Monday, 13 August 2012

ಸ್ವಾತಂತ್ರ್ಯೋತ್ಸವದ ಕನವರಿಕೆಯಲ್ಲಿ…!!!



ಕೃಪೆ: ಗೂಗಲ್ ಇಮೇಜ್
ಮತ್ತೊಂದು ಸ್ವಾತಂತ್ರ್ಯೋತ್ಸವಕ್ಕೆ ನಮ್ಮ ದೇಶ ಅತೀ ಉತ್ಸುಕತೆಯಿಂದ ಸಜ್ಜುಗೊಳ್ಳುತ್ತಿದೆ. ಈ ಒಂದು ಆಚರಣೆಯನ್ನು ಸ್ಮರಣೀಯಗೊಳಿಸಲು ಹತ್ತು ಹಲವಾರು ಕಾರ್ಯಕ್ರಮಗಳು, ಸ್ಪರ್ಧೆಗಳು ಆಚರಣೆಯ ಪಟ್ಟಿಯನ್ನು ಸೇರಿಕೊಂಡಿವೆ. ನಮ್ಮ ಶಾಲಾಮಕ್ಕಳಂತೂ ಪೆರೇಡು ಪ್ರದರ್ಶನದ ತಾಲೀಮಿನ ಭರಾಟೆಯಲ್ಲಿ ಕಳೆದುಹೋಗಿಬಿಟ್ಟಿದ್ದಾರೆ. ವರ್ಷಕ್ಕೊಮ್ಮೆ ಎಂಬಂತೆ ನಮ್ಮ ಸರ್ಕಾರಿ ಕಟ್ಟಡಗಳು ಸ್ಪಚ್ಛಗೊಂಡು ಮದುವಣಿಗಿತ್ತಿಯಾಗಿ ಕಂಗೊಳಿಸುತ್ತಾ ತ್ರಿವರ್ಣ ಧ್ವಜಾರೋಣದ ಸಿಂದೂರಕ್ಕೆ ಕಾತರದಿಂದ ಕಾದು ಕುಳಿತ್ತಿವೆ. ಇನ್ನೊಂದು ಕಡೆ, ಆಚರಣೆಯ ಕೇಂದ್ರಬಿಂದು ದೆಹಲಿಯ ಕೆಂಪುಕೋಟೆ ದೇಶದ ಸಾಧನೆ, ದೇಶದ ಮುಂದಿರುವ ಪ್ರಮುಖ ಸಮಸ್ಯೆಗಳು ಹಾಗು ಪ್ರಗತಿ ಯೋಜನೆಗಳನ್ನು ಸಾರುವ ಪ್ರಧಾನ ಮಂತ್ರಿಯ ನಿಸ್ಸತ್ತ್ವದ ಭಾಷಣಕ್ಕೆ ಮತ್ತು ರಂಗು ರಂಗಿನ ಸಾಂಸ್ಕ್ರತಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲು ಜಾತಕ ಪಕ್ಷಿಯಂತೆ ಕಾದು ಕುಳಿತ್ತಿದೆ.  ತ್ರಿವರ್ಣದ ರಾಷ್ಟ್ರಧ್ವಜಗಳಂತೂ ಟ್ರಾಫಿಕ್ ಮತ್ತು ಮಳಿಗೆಗಳಲ್ಲಿ ಭರಾಟೆಯಿಂದ ಮಾರಾಟವಾಗುತ್ತಿವೆ. ಪುಷ್ಪ ಪ್ರದರ್ಶನ,,, ಕೇಕ್ ಪ್ರದರ್ಶನ, ಗಾಳಿಪಟಗಳ ಹಾರಾಟ ಹೀಗೆ ಪ್ರದರ್ಶನಗಳ ಮೇಲೆ ಪ್ರದರ್ಶನಗಳು ನಗರಗಳಲ್ಲಿ ಯಥೇಚ್ಛವಾಗಿ ಕಂಡುಬರುತ್ತಿವೆ. ಶಾಪಿಂಗ್ ಮಾಲ್‍ಗಳಂತೂ ತನ್ನಡೆ ಜನರನ್ನು ಆಕರ್ಷಿಸಿ ವ್ಯವಹಾರ ಕುದ್ರಿಸಿಕೊಳ್ಳಲು ಕಳ್ಳ ದೇಶಪ್ರೇಮವನ್ನು ನಿರ್ಭೀತಿಯಾಗಿ ತೋರ್ಪಡಿಸುತ್ತಿದ್ದರೆ ಭಾರತೀಯರಾದ ನಾವು ರಾಷ್ಟೀಯ ರಜಾದಿನವಾಗಿರುವ ಆಗಸ್ಟ್ ೧೫ಕ್ಕೆ ವಾಚ್‍ಮ್ಯಾನ್ ಬೆಳಗ್ಗಿನ ಜಾವಕ್ಕೆ ಕಾಯುವಂತೆ ಹೊಂಚು ಹಾಕುತ್ತಿದ್ದೇವೆ.
ಹೌದು ಬ್ರಿಟಿಷರ ಕಪಿಮುಷ್ಠಿಯಿಂದ ಸ್ವಾತಂತ್ರ್ಯವನ್ನು ಪಡೆದ ಐತಿಹಾಸಿಕ ಘಟನೆಯ ಆಚರಣೆ ಉತ್ತಮವಾದುದೆ, ಅವಶ್ಯಕವಾದುದೆ. ಆದರೆ, ಈ ಒಂದು ಆಚರಣೆ ಯಾಂತ್ರಿಕವಾಗಬಾರದು, ದಿನದ ಕಾರ್ಯಕ್ರಮಗಳ ಪಟ್ಟಿಯಲ್ಲಿ ಒಂದಾಗಬಾರದು. ಮಜಮಾಡಲು ಸಿಕ್ಕ ಒಂದು ದಿನದ ಸರ್ಕಾರಿ ರಜೆಯಾಗಬಾರದು. ಸ್ವಾತಂತ್ರವನ್ನು ದೊರಕಿಸಿಕೊಳ್ಳಲು ರಾಷ್ಟ್ರ ತುಳಿದ ಹಾದಿಯನ್ನು ನಮಲ್ಲಿ ನೆನಪಿಸಬೇಕು, ಸ್ವಾತಂತ್ರ್ಯ ದೊರಕಿಸಿಕೊಳ್ಳುವ ಹಾದಿಯಲ್ಲಿ ಮಡಿದ ಹುತಾತ್ಮ ಯೋಧರನ್ನು ಹೋರಾಟಗಾರರನ್ನು ನೆನಪಿಸಬೇಕು. ಸ್ವಾತಂತ್ರ್ಯ ದಕ್ಕಿಸಿಕೊಳ್ಳಲು ಅವರೆಲ್ಲರನ್ನು ಪ್ರೇರಪಿಸಿದ ಕಿಚ್ಚು ನಮ್ಮಲ್ಲಿ ತುಂಬಿಸಬೇಕು. ದೇಶಕ್ಕೆ ಅವರು ಕಂಡ ಕನಸ್ಸುಗಳು ನಮ್ಮದಾಗಿಸಬೇಕು. ಜತೆಗೆ ನಮ್ಮ ಇಂದಿನ ಪರಿಸ್ಥಿತಿಯಲ್ಲಿ ನಿಜವಾಗಲೂ ನಾವು ಸ್ವಾತಂತ್ರ್ಯರೇ? ಸ್ವಾಂತಂತ್ರ್ಯವನ್ನು ಅನುಭವಿಸಲು ಯೋಗ್ಯರೇ?  ಅಷ್ಟೆಲ್ಲ ತ್ಯಾಗ, ಬಲಿದಾನಗಳಿಂದ ಗಳಿಸಿದ ಸ್ವಾತಂತ್ರ್ಯದ ಬೆಲೆ ನಮಗಿವತ್ತು ಗೊತ್ತಿದೆಯೆ? ದಕ್ಕಿದ ಸ್ವಾತಂತ್ರ್ಯವನ್ನು ಜವಾಬ್ದಾರಿಯನ್ನು ಅನುಭವಿಸುತ್ತಿದ್ದೇವೆಯೇ? ಹೀಗೆ ಪ್ರಶ್ನೆಗಳನ್ನು ನಮ್ಮ ಮುಂದಿಡಬೇಕು. ಏಕೆಂದರೆ ಸ್ವಾತಂತ್ರ್ಯ ಪಡೆಯುವುದರ ಜತೆಗೆ ಜವಾಬ್ದಾರಿಯನ್ನು ಸಹ ಪಡೆದುಕೊಂಡಿದ್ದೇವೆ. ಸ್ವಾತಂತ್ರ್ಯವೂ ಒಂದು ಹಕ್ಕು ಮಾತ್ರವಲ್ಲದೆ ಜವಾಬ್ದಾರಿಯು ಹೌದು. ಈ ರೀತಿಯ ಪರಿಶೋಧನೆ, ಆತ್ಮಾವಲೋಕನ ನಮ್ಮ ಆಚರಣೆಯ ಅವಿಭಾಜ್ಯವಾಗದಿದ್ದರೆ, ನಮ್ಮ ಆಚರಣೆ ಬದಲಾವಣೆಯನ್ನು ತರದ, ನಿರುತ್ಸಾಹದ ಅರ್ಥಹೀನ ಆಚರಣೆಯಾಗಿ ಬಿಡುತ್ತದೆ.
ಇಂದಿನ ವಾಸ್ತವದಲ್ಲಿ ಈ ರೀತಿಯ ಆತ್ಮಾವಲೋಕನದ ಕ್ರಿಯೆ ಅತ್ಯಾವಶ್ಯಕವಾಗಿ ಬೇಕಾದುದ್ದೇ. ಏಕೆಂದರೆ ಇರಬೇಕಾದ ಜವಾಬ್ದಾರಿ ನಮ್ಮಲ್ಲಿ ಕಾಣುತ್ತಿಲ್ಲ. ಮಂಗನ ಕೈಯಲ್ಲಿ ಮಾಣಿಕ್ಯ ಕೊಟ್ಟಂತಾಗಿದೆ. ಮಗುವಿನ ಕೈಗೆ ಕತ್ತಿ ಕೊಟ್ಟಂತಾಗಿದೆ. ಕಡುಬಡತನ, ರೈತರ ಆತ್ಮಹತ್ಯೆಗಳು, ದೇಶದ ಮೂಲೆ ಮೂಲೆಗಳಲ್ಲಿ ಮೌಲ್ಯವಾಗಿಬಿಟ್ಟಿರುವ ಭ್ರಷ್ಟಚಾರವೆಂಬ ಅನಿಷ್ಟ ಪಿಡುಗು, ಜಾತಿ, ಧರ್ಮಗಳ ಆಧಾರಗಳ ಮೇಲೆ ಒಡೆದೋಗಿರುವ ಸಮಾಜ, ಜಾತಿ ರಾಜಕಾರಣ, ಭ್ರಷ್ಟ ರಾಜಕಾರಣಿಗಳು, ನಕ್ಸಲ್ ಸಮಸ್ಯೆ, ಅಗಿಂದಾಗ್ಗೆ ನಡೆಯುವ ಮತೀಯ ಗಲಭೆಗಳು, ತಾತ್ವಿಕ ಮತ್ತು ಸೈದಾಂತಿಕ ನೆಲೆಗಳನ್ನು ಕಳೆದುಕೊಂಡು ಕೇವಲ ಅಧಿಕಾರಕ್ಕಾಗಿ ಹಾತೊರೆಯುವ ರಾಜಕೀಯ ಪಕ್ಷಗಳು, ಭಯೋತ್ಪಾದನೆ, ಅಸಮಾನತೆ, ಜಾತಿ ಧ್ರುವೀಕರಣ ಹೀಗೆ ಒಂದೇ ಎರಡೇ ನೂರಾರು ಜಟಿಲ ಸಮಸ್ಯೆಗಳಿಂದ ನಮ್ಮ ದೇಶ ತುಂಬಿಹೋಗಿದೆ. ಅಸ್ಸಾಂನಲ್ಲಿ ನಡೆದ ಬೋಡೋ ಮೂಲನಿವಾಸಿಗಳು ಮತ್ತು ಮುಸ್ಲಿಂ ವಲಸಿಗರ ನಡುವಿನ ಹಿಂಸಾಚಾರ, ಸಂಸ್ಕೃತಿಯ ಸಂಕ್ಷರಣೆಯ ನೆಪದಲ್ಲಿ ಮಹಿಳೆಯರ ಮೇಲೆ ನಡೆದ ದೌರ್ಜನ್ಯ, ರಾಜಕೀಯ ಬೋನಿಗೆ ಬಿದ್ದ `ಅಣ್ಣ ಚಳವಳಿ’, ಸ್ಪಷ್ಟತೆಯಿಲ್ಲದ ರಾಮ್‍ದೇವ್ ಯೋಗಿಯ ನಿರಶನ, ಮಳೆಗಾಗಿ ಕೋಟ್ಯಂತರ ರೂ. ಖರ್ಚು ಮಾಡಿ ಪರ್ಜನ್ಯ ಪೂಜೆ ಮಾಡಿದ ಮೂರ್ಖ ಸರ್ಕಾರ, ದಿನಕ್ಕೊಂದೆಬಂತೆ ಹೊರ ಬರುತ್ತಿರುವ ಭ್ರಷ್ಟಚಾರ, ಸರ್ಕಾರದ ದುರಾಡಳಿತ..ಹೀಗೆ ಇತೀಚಿನ ಬ್ರೆಕಿಂಗ್ ನ್ಯೂಸ್‍ಗಳು, ಮುಂದೆ ಸಂಭವಿಸಲಿರುವ ಅದೋಗತಿಯನ್ನು ಸ್ಪಷ್ಟಪಡಿಸುವ ಎಚ್ಚರಿಕೆಯಗಂಟೆಗಳಾಗಿವೆ.
ಈ ಒಂದು ವಾಸ್ತವದ ಗ್ರಹಿಕೆ ನಮ್ಮ ಮುಂದಿನ ಕಾರ್ಯ ಸಂಕಲ್ಪಕ್ಕೆ ಅತ್ಯಗತ್ಯ. ಇಲ್ಲದೇ ಹೋದರೆ, ಪ್ರಧಾನಿ ಕೈಗೊಂಡಿರುವ ’ಎಲ್ಲರಿಗೂ ಮೊಬೈಲ್’ ಎಂಬ ಟೊಳ್ಳು ಕಾರ್ಯಕ್ರಮವೂ, ಹಾದಿ ತಪ್ಪಿದ ಅಣ್ಣ ಚಳುವಳಿಯೋ ಅಥವಾ ರಾಮ್‍ದೇವ್ ಯೋಗಿಯ ಕಾಮಿಡಿ ಶೋಗಳಂತಾಗಿಬಿಡುತ್ತದೆ ನಮ್ಮ ಆಚರಣೆ.  ಕೊನೆಗೆ, ರವೀಂದ್ರನಾಥ ಠಾಕೂರರ ಕವಿತೆಯೊಂದಿಗೆ ಸ್ವಾತಂತ್ರ್ಯೋತ್ಸವಕ್ಕೆ ಸಿದ್ಧಗೊಳೋಣ.
ಎಲ್ಲಿ ಮನಸ್ಸು ನಿರ್ಭಯವೋ, ಶಿರ ಎತ್ತರಕ್ಕೆ ನಿಮಿರಿ ನಿಂತಿದೆಯೋ
ಆ ಸ್ವಾತಂತ್ರ್ಯ ಸ್ವರ್ಗಕ್ಕೆ ಓ ತಂದೆ, ಎಚ್ಚರಗೊಳ್ಳಲ್ಲಿ ನನ್ನ ನಾಡು
ಎಲ್ಲಿ ಜ್ಞಾನ ಸ್ವತಂತ್ರವೋ
ಆ ಸ್ವಾತಂತ್ರ್ಯ ಸ್ವರ್ಗಕ್ಕೆ ಓ ತಂದೆ, ಎಚ್ಚರಗೊಳ್ಳಲ್ಲಿ ನನ್ನ ನಾಡು
ಎಲ್ಲಿ ಜಗತ್ತು ಸಂಕುಚಿತವಾದ ಮನೆಗೋಡೆಗಳಿಂದ ಒಡೆದು
ಚೂರುಚೂರಾಗಿಲ್ಲವೋ
ಆ ಸ್ವಾತಂತ್ರ್ಯ ಸ್ವರ್ಗಕ್ಕೆ ಓ ತಂದೆ ಎಚ್ಚರಗೊಳ್ಳಲ್ಲಿ ನನ್ನ ನಾಡು
ಎಲ್ಲಿ ಮನಸ್ಸನ್ನು ನೀನು ಸತತ ವಿಸ್ತರಣಶೀಲ ವಿಚಾರ ಕ್ರಿಯೆಗಳಿಗೆ
ಮುನ್ನಡೆಸುತ್ತೀಯೋ
ಆ ಸ್ವಾತಂತ್ರ್ಯ ಸ್ವರ್ಗಕ್ಕೆ ಓ ತಂದೆ, ಎಚ್ಚರಗೊಳ್ಳಲ್ಲಿ ನನ್ನ ನಾಡು
-ಜೋವಿ
Read more!

Saturday, 4 August 2012


ಪ್ರೀತಿಯ ಅನು..
ಹತ್ತಾರು ದಿನಗಳಿಂದ ಕಾಡುತ್ತಿದ್ದ ಈ ಕತೆ.. ಅಕ್ಷರ ರೂಪ ಪಡೆದು ನಿನ್ನ ಸೇರಿದೆ. ಈ ಕತೆಗೆ ಶಿರ್ಷಿಕೆ ಕೊಡಲು ಸಹ ನನ್ನಿಂದಾಗಲಿಲ್ಲ. ಕತೆಯನ್ನು ಓದಿ ನೀನೇ ಒಂದು ಟೈಟಲ್ ತಿಳಿಸು.
ಇಂತಿ ನಿನ್ನ
ಜೋವಿ

ನನ್ನ ಹೆಸರು ಮಹಿಮೆ ದಾಸ್‍ ಅಂತಿದ್ದರೂ ನನ್ನ ಅವ್ವ ಅಪ್ಪ ಕರೆಯುತ್ತಿದಿದ್ದು ”ಮಹಿಮೆ” ಅಂತ. ನನ್ನ ಹೆಸ್ರಲ್ಲಿ ಯಾವ ಮಹಿಮೆ ಕಂಡರೂ ಗೊತ್ತಿಲ್ಲ .. ಕಾಲಕ್ರಮೇಣ ಮಹಿಮೆ  ನಾಪತ್ತೆಯಾಗಿ ಮೈಮೆ ಆಗಿತ್ತು. ಎಮ್ಮೆ ಆಗಿಲ್ಲವೆಂಬುವುದೇ ನನ್ನ ತೃಪ್ತಿ. ನಾಲ್ಕು ಮಕ್ಕಳಲ್ಲಿ ನಾನೇ ಕೊನೆಯವನು. ನನ್ನ ಅಣ್ಣಂದಿರು ಹಾಗು ಅಕ್ಕ ಶಾಲೆಯ ಮೆಟ್ಟಿಲೇರಿರಲಿಲ್ಲ. ನಾನು ಮಾತ್ರ ನನ್ನ ಅವ್ವಳನ್ನು ಕಾಡಿ ಬೇಡಿ ಶಾಲೆಗೆ ಸೇರಿಕೊಂಡಿದ್ದೆ. ಯಾವ ದೇವ್ರು ನನ್ನ ಅವ್ವ ಅಪ್ಪರಿಗೆ ಬುದ್ಧಿ ಕೊಟ್ರೋ ಗೊತ್ತಿಲ್ಲ ನನ್ನ ಬೇಡಿಕೆಯನ್ನು ಮನ್ನಿಸಿ ನನ್ನನ್ನು ಅವರು ಶಾಲೆಗೆ ಹಚ್ಚಿದ್ದರು. ಜತೆಗೆ ನಮ್ಮ ಊರಿನ ಕನ್ಯಾಸ್ತ್ರಿಗಳು ನನಗೆ ಅಗತ್ಯವಾಗಿದ್ದ ಪುಸ್ತಕಗಳನ್ನು, ಯೂನಿಫ಼ಾರ್ಮ ಬಟ್ಟೆಗಳನ್ನು ಉಚಿತವಾಗಿ ಕೊಟ್ಟು ಶಾಲೆಯ ಫೀಜು ಅವರೇ ತುಂಬಿಸಿ ನನ್ನನ್ನು ಓದಿಸುತ್ತಿದ್ದರು. ದೇವರು ಮನುಷ್ಯನಾಗುತ್ತಾನೆ ಎಂದು ಹೇಳುವುದು ಈ ಜನರಿಂದಲೇ ಏನೋ! ಅವರ ಪ್ರತಿಮೆಗಳು ನನ್ನ ಹೃದಯದಲ್ಲಿ ಭದ್ರವಾಗಿ ಅನಾವರಣಗೊಂಡಿಬಿಟ್ಟಿತ್ತು. ಇವರ ಸಹಾಯ ಹಸ್ತದ ಜತೆಗೆ ನನ್ನ ಎದೆಯಲ್ಲಿ ಕುದಿಯುತ್ತಿದ್ದ ಶಾಲೆ ಕಲಿಯಬೇಕೆಂಬ ಆಸೆಯ ಬೆಂಕಿ, ಶಾಲೆಗೆ ನಮಸ್ಕಾರ ಹೇಳುವ ನನ್ನ ಧೈರ್ಯವನ್ನು ಎಂದೂ ಭಸ್ಮಮಾಡಿಬಿಟ್ಟಿತ್ತು. ನನ್ನ ಜನರ ಹುಡುಗರು ಮಾತ್ರ ಶಾಲೆಯನ್ನು ಕಂಡರೆ ನೂರು ಮೈಲಿ ದೂರ ಓಡುತ್ತಿದ್ದರು. ಯವುದೋ ದೆವ್ವ ಅವರನ್ನು ಬೆನೆಟ್ಟಿ ಓಡಿಸಿಕೊಂಡು ಹೋದಂತೆ.

 ಹೌದು ನನ್ನ ಜನರೆಂದರೆ ಯಾರು? ಊರಿನಲ್ಲಿ ಜನ ಹೊಲೆಯರು ಅಂತ ಕರೆಯಲ್ಪಟ್ಟವರೆ ನನ್ನ ಜನ. ಇನ್ನೊಂದು ಪಂಗಡದ ಜನರನ್ನು ಮಾದಿಗರೆನ್ನುತ್ತಿದ್ದರು. ಏಕೆ ಈ ರೀತಿ ನಮ್ಮನ್ನು ಕರೆಯುತ್ತಾರೆಂದು ನನಗೆ ಗೊತ್ತಿಲ್ಲ. ಅವ್ವಳನ್ನು ಕೇಳಿ ಕೇಳಿ ಸುಸ್ತಾಗಿ ಕೊನೆಗೆ ಅದರ ಸಹವಾಸವೇ ಬಿಟ್ಟುಬಿಟ್ಟಿದೆ. ಅಪ್ಪನ ಬಳಿ ಈ ರೀತಿಯ ಪ್ರಶ್ನೆಗಳನ್ನು ಕೇಳೋ ಹಾಗಿಲ್ಲ. ಅವನು ಗೌಡರ ಮನೆಯಲ್ಲಿ ಸಂಬಳಕ್ಕಿದ್ದ ಕಾರಣ ಅವನು ಮನೆಗೆ ಬರುತ್ತಿದ್ದೆ ಅಪರೂಪ. ಬೆಳಿಗ್ಗೆ ಅಷ್ಟೋತ್ಕೆ ನಾಗಮ್ಮ ಹೋಟೆಲ್‍ನಲ್ಲಿದ್ರೆ, ಸಂಜೆ ಸರಾಯಿ ಅಂಗಡಿಗೆ ಸೇರಿಬಿಡುತ್ತಿದ್ದ. ಕುಡಿತ ಜಾಸ್ತಿಯಾದ್ರೆ.. ಬೀದಿಯನ್ನೇ ಮನೆಮಾಡಿಕೊಳ್ಳುಬಿಡುತ್ತಿದ್ದ. ಎಷ್ಟೋ ಸಲ ಅವ್ವ ಮತ್ತು ನಾನು ಕುಡಿದು ಚಿತ್ತಾಗಿ ರಸ್ತೆಯಲ್ಲಿ ಬಿದ್ದಿರುತ್ತಿದ್ದ ಅಪ್ಪನನ್ನು ಮನೆಗೆ ಹೊತ್ತು ತಂದು ಮಲಗಿಸುವಷ್ಟ್ರಲ್ಲಿ ಸಾಕುಸಾಕಾಗಿ ಹೋಗಿಬಿಡುತ್ತಿತ್ತು. ಇದು ಒಂದು ತರದ ಯಮಯಾತನೆಯಾಗಿತ್ತು ನನಗೆ. ಯಾಕೆ ನನ್ನ ಅಪ್ಪ ಗಂಟ್ಲು ತುಂಬ ಕುಡಿಯುತ್ತಿದ್ನೋ ಗೊತ್ತಿಲ್ಲ?

ನಾನು ಹೊಲೆಯ ಎಂದು ಖುಷಿಯಾಗುತ್ತಿದ್ದುದು SC/ST ವಿದ್ಯಾರ್ಥಿಗಳು ಅಫೀಸ್‍ಗೆ ಬಂದು ಸ್ಕಾಲರ್‌ಷಿಪ್ ಹಣ ತೆಗೆದುಕೊಳ್ಳಿ ಎಂಬ ನೋಟಿಸ್ ತರಗತಿಗಳಲ್ಲಿ ಓದುವಾಗ ಮಾತ್ರ. ಬಾಕಿ ಸಮಯದಲ್ಲಿ ಯಾಕಪ್ಪ ನಾನು ಈ ಜಾತಿಯಲ್ಲಿ ಹುಟ್ಟಿದೆ ಎಂದು ಬೇಸರವಾಗುತ್ತಿತ್ತು. ಇದಕ್ಕೆ ನಮ್ಮ ಜಾತಿ ಕಾರಣವಾಗಿರಲಿಲ್ಲ. ಊರಿನ ಜನರು ನಮ್ಮನ್ನು ಕಾಣುತ್ತಿದ್ದ ರೀತಿ. ನಮ್ಮ ಮನೆಗಳು ಊರಿನ ಮೂಲೆಯಲಿದ್ದವು. ಅವು ಮನೆಯ ಕೋಣೆಯ ಮೂಲೆಯಲ್ಲಿ ಪರಕೆಯಿದ್ದಂತೆ. ನಮ್ಮ ಮನೆಗಳ ಮುಂದೆ ಮತ್ತು ಅಕ್ಕಪಕ್ಕಗಳಲ್ಲಿ ಮೇಲ್ವರ್ಗ ಜನರ ತಿಪ್ಪೆಗಳ ಗುಡ್ಡೆಗಳು ಸಾಲಾಗಿರುತ್ತಿದ್ದವು. ಇದ್ದರಿಂದ ಹಸುಕೊಟ್ಟಿಗೆಯಲ್ಲಿ ಜೀವಿಸುವ ಅನುಭವವಾಗುತ್ತಿತ್ತು ನನಗೆ. ಜತೆಗೆ ನಮ್ಮ ಮನೆಗಳಲ್ಲಿ ಶೌಚಾಲಯಗಳಿರದ ಕಾರಣ ನಮ್ಮ ಚಿಕ್ಕ ಮಕ್ಕಳು ಮನೆಯ ಮುಂದೆ ಕಕ್ಕಸು ಮಾಡಿ ನಮ್ಮ ಕೇರಿಯನ್ನೇ ಹೊಲಸೆಬಿಸಿಬಿಡುತ್ತಿದ್ದರು. ಮೇಲ್ವರ್ಗ ಜನರು ನಮ್ಮ ಕೇರಿಗೆ ಬರುತ್ತಿದ್ದೆ ಅಪರೂಪ. ಅಪ್ಪಿತಪ್ಪಿ ನಮ್ಮ ಕೇರಿಗೆ ಬಂದರೆ ಮೂಗು ಮುಚ್ಚಿಕೊಳ್ಳುತ್ತಿದ್ದರು. ಇವರ ವರ್ತನೆ ಒಂದು ತರಹ ತಾವೇ ಹೂಸು ಬಿಟ್ಟು ಮೂಗು ಮುಚ್ಚಿಕೊಳ್ಳುವಂತ್ತಿರುತಿತ್ತು.

ನಮ್ಮ ಜನ ಶಾಲೆಗೆ ಹೋಗೋದೇ ಹೆಚ್ಚು. ಹೋದವರು ಯಾರು ೧೦ನೇ ತರಗತಿಯ ಲಕ್ಷ್ಮಣರೇಖೆಯನ್ನು ದಾಟುತ್ತಿರಲಿಲ್ಲ. ಅಪ್ಪಿ ತಪ್ಪಿ ೧೦ನೇ ತರಗತಿಯನ್ನು ಮುಟ್ಟಿದರೂ ಮುಂದಿನ ವಿದ್ಯಾಭ್ಯಾಸಕ್ಕೆ ಮನಸ್ಸು ಮಾಡುತ್ತಿರಲಿಲ್ಲ. ನನ್ನ ಜನರಿಗೆ ಶಾಲೆ ಎನ್ನುವುದು ಜೀರ್ಣಿಸಿಕೊಳ್ಳಲಾಗದ ಊಟವಾಗಿರುತ್ತಿತ್ತು. ನಮ್ಮ ತಂದೆ ತಾಯಿಗಳಿಗೂ ತಮ್ಮ ಮಕ್ಕಳು ಶಾಲೆಗೆ ಹೋಗುವುದು ಬೇಡವಾಗಿತ್ತು. “ನೀನ್ ಶಾಲೆಗೋಗಿ ತಂದ್ ಹಾಕೋದ್ ಅಷ್ಟ್ರಲ್ಲೇ ಇದೆ. ತಿಕ ಮುಚ್ಕೊಂಡು ಸಂಬ್ಳಕ್ಕೆ ಸೇರಿಕೋ” ಎಂಬುವುದು ಅವರ ಮಾತಾಗಿತ್ತು. ಆದರೂ ಸಿಸ್ಟರ್ಸ್ ಮತ್ತು ಪಾದ್ರಿಗಳ ಒತ್ತಾಯಕ್ಕೆ ಅರೆಮನಸ್ಸಿನಿಂದ ಮಕ್ಕಳನ್ನು ಶಾಲೆಗೆ ದಾಖಲಿಸುತ್ತಿದ್ದರು. ಇಂತಹ ಪರಿಸ್ಥಿತಿಯನ್ನು ಮೆಟ್ಟಿ ವಿದ್ಯಾವಂತನಾದವರು ತೀರಾ ಕಡಿಮೆ.

ಶಾಲೆಯಲ್ಲೂ ವಿದ್ಯಾರ್ಥಿಗಳಿರಲಿ ನಮ್ಮ ಕೆಲ ಟೀಚರ್ಸ್‍ಗಳು ಸಹ ನಮ್ಮನ್ನು ಕೀಳಾಗಿ ನೋಡುತ್ತಿದ್ದರು. ನೀವು ಹೊಲೆಯರು ನಿಮಗ್ಯಾಕೆ ವಿದ್ಯಾಭ್ಯಾಸ? ನಿಮ್ಮ ತಲೆಗೆ ವಿದ್ಯೆ ಹತ್ತೋದಿಲ್ಲ. ನೀವು ಕೂಲಿ ಮಾಡುವುದಕ್ಕೇ ಲಾಯಕು… ಕೆಲ ಟೀಚರ್ಸ್‍ಗಳಿಲ್ಲಿದ ನಮ್ಮ ಬಗ್ಗೆಗಿನ ಪೂರ್ವಗ್ರಹಿಕೆ ಇದಾಗಿತ್ತು. ನೀವು ಕೊಳಕರು… ದುರ್ನಾತವೆಂದು ನಮ್ಮ ಬಳಿಗೆ ಬಂದಾಗ ಮೂಗು ಮುಚ್ಚಿಕೊಳ್ಳುತ್ತಿದ್ದರು. ಅಪ್ಪಿತಪ್ಪಿಯೂ ನಮ್ಮನ್ನು ತಮ್ಮ ಹತ್ತಿರಕ್ಕೆಸೇರಿಸಿಕೊಳ್ಳುತ್ತಿರಲಿಲ್ಲ. ನಮ್ಮ ಉಕ್ತಲೇಖನಗಳನ್ನು ಬೇರೆ ವಿದ್ಯಾರ್ಥಿಗಳಿಂದಲೇ ಪರಿಶೀಲಿಸಿ ತಿದ್ದಿತೀಡುತ್ತಿದ್ದರು. ಹೌದು ನಾವು ಕೂಡ ಸ್ನಾನ ಮಾಡಿಕೊಳ್ಳುತ್ತಿದ್ದೇ ವಾರಕೊಮ್ಮೆ. ಕೆಲವೊಮ್ಮೆ ಅದೂ ಇಲ್ಲ. ಹೊಟ್ಟೆಗೆ ಸರಿಯಾಗಿ ಊಟ ಸಿಗುವುದೇ ಕಷ್ಟವಾಗಿರಬೇಕಾದರೆ.. ನಮಗೆಲ್ಲಿ ಬಾಚಣಿಗೆ, ಎಣ್ಣೆ ಪೌಡರ್ ಸಿಗಬೇಕು? ಶಾಲೆಗೆ ಧರಿಸಲು ಯೋಗ್ಯವಾದ ಬಟ್ಟೆಗಳೆಂದರೆ ವರ್ಷದ ಪ್ರಾರಂಭದಲ್ಲಿ ಕೊಡುತ್ತಿದ್ದ ಯುನಿಫ಼ಾರ್ಮ ಬಟ್ಟೆಗಳು. ನಮ್ಮ ಮಿತಿಮೀರಿದ ಉಪಯೋಗದಿಂದ ಅವುಗಳು ಸಹ ತ್ಯಾಪೆಗಳಿಂದ ತುಂಬಿಹೋಗುತ್ತಿದ್ದವು.

ನಮ್ಮ ಮನೆಗಳು ಚಿಕ್ಕದಾಗಿದ್ದವು. ಮನೆಗಳೆನ್ನುವುದಕ್ಕಿಂತ ಗೂಡುಗಳೆಂದರೆ ಎಷ್ಟೋ ವಾಸಿ. ಅದು ಯಾವುದೋ ಪುಣ್ಯವತಿ ಸಿಸ್ಟರ್ ಕಟ್ಟಿಸಿಕೊಟ್ಟ ಮನೆಗಳಂತೆ. ಸಿಮೆಂಟ್ ಕಾಣದ ಮಣ್ಣಿನ ಮನೆಗೆಳು. ಮನೆಗಳಿಗೆ ಇದುದ್ದು ಎರಡೇ ಕೋಣೆಗಳು. ಮಧ್ಯದ ದೊಡ್ಡದೊಂದು ಕೋಣೆ ಮತ್ತು ಚಿಕ್ಕ ಅಡಿಗೆ ಮನೆ. ಸಾಮಾನ್ಯವಾಗಿ ನಮ್ಮ ಮನೆಗಳಿಗೆ ಇರುತ್ತಿದ್ದು ಒಂದು ಕಿಟಕಿ ಹಾಗು ಒಂದ್ ಬಾಗಿಲು. ಗಾಳಿ ಬೆಳಕು ಸಹ ನಮ್ಮ ಮನೆಗಳ ಮೇಲೆ ಅಸ್ಪೃಶ್ಯತೆ ಸಾಧಿಸುತ್ತಿತೋ ಎನೋ,!! ಅವು ನಮ್ಮ ಮನೆಗಳನ್ನು ಪ್ರವೇಶಿಸುತ್ತಿರಲಿಲ್ಲ. ಪ್ರವೇಶಿಸಲು ಸರಿಯಾದ ಬಾಗಿಲು ಕಿಟಕಿಗಳಿದ್ದರೆ ತಾನೆ! ಈ ಕಾರಣದಿಂದ ನಮ್ಮ ಮನೆಗಳು ಕತ್ತಲ ಗುಹೆಗಳಂತಿದ್ದವು. ಕೆಲವರ ಮನೆಗಳಲ್ಲಿ ಮಾತ್ರ ವಿದ್ಯುತ್ತಿನ ದೀಪಗಳಿದ್ದವು. ಅದು ಸರ್ಕಾರದ ಭಾಗ್ಯಜ್ಯೋತಿಯ ಯೋಜನೆ ಫಲದಿಂದ.

ಶಾಲೆಯ ಸ್ವಚ್ಛತೆಯ ಕೆಲಸದಲ್ಲಿ ನಮ್ಮ ಜಾತಿಯ ಹುಡುಗರದೇ ಮೇಲುಗೈ. ಮನೆಯಲ್ಲಿ ಮಾಡುತ್ತಿದ್ದ ಕೆಲಸಗಳಿಗೆ ಹೋಲಿಸಿ ನೋಡಿದರೆ ಶಾಲೆಯ ಸ್ವಚ್ಛತೆಯ ಕೆಲಸ ಅಷ್ಟಕಷ್ಟೇ. ಆಟಗಳಲ್ಲಿ ಕೂಡ ನಾವು ಮುಂದು. ಈ ಕಾರಣದಿಂದ ಇತರ ಹುಡುಗರು ನಮ್ಮನ್ನು ಆಟವಾಡಲು ಉಪಯೋಗಿಸಿಕೊಳ್ಳುತ್ತಿದ್ದರು. ಶಾಲೆ ಪ್ರಾರಂಭವಾಗುವ ಮುಂಚೆ ಒಂದು ಸುತ್ತಿನ ಆಟ ಮುಗಿದರೆ, ಇನ್ನೊಂದು ಮಧ್ಯಾಹ್ನ ಊಟದ ಸಮಯಕ್ಕೆ. ಜೂಟಾಟ, ಪೋಲಿಚೆಂಡ್, ಮರದಕೋತಿ ..ನಾವು ಆಡುತ್ತಿದ್ದ ಆಟಗಳು. ಹೀಗೆ ಒಂದು ಮಧ್ಯಾಹ್ನ ತುಂಬಾ ಆಟವಾಡಿದ ಕಾರಣ ನಮಗೆಲ್ಲಾ ಸಿಕ್ಕಾಪಟ್ಟೆ ಬಾಯಾರಿಕೆಯಾಗಿತ್ತು. ಬಾಯಾರಿಕೆಯನ್ನು ತಣಿಸಿಕೊಳ್ಳಲು ನಾವು ಯಾವಾಗಲೂ ಹೋಗುತ್ತಿದ್ದ ಅಂತೋಣಿಯ ಮನೆಗೆ ಹೋದೆವು. ಅಂತೋಣಿಯ ಮನೆ ಶಾಲೆಯ ಪಕ್ಕದಲ್ಲಿತ್ತು. ಮನೆಯನ್ನು ತಲುಪಿದಾಕ್ಷಣ ನಮಗಾಗಿಯೇ ಇರಿಸಿದ ಪ್ರತ್ಯೇಕ ಲೋಟಗಳಿಗೆ ಹುಡುಕಾಡಿದೆವು. ಆ ದಿನ ನಮ್ಮ ಲೋಟಗಳು ಕಾಣೆಯಾಗಿದ್ದವು. ನೀರುನ್ನು ನೀಡುತ್ತಿದ್ದ ಅಂತೋಣಿ ಅವರ ಲೋಟಗಳಲ್ಲೇ ನಮಗೆ ನೀರುನ್ನು ಕೊಡಲು ಬಂದಾಗ, ಅವನ ತಾಯಿ ’ಅವ್ರ ಕೈಗೆ ಲೋಟ ಕೊಡಬೇಡ… “ಬೇಕಾದ್ರೆ… ಚೊಂಬಿನಿಂದ ಅವರ ಕೈಗೆ  ಮೇಲಿಂದ ನೀರು ಹಾಕು ಬೊಗಸೆಯಲ್ಲಿ ಕುಡಿಯಲ್ಲಿ” ಎಂದು ಅಂತೋಣಿಯನ್ನು ಬೈದರು. ನನಗೆ ಬೇಸರವಾಯ್ತು. ಒಂದು ತರ, ಬೆಕ್ಕಿನ ಮುಂದೆ ಇಲಿಗೆ ಬೇಸರವಾದಂತೆ. ಸುಮ್ಮನಾದೆ. ನನ್ನ ಎರುಡು ಕೈಗಳನ್ನು ಜೋಡಿಸಿ ಬೊಗಸೆ ಮಾಡಿ ಮೇಲಿನಿಂದ ಸುರಿದ ನೀರನ್ನು ಕುಡಿದು ಶಾಲೆಗೆ ಹೊರಟೆ.

ಆ ದಿನ  ಶಾಲೆಯಲ್ಲಿ ಪಾಠ ಕೇಳಲು ಸಾಧ್ಯವಾಗಲಿಲ್ಲ. ನಮ್ಮನ್ನು ಏಕೆ ಜನರು ತುಚ್ಛವಾಗಿ ಕಾಣುತ್ತಾರೆ ಎಂಬ ಪ್ರಶ್ನೆ ಕಾಡಲು ಪ್ರಾರಂಭಿಸಿತ್ತು. ಪ್ರಶ್ನೆಗಳ ಮೇಲೆ ಪ್ರಶ್ನೆಗಳು ನನ್ನಲ್ಲಿ ಹುಟ್ಟಿ ಉತ್ತರಕ್ಕೆ ಕಾಯುತ್ತಿದ್ದವು. ಇನ್ನೊಂದು ಕಡೆ, ಊರಿನಲ್ಲಿ ನಡೆಯುವ ಅಸ್ಪೃಶ್ಯತೆಯ ಒಂದೊಂದೆ ಇಣುಕು ಕಣ್ಣ ಮುಂದೆ ಪ್ರತ್ಯಕ್ಷವಾಗಲು ಪ್ರಾರಂಭಿಸಿತ್ತು. ಊರಿನಲ್ಲಿ ನಡೆಯುವ ಬೇಡದೆಲೆಯಲ್ಲಿ ನಮಗಾಗಿಯೇ ಒಂದು ಪ್ರತ್ಯೇಕ ಜಾಗವಿರುತ್ತಿತ್ತು. ಯಾವುದೇ ಕಾರಣಕ್ಕೂ ನಾವು ಮೇಲ್ಜಾತಿಯವರು ಅಡುಗೆ ಮಾಡುವ ಸ್ಥಳಕ್ಕೆ ಹೋಗುವಂತಿರಲಿಲ್ಲ. ಅವರು ಉಪಯೋಗಿಸುತ್ತಿದ್ದ ಪಾತ್ರೆಗಳನ್ನು ನಾವು ಮುಟ್ಟುವಂತಿರಲಿಲ್ಲ. ಸೌಹಾರ್ದತ್ವ, ಸಮಾನತೆ, ಸಹೋದರತ್ವ ಬೆಳೆಸುವ ಉದ್ದೇಶದಿಂದ ಪ್ರಾರಂಭಗೊಂಡ ಇಂತಹ ಬೇಡುದೆಲೆಗಳಲೇ ನಮ್ಮನ್ನು ಪ್ರತ್ಯೇಕವಾಗಿಸುವುದನ್ನು ಕಂಡು ಮನಸ್ಸು ರೋಸಿಹೋಗುತ್ತಿತ್ತು. ಅಸ್ಪೃಶ್ಯತೆಯೆಂಬ ಭೂತ ಸತ್ತ ಹೆಣವನ್ನು ಸಹ ಬಿಡುತ್ತಿರಲಿಲ್ಲ. ನಮ್ಮ ಜನರ ಸತ್ತಾ ದೇಹವನ್ನು ಹೂಳಲು ಸಹ ಸಮಾಧಿಯಲ್ಲಿ ಪ್ರತ್ಯೇಕ ಸ್ಥಳವಿತ್ತು. ಮೇಲ್ಜಾತಿಯರು ಉಪಯೋಗಿಸುತ್ತಿದ್ದ ಬಾವಿಯಿಂದ ನಾವು ನೀರು ಸೇದುವಂತಿರಲಿಲ್ಲ. ಒಟ್ಟಾರೆ, ನಮ್ಮ ಬದುಕು ಅಮಾನವೀಯವಾಗಿತ್ತು.

ನಮಗೆ ಭಾನುವಾರಗಳಲ್ಲಿ ನಡೆಯುತ್ತಿದ್ದ ಧರ್ಮೋಪದೇಶದಲ್ಲಿ ನಮ್ಮ ಟೀಚರ್ಸ ’ ನಾವು ದೇವರ ಪ್ರತಿರೂಪ, ದೇವರ ನಮ್ಮನ್ನೆಲ್ಲರನ್ನೂ ಸಮಾನರಾಗಿ ತನ್ನ ರೂಪದಲ್ಲಿ ಸೃಷ್ಟಿಸಿದ್ದಾನೆ..” ಎಂದು ಹೇಳುವಾಗ,,, ನನ್ನ ಹೃದಯ ಬೆಂಕಿಯಾಗುತಿತ್ತು. ಪಾದ್ರಿಗಳು ಪೂಜೆಯ ಸಮಯದಲ್ಲಿ ಬೋಧಿಸುತ್ತಿದ್ದು ಕೂಡ ನನಗೆ ಅರ್ಥಹೀನವಾಗಿ ಕಾಣುತ್ತಿತ್ತು. ಅದ್ದರಿಂದ ಬಲಿಪೂಜೆ ಹೋಗಲು ನಿಲ್ಲಿಸಿಬಿಟ್ಟು ಸಿಸ್ಟರ್ಸ್ ಮತ್ತು ಪಾದ್ರಿಗಳ ಕಣ್ಣುಗಳಲ್ಲಿ ಕೆಟ್ಟ ಹುಡುಗನಾದೆ. ನಾಸ್ತಿಕ ಎಂಬ ಗೌರಕ್ಕೆ ಪಾತ್ರನಾದೆ. ಹೌದು ಎಲ್ಲರೂ ಸಮಾನರು ಎಂದು ಸಾರುವ ಕೈಸ್ತಧರ್ಮದಲ್ಲಿ ಈ ರೀತಿಯ ಜಾತಿಪದ್ಧತಿ ಇರುವುದು ನಿಮಗೆ ನಂಬಲಾಸಾಧ್ಯವಾಗಬಹುದು. ಆದರೆ ಇದು ಸತ್ಯ. ಹೀಗೆ ನಾವು ಕಲಿಯುತ್ತಿದ್ದ ಪಾಠಗಳು, ಪಾಲಿಸುತ್ತಿದ್ದ ಧರ್ಮಚರಣೆಗಳು ನಮ್ಮ ಬದುಕಿನ ವಾಸ್ತವ ಒಂದೊಂದು ಸಂಬಂಧವಿಲ್ಲದಂತೆ ನಡೆಯುತ್ತಿದ್ದವು. ಆದ್ದರಿಂದ ಎಲ್ಲವೂ ನನಗೆ ಅರ್ಥಹೀನವಾಗಿ ಕಾಣುತ್ತಿತ್ತು. ನನಗೆ ಮಾತ್ರವಲ್ಲ ನನ್ನ ಜನರಿಗೂ ಕೂಡ. ಆದ್ದರಿಂದ ನನ್ನ ಜನರಿಗೆ ಧಾರ್ಮಿಕ ವಿಧಿಯಾಚರಣೆಗಳಲ್ಲಿ ಎಳ್ಳಷ್ಟೂ ಆಸಕ್ತಿಯಿರಲಿಲ್ಲ. ಅವರು ಕೂಡ ಬಲಿಪೂಜೆಗಳಿಗೆ ಹೋಗುತ್ತಿದ್ದೇ ಅಪರೂಪ.

ಹೀಗೆ ಒಂದು ದಿನ ಕೂಲಿಗೆ ಹೋಗಿದ್ದ ನನ್ನ ಅವ್ವ ತನ್ನೊಡನೆ ಮನೆಯ ಬೀಗದ ಕೀಲಿಯನ್ನು ಸಹ ಎತ್ತಿಕೊಂಡು ಹೋಗಿಬಿಟ್ಟಿದರಿಂದ ಮಧ್ಯಾಹ್ನ ಊಟಕ್ಕೆ ಪರದಾಡಬೇಕಾಯ್ತು. ಎಂದಿನಂತೆ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಶಾಲೆಗೆ ಬಂದಿದ್ದರಿಂದ ಮಳೆಗಾಲದಲ್ಲಿ ವಟರ್‍ಗುಟ್ಟುವ ಕಪ್ಪಯಂತೆ ನನ್ನ ಹೊಟ್ಟೆ ವಟರ್ ವಟರ್ ಎಂದು ಸದ್ದು ಮಾಡಲಾರಂಭಿಸಿತ್ತು. ಖಾಲಿ ಹೊಟ್ಟೆಯನ್ನು ಸುಮ್ಮನಿರಿಸಲು ಏನದರೂ ಮಾಡಲೇ ಬೇಕಾಯ್ತು. ಹೂಟ್ಟೆ ತುಂಬ ನೀರು ಕುಡಿದೆ. ಆದರೂ ನನ್ನ ಹೊಟ್ಟೆ ಸುಮ್ಮನಾಗಲಿಲ್ಲ. ಕೊನೆಗೆ ಅವ್ವಳ ಬಳಿಯಿಂದ ಕೀಲಿ ತಂದು ಊಟಮಾಡಲು ನಿರ್ಧಾರಿಸಿದೆ. ನಿರ್ಧಾರದಂತೆ ಹೊಲಕ್ಕೆ ಹೋಗಿ ಕೀಲಿ ತಂದು ಊಟ ಮಾಡಿ ಬರುವಷ್ಟರಲ್ಲಿ ಸ್ಪಲ್ಪ ತಡವಾಗಿತ್ತು. ಅವಸರದಲ್ಲೇ ಶಾಲೆಯ ಕಡೆಗೆ ಓಡ ತೊಡಗಿದೆ. ಶಾಲೆಯ ಗೇಟಿನ ಹತ್ತಿರ ಬಂದಾಗ ಸಿಕ್ಕಪಟ್ಟೆ ಬಾಯಾರಿಕೆಯಾಗಿ ನನ್ನ ಬಾಯಿ ಪೂರ್ತಿ ಒಣಗಿತ್ತು. ಅಭ್ಯಾಸದಂತೆ ಶಾಲೆಯ ಪಕ್ಕದಲ್ಲೇ ಇದ್ದ ಅಂತೋಣಿಯ ಮನೆಗೆ ನೀರು ಕುಡಿಯಲು ಹೋದೆ. ಮನೆಯ ಮುಂದಿನ ಕೋಣೆಯನ್ನು ತಲುಪುತ್ತಿದಂತೆ, ಅಂತೋಣಿಯ ತಾಯಿ ಸುಸ್ತಾಗಿ ನೆಲದ ಮೇಲೆ ಕುಸಿದು ಬೀಳುವುದನ್ನು ಕಂಡು ತಬ್ಬಿಬಾದೆ. ಮನೆಯಲ್ಲಿ ಕೂಡ ಯಾರು ಇರಲಿಲ್ಲ. ನನಗೆ ಏನು ಮಾಡಬೇಕೆಂದು ತೋಚಲಿಲ್ಲ. ಅವರಿಗೆ ನೀರು ತಂದು ಕುಡಿಸಬೇಕಾ? ಬೇಡವಾ? ವಿಪರೀತ ಇಕ್ಕಟ್ಟಿಗೆ ಸಿಕ್ಕಿಕೊಂಡೆ.  ಇದರ ನಡುವೆ, ಅವತ್ತು ಅಂತೋಣಿ ನನಗೆ ಅವನ ಲೋಟದಲ್ಲಿ ನೀರು ಕೊಡಲು ಬಂದಾಗ.. ’ಅವ್ರ ಕೈಗೆ ಲೋಟ ಕೊಡಬೇಡ.. “ ಎಂದು ಈ ತಾಯಿ ಬೈದ ಪ್ರಸಂಗವೂ ಕೂಡ ನನ್ನ ಮನಸ್ಸಿನಲ್ಲಿ ನುಸುಳಿಯಾರಂಭಿಸಿತ್ತು. ಏನು ಮಾಡುವುದೆಂದು ತೋಚದೆ ಕೊನೆಗೆ, ಧೈರ್ಯಮಾಡಿ ಮನೆಯ ಒಳಗೆ ಹೋಗಿ ನೀರು ತಂದು ಅವರ ಮುಖದ ಮೇಲೆ ನೀರನ್ನು ಚಿಮುಕಿಸಿ, ಕುಡಿಸಿ ಅವರನ್ನು  ಕುರ್ಚಿಯ ಮೇಲೆ ಕೂರಿಸಿದೆ. ಸಾವಕಾಶವಾಗಿ ಚೇತರಿಕೊಳ್ಳುತ್ತಿದ್ದ ಅಂತೋಣಿಯ ತಾಯಿಯ ಕಣ್ಣುಗಳು ಒಮ್ಮೆಲೇ ನನ್ನನ್ನು ನೋಡಲಾರಂಭಿಸಿದವು. ಅವಳ ಕಣ್ಣುಗಳು ಒಂದು ಕ್ಷಣಕಾಲ ಅಕ್ಕಪಕ್ಕ ತಿರುಗದೆ ನನ್ನ ಮೇಲೆ ನಿಶ್ಚಲವಾಗಿ ನೆಟ್ಟಿತ್ತು. ಸಿಟ್ಟುಕೊಂಡ ನೋಟವೋ? ಆಭಾರಿಯಾದ ನೋಟವೋ? ಗೊತ್ತಗಲಿಲ್ಲ. ಕಳ್ಳವಳ್ಳಗೊಂಡೆ.  ಈ ನೋಟದ ಅರ್ಥವಾದರೂ ಏನು? ಎಂಬ ಪ್ರಶ್ನೆ ನನ್ನನ್ನು ಕಾಡಲಾಂಭಿಸಿತ್ತು. ಒಟ್ಟಿನಲ್ಲಿ ಅವರ ನೋಟ ತೀಕ್ಷ್ಣವಾದ ಅಸಾಧರಣ ನೋಟವಾಗಿತ್ತು. ನೋಟದ ವಿಶ್ಲೇಷಣೆಯ ಗುಂಗಿನಲ್ಲೇ ಶಾಲೆ ಸೇರಿ ತಲೆ ತಗ್ಗಿಸಿ ತರಗತಿಯ ಬಾಗಿಲ ಬಳಿ ನಿಂತೆ. ತಗ್ಗಿ ಬಗ್ಗಿ ನಿಲ್ಲುವುದು ರಕ್ತಗತವಾಗಿಬಿಟ್ಟಿರುವ ನನಗೆ ತಗ್ಗಿ ನಿಲ್ಲಲು ಕಷ್ಟವಾಗಲಿಲ್ಲ . ಪೂಜೆಗೆ ಕರಡಿ ಬಿಟ್ಟಂತೆ ಬಂದ ನನ್ನನ್ನು ಟೀಚರ್ ಗುರಾಯಿಸಿ. …”ಈ… ಜನಗಳೇ ಹೀಗೆ… ಇವರನ್ನು ಯಾಕಾಗಿ ಶಾಲೆಗೆ ಸೇರಿಸ್ತಾರೋ…ಎಂದು ರಾಗ ಎತ್ತುತ್ತಿದಂತೆ.. ಟೀಚರ್‍ನನ್ನೇ ಸುಟ್ಟು ಭಸ್ಮಮಾಡುವಷ್ಟ ಕೋಪ ನನ್ನ ಮನಸ್ಸನು ತುಂಬಿತ್ತು. ಆದರೂ ಮರು ಮಾತನಾಡದೇ.. ಬಾಲ ಅಲ್ಲಾಡಿಸಿಕೊಂಡು ಯಜಮಾನನ ಮಾತು ಕೇಳುವ ನಾಯಿಯಂತೆ, ನಾನು ಕೂರುತ್ತಿದ್ದ ಸ್ಥಳದ ಕಡೆ ತಲೆ ತಗ್ಗಿಸಿಯೇ ಹೆಜ್ಜೆ ಹಾಕಿದೆ. ತರಗತಿಯಲ್ಲಿ ಎಲ್ಲರ ಕಣ್ಣು ನನ್ನ ಮೇಲೆ ನಾಟಿತ್ತು. ಮುಜುಗರದಿಂದಲೇ ನನ್ನ ಸ್ಥಳದಲ್ಲಿ ಕೂತು ಪಾಠ ಕೇಳಲು ಪ್ರಯತ್ನಿಸಲು ಪ್ರಾರಂಭಿಸಿದೆ…ಆದರೂ ಅಂತೋಣಿ ತಾಯಿಯ ನೋಟದ ಅರ್ಥವಾದರೂ ಏನು? ಎಂಬ ಪ್ರಶ್ನೆ ಉತ್ತರಕ್ಕಾಗಿ ಪೀಡಿಸತೊಡಗಿತ್ತು………….!!!


ಜೋವಿ
Read more!

Monday, 30 July 2012

ಉಳುವ ಯೋಗಿಯ ನೋಡಲ್ಲಿ


ಬಡಕಲು ದೇಹ ನಡಕಲು ನಡಿಗೆಯಲ್ಲಿ ನಡೆದು ಬಂದ ಈ ದೇಶಕ್ಕೆ ಅಷ್ಟಿಷ್ಟು ಗಟ್ಟಿಯಾಗಿ ನಿಲ್ಲಲು ಆಸರೆಯಾದುದು "ಬೆನ್ನೆಲುಬು". ಒಬ್ಬ ಮನುಷ್ಯನ ಒರಟುತನಕ್ಕೆ, ಗಡಸುತನಕ್ಕೆ ಅವನ ತಾಕತ್ತಿಗೆ ಬೆನ್ನೆಲುಬು ಸಾಕ್ಷಿಯಾಗಿ ನಿಲ್ಲುವಂಥದ್ದು. ನಾನು ಈಗಾಗಲೇ "ಈ ದೇಶಕ್ಕೆ" ಎಂದು ಬರೆದುಬಿಟ್ಟಿದ್ದೇನೆ. ಇದು ದೇಹಕ್ಕೋ, ದೇಶಕ್ಕೋ ಎಂಬ ಗೊಂದಲ ಮೂಡಿದ್ದರೆ ನೀವು ಸರಿಯಾದ ಧಾಟಿಯಲ್ಲೇ ಯೋಚಿಸುತ್ತಿದ್ದೀರಿ ಎಂದು ಭಾವಿಸುತ್ತೇನೆ. ಇಲ್ಲಿ ದೇಶದ ಬೆನ್ನೆಲುಬಿನ ಬಗ್ಗೆಯೇ ಹೇಳಲು ಹೊರಟ್ಟಿದ್ದೇನೆ. 

ಈ ದೇಶದ ಬೆನ್ನೆಲುಬು ರೈತ ಎಂದು ಅದಾವ ಧೀರೊದ್ಧಾತ ಉದ್ಘರಿಸಿದನೋ?!!.. ಗೊತ್ತಿಲ್ಲ. ಉದ್ದುದಗಲ ದೇಶ ಕೃಷಿಯನ್ನೇ ಪ್ರಧಾನವಾಗಿ ನೆಚ್ಚಿಕೊಂಡು ಉಸಿರಾಡುತ್ತಾ ಹೆಸರೇಳುತ್ತ ಬಂದಿರುವುದೆ ಇದಕ್ಕೆ ಸಾಕ್ಷಿ. ಆದರೆ ಈಗಿನ ಪೀಳಿಗೆ ಕೃಷಿಯಂತಹ ಕ್ಲಿಷ್ಟ ಕೆಲಸವನ್ನು ದೂರವಿಟ್ಟು ಬೇರೆ ಬೇರೆ ಉದ್ಯೋಗವನ್ನು ಹರಸಿ ಹೋಗುತಿರುವುದರಿಂದ ರೈತವರ್ಗ ಶೇಕಡವಾರಿನಲ್ಲಿ ಕ್ಷೀಣಿಸುತಿದೆ. ರೈತ ದೇಶದಲ್ಲಿ "ಬೆನ್ನೆಲುಬಿನಂತಹ" ಪ್ರಧಾನ ಸ್ಠಾನವನ್ನು ಕಳೆದುಕೊಳ್ಳುತ್ತಿದ್ದಾನೆಯೆ? ಎಂಬ ಪ್ರಶ್ನೆ ಮೂಡುತಿದೆ. ಆ ಸ್ಠಾನವನ್ನು ತುಂಬಬಲ್ಲ ಇತರೆ ಉದ್ದಿಮೆಗಳು ನಮ್ಮ ದೇಶವನ್ನು ನಿಧಾನವಾಗಿ ಆವರಿಸುತ್ತಿವೆಯಾದರು ಕೃಷಿಯೇ ಇಂದಿಗೂ ದೇಶದ ಪ್ರಧಾನ ಉದ್ದಿಮೆ. ರೈತರೆ ಅದರ ಬೆನ್ನೆಲುಬು ಅನ್ನುವುದು ಮಾತ್ರ ಸಾರ್ವತ್ರಿಕ.  

 ಜಾಗತೀಕರಣ, ಉದಾರೀಕರಣ, ಖಾಸಗಿಕರಣಗಳಂಥ ನೀತಿಗಳು ಜಾರಿಯಾದದ್ದೇ ತಡ ಇತರೆ ಎಲ್ಲ ಉದ್ಧಿಮೆಗಳಿಂದ ಆದಾಯವೂ ಹೆಚ್ಚು, ಲಾಭವೂ ಹೆಚ್ಚು. ಅದರ ಫಲವಾಗಿ ಬೆಲೆ ಏರಿಕೆಯೂ ಹೆಚ್ಚಾಗಿದೆ. ವಾಸಕ್ಕೆ ಅಗತ್ಯವಾಗಿರುವ ಯಾವ ವಸ್ತುವೇ ಆಗಲಿ, ಆಹಾರ ತಿಂಡಿ-ತಿನಿಸುಗಳೇ ಆಗಲಿ ವಿಪರೀತ ಎನುವಷ್ಟು ಬೆಲೆ ಏರಿಕೆಯಾಗಿದೆ. ಕೃಷಿ ಉದ್ದಿಮೆಯಲ್ಲಿ ಅಕ್ಕಿ ಬೇಳೆ ತರಕಾರಿಯಂತಹ ದಿನ ಬಳಕೆಗಳು ಕೈಗೆಟುಕದ ಬೆಲೆ ಮುಟ್ಟಿದೆ. ವಿಧಿಯಿಲ್ಲದೆ ಕೊಂಡುಕೊಳ್ಳಲೇಬೇಕು. ಇಂತಹ ಸ್ಥಿತಿಯಲ್ಲಿ ಇವನ್ನೆಲ್ಲ ಬೆಳೆದ ರೈತ ಇದರ ಬಹುಪಾಲು ಲಾಭಪಡೆದು ಶ್ರೀಮಂತವರ್ಗದವನಾಗಬೇಕಿತ್ತು; ದೊಡ್ಡ ಉದ್ಧಿಮೆಯಾಗಿ ಬೆನ್ನೆಲುಬು ಎಂಬ ಪಟ್ಟದ ಜೊತೆಗೆ ತಲೆ, ಭುಜ, ತೊಳು, ಸೊಂಟದಾದಿಯಾಗಿ ಎಲ್ಲ  ಬಿರುದನ್ನು ಪಡೆಯಬೇಕಿತ್ತು ಕೃಷಿ;  ಆದರೆ ಅದದ್ದೇನು! ಕೀಟಗಳಂಥ ಮಧ್ಯವರ್ತಿಗಳಿಂದ ನೆಲಕಚ್ಚುತ್ತಾಹೋಯಿತು. ಒಂದು ರೀತಿಯಲ್ಲಿ ಮಧ್ಯವರ್ತಿಗಳಿಂದ ಮೋಸಕ್ಕೊಳಗಾದ ಉದ್ದಿಮೆಯಾಗಿಬಿಟ್ಟಿದೆ. ಅತ್ತ ಮಾರುಕಟ್ಟೆಯ ಬೆಲೆಯೂ ಇಲ್ಲದೇ ಬೆಂಬಲಬೆಲೆಯೂ ಸಿಗದೆ ಕುಸಿಯುತ್ತಿದ್ದಾನೆ ರೈತ.
         ಎಲ್ಲರ ಸ್ಥಿತಿಯಲ್ಲೂ ಉತ್ತಮದತ್ತ ಬದಲಾವಣೆಗಳು ಕಾಣಿಸುತಿರುವಾಗ ನಿಸ್ವಾರ್ಥ ರೈತನ ಸ್ಥಿತಿ ಮಾತ್ರ ಹಾಗೆ ಇದೆ. ಕಾರಣ ಸಾಮಾನ್ಯ ಅಕ್ಕಿಯ ಬೆಲೆ 30 ರಿಂದ 50 ಇರುವಾಗ ಅದರ ಉತ್ಪಾದಕ ರೈತನಿಗೆ ಸಿಗುವುದು ಕೇವಲ 8 ರಿಂದ 12 ರೂ. ಮಾತ್ರ. ಅಂದರೆ ಇದರ ನಾಲ್ಕು ಪಟ್ಟು ಲಾಭ ಬಂಡವಾಳಶಾಹಿಗೆ, ವ್ಯಾಪಾರಸ್ಥರಿಗೆ ಮತ್ತು ಮಧ್ಯವರ್ತಿಗಳಿಗೆ ಸೇರುತ್ತಿದೆ. ಉತ್ತು, ನಾಟಿಮಾಡಿ, ನಾಲ್ಕೈದು ತಿಂಗಳು ನೀರುಣಿಸಿ, ಕ್ರೀಮಿ ಕೀಟ ರೋಗಗಳಿಂದ ಕಾಪಾಡಿ ನಿದ್ದೆಗೆಟ್ಟು ಬೆಳೆ ತೆಗೆದರೆ ಕಡೆಗೆ ತಾನೂ ನೆಮ್ಮದಿಯಾಗಿ ಅನ್ನ ತಿನ್ನಲಾಗದ ಪರಿಸ್ಥಿತಿ. ಒಂದು ಮೂಟೆ ಮನೆ ಮನೆಮಂದಿಗಾಗಲಿ ಎಂದು ಮಾರದೆ ಉಳಿಸಿಕೊಂಡರೆ, ಮಾರಿದ್ದರಿಂದ ಬಂದ ಹಣ ಖರ್ಚನ್ನು ಸರಿದೂಗಿಸುವುದಿಲ್ಲವಲ್ಲ ಎಂಬ ಆತಂಕ. ಇತ್ತ ದೊಡ್ಡ ಪಟ್ಟಣಗಳಲ್ಲಿ "ಮಾಲ್" ಗಳ ಸಂಸ್ಕೃತಿ ಹೆಚ್ಚುತಿದೆ. ಇಂತಹ ಮಾಲುಗಳಲ್ಲಿ ಒಂದು ಪೊಪ್‌ಕಾನ್ ಪೊಟ್ಟಣವನ್ನು ಕೊಂಡುಕೊಂಡರೆ 80 ರಿಂದ 100 ರೂ. ಇದನ್ನು ತಯಾರಿಸಲೊ ನಾಲ್ಕು ಹಿಡಿ ಮೆಕ್ಕೆಜೋಳ ಬಳಸಿದ್ದರೆ ಹೆಚ್ಚು. ಆ ನಾಲ್ಕು ಹಿಡಿ ಮೆಕ್ಕೆ ಜೋಳವನ್ನು ಉತ್ಪಾದಕ ರೈತನಿಂದ ಖರೀದಿಸುವಾಗ ಒಂದೋ ಎರಡೊ ರೂಪಾಯಿ ಕೊಟ್ಟಿರುತ್ತಾರೆ ಅಷ್ಟೇ.  ಇದಕ್ಕೊಂದು ತಾಜಾ ಉದಾಹರಣೆ; ಇತ್ತೀಚೆಗೆ ಮಧ್ಯವರ್ತಿಗಳೊಬ್ಬರು ನಮ್ಮ ಊರಿನಲ್ಲಿ ತೆಂಗಿನಕಾಯಿಯನ್ನು ಒಂದಕ್ಕೆ 3 ರೂಗೆ ಕೊಂಡುಕೊಂಡರು. ಆದರೆ ಬೆಂಗಳೂರಿನಲ್ಲಿ ಆ ತೆಂಗಿನಕಾಯಿಗೆ 10 ರಿಂದ 15 ರೂ. ಬೆಲೆಯಿದೆ. ತಮಾಷೆ ಏನೆಂದರೆ ಹತ್ತು ವರ್ಷದ ಹಿಂದೆಯೂ ರೈತರಿಂದ ತೆಂಗಿನಕಾಯಿ ಒಂದಕ್ಕೆ 3 ರೂ ಕೊಟ್ಟು ಖರೀದಿಸುತಿದ್ದರು. ರೈತರನನ್ನು ಈಗಲೂ ಅಮಾಯಕನನ್ನಾಗಿ ಇರಿಸಿದ್ದಾರೆ ಮಧ್ಯವರ್ತಿಗಳು. ಎಳನೀರಿನ ವ್ಯಾಪಾರದಲ್ಲೂ ಇದೆ ದೊರಣೆ. ಇದ್ಯಾವುದರ ಅಂದಾಜು ಲೆಕ್ಕಾಚಾರ ತಿಳಿದಿಲ್ಲದ ರೈತ ಮಾತ್ರ ತನ್ನ ಬೆನ್ನೆಲುಬನ್ನು ಹುರಿಮಾಡಿಕೊಂಡು ತಲೆ ಬಗ್ಗಿಸಿ ದುಡಿಯುತ್ತಲೇ ಇದ್ದಾನೆ.
ದೇಶದಲ್ಲಿ ಜಾಗತಿಕರಣ ಉದಾರೀಕರಣ ಯಾವುದೆ ಬಂದರೂ ರೈತಾರ ಉದ್ದಾರ ಮಾತ್ರ ಸಾಧ್ಯವಿಲ್ಲ ಎಂಬ ವ್ಯಾಕರಣ ಗೊತ್ತೆಯಿದೆ. ರಾಜ್ಯದಲ್ಲಿ ಆಡಳಿತ ಪಕ್ಷದಲ್ಲಿನ ಬಿಗುಮಾನದಿಂದ ಸರ್ಕಾರ ಸ್ಥಿರವಾಗಿಲ್ಲ; ರಾಷ್ಟ್ರಪತಿಯ ಆಯ್ಕೆಯಲ್ಲಿ ವಿವಿಧ ರಾಜಕೀಯ ಪಕ್ಷದ ದೊಂಬರಾಟ ನಡೆಯಿತ್ತಲ್ಲ; ಲಂಡನ್ ಒಲಂಪಿಕ್‌ನಲ್ಲಿ ಕ್ರೀಡಾಳುಗಳಿಗೆ ಲೈಂಗಿಕ ಸುರಕ್ಷಿತೆಗಾಗಿ ನಿರೋದ್ ಗಳನ್ನು ಇನ್ನಿಲ್ಲದಂತೆ ಹಂಚಿದ್ದಾರಲ್ಲ; ಕಾರ್ಗಿಲ್ ಯುದ್ಧ ಗೆದ್ದು ಜುಲೈ ಗೆ 13 ನೇ ವರ್ಷದ ವಿಜಯೋತ್ಸವ ಆಚರಿಸಿದೇವಲ್ಲ; ರಾಜೇಶ್ ಖನ್ನನ ಸಾವು ಅವನ ಮಹಿಳಾ ಅಭಿಮಾನಿಗಳಿಗೆ ಹೃದಯವಿದ್ರಾವಕ ಗಳಿಗೆ ಎಂದು ಟಿವಿ ಚಾನೆಲುಗಳು ಬಿತ್ತರಿಸಿದ್ದವಲ್ಲ; ಅಸ್ಸಾಂ ನಲ್ಲಿ ಎರಡು ಸಮುದಾಯದ ನಡುವೆ ಹತ್ತಿ ಉರಿದ ಭೀಕರ ಕಾಳಗ ಆನೇಕರನ್ನು ಆಹುತಿ ತೆಗೆದುಕೊಂಡಿತ್ತಲ್ಲ...... ಇವ್ಯಾವುದರ ಮೇಲೂ ಬೇರೆ ಉದ್ದಿಮೆಗಳಂತೆ ರೈತನು ಲಾಭ ನಷ್ಟಕ್ಕೆ ತಕ್ಕಡಿ ಹಿಡಿಯುವುದಿಲ್ಲ. ತಾನು ಬೆಳೆದ ಬೆಳೆಗೆ ತಕ್ಕಡಿ ಹಿಡಿಯುವಾಗಲೂ ಕೊಟ್ಟ ಕ್ರಯಕ್ಕೆ ಇಟ್ಟು ತೃಪ್ತನಾಗುತ್ತಾನೆ ರೈತ. ಈ ವರ್ಷ ಕರ್ನಾಟಕದಲ್ಲಿ ಬರದ ಛಾಯೆ ಹೆಚ್ಚಾಗಿಯೇ ಇದೆ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರವನ್ನು ಹೊಣೆಮಾಡಿ, ಪರಹಾರಕೊಡಿ ಅಥವಾ ಸಾಲಮನ್ನಾ ಮಾಡಿ ಎಂದು ಬೊಬ್ಬೆಯಿಟ್ಟು ಜವಾಬ್ಧಾರಿಯಿಂದ ತಪ್ಪಿಸಿಕೊಳ್ಳುವ ಜಾಣಕೋರನಲ್ಲ. ಅಷ್ಟಿಷ್ಟು ಮಳೆಯಾದರೆ ಸಾಕು ನೇಗಿಲು ಹೊತ್ತು ಹೊಲವನ್ನು ಉಳುವುದೇ ಧರ್ಮ ಎಂದು ಕಚ್ಚೆ ಬಿಗಿ ಮಾಡಿ ಹೋರಟುಬಿಡುತಾನೆ.


ಇದೆಲ್ಲ ನೋಡುತ್ತಿದ್ದರೆ ರಾಷ್ಟ್ರಕವಿ ಕುವೆಂಪುರವರು "ನೇಗಿಲ ಯೋಗಿ" ಶೀರ್ಷಿಕೆಯಡಿ ರೈತನ ಮೇಲೆ ಬರೆದ ಕಾವ್ಯ ಸರ್ವಕಾಲಕ್ಕೂ ಒಪ್ಪುತ್ತಿದೆ. "ರಾಜ್ಯಗಳುದಿಸಲಿ ರಾಜ್ಯಗಳಲಿಯಲಿ ಹಾರಲಿ ಗದ್ದುಗೆ ಮುಕುಟಗಳು, ಮುತ್ತಿಗೆ ಹಾಕಲಿ ಸೈನಿಕರೆಲ್ಲ, ಬಿತ್ತುಳುವುದನವ ಬಿಡುವುದೇ ಇಲ್ಲ" ಎನ್ನುವಾಗ ಅವರನೊಮ್ಮೆ ನೋಡಬೇಕೆನಿಸುವುದಿಲ್ಲವೇ?..!


                                                                                                         -ಸಂತೋಷ್.ಇ

Friday, 27 July 2012


ರವೀಂದ್ರನಾಥ ಠಾಕೂರರ ’ಗೀತಾಂಜಲಿ’ಯಿಂದ…

(ಫಾ. ಜೀವನ್ ಪ್ರಭು ಅನುವಾದಿಸಿರುವ ಸೌಹಾರ್ದ ಪುಸ್ತಕದಿಂದ)


ಅವನ ಸದ್ದಿಲ್ಲದ ಹೆಜ್ಜೆಗಳನ್ನು ಆಲಿಸಿದ್ದೀರಾ?
ಅವನು ಬರುತ್ತಾನೆ, ಬರುತ್ತಾನೆ, ಎಂದೆಂದೂ ಬರುತ್ತಾನೆ.
ಪ್ರತಿಯೊಂದು ಕ್ಷಣದಲ್ಲಿ, ಪ್ರತಿಯೊಂದು ಯುಗದಲ್ಲಿ
ಪ್ರತಿಯೊಂದು ಹಗಲು ಇರುಳಿನಲ್ಲಿ ಅವನು ಬರುತ್ತಾನೆ
ಬರುತ್ತಾನೆ, ಎಂದೆಂದೂ ಬರುತ್ತಾನೆ.
ಅನೇಕ ಮನಃಸ್ಥಿತಿಗಳಲ್ಲಿ ಅನೇಕ ಹಾಡುಗಳನ್ನು ಹಾಡಿದ್ದೇನೆ ನಾನು,
ಆದರೆ ಅವುಗಳ ಸ್ವರಗಳೆಲ್ಲ ಘೋಷಿಸಿವೆ-
ಅವನು ಬರುತ್ತಾನೆ.. ಬರುತ್ತಾನೆ, ಎಂದೆಂದೂ ಬರುತ್ತಾನೆ.
ಬಿಸಿಲ ಚೈತ್ರ ಕಂಪಿನ ದಿನಗಳಲ್ಲಿ
ಅಡವಿದಾರಿಯಲ್ಲಿ ಅವನು ಬರುತ್ತಾನೆ
ಬರುತ್ತಾನೆ, ಬರುತ್ತಾನೆ, ಎಂದೆಂದೂ ಬರುತ್ತಾನೆ.
ಶ್ರಾವಣದ ಇರುಳುಗಳು ಮಳೆ ಮಬ್ಬಿನಲ್ಲಿ
ಮೋಡಗಳ ಗುಡುಗಿದ ರಥದ ಮೇಲೆ
ಅವನು ಬರುತ್ತಾನೆ, ಬರುತ್ತಾನೆ, ಎಂದೆಂದೂ ಬರುತ್ತಾನೆ.
ಪುಂಖಾನುಪುಂಖ ದುಃಖಗಳಲ್ಲಿ
ನನ್ನ ಎದೆಯನ್ನೊತ್ತುವುವು ಅವನ ಹೆಜ್ಜೆಗಳು
ನನ್ನ ಸಂತಸ ಹೊಳೆಯುವಂತೆ ಮಾಡುವುದು
ಅವನ ಪಾದಗಳ ಸ್ಪರ್ಶ..Read more!

Wednesday, 27 June 2012


ಪ್ರವಾದಿಗಳನ್ನು ನೆನೆಯುತ್ತಾ…

ನೀ ಹೇಳಿದ ಸತ್ಯ..
ಅಸತ್ಯ ನನ್ನ ಬದುಕಿಗೆ ಕಸಿವಿಸಿಯ ಬೀಜಗಳಾದವು
ಹಿಂಸೆಯಿಂದ ನುಂಗುವ ಕಹಿ ಮಾತ್ರೆಗಳಾದವು…
ಮನಕೊರೆಯುವ ಉಳಿ ಸುತ್ತಿಗೆಗಳಾದವು
ನನ್ನ ಮಾತು ಕೃತಿಗಳನ್ನು ನಿರ್ದಯೆಯಿಂದ ತೂಗುವ ತಕ್ಕಡಿಗಳಾದವು
ನನ್ನ ಟೊಳ್ಳು ಹಂಬುತನಕ್ಕೆ ಹಿಡಿಯುವ ಕನ್ನಡಿಗಳಾದವು
ಕೊನೆಗೆ, ಅದು ಸಹಿಸಲಾಗದ ಉಗ್ರ ಹಿಂಸೆಯಾದಾಗ
ಸತ್ಯದ ಮೂಲ ನಿನ್ನನೇ..
ಸಮಾಧಿ ಮಾಡಿದೆ..ನಾನು
ಕೇವಲ ನನ್ನ ಕ್ಷಣಿಕ ಪರಿಹಾರಕ್ಕೆ..

ಜೋವಿ..
Read more!

Monday, 23 April 2012

ಪಾಸು ಫೇಲು


           ವಿದ್ಯಾರ್ಥಿಗಳಿಗೆ ಇದು ಸುಗ್ಗಿಕಾಲ. ತಾವು ಉತ್ತುಬಿತ್ತು ಬೆಳೆದ ವಿದ್ಯೆಯನ್ನು ಖಣಜಕ್ಕೆ ತುoಬಿಡಬೇಕಾದ ಕಾಲ. ಕಳೆದ ತಿoಗಳಷ್ಟೆ ಅವನ್ನು ಅಚ್ಚುಕಟ್ಟಾಗಿ ಕೊಯ್ಲುಮಾಡಿದ್ದ ವಿದ್ಯಾರ್ಥಿಗಳು, ಈ ತಿoಗಳಲ್ಲಿ ಒಕ್ಕಣೆಮಾಡಿ ರಾಶಿಹಾಕಿ ಯಾರ್ಯಾರು ಎಷ್ಟೆಷ್ಟನ್ನು ಖಣಜಕ್ಕೆ ತುoಬಿಕೊಡಿದ್ದಾರೆ ಎoದು ಲೆಕ್ಕಹಾಕುವ ಗಳಿಗೆ. ಅದೆಷ್ಟೋ ಜನಕ್ಕೆ ತಮ್ಮ ಖಣಜವು ಭರ್ತಿಯಾಗುತ್ತದೆoಬ ಆತ್ಮವಿಶ್ವಾಸ. ಅದೆಷ್ಟೋ ಜನರಲ್ಲಿ ಅದು ತದ್ವಿರುದ್ಧ. ಅoಥವರಲ್ಲಿ ಹೆಚ್ಚಿನವರಿಗೆ ತoದೆತಾಯಿ ಎನ್ನೆoದಾರೊ? ಎoಬ ಭಯ, ಕೆಲವರಿಗೆ ತಮ್ಮ ಸ್ನೇಹಿತರು ಹೀಗಳೆದಾರು! ಎoಬ ಕಳವಳ. ಈ ಇಡೀ ತಿoಗಳು ಅದರದೇ ಕನವರಿಕೆ. ಬೆಳಿಗ್ಗೆ ನಿದ್ದೆಯಿoದೆದ್ದು ರಾತ್ರಿ ಕoಡ ಕನಸನ್ನು ಜ್ನಾಪಿಸಿಕೊಳ್ಳುತ್ತಾರೆ, ಅಪ್ತರೊoದಿಗೆ ಹoಚಿಕೊಳ್ಳಲುಬಹುದು. ಕೆಟ್ಟ ಕನಸಾದ್ದಲ್ಲಿ ಆದಾಗದಿರಲಿ ಎoದು ದೇವರಲ್ಲಿ ಮೊರೆಯಿಡುವವರದೆಷ್ಟೋ. ಉತ್ತಮ ಆತ್ಮವಿಶ್ವಾಸ ಹೊoದಿರುವವರು, ಈಗಾಗಲೇ ತಮ್ಮ ಮುoದಿನ ನಡೆ ಏನು? ಉತ್ತಮ ಫಲಕ್ಕೆ ಉಡುಗೊರೆಯಾಗಿ ಅಪ್ಪ ಏನು ಕೊಟ್ಟಾರು?. ಅಮ್ಮನ recommendation ಎಷ್ಟಿರಬಹುದು? ಇತ್ಯಾದಿಗಳ ಲೆಕ್ಕಾಚಾರದಲ್ಲಿ ತೊಡಗಿರುತ್ತಾರೆ. ಮೊರೆಯಿಟ್ಟ ಆ ದೇವರು ಸಹ ಸಾಧ್ಯವಾದಷ್ಟು ದುಡ್ಡು ಮಾಡಿಕೊಳ್ಳಬಹುದು. ಏಕೆoದರೆ ಅಷ್ಟಿಷ್ಟು ಕಾಣಿಕೆಗಳನ್ನು ಸಲ್ಲಿಸುತ್ತೇವೆoದು ವಿದ್ಯಾರ್ಥಿಗಳು ಆರಕೆ ಒಪ್ಪಿಸಿರುತ್ತಾರೆ. ಹೌದು ಇವೆಲ್ಲ ವಾರ್ಷಿಕ ಪರಿಕ್ಷೆ ಪಲಿತಾoಶದ ಹವಾ.

             ಆದರೆ ವಿಪರ್ಯಾಸ ನೋಡಿ, ಇವೆಲ್ಲದ್ದರ ಮಧ್ಯೆ ಸರ್ಕಾರಕ್ಕೂ ಈ ಕಾಲಕ್ಕೂ ಸoಬoಧ ಕಲ್ಪಿಸಿಬಿಟ್ಟಿರುತ್ತೇವೆ.  ಪರೀಕ್ಷೆ ಸಮಯದಲ್ಲಿ ವಿದ್ಯಾರ್ಥಿಗಳಿಗೆ ನೆರವಾಗಲೆoದು ಸರ್ಕಾರ ವಿದ್ಯುತ್, ನೀರಿನ ವ್ಯವಸ್ಥೆ ಇನ್ನಿತರ ಮೂಲಭೂತ ಸೌಲಭ್ಯಗಳತ್ತ ಗಮನಹರಿಸುವoತೆಯೆ, ಫಲಿತಾoಶ ಹೊರ ಬoದಾಗಲೂ ಕೆಲವು ಎಚ್ಚರಿಕೆಗಳತ್ತ ಗಮನಹರಿಸಬೇಕು. ಏಕೆoದರೆ ಪಾಪ ಫೇಲ್ ಆದ ವಿದ್ಯಾರ್ಥಿಗಳು ಅಲ್ಲಿ ಬಾವಿಗೆ ಬಿದ್ದನoತೆ, ಇಲ್ಲಿ ಕೆರೆಗೆ ಹಾರಿದನoತೆ, ನೇಣುಬಿಗಿದುಕೊoಡಳoತೆ ಯoತಹ ಅoತೆಕoತೆಗಳು ಸುಳಿದಾಡುತ್ತವೆ. ಇಲ್ಲಿಯೂ ಸಹ ಕೊನೆಗೆ ಧೂಷಣೆಗೊಳಪಡುವ ಸರಧಿ ಸರ್ಕಾರದ್ದೇ.

 ಹೀಗೆ ಕಳೆದ ವರ್ಷಗಳಲೊಮ್ಮೆ ಎಸ್ ಎಸ್ ಎಲ್ ಸಿ ಫಲಿತಾoಶ ಹೊರಬoದಾಗ ಸರ್ಕಾರ ಮುನ್ನೆಚ್ಚರಿಕೆ ಕ್ರಮವಾಗಿ ಆತ್ಮಹತ್ಯೆ ಮಾಡಿಕೊಳ್ಳಬಹುದಾದoತ ಕೆಲವು ಆಯಕಟ್ಟಿನ ಅಪಾಯದ ಸ್ಥಳಗಳಲ್ಲಿ ಪೊಲೀಸರನ್ನು ಆಯೋಜಿಸಿತ್ತು. ಇಬ್ಬರು ಪೋಲಿಸರoತೆ ಒoದೊoದು ಕೆರೆ ಬಳಿಯಲ್ಲಿ ಕಾವಲಿರುವoತೆ ಆಜ್ನೆಹೊರಡಿಸಿತು. ಅoದು  ನಿಗಧಿತರಾದ ಯಾರೋ ಇಬ್ಬರು ಪೋಲಿಸರು ಆ ಕೆರೆಯ ಬಳಿ ಬೆಳಿಗ್ಗೆ 7 ರಿoದ ತಮ್ಮ ಕೆಲಸವನ್ನು ಪ್ರಾರoಭಿಸಿದರು. ಕೆರೆಯ ಸುತ್ತ ದಡಬದಿಯಲ್ಲಿ  ಅಡ್ಡಾಡುತ್ತಾ ಇದ್ದರು. ಸoಜೆಯಾಯಿತು ಆದರೂ ಯಾವ ವಿದ್ಯಾರ್ಥಿಯು ಆ ಕೆರೆಯ ಬಳಿಗೆ ಸುಳಿದಾಡಲಿಲ್ಲ. ಸುಮಾರು 5 ರ ಸoಜೆ, ಆ ಪೋಲಿಸರು ತಮ್ಮ ತಮ್ಮಲ್ಲೇ ಸರ್ಕಾರದ ಈ ನಿರ್ಧಾರವನ್ನು ಅಪಹಾಸ್ಯ ಮಾಡುತ್ತಾ ಮನೆಗೆ ವಾಪಸಾಗುತ್ತಿದ್ದರು. ಅಷ್ಟರಲ್ಲಿ ಓರ್ವ ಹುಡುಗ ಆ ಕೆರೆಯ ಬಳಿಗೆ ಓಡಿಬoದ. ತಕ್ಷಣ ಗಮನಿಸಿದ ಪೋಲಿಸರು ಅವನನ್ನು ತಡೆದು ವಿಚಾರಿಸುತ್ತಾರೆ. ಆ ವಿದ್ಯಾರ್ಥಿ ಪಾಪ ಸತ್ಯವನ್ನೇ ಹೇಳುತ್ತಾನೆ ಹೌದು! ಪಿಯುಸಿಯಲ್ಲಿ ಫೆಲಾಗಿದ್ದೇನೆ. ಬೇಸರದಿoದ ಆತ್ಮಹತ್ಯೆ ಮಾಡಿಕೊಳ್ಳಲು ಬoದಿದ್ದೇನೆ ಎoದು. ವಿಷಯ ಕೇಳಿದ ಪೋಲಿಸರು ಒoದು ರೀತಿಯಲ್ಲಿ ನಿಟ್ಟುಸಿರು ಬಿಟ್ಟು ಇoದು ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಪಲಿತಾoಶ, ಹಾಗಾಗಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳು ಒoದು ಪಕ್ಷ ಆತ್ಮಹತ್ಯೆ ಮಾಡಿಕೊಳ್ಳಲು ಬoದರೆ ಅವರನ್ನು ತಡೆಯಬೇಕು ಎoದು ಸರ್ಕಾರ ನಮ್ಮನ್ನು ಇಲ್ಲಿ ದಸ್ತು ತಿರುಗಲು ಹೇಳಿತ್ತು. ಈತ ನೋಡಿದರೆ ಪಿಯುಸಿ ವಿದ್ಯಾರ್ಥಿ ಹಾಗಾಗಿ ನಮ್ಮದೇನು ಅಭ್ಯoತರವಿಲ್ಲ ಎoದು ಭಾವಿಸಿ ಆ ಹುಡುಗನನ್ನು ಅವನಿಚ್ಛೆಯoತೆ ಆತ್ಮಹತ್ಯೆಮಾಡಿಕೊಳ್ಳಲ್ಲು ಬಿಟ್ಟು ಮನೆ ಕಡೆ ತೆರೆಳುತ್ತಾರೆ.

           ಇದರಿoದ ಒoದು ವಿಷಯವನ್ನು ಮನದಟ್ಟುಮಾಡಿಕೊಳ್ಳಬೇಕು. ಸರ್ಕಾರವೆನಿದ್ದರೂ ತಮ್ಮ ಕೆಲಸವನಷ್ಟೇ ಮಾಡುತದೆ ಆದರೆ ಅದಕ್ಕೆ ಭಾವನೆಗಳಲಿಲ್ಲ. ಇದ್ದರು ಎಲ್ಲ ವಿಷಯಗಳಲ್ಲೂ ಸoದರ್ಭಗಳಲ್ಲೂ ಉಚಿತವಾಗಿ ವರ್ತಿಸಲು ಸಾಧ್ಯವಾಗುವುದಿಲ್ಲ. ಆದರಿoದ ಈ ರೀತಿಯ ವಿಪರ್ಯಾಸವನ್ನು ತಡೆಯಲು ಮುಖ್ಯವಾಗಿ ಫಲಿತಾoಶದ ಸoಧರ್ಭಗಳಲ್ಲಿ ತoದೆತಾಯಿಯಾದವರು, ಮನೆಯವರು, ವಿದ್ಯಾರ್ಥಿಗಳ ಮನಸ್ಸನ್ನು ಅರ್ಥಮಾಡಿಕೊoಡು ಅದರoತೆಯೆ ನಡೆದುಕೊಳ್ಳುವುದು ಯೋಗ್ಯ. ಪರೀಕ್ಷೆ ಮುಗಿದದಿನದಿoದ ಫಲಿತಾoಶ ದಿನದವರೆಗೂ ಮಕ್ಕಳನ್ನು ಸೂಕ್ಷವಾಗಿ ಗಮನಿಸುತ್ತಿರಬೇಕು. ಮಕ್ಕಳು ಉತ್ತಮ ಫಲಿತಾoಶದ ನಿರೀಕ್ಷೆಯಲ್ಲಿದ್ದರೆ ಅoಥವರ ಭವಿಷ್ಯದ ಸಲುವಾಗಿ ಯಾವ ಕಾಲೇಜಿಗೆ ಸೇರಿಸೋಣ, ಯಾವ ಕೋರ್ಸ್ ತೆಗೆದುಕೊoಡರೆ ಬೇಡಿಕೆ ಇದೆ. ಮುoದಿನ ಗುರಿ ಅವರ ಪ್ರತಿಭೆಗೆ ತಕ್ಕುದ್ದಾದುದೇ ಇಲ್ಲವೇ ಹೀಗೆ ಮುಖ್ಯ ವಿಚಾರಗಳನ್ನು ಚರ್ಚಿಸಿ ಸಿದ್ದರಾಗಿದ್ದಾರೆ ಒಳಿತು. ಅದರಿoದ ಫಲಿತಾoಶ ನoತರ ಅoಕಗಳನುಸಾರ ಆದಷ್ಟು ಬೇಗ ಒoದು ಒಳ್ಳೆಯ ನಿರ್ಧಾರಕ್ಕೆ ಬರಲು ಸಾಧ್ಯವಾಗುತ್ತದೆ. ಮತ್ತು ಫಲಿತಾoಶದ ನoತರದ ದಿನಗಳನ್ನು ಅನಾವಶ್ಯಕವಾಗಿ ಚಿoತಿಸದೆ ಕಳೆಯಬಹುದು.

           ಒoದು ಪಕ್ಷ ಮಕ್ಕಳ ನಡತೆಯಲ್ಲಿ ಕಳವಳ ದುಗುಡ ಇರುವುದು ಕoಡುಬoದರೆ ಅoಥವರಲ್ಲಿ ಸಾoತ್ವನದ ಮತ್ತು ಆತ್ಮಸ್ಥೈರ್ಯ ತುoಬುವoತಹ ಮಾತುಗಳನ್ನಾಡಬೇಕು. ಆದರಲ್ಲೂ ಕಡಿಮೆ ಅoಕಗಳಿಸಿದ್ದರೂ ಚಿoತೆಪಡಬೇಕಾಗಿಲ್ಲ, ಕಾರಣ ಈಗೆಲ್ಲ skill oriented ಕೋರ್ಸ್ ಗಳು ಬೇಕಾದಷ್ಟಿವೆ. ಇವು ಆರ್ಥಿಕ ಬದುಕಿಗೂ ಪೂರಕವಾಗಿವೆ. ಆಕಸ್ಮಾತ್ ಫೇಲ್ ಆಗಿದ್ದರೂ ಜೀವನ ಮುಗಿದೆ ಹೋಯಿತು ಎoದೇನಿಲ್ಲ!. ಬಿದ್ದವನು ಮೇಲೇಳಲೇ ಬೇಕು. ಮೇಲೆದ್ದು ಬರುವ ಅವಕಾಶ ಬಿದ್ದವನಿಗೆ ಮಾತ್ರ ಸಿಗುತ್ತದೆ. ಮೇಲೆದ್ದು ಬರುವುದು ಸಾಮರ್ಥ್ಯದ ಸoಕೇತ ಮತ್ತು ಆತ್ಮಸ್ಥೈರ್ಯದ ಕೊಡುಗೆ. ಹಾಗಾಗಿ ಧೃತಿಗೆಡಬೇಕಾಗಿಲ್ಲ. ಅoತೆಯೇ ನಿರ್ಲಕ್ಷಿಸುವುದು ಸರಿಯಲ್ಲ. ಬದಲಿಗೆ ಫೇಲಾಗಿದ್ದು ಏಕೆ ಎoದು ಅವಲೊಕಿಸಬೇಕು. ಕೆಲವೊಮ್ಮೆ ನಮ್ಮ ನಿರೀಕ್ಷೆಗಿoತ ಕಡಿಮೆ ಅoಕ ಬoದಿದ್ದರೆ ಅಥವಾ ಯವುದಾದರೊoದು ವಿಷಯದಲ್ಲಿ ಫೇಲಾಗಿದ್ದರೆ ಅದನ್ನು ಮತ್ತೆ ಮರುಮೌಲ್ಯಮಾಪನಕ್ಕೆ ಕಲಿಸುವ ಸೌಲ್ಯಾಭ್ಯವಿದೆ. ಬೇಡವೆoದಲ್ಲಿ ಮರು ತಿoಗಳಲ್ಲಿ ಮರು ಪರಿಕ್ಷೆಗೆ ಅವಕಾಶವಿದೆ. ಹಾಗಾಗಿ ನಿಮ್ಮ academic studies ತೊoದರೆ ಆಗುವುದಿಲ್ಲ.

           ಇಲ್ಲಿ ಮುಖ್ಯವಾಗಿ ಪೊಷಕರು ಹೆಚ್ಚಿನ ಪಾತ್ರವಹಿಸಬೇಕಾಗುತ್ತದೆ. ಏಕೆoದರೆ ಇದು ನಿಮ್ಮ ಮಗಳ ಅಥವಾ ಮಗನ ಭವಿಷ್ಯ. ನಿಮ್ಮದೇ ಕನಸು ಮತ್ತು ನಿಮ್ಮದೇ ನನಸು. ಕೊನೆಗೊಮ್ಮೆ ಇoತಹ ಮಕ್ಕಳಿoದಲೆ ನೀವು ಹೆಚ್ಚಾಗಿ ಪರಿಗಣಿಸಲ್ಪಡುತ್ತೀರಿ ಹಾಗೂ ಸ್ತುತಿಗೆ ಯೋಗ್ಯರಾಗುತ್ತಿರಿ.... ನೊಡುತಿರಿ. 

-ಸಂತೋಷ್   Read more!

Monday, 26 March 2012

ಹಾಗೆ ಸುಮ್ಮನೆ





ಕುಳಿತು ದಿಟ್ಟಿಸಿದೆ..
ಹೊಸ ಮನೆಯ ನಿರ್ಮಾಣಕ್ಕಾಗಿ
ಇದ್ದ ಹಳೆ ಮನೆಯ ಕೆಡುವ ಕಾರ್ಯ..
ಕ್ಷಣ ಮಾತ್ರದಲ್ಲಿ ಗೋಡೆಗಳು ನೆಲಕುರುಳಿದವು..
ಎಚ್ಚರಿಕೆಯಿಂದ ಜೋಡಿಸಿದ ಇಟ್ಟಿಗೆಗಳ ಸಾಲು ಸಾಲು ನೆಲಸಮವಾದವು
ಮೂಡಿದ ಸ್ಥಿತ ಮನಸ್ಸಿನ ವಿನ್ಯಾಸಗಳು ಕಾಣೆಯಾದವು
ಇದ್ದ ಮನೆ ಬುಲ್‍ಡೋಜರ್‍ ಬಾಯಿಗೆ ಮಣ್ಣಾಗಿ ಹೋಗಿತ್ತು

ಇನ್ನೊಂದು ಕಡೆ..
ಹೊಸ ಮನೆಯ ನಿರ್ಮಾಣ ಕಾರ್ಯ
ಎಚ್ಚರಿಕೆಯ ಜೋಡನೆ..
ಸ್ಥಿತ ಮನಸ್ಸಿನ ಯೋಜನೆ..
ಪ್ರತಿ ಸಾಲಿಗೆ ಅಳತೆಯ ಚಿಂತನೆ

ಆಗ ಮನಸ್ಸು ಹೇಳಿತು...
"ಹತ್ತಾರು ತಿಂಗಳ ಶ್ರಮದ ಕಟ್ಟಡ...
ಉರಳಲು ಬೇಕು ಕ್ಷಣ ಮಾತ್ರ..."

ಆಗ ಮನಸ್ಸಿನ ಕನ್ನಡಿಯಲ್ಲಿ ಅಜರುದ್ದೀನ್..ಆಶ್ವಿನಿ..ಯಡಿಯೂರಪ್ಪ
ಹೀಗೆ ನೂರಾರು ಮಂದಿ ಕಾಣಿಸತೊಡಗಿದರು..

ಜೋವಿ

Read more!

Tuesday, 20 March 2012

ಅದೇಕೆ ಹೀಗೆ?


ಪ್ರೀತಿಯ ಅನು…
ಅದೇಕೆ ಹೀಗೆ? ಮಾಡಬೇಕಾಗಿದ್ದನ್ನುಮಾಡಲಾಗುತ್ತಿಲ್ಲ, ಮಾಡಬೇಕಾದುದ್ದಲಿ ಮನಸ್ಸಿಲ್ಲ. ಖಾಲಿ ಖಾಲಿಯಾಗಿಬಿಟ್ಟಿರುವ ಮನಸ್ಸು. ವಾಡಿಕೆಯ ಅನುಕ್ರಮವಾಗಿಬಿಟ್ಟಿರು ಸಪ್ಪೆ ಬದುಕು. ಪಟ್ಟುಬಿಡದೆ ಗಟ್ಟಿಯಾಗಿ ಅಪ್ಪಿಗೊಂಡಿಬಿಟ್ಟಿರುವ ಯಾಂತ್ರಿಕತೆ. deadline, projectಗಳೆಂಬ ಒತ್ತಡಗಳಲ್ಲಿ ವಾರ ಪೂರ್ತಿ ಕತ್ತೆಯಂತೆ ದುಡಿದರೂ ಮರೀಚಿಕೆಯಾಗಿಬಿಟ್ಟಿರುವ ತೃಪ್ತಿ, ಸಂತೋಷ. ಅದೇಕೆ ಹೀಗೆ? 
ಇನ್ನೊಂದು ಕಡೆ, ನಮ್ಮ ಮನೋರಂಜನೆಗೆಂದೇ ಡ್ಯಾನ್ಸ್ ಕ್ಲಬ್, ಥೀಮ್ ಪಾರ್ಕ್‍, ಕಂಪ್ಯೂಟರ್ ಗೇಮ್ಸ್ ನಮ್ಮನ್ನು ಕುಶಾಲು ಪಡಿಸುವ  ಹತ್ತು ಹಲವಾರು ಮನೋರಂಜನೆಗಳನ್ನು ಸೃಷ್ಟಿಸಿಕೊಂಡಿದ್ದೇವೆ. ಸಾಲದಕ್ಕೆ, ಒತ್ತಡ ಬದುಕ ನಿರ್ವಹಣೆಗೆಂದು ಯೋಗ ಶಾಲೆಗಳು, laughing clubಗಳು, art of living ತರದ ಆಧ್ಯಾತ್ಮಿಕ ಕೇಂದ್ರಗಳು, counselling centreಗಳು ಅಧಿಕವಾಗಿ ಬೆಳೆದು ನಿಂತಿವೆ. ಆದರೂ,ನಮ್ಮ ನಗರಗಳಲ್ಲಿ ಆತ್ಮಹತ್ಯೆಗಳ ಸಂಖ್ಯೆ ಕಡಿಮೆಯಾಗಿಲ್ಲ. ಕಡಿಮೆಯಾಗುವ ಲಕ್ಷಣ ಕೂಡ ಕಾಣುತ್ತಿಲ್ಲ. ಅದೇಕೆ ಹೀಗೆ?
ತಂತ್ರಜ್ಞಾನದ ಹೂಸ ಹೂಸ ಅವಿಷ್ಕಾರಗಳ ಫಲವಾಗಿ ಮೊಬೈಲ್‍ಗಳು ನಮ್ಮ ಕೈಸೇರಿದೆ. laptopಗಳು ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿವೆ. ಕ್ಷಣ ಮಾತ್ರದಲ್ಲಿ ತಲುಪಿಸುವ ಇ-ಮೇಲ್‍ಗಳ ಸೌಲಭ್ಯವಿದೆ. ನಾನಾ ತರಹ ಟಾಪ್ ಗೇರುಗಳ ಭಾರಿ ವೇಗದ ವಾಹನಗಳು ರಸ್ತೆಗಿಳಿದಿವೆ. ದಾರಿ ಹೆದ್ದಾರಿಗಳ ಅಭಿವೃದ್ಧಿ ಹತ್ತಾರು ಪಟ್ಟು ಹೆಚ್ಚಿದೆ. ವಿಮಾನ ಪ್ರಯಾಣದ ಬೆಲೆ ಅಗ್ಗವಾಗಿ ಸಾಮಾನ್ಯನ ಕೈ ಹಿಡಿದಿದೆ. ಅಷ್ಟೇ ಅಲ್ಲದೆ, ಜಾಗತೀಕರಣದ ಪ್ರಕ್ರಿಯೆಯಿಂದಾಗಿ ಪ್ರಪಂಚವೇ ಸಣ್ಣ ಹಳ್ಳಿಯಾಗಿ ’ಗಡಿಗೆರೆ’ ಎಂಬುವುದು ಇತಿಹಾಸವಾಗಿಬಿಟ್ಟಿದೆ.ಆದರೂ ನಮ್ಮ ಸಂಬಂಧಗಳು ಇಮ್ಮಡಿಯಾಗುತ್ತಿಲ್ಲ. ’ನಾನು’ ’ನನ್ನ ಕುಟುಂಬ’ ಎಂಬ ಸ್ವಾರ್ಥದ ಗೆರೆ ದಾಟುತ್ತಿಲ್ಲ. ನಮ್ಮ ಮನೆಯ ಗೋಡೆಯನ್ನು ನಮ್ಮ ದೇಹವಿರಲಿ, ಸ್ಪರ್ಶಾತೀತ ಮನಸ್ಸಿಗೂ ಸಹ ದಾಟಲಾಗುತ್ತಿಲ್ಲ. ಅಷ್ಟೇ ಅಲ್ಲದೆ, ಒಬಂಟಿಗನೆಂಬ ಕೊರಗು ನಮ್ಮನ್ನು ಬಿಡಲು ಸುತರಾಂ ಒಪ್ಪುತ್ತಿಲ್ಲ.  ಅದೇಕೆ ಹೀಗೆ?
ಕಾರಣಾಂತರಗಳಿಂದ ಇಷ್ಟವಿಲ್ಲದ ವಿಷಯ/subjectನ್ನು ಆರಿಸಿಕೊಳ್ಳುತ್ತೇವೆ. ಮನಸ್ಸಿಲ್ಲದೆ ಅದನ್ನು ಓದುತ್ತೇವೆ. ಕೊನೆಗೆ ಅದು ದಾರ್ಶನಿಕ ಮತ್ತು ಪರಿವರ್ತಕ ಅನುಭವವಾಗದೆ.. ಕೇವಲ ಬಾಯಿಪಾಠವಾಗಿ ಹೊಟ್ಟೆಪಾಡಿಗಾಗಿ ಗಳಿಸುವ certificate ಕೋರ್ಸಾಗಿಬಿಟ್ಟಿವೆ. ಇನ್ನೊಂದು ಕಡೆ, ಅಕ್ಷರಸ್ಥರ ಸಂಖ್ಯೆ ಗಗನಕೇರಿದೆ. universities, ಮತ್ತು ಶಾಲಾಕಾಲೇಜುಗಳಲ್ಲಿ ವಿದ್ಯಾರ್ಜನೆ ಮಾಡಿ ಹೊರಬರುತ್ತಿರುವ ವಿದ್ಯಾರ್ಥಿಗಳ ಅಂಕಿಯು ಏರುಮುಖದಲ್ಲಿ ಗೆರೆನಕ್ಷೆಯೆಂಬ ಬೆಟ್ಟವನ್ನು ಏರುತ್ತಿದೆ. ಆದರೂ ನಮ್ಮ ಸಂಕುಚಿತಯ ಬುದ್ಧಿ ಕಡಿಮೆಯಾಗಿಲ್ಲ. ಅಮಾನವೀಯ ಕೃತ್ಯಗಳು ಕೊನೆ ಕಂಡಿಲ್ಲ. ಅದೇಕೆ ಹೀಗೆ?
ಆಧುನಿಕತೆಯಲ್ಲಿ, ಅಭಿವೃದ್ಧಿಯ ನೆಪದಲ್ಲಿ, success ಎಂಬ ನಾಮಜಪದಲ್ಲಿ ನಮ್ಮನೇ ನಾವು ಕಳೆದುಕೊಂಡಿಬಿಟ್ಟಿದೇವಾ? ಯಾವುದೋ ಒಂದು ಮೂಲೆಯಲ್ಲಿ ಹೌದು ಎನ್ನುತ್ತಿರುವ ವಾಸ್ತವಿಕತೆ. ಕಳೆದು ಹೋಗಿರುವ ನಮ್ಮನ್ನು ’ಹುಡುಕಿಕೊಡಿ” ಎಂದು ಯಾವ ದೇವರಲ್ಲಿ ಹರಕೆ ಕಟ್ಟಿಕೊಳೋಣ? ಯಾವ ಪೋಲಿಸ್ ಠಾಣೆಗೆ ಹೋಗಿ ದೂರು ಕೊಡೋಣ? ಬೆಳಿಗ್ಗೆ ಆಕಾಶದಲ್ಲಿ ಹುಟ್ಟಿ ನವ ಚೈತನ್ಯವನ್ನು ನೀಡುವ ಸೂರ್ಯ ನಮಗೆ ತುಂಬ ಚಿರಪರಿಚಿತವಾಗಿಬಿಟ್ಟಿದ್ದಾನೆ. ಸೂರ್ಯೋದಯೆಂಬ ಅದ್ಭುತ ನಮಗೆ ಮಾಮೂಲಿನ ಸಂಗತಿಯಾಗಿಬಿಟ್ಟಿದೆ. officeಗೆ ತಯಾರಾಗುವ ತತ್ಪರತೆಯಲ್ಲಿ  ಹಕ್ಕಿಗಳ ಇಂಚರ ಅಪ್ಪಿತಪ್ಪಿಯೂ ನಮಗೆ ಕೇಳಿಸುವುದೇ ಇಲ್ಲ. ಹೆಂಡತಿಯ ತುಂಟ ನಗು ನಮಗೆ ಕಾಣುವುದೇ ಇಲ್ಲ. ಮಕ್ಕಳ ಚೇಷ್ಟೆಗೆ ಸಮಯವೇ ಇಲ್ಲ. ಅದೇಕೆ ಹೀಗೆ? ಮಟ ಮಟ ಮಧ್ಯಾಹ್ನದಲ್ಲಿ ಟಾರ್ಚ್ ಹಿಡಿದುಕೊಂಡು "ನಾನು ಕಳೆದುಹೋಗಿದ್ದೇನೆ ನನ್ನನ್ನೇ ಹುಡುಕಿಕೊಳ್ಳುತ್ತಿದ್ದೇನೆ ದಯವಿಟ್ಟು ನನ್ನನ್ನು ಹುಡುಕಿ ಕೊಡಿ" ಎಂದು ಕೂಗಿಕೊಂಡು ಅಲೆಯುವ ನಾಸಿರುದ್ದೀನ್ ಆಗಿಬಿಟ್ಟಿದೇವೆಯಾ?
ಮೊನ್ನೆ Tuesdays with Morrie ಎಂಬ ಸಿನಿಮಾ ನೋಡಿದೆ. ಈ ಎಲ್ಲಾ ಸಮಸ್ಯೆಗಳಿಗೆ ಉತ್ತರ ನೀಡುವ ಒಂದು ಅದ್ಭುತ ಚಿತ್ರ. ಆಧುನಿಕತೆ,ಸ್ವರ್ಧೆ,successಗಳ ಮಾಯೆಯಲ್ಲಿ ಕಳೆದುಹೋಗಿರುವ ನಾವು ಕೂತು ನೋಡಲೇ ಬೇಕಾದ ಚಲನಚಿತ್ರ. ಸಮಾಜಶಾಸ್ತ್ರಜ್ಞ ಮತ್ತು ಪ್ರಾಧ್ಯಾಪಕ, ಆಧುನಿಕತೆ ಮತ್ತು success ಎಂಬ ಮಾಯೆಯಲ್ಲಿ ಕಳೆದುಹೋಗಿರುವ ತನ್ನ ಹಳೆಯ ವಿದ್ಯಾರ್ಥಿಗೆ ನೀಡುವ ಬದುಕಿನ ಪಾಠದ ಸಂಚಿಕೆಗಳೇ ಈ ಚಲನಚಿತ್ರದ ಕಥಾವಸ್ತು. ಪ್ರತಿ ಮಂಗಳವಾರದಲ್ಲಿ ನಡೆಯುವ ತರಗತಿಗೆ ಪ್ರಾಧ್ಯಾಪಕರ ಮನೆಯೇ ಪಾಠಶಾಲೆ. ಬದುಕಿನ ಅರ್ಥವೆಂಬುವುದು ತರಗತಿಗಳ ವಿಷಯ.. ಪ್ರಾಧ್ಯಾಪಕರ ಸ್ವಂತ ಅನುಭವಗಳೇ ಬೋಧನೆಯ ತಳಹದಿ. ವಿದ್ಯಾರ್ಥಿಯ ಸಾಧನೆ ಮಟ್ಟವನ್ನು ಸೂಚಿಸುವ ಗುಣಾಂಕ/ವರ್ಗಾಂಕವೆಂಬ ತಲೆನೋವಿಲ್ಲ. ಮೌಖಿಕ ಪರೀಕ್ಷೆ ಮಾತ್ರ: ಗುರುಗಳು ಕೇಳುವ ಪ್ರಶ್ನೆಗಳಿಗೆ ಉತ್ತರಿಸುವುದು ಮತ್ತು ಸ್ವಂತ ಪ್ರಶ್ನೆಗಳನ್ನು ಗುರುಗಳ ಮುಂದಿಡುವುದು. ಯಾವುದೇ ಪಠ್ಯಪುಸ್ತಕಗಳ ಅಗತ್ಯತೆಯಿಲ್ಲದಿದ್ದರೂ ಪ್ರೀತಿ, ಕೆಲಸ, ಸಮುದಾಯ, ಕುಟುಂಬ, ಮುಪ್ಪು, ಸಾವು ಹೀಗೆ ಅನೇಕ ವಿಷಯಗಳ ಸುತ್ತ ಗಿರಕಿ ಹೊಡೆಯುವ ಬೋಧನೆಗಳು. ಪರೀಕ್ಷೆಗಳ ಹಂಗಿಲ್ಲ ಆದರೆ ಕೊನೆಗೆ ಕಲಿತ ಪಾಠಗಳ ಪ್ರಬಂಧದ ಮಂಡನೆ ಮಾತ್ರ ಅತ್ಯಗತ್ಯ. ಹೀಗೆ ವಿದ್ಯಾರ್ಥಿ ತನ್ನ ಪ್ರಾಧ್ಯಾಪಕರಿಂದ ಕಲಿತ ಬದುಕಿನ ಪಾಠಗಳ ಮಂಡನೆಯೇ ಈ ಚಲನಚಿತ್ರ. ಒಂದು ತರಗತಿಯಲ್ಲಿ ಬದುಕಿನ ಬಗ್ಗೆ ಹೇಳುವ ಮೋರಿಯವರ ಮಾತುಗಳು, ಆಧುನಿಕತೆಯಲ್ಲಿ ರೋಗಪೀಡಿತರಾಗಿರುವ ನಮಗೆ ಸೂಕ್ತವೆನ್ನಿಸುತ್ತವೆ. "ಈ ಪ್ರಪಂಚದ ಸಂಸ್ಕಾರ ಮತ್ತು ಸಂಸ್ಕೃತಿ ನಮ್ಮ ಬಗ್ಗೆ ಸಕರಾತ್ಮಕವಾಗಿ ಯೋಚಿಸಲು ಬಿಡುವುದಿಲ್ಲ. ಆದುದರಿಂದ ನಮಗೆ ಒಗ್ಗದ ಇಂತಹ ಸಂಸ್ಕೃತಿಯನ್ನು ಒಪ್ಪಿಕೊಳ್ಳಲೇಬಾರದು. ನಮ್ಮದೇ ಸಂಸ್ಕೃತಿಯನ್ನು ನಾವೇ ಕಟ್ಟಿಕೊಳ್ಳಬೇಕು". ಇಲ್ಲಿ ಮೋರಿ ನಮಗೆ ನೈಜ ಉದಾಹರಣೆಯಾಗಿ ನಿಲ್ಲುತ್ತಾನೆ. ವಾಸ್ತವ ಪ್ರಪಂಚದ ತೀವ್ರತೆಗೆ, ವೇಗಕ್ಕೆ ಗುಲಾಮನಾಗದೆ, ಪ್ರಾಪಂಚಿಕ ಮೌಲ್ಯಗಳಿಗೆ ಬೆಲೆಕೊಡದೆ... ತನ್ನದೇ ಪ್ರಪಂಚವನ್ನು ಸೃಷ್ಟಿಸಿಕೊಳ್ಳುತ್ತಾನೆ. ಚರ್ಚಿಸಲು ಸಹವರ್ತಿಗಳ ಸಂಘ ಮಾಡುತ್ತಾನೆ. ಬೆಳಗ್ಗಿನ ನಡೆಗೆ ಗೆಳೆಯರ ಕೂಟ ಕಟ್ಟಿಕೊಳ್ಳುತ್ತಾನೆ. ಗ್ರೀನ್ ಹೌಸೆಂಬ ಒಂದು projectನ್ನು ಪ್ರಾರಂಭಿಸಿ ಮಾನಸಿಕ ಆರೋಗ್ಯವನ್ನು ರೂಢಿಸಿಕೊಳ್ಳಲು ಬಡವರಿಗೆ ಸಹಾಯ ಮಾಡುತ್ತಾನೆ. ಹೊಸ ಹೊಸ ಪುಸ್ತಕಗಳ ಸಹವಾಸ ಮಾಡಿ ತನ್ನ ತರಗತಿಗಳಿಗೆ ಅತ್ಯಗತ್ಯವಾಗಿ ಬೇಕಾಗಿರುವ ಹೊಸ ಹೊಸ ಆಲೋಚನೆ, ಅಭಿಪ್ರಾಯಗಳನ್ನ, ಕಲ್ಪನೆಗಳನ್ನು ಶೇಖರಿಸುತ್ತಾನೆ. ದೂರವಿರುವ ಗೆಳೆಯರಿಗೆ ಪತ್ರಗಳನ್ನು ಬರೆಯುತ್ತಾನೆ. ಮನೆಯ ಹತ್ತಿರವೇ ಇರುವ "ನೃತ್ಯಮನೆ"ಗೆ ಹೋಗಿ ತನ್ನಷ್ಟಕ್ಕೆ ನೃತ್ಯ ಮಾಡಿ ಮೈಮರೆಯುತ್ತಾನೆ. ಪಕೃತಿ ದೇವಿಯ ಸೌಂದರ್ಯವನ್ನು ಸವಿಯುತ್ತಾನೆ...ಹೀಗೆ ತನ್ನ ಪ್ರಪಂಚವನ್ನು ಪರಸ್ಪರ ಸಂಗ ಸಲ್ಲಾಪ ಸಹವಾಸ ಮತ್ತು ಸ್ನೇಹ ವಿಶ್ವಾಸಗಳಿಂದ ಹೆಣೆದುಕೊಳ್ಳುತ್ತಾನೆ. ಆದ್ದರಿಂದ ಸಾವಿನ ದವಡೆಯಲ್ಲೂ ಒಂಟಿತನವೆಂಬ ಭೂತ ಅವನನ್ನು ಕಾಡುವುದಿಲ್ಲ. ಅಂಟಿಕೊಂಡಿರುವ ಭಯಾನಕ ರೋಗದಿಂದ ಒಂದು ವರ್ಷದಲ್ಲಿ ತನಗೆ ಸಾವು ಖಚಿತವೆಂದು ಗೊತ್ತಿದ್ದರೂ ತನ್ನ ವಿದ್ಯಾರ್ಥಿಗೆ ಸಾವಿನ ಬಗ್ಗೆ ಪಾಠ ಮಾಡುತ್ತಾನೆ. ಸಾವಿಗೆ ಹೆದರಬೇಡ ಎಂದು ಹೇಳುತ್ತಲೆ ಅಂಜದೆ ಸಾಯುತ್ತಾನೆ. ಒಟ್ಟಾರೆ, ಮೋರಿಯ ಮಾತುಗಳು ಪುಸ್ತಕದ ಬದನೆಕಾಯಿ ಆಗದೆ, ಬದುಕ ಪಾಠಗಳಾಗಿ ನಮ್ಮನ್ನು, ನಮ್ಮ ಟೊಳ್ಳುತನವನ್ನು ಪ್ರಶ್ನಿಸುತ್ತವೆ. ಹೊಸ ಬದುಕಿಗೆ, ಬದುಕಿನ ರೀತಿಗೆ ಮೂಹರ್ತ ಹಾಕಿಕೊಡುತ್ತವೆ. "The way you get meaning into your life is to devote yourself to loving others, devote yourself to your community around you, and devote yourself to creating something that gives you purpose and meaning" ಎಂದು ಹೇಳುತ್ತಲೆ.. ಪ್ರೀತಿಸು ಇಲ್ಲವಾದರೆ ಹಾಳಾಗುವೆ" ಎಂದು ಎಚ್ಚರಿಸುತ್ತಾನೆ ನಮ್ಮ ಮೊರಿ.

ಹೌದು,ನಮ್ಮದೇ ಪ್ರಪಂಚದಲ್ಲಿ ಪರಕೀಯರಾಗಿ ಬಾಳುತ್ತಿರುವ ನಮಗೆ Tuesdays with Morrie ಎಂಬ ಕೋರ್ಸು/ವ್ಯಾಸಂಗ ಅನಿವಾರ್ಯವೆನ್ನಿಸುತ್ತದೆ. ಈ ಒಂದು ಕೋರ್ಸ್‍ಗೆ ಬೇಕಾದ ಪಠ್ಯವೆಂದರೆ ಅಂತರ್ಜಾಲದಲ್ಲಿ ಸುಲಭವಾಗಿ ಉಚಿತವಾಗಿ ಸಿಗುವ Tuesdays with Morrie ಎಂಬ ಕಾದಂಬರಿ. download  ಮಾಡಿ ಓದಿ.. ಬದುಕನ್ನು ಮತ್ತು ಬದುಕುವುದನ್ನು enjoy ಮಾಡಿ.
ಪ್ರೀತಿಯಿಂದ ನಿಮ್ಮವ
ಜೋವಿ