Wednesday, 14 December 2011

Tuesday, 13 December 2011

ಭಾವನೆಗಳು ತೂತಾದರೆ ಮನೆಗಳು ತೂತು - ಕೌಟುಂಬಿಕ ದೌರ್ಜನ್ಯ


 
           ರಾಜಾರಾಂ ಮೋಹನ್ ರಾಯ್, ವಿವೇಕನಂದ, ಮಹಾತ್ಮ ಗಾಂಧಿ, ಬಾಬಾ ಆಮ್ಟೆ, ಈಶ್ವರ್ ಚಂದ್ರ ವಿದ್ಯಾಸಾಗರ್, ಅನಿಬೆಸೆಂಟ್ ರಂತಹ ಆನೇಕ ಗಣ್ಯರು ತಮ್ಮ ಇಡೀ ಜೀವಮಾನ ಸವೆಸಿದ್ದು ಇದಕ್ಕಾಗಿಯೇ. ಇದ್ದ ಬದ್ದ ಅನಿಷ್ಟ ಪದ್ಧತಿಗಳು ನಮ್ಮ ಸಾಮಾಜವನ್ನು ಹರಿದು ಮುಕ್ಕಿದ ಕಾಲದಲ್ಲಿ ಪರಿಣಾಮಕಾರಿಯಾಗಿ anti virusನಂತೆ ಕೆಲಸ ಮಾಡಿದ ಇವರು, ಜನರಲ್ಲಿ ಅರಿವು ಮೂಡಿಸುವ ಮತ್ತು ಮೌಢ್ಯಗಳ ವಿರುದ್ಧ ಎಚ್ಚೆತ್ತುಕೊಳ್ಳುವ ಕಾರ್ಯಗಳನ್ನು ರೂಡಿಗೆ ತಂದರು. ಸತಿಸಹಗಮನ ಪದ್ದತಿ, ಬಲಿಕೊಡುವ ಪದ್ದತಿ, ಕೂಡಿಕೆ ಪದ್ದತಿ, ಪರದ ವ್ಯವಸ್ಥೆಯಂತಹ ಅವೈಜ್ಣಾನಿಕ ಪದ್ದತಿಗೆ ಇತಿಶ್ರಿ ಹಾಡುವಲ್ಲಿ ಅವರುಗಳು ತೋರಿದ ಶ್ರದ್ಧೆ, ಕಾಳಜಿ, ಧೈರ್ಯ ಕಷ್ಟ ಸಾಧ್ಯವಾಗಿತ್ತು. ಏಕೆಂದರೆ ಅನಾಗರೀಕತೆ ಮಡುಗಟ್ಟಿ ನಿಂತಿದ್ದ ಕಾಲ ಅದು.
      ವೈಜ್ಣಾನಿಕತೆ ತರುವಲ್ಲಿ ಅಂದಿನ ವಿದ್ಯೆಗೆ ಶಕ್ತಿ ಸಾಲದ್ದಾಗಿತ್ತೊ ಏನೋ? ಅಥವಾ ವಿದ್ಯೆ ತಲುಪಲು ಸಾಕಷ್ಟು ಮಾರ್ಗಗಳಿರಲಿಲ್ಲವೊ ಏನೋ?. ಈ ನ್ಯೂನತೆಗಳನ್ನು ಸ-ದುರುಪಯೋಗಪಡಿಸಿಕೊಂಡಿದ್ದು ಮಾತ್ರ ಇದೇ ಸಮಾಜದ ಪಟ್ಟಭದ್ರಹಿತಾಸಕ್ತಿಗಳು. ತನ್ನ ಮೂಗಿನ ನೆರಕ್ಕೆ ನಡೆಯಬೇಕು ಎಂಬ ಅಹಂ ಆನೇಕ ಅನಿಷ್ಟ ಪದ್ದತಿಗಳ ಹುಟ್ಟಿಗೆ ಕಾರಣವಾಯಿತು. ಅಷ್ಟೇ ಏಕೆ ಈ ಪದ್ದತಿಗಳು ದೈವ ವಿಧಿಸಿದ ವಿಧಿ-ಕಟ್ಟಳೆಗಳು ಇದನ್ನು ಒಪ್ಪಿಕೊಂಡು ಅನುಸರಿಸಿಯೇ ತೀರಬೇಕು ಇಲ್ಲವಾದರೆ ಪಾಪ ಉಳಿದುಬಿಡುತದೆ. ಆ ದೇವರಿಗೆ ಕೋಪ ಬರುತ್ತದೆ, ಎಂದು ಥೇಟ್ ದೇವರನ್ನು ಕಂಡು ಜೊತೆಯಲ್ಲಿ ಬೈಟು ಕಾಫಿ ಕುಡಿದು ಮಾಹಿತಿ ಹೊತ್ತು ಬಂದ ದೂತರಂತೆ ಅಬ್ಬರಿಸಿಬಿಡುತಿದ್ದರು. ಅಷ್ಟಕ್ಕೂ ಈ ಎಲ್ಲ ಅನಿಷ್ಟಗಳನ್ನು ಹೇರಿದ್ದು ಯಾರ ಮೇಲೆ? ಕೈಲಾಗದ, ಧ್ವನಿ ಇಲ್ಲದ ಶೋಷಿತವರ್ಗವೆಂದೇನು ಕರೆಯುತೇವೆಯೋ ಆ ಬಡವರ ಮೇಲೆ, ಹೆಣ್ಣಿನ ಮೇಲೆ ಮುಗ್ಧ ಮಕ್ಕಳ ಮೇಲೆ. ಅದರಲ್ಲೂ ಹೆಣ್ಣನ್ನು ಪೂಜಿಸುವಲ್ಲಿಂದ ಹಿಡಿದು ಜಾಡಿಸುವಲ್ಲಿಯವರೆಗೂ ಬೇಕಾದ ರೀತಿಯಲ್ಲಿ ಶೋಷಣೆ ಮಾಡಿಬಿಟ್ಟರು. ಒಂದು ವಿಧದಲ್ಲಿ ಇದು ಪುರುಷ ಪ್ರಧಾನ ಸಮಾಜದ ಕೊಡುಗೆಯೇ ಸರಿ.
      ಇದೀಗ ಶತ ಶತಮಾನಗಳು ಕಳೆದು ಆಧುನಿಕತೆ, ವೈಚಾರಿಕತೆ, ವೈಜ್ನಾನಿಕತೆಯ ಕಡೆ ಹೆಚ್ಚು ವಾಲುತಿದ್ದೇವೆ ಎಂಬ ಹೆಮ್ಮೆ ಇದೆ. ಅನಿಷ್ಟ ಪದ್ದತಿಗಳು ಸಮಾಜ ಸುದಾರಕರ ಫಲದಿಂದ ಸುಧಾರಣೆಯಾಗಿವೆ. ಆದರೆ ಅದೇಕೊ ಸುಧಾರಿಸಿಕೊಳ್ಳುವ ಮನೋಬಲದ ಕೊರತೆ ಅಲ್ಲಲ್ಲಿ ಇದ್ದೆ ಇದೆ. ಸಮಾಜದಲ್ಲಿ ಬಹಿರಂಗವಾಗಿ ಕಾಣಿಸಿಕೊಂಡಿದ್ದ ಹಲವು ಅನಿಷ್ಟ ಪದ್ದತಿಗಳು ಸತ್ತು ಎಷ್ಟೋ ಕಾಲಗಳಾಗಿವೆ. ಆದರೂ ಅದರ ನೆರಳು(ಪ್ರೇತ) ಅಸ್ಥಿತ್ವದಲ್ಲಿದೆ. ಅದು ಮಹಿಳೆ ಮೇಲಿನ ದಬ್ಬಾಳಿಕೆ, ಕೌಟುಂಬಿಕ ದೌರ್ಜನ್ಯ, ಅತ್ಯಾಚಾರ ಹೀಗೆ ಒಂದಲ್ಲ ಒಂದು ರೀತಿಯಲ್ಲಿ ಪದೇ ಪದೇ ಆ ಹೆಣ್ಣನ್ನು ಬಲಿತೆಗೆದು ಕೊಳ್ಳುತ್ತಲೆ ಇದೆ. ಅದರಲ್ಲೂ "ಕೌಟುಂಬಿಕ ದೌರ್ಜನ್ಯ"ದಂತಹ ಸಾಮಾಜಿಕ ಪಿಡುಗು ನಿಂತ ನೀರಲ್ಲಿ ಕಾಣಸಿಗುವ ಪಾಚಿಯಂತೆ, ಕುಟುಂಬಗಳಲ್ಲಿ ಸಾಮಾನ್ಯವಾಗಿರುವ ಒಂದು ಕೆಟ್ಟ ಪಿಡುಗು. "ಎಲ್ಲರ ಮನೆ ದೋಸೆನೂ ತೂತೇ" ಎನ್ನುವಂತಹ ಉದ್ಧಟತನದ ಮಾತುಗಳು ನಮ್ಮ ಹಿರಿಯ ಸಮಾಜ ಸುಧಾರಕರನ್ನು ಕೌಟುಂಬಿಕ ವಿಚಾರದೊಳಗೆ ತಲೆಹಾಕದಂತೆ ಮಾಡಿಬಿಡುತ್ತಿದ್ದವು.
    ಈಗಂತೂ ವಿದ್ಯಾದೇವತೆ ಮನೆಮನೆ ತಟ್ಟಿದ್ದಾಳೆ. ಎಲ್ಲರಿಗು ಇವಳು ಸಹಜ ವಸ್ತುವೇ ಆದರೂ ಪರಿಣಾಮಕಾರಿಯಾದ ಸುಸ್ಥಿತಿ ತಲುಪುವಲ್ಲಿ ನಾವುಗಳು ಎಡವುತಿರುವುದೇಕೆ? ಎಂದು ಅವಲೋಕಿಸಿದಾಗ "ಅಹಂ" ಎಂಬ ದುಷ್ಟ ಅಡಗಿ ಕುಳಿತಿರುವುದು ಗೋಚರಿಸುತ್ತದೆ. ಗಂಡು ಕುಟುಂಬದ ಸರ್ವಕಾಲಿಕ ಯಜಮಾನ ಎಂಬುವ ಅಹಂ. ಲೋಕದ ವ್ಯವಹಾರ ಜ್ನಾನ ತಿಳಿದುಕೊಂಡಿದ್ದೇವೆ ಎಂಬ ಅಹಂ. ಕುಟುಂಬಕ್ಕೆ ಗಂಡೆ ಅನ್ನದಾತ ಎನ್ನುವ ಅಹಂ ಇತ್ಯಾದಿಗಳ ಅಹಂನಿಂದಾಗಿ ಕುಟುಂಬದ ನಿರ್ದಾರಗಳಲ್ಲಿ, ತೀರ್ಮಾನ ತೆಗೆದುಕೊಳ್ಳುವುದರಲ್ಲಿ ಹೀಗೆ ಅಲ್ಲ ವಿಚಾರದಲ್ಲೂ ತನ್ನದೇ ಮೇಲುಗೈ ಆಗಿರಬೇಕು ಎಂದು ಗಂಡು ಬಯಸುತ್ತಾನೆ. ಮಾತ್ರವಲ್ಲ ಇಂತಹ ವಿಚಾರಗಳಲ್ಲಿ ಹೆಣ್ಣು ಅಡ್ಡಿಯಾದರೆ ಆಕೆಯ ಮೇಲೆ ದೌರ್ಜನ್ಯವೆಸಗುವ ಪ್ರವೃತ್ತಿಯನ್ನು ಕಂಡುಕೊಂಡಿದ್ದಾನೆ. ವರದಕ್ಷಿಣೆ ಹೆಸರಿನಲ್ಲಿ ಹೆಣ್ಣಿನ ಮೇಲೆ ದೌರ್ಜನ್ಯ ನಡೆಸುವುದು, ಮಕ್ಕಳಾಗಲಿಲ್ಲ ಎಂಬ ಕಾರಣಕ್ಕಾಗಿ ಹೆಣ್ಣನ್ನು ದೂಷಿಸುವುದು. ಮನೆಯಲ್ಲೇ ಇರುತ್ತಾಳೆ ಎಂಬುವ ಕಾರಣಕೊಟ್ಟು ಒಬ್ಬ ಸೇವಕಿಯಂತೆ ನಡೆಸಿಕೊಳ್ಳುವುದು, ಮದುವೆಯಾದ ಮೇಲೆ ಸ್ನೇಹಿತರೊಂದಿಗೆ ಮಾತನಾಡುವಂತಹ ಸ್ವಾತಂತ್ರ್ಯ ಮೊಟುಕುಗೊಳಿಸುವುದು. ಗಂಡನ ಮನೆಕಡೆಯವರು ಮನೆಗೆ ಬಂದಾಗ ಅವರನ್ನು ಸರಿಯಾಗಿ ಗಮನಿಸಲಿಲ್ಲ ಎಂಬ ಕ್ಷುಲಕ ಕಾರಣಕೊಟ್ಟು ದೌರ್ಜನ್ಯ ಎಸಗುವವರು ಇದ್ದಾರೆ. ಈ ಎಲ್ಲ ವಿಧಿ ವಿಧಾನಗಳನ್ನು ರೀತಿ ನೀತಿಗಳನ್ನು ಹೆಣ್ಣಿನ ಮೇಲೆ ಹೊರಿಸಿ ಆಕೆಯನ್ನು ತನ್ನ ಹದ್ದು ಬಸ್ತಿನಲ್ಲಿ ಇಟ್ಟುಕೊಳ್ಳಬೇಕೆನ್ನುವುದು ಕೌಟುಂಬಿಕ ದೌರ್ಜನ್ಯದ ಮುಂದುವರಿದ ಭಾಗ.
        ಒಟ್ಟಿನಲ್ಲಿ ಅಕ್ಕಪಕ್ಕ ಇಂತಹ ದೌರ್ಜನ್ಯಗಳು ಕಂಡುಬಂದಾಗ ಹಿರಿಯರು, ಪ್ರಬುದ್ಧರು "ಕುಟುಂಬದಲ್ಲಿ ಇದೆಲ್ಲ ಸರ್ವೆ ಸಾಮಾನ್ಯ ಎಲ್ಲರ ಮನೆ ದೊಸೆನೂ ತೂತೇ" ಎಂದು ಅಲ್ಲಗಳೆಯದೆ, ಆ ಹೆಣ್ಣು ಮಗಳ ಸ್ಥಿತಿ ನಾಳೆ ನನ್ನ ಮಗಳಿಗೂ ಬಂದೀತು, ಆಗಾಗದಿರಲಿ ಎಂದು ಇಂತಹ ದೌರ್ಜನ್ಯಗಳನ್ನು ಖಂಡಿಸುವ ಸ್ಥೈರ್ಯ ತೋರಬೇಕು. ಅಂತಹ ಅಜ್ನಾನ ಅಘೋರ ಕಾಲದಲ್ಲೆ ಅನಿಷ್ಟ ದೌರ್ಜನ್ಯಗಳ ವಿರುದ್ಧ ಹೋರಾಡುವ ಧೈರ್ಯ ತೋರಿದ ಮಹಾನುಭಾವರಿಗೆ ಕಿಂಚಿತ್ತಾದರು ಬೆಲೆಕೊಡುವ ಮತ್ತು ಅವರಂತ ಸುಧಾರಕರ ಶ್ರಮದಿಂದಲೇ ನಮ್ಮ ಸಂತತಿಗಳು ಬದುಕು ಕಾಣುತಿರುವುದು ಎಂಬ ಕೃತಜ್ನತೆಯನ್ನು ಪ್ರಜ್ನ್ನ ಹೋರಾಟದ ಮೂಲಕ ತೋರಿಸಬೇಕು. ಇಲ್ಲವಾದರೆ ನಾಗರೀಕ ಸಮಾಜದಲ್ಲಿರುವ ಅಂತವರನ್ನು ಅನಾಗರಿಕರು ಎಂದು ಕರೆಯಬೇಕಾಗುತ್ತದೆ. ಏನಂತೀರಿ?.

-ಸಂತೋಷ್.ಇ.
 Read more!

ಕ್ರಿಸ್ತನಿಗೊಂದು ಪವಿತ್ರ ಗೋದಲಿಯನ್ನು ಕಟ್ಟಲು ಅನುವುಮಾಡಿಕೊಡುವ ಭಜನೆಮೇಳ..


ಪ್ರೀತಿಯ ಅನು
ಸ್ನೇಹಾಂಜಲಿ.
ಭರವಸೆ, ನಿರೀಕ್ಷೆ, ಸಿದ್ಧತೆ, ಪರಿವರ್ತನೆ, ಹೀಗೆ ಬದುಕಿನ ನಾನಾ ವರಸೆಗಳನ್ನು ಕಟ್ಟಿಕೊಡುವ ಅಗಮನಕಾಲ, ಕ್ರೈಸ್ತ ಪಂಚಾ0 ಗದಲ್ಲಿ ಕಾಣಸಿಗುವ ಒಂದು ವಿಶಿಷ್ಟ ಕಾಲ. ಕ್ರಿಸ್ತನು ಮನುಷ್ಯ ರೂಪ ತಾಳಿ ಬಂದದ್ದನ್ನು ಅರ್ಥಭರಿತವಾಗಿ ಸ್ಮರಿಸಲು ಅಣಿಮಾಡಿಕೊಡುವುದರ ಜತೆಗೆ ಕ್ರಿಸ್ತನ ಪುನರಾಗಮನದ ಪೂರ್ವಾನುಭವವನ್ನು ಉಣಬಡಿಸುತ್ತದೆ ಈ ಆಗಮನಕಾಲ. ಕ್ರಿಸ್ಮಸ್ ಎಂಬ ಪಾರಮಾರ್ಥಿಕ ಅದ್ದೂರಿಯ ಜೌತಣದ ಸಂಪೂರ್ಣ ಅನುಭೋಗಕ್ಕೆ ನಮ್ಮನ್ನು ಸಿದ್ಧಗೊಳಿಸುತ್ತಲೇ, ಕ್ರಿಸ್ತನ ಎರಡನೆಯ ಬರುವಿಕೆಯನ್ನು ಮತ್ತು ಮಾನವರನ್ನು ನ್ಯಾಯವಿಚಾರಣೆಗೆ ಗುರಿಮಾಡುವ ಅಂತಿಮ ದಿನವನ್ನು ಸಾಂಕೇತಿಕವಾಗಿ ಸ್ಪಷ್ಟಪಡಿಸುತ್ತದೆ. ಆ ಕಾರಣದಿಂದ ಆಗಮನ ಕಾಲವೆಂಬುವುದು ಜೀವಾವಧಿಯ ಕಾಲ, ಆಜೀವ ಸಿದ್ಧತೆಯ ಕಾಲವೆಂಬ ಸತ್ಯವನ್ನು ಮನಗಾಣಿಸುತ್ತದೆ. 
ಆಂಗ್ಲ ಭಾಷೆಯ advent season ಎಂಬುವುದನ್ನು ಕನ್ನಡದಲ್ಲಿ ಆಗಮನಕಾಲ ಎಂದು ಕರೆಯುತ್ತಾರೆ. ಮೂಲತಃ ಲ್ಯಾತಿನ್ ಪದದ ವ್ಯುತ್ಪನ್ನವಾಗಿರುವ advent ಆಗಮನ ಅಥವಾ ಬರುವುದು ಎಂಬ ಅರ್ಥಗಳನ್ನು ನೀಡುತ್ತದೆ. ಕ್ರಿಸ್ತಜಯಂತಿಯ ಪೂರ್ವಭಾವಿಯಾಗಿ ಬರುವ ಈ ಆಚರಣೆಯ ಕಾಲಾವಧಿ ಸುಮಾರು ನಾಲ್ಕು ವಾರಗಳಿಗೆ ವಿಸ್ತರಿಸಿಕೊಂಡಿದ್ದು ಡಿಸಂಬರ್ ೨೫ಕ್ಕೆ ಪೂರ್ಣ ಗೊಂಡು ಕ್ರಿಸ್ಮಸ್ ಹಬ್ಬದ ಸಂಭ್ರಮದ ಆಚರಣೆಗೆ ಮೂರ್ಹತ ಹಾಕಿಕೊಡುತ್ತದೆ. ನಾಲ್ಕುನೆ ಶತಮಾನದಲ್ಲಿ ಆಗಮನಕಾಲವನ್ನು ಉಪವಾಸ ಮತ್ತು ಪ್ರಾಯಶ್ಚಿತ ಕಾಲವಾಗಿ ಆಚರಿಸುತ್ತಿದ್ದರೆಂಬುವುದು ಚಾರಿತ್ರಿಕ ಸತ್ಯ.  ಕ್ರೈಸ್ತ ಧರ್ಮದಲ್ಲಿ ಈ ಆಗಮದಕಾಲದ ಆಚರಣೆಯು ಯಾವಾಗ ರೂಢಿಗೆ ಬಂತ್ತೆಂಬ ಪ್ರಶ್ನೆಗೆ ನಿಖರವಾದ ಉತ್ತರ ಅಲಭ್ಯವಾದರೂ ಶತಮಾನಗಳಿಂದ ಅನೇಕ ರೀತಿಯ ವೈವಿಧ್ಯಮಯ ಆಚರಣೆಗಳು/ವಿಧಿಗಳನ್ನು ಈ ಕಾಲವು ಮೈಗೂಡಿಸಿಕೊಂಡಿರುವುದು ಒಂದು ಸ್ವಾರಸ್ಯಕರ ವಿಷಯ.
ವಾಡಿಕೆಯಂತೆ ಬಡ ಮಹಿಳೆಯರು ಆಗಮನಕಾಲದ ವಿಷಯವನ್ನು ಒಕ್ಕಣಿಸುವ ಕೆಲವೊಂದು ಭಾವಚಿತ್ರಗಳನ್ನು ಮತ್ತು ಮೇರಿ ಮತ್ತು ಯೇಸುವಿನಂತೆ ಆಲಂಕರಿಸಿದ ಗೊಂಬೆಗಳನ್ನು ಹೊತ್ತು, ಮನೆ ಮನೆಗೆ ಹೋಗಿ, ಮನೆಮಂದಿಗೆಲ್ಲಾ ತೋರಿಸಿ ಅವರಿಂದ ಹಣ ಪಡೆಯುವ ರೂಢಿ ಇಗ್ಲೆಂಡ್ ದೇಶದಲ್ಲಿ ಕಾಣ ಸಿಗುತ್ತದೆ. ಗೊಂಬೆಗಳನ್ನು ಹೊತ್ತುಕೊಂಡ ಮಹಿಳೆಯರು ಕ್ರಿಸ್ಮಸ್ ಮುಂಚಿತವಾಗಿ ತಮ್ಮ ಮನೆಯ ಅಂಗಳದಲ್ಲಿ ಕಾಣಿಸಿಕೊಳ್ಳದಿದ್ದಲ್ಲಿ ಅಂತಹ ಮನೆಗಳಿಗೆ ಅಪಶಕುನ ಅಥವಾ ಅನಿಷ್ಟ ಕಟ್ಟಿಟ್ಟ ಬುತ್ತಿಯೆಂಬ ನಂಬಿಕೆಯಿದೆ. 
ಉಳುಮೆದಾರರು ಅಥವಾ ಕೃಷಿಕರು ತಮ್ಮ ಹೊಲಗದ್ದೆಗಳ ಸುತ್ತಾ ಗಸ್ತು ತಿರುಗುವಂತೆ, ಒಣಗಿದ ಹುಲ್ಲು ಕಡ್ಡಿಗಳ ಕಂತೆಗಳಿಗೆ ಬೆಂಕಿ ಹಚ್ಚಿ ಕೂಗಾಡಲು ಮಕ್ಕಳನ್ನು ನೇಮಿಸುತ್ತಾರಂತೆ. ಕ್ರಿಮಿಕೀಟಗಳು ಬೆಳೆಗಳನ್ನು ನಾಶಮಾಡುವುದೆಂಬ ಭಯದಿಂದ ಅವುಗಳನ್ನು ತಮ್ಮ ಹೊಲಗದ್ದೆಗಳಿಂದ ಅಟ್ಟಿಸಲು ಈ ರೀತಿಯ ವಾಡಿಕೆ ಅವರಿಗೆ ಅಂಟಿಕೊಂಡಿದೆ ಎಂಬ ವಿವರಣೆಯಿದೆ. ಇಟಲಿಯ ದೇಶದಲ್ಲಿ ಮೇರಿ ಮಾತೆಯ ಪುಣ್ಯಕ್ಷೇತ್ರಗಳ ಮುಂದೆ ಜನರು bagpipe ಎಂಬ ವಾದ್ಯಗಳನ್ನು ನುಡಿಸುತ್ತಾರಂತೆ. ಕ್ರಿಸ್ತನ ಜನನದ ನಂತರ ಅವನನ್ನು ಕಾಣಲು ಬಂದ ಕುರುಬರು bagpipe ನುಡಿಸಿ ಸಂಭ್ರಮಿಸಿದರೆಂಬ ನಂಬಿಕೆಯಿಂದ ಹುಟ್ಟಿಕೊಂಡ ಇನ್ನೊಂದು ಆಚರಣೆಯಿದು.
ನನ್ನ ಹುಟ್ಟೂರಿನಲ್ಲಿ ಆಗಮನ ಮತ್ತು ಕ್ರಿಸ್ಮಸ್ ಕಾಲಗಳೆಂದರೆ ಭಜನೆಮೇಳಗಳ ಕಾಲ. ಆಗಮನಕಾಲದ ಭಜನೆಗಳು (ಬನ್ನಿ ರಕ್ಷಕರೇ ಬನ್ನಿ ರಕ್ಷಕರೆ, ನಾವು ನಿಮ್ಮನ್ನಪೇಕ್ಷಿಸಿ ಕಾದು ಕೊಂಡಿದ್ದೇವೆ. ಬನ್ನಿ ಬನ್ನಿ...) ಕ್ರಿಸ್ತನ ಬರುವಿಕೆಯನ್ನು ಉತ್ಕಟವಾಗಿ ಆಶಿಸುವ ಜನರ ಹಂಬಲವನ್ನು ವ್ಯಕ್ತಪಡಿಸುತ್ತವೆ. ಇನ್ನೊಂದು ಕಡೆ, ಕ್ರಿಸ್ಮಸ್ ಹಬ್ಬದ ದಿನ ಮತ್ತು ನಂತರ ದಿನಗಳಲ್ಲಿ ಹಾಡಲು ವಿಶೇಷವಾಗಿ ರಚಿತಗೊಂಡ ಕ್ರಿಸ್ಮಸ್ ಭಜನೆಗಳು ಕ್ರಿಸ್ತನ ಜನನದ ಘಟನೆಯನ್ನು ಮತ್ತು ಈ ಘಟನೆಯ ಸುತ್ತ ಆವರಿಸಿಕೊಂಡಿರುವ ಇನ್ನಿತರ ಘಟನೆಗಳನ್ನು ಸ್ವಾರಸ್ಯವಾಗಿ ಕಣ್ಣಿಗೆ ಕಟ್ಟುವಂತೆ ಬಣ್ಣಿಸುತ್ತವೆ. ಗೊಲ್ಲರ ಅನುಭವಕ್ಕೆ ಬರುವ ಕ್ರಿಸ್ತ ಜನನದ ವಿವರಣೆಯ ಹಾಡುಗಳಂತೂ ತುಂಬ ವಿಶೇಷವೆನ್ನಿಸುತ್ತವೆ.
ಸರಳತೆ ಸ್ಪಷ್ಟತೆಗಳಿಗೆ ಒತ್ತುಕೊಡುವ ನಿರೂಪಣ ವಿಧಾನವನ್ನು ಈ ಭಜನೆಗಳಲ್ಲಿ ಕಾಣಬಹುದು. ಭಜನೆಗಳಲ್ಲಿ ರಾಗ, ತಾಳ ಲಯಬದ್ಧವಾಗಿದ್ದು ಸರಳ ಶೈಲಿಯಲ್ಲಿ ರಚಿತವಾಗಿರುವುದರಿಂದ ಒಮ್ಮೆ ಓದಿದವರಿಗೆ ಪುನಃ ಓದಬೇಕೆಂಬ, ಓದಿದ ಮೇಲೆ ಹಾಡಬೇಕೆಂಬ, ಹಾಡಿದ ಮೇಲೆ ಅಲ್ಲಿಯ ತತ್ತ್ವಗಳನ್ನು ಅರಿಯಬೇಕೆಂಬ ಆಸಕ್ತಿ ಒಡಮೂಡದೆ ಇರುವುದಿಲ್ಲ. ದೈನಂದಿನ ಮಾತಿನ ಬಳಕೆ ಹಾಗು ಆಡುಮಾತುಗಳಲ್ಲಿ ಈ ಭಜನೆಗಳು ರಚನೆಯಾಗಿರುವುದರಿಂದ ಅವುಗಳು ವ್ಯಕ್ತಪಡಿಸುವ ಧೋರಣೆ, ಆಶಯಗಳು ಸುಲಭವಾಗಿ ಅರ್ಥವಾಗುತ್ತವೆ. ಇನ್ನೊಂದು ಕಡೆ, ಸಂವಾದದ ಧಾಟಿಯಲ್ಲಿರುವ ಅನೇಕ ಭಜನೆಗಳು ಆಶಯಗಳ ಅಭಿವ್ಯಕ್ತಿಗೆ ಅನುಕೂಲವಾಗಿದೆ. ಒಟ್ಟಿನಲ್ಲಿ, ಭಾಷೆಯ ಸಂಕೀರ್ಣತೆಯಿಂದ ದೂರವಾಗಿ ಘನವಾದ ವಿಷಯಗಳನ್ನು ತಿಳಿಗೊಳಿಸಿ ಹೇಳುವ ನಿಪುಣತೆ ಈ ಭಜನೆಗಳ ಜೀವಾಳ. ಭಜನೆಗಳ ಧಾಟಿ ಗ್ರಾಮ್ಯವಾಗಿರುವುದ್ದರಿಂದ ಹಳ್ಳಿಯ ಕ್ರೈಸ್ತರ ಮನೆ ಮನಗಳಲ್ಲಿ ಇಂದಿಗೂ ಜೀವಂತವಾಗಿ ಉಳಿದಿವೆ. ಇನ್ನೊಂದು ಕಡೆ, ಭಜನೆಗಳಲ್ಲಿರುವ ಸಾಹಿತ್ಯ ಮತ್ತು ಸಂಗೀತಗಳ ಅನ್ಯೋನ್ಯತೆ ಭಕ್ತನನ್ನು ಭಕ್ತಿಯ ಪರವಶತೆಯಲ್ಲಿ ತೇಲಿಸಿಬಿಡುತ್ತವೆ. ಕೆಲವು ಭಜನೆಗಳ ಸಂಗೀತ ಲ್ಯಾಟಿನ್, ಪ್ರೆಂಚ್ ಮೂಲವಾಗಿದ್ದು ಅವುಗಳನ್ನು ಕನ್ನಡೀಕರಿಸಿ ತಮ್ಮ ಅರಾಧನವಿಧಿಗಳಲ್ಲಿ ಉಪಯೋಗಿಸಿಕೊಂಡಿರುವುದು ಗಮನಾರ್ಹ.
ಆಗಮನಕಾಲ, ಕ್ರಿಸ್ಮಸ್ ಕಾಲ, ಪಾಸ್ಖಕಾಲ ಹೀಗೆ ಕ್ರೈಸ್ತಪೂಜಾವಿಧಿಗಳ ವಿಶೇಷ ಕಾಲಗಳಲ್ಲಿ ಮತ್ತು ವಾರದ ವಿಶೇಷ ದಿನಗಳಲ್ಲಿ ಭಜನೆ ಮೇಳಗಳು ಯಥೇಚ್ಛವಾಗಿ ಕಾಣಸಿಗುತ್ತವೆ. ಜತೆಗೆ ಊರಿನಲ್ಲಿ ಭೀಕರ ಸಮಸ್ಯೆಗಳು ತಲೆದೋರಿದಾಗ ಭಜನೆಮೇಳಗಳು ಹೆಚ್ಚಾಗಿ ನಡೆಯುವುದು ಒಂದು ಕುತೂಹಲವುಳ್ಳ ವಿಷಯವು ಹೌದು.
ಭಜನೆ ಮೇಳವನ್ನು ವ್ಯಕ್ತಿಗತ ಮತ್ತು ಸಾಮೂಹಿಕ ಎಂದು ಎರಡು ಹಂತಗಳಲ್ಲಿ ವಿಭಾಗಿಸಬಹುದು. ಈ ಗ್ರಾಮದಲ್ಲಿ ನಡೆಯುವುವ ಭಜನೆಮೇಳಗಳು ಸಾಮೂಹಿಕ ರೂಪದ್ದು, ಇಲ್ಲಿ ಹಾಡುವವರ ಸಂಖ್ಯೆಯನ್ನು ನಿರ್ದಿಷ್ಟವಾಗಿ ಹೇಳದೇ ಒಂದಕ್ಕಿಂತ ಹೆಚ್ಚು ಎನ್ನುವುದೇ ಸೂಕ್ತವೆನ್ನಿಸುತ್ತದೆ. ಏಕೆಂದರೆ ಹಲವು ಬಾರಿ ಹಾಡುವವರ ಸಂಖ್ಯೆ ೧೦ ರಿಂದ ೧೫ ಇದ್ದರೆ, ಕೆಲವೊಮ್ಮೆ ಹಾಡುವವರ ಸಂಖ್ಯೆ ೨೦ಕ್ಕಿಂತ ಅಧಿಕವಿರುತ್ತದೆ. ಸಾಮೂಹಿಕ ಭಜನೆಯಾದ್ದರಿಂದ ಹಿಮ್ಮೇಳವಿರವುದನ್ನು ಗಮನಿಸಬಹುದು. ಮುಖ್ಯ ಗಾಯಕ ಭಜನೆಯನ್ನು ಹಾಡುತ್ತಾ ಹೋದಂತೆ ಉಳಿದವರು ಅದೇ ಧಾಟಿಯಲ್ಲಿ ಅದನ್ನು ಪುನರಾವರ್ತಿಸುತ್ತಾರೆ. ಕೆಲವೊಮ್ಮೆ ಪಲ್ಲವಿಯ ಭಾಗವನ್ನು ಪುನರಾವರ್ತಿಸಿದರೆ, ಹಲವು ಸಲ ಜತೆಯಲ್ಲೇ ಇಡೀ ಹಾಡನ್ನು ಪುನರಾವರ್ತಿಸುವುದು ಕಂಡು ಬರುತ್ತದೆ. ತಾಳ, ಕಂಜ್ರಿ,  ಹಾರ್ಮೊನಿಯಂ ಹೀಗೆ ಮೊದಲಾದ ವಾದ್ಯ ವಿಶೇಷಗಳು ಇಲ್ಲಿರುತ್ತವೆ.
ಭಜನೆ ಕರ್ನಾಟಕದಾದ್ಯಂತ ಕಂಡು ಬರುವ ದೇಸಿ ಧಾರ್ಮಿಕ ಸಂಪ್ರದಾಯ. ಒಂದು ಆರಾಧನಾ ಕ್ರಮ. ಒಂದೊಂದು ಭಾಗದಲ್ಲಿ ಹಾಡುವ ಭಜನೆಗಳ ಹಿನ್ನಲೆ ಹಾಗು ಪ್ರಕಾರಗಳ ಮಟ್ಟಿಗೆ ಸ್ವಲ್ಪ ವ್ಯತ್ಯಾಸವಾದರೂ ಒಟ್ಟಾಗಿ ಮೇಳಗಳು ಒಂದಲ್ಲ ಒಂದು ರೀತಿಯಲ್ಲಿ ನಾಡಿನ ಉದ್ದಗಲಕ್ಕೂ ವ್ಯಾಪಿಸಿವೆ. ಇದು ಧರ್ಮಾತೀತ ಸಂಪ್ರದಾಯವು ಹೌದು. ಇಂತಹ ದೇಸಿಮೇಳಗಳು ಆಗಮನಕಾಲ ಮತ್ತು ಕ್ರಿಸ್ಮಸ್ ಆಚರಣೆಗಳ ಅವಿಭಾಜ್ಯವಾಗಿದ್ದು ಹೇಗೆ? 
 ಕೆಲ ದುಷ್ಟಾತ್ಮಗಳಿಗೆ ಮಧ್ಯಾಹ್ನ ಮತ್ತು ನಡುರಾತ್ರಿಯಲ್ಲಿ ಕಾಲರ ರೋಗವನ್ನು ಹರಡುವ ಶಕ್ತಿ ಇತ್ತಂತೆ. ರೋಗವನ್ನು ಹರಡುವ ಅಂತಹ ಭಯಾನಕ ದುಷ್ಟಆತ್ಮಗಳನ್ನು ತಮ್ಮ ಊರುಕೇರಿಗಳಿಂದ ಬೆಂಕಿ ಪಂಜು ಮತ್ತು ಸದ್ದುಗದ್ದಲ ಕೂಗಾಟಗಳಿಂದ ಬೆದರಿಸಿ ಬಡಿದೋಡಿಸಬಹುದು ಎಂಬ ನಂಬಿಕೆಯಿಂದ ಜನರು ಊರಿನ ಸುತ್ತಾ ಪಂಜು ಮತ್ತು ಗದ್ದಲಗಳಿಂದ ಗಸ್ತುಮಾಡಲು ಪ್ರಾರಂಭಿಸಿ ಕಾಲಕ್ರಮೇಣ ಅದು ಭಜನೆ ಸಂಪ್ರದಾಯವಾಗಿ ರೂಪುಗೊಂಡಿತ್ತಂತೆ.  ಕೊನೆಗೆ ೧೯ನೇ ಶತಮಾನದಲ್ಲಿ ಭಜನೆಂಬ ದೇಸಿ ಸಂಪ್ರದಾಯವು carol singing ಜತೆ ಸಮೀಕರಿಸಿಕೊಂಡ ಪ್ರತಿಫಲದಿಂದ ಕ್ರೈಸ್ತ ಭಜನೆಮೇಳಗಳು ಹುಟ್ಟಿಕೊಂಡವೆಂದು ಜಾನಪದ ತಜ್ಞ ಪಾಧರ್ ವಿನ್ಸೆಂಟ್ ವಿಲ್ಸನ್‌ರವರ ವಿವರಣೆ. ಭಜನೆಮೇಳಗಳು ಈಗ ಕಾಲರ ರೋಗವನ್ನು ಹರಡುವ ದುಷ್ಟಶಕ್ತಿಯನ್ನು ಓಡಿಸುವ ಕೆಲಸವನ್ನು ಬಿಟ್ಟು, ಕ್ರಿಸ್ಮ ಆಚರಣೆಗೆ ಸಿದ್ಧತೆಗೊಳಿಸುವ, ಮನಸ್ಸಿನಲ್ಲಿರುವ ದುಷ್ಟ ಶಕ್ತಿಗಳನ್ನು ಬಡಿದೋಡಿಸಿ ಕ್ರಿಸ್ತನಿಗೆ ಒಂದು ಪವಿತ್ರ ಗೋದಲಿಯನ್ನು ನಮ್ಮ ಬದುಕಿನಲು ಕಟ್ಟಲು ಅನುವುಮಾಡಿಕೊಡುವ ಸಂಪ್ರದಾಯವಾಗಿ ರೂಪುಗೊಂಡಿರುವುದು ಶ್ಲಾಘನೀಯ ವಿಷಯ. ಅನು, ಇಂತಹ ಭಜನೆಗಳನ್ನು ಕೇಳಲು ಆಸಕ್ತಿಯಿದ್ದಲ್ಲಿ ನಮ್ಮ ನಾಯಕ ಹುಟ್ಟಿದ ನೋಡಿ ಎಂಬ ದ್ವನಿಸುರುಳಿಯನ್ನು ಕೊಂಡು ಆಲಿಸು. ಧನ್ಯವಾದಗಳು
-ಜೋವಿ

Read more!

Thursday, 1 December 2011

ನೆನೆದವನ ಮನದಲ್ಲಿ…..



ಶ್ರೀ.ಇನ್ನಾಸಪ್ಪನವರು ಒಬ್ಬ ಸಾಧಾರಣ ಕ್ರೈಸ್ತರಾದರೂ, ಅವರಿಂದ ಸ್ಫೂರ್ತಿಗೊಂಡ ಅನೇಕರಲ್ಲಿ ನಾನು ಒಬ್ಬ. ಒಬ್ಬ ಸಾಮಾನ್ಯನಾಗಿ, ಇಡೀ ಒಂದು ಗ್ರಾಮದ ಆರ್ಥಿಕ, ಶೈಕ್ಷಣಿಕ ಹಾಗು ಆಧ್ಯಾತ್ಮಿಕ ಪ್ರಗತಿಗೆ ದುಡಿದು ಯಶಸ್ಸು ಪಡೆದ ಶ್ರೀಯುತರು, ಆದರ್ಶ ಕ್ರೈಸ್ತ ಜೀವನ ಸಾಧ್ಯವೆಂದು ಬಾಳಿ ತೋರಿಸಿಕೊಟ್ಟವರು. ಶ್ರೀಯುತರ ಅಧ್ಯಾತ್ಮಿಕ ಜೀವನ, ಕ್ರಿಸ್ತನ ಶುಭಸಂದೇಶವನ್ನು ಜನಮನಗಳಲ್ಲಿ ಬಿತ್ತಲು ಕೈಗೊಂಡ ಕಾರ್ಯಗಳು, ತಮ್ಮ ಜನರ ಜೀವನದಲ್ಲಿ ಕ್ರೈಸ್ತ ಧರ್ಮವನ್ನು ಪ್ರಸ್ತುತ ಪಡಿಸಿದ ರೀತಿ, ತನಗಾದ ಕ್ರಿಸಾನುಭವವನ್ನು ಇತರಿಗೆ ತಿಳಿಸಲು ಭಾರತೀಯ ಕಲಾಪ್ರಕಾರಗಳನ್ನು ಬಳಸಿಕೊಳ್ಳುವ ನಿರ್ಧಾರ ನಿಜಕ್ಕೂ ಶ್ಲಾಘನೀಯ. ಹಾರೋಬೆಲೆ ಗ್ರಾಮದಲ್ಲಿ ವಂ. ಸ್ವಾಮಿ. ಲಾಜರಸ್‌ರವರು ಪ್ರಾರಂಭಿಸಿದ ಯೇಸು ಕ್ರಿಸ್ತರ ಪೂಜ್ಯ ಪಾಡುಗಳ ಮಹಿಮೆಯನ್ನು ಸಂಪೂರ್ಣವಾಗಿ ಪರಿಷ್ಕರಿಸಿ ಸುಮಾರು ೮೦ ವರ್ಷಗಳ ಕಾಲ ಅದರ ನಿರ್ದೇಶಕರಾಗಿ ಮುನ್ನಡೆಸಿಕೊಂಡು ಬಂದಿದ್ದು, ಸುಮಾರು ೩೫ಕ್ಕೂ ಹೆಚ್ಚು ಬೈಬಲ್ ಆಧಾರಿತ ನಾಟಕಗಳ ರಚನೆ, ೮೦೦ಕ್ಕೂ ಹೆಚ್ಚು ಭಜನಾ ಹಾಗೂ ರಂಗ  ಗೀತೆಗಳ ರಚನೆ, ೩೦ ವರ್ಷಗಳ ಕಾಲ ಶಾಲೆಯ ಶಿಕ್ಷಕ, ಮುಖ್ಯ ಉಪಾಧ್ಯಾಯರಾಗಿ ಸೇವೆ ಹಾಗೂ ಪಂಚಾಯಿತಿ ಅಧ್ಯಕ್ಷತೆ, ಊರಿನ ಪೋಸ್ಟ್ ಮಾಸ್ಟರ್ ಒಳಗೊಂಡಂತೆ ಅನೇಕ ಜವಬ್ದಾರಿಗಳ ನಿರ್ವಹಣೆ ಹಾಗೂ ಕರ್ನಾಟಕದ ರಾಯಭಾರಿಯಾಗಿ ರೋಮ್ ದೇಶದಲ್ಲಿ ಪೋಪ್ ಜಗದ್ಗುರುಗಳ ಭೇಟಿ, ಇವು ಇವರ ಜೀವಮಾನದ ಕೆಲವು ಪ್ರಮುಖ ಸಾಧನೆಗಳಾಗಿವೆ. ಇವೆಲ್ಲವೂ ಮೇಲ್ನೋಟಕ್ಕೆ ಕೇವಲ ಸಾಮಾನ್ಯ ಜವಾಬ್ದಾರಿ ಹಾಗೂ ನಿರ್ವಹಣೆಯಂತೆ ಕಂಡರೂ ಒಬ್ಬ ಗ್ರಾಮಸ್ಥನಾಗಿ, ತುಂಬು ಪರಿವಾರದ ಯಜಮಾನನಾಗಿ  ಇತಿಮಿತಿಯ ಹಾಗೂ ಪರಿಸ್ಥಿತಿಯ ಒತ್ತಡಗಳ ನಡುವೆಯೂ ಈ ರೀತಿಯ ಸಾಧನೆಗಳ ಶಿಖರವೇರಿದ್ದು ನಿಜವಾಗಲೂ ಅದ್ಭುತವೇ ಸರಿ. ಇನ್ನಾಸಪ್ಪನವರ ಈ ಹಂತ ಹಂತದ ಬೆಳವಣಿಗೆ, ಕೊಡುಗೆ, ಜೀವನ, ಸಾಧನೆ ಹಾಗೂ ತಮ್ಮ ಸುತ್ತಮುತ್ತಲಿನ ಜನ, ಪರಿಸರ ಹಾಗೂ ಜೀವನ ಕ್ರಮಗಳ ಮೇಲೆ ಬೀರಿದ ಪ್ರಭಾವದ ಬಗ್ಗೆ ಒಂದು ವಿಹಂಗಮ ನೋಟವನ್ನು ಹಂತ ಹಂತವಾಗಿ ಪರಿಚಯಿಸುವ ಸಾಹಸವನ್ನು ಕೈಗೊಳ್ಳುವ ಯೋಜನೆ ಇದೆ. ಅವರು ನಮ್ಮನ್ನು ಆಗಲಿ ನವಂಬರ್ ೨೪ಕ್ಕೆ ೧೪ ವರ್ಷಗಳು ತುಂಬಿ ೧೫ನೇ ವರ್ಷಕ್ಕ ಕಾಲಿಟ್ಟಿದೆ. ಈ ಒಂದು ಸುಸಂದರ್ಭದಲ್ಲಿ …ಅವರ ಬಗ್ಗೆ ಬರೆದಿದ್ದ ಕೆಲವೊಂದು ಸಾಲುಗಳು..


ಮೌನದಿ ನಿಂತು ನೋಡುತ್ತೇನೆ...
ನಿನ್ನಂದ ಊರು ಪಡೆದ ಹೂಸ ಆಕಾರಗಳ 
ವಿಕಾರದೊಳಗೆ ಭಕ್ತಿ ಬಂಡಾರದ ನವ ರೂಪಗಳ
ನೆನೆಯುತ್ತಿದೆ ಮನಸು ಮನಪಲ್ಲಟದೊಳೆಗೆ ಹುದುಗಿ
ನಿನ್ನ ಸಾಮಾನ್ಯತೆಯಲ್ಲಿ ಅಸಾಮಾನ್ಯತನವ
ಕೈಯಾರೆ ಕಟ್ಟಿ ಹರಸಿದ ಮಹಿಮೆ ನಾಟಕವ..
ಸೋಲಲಿಲ್ಲ ನಿನ್ನ ಕೈಗಳು ಹತ್ತಾರು ಪುಸ್ತಕಗಳ ಕೈಬರವಣಿಗೆಗೆ,
ಆರಲಿಲ್ಲ ದನಿಯು ನೂರಾರು ಹಾಡಿನ ರಚನೆಗಳಿಗೆ..
ದಣಿಯಲಿಲ್ಲ ಕಾಲುಗಳು ಕ್ರಿಸ್ತನ ಆವಿಷ್ಕಾರ ಪಯಣದ ಮೈಲಿಗಳಿಗೆ
ಎಲ್ಲದರಲ್ಲೂ ಕ್ರಿಸ್ತನನ್ನೇ ಉಣ ಬಡಿಸುವ ತೀವ್ರತೆಯಲಿ…
ಕ್ರಿಸ್ತಾನುಭವವ ಧಾರೆಯೆರದ ಅದಮ್ಯ ಅನುಭಾವಿಯೇ
ಸುಜ್ಞಾನ ಸಂಭ್ರಮಿಸಿದ ಕಲಾಗಣಿಯೇ..
ನಿನ್ನ ನೆನೆಯುವುದಕ್ಕೂ ಪಾತ್ರನಲ್ಲವೆಂಬ..
ನಿರ್ಭಾವ ಒಸರಲ್ಲಿ
ನೆನೆಯುತ್ತಿರುವೆ ನಿನ್ನ ಸಾರ್ಥಕ ಬದುಕ
ಸ್ವಲ್ಪವಾದರೂ ಕಲಿಯುವ ಹಂಬಲದಲ್ಲಿ
ಮೌನದಿ ನಿಂತು ನೋಡುತ್ತಿದೇನೆ…

-ಜೋವಿ

Read more!