕೆಯನ್ನು ಹಾರಿಸಿದ ಕು೦ಬ್ಳೆಗೆ ನಿಜಕ್ಕೂ Hats off. 

ಹುಟ್ಟು ಹಬ್ಬದ ಶುಭಾಶಯಗಳು ಅನಿಲ್ ಸಾರ್!!!!

-ಪ್ರಶಾಂತ್ ಇಗ್ನೇಷಿಯಸ್

Thursday, 19 September 2013

ಆಡಿಯೋ ಅನಿಸಿಕೆ : ಬೃಂದಾವನ

ಯಾವ ನಟನಿಗೆ ಯಾವ ರೀತಿ ಸಂಗೀತ, ಆಯಾ ನಟರ ಅಭಿಮಾನಿಗಳ ನಿರೀಕ್ಷೆ, ಅಪೇಕ್ಷೆಗಳ ಸುತ್ತ ಗಿರಕಿ ಹೊಡೆಯುತ್ತಾ, ನಿರ್ದೇಶಕ ಇಷ್ಟಪಡುವ ಸಂಗೀತವನ್ನು ಕೊಡುವ ಕಲೆ ಹರಿಕೃಷ್ಣರಿಗೆ ಸಿದ್ಧಿಸಿದೆ ಎಂದೇ ಹೇಳಬಹುದು. ತಮ್ಮದೇ ಆದ ಇತಿ ಮಿತಿಯಲ್ಲೇ ಆಯಾ ನಟ, ನಿರ್ದೇಶಕನಿಗೆ ತಕ್ಕಂತೆ ಹಾಡುಗಳನ್ನು ನೀಡುತ್ತಾ ವಿಭಿನ್ನವಾಗಿ ನಿಲ್ಲುವುದರಲ್ಲಿ   ಹರಿಕೃಷ್ಣ ಇತ್ತೀಚಿನ ದಿನಗಳಲ್ಲಿ ಗೆದ್ದಿದ್ದಾರೆ ಎಂಬುದರಲ್ಲಿ ಅನುಮಾನವಿಲ್ಲ. ದರ್ಶನ್  ಅಭಿನಯದ ಬೃಂದಾವನ ಚಿತ್ರದ ಗೀತೆಗಳು ಇದಕ್ಕೆ ಇತ್ತೀಚಿನ ಉದಾಹರಣೆ. ದರ್ಶನ್ ರ  ಯಶಸ್ಸು, ಅಭಿಮಾನಿ ವೃಂದ, ಇಮೇಜ್ ಗೆ ತಕ್ಕುದಾದ ಹಾಡುಗಳು ಚಿತ್ರದಲ್ಲಿದೆ. ಈಗಾಗಲೇ ಹಾಡುಗಳು ಅಭಿಮಾನಿಗಳ ಮೆಚ್ಚುಗೆಯೂ ಪಡೆದಿದೆ.  ಹೇಗಿದೆ ಹಾಡುಗಳು ?


ಹಾರ್ಟಲ್ಲಿರೋ ಹಾರ್ಮೋನಿಯಂ : ಟ್ಯೂನ್ ಹಾಕಿದೆ ಈ ಮನಸ್ಸಿನ FM ನಲ್ಲಿ ನಿಂದೆ ಹಾಡಿದೆ ಎಂದು ಪ್ರಾರಂಭವಾಗುವ ಹಾಡನ್ನು ಟಿಪ್ಪು ತಮ್ಮ ಎಂದಿನ ಶೈಲಿಯಲ್ಲೇ ಹಾಡಿದ್ದಾರೆ. ಕವಿರಾಜ್ ರ ಸಾಹಿತ್ಯದಲ್ಲಿ ಕನ್ನಡದಷ್ಟೆ ಸಮನಾಗಿ ಇತರ ಭಾಷೆಗಳೂ ಸೇರಿಕೊಂಡಿವೆ. ಇದು ಈಗಿನ ಟ್ರೆಂಡ್ ಹೌದಾದರೂ ಅದೇನು ಅಷ್ಟು ಸುಲಲಿತವಾಗಿ ಸೇರದ ಭಾವನೆ ಮೂಡುತ್ತದೆ. ದರ್ಶನ್ ಹಾಗೂ ಅವರ ಅಭಿಮಾನಿಗಳನ್ನು ಮನಸಿನಲ್ಲಿಟ್ಟುಕೊಂಡೇ ಹರಿ ಈ ಹಾಡನ್ನು ಸಂಯೋಜಿಸಿದರೇನೋ ಎಂಬಷ್ಟು ಗಟ್ಟಿಯಾಗಿ ದರ್ಶನ್ ಗೆ ಈ ಹಾಡು ಒಪ್ಪುತ್ತದೆ.

ಬೆಳ್ಳಂ ಬೆಳಗಾ : ಬಹಳ ದಿನಗಳ ನಂತರ ಕೇಳ ಸಿಗುವ ಹೇಮಂತರ ಧ್ವನಿಯಿರುವ ಈ ಗೀತೆ, ಅವರಿಂದಾಗಿಯೇ ಇಷ್ಟವಾಗುತ್ತದೆ. ಕನ್ನಡ ಹಾಗೂ ಕನ್ನಡಾಭಿಮಾನದ ಬಗೆಗಿನ ನಾಗೇಂದ್ರ ಪ್ರಸಾದರವರ ಸಾಹಿತ್ಯಕ್ಕೆ ಹಾಗೂ ಗೀತೆಯ ಗ್ರಾಮೀಣ ಸೊಗಡಿನ ಲಯಕ್ಕೆ ಹೇಮಂತ್ ರವರನ್ನೇ ಆರಿಸಿಕೊಂಡಿರುವಲ್ಲಿ ಹರಿಯವರ ಜಾಣ್ಮೆ ಎದ್ದು ಕಾಣುತ್ತದೆ.
ಇಷ್ಟೆಲ್ಲಾ ಸಾಧನೆ ಹಾಗೂ ಪ್ರತಿಭೆಯ ನಡುವೆಯೂ ಮತ್ತೊಮ್ಮೆ ಶ್ರೇಯಾ ಘೋಷಲ್ ಹಳ್ಳಿ ಲಾವಣಿಯ ಧಾಟಿಯ ಗಾಯನದಿಂದ ಅಚ್ಚರಿ ಮೂಡಿಸುತ್ತಾರೆ. ಉತ್ತಮವಾದ ಗೀತೆಗೆ ನಡು ನಡುವೆ ಒದಗಿ ಬಂದಿರುವ ಕೋರಸ್ ಮತ್ತಷ್ಟು ಮೆರಗು ದೊರಕುತ್ತದೆ.

ಮಿರ್ಚಿ ಹುಡುಗಿ : ಇದು ಮತ್ತೊಂದು ಪಕ್ಕಾ ಹರಿ ಹಾಗೂ ದರ್ಶನ್ ಕಾಂಬಿನೇಶನ್ ಗೀತೆ. ಅಭಿಮಾನಿಗಳಿಗೆ ತುಸು ಹೆಚ್ಚೇ ಇಷ್ಟವಾಗಬಹುದಾದ ಸ್ವರ ಸಂಯೋಜನೆ ಹಾಡಿಗಿದೆ. ಇಲ್ಲಿ ಕವಿರಾಜರ ಸಾಹಿತ್ಯಕ್ಕಿಂತ ಹರಿಯ ಸಂಗೀತ, ನೃತ್ಯ ಯೋಜನೆ ಹಾಗೂ ಪರದೆಯ ಮೇಲಿನ ಚಿತ್ರೀಕರಣವೇ ಹೆಚ್ಚು ಗಮನ ಸೆಳೆಯುವ ಅಂಶಗಳಾಗುತ್ತವೇನೋ. ಸಂತೋಷ್ ವೆಂಕಿಯ ಗಾಯನ ಹಾಗೂ ಧ್ವನಿ ಹಾಡಿನ ಆಶಯಕ್ಕೆ ತಕ್ಕ ಆಗಿದೆ.

ತಂಗಾಳಿ ಹಾಡಿದೆ : ಶಂಕರ್ ಮಹಾದೇವನ್, ಕೈಲಾಶ್ ಕೈರ್, ಕಾರ್ತಿಕ್, ಹೇಮಂತ್ ಎಲ್ಲರ ಧ್ವನಿ ಒಟ್ಟಿಗೆ ಕೇಳ ಸಿಗುವ ಬಂಪರ್ ಹಾಡು ಇದು. ಕುಟುಂಬವೆಲ್ಲ ಸೇರಿ ಸಂತೋಷವಾಗಿ ಹಾಡುವ ಇಂಥಹ ಗೀತೆಗಳ ಸಾಹಿತ್ಯದಲ್ಲಿ ನಾಗೇಂದ್ರ ಪ್ರಸಾದ್ ಎಂದಿಗೂ ಸಿದ್ಧ ಹಸ್ತರೇ. ಹರಿಕೃಷ್ಣ ಪೂರ್ಣ ಪ್ರಮಾಣದಲ್ಲಿ ಈ ಹಾಡಿನ ಮೂಲಕ ತಮ್ಮತನ ಮೆರೆಯುತ್ತಾರೆ. ವಾದ್ಯ ತಾಳಗಳ ಬಳಕೆ ಹಾಗೂ ಉತ್ತಮ ಗಾಯಕರ ಸಂಗಮದ ಮಟ್ಟಿಗೆ ಇದೊಂದು ಶ್ರೀಮಂತ ಗೀತೆಯೇ.

ಓಯ್ ಕಳ್ಳ : ಹರಿಕೃಷ್ಣರ ಸಂಗೀತ, ಯೋಗರಾಜರ ಭಟ್ಟರ ಸಾಹಿತ್ಯದ ಜೋಡಿಗೆ ಉಪ್ಪಿ ಭರ್ಜರಿಯಾಗಿಯೇ ಬಂದು ಸೇರಿಕೊಂಡಿದ್ದಾರೆ. ಭಟ್ಟರ ಎಂದಿನ ತುಂಟತನಕ್ಕೆ ಉಪ್ಪಿಯೂ ಸರಿಸಮಾನವಾಗಿ ಧ್ವನಿಗೂಡಿಸಿದ್ದಾರೆ. ಇಂದು ನಾಗರಾಜ್ ಹಾಗೂ ಪ್ರಿಯದರ್ಶಿ ಮಾತ್ರವೇನು ಹಿಂದೆ ಬಿದ್ದಿಲ್ಲ. ಇಬ್ಬರು ಹುಡುಗಿಯರ ನಡುವಿನ ಪ್ರೇಮದಾಟದ ಸಾಹಿತ್ಯಕ್ಕೆ ಪಕ್ಕಾ ನೃತ್ಯಕ್ಕೆ ಹೇಳಿ ಮಾಡಿಸಿದಂತಿರುವ ಗೀತೆಯನ್ನಾಗಿ ಹರಿ ಪರವರ್ತಿಸಿದ್ದಾರೆ.

- ಪ್ರಶಾಂತ್ ಇಗ್ನೇಷಿಯಸ್  

Monday, 16 September 2013

ಹೃದಯವಂತಿಕೆಯ ಪ್ರತೀಕ - ಕರ್ನಾಟಕ ಕ್ರಿಕೆಟ್


ಅದು 1980 ರ ಭಾರತ ಹಾಗೂ ಇಂಗ್ಲೆಂಡ ತಂಡಗಳ ನಡುವಿನ ಕ್ರಿಕೆಟ್ ಪಂದ್ಯ. ಭಾರತ ಕ್ರಿಕೆಟ್ ಮಂಡಳಿಯ ಸ್ವರ್ಣ ಮಹೋತ್ಸವದ ನೆನಪಿನ ಜೂಬಿಲಿ ಟೆಸ್ಟ್. 58 ರನ್ನಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದ ಸ್ಥಿತಿಯಲ್ಲಿದ್ದ ಇಂಗ್ಲೆಂಡ ತಂಡದ ಏಳನೇ ಬ್ಯಾಟ್ಸ್ ಮ್ಯಾನಾಗಿ ಬಂದಿದ್ದ ಬಾಬ್ ಟೇಲರ್ ವಿಕೆಟ್ ಕೀಪರ್ ಸ್ಯಯದ್ ಕಿರ್ಮಾನಿಗೆ ಕ್ಯಾಚ್ ಇತ್ತಾಗ, ಅಂಪೈರ್ ಔಟೆಂದು ತೀರ್ಪು ಕೊಟ್ಟರು. ಬಾಬ್ ಟೈಲರ್ ಆಶ್ಚರ್ಯ ಹಾಗೂ ಅಸಮಧಾನದಿಂದ ತಲೆ ಅಲ್ಲಾಡಿಸುತ್ತ ಪೆವೆಲಿಯನ್ ನ್ ಕಡೆ ನಡೆಯಲು ಅನುವಾಗುತ್ತಿದ್ದಂತೆ ಕ್ರಿಕೆಟ್ ಚರಿತ್ರೆಯಲ್ಲಿ ಅಳಿಸಲಾಗದಂತಹ ಘಟನೆಯೊಂದು ನಡೆಯಿತು. ಅಲ್ಲೇ ಸ್ಲಿಪ್ ನಲ್ಲಿ ಕ್ಷೇತ್ರ ರಕ್ಷಣೆ ಮಾಡುತ್ತಿದ್ದ ಆಗಿನ ಭಾರತ ತಂಡದ ನಾಯಕ, ಬ್ಯಾಟ್ಸ್ ಮೆನ್ ಬಾಬ್ ಟೈಲರ ಬಳಿ ಚೆಂಡು ಬ್ಯಾಟಿಗೆ ತಗುಲಿತೇ ಎಂದು ಕೇಳುತ್ತಾರೆ, ಟೈಲರ್ ಇಲ್ಲ ಎಂದಾಗ, ಅಂಪೈರ್ ನ ಬಳಿ ಹೋಗಿ ತಮ್ಮ ತಂಡ ಮಾಡಿದ್ದ ಮನವಿಯನ್ನು( ಅಪೀಲ್) ಹಿಂದೆ ಪಡೆಯುತ್ತಾರೆ. ಬಾಬ್ ಟೈಲರ್ ಮತ್ತೆ ಬ್ಯಾಟಿಂಗ್ ಆಡುತ್ತಾರೆ. ಮುಂದಿನದು ಇತಿಹಾಸ. ಅದೇ ಬಾಬ್ ಟೈಲರ್ ಜೊತೆ ದಾಖಲೆಯ ಜೊತೆಯಾಟವಾಡಿದ ಪ್ರಖ್ಯಾತ ಆಲ್ ರೌಂಡರ್ ಇಯನ್ ಬಾತಮ್, ಬೌಲಿಂಗ್ ನಲ್ಲೂ ಮಿಂಚಿ ಇಂಗ್ಲೆಂಡ್ ತಂಡಕ್ಕೆ ಗೆಲುವನ್ನು ತಂದು ಕೊಡುತ್ತಾರೆ. ಭಾರತ 10 ವಿಕೆಟ್ಟುಗಳ ಹೀನಾಯ ಸೋಲು ಕಾಣುತ್ತದೆ. ಆದರೆ ಇಂದಿಗೂ ಬಾತಮಿನ್ನ ಪ್ರಚಂಡ ಆಲ್ ರೌಂಡ್ ಆಟಕ್ಕಿಂತ, ಸ್ವರ್ಣ ಮಹೋತ್ಸವದ ಟೆಸ್ಟ್ ಎನ್ನುವುದಕ್ಕಿಂತ ಮೇಲಾಗಿ ಕ್ರೀಡಾ ಜಗತ್ತು ಆ ಟೆಸ್ಟ್ ಅನ್ನು ಭಾರತ ತಂಡದ ನಾಯಕನ ಆ ಉದಾರತೆಗಾಗಿ,sportsman spirit ಗಾಗಿ, ಕ್ರೀಡಾ ಮನೋಭಾಕ್ಕಾಗಿ ನೆನಪಿಸಿಕೊಳ್ಳತ್ತದೆ. ಕ್ರಿಕೆಟ್ ಒಂದು ಸಜ್ಜನ, ಸಭ್ಯ ಕ್ರೀಡೆ ಎಂಬ ಮಾತು ಬಂದಾಗಲೆಲ್ಲಾ ಈ ಘಟನೆಯನ್ನು, ಆಗಿನ ಭಾರತ ತಂಡದ ನಾಯಕನನ್ನು ನೆನೆಪಿಸಿಕೊಳ್ಳಲಾಗುತ್ತದೆ. ಅ ನಾಯಕ ಮತ್ತಾರೂ ಅಲ್ಲ, ನಮ್ಮ ಕರ್ನಾಟಕದವರೇ ಆದ ಜಿ.ಆರ್.ವಿಶ್ವನಾಥ್. ಇಂದಿಗೂ ವಿಶಿಯನ್ನು ಕ್ರಿಕೆಟ್ ಜಗತ್ತು ಕಲಾತ್ಮಕ ಬ್ಯಾಟ್ಸ್ ಮ್ಯಾನ್ ಎಂದು ಮಾತ್ರವಲ್ಲದೆ Gentleman ಕ್ರಿಕೆಟರ್ ಎಂದೇ ಕರೆಯುತ್ತದೆ. ಈ ಘಟನೆ ಒಂದು ಉದಾಹರಣೆಯಷ್ಟೆ, ಈ ಮಾತು ವಿಶ್ವನಾಥ್ ಅವರೊಬ್ಬರಿಗೆ ಮಾತ್ರವಲ್ಲದೆ ಇಡೀ ರಾಜ್ಯದ ಕ್ರಿಕೆಟ್ಟಿಗೇ ಸಲ್ಲುವಂತೆ ಮಾಡಿರುವುದು ನಮ್ಮ ಕರ್ನಾಟಕದ ಇತರ ಎಲ್ಲಾ ಕ್ರಿಕೆಟ್ ಆಟಗಾರರೂ ಎಂದರೆ ತಪ್ಪಾಗಲಾರದೇನೋ. 

1933-34ರಲ್ಲಿ ಸ್ಥಾಪನೆಗೊಂಡ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಇತ್ತೀಚೆಗೆ ತಾನೇ ತನ್ನ ವಜ್ರ ಮಹೋತ್ಸವವನ್ನು ಆಚರಿಸಿದೆ. ತನ್ನದೇ ಶ್ರೀಮಂತವಾದ ಇತಿಹಾಸವನ್ನು, ಕ್ರಿಕೆಟ್ ಪರಂಪರೆಯನ್ನು ಉಳಿಸಿಕೊಂಡು ಬೆಳಸಿಕೊಂಡೂ ಬಂದಿದೆ. ಇನ್ನೂ ಭಾರತ ಕ್ರಿಕೆಟ್ ಇತಿಹಾಸದಲ್ಲಿ ಕರ್ನಾಟಕದ ಪಾಲು ಬಹಳ ದೊಡ್ಡದು. ಕ್ರಿಕೆಟ್ ಆಟದ ಘನತೆ ಹಾಗೂ ಸಂಸ್ಕೃತಿಯನ್ನು ಎತ್ತಿಡಿದಿರುವುದರಲ್ಲಿ ಸಹಾ ಕರ್ನಾಟಕ ಕ್ರಿಕೆಟ್ ಎಂದಿಗೂ ಮುಂದೆ. ಕ್ರಿಕೆಟ್ ಜಗತ್ತಿನಲ್ಲಿ ಕರ್ನಾಟಕದ ಆಟಗಾರರು ತಮ್ಮ ಆಟಕ್ಕೆ ಮಾತ್ರವಲ್ಲದೆ ಕ್ರಿಕೆಟ್ ಒಂದು ಸಜ್ಜನ, ಸುಸಂಸ್ಕೃತ ಕ್ರೀಡೆ ಎಂಬುದರ ಪ್ರತೀಕ  ಹಾಗೂ ರಾಯಭಾರಿಗಳಾಗಿದ್ದಾರೆ. 


ಸೆಂಟ್ರಲ್ ಕಾಲೇಜಿನ ಮೈದಾನವನ್ನೇ ತನ್ನ ಕಾರ್ಯಕ್ಷೇತ್ರವಾಗಿಸಿದ್ದ ಸಂಸ್ಥೆಯು, ಕ್ರಿಕೆಟ್ ಆಡುವುದು ಮಾತ್ರವಲ್ಲದೇ ಅಲ್ಲೇ ತನ್ನ  ಕಛೇರಿಯನ್ನೂ ಸ್ಥಾಪಿಸಿಕೊಂಡಿತ್ತು. ಇಂದಿನ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಚಾಲನೆ ದೊರಕಿದ್ದು 1969ರಲ್ಲಿ. 1974 ರ ನವೆಂಬರ್ ನಲ್ಲಿ ಇನ್ನೂ ಪೂರ್ಣಗೊಳ್ಳದ ಕ್ರೀಡಾಂಗಣದಲ್ಲೇ ಮೊದಲ ಟೆಸ್ಟ್ ನಡೆಯಿತು. ವೆಸ್ಟ್ ಇಂಡೀಸ್ ವಿರುದ್ಧದ ಈ ಪಂದ್ಯದಲ್ಲೇ ಕ್ರಿಕೆಟ್ ದಂತಕಥೆಗಳಾದ ಗಾರ್ಡನ್ ಗ್ರೀನಿಡ್ಜ್ ಹಾಗೂ ವಿವಿಯನ್ ರಿಚರ್ಡ್ಸ್ ಟೆಸ್ಟ್ ರಂಗಕ್ಕೆ ಪಾದಾರ್ಪಣೆ ಮಾಡಿದರು ಎಂಬುದು ವಿಶೇಷ. ಮುಂದೆ ಹಲವಾರು ಸ್ಮರಣೀಯ ಟೆಸ್ಟ್ ಹಾಗೂ ಒಂದು ದಿನದ ಪಂದ್ಯಗಳಿಗೆ ಈ ಕ್ರೀಡಾಂಗಣ ವೇದಿಕೆಯಾಗಿದೆ. 1996 ರ ವಿಶ್ವಕಪ್ ನ ಭಾರತ ಪಾಕಿಸ್ತಾನ ಕ್ವಾಟರ್ ಫೈನಲ್ಸ್, 1987ರ ಭಾರತ ಪಾಕಿಸ್ತಾನ ಟೆಸ್ಟ್ ಪಂದ್ಯ, ಇತ್ತೀಚಿನ 2011ರ ವಿಶ್ವಕಪ್ ನ ಭಾರತ ಇಂಗ್ಲೆಂಡ ನಡುವಿನ ಟೈ ಪಂದ್ಯ ಇವು ಕೆಲವು ಉದಾಹರಣೆಗಳಷ್ಟೇ. ತಮ್ಮ ಕೊನೆಯ ಟೆಸ್ಟ್ ಇನ್ನಿಂಗ್ಸ್ ನಲ್ಲಿ ಗವಾಸ್ಕ್ ರ್ ಹೊಡೆದ 97 ರನ್ನು, ಅನಿಲ್ ಕುಂಬ್ಳೆ ರ 400ನೇ ವಿಕೆಟ್, ರಿಚರ್ಡ್ ಹ್ಯಾಡ್ಲಿ ದಾಖಲೆ ಮಾಡಿದ್ದು, ಕಪಿಲ್ ದೇವ್ ಹ್ಯಾಡ್ಲಿ ದಾಖಲೆ ಸರಿಗಟ್ಟಿದ್ದು ಮುಂತಾದವುಗಳಿಗೆ ಈ ಕ್ರೀಡಾಂಗಣ ಸಾಕ್ಷಿಯಾಗಿದೆ, ವಿದೇಶಿ ತಂಡಗಳೂ ಸಹ ಇಲ್ಲಿನ ವಾತಾವರಣ, ಹವೆ ಮಾತ್ರವಲ್ಲದೆ ಇಲ್ಲಿನ ಪ್ರೇಕ್ಷಕರ ಕ್ರಿಕೆಟ್ ಜ್ಞಾನ ಹಾಗೂ ಕ್ರೀಡಾ ಮನೋಭಾದಿಂದಾಗಿ  ಬೆಂಗಳೂರಿನಲ್ಲಿ ಆಡುವುದಕ್ಕೆ ಇಷ್ಟಪಡುತ್ತವೆ. ಇತ್ತೀಚಿನ ವರ್ಷಗಳಲ್ಲಿ ಐಪಿಎಲ್ ನಿಂದಾಗಿ ಕ್ರೀಡಾಂಗಣಕ್ಕೆ ಮತ್ತಷ್ಟು ರಂಗು ದೊರಕಿದೆ.

ಇನ್ನೂ ಕರ್ನಾಟಕ ತಂಡದ ರಣಜಿ ಇತಿಹಾಸ ಒಂದು ಸುಂದರ ಕಥಾನಕ. ಕರ್ನಾಟಕ ಕ್ರಿಕೆಟಿನ ಸುವರ್ಣ ಯುಗವೆಂದೇ ಹೇಳಬಹುದಾದ 90ರ ದಶಕದಲ್ಲಿ ನಾಲ್ಕು ವರ್ಷದ ಅಂತರದಲ್ಲಿ 3 ಬಾರಿ ರಣಜಿ ಟ್ರೋಫಿ ಗೆದ್ದ ಹೆಗ್ಗಳಿಕೆ ಅದರದು. ಭಾರತ ವಿಶ್ವ ಕಪ್ ಗೆದ್ದ 1983ರಲ್ಲೂ ಕರ್ನಾಟಕವೇ ರಣಜಿ ಚಾಂಪಿಯನ್. ಆದರೆ ಇವೆಲ್ಲಕ್ಕಿಂತಲೂ 70ರ ದಶಕದ ಗೆಲವುಗಳೇ ರೋಚಕ.  1959 ರಿಂದ  1973 ರ ವರೆಗೂ ದೇಶದ ರಣಜಿ ಸರಣಿಯಲ್ಲಿ ಆಗಿನ ಬಾಂಬೆ ತಂಡಕ್ಕೆ ಸರಿಸಾಟಿಯೇ ಇಲ್ಲ.  58 ರಲ್ಲಿ ಒಮ್ಮೆ ಬರೋಡ ತಂಡ ಗೆದ್ದದ್ದು ಬಿಟ್ಟರೆ ಎರಡು ದಶಕಗಳ ಪಾರಪತ್ಯ ಬಾಂಬೆ ತಂಡದು. ಅಂತಹ ಬಾಂಬೆ ತಂಡದ ನಾಗಲೋಟಕ್ಕೆ 1974 ರಲ್ಲಿ ತಡೆ ಹಾಕಿ ಟ್ರೋಫಿ ಗೆದ್ದು ಕೊಂಡದ್ದು ಕರ್ನಾಟಕ ತಂಡ. ಮುಂದೆ 78ರಲ್ಲಿ ಮತ್ತೇ ಟ್ರೋಫಿ ಗೆದ್ದು ತನ್ನ ಪ್ರಾಬಲ್ಯವನ್ನು ಮೆರೆಯಿತು. ಯಾವ ಅಂತರರಾಷ್ಟ್ರೀಯ ಪಂದ್ಯಗಳಿಗೂ ಕಡಿಮೆಯಿಲ್ಲದಂತೆ ಪ್ರೇಕ್ಷಕರು ಈ ರಣಜಿ ಪಂದ್ಯಗಳಿಗೆ ಸೇರುತ್ತಿದ್ದದ್ದನ್ನು ಹಿರಿಯರು ಇಂದಿಗೂ ನೆನಪಿಸಿಕೊಳ್ಳುತ್ತಾರೆ, ವಿಶ್ವನಾಥ್, ಬ್ರಿಜೇಶ್ ಪಟೇಲ್, ರಘುರಾಮ್ ಭಟ್ ಮುಂತಾದವರ ಆಟಕ್ಕೆ ಗ್ಯಾಲರಿಗಳು ತುಂಬುತ್ತಿದ್ದ ರೀತಿ ಅನನ್ಯ.ರಣಜಿಯಲ್ಲಿ ರಾಜ್ಯಕ್ಕೆ ಗೌರವ ತಂದು ಕೊಟ್ಟ ದೊಡ್ಡ ಪಟ್ಟಿಯೇ ಇದೆ. ಎಂ.ಚಿನ್ನಸ್ವಾಮಿ , ಶ್ರೀನಿವಾಸನ್ ಮುಂತಾದವರ ತೆರೆಮರೆಯ ಸೇವೆ ಅಪಾರ.

ಕರ್ನಾಟಕ ತಂಡದಿಂದ ಭಾರತವನ್ನು ಪ್ರತಿನಿಧಿಸಿದ ಆಟಗಾರರ ಪಟ್ಟಿಯೇ ಎಲ್ಲವನ್ನು ಹೇಳುತ್ತದೆ, ಕರ್ನಾಟಕದ ನವಾಬ್ ಪಟೌಡಿ ಎಂದೇ ಖ್ಯಾತರಾದ ವಿ.ಸುಬ್ರಮಣ್ಯರದು ಟೆಸ್ಟ್ ನಲ್ಲಿ ಸಾಧಾರಣ ಯಶಸ್ಸಾದರೂ, ಕರ್ನಾಟಕ ರಣಜಿ ತಂಡವನ್ನು ಕ್ಲಬ್ ಮಟ್ಟದಿಂದ ಮೇಲಕೇರಿಸಿದ ಕೀರ್ತಿ ಅವರು ಪಾತ್ರರು. ಇನ್ನೂ ಎರಪಳ್ಳಿ ಪ್ರಸನ್ನ ಈ ದೇಶ ಕಂಡ ಆತ್ತ್ಯುತ್ತಮ ಆಫ್ ಸ್ಪಿನ್ನರ್ ಎಂಬ ಮಾತಿದೆ. ಕ್ಲಾಸಿಕಲ್ ಆಫ್ ಸ್ಪಿನ್ ಎಂದಾಕ್ಷಣ ಪ್ರಸನ್ನರ ಹೆಸರು ವಿಶ್ವ ಕ್ರಿಕೆಟಿನಲ್ಲಿ ಮುಂಚೂಣಿಯಲ್ಲಿ ಕಾಣುತ್ತದೆ. ಪೋಲಿಯೋದಿಂದಾಗಿ ಸ್ವಲ್ಪ ಮಟ್ಟಗಿನ ಶಕ್ತಿಹೀನವಾದ ಕೈಯನ್ನೇ ಅಸ್ತ್ರವನ್ನಾಗಿಸಿಕೊಂಡ ಬಿ.ಎಸ್. ಚಂದ್ರಶೇಖರ್ ಭಾರತ ತಂಡಕ್ಕೆ  ವಿದೇಶಗಳಲ್ಲಿ ಮರಿಚಿಕೆಯಾದ ಟೆಸ್ಟ್ ಗೆಲವನ್ನು ತಂದುಕೊಟ್ಟ ಪ್ರಮುಖ ರುವಾರಿ. ಮೂಲತ: ಲೆಗ್ ಸ್ಪಿನರಾದರೂ ಅವರ ವೇಗದ ಬಾಲುಗಳು ವೇಗದ ಬೌಲರುಗಳಿಗಿಂತ ತೀಕ್ಷ್ನತೆ ಪಡೆದಿದ್ದವು ಎಂದು ಅಂದಿನ ಆಟಗಾರರು ನೆನಪಿಸಿಕೊಳ್ಳುತ್ತಾರೆ. ರಣಜಿಯಲ್ಲಿ ಅಸಾಧಾರಣ ಪ್ರತಿಭೆಯಾಗಿದ್ದ ಗ್ಲಾಮರ್ ಬಾಯ್ ಬ್ರಿಜೇಶ್ ಪಟೇಲ್ ಗೆ ಅಂತರಾಷ್ಟ್ರೀಯ ಯಶಸ್ಸು ಮರಿಚಿಕೆಯಾಯಿತು. ಸೈಯದ್ ಕಿರ್ಮಾನಿ ವಿಶ್ವದ ಅತ್ತ್ಯುತ್ತಮ  ವಿಕೆಟ್ ಕೀಪರ್ ಗಳಲ್ಲಿ ಒಬ್ಬರು ಎಂಬುದರಲ್ಲಿ ಯಾರಿಗೂ ಅನುಮಾನವೇ ಇಲ್ಲ. ಬ್ಯಾಟಿಂಗ್ ನಲ್ಲಿ ಸಹಾ ಅಪತ್ಭಾಂಧವನಂತೆ ಭಾರತದ ನೆರವಿಗೆ ಬಂದ ಉದಾಹರಣೆಗಳೆಷ್ಟೋ. 1983ರ ವಿಶ್ವಕಪ್ ನಲ್ಲಿ ಆತಿ ಹೆಚ್ಚು ವಿಕೆಟ್ ಪಡೆದು ಭಾರತದ ವಿಜಯದ ಪ್ರಮುಖ ರುವಾರಿಯಾಗಿದ್ದವರು ರೋಜರ್ ಬಿನ್ನಿ. ಜಿ,ಆರ್. ವಿಶ್ವನಾಥ್ ರವರಂತೂ ತಮ್ಮ ಕಲಾತ್ಮಕ ಆಟದಿಂದಾಗಿ ಕ್ರಿಕೆಟ್ ಜಗತ್ತಿನ ಕಣ್ಮಣಿಯಾದವರು. ಬ್ಯಾಟಿಂಗ್ ನ ಆಫ್ ಡ್ರೈವ್,ಸ್ಕ್ವೇರ್‍ ಕಟ್, ಫ್ಲಿಕ್ ಗಳಿಗೆ ವಿಶಿ ಇಂದಿಗೂ ಹೆಸರುವಾಸಿ.

ಇದಕ್ಕೆಲ್ಲಾ ಕಳಶವಿಟ್ಟಿದ್ದು 90 ಹಾಗೂ ನಂತರದ ದಶಕ, ಈ ದಶಕದಲ್ಲಿ ಅನಿಲ್ ಕುಂಬ್ಳೆ, ಜಾವಗಲ್ ಶ್ರೀನಾಥ್, ವೆಂಕಟೇಶ್ ಪ್ರಸಾದ್, ರಾಹುಲ್ ಡ್ರಾವಿಡ್, ಸುನಿಲ್ ಜೋಶಿ, ವಿಜಯ್ ಭರದ್ವಾಜ್, ಗಣೇಶ್, ಡೇವಿಡ್ ಜಾನ್ಸನ್, ಸೋಮಸುಂದರ್, ರಾಬಿನ್ ಉತ್ತಪ್ಪ ಭಾರತವನ್ನು ಪ್ರತಿನಿಧಿಸಿದರು, ಕಪಿಲ್ ದೇವ್ ನಂತರ ಯಾರು ಎಂಬ ಪ್ರಶ್ನೆಗೆ ತಕ್ಕ ಉತ್ತರ ಕೊಟ್ಟವರು ಜಾವಗಲ್ ಶ್ರೀನಾಥ್.ವಿಶ್ವ ಕಪ್ ನ ಪಂದ್ಯದಲ್ಲಿ ಕೆಣಕಿದ ಅಮೀರ್ ಸೋಹೆಲ್ ನ ವಿಕೆಟ್ ಪಡೆದೇ ಅಪಾರ ಖ್ಯಾತಿ ಪಡೆದ ವೆಂಕಟೇಶ್ ಪ್ರಸಾದ್ ಸ್ವಿಂಗ್ ಬೌಲಿಂಗೆ ಹೆಸರು ಮಾಡಿದವರು. ಇನ್ನೂ ಅನಿಲ್ ಕುಂಬ್ಳೆ ಹಾಗೂ ರಾಹುಲ್ ಡ್ರಾವಿಡರ ಸಾಧನೆ ಎಲ್ಲರಿಗೂ ತಿಳಿದಿರುವುದೇ. ಭಾರತದ ಪರವಾಗಿ ಅತಿ ಹೆಚ್ಚು ವಿಕೆಟ್ ಪಡೆದ ಹೆಗ್ಗಳಿಕೆ ಮಾತ್ರವಲ್ಲದೆ ಭಾರತ ಕ್ರಿಕೆಟಿನ ಅನೇಕ ಹುದ್ದೆಗೆ ಕೇಳಿ ಬರುವ ಪ್ರಮುಖ ಹೆಸರು ಕುಂಬ್ಳೆಯದು. ಗೋಡೆಯೆಂದೇ ಪ್ರಖ್ಯಾತರಾಗಿರುವ ರಾಹುಲ್ ಡ್ರಾವಿಡ್ ಈಗ ವಿಶ್ವ ಕ್ರಿಕೆಟಿನ ದಂತಕಥೆ. ರನ್ನು ಹಾಗೂ ಜನಪ್ರಿಯತೆಯಲ್ಲಿ ಸಚಿನ್ ನಂತರದ ಹೆಸರು ಡ್ರಾವಿಡ್ ರದು 

ಕರ್ನಾಟಕ ಕ್ರಿಕೆಟ್ ಹಾಗೂ ಅದರ ಆಟಗಾರರ ಇಷ್ಟೆಲ್ಲಾ ಕ್ರಿಕೆಟ್ ಸಾಧನೆಗಳ ನಡುವೆಯೂ ಇಂದಿಗೂ ಅದರ ಹೆಗ್ಗಳಿಕೆ ಇರುವುದು ಅದರ ಸಜ್ಜನಿಕೆ ಹಾಗೂ ಸಭ್ಯತೆಯಲ್ಲೇ. ಕರ್ನಾಟಕ ಕ್ರಿಕೆಟಿನ ಅಭಿಮಾನಿಗಳಿಗೆ ಇದಕ್ಕಿಂತ ದೊಡ್ಡ ಉಡುಗೊರೆ ಬೇಕೆ?

-ಪ್ರಶಾಂತ್ ಇಗ್ನೇಶಿಯಸ್