Sunday, 13 January 2019

ಸಾಧ್ಯತೆಗಳು


ಯಾತ್ರಿಕನೊಬ್ಬ ಹಳ್ಳಿಯೊಂದಕ್ಕೆ ಬಂದ. ಹಾಗೇ ಬಂದದ್ದೇ ಮನೆಯೊಂದರ ಮುಂದೆ ಹೋಗಿ “ತಿನ್ನಲು ಏನಾದರೂ ಇದೆಯೇ” ಎಂದು ಕೇಳುತ್ತಾನೆ. ಆ ಮನೆಯ ಒಡತಿ “ತಿನ್ನಲು ಏನೂ ಇಲ್ಲ” ಎನ್ನುತ್ತಾಳೆ. ಹೀಗೆ ಒಂದೆರಡು ಮನೆಗಳ ಮುಂದೆ ಹೋಗಿ ಕೇಳಿದಾಗಲೂ ಇದೇ ರೀತಿಯ ಉತ್ತರ ಬರುತ್ತದೆ. ಆಗ ಆ ಯಾತ್ರಿಕನು “ನಿಮ್ಮಲ್ಲಿ ಯಾರನ್ನಾದರೂ ಕೇಳಿ ಸ್ವಲ್ಪ ಊಟ ಕೊಡಲು ಸಾಧ್ಯವೇ?” ಎಂದು ಕೇಳುತ್ತಾನೆ. ಅದಕ್ಕೆ ಆ ಮನೆಯ ಒಡತಿ” ನಾವು ಒಬ್ಬರಿಗೊಬ್ಬರು ಅಷ್ಟಾಗಿ ಮಾತನಾಡುವುದಿಲ್ಲ ಒಟ್ಟಾಗಿ ಸೇರುವುದಿಲ್ಲ ಆದ್ದರಿಂದ ಕೇಳುವುದಿಲ್ಲ” ಎನ್ನುತ್ತಾಳೆ.    

ಅದಕ್ಕೆ ಯಾತ್ರಿಕನು “ಸರಿ, ಹಾಗಾದರೆ ನನ್ನ ಬಳಿ ಒಂದು ವಿಶೇಷವಾದ ಅದ್ಭುತ  ಕಲ್ಲು ಇದೆ. ಅದನ್ನು ಕುದಿಯುವ ನೀರಿನಲ್ಲಿ ಹಾಕಿದರೆ, ಲೋಕದಲ್ಲಿ ಎಲ್ಲಿಯೂ ಸಿಗದಂತಹ ಅದ್ಭುತವಾದ ಸೂಪ್ ತಯಾರಾಗುತ್ತದೆ. ನೀನು ನನಗೆ ಒಂದು ಪಾತ್ರೆಯನ್ನು ಕೊಟ್ಟರೆ ನಾನು ಅದನ್ನು ನೀರಿಗೆ ಹಾಕಿ, ನಿನಗೂ ಸ್ವಲ್ಪ ಕೊಡುತ್ತೇನೆ” ಎನ್ನುತ್ತಾನೆ.         

ಇದನ್ನು ಕೇಳಿದ್ದೆ, ಆ ಹೆಂಗಸು ಓಡಿ ಹೋಗಿ ಒಂದು ದೊಡ್ಡ ಪಾತ್ರೆಯನ್ನು ತಂದು ಕೊಟ್ಟು ಅದಕ್ಕೆ ಬೇಕಾದ ಸ್ವಲ್ಪ ಸೌದೆ, ಬೆಂಕಿಯನ್ನು ಸಹ ಸಿದ್ಧಪಡಿಸಿ ಕೊಡುತ್ತಾಳೆ. ಯಾತ್ರಿಕ ನಲ್ಲಿ ಇರುವ ಅದ್ಭುತವಾದ ಕಲ್ಲಿನ ಬಗ್ಗೆ ತನ್ನ ಅಕ್ಕ ಪಕ್ಕದವರಿಗೆ ಮಾತ್ರ ತಿಳಿಸಿದಾಗ, ಅದು ಊರಿಗೆಲ್ಲ ಹರಡಿ ಎಲ್ಲರೂ ಯಾತ್ರಿಕನು ಸಿದ್ಧ ಪಡಿಸುತ್ತಿದ್ದ ಜಾಗದಲ್ಲಿ ಬಂದು ಸೇರುತ್ತಾರೆ.   

ನೀರು ಕುದಿಯುತ್ತಿದ್ದಂತೆ ಯಾತ್ರಿಕನು ತನ್ನ ಕೈಯಲ್ಲಿದ್ದ ಕಲ್ಲನ್ನು ತೆಗೆದು ಪಾತ್ರೆಯೊಳಗೆ ಹಾಕುತ್ತಾನೆ. ಸ್ವಲ್ಪ ಸಮಯದ ನಂತರ ನೀರು ಚೆನ್ನಾಗಿ ಬಿಸಿಯಾದ ಮೇಲೆ ಒಂದು ಸಣ್ಣ ಚಮಚದಿಂದ ನೀರನ್ನು ಎತ್ತಿ ಅದರ ರುಚಿ ನೋಡುತ್ತಾನೆ. ನೋಡಿದಾಕ್ಷಣ “ಆಹಾ ಎಷ್ಟು ಚೆನ್ನಾಗಿದೆ”, ಎನ್ನುತ್ತಾ ಇದಕ್ಕೆ ಸ್ವಲ್ಪ ಆಲೂಗಡ್ಡೆ ಹಾಕಿದ್ದರೆ ಇನ್ನು ಎಷ್ಟು ರುಚಿ ಇರುತ್ತಿತ್ತು” ಎಂದು ಉದ್ಘರಿಸುತ್ತಾನೆ.         

ಇದನ್ನು ಕೇಳಿದ್ದೆ ಅಲ್ಲಿದ್ದ ಕೆಲವರು ಓಡಿ ಹೋಗಿ ತಮ್ಮ ಮನೆಯಲ್ಲಿದ್ದ ಹಾಲುಗಡ್ಡೆಗಳನ್ನು ತಂದು ಅವನಿಗೆ ಕೊಡುತ್ತಾರೆ. ಅವನು ಅದನ್ನು ನೀರಿಗೆ ಹಾಕಿ ಮತ್ತಷ್ಟು ಕುದಿಸುತ್ತಾನೆ. ಸ್ವಲ್ಪ ಸಮಯದ ನಂತರ ಚಮಚದಿಂದ ಮತ್ತೆ ನೀರನ್ನು ತೆಗೆದು ರುಚಿ ನೋಡುತ್ತಾ, “ಈ ರುಚಿಗೆ ಒಂದಷ್ಟು ಮಾಂಸ ಇದ್ದಿದ್ದರೆ ಅದರ ಕತೆಯೇ ಬೇರೆ, ಆದರೆ ಇಲ್ಲಿ ಇಲ್ಲವಲ್ಲ” ಎಂದು ಹುಸಿ ವ್ಯಥೆಪಡುತ್ತಾನೆ.
ಇದನ್ನು ಕೇಳಿದ ಹಳ್ಳಿಯವನೊಬ್ಬ ಓಡಿ ಹೋಗಿ ತನ್ನ ಬಳಿ ಇದ್ದ ಸ್ವಲ್ಪ ಮಾಂಸವನ್ನು ತಂದು ಕೊಡುತ್ತಾನೆ. ಯಾತ್ರಿಕ ಇದು ಸಾಲದು ಎಂಬಂತೆ ನೋಡುತ್ತಾನೆ. ಅಷ್ಟರಲ್ಲಿ ಇನ್ನು ಕೆಲವರು ಹೋಗಿ ತಮ್ಮ ತಮ್ಮ ಮನೆಯಲ್ಲಿದ್ದ ಅಷ್ಟು ಇಷ್ಟು ಮಾಂಸವನ್ನು ಸಂತೋಷದಿಂದ ತಂದುಕೊಡುತ್ತಾರೆ. ಯಾತ್ರಿಕನು ಅವರಿಗೆ ವಂದಿಸಿ ಅದನ್ನು ಪಾತ್ರೆಯಲ್ಲಿ ಹಾಕುತ್ತಾನೆ. ಮಾಂಸ ಇಲ್ಲದವರು ಸ್ವಲ್ಪ ಈರುಳ್ಳಿ, ಕ್ಯಾರೆಟ್ ತರಬಾರದೇ ಎಂದು ಹೇಳಿದಾಗ ಊರಿನವರು ಅದನ್ನೂ ತಂದು ಕೊಡುತ್ತಾರೆ . ಕೊನೆಗೆ ಎಂಬಂತೆ ಮತ್ತೊಂದು ಬಾರಿ ನೀರಿನ ರುಚಿ ನೋಡುತ್ತಾ “ಇನ್ನೂ ಇದಕ್ಕೆ ಉಪ್ಪು ಮೆಣಸು ಬಿದ್ದರೆ ಲೋಕದಲ್ಲಿ ಅತ್ಯಂತ ರುಚಿಯಾದ ಸೂಪ್ ಇಗೋ ಸಿದ್ಧವಾಗುತ್ತದೆ” ಎನ್ನುತ್ತಾನೆ.
ಇಷ್ಟೆಲ್ಲಾ ಆದಮೇಲೆ ಇನ್ನೂ ಉಪ್ಪಿಗೆ ಬರವೇ ಅದೂ ಬರುತ್ತದೆ. ಯಾತ್ರಿಕನು ಅದನ್ನು ನೀರಿಗೆ ಹಾಕಿ ಬೆರೆಸಿ, “ಸರಿ ಸೂಪ್ ಸಿದ್ಧವಾಗಿದೆ, ಯಾರಿಗೆ ಬೇಕೋ ತೆಗೆದುಕೊಳ್ಳಿ” ಎನ್ನುತ್ತಾನೆ. ಹಳ್ಳಿಯವರೆಲ್ಲರೂ ಓಡಿ ಹೋಗಿ ತಮಗಾಗಿ ಒಂದೊಂದು ಪಾತ್ರೆ ತಟ್ಟೆಯನ್ನು ತಮ್ಮ ಮನೆಗಳಿಂದ ತರುತ್ತಾರೆ. ಆದರೆ ಸಂಕೋಚದಿಂದ ಹಿಂದೆ ಉಳಿಯುತ್ತಾರೆ. ಬೇರೆಯವರು ಮುಂದೆ ಬಂದದ್ದನ್ನು ನೋಡಿ ಕೊನೆಗೆ ಎಲ್ಲರೂ ಕುಳಿತು ಸಂತೋಷದಿಂದ ಆ ಸೂಪನ್ನು ಕುಡಿಯುತ್ತಾರೆ.
ಊಟವೆಂದರೆ ಬರೀ ಸೂಪಲ್ಲವಲ್ಲ. ತಾವು ಮನೆಯಲ್ಲಿ ಮಾಡಿದ ಅಡುಗೆಯನ್ನು ಸಹ ಅಲ್ಲಿಗೇ ತಂದು ಎಲ್ಲರೊಂದಿಗೆ ಹಂಚಿಕೊಂಡು ತಿನ್ನುತ್ತಾರೆ. ಅದೆಷ್ಟೋ ವರ್ಷಗಳ ಬಳಿಕ ಈ ರೀತಿಯ ಸಾಮೂಹಿಕ ಭೋಜನ ಅವರ ಹಳ್ಳಿಯಲ್ಲಿ ನಡೆಯುತ್ತದೆ. ಯಾತ್ರಿಕನು ಪಾತ್ರೆ ಖಾಲಿಯಾದ ಬಳಿಕ ಆ ಕಲ್ಲನ್ನು ತನ್ನ ಜೇಬಿಗಿಳಿಸಿ ಮುಂದಿನ ಊರಿಗೆ ಹೊರಡುತ್ತಾನೆ. ಅದೊಂದು ಸಾಮಾನ್ಯವಾದ ಕಲ್ಲಾಗಿತ್ತು.        

ಇದೊಂದು ಸುಂದರವಾದ ಕತೆ. ಈ ಹೊಸ ವರ್ಷದಲ್ಲಿ ನಾವು ಇದರಲ್ಲಿ ನಮಗೆ ಅನೇಕ ಪಾಠಗಳಿರಬಹುದು. ಕೆಲವೊಮ್ಮೆ ನಮ್ಮ ಜೀವನವೇ ಆ ಯಾತ್ರಿಕನು ಬಂದ ಹಳ್ಳಿಯಂತೆ. ನಮ್ಮಲ್ಲಿರುವ ಅಪಾರವಾದ ಸಾಧ್ಯತೆಗಳನ್ನು ನಾವೇ ಸ್ವತ: ಮುಚ್ಚಿಟ್ಟುಕೊಂಡು ನಮ್ಮಲ್ಲಿ ಏನೂ ಸಾಧ್ಯವಿಲ್ಲ ಎಂಬಂತೆ ಜೀವಿಸುತ್ತಿರುತ್ತವೆ. ನಮ್ಮ ದೇಹ, ಆತ್ಮ ಅಂತರಂಗ ದಿನಚರಿಗಳೆಲ್ಲವೂ ಒಂದಕ್ಕೊಂದು ಸಂಬಂಧವಿಲ್ಲದಂತೆ ತನ್ನದೇ ಆದ ಒಂದೊಂದು ದಿಕ್ಕಿನಲ್ಲಿ ಸಾಗುತ್ತಿರುತ್ತದೆ.           
ಇವೆಲ್ಲವನ್ನೂ ಒಂದುಗೂಡಿಸಿ ಕ್ರಿಯಾತ್ಮಕವಾಗಿ ತೊಡಗಿಸಿಕೊಳ್ಳಲು ಆ ಯಾತ್ರಿಕನಂತವನೊಬ್ಬನ ಸಹಾಯ ನಮಗೆ ಬೇಕಾಗುತ್ತದೆ. ಆದರೆ ಇಲ್ಲಿ ನಮ್ಮ ದೇವರು ಆ ಯಾತ್ರಿಕನಂತೆ ನಮ್ಮಲ್ಲೇ ಜೀವಿಸುತ್ತಾ ನಮ್ಮನ್ನು ಎಚ್ಚರಿಸುತ್ತಾ, ನಮ್ಮನ್ನು ಬಳಸಿಕೊಂಡು ಅದ್ಭುತವಾದ ಕಾರ್ಯಗಳನ್ನು ಮಾಡಲು ಯತ್ನಿಸುತ್ತಿರುತ್ತಾರೆ. ಆದರೆ ನಾವು ಮಾತ್ರ ಅದಕ್ಕೆ ಬೆನ್ನು ಮಾಡುತ್ತಿರುತ್ತೇವೆ.
ಇಲ್ಲಿನ ಕಥೆಯಲ್ಲಿ ಯಾತ್ರಿಕನ ಬಳಿ ಇದ್ದ ಕಲ್ಲು ಸಾಮಾನ್ಯವಾಗಿತ್ತು ಆದರೆ ಆ ಕಲ್ಲಿನಲ್ಲಿವಿಶ್ವಾಸವಿಟ್ಟ ಊರಿನ ಜನರು ಕೊನೆಗೆ ಅದ್ಭುತವಾದ ಕಾರ್ಯದಲ್ಲಿ ಪಾಲುಗಾರರಾಗುತ್ತಾರೆ. ಅಂತೆಯೇ ದೇವರ ಸಾಧ್ಯತೆಗಳ ಬಗ್ಗೆ ನಮಗೆ  ವಿಶ್ವಾಸವಿದ್ದರೆ ನಾವು ಸಹ ಅದ್ಭುತ ಸಾಧನಗಳಾಗಬಹುದು.   
ಇದು ವ್ಯಕ್ತಿಗತವಾದ ಇದು ಸಂದೇಶವಾದರೆ, ಇನ್ನೂ ಸಾಮಾಜಿಕವಾಗಿ ಸಹ ಆ ಹಳ್ಳಿಯ ಜನರಂತೆ ನಾವು ನಾವು ಸಹ ನಮ್ಮದೇ ಆದ ದ್ವೀಪಗಳಲ್ಲಿ ಬಾಳುತಿರುತ್ತೇವೆ. ಅಲ್ಲಿ ಒಟ್ಟಾಗಿ ಸೇರಿ ಮಾಡಬಹುದಾದ ಹಲವಾರು ಕಾರ್ಯಗಳಿದ್ದರೂ ನಾವು ನಮ್ಮದೇ ಆದ ಅಹಮಿನ ಕೋಟೆಗಳನ್ನು ಕಟ್ಟಿಕೊಂಡು ಬಾಳುತ್ತಿರುತ್ತೇವೆ. ನಮ್ಮನ್ನು ಒಟ್ಟುಗೂಡಿಸುವ ಯಾತ್ರಿಕನೊಬ್ಬ, ಅದ್ಭುತವಾದ ಕಲ್ಲು ನಮಗೆ ಬೇಕಾ ಗುತ್ತದೆ. ಇಲ್ಲವೇ ಯಾತ್ರಿಕನ ಸಹಾಯವಿಲ್ಲದೆ ನಾವೇ ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುವ ಮನೋಭಾವವನ್ನು ಬೆಳೆಸಿಕೊಳ್ಳಬೇಕಾಗಿದೆ.

ಪ್ರೀತಿ ನಂಬಿಕೆ ಸಹಕಾರ ಗಳು ಮರೆಯಾಗುತ್ತಾ ದ್ವೇಷ ಸಂದೇಹ ಸಂಶಯಗಳು ಇಡೀ ವಿಶ್ವವನ್ನೇ ಬಲಿ ತೆಗೆದುಕೊಳ್ಳುತ್ತಿರುವ ಈ ಸಂದರ್ಭದಲ್ಲಿ ನಾವು ನಮ್ಮ ಪೂರ್ಣ ಸಾಮರ್ಥ್ಯವನ್ನು ಅರಿತುಕೊಳ್ಳೋಣ ಅದನ್ನು ಸಾಮಾಜಿಕವಾಗಿ ಬಳಸುವತ್ತ ಹೆಜ್ಜೆ ಹಾಕೋಣ. ಮಾತ್ರವಲ್ಲದೆ ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳನ್ನು ಮರೆತು ಒಟ್ಟಾಗಿ ಮಹತ್ತರವಾದ ಕಾರ್ಯಗಳನ್ನುತ್ತ ಸಾಗೋಣ.
ಮಹತ್ತರ ಕಾರ್ಯಗಳನ್ನು ಅಂದಾಕ್ಷಣ ನಮ್ಮಿಂದ ಅದೆಲ್ಲಾ ಸಾಧ್ಯವೇ ಎಂಬ ಉದ್ಘಾರ ನಮ್ಮಿಂದ ಹೊರಡಬಹುದು. ಒಂದು ಸಣ್ಣ ಕಾರ್ಯ ಸಹಾ ಒಂದು ಸಂದರ್ಭದಲ್ಲಿ ದೊಡ್ಡ ಕಾರ್ಯವೇ ಆಗಬಹುದು. ಭಾರಿ ಮಳೆ ಹಾಗೂ ಶೀತ ಗಾಳಿ ಬೀಸುತಿತ್ತು. ಮಳೆಯಿಂದ ತಪ್ಪಿಸಿಕೊಳ್ಳಲು ಬಡ ಹುಡುಗನೊಬ್ಬ ರಸ್ತೆಯ ಬದಿಯ ಆಶ್ರಯವೊಂದರಲ್ಲಿ ನಿಂತಿದ್ದ. ಗಾಳಿ ತಡೆಯುವ ಬಟ್ಟೆಗಳು ಅವನಲ್ಲಿರಲಿಲ್ಲ. ಅದೇ ಆಶ್ರಯದ ಕೆಳಗೆ ಮಳೆಯಿಂದ ತಪ್ಪಿಸಿಕೊಳ್ಳಲು ಮತ್ತೊಬ್ಬ ವ್ಯಕ್ತಿ ಬಂದ. ಹುಡುಗನನ್ನು ನೋಡಿದ್ದೇ “ನಿನಗೆ ಬಹಳ ಚಳಿಯಾಗುತ್ತಿರಬೇಕಲ್ಲವೇ, ಪಾಪ” ಎಂದ. ತಕ್ಷಣ ಆ ಹುಡುಗನೆಂದ “ನೀವು ಬಂದು ಈ ಪ್ರಶ್ನೆ ಕೇಳುವ ತನಕ ಆಗುತಿತ್ತು, ನಿಮ್ಮ ಕಾಳಜಿಯಿಂದ ಬೆಚ್ಚಗಾಯಿತು” ಎಂದ. ಆ ವ್ಯಕ್ತಿ ಆ ಹುಡುಗನಿಗೆ ಹೊದಿಸಿಕೊಳ್ಳಲು ಬಟ್ಟೆ ಕೊಟ್ಟನೇ, ಇಲ್ಲವೇ ಗೊತ್ತಿಲ್ಲ. ಆದರೆ ತೋರಿದ ಕಾಳಜಿಯೇ ಆ ಬಾಲಕನಿಗೆ ಸಾಕಾಯಿತು. ನಮಗೂ ಆ ರೀತಿಯ ಅವಕಾಶಗಳು ಬಂದಾಗ ನಾವು ತಪ್ಪಿಸಿಕೊಳ್ಳಬಾರದಷ್ಟೇ.


-ಪ್ರಶಾಂತ್ ಇಗ್ನೇಷಿಯಸ್

Saturday, 29 December 2018

ನೀವೂ ನೋಡಿ - ಜೊಯ್ ನೋಯೆಲ್ - ಭಾಗ 2

ಈ ಹಿನ್ನೆಲೆಯಲ್ಲಿ ಡಿಸೆಂಬರ್ 24ರ ರಾತ್ರಿ ಆದ ಘಟನೆಯನ್ನು ಆಧರಿಸಿ ನಿರ್ಮಾಣಗೊಂಡ ಚಿತ್ರವಿದು. ಈ ಚಿತ್ರದಲ್ಲಿ ಯುದ್ಧಭೂಮಿಯಲ್ಲಿ ಸೇವೆ ಸಲ್ಲಿಸಿದ 6 ಪ್ರಮುಖ ಪಾತ್ರಧಾರಿಗಳ ಭೂಮಿಕೆಯಲ್ಲಿ ಚಿತ್ರಿಸಲಾಗಿದೆ. ಲೆಫ್ಟಿನೆಂಟ್ ಗಾರ್ಡನ್, ಲೆಫ್ಟಿನೆಂಟ್ ಆಡಿಬೋರ್ಡ್, ಲೆಫ್ಟಿನೆಂಟ್ ಹಾರ್ಸ್ ಮೇಯರ್ ಹಾಗೂ ಅವರನ್ನು ರಂಜಿಸಲು ಬಂದ ಜರ್ಮನಿಯ ಇಬ್ಬರು ಪ್ರಖ್ಯಾತ ಸಂಗೀತಗಾರರಾದ ಸ್ಪ್ರಿಂಕ್ ಹಾಗೂ ಆತನ ಪ್ರೇಯಸಿ ಆನರವರ ಪಾತ್ರವೇ ಇಲ್ಲಿ ಪ್ರಮುಖ ಭೂಮಿಕೆ.

ಕ್ರಿಸ್ಮಸ್ ಸಮಯದಲ್ಲಿ ಸೈನಿಕ ಪಡೆಗೆ ತಮ್ಮ ಗಾಯನದ ಮೂಲಕ  ಹಾರೈಸುವುದು ಸ್ಪ್ರಿಂಕ್ ಹಾಗೂ ಆನಾರ ಉದ್ದೇಶ. ಈ ಉದ್ದೇಶದಿಂದ ಬಂದ ಸ್ಪ್ರಿಂಕ್ ಕ್ರಿಸ್ಮಸ್ನ ಹಿಂದಿನ ದಿನ ಅಂದರೆ ಕ್ರಿಸ್ಮಸ್ ಈವ್ನಂದು ಯುದ್ಧ ಭೂಮಿಗೆ ಬರುತ್ತಾರೆ.  ಆ ಸಮಯದಲ್ಲಿ ಸ್ಪ್ರಿಂಕ್  ಕ್ರಿಸ್ಮಸ್‍ನ ಪ್ರಸಿದ್ಧ ಗೀತೆಯಾದ ’ಸೈಲೆಂಟ್ ನೈಟ್’ ಹಾಡಲು ತೊಡಗುತ್ತಾನೆ.
ಇದು ಜರ್ಮನಿಯ ಶಿಬಿರದಲ್ಲಿ ಮಾತ್ರವಲ್ಲದೆ ವಿರೊಧೀ ಪಡೆಗಳ ಶಿಬಿರದಲ್ಲೂ ಒಂದು ರೀತಿಯ ಸಂಚಲನವನ್ನು ಉಂಟು ಮಾಡುತ್ತದೆ. ಕೇವಲ ಮದ್ದು ಗುಂಡುಗಳ ವಾಸನೆ, ಆಕ್ರಂದನ ಬೇಸರದ ಗೂಡಾಗಿದ್ದ ಕಂದಕದಿಂದ ಕ್ರಿಸ್‍ಮಸ್ ಸಂದೇಶ ಹೊರ ಹೊಮ್ಮುತ್ತದೆ.

ಜರ್ಮನ್ ಸೈನಿಕರು ಸಹಾ ಪುಟ್ಟ ಪುಟ್ಟ ಕ್ರಿಸ್ಮಸ್ ಟ್ರೀ ಗಳನ್ನು ಮಾಡಿ ಅದನ್ನು ಕಂದಕದ ಮೇಲಿನ ಯುದ್ಧಭೂಮಿಯ ನೆಲದ ಮೇಲೆ ಇಡಲು ಪ್ರಾರಂಭಿಸುತ್ತಾರೆ. ಸಣ್ಣದಾಗಿ ಕ್ರಿಸ್ಮಸ್‍ನ ವಾತಾವರಣ ಅಲ್ಲಿ ಸೃಷ್ಟಿಯಾಗುತ್ತದೆ. ಇದನ್ನು ನೋಡಿ ಏನು ಮಾಡುವುದೆಂದು ತಿಳಿಯದೇ ಫ್ರೆಂಚ್  ಮಿತ್ರ ಪಡೆಗಳ ಶಿಬಿರದಲ್ಲಿ ಒಂದು ರೀತಿಯ ಗೊಂದಲ ಆವರಿಸುತ್ತದೆ. ಆದರೆ ಅವರ ಮನದಲ್ಲೂ ಸಹಾ ಕ್ರಿಸಮಸ್‍ನ ಸುಂದರ ಭಾವಗಳು ಚಿಗುರುತ್ತವೆ.

ಇತ್ತ ಸ್ಪ್ರಿಂಕ್ ತನ್ನ ’ಸೈಲೆಂಟ್ ನೈಟಿನ’ ಹಾಡನ್ನು ಮುಂದುವರಿಸುತ್ತಾನೆ. ವಿರೋಧಿ ಪಾಳಯದಲ್ಲಿನ ಸ್ಕಾಟ್ ಸೈನಿಕರಲ್ಲಿ ಒಬ್ಬ ತನ್ನ ಬಳಿಯಿದ್ದ ಬ್ಯಾಗ್ ಪೈಪರ್ ವಾದನದಿಂದ   ಸಣ್ಣದಾಗಿ ನುಡಿಸಲು ಪ್ರಾರಂಭಿಸುತ್ತಾನೆ. ಹಾಡಿಗೆ ಬ್ಯಾಗ ಪೈಪರ್ ವಾದನ ದನಿಗೂಡಿಸುತ್ತದೆ. ಆ ಸ್ಪೂರ್ತಿ, ಉತ್ತೇಜನ ಇಡೀ  ಸೈನಿಕ ಪಡೆಗೆ ಹರಡುತ್ತದೆ.
ಎರಡೂ ಕಡೆಯ ಪಡೆಯ ಸೈನಿಕರಲ್ಲಿ ಒಂದು ರೀತಿಯ ರೋಮಾಂಚನ ಉಂಟಾಗುತ್ತದೆ.  ಈ ಹೊತ್ತಿನಲ್ಲಿ ಒಂದು ಅನಿರೀಕ್ಷಿತವಾದ  ಘಟಯುತ್ತದೆ. ಸ್ಪ್ರಿಂಕ್ ಹಾಡುತ್ತಾ ಹಾಡುತ್ತಾ  ಕಂದಕದಿಂದ  ಮೆಲ್ಲಗೆ ಮೆಟ್ಟಿಲುಗಳನ್ನು ಹತ್ತುತ್ತಾ ಯುದ್ಧ ಭೂಮಿಯ ನೆಲದ ಮೇಲೆ ನಿಂತು ಹಾಡಲು ಪ್ರಾರಂಭಿಸುತ್ತಾನೆ.

ಜರ್ಮನಿಯ ಪಡೆಯ ಲೆಫ್ಟಿನೆಂಟ್ ಇದನ್ನು ವಿರೋಧಿಸಿದರೂ ಗಮನಕೊಡದೆ  ಆತ   ವಿರೋಧಿ ಪಡೆಯುತ್ತ ಹೆಜ್ಜೆ ಹಾಕುತ್ತಾನೆ. ಇತ್ತ ಗನ್ನುಗಳನ್ನು ಇಟ್ಟುಕೊಂಡು ನೋಡುತ್ತಿದ್ದ ಮಿತ್ರ ಪಡೆಯ ಸೈನಿಕರು ಏನೂ ಮಾಡಲು ತೋಚದೆ ನಿಲ್ಲುತ್ತಾರೆ.ಹಾಡು ಮುಂದುವರಿಯುತ್ತಿದ್ದಂತೆಯೇ ಮದ್ದು ಗುಂಡುಗಳು ನೆಲಕ್ಕೆ ಉರುಳಿ ಮಾನವ ಹೃದಯಗಳು ಸೈನಿಕರ ರೂಪದಲ್ಲಿ ಕಂದಕದಿಂದ ಮೇಲೆ ಬಂದು ಯುದ್ಧ ಭೂಮಿಯ ಆ ನೆತ್ತರಿನ ನಡುವೆ ಸ್ನೇಹದ ಹಸ್ತವನ್ನು ಚಾಚುತ್ತದೆ. ಸ್ಪ್ರಿಂಕ್ ತನ್ನ ಗಾಯನವನ್ನು ಮುಗಿಸಿದ್ದೇ ತಡ ವಿರೋಧಿ  ಪಾಳಯದಿಂದ ಚಪ್ಪಾಳೆ ಹಾಗೂ ಕೇಕೆಯ ರೂಪದಲ್ಲಿ ಅಭಿನಂದನೆಯ ಮಹಾಪೂರ ಹರಿದು ಬರುತ್ತದೆ.

ಅಲ್ಲಿಗೆ ಒಬ್ಬೊಬ್ಬರೇ ಸೈನಿಕರು ಎರಡು ಪಡೆಗಳ ನಡುವಿನ ಯಾರಿಗೂ ಸೇರದ ’ನೋ ಮ್ಯಾನ್ ಲ್ಯಾಂಡಿ’ನ ಕಡೆ ಹೆಜ್ಜೆ ಹಾಕುತ್ತಾರೆ ಅಲ್ಲಿಗೆ ಕ್ರಿಸ್ಮಸ್‍ನ ಶಾಂತಿ ಪ್ರೀತಿಯ ಸಂದೇಶ ಭೀಕರ ಯುದ್ಧಭೂಮಿಯಲ್ಲಿ ತನ್ನದೇ ಆದ ರೀತಿಯಲ್ಲಿ ಸಾಕಾರಗೊಳ್ಳುತ್ತದೆ.
ಮುಂದೆ ಏನಾಗುತ್ತದೆ ಎನ್ನುವುದನ್ನು ಚಿತ್ರವನ್ನು ನೋಡಿಯೇ ಸವಿಯಬೇಕು. ಮನೋಜ್ಞವಾಗಿ ಮೂಡಿಬಂದಿರುವ ಈ ಚಿತ್ರ ಯುದ್ಧದ ಭೀಕರತೆಯನ್ನು ಮಾನವನ ಅಂತರಾಳದಲ್ಲಿ ಶಾಂತಿಯ ಹಾತೊರೆಯುವಿಕೆ,  ಗುಂಪಿನಲ್ಲಿದ್ದರೂ ಕಾಡುವ ಏಕಾಂಗಿತನ, ಪ್ರೀತಿಗಾಗಿಯ ಹಂಬಲವನ್ನು ತೆರೆಯ ಮೇಲೆ ತೆರೆದಿರುತ್ತದೆ.

ಅಂತೆಯೇ ನಾಯಕರುಗಳ ಸ್ವಾರ್ಥದಲ್ಲಿ ಬಲಿಪಶುವಾಗುವ ಸಾಮಾನ್ಯ ಜನರ ತಲ್ಲಣ, 
ಸೈನಿಕರ ನೋವು, ಅವರ ಕುಟುಂಬದವರ ಕಾತುರ, ಕೊನೆಗೆ ಜಗತ್ತಿನ ಎಲ್ಲಾ ಜನರ ಬಗೆಗಿನ ಕಾಳಜಿ ಅನುಕಂಪವನ್ನು ಚಿತ್ರ ನಿಧಾನವಾಗಿ ತೆರೆದಿರುತ್ತದೆ. ಆದ್ದರಿಂದಲೇ ಈ ಚಿತ್ರ ನೋಡಲೇಬೇಕಾದ ಚಿತ್ರಗಳ ಸಾಲಿನಲ್ಲಿ ಖಂಡಿತವಾಗಿಯೂ ನಿಲ್ಲುತ್ತದೆ. ಅದರಲ್ಲೂ  ಕ್ರಿಸ್ಮಸ್ ಸಮಯದಲ್ಲಿ ಈ ಚಿತ್ರ ಮತ್ತಷ್ಟು ಆಪ್ತವಾಗುತ್ತದೆ

ನೀವೂ ನೋಡಿ - ಜೊಯ್ ನೋಯೆಲ್ - ಭಾಗ 1

1914ರ  ಮಹಾಯುದ್ಧದ ಸಮಯದಲ್ಲಿ ನಡೆದ ಸತ್ಯ ಘಟನೆಯೊಂದನ್ನು ಆಧರಿಸಿ ನಿರ್ಮಾಣವಾದ ಚಿತ್ರವೇ ’ಜೊಯ್ ನೋಯೆಲ್’ ಅಥವಾ ’ಮೆರ್ರಿ ಕ್ರಿಸ್ಮಸ್’. ಕ್ರಿಸ್ಟಿಯನ್ ಕ್ಯಾರಿಯನ್ ಎಂಬ ಫ್ರೆಂಚ್ ನಿರ್ದೇಶಕ ನಿರ್ದೇಶಿಸಿದ ಈ ಚಿತ್ರ ಅತ್ಯುತ್ತಮ ವಿದೇಶಿ ಚಿತ್ರವೆಂದು  ಆಸ್ಕರ್ ಪ್ರಶಸ್ತಿಗೆ ನಾಮಾಂಕಿತವಾಗಿತ್ತು. 2005ರ ಪ್ರತಿಷ್ಠಿತ ಕೇನ್ಸ್ ಚಿತ್ರೋತ್ಸವದಲ್ಲಿ ಪ್ರದರ್ಶಿತವಾಗಿ, ಎಲ್ಲರ ಮೆಚ್ಚುಯನ್ನೂ  ಗಳಿಸಿತ್ತು. ಕೇವಲ ಎರಡು ಕೋಟಿ ಅಮೆರಿಕನ್ ಡಾಲರ್ ‍ಗಳಲ್ಲಿ ನಿರ್ಮಾಣಗೊಂಡ ಈ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಅಷ್ಟೇನೂ ಸದ್ದು ಮಾಡದಿದ್ದರೂ ಚಿತ್ರ ನೋಡಿದವರೆಲ್ಲರೂ ಅತ್ಯುತ್ತಮ ಚಿತ್ರವೆಂದು ಇದನ್ನು ಹೊಗಳುತ್ತಾರೆ. 

ಮೊದಲೇ ತಿಳಿಸಿದಂತೆ ಇದು ಸತ್ಯ ಘಟನೆಯೊಂದನ್ನು ಆಧರಿಸಿದ ಚಿತ್ರವಾಗಿದೆ. ಈ ರೀತಿಯ ಘಟನೆಗಳನ್ನು ಬೆಳ್ಳಿ ತೆರೆಗೆ ತರುವಾಗ ಒಬ್ಬ ನಿರ್ದೇಶಕ ಅನೇಕ ರೀತಿಯ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಚಿತ್ರವನ್ನು ಯಾವ ದೃಷ್ಟಿಕೋನದಲ್ಲಿ ಹೇಗೆ ತೆರೆಯ ಮೇಲೆ ತರಬೇಕೆಂಬ ಅಂಶ ಒಂದು ದೊಡ್ಡ ಸವಾಲಾಗುತ್ತದೆ. ಇಲ್ಲಿ ನಿರ್ದೇಶಕ ಅದನ್ನು ನಿವಾರಿಸಿ ಯುದ್ಧದಲ್ಲಿ ಪಾಲ್ಗೊಂಡಿದ್ದ ಸೈನಿಕರ ಅನುಭವಗಳ ಮೂಲಕ ತೆರೆದಿಡುವ ಪ್ರಯತ್ನವನ್ನು ಮಾಡುತ್ತಾರೆ ಹಾಗೂ ಅದರಲ್ಲಿ ಯಶಸ್ವಿಯೂ ಆಗುತ್ತಾರೆ.        

ಚಿತ್ರದ ಬಗ್ಗೆ ಬರೆಯುವ ಮುನ್ನ ಈ ಚಿತ್ರದ ಮೂಲ ವಸ್ತುವಿನ ಹಿನ್ನಲೆಯನ್ನು ಬರೆಯಬೇಕಾಗುತ್ತದೆ. 1914ರಲ್ಲಿ ಇಡೀ ವಿಶ್ವವನ್ನೇ ಕರಾಳತೆಯತ್ತ ದೂಡಿದ ಮೊದಲನೆಯ ಮಹಾ ಯುದ್ಧವು ತನ್ನ ಉತ್ತುಂಗದ ಸ್ಥಿತಿಯಲ್ಲಿರುವಾಗ, ಎಲ್ಲೆಡೆ ದ್ವೇಷ ರೋಷ ಹಾಗೂ ಕಹಿ ಭಾವಗಳೇ ತಾಂಡವವಾಡುತ್ತಿರುತ್ತದೆ. ರಾಜಕೀಯ ಕಾರಣಗಳಿಂದ ಆರಂಭಗೊಂಡ ಈ ಮಹಾಯುದ್ಧದಲ್ಲಿ ಹೆಚ್ಚು ವ್ಯಯಕ್ತಿಕ ಹಾನಿಗೊಳಗಾದವರು ಯುದ್ಧಭೂಮಿಯಲ್ಲಿ ಹೋರಾಡಿದ ಸೈನಿಕರು.

ಜರ್ಮನಿ ಹಾಗೂ ಮಿತ್ರ ದೇಶಗಳ ನಡುವಿನ ಈ ಮಹಾ ಸಮರ ಎರಡೂ ಕಡೆಗಳಲ್ಲಿ ಅಪಾರ ಸಾವು ನೋವನ್ನು ತಂದಿರುತ್ತದೆ. ಆದರೂ ನಾಯಕರುಗಳ ಮನಸು ಕರಗದೆ ಸಮರ ಮುಂದುವರಿಯುತ್ತದೆ. ಬೆಲ್ಜಿಯಂ ಮೂಲಕ ಫ್ರೆಂಚ್ ನೆಲದ ಮೇಲೆ  ಆಕ್ರಮಣ ಮಾಡಿಕೊಂಡು ಬಂದ ಜರ್ಮನ್ ಸೈನ್ಯವನ್ನು ಫ್ರೆಂಚ್ ಹಾಗೂ ಬ್ರಿಟಿಷ್ ಪಡೆ ಯಶಸ್ವಿಯಾಗಿ ತಡೆದು ನಿಲ್ಲಿಸುತ್ತದೆ. ಎರಡು ಕಡೆಯ ಪಡೆಗಳು ಜಗ್ಗದೆ ತಮ್ಮ ಪಟ್ಟುಗಳನ್ನು ಸಡಲಿಸದ ಕಾರಣ ಯುದ್ಧ ಯಾವುದೇ ರೀತಿಯ ಪ್ರಗತಿ ಕಾಣದೇ ಒಂದು ಹಂತದಲ್ಲಿ ನಿಂತ ನೀರಂತೆ ಆಗುತ್ತದೆ.

ಎರಡು ಪಡೆಗಳು ಮೇಲುಗೈ ಸಾಧಿಸಲು ಸಾಧ್ಯವಾಗದೆ ಆಕ್ರಮಣವನ್ನು ಬಿಟ್ಟು ತಮ್ಮ ನೆಲೆಯನ್ನು ಕಾಪಾಡಿಕೊಳ್ಳುವ ತಂತ್ರಕ್ಕೆ ಮೊರೆ ಹೋಗಿ ಒಂದು ರೀತಿ  ಸ್ತಬ್ಧವಾದ ಸ್ಥಿತಿಯಲ್ಲಿರುತ್ತಾರೆ. ಆದರೂ ಎಚ್ಚರದ ಸ್ಥಿತಿಯಲ್ಲಿ ಎರಡೂ ಪಡೆಗಳು ತಮ್ಮ ನೆಲೆಯನ್ನು ಕಾಯುತ್ತಿರುತ್ತದೆ. ಯುದ್ಧ ಭೂಮಿಯಲ್ಲಿನ ದೊಡ್ಡ ಕಂದಕಗಳಲ್ಲಿ ನೆಲೆಸುವ ಪಡೆಗಳ ಸೈನಿಕರು ಒಂದು ರೀತಿಯ ತಾತ್ಕಾಲಿಕ ವಿಶ್ರಾಂತಿಗೆ ಮೊರೆಹೋಗುತ್ತಾರೆ. ಕಂದಕಗಳಲ್ಲಿ ತಾತ್ಕಾಲಿಕ ಗೋಡೆಗಳ ಹಿಂದೆ ಇದ್ದ ಎರಡು ಕಡೆಯ ಸೈನಿಕರು ಒಮೊಮ್ಮೆ ಬರುವ ಆಹಾರ ಪದಾರ್ಥಗಳನ್ನು ಪಡೆಯುವ ಸಮಯದಲ್ಲಿ ಒಂದು ಕಡೆ ಸೇರುತ್ತಾರೆ. ಒಂದಷ್ಟು ಮಟ್ಟಿಗೆ ಪರಿಚಯ ಮಾಡಿಕೊಂಡು ಪರಸ್ಪರ ವಿಷಯಗಳನ್ನು ವಿನಿಮಯವೂ ಮಾಡಿಕೊಳ್ಳುತ್ತಾರೆ ಆದರೆ ಯುದ್ಧ ನೀತಿ ಮಾತ್ರ ಕಠೋರ ನಿರ್ದಯವಾಗಿರುವುದರಿಂದ ತಮ್ಮ ಮೂಲಕ್ಕೆ ಮರಳುತ್ತಾರೆ.

ಹೀಗೆ ಅಲ್ಲೂ ಇಲ್ಲ ಇಲ್ಲೂ ಇಲ್ಲ ಎಂಬ ಸ್ಥಿತಿಗೆ ತಲುಪಿದ ಸಮರದ ಈ ಸಮಯದಲ್ಲಿ ಸಂಧಾನದ ಮಾತುಕತೆಗಳು ನಡೆಯುತ್ತವೆ. ಈ ರೀತಿಯ ಶಾಂತಿ ಸಂಧಾನದ ಮಾತುಕತೆಗಳು ಯಾವುದೇ ಪ್ರಯೋಜನಕ್ಕೆ ಬಾರದೆ ವಿಫಲವಾಗುತ್ತವೆ. ಅಂದಿನ ಪೋಪ್ ಬೆನೆಡಿಕ್ಟ್ XV ಕೂಡ ಪಡೆಗಳ ನಡುವಿನ ಶಾಂತಿಗೆ ಪ್ರಯತ್ನಿಸುತ್ತಾರೆ. ಕೊನೆಯ ಪಕ್ಷ ಬಾನಿನಲ್ಲಿ ದೇವದೂತರು ಹಾಡುವ ಕ್ರಿಸ್ಮಸ್ ಹಿಂದಿನ ಸಂಜೆಯಾದರೂ ಗುಂಡು ಮದ್ದುಗಳ ಶಬ್ದವಿಲ್ಲದೆ ಶಾಂತಿ ಇರಲಿ ಎಂದು ಅವರು ಕೇಳಿಕೊಂಡರೂ ಮಿಲಿಟರಿ ಮತ್ತು ರಾಜಕೀಯ ನಾಯಕರುಅದಕ್ಕೆ ಮನಸು ಕಿವಿಗೊಡದೆ ಕಠಿಣ ನಿಲುವನ್ನು ತೋರಿಸುತ್ತಾರೆ.   

ಈ ನಡುವೆ ಸೈನಿಕರು ಮಾತ್ರ ತೀರ ಆಕ್ರಮಣಶೀಲರಾಗದೆ ತಕ್ಕಮಟ್ಟಿಗಿನ ಮಾನವೀಯತೆ ಮೆರೆಯುತ್ತಾ, ಸಾಗುತ್ತಾ ತಮ್ಮ ಕುಟುಂಬಗಳನ್ನು ನೆನೆಯುತ್ತ ಕಾಲ ಕಳೆಯುತ್ತಾರೆ. ಅಲ್ಲಿ ಒಂದು ಅನಧಿಕೃತವಾದ ಸಂಧಾನವೆಂಬಂತೆ ಪ್ರತಿ ಸಂಜೆ ಸೈನಿಕರು ಸ್ವಯಂ ಯುದ್ಧ ವಿರಾಮ ಘೋಷಿಸಿಕೊಂಡು ಸತ್ತ ಸೈನಿಕರ ಸಂಸ್ಕಾರ ಹಾಗೂ ಗಾಯಾಳುಗಳನ್ನು ತಮ್ಮ ಶಿಬಿರಗಳಿಗೆ ತೆಗೆದುಕೊಂಡು ಹೋಗುವ ಶಾಂತಿಯ ಹೆಜ್ಜೆಗಳನ್ನು ಹಿಡಿಯುತ್ತಾರೆ.

ಹಾಗೆ ಶಾಂತಿಯ ಪ್ರಕ್ರಿಯೆ ಗೊತ್ತಿಲ್ಲದೆ ನಡೆದಿರುತ್ತದೆ. ಇದರ ಜೊತೆಗೆ ಸಂಗೀತವೂ ಸಹ ಈ ಪ್ರಕ್ರಿಯೆಯಲ್ಲಿ ಪ್ರಮುಖವಾದ ಪಾತ್ರ ವಹಿಸುತ್ತದೆ. ಸಂಜೆಯಲ್ಲಿ ಸೈನಿಕರು ತಮ್ಮ ನೋವು ದಣಿವನ್ನು ಮರೆಯಲು ತಮ್ಮದೇ ಆದ ರೀತಿಯಲ್ಲಿ ಹಾಡುತ್ತಾ ಕೇಕೆ ಹಾಕುತ್ತಾ, ಕೆಲವು ಸಲ ವಿರೋಧಿ ಸೈನಿಕರ ಕಾಲೆಳೆಯುತ್ತಾ ಹಾಡುಗಳನ್ನು ಹಾಡುತ್ತಿರುತ್ತಾರೆ.       

Read more!




Thursday, 20 December 2018

ರೆಬಲ್ ಸ್ಟಾರ್ ನ ಅಂತರಂಗ

ಕಳೆದ ತಿಂಗಳು ಅಂಬರೀಶ್ ಕೂಡ ಕಣ್ಮರೆಯಾದರು. ಈ ವರ್ಷದ ಅವರ ಹುಟ್ಟುಹಬ್ಬದಲ್ಲಿ ಮುತ್ತಿಕೊಂಡ ಪತ್ರಕರ್ತರ ಒಂದೊಂದೇ ಪ್ರಶ್ನೆಗಳಿಗೆ ತಮ್ಮದೇ ಆದ ರೀತಿಯಲ್ಲಿ ಉತ್ತರವನ್ನು ಅಂಬಿ ಬಿಸಾಕುತ್ತಿದ್ದರು. ಪತ್ರಕರ್ತರೊಬ್ಬರು ಆ ದಿನದ ಅವರ ಕಾರ್ಯಕ್ರಮದ ಬಗ್ಗೆ ಕೇಳುತ್ತಾರೆ. ಆಗ ಅಂಬರೀಶ್ “5 ಗಂಟೆಗೆ ಕಲಾವಿದರ ಸಂಘದ ಕಾರ್ಯಕ್ರಮ ಅಲ್ಲಿ 1 ಗಂಟೆ ಇದ್ದು ಬರುತ್ತೇನೆ” ಎನ್ನುತ್ತಾರೆ. ಅದಕ್ಕೆ ತಟ್ಟಕ್ಕನೆ ಪತ್ರಕರ್ತನೊಬ್ಬ “ಆಮೇಲೆ?” ಅನ್ನುತ್ತಾನೆ. ಅದಕ್ಕೆ ಅಂಬರೀಶ್ ತಮ್ಮದೇ ಆದ ಶೈಲಿಯಲ್ಲಿ “ನಿನ್ಗ್ ಯಾಕ್ ಅವೆಲ್ಲಾ...” ಎನ್ನುತ್ತಾ ಇವ್ಯಾವವೋ ಇಷ್ಟ ಇಷ್ಟ್ ಇದಾವೆ, ಬಿಡೋದಿಲ್ಲ ಅಂತವೇ” ಎನ್ನುತ್ತಾ ಕೋಪದ ಜೊತೆ  ಒಂದು ಹುಸಿ ನಗೆ ಬೀರುತ್ತಾರೆ. ಇಡೀ ಗುಂಪು ಗೊಳ್ಳೆನ್ನುತ್ತದೆ. ಇದು ಅಂಬರೀಶ್ ಇದ್ದ ರೀತಿ.

ವೃತ್ತಿಜೀವನದ ಸಾಧ್ಯತೆಗಳನ್ನು ಮೀರಿದ ಪ್ರೀತಿ ಅಭಿಮಾನವನ್ನು ಸಂಪಾದಿಸಿದ್ದಕ್ಕೆ ಅಂಬರೀಶ್ ದೊಡ್ಡ ಉದಾಹರಣೆ. ಜನಪ್ರಿಯ ನಾಯಕ ನಟನೆಂಬ ಚೌಕಟ್ಟು ಮೀರಿ ಅಂಬರೀಶ್ ಬೆಳೆದು ಬಂದ ರೀತಿ ಆಶ್ಚರ್ಯಕರವಾದದ್ದು. ಅಂಬರೀಷ್     ರವರಲ್ಲಿನ ಪೂರ್ಣ ಪ್ರಮಾಣದ ಕಲಾವಿದ ಅನಾವರಣ ಗೊಂಡಿದ್ದು ಪುಟ್ಟಣ್ಣನವರ ಚಿತ್ರಗಳಲ್ಲಿ. ರಂಗನಾಯಕಿ ಚಿತ್ರದಲ್ಲಿನ ಅಂಬರೀಶ್ ನಟನೆಯ ಪ್ರೌಢಿಮೆಯನ್ನು ಮುಂದಿನ ನಿರ್ದೇಶಕರು ಬಳಸಿಕೊಂಡದ್ದು ಕಡಿಮೆಯೇ. ಪಂಚ್ ಲೈನ್  ಗಳಿಂದಲೇ ಪ್ರಸಿದ್ಧಿ ಪಡೆದಿದ್ದ ಅಂಬರೀಶ್ ರವರಿಗೆ ಶುಭಮಂಗಳ ದಲ್ಲಿ ಪುಟ್ಟಣ್ಣ ನೀಡಿದ್ದು ಮೂಗನ ಪಾತ್ರ. ಅದರಲ್ಲೂ ಅಂಬರೀಷ್ ಗೆದ್ದರು.      
ಇನ್ನೂ ರೆಬಲ್ ಪಾತ್ರಗಳಿಗೆ ನಿರ್ದೇಶಕರು ಅವರನ್ನು ಬ್ರಾಂಡ್ ಮಾಡಿದರೂ ಒಲವಿನ ಉಡುಗೊರೆ, ಹೃದಯ ಹಾಡಿತು, ಏಳು ಸುತ್ತಿನ ಕೋಟೆ, ಮಣ್ಣಿನ ದೋಣಿ ಮುಂತಾದ ಚಿತ್ರಗಳಲ್ಲಿನ ಸಾಫ್ಟ್ ಪಾತ್ರಗಳಲ್ಲಿ ಅಂಬರೀಶ್ ತಮ್ಮ ಛಾಪು ಮೂಡಿಸಿದರು. ಅಂತ, ಚಕ್ರವ್ಯೂಹ ಗಜೇಂದ್ರ ಎಲ್ಲವೂ ಅವರನ್ನು ಯಶಸ್ವಿ ನಾಯಕನ ಪಟ್ಟಕ್ಕೆ ಏರಿಸಿದವು
ಚಿತ್ರ ಜಗತ್ತಿನ ಆಚೆಗೂ ಅಂಬರೀಶ್ ಹೆಸರು ಮಾಡಿದ್ದು ಅವರ ನೇರವಂತಿಕೆಯಿಂದಲೇ. ಪತ್ರಕರ್ತರ ಪ್ರಶ್ನೆಗಳಿಗೆ ಅವರು ಉತ್ತರಿಸುತ್ತಿದ್ದ  ರೀತಿ ಇನ್ಯಾರದೋ ಬಾಯಿಂದ ಬಂದಿದ್ದರೆ ಅದೆಷ್ಟು ವಿವಾದಗಳ ಆಗುತ್ತಿದ್ದವೋ. 
ಇನ್ನು ಅಂಬರೀಷ್ ಬಗೆಗಿನ ದಂತಕಥೆಗಳು ಹಲವಾರು. ಇನ್ನು ಮುಂದೆ ಎಲ್ಲರ ಬಳಿ ಸಂಭಾವಿತವಾಗಿಯೇ ಮಾತನಾಡಬೇಕು ಎಂದು ಗೆಳೆಯರು ಸಲಹೆ ಮಾಡಿದರಂತೆ. ಅಂತೆಯೇ ಫೋನ್ ಮಾಡಿದ ಅಭಿಮಾನಿಗೆ ನಿಧಾನವಾಗಿ ಗೌರವದಿಂದ “ಹೇಳಪ್ಪ" ಎಂದು ಉತ್ತರ ನೀಡಿದರೆ, ಅವನು ನಂಬದೆ “ಆಯ್ತು ಹೇಳಲೇ, ನಿನ್ನ್.... ಎಂದಾಗಲೇ ಆತ “ನಮಸ್ಕಾರ ಕಣ್ಣಣ್ಣೋ” ಎಂದ ಘಟನೆಯು ಹಲವಾರು ರೂಪಗಳನ್ನು ಪಡೆದುಕೊಂಡು ಹರಿದಾಡುತ್ತಿದೆ. ಅಂತೆಯೇ ಒಡಹುಟ್ಟಿದವರು ಚಿತ್ರೀಕರಣದ ಸಮಯದಲ್ಲಿ ಹಲವಾರು ವರ್ಷಗಳಿಂದ ಗುರುವಾರದಂದು ಮಾಂಸಹಾರ ಮಾಡದ ರಾಜಕುಮಾರ್ ರವರಿಗೆ ಗುರುವಾರದಂದೇ  ಪ್ರೀತಿಯಿಂದ ಒತ್ತಾಯ ಮಾಡಿ ಮಾಂಸದ ಊಟ ಬಡಿಸಿದ ಕಥೆಯೂ ಪ್ರಚಲಿತ.
ಅಂಬರೀಶ್ ಬದುಕಿದ ರೀತಿ ಅಪರೂಪದ್ದು. ಆ ರೀತಿ ಬದುಕಿ, ದಕ್ಕಿಸಿಕೊಳ್ಳುವುದು ಅಂಬರೀಶ್ ಯಿಂದ ಮಾತ್ರ ಸಾಧ್ಯ. ಅದು ಅನುಕರಣೀಯವಲ್ಲ ಆದರೆ ಅವರ ಹೃದಯವಂತಿಕೆ, ಪ್ರೀತಿ, ನಗು ಎಲ್ಲವೂ ನಿಜಕ್ಕೂ ಆತ್ಮೀಯ. ಆದ್ದರಿಂದಲೇ ಈ ನಾಡಿನಲ್ಲಿ ’ಏನ್ ಬುಲ್ ಬುಲ್, ಮಾತಾಡಕ್ಕಿಲ್ವಾ’ ಎಂಬ  ಆ ಡೈಲಾಗ್ ನಷ್ಟೇ ಅಂಬರೀಷ್ ಕೂಡ ಅಮರ

ಡಾಕ್ಟರ್ ಲೀಲಾವತಿ ದಾಸ್ - ಧ್ಯಾನಸಕ್ತ ಮುಗುಳ್ನಗೆಯ ಮೂರ್ತಿ

ಡಾಕ್ಟರ್ ಲೀಲಾವತಿ ದಾಸ್ ಯಾವುದೇ ಸದ್ದಿಲ್ಲದೆ ಹೊರಟ್ಟಿದ್ದಾರೆ. “ನೋಡ್ತಿರಿ ನಾನು ಒಂದು ದಿನ ಹಾಗೆ ಹೊರಟು ಬಿಡುತ್ತೇನೆ” ಎಂದು ತಮ್ಮ ತಂಗಿಯ ಬಳಿ ಹೇಳಿದ್ದರಂತೆ. ಒಂದಂತು ನಿಜ, ಅವರು ಸುಮ್ಮನಂತೂ ಹೋಗಿಲ್ಲ, ಒಂದು ಸಾರ್ಥಕವಾದ ಜೀವನವನ್ನು ಬದುಕಿ ಸಂತೋಷದಿಂದಲೇ ತೆರಳಿದ್ದಾರೆ. ಒಂದಷ್ಟು ಬರವಣಿಗೆ ಇನ್ನೂ ಉಳಿದಿತ್ತೇನೋ. ಏಕೆಂದರೆ  ಭೇಟಿ ಮಾಡಿದಾಗಲೆಲ್ಲಾ ಟೈಪ್ ಮಾಡಿದ ಬರವಣಿಗೆ ಅವರ ಕಂಪ್ಯೂಟರ್ ಮೇಲೆ ಕಾಣುತ್ತಿತ್ತು. ಯಾವುದಾದರೂ ಒಂದು ಪುಸ್ತಕ ತೆರೆದಿಟ್ಟ ಸ್ಥಿತಿಯಲ್ಲೇ ಟೇಬಲ್ ಮೇಲೆ ಇರುತ್ತಿತ್ತು ಇತ್ತೀಚಿಗೆ ಪ್ರಕಟಗೊಂಡಿದ್ದ ಲೇಖನವೊಂದು ಫೈಲ್ ಸೇರಲು ಹಾತೊರೆಯುತ್ತಿತ್ತು. ಚೇರಿನ ಮೇಲೆ ಧ್ಯಾನಸಕ್ತ ಮುಗುಳ್ನಗೆಯ ಮೂರ್ತಿ ಸದಾ ಕಾಣುತ್ತಿತ್ತು.

ಇವೆಲ್ಲದರ ನಡುವೆಯೇ ಮಾತಿಗೆ ಕೂತರೆ ಅದೇ ಬತ್ತದ ಉತ್ಸಾಹ, ಮಾಸದ ಮುಗುಳ್ನಗೆ, ಆಳವಾದ ವಿವರಗಳು ಹಾಗೂ ಮುಗಿಯದ ಆತ್ಮೀಯತೆ. ಈ ಸ್ಥಿತಿಯಲ್ಲಿ ಅವರನ್ನು ಕಂಡಾಗಲೆಲ್ಲಾ ಒಂದು ಆಶ್ಚರ್ಯ. ’ಎಲ್ಲಿಂದ ಹೊತ್ತು ತರುತ್ತಾರೆ ಈ ಜೀವನೋತ್ಸಾಹವನ್ನು’ ಎಂದು. “ಈ ರೀತಿ ದಿನಪೂರ್ತಿ ಕುರ್ಚಿಯಲ್ಲಿ ಕುಳಿತುಕೊಂಡು ಬರೆಯುವಾಗ ಬೆನ್ನು ನೋವು  ಬರುವುದಿಲ್ಲವೇ” ಎಂದು ಒಮ್ಮೆ ಕೇಳಿದೆ. “ನೋವು ಬಂದಾಗ ರೆಸ್ಟ್ ಮಾಡುತ್ತೇನೆ” ಎಂದರು. ಪರಿಹಾರ ಇಷ್ಟು ಸುಲಭವೇ ಎಂದುಕೊಂಡೆ.

ಒಂದಷ್ಟು ವರ್ಷಗಳ ಹಿಂದೆ ಪವಿತ್ರ ಗುರುವಾರದ ಬಗ್ಗೆ ಪ್ರಜಾವಾಣಿಯಲ್ಲಿ ಲೇಖನ ಬರೆಯಲು ಆರಂಭಿಸಿದ್ದೆ. ಆಗ ನಮ್ಮ ಸಿ ಎಸ್ ಐನವರು ಪವಿತ್ರ ಗುರುವಾರವನ್ನು ಹೇಗೆ ಆಚರಿಸುತ್ತಾರೆ ಎಂಬ ಪ್ರಶ್ನೆ ಮೂಡಿತು. ನನ್ನ ಅನೇಕ ಗೆಳೆಯರಿದ್ದರೂ ಲೀಲಾವತಿ ಅವರನ್ನು ಕೇಳೋಣ ಎಂದುಕೊಂಡು ಫೋನ್ ಮಾಡಿದೆ. ಅದೇ ಅವರೊಟ್ಟಿಗಿನ ನನ್ನ ಮೊದಲ ಸಂವಾದ. ವಿವರಗಳನ್ನು ಹೇಳಿದ ಬಳಿಕ “ಆಚರಣೆಗಳ ಬಗ್ಗೆ ಏಕೆ ಬರೀತಿಯಪ್ಪ? ಯೇಸುವಿನ ಆ ಕಾರ್ಯದ ಹಿಂದಿನ ಅರ್ಥ, ಸದ್ದುದೇಶದ ಬಗ್ಗೆ ಬರಿ ಸಾಕು” ಎಂದರು. ನನಗೂ ಅದು ಸರಿಯೆನಿಸಿತು. 

ಮುಂದೆ ನಮ್ಮ ಕಾರ್ಯಕ್ರಮಗಳಿಗೆಲ್ಲಾ ಆಹ್ವಾನ ಕೊಡುತ್ತಿದ್ದೆ. ಕರೆದ ಕಾರ್ಯಕ್ರಮಗಳಿಗೆ ಬಂದರು. ಒಂದು ಕಾರ್ಯಕ್ರಮದಲ್ಲಿ ಅವರನ್ನೂ, ಸಿಸ್ಟರ್ ಜಸಿಂತಾರವರನ್ನು ಒಟ್ಟಿಗೆ ಸನ್ಮಾನಿಸಿದ ನೆನಪು. ಮೊನ್ನೆಯ ’ಅಂಜೆನು’ ಕಾರ್ಯಕ್ರಮಕ್ಕೂ ಕರೆಯಲು ಹೋದಾಗ ಬಹಳ ಹೊತ್ತು ಮಾತನಾಡಿಸಿದರು. ಕಾರ್ಯಕ್ರಮಕ್ಕೂ ಬಂದು ಕೂತು ಮಧ್ಯೆ ಎದ್ದು ಹೋದರಂತೆ. ಪೂರ್ತಿ ಕಾರ್ಯಕ್ರಮಕ್ಕೆ ಇರಲಾಗಲಿಲ್ಲ ಎಂದು ವಿಷಾದ ವ್ಯಕ್ತಪಡಿಸಿದ್ದರು. ಆ ವಯಸ್ಸಿನಲ್ಲೂ ಆಟೋದಲ್ಲಿ ಬಂದು ಹೋದ ಅವರ ಬದ್ಧತೆ, ಪ್ರೀತಿಗೆ ಬೆಲೆಯುಂಟೇ?. 

2
ವರ್ಷಗಳ ಹಿಂದೆ ನಮ್ಮ ದೇವಾಲಯದಲ್ಲಿನ ರಾಜ್ಯೋತ್ಸವ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಬಂದಿದ್ದರು, 2 ಮಹಡಿ ಹತ್ತಿ ಬಂದಿದ್ದು ಕಷ್ಟವಾಯಿತೇ ಎಂದು ಕೇಳಿದರೆ, “ಮೊದಲ ಮಹಡಿಯಲ್ಲಿನ ದೇವಾಲಯದ ಪೀಠ ಚೆನ್ನಾಗಿದೆ” ಎನ್ನಬೇಕೆ?

ವೈದ್ಯಕೀಯ ಪದವಿಯಲ್ಲಿ ಸ್ವರ್ಣ ಪದಕ ಹಾಗೂ ತಮ್ಮ ಧೀರ್ಘ ವರ್ಷಗಳ ಕಾಲದ ವೃತ್ತಿಯಲ್ಲಿ ಒಳ್ಳೆಯ ಹೆಸರು ಮಾಡಿದ್ದು ಅವರ ಹೆಗ್ಗಳಿಕೆ ಗಳಲ್ಲಿ ಒಂದು. ನಿಜವಾದ ಸೇವಾಭಾವದಿಂದ ಯಾರೂ ಇಚ್ಛಿಸದ ಸ್ಥಳಗಳಲ್ಲಿಯೇ ಹೆಚ್ಚಾಗಿ ಸೇವೆ ಮಾಡಿದ್ದರು ಎಂಬ ಮಾಹಿತಿಯೇ ಅವರ ಬಗ್ಗೆ ಧನ್ಯತೆಯನ್ನು ಮೂಡಿಸುತ್ತದೆ.       

ಕನ್ನಡ ಕ್ರೈಸ್ತರಾದ ನಾವು ಅವರನ್ನು ಮತ್ತಷ್ಟು ಧನ್ಯತೆಯಿಂದ ನೆನಸಿಕೊಳ್ಳಬೇಕಾಗಿದೆ. ಅದಕ್ಕೆ ಮೊದಲ ಪ್ರಮುಖ ಕಾರಣ ಬೈಬಲ್ ಭಾಷಾಂತರದಲ್ಲಿನ ತೊಡಗುವಿಕೆ. ಅಂತೆಯೇ ಅನೇಕ ಬೈಬಲ್ ಆಧಾರಿತ ಲೇಖನಗಳು ಮಹಿಳಾ ದೃಷ್ಟಿಕೋನದ ಬರವಣಿಗೆಗಳು ಅಪರೂಪವಾದದ್ದು.       

ಎಲ್ಲಾ ಸಾಧನೆಗಳ ನಡುವೆ ನೆನಪಿನಲ್ಲಿ ಉಳಿಯುವಂತದ್ದು ಅವರ ಸ್ವಭಾವ ಹಾಗೂ ಶ್ರಮ- ಶ್ರದ್ಧೆ. 88ರ ಹರೆಯದಲ್ಲೂ ತೋರುತ್ತಿದ್ದ ಬದ್ಧತೆ ನಿಜಕ್ಕೂ ಅನುಕರಣೀಯ. ಕಳೆದ ವರ್ಷ ಅವರು ಬರೆಯುತ್ತಿದ್ದ ಸಿರಿಧಾನ್ಯದ ಬಗ್ಗೆಗಿನ ಪುಸ್ತಕಕ್ಕೆ ಅದರ ಬಗ್ಗೆ ಆಸಕ್ತಿ ಇದ್ದ ನನ್ನ ಹೆಂಡತಿಯಿಂದ ಒಂದಷ್ಟು ಮಾಹಿತಿಗಳನ್ನು ಪಡೆದುಕೊಂಡಿದ್ದರು. ಪುಸ್ತಕ ಬಿಡುಗಡೆಯಾದಾಗ ಕರೆ ಮಾಡಿ ಅದರ ಪ್ರತಿಗಳನ್ನು ಕೊಟ್ಟಿದ್ದರು. ತಮ್ಮ ಅಪಾರ ಜ್ಞಾನದ ನಡುವೆ ಮಾಹಿತಿಗಳು ಎಲ್ಲಿಂದ ಬಂದರೂ ಸ್ವೀಕರಿಸುವ ವಿನಯ ಅವರಲ್ಲಿತ್ತು.        

ಹೀಗೆ ಎಷ್ಟೋ ಕೆಲಸಗಳು ಬಾಕಿ ಉಳಿದು ಬಿಡುತ್ತವೆ. “ಅಂಜೆನು ಕಾರ್ಯಕ್ರಮದ ಮಧ್ಯೆ ಹೊರಟೆ ಆದ್ದರಿಂದ ಸಿಡಿ ಬಂದರೆ ಮತ್ತೆ ನೋಡೋಣ ಎಂದಿದ್ದರು” ಇನ್ನೆಲ್ಲಿ ನೋಡುವುದು? ಅಂತೆಯೇ ತಾವು ನಿರ್ಮಿಸಿದ್ದ ಧ್ವನಿಸುರುಳಿ ಒಂದರ ಕೊನೆಯ ಕ್ಯಾಸೆಟ್ಟನ್ನು ನನಗೆ ಕೊಟ್ಟು ಸಮಯ ಸಿಕ್ಕಾಗ ಸಿಡಿ ಗೆ ಕನ್ವರ್ಟ್ ಮಾಡಿಕೊಡು ಎಂದಿದ್ದರು. ಅದೂ ಹಾಗೆಯೇ ಉಳಿದಿದೆ.

ಯಾವುದೂ ನಿಂತ ನೀರಲ್ಲ. ಯಾರದೂ ಭರಿಸಲಾಗದ ನಷ್ಟವಿಲ್ಲದೆ ಇರಬಹುದು. ಆದರೆ ಶಿಕ್ಷಣ, ಜ್ಞಾನ, ಸೇವೆ, ಸಾಹಿತ್ಯ ಬುದ್ಧಿಮತ್ತೆ, ಹೃದಯವಂತಿಕೆ, ಅರಿವಿನ ಆಳ, ಬದ್ಧತೆ ಎಲ್ಲವೂ ಒಬ್ಬರಲ್ಲೇ ಕಾಣುವುದು ತುಸು ಕಷ್ಟವೇ. ಅಂತಹ ಸ್ವಭಾವಗಳ ಆಗರವಾಗಿದ್ದ ಡಾಕ್ಟರ್ ಲೀಲಾವತಿ ದೇವದಾಸ್ ರವರ ಆಗಲಿಕ್ಕೆ ನಿಜಕ್ಕೂ ತುಂಬಲಾರದ ನಷ್ಟವೇ.
Read more!