Thursday, 13 December 2018

ನನ್ನ ಚೈನಾ ಪ್ರವಾಸ – ಭಾಗ 11/2

‘ವಿಶ್ವವೇ ಒಂದು ಪುಸ್ತಕ, ಲೋಕ ಸಂಚಾರ ಮಾಡದಿರುವವನು ಕೇವಲ ಒಂದು ಪುಟ ಮಾತ್ರ ಓದಿದಂತೆ’ ಎಂದಿದ್ದಾರೆ ಸಂತ ಅಗಸ್ಟೀನ್. ಅವರು ಹೇಳೋ ಲೆಕ್ಕದಲ್ಲಿ ನೋಡಿದರೆ ನಾನು ಒಂದು ವಾಕ್ಯ ಕೂಡ ಓದಿಲ್ಲದಂತೆ. ಈ ಕಡೆ ಚೆನ್ನೈ, ಆ ಕಡೆ ಬಾಂಬೆ, ಇನ್ನೊಂದು ಕಡೆ ಕೇರಳ ಕೂಡ ದಾಟಿಲ್ಲ ನನ್ನ ಲೋಕಲ್ ಪಾಸ್‍ಪೋರ್ಟ್.      
.
ಹಾಗೆ ನೋಡಿದರೆ, ನನ್ನ ಹಲವು ಯುವ ಗೆಳೆಯರು ಪ್ರವಾಸಗಳನ್ನು ಮಾಡುವುದರಲ್ಲಿ ಎತ್ತಿದ ಕೈ. ಅಗಸ್ಟಿನರ ಮಾತಿನ ಲೆಕ್ಕದಲ್ಲಿ ಪ್ರತಿ ವರ್ಷ ಒಂದೊಂದೇ ಪುಟ ತುಂಬುತ್ತಿರುತ್ತಾರೆ. ಯಾವ ಊರಿನಲ್ಲಿ ಯಾವ ಹೋಟೇಲ್ ಎಷ್ಟಕ್ಕೆ ಸಿಗುತ್ತದೆ? ಯಾವ ಪ್ಲೈಟ್ ಯಾವಾಗ ಬುಕ್ ಮಾಡಬೇಕು? ಎಂಬುದನ್ನು ಕೆಲಸದ ನಡುವೆ ಯಾವಾಗ ಎಬ್ಬಿಸಿ ಕೇಳಿದರೂ, ಚಂದನದಲ್ಲಿ ಹೇಳಿದಂತೆ ’ಥಟ್’ ಎಂದು ಹೇಳುತ್ತಾರೆ, ಆಯ್ಕೆಗಳೊಂದಿಗೆ.
ಅವರಿಗೆಲ್ಲಾನಾನು ಅಷ್ಟೇನೂ ಪ್ರವಾಸಗಳನ್ನು ಮಾಡಿಲ್ಲ, ದೇಶಗಳನ್ನು ನೋಡಿಲ್ಲ ಎಂಬುದು ನನಗಿಂತ ದೊಡ್ಡ ವ್ಯಥೆ. ನನ್ನ ಲೇಖನಗಳನ್ನು ಓದುವ ಅವರು ’ಮೆಟ್ರೋಲಿ ಹಂಗ್ ಹೋಗಿ ಹಿಂಗೆ ಬಂದಿದ್ದನೇ ಒಳ್ಳೆ ಯುರೋಪ್ ಪ್ರವಾಸ ಕಥನ ಥರ ಬಿಲ್ಡಪ್ ಕೊಟ್ಟು ಬರೀತೀರಾ, ಇನ್ನೂ ನಿಜಕ್ಕೂ ಯೂರೋಪ್ ಗೆ ಹೋದರೆ ಹೆಂಗೆ ಸಾರ್? ಎಂದು ಕಾಲು ಎಳೆಯುತ್ತಾರೆ. “ಕಾಲ ಬರುತ್ತೆ ಬಿಡಿ” ಅಂದುಕೊಂಡೆ ಕಾಲ ತಳ್ಕೊಂಡು, ಕಾಲನ್ನು ಎಳ್ಕೊಂಡು ಇಲ್ಲಿಯವರೆಗೂ ಬಂದಿದ್ದೇನೆ.
ಬುಲೆಟ್‍ನಲ್ಲಿ ಲೇಹ್ ಲಡಾಕ್ ಟ್ರಿಪ್‍ಗೆ ಹೋಗೋಣ ಬನ್ನಿ ಎಂದು ಕೇಳಿದಾಗಲೆಲ್ಲಾ “ಬರುವ  ವರ್ಷ, ಬರುವ  ವರ್ಷ” ಅಂತ ಹೇಳಿರುವ ವರ್ಷ ಇನ್ನೂ ಬಂದೇ ಇಲ್ಲ. ಕೊನೆಗೆ ಇತ್ತ ಕನಕಪುರದ ಗಡಿ ಕೂಡ ದಾಟದೆ ನನ್ನ ಬುಲೆಟ್ ತನ್ನ ಏಳನೆಯ ವರ್ಷಕ್ಕೆ ಟೈರ್ ಇಟ್ಟಿದೆ (ಕಾಲು ಇಟ್ಟಿದೆ ಎನ್ನುವುದರ ವಾಹನಾರ್ಥಕ ಪದ).
ನನ್ನ ಯುವ ಮಿತ್ರರ ಪ್ರಾರ್ಥನೆಯೋ, ಹಾರೈಕೆಯೋ ಚೈನಾ ದೇಶದ ಕುನ್‍ಮಿಂಗ್ ನಗರಕ್ಕೆ ಕಾರ್ಯ ನಿಮಿತ್ತ ಹೋಗುವ ಅವಕಾಶ ಇತ್ತೀಚೆಗೆ ಸಿಕ್ಕಿತು. ಈ ಅವಕಾಶ ಇನ್ನೇನು ಕೈ ತಪ್ಪಿತ್ತು ಎನ್ನುವಷ್ಟರಲ್ಲಿ ಸದ್ಯ ಬಾಯಿಗೆ ಬಂದು ಬಿಟ್ಟಿತ್ತು.  ಇದಕ್ಕೆ ಮುಂಚೆ ನಮ್ಮ ಚಿಗುರು ಬಳಗದ ಅಂಜೆನು ಕಾರ್ಯಕ್ರಮದ ಸಾಧ್ಯತೆ, ಸಿದ್ಧತೆ, ಬದ್ಧತೆ, ಆದ್ಯತೆ, ಚಿಂತೆ ಎಲ್ಲವೂ ಇದ್ದುದರಿಂದ,  ಚೆಡ್ಡಿ, ಬನಿಯನ್ , ಸಾಕ್ಸ್‍ ಗಳನ್ನು  ಪ್ಯಾಕ್ ಮಾಡುಲು  ಶುರು ಮಾಡಿದ ನಂತರವೇ ಮೊದಲ ಪ್ರವಾಸದ ಕಾತುರ, ರೋಮಾಂಚನಗಳು ಆರಂಭವಾದದ್ದು.      

‘Where ever you go, go with all your heart’
ಎಂದ ಕನಫ್ಯೂಶಿಸ್‍ನ ಮಾತು ಎದೆ ತುಂಬಿಕೊಂಡು, ಅದೇ ಗುಂಗಿನಲ್ಲಿ ಎಲ್ಲಿ ಪಾಸ್‍ಪೋರ್ಟ್ ಮರೆತು ಬಿಡುತ್ತೇನೋ ಎಂಬ ಆತಂಕವು ವಿಮಾನದ ಮೆಟ್ಟಿಲು ಹತ್ತುವ ತನಕ ಇದ್ದೇ ಇತ್ತು. ‘What ever you do, be careful with your Passport’ ಎಂದ              ನಮ್ಮ ಆಫೀಸಿನ ಅಡ್ಮಿನ್ ಮಾತನ್ನು heartನಲ್ಲಿ by heart  ಮಾಡಿಕೊಂಡಿದ್ದೆ, ಕನಫ್ಯೂಶಿಸ್‍ನ ಕ್ಷಮೆ ಕೋರುತ್ತಾ.     

ಈ ಪಾಸ್‍ಪೋರ್ಟ್ದೇ ಒಂದು ಕಥೆ. ನಾನಿನ್ನೂ ಚಿಕ್ಕವನಿದ್ದಾಗ, I mean ವಯಸ್ಸಿನಲ್ಲಿ  ಚಿಕ್ಕವನಿದ್ದಾಗ, ಮನೆ ಮುಂದೆ ಯಾರೋ ಕಣಿ ಹೇಳುವವಳು ಬಂದಿದ್ದಳು. ನನ್ನನು ನೋಡಿದ್ದೇ ಕ್ಷಣ, “ ಹಾಲಕ್ಕಿ ನುಡಿತ್ತೈತೆ ಹಾಲಕ್ಕಿ, ಈ ಹುಡುಗನ ನಸೀಬು ದೊಡ್ಡದೈತ್ತಿ. ಆಕಾಶದಾಗ ವಿಮಾನದಾಗ ದೇಶ ದೇಶ ಸುತ್ತು ಯೋಗ ಐತ್ರಿ” ಎಂದು ಹೇಳಿ ಒಂದು ಇಡಿ ಬದಲು, ಎರಡು ಇಡಿ ಅಕ್ಕಿ, ತೆಂಗಿನಕಾಯಿ, ಬೆಲ್ಲ ಎಲ್ಲ ತೆಗೆದುಕೊಂಡು ಹೋಗಿದ್ದಳು. ಅದೇನು ಅಂತ ಭವಿಷ್ಯ ಹೇಳಿದಳೋ, ನಮ್ಮ ಮನೆಯಲ್ಲಿ ಎಲ್ಲರೂ ಫಾರಿನ್ ಟ್ರಿಪ್ಪಿಗೆ ಹೋಗಿ ಬಂದರೂ, ನಾನು ಮಾತ್ರ ಶಿವಾಜಿನಗರ ಟೂ ದೊಮ್ಮಲೂರು ನಡುವಿನ ಡಬಲ್ ಡೆಕ್ಕರ್‍ ಬಸ್ಸಿನ  ಮಹಡಿ ಮೀರಿ ಮೇಲೆ ಏರಲಿಲ್ಲ. ಸ್ಟಾಪ್ ಬಂದಾಗ ಕೆಳಗಂತೂ ಇಳಿದೆ.

2009
ರಲ್ಲಿ ಮಾಡಿದ್ದ ಪಾಸ್‍ಪೋರ್ಟ್‍ನಲ್ಲಿ ಒಂದು ಸಣ್ಣ ಕಲೆಯೂ ಕೂಡ ಬೀಳದಂತೆ ಜೋಪಾನವಾಗಿ ಕಾಪಾಡಿಕೊಂಡು ಬಂದಿದ್ದೆ. ನನ್ನ ಕೆಲವು ಗೆಳೆಯರು ವರ್ಷದಲ್ಲಿ ಒಂದು ಕೆಮೆಸ್ಟ್ರಿ ನೋಟ್ ಬುಕ್ ಮುಗಿಸಿ ಇನ್ನೊಂದು ಹೊಸ ಬುಕ್ ಪ್ರಾರಂಭಿಸಿದಂತೆ, ಪಾಸ್‍ಪೋರ್ಟ್  ತುಂಬಾ ವೀಸಾಗಳನ್ನು ಗುದ್ದಿಸಿಕೊಂಡು ಮುನ್ನಡೆಯುತ್ತಿದ್ದರು. ಮೊನ್ನೆ ಚೈನಾಕ್ಕೆ ವಿಸಾ ಮಾಡಿಸಲು ಕೊಟ್ಟಾಗ ಗೊತ್ತಾಗಿದ್ದು, ಕನಿಷ್ಠ 6 ತಿಂಗಳು ವ್ಯಾಲಿಡಿಟಿ ಇಲ್ಲದಿದ್ದರೆ ವಿಸಾ ಸಿಗೋಲ್ಲ ಎಂದು. ನನ್ನ ಪಾಸ್‍ಪೋರ್ಟ್ ಮಾರ್ಚಿನಲ್ಲಿ ಎಕ್ಸ್ಪೈರ್ ಆಗಲು ತುದಿಗಾಲಿನಲ್ಲಿ ನಿಂತಿತ್ತು.
ಇನ್ನೂ ವಿಸಾ ಸಿಗುವುದಿಲ್ಲ ಎಂದಾಗಲೂ ದುಃಖ ಆಗಲಿಲ್ಲ, ’ಅಂಜೆನು’ವಿನ ಸಿದ್ಧತೆ ಬದ್ಧತೆ ಇದ್ದೇ ಇತ್ತಲ್ಲ. ಆದರೂ ಪಾಸ್‍ಪೋರ್ಟ್ ರಿನಿವಲ್ ಮಾಡಿಸಲು ಬೆಂಗಳೂರಿನಲ್ಲಿ ಮೂಲ ಬೆಂಗಳೂರಿಗನಾದ ನನಗೆ ಅಪಾಯಿಂಟ್‍ಮೆಂಟ್ ಸಿಗದೆ,  ಹುಬ್ಬಳ್ಳಿಗೆ ಹೋಗಿ ಅಪ್ಲೈ ಮಾಡಿದೆ. ರಾಣಿ ಚೆನ್ನಮ್ಮ ಸರ್ಕಲ್ಲಿನ ಬಳಿ ಮೀನು ಊಟ ಮಾಡಿ, ಬಸ್ ಸ್ಟ್ಯಾಂಡ್ ಬಳಿ  20 ದಿನಗಳ ವ್ಯಾಲಿಡಿಟಿ ಇರುವ ಮಿಶ್ರ ಪೇಡ ತೆಗೆದುಕೊಂಡ ಭಾಗ್ಯದ ಮುಂದೆ ವಿಸಾ ಬರುತ್ತೋ ಇಲ್ಲವೋ ಎಂಬುದು ಪಕ್ಕಕ್ಕೆ ಸರಿದು, ಧಾರವಾಡದಲ್ಲಿ ವರಕವಿ ಬೇಂದ್ರೆ ಮನೆ ನೋಡಿದ ತೃಪ್ತಿ ಪ್ರಧಾನವಾಯಿತು.

ಹುಬ್ಬಳ್ಳಿ ಪಾಸ್‍ಪೋರ್ಟ್ ಕಛೇರಿಯ ಸಿಬ್ಬಂದಿಗಳ ಕಾರ್ಯದಕ್ಷತೆಯಿಂದ  ಅಚ್ಚರಿ ಎಂಬಂತೆ ನಾಲ್ಕು ದಿನದಲ್ಲಿ ಪಾಸ್‍ಪೋರ್ಟ್ ಬಂದು, 10 ದಿನದಲ್ಲಿ ವಿಸಾ ಸಿಕ್ಕೇ ಬಿಟ್ಟಿತು. ಅದೆಷ್ಟೇ ಪ್ರಯತ್ನಪಟ್ಟರೂ ಆನಂದಭಾಷ್ಪ ಮಾತ್ರ ಬರದೇ ಹೋಯಿತು. 

ಇನ್ನು ಚೈನಾಗೆ ಹೊರಡುವ ದಿನವೂ ಆಫೀಸಿನಿಂದ ಹಿಂದಿರುಗಿದಾಗ ಸಮಯ ಐದು ಮೂವತ್ತು. ಮನಸ್ಸಲ್ಲಿ ಎಂಥದೋ ಭಾರ. ನನ್ನೆಲ್ಲಾ ಅಗತ್ಯತೆ, ಅನಿವಾರ್ಯತೆ ಅಭದ್ರತೆಯನ್ನು ಚೆನ್ನಾಗಿ ಬಲ್ಲ ಮನೆಯವರು ಎಲ್ಲವನ್ನೂ ಪ್ಯಾಕ್ ಮಾಡಿಟ್ಟಿದ್ದರು. ಹೋಗಿ ತಲೆ ಕೂದಲು ಕಟಿಂಗ್ ಮಾಡಿಸಿಕೊಂಡು ಬಂದರೂ ಅದೇ ಭಾರ. ಇನ್ನು ಹೊರಡುವ ಮುನ್ನ ಬ್ಯಾಗ್ ತೂಕ ಹಾಕಿ ನೋಡಿ ಏರ್‍ಲೈನ್‍ರವರು ವಿಧಿಸಿದ ಮಿತಿಗಿಂತ 15 ಕೆಜಿ ಕಡಿಮೆ ಇದೆ ಎಂದು ತಿಳಿದ ಮೇಲೆಯೇ ಮನಸ್ಸು ಒಂದಷ್ಟು ಹಗುರವಾಗಿದ್ದು.    

ಟ್ರಾಫಿಕ್ಕಿನ ಭಯದಿಂದಾಗಿ ಒಂದಷ್ಟು ಬೇಗನೇ ಓಲಾ ಹಿಡಿದು ವಿಮಾನ ನಿಲ್ದಾಣಕ್ಕೆ ಹೊರಟೆ. ಎಲ್ಲಾ ಟ್ರಾಫಿಕ್ ನಡುವೆಯೂ ಕೇವಲ 50 ನಿಮಿಷದಲ್ಲಿ ಏರ್ಪೋಟ್ ತಲುಪಿಸಿದ ಓಲಾ ಡ್ರೈವರ್ ನನ್ನ ಕಣ್ಣಿಗೆ  ಒಬ್ಬ ಪೈಲೆಟ್‍ನಂತೆ ಗೋಚರಿಸಿದ. ಮಿಕ್ಕ ಚಿಲ್ಲರೆ ಇಟ್ಟುಕೊಳ್ಳಲು ಹೇಳಿದಾಗ ಮಾತ್ರ ವಿಮಾನದ ಏರ್ ಹೋಸ್ಟಸ್‍ನಂತೆ ಸುಂದರ ನಗೆ ನಕ್ಕ.   

ಚೆಕ್ಕಿಂಗ್‍ನಲ್ಲಿ ಒಟ್ಟು ಮೂರು ಬಾರಿ ಸೆಕ್ಯೂರಿಟಿ ಕ್ಲಿಯರೆನ್ಸ್ ಫೇಲ್ ಆದೆ. ಎಲ್ಲವನ್ನೂ ಬ್ಯಾಗಿನಲ್ಲಿ ಹಾಕಬೇಕು ಎಂದು ಹೇಳಿದ ಮೇಲೂ, ಒಮ್ಮೆ ಐದು ರೂಪಾಯಿಯ ನಾಣ್ಯ, ಇನ್ನೊಮ್ಮೆ ಜಪಸರ, ಮಗದೊಮ್ಮೆ ಸಣ್ಣ ಕೀ ಪ್ಯಾಂಟಿನಲ್ಲಿ ಸಿಕ್ಕಿ ಮರಳಿ ಯತ್ನವ ಮಾಡು ಎಂಬಂತೆ ಸ್ಟ್ರಿಕ್ಟ್ ಆಫೀಸರ್ ನನ್ನನ್ನು ಮತ್ತೆ ಮತ್ತೆ ವಾಪಸ್ ಕಳುಹಿಸಿದ. ’ಪೆಹಲಾ ಬಾರ್ ಹೇ ಕ್ಯಾ’ ಎಂಬ ಅವನ ಕರ್ಕಶ ಪ್ರಶ್ನೆಗೆ ನಾನು “ಹಾ” ಅಂದದ್ದು ಹಿಂದಿಯಲ್ಲೋ ಕನ್ನಡದಲ್ಲಿ ನನಗೇ ಕನ್ಫ್ಯೂಷನ್.

579 ಪದಗಳ ನಂತರವೂ ಚೈನಾ ಪ್ರವಾಸದ ಈ ಕಥನ ಬೆಂಗಳೂರು ವಿಮಾನ ನಿಲ್ದಾಣ ದಾಟದೆ ಇರುವುದು ಓದುಗಾರದ ನಿಮ್ಮ ದೌರ್ಭಾಗ್ಯ. ಬಲಗಾಲಿಟ್ಟು ವಿಮಾನದೊಳಗೆ ಹೋದಾಗಿನಿಂದ ಹಿಡಿದು ಎಡಗಾಲಿನ ಮೇಲೆ ಭಾರವಾದ ಸೂಟ್ ಕೇಸ್ ಬಿದ್ದ ಸಂಪೂರ್ಣ ಕಥಾನಕವನ್ನು ಮುಂದಿನ ಭಾಗದಲ್ಲಿ ಖಂಡಿತ ಮುಗಿಸುವೆ. ನಿಹೌ, 你好.

Saturday, 20 October 2018

ಮಾನವನಾಗಿ ಹುಟ್ಟಿದ್ ಮೇಲೆ ಏನೇನು ಕಂಡಿ? - ಭಾಗ 2

ಕಳೆದ ಒಂದಷ್ಟು ದಿನಗಳಿಂದ ಕೋರ್ಟ್ ತೀರ್ಪುಗಳದ್ದೇ ಸುದ್ದಿ. ಪ್ರಸಿದ್ಧ ದೇವಾಲಯಕ್ಕೆ ಮಹಿಳೆಯರ ಪ್ರವೇಶದಿಂದ ಹಿಡಿದು ಸಹಜ-ಅಸಹಜ, ನೈತಿಕ-ಅನೈತಿಕ, ಧಾರ್ಮಿಕ-ಸಾಮಾಜಿಕ ನಡುವಿನ ತೆಳು ಗೆರೆಯ ವ್ಯಾಖ್ಯಾನವನ್ನು ಸಂವಿಧಾನಾತ್ಮಕವಾಗಿ ನೀಡಿ ಕೊಟ್ಟಿರುವ ತೀರ್ಪುಗಳು ಚರ್ಚೆಗೆ ಗ್ರಾಸವಾಗಿದೆ. ಚರ್ಚೆಗಳು ಪ್ರತಿಭಟನೆಗಳು ಕಾವೇರುತ್ತಿರುವಂತೆ ಬೆಂಗಳೂರಿಗರಿಗೆ ಸಂತಸ ತರುವ 2 ಆದೇಶಗಳು ಸಹ ಹೊರಬಿದ್ದಿವೆ. ಒಂದು ಬೆಂಗಳೂರನ್ನು ಫ್ಲೆಕ್ಸ್ ಮುಕ್ತವಾಗಿ ಮಾಡುವುದು, ಮತ್ತೊಂದು ಇಂತಿಷ್ಟು ದಿನಗಳಲ್ಲಿ ಬೆಂಗಳೂರಿನ ಎಲ್ಲಾ ರಸ್ತೆಗಳು ಗುಂಡಿ ಮುಕ್ತವಾಗಬೇಕೆನ್ನುವುದು.

ಯಾವುದೇ ತೀರ್ಪು ಬಂದಾಗ ಒಂದಷ್ಟು ಜನಕ್ಕೆ ನಷ್ಟ ನೋವು ಸಹಜ.  ಫ್ಲೆಕ್ಸುಗಳನ್ನೇ ನಂಬಿಕೊಂಡಿದ್ದ ಕಾರ್ಮಿಕ ವರ್ಗ, ಮಾಲೀಕರು, ಉದ್ಯಮಕ್ಕೆ ತೀರ್ಪು ನುಂಗಲಾರದ ತುತ್ತಾಗಿದೆ.  ಅಂತೆಯೇ ಗುಂಡಿಗಳು ಮುಚ್ಚಬೇಕು ಎಂದಾಗ ಯಾರಿಗೆ ನಷ್ಟ, ಅಸಹನೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯವೇ. ಆದರೆ ಬಹುತೇಕರಿಗೆ ಈ ಎರಡು ತೀರ್ಪುಗಳು ಸಂತೋಷ ತಂದಿರುವುದು ನಿಜವೇ. ಈ  ಲಾಭ-ನಷ್ಟಗಳ ಒಂದು ಸಣ್ಣ ಅವಲೋಕನ ಇಲ್ಲಿದೆ.

ಮೊದಲಿಗೆ ಈ ರಸ್ತೆಗಳ ಗುಂಡಿಗಳ ವಿಷಯಕ್ಕೆ ಬರೋಣ. ಒಬ್ಬ ಚಿಂತಕನ ಪ್ರಕಾರ ’ಜೀವನ ಒಂದು ಪಯಣ, ರಸ್ತೆ ಅಥವಾ ದಾರಿ ಎಷ್ಟೇ ಕೆಟ್ಟದಾಗಿದ್ದರೂ ಸಾಗಲೇಬೇಕು’. ಮೇಲ್ನೋಟಕ್ಕೆ ಒಂದು ತಾತ್ವಿಕ ಚಿಂತನೆ ಎಂಬಂತೆ ಕಂಡರೂ  ಬೆಂಗಳೂರಿಗರ ಪಾಲಿಗೆ ಅದು ವಾಸ್ತವವೇ. ಇನ್ನೊಬ್ಬ ಚಿಂತಕರು ಉದ್ಘರಿಸುತ್ತಾರೆ, ’ಅಹಾ ಅದೆಷ್ಟು ದಾರಿಗಳು, ಅದೆಷ್ಟು ಆಯ್ಕೆಗಳು, ಅದೆಷ್ಟು ತಪ್ಪುಗಳು”. ಈ ಹೇಳಿಕೆಯ ಅರ್ಥ, ಹಿನ್ನೆಲೆ ಬೇರೆ, ಅದನ್ನು ಈ ರಸ್ತೆಗಳನ್ನು ವಹಿಸಿಕೊಂಡಿರುವ ಕಾಂಟ್ರಾಕ್ಟರಗಳ ಬಗ್ಗೆ ಎಂದು ಭಾವಿಸಬಾರದು. ಆ ನಿಟ್ಟಿನಲ್ಲಿ ಯೋಚನೆ ಮಾಡಿದರೆ ಆ ರೀತಿ   ಅರ್ಥವಾಗುತ್ತದೆ ಅಷ್ಟೇ.

“ರಸ್ತೆಗಳು ದೇಶದ ಜೀವನಾಡಿಗಳು, ಬೆನ್ನೆಲುಬು” ಎಂಬ ಮಾತಿದೆ. ಆದರೆ ನಮ್ಮ ರಸ್ತೆಗಳಲ್ಲಿ ವಾಹನವನ್ನು ಚಲಾಯಿಸುವಾಗ ಅಥವಾ ನಡೆದುಕೊಂಡು ಹೋಗುವಾಗ ನಾಡಿ ಮಿಡಿತ ಒಂದಷ್ಟು ಏರುಪೇರಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಇಲ್ಲಿನ ಗುಂಡಿಗಳು ಒಮ್ಮೊಮ್ಮೆ ಅದೆಷ್ಟು ಆಳವಾಗಿರುತ್ತದೆ ಎಂದರೆ ಅವುಗಳಲ್ಲಿ ಇಳಿದ ಮೇಲೆ ಬೆನ್ನೆಲುಬು ಮತ್ತೆ ಸಹಜ ಸ್ಥಿತಿಗೆ ಹಿಂದಿರುಗುವುದು ಕಷ್ಟವೇ. 

ಹನಿಗವನ ಒಂದರಲ್ಲಿ ಪತಿಯನ್ನು ಕಂಡು ಪತ್ನಿಯು ಕೇಳುತ್ತಾಳೆ “ನಡೆಯಲಿಲ್ಲ ಓಡಲಿಲ್ಲ ಗಾಡಿಯಲ್ಲಿ ಬಂದರೂ ಇಷ್ಟೊಂದು ಸುಸ್ತೇ? ಗಂಡ ಹೇಳುತ್ತಾನೆ “ಹೌದೇ ಮಾರಾಯ್ತಿ, ಹಾಗಿದೆ ನಮ್ಮ ರಸ್ತೆ”. ಇದು ಇದು ನಮ್ಮೆಲ್ಲರದೂ ಅವಸ್ಥೆ. ಹಾಡೊಂದರಲ್ಲಿ “ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕಂಡಿ? ಸಾಯೋದ್ರೊಳಗೆ ಒಮ್ಮೆ ನೋಡು ಜೋಗದ್ ಗುಂಡಿ” ಎಂಬ ಸಾಲಿದೆ. ಬೆಂಗಳೂರಿಗರಿಗೆ “ಬದುಕೋದಾದ್ರೆ ನೋಡಿಕೊಂಡು ಹೋಗು ನೂರಾರು ಗುಂಡಿ” ಎಂದು ಬದಲಾಯಿಸಬೇಕಾಗುತ್ತದೆ.

ಮಾನ್ಯ ನ್ಯಾಯಾಲಯವೇನೋ ರಸ್ತೆಗಳಲ್ಲಿನ ಗುಂಡಿಗಳನ್ನು ಮುಚ್ಚಿ ಎಂದು ಆದೇಶ ನೀಡಿದೆ. ಆದರೆ ಎಷ್ಟೋ ಕಡೆ ರಸ್ತೆಗಳಲ್ಲಿ ಗುಂಡಿಯ ಬದಲು ಗುಂಡಿಗಳ ನಡುವೆ ಅಲ್ಪಸ್ವಲ್ಪ ರಸ್ತೆ ಇದೆ. “ಅಲ್ಲಿ ರಸ್ತೆ ಮಾಡಿರಿ” ಎಂಬ ಆದೇಶ ಹೆಚ್ಚು ಅರ್ಥಪೂರ್ಣವಾಗುತ್ತಿತ್ತು. ಬೆಂಗಳೂರಿನ ಗುಂಡಿಗಳ ಹೆಚ್ಚುಗಾರಿಕೆ ಎಂದರೆ ಅದು ನಮಗೆ ಬಯಾಲಜಿ, ಫಿಸಿಕ್ಸ್, ಮೆಕ್ಯಾನಿಕಲ್ ಜ್ಞಾನವನ್ನು ನಮಗೆ ಅರಿವಿಲ್ಲದಂತೆ ತಿಳಿಸಿಕೊಡುತ್ತದೆ.
ಮೊನ್ನೆ ಮಗನ ಫಿಸಿಕ್ಸ್ ಪುಸ್ತಕದಲ್ಲಿ ಎನರ್ಜಿಯ ಬಗೆಗಿನ ಪಾಠದಲ್ಲಿ ಒಂದು ವಾಹನ ಬೆಟ್ಟವನ್ನು ಏರುವಾಗ, ಏರಿದ ಮೇಲೆ ಹಾಗೂ ಇಳಿಯುವಾಗ ಹೊರಡಿಸುವ ಶಕ್ತಿಯ ಸ್ಥಿತಿಯ ಬಗ್ಗೆ  ವಿವರಣೆ  ಇತ್ತು. ಬೆಟ್ಟಗಳನ್ನು ನೋಡದ ಮಕ್ಕಳು ಅದನ್ನೇ ರಸ್ತೆಯಲ್ಲಿನ ಗುಂಡಿಯ ಒಳಗೆ ವಾಹನ ಇಳಿದಾಗ, ಇಳಿದ ಮೇಲೆ, ಮೇಲೆ ಬರುವಾಗ ಎಂದು ಅರ್ಥ ಮಾಡಿಕೊಂಡರೆ  ಫಿಸಿಕ್ಸ್ ಹೆಚ್ಚು ಅರ್ಥವಾಗುತ್ತದೆ. 

ನಮ್ಮ ದೇಹದಲ್ಲಿನ ಮೂಳೆಗಳು, ಕೀಲುಗಳ ಬಗ್ಗೆ ಪೂರ್ಣ ಪರಿಚಯವನ್ನು ನಮ್ಮ ರಸ್ತೆಗಳಲ್ಲಿನ ಗುಂಡಿಗಳು ಮಾಡುತ್ತವೆ. ಬೀಳದಿದ್ದರೂ ಒಂದು ಗುಂಡಿಗೆ ಇಳಿದಾಕ್ಷಣ ಜುಮ್ಮೆನ್ನುವ ಮೂಳೆಗಳು ಕೀಲುಗಳ ಮೂಲಕ ಜೀವಶಾಸ್ತ್ರದ ಸಣ್ಣ ಪರಿಚಯವಾಗುತ್ತದೆ. ಇನ್ನೂ ನಾವು ಓಡಿಸುವ ವಾಹನದ ಶಾಕ್ ಅಬ್ಸರವ್‌ಗಳು ಸೇರಿದಂತೆ ಪ್ರತಿ ಬಿಡಿ ಭಾಗಗಳು ಎಚ್ಚೆತ್ತು ರೋಮಾಂಚನಗೊಳ್ಳುವ ಪ್ರಕ್ರಿಯೆಯನ್ನು ಗುಂಡಿಗಳು ಪ್ರೇರೇಪಿಸುತ್ತಾ ನಮಗೆ ಮೆಕ್ಯಾನಿಕಲ್ ಪಾಠದ ಒಂದು ಅಧ್ಯಾಯವನ್ನು ತಿಳಿಸಿಕೊಡುತ್ತದೆ.

ಚಂದ್ರನ ಮೇಲೆ, ಮಂಗಳ ಗ್ರಹದ ಮೇಲೆ ನೆಲವು ಹೇಗಿರುತ್ತದೆ ಎಂಬ ಪರಿಚಯಕ್ಕೂ ಈ ನಮ್ಮ ಗುಂಡಿಯುತ ರಸ್ತೆಗಳು ಸಾಕ್ಷಿ. ಮಳೆ ನೀರು ಶೇಖರಣೆ, ಸಣ್ಣ ಕೆರೆಗಳ ನಿರ್ಮಾಣದಲ್ಲಿ ಕರ್ನಾಟಕ ನೆರೆ ರಾಜ್ಯಗಳಿಗೆ ಹೋಲಿಸಿದರೆ ಎಂದಿಗೂ ಹಿಂದೆ ಎಂಬ ಆಪಾದನೆಯನ್ನು ಸುಳ್ಳು ಮಾಡೋ ನಿಟ್ಟಿನಲ್ಲಿ ಗುಂಡಿಗಳಲ್ಲಿ ಗ್ಯಾಲೆನ್ ಗಟ್ಟಲೆ ನೀರನ್ನು ಶೇಖರಿಸಿ ಕೊಂಡಿದ್ದವು. ಅವೆಲ್ಲದಕ್ಕೂ ಈಗಿನ ಕೋರ್ಟಿನ ತೀರ್ಪಿನ ಕಾರಣದಿಂದಾಗಿ ಸಂಚಕಾರ ಉಂಟಾಗಿದೆ.

ಇನ್ನೂ ಈ ಗುಂಡಿಗಳು ಅರ್ಥಶಾಸ್ತ್ರವನ್ನು ಸಹ ನಮಗೆ ಕಲಿಸಿಕೊಡುತ್ತದೆ. ಗುಂಡಿಯ ಆಳ ಅಗಲದ ಮೇಲೆ ನಾವು ಅದನ್ನು ತಯಾರಿಸಿದ ಕಾಂಟ್ರಾಕ್ಟರಿನ  ಆರ್ಥಿಕತೆಯ ಅಳತೆ ಮಾಡಬಹುದು. ರಸ್ತೆಯ ಮೇಲ್ಪದರ ತೆಳುವಾದಷ್ಟೂ ಅವರ ಆರ್ಥಿಕತೆಯ ಹೆಚ್ಚುತ್ತಾ ಹೋಗುತ್ತದೆ. 

ಹೀಗೆ ರಸ್ತೆಯ ಗುಂಡಿ ಎನ್ನುವುದು ಕೇವಲ ಒಂದು ಪಿಡುಗು ಮಾತ್ರವಲ್ಲದೆ ಅದೊಂದು ದೊಡ್ಡ ಅಧ್ಯಯನದ ವಿಷಯವೇ ಆಗಿದೆ. ಎಷ್ಟೋ ಬಾರಿ ನಮ್ಮ ಅಧ್ಯಯನಕ್ಕೆ ಸಂಬಂಧಪಟ್ಟ ಮಾಹಿತಿಗಳು ಸಿಗುವುದೇ ಇಲ್ಲ. ಅದೇ ರಸ್ತೆ ಗುಂಡಿಯನ್ನು ಅಧ್ಯಯನದ ವಿಷಯ ಮಾಡಿಕೊಂಡಿರುವವರಿಗೆ ಪ್ರತಿ ರಸ್ತೆಯಲ್ಲೂ, ಪ್ರತಿ ತಿರುವಿನಲ್ಲೂ ಪ್ರತಿ ಹೆಜ್ಜೆಯಲ್ಲೂ ಮಾಹಿತಿಗಳು ಭರ್ತಿಯಾಗಿ ಸಿಗಬಲ್ಲವು.

ಇನ್ನು ಫ್ಲೆಕ್ಸ್ ಗಳದೇ ಒಂದು ಲೋಕ. ಫ್ಲೆಕ್ಸ್ ಉದ್ಯಮದಲ್ಲಿದ್ದವರಿಗೆ ತೀರ್ಪು ಬರಸಿಡಿಲು. ಅದರಲ್ಲೂ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಆ ದೊಡ್ಡ ಯಂತ್ರಗಳನ್ನು ಕಂತಿನ ಲೆಕ್ಕದಲ್ಲಿ ತಂದವರ ಪಾಡು ಯಾರಿಗೂ ಬೇಡ. ಜೊತೆಗೆ ಫ್ಲೆಕ್ಸ್ ಉದ್ಯಮದಲ್ಲಿ ತೊಡಗಿಕೊಂಡಿರುವ ಡಿಸೈನರ‍್ ಗಳು, ಕಟ್ಟುವ ಕಾರ್ಮಿಕರು, ಚಾಲಕರು ಎಲ್ಲರದೂ ಒಂದು ರೀತಿಯ ತ್ರಿಶಂಕು ಸ್ಥಿತಿ. ಬಿಬಿಎಂಪಿ ಹಾಗೂ ನ್ಯಾಯಾಲಯ ಮಾತ್ರ ಸಾಕಷ್ಟು ಮೊದಲೇ ಅವರಿಗೆಲ್ಲಾ ಮುನ್ನೆಚ್ಚರಿಕೆ ನೀಡಲಾಗಿತ್ತು ಎಂದು ಹೇಳುತ್ತದೆ. ವಾದ-ವಿವಾದಗಳು ಏನೇ ಇರಲಿ ಈ ಪರಿಸ್ಥಿತಿ ಬರಲು ಕಾರಣವಾದರೂ ಏನು?

ಬೆಂಗಳೂರು ಹಸಿರು ನಗರಿ ಎಂದೇ ಪ್ರಸಿದ್ಧ. ಹಸಿರು ಮಾತ್ರವೇಕೆ ಬಣ್ಣ ಬಣ್ಣದ ನಗರಿಯಾಗಲಿ ಎಂಬಂತೆ ಫ್ಲೆಕ್ಸುಗಳು ಬೆಂಗಳೂರಿನ ಮುಖಕ್ಕೆ ರಾಚುವಂತೆ ಈ ಇತ್ತೀಚಿನ ವರ್ಷಗಳಲ್ಲಿ ನಮ್ಮ ರಸ್ತೆಗಳಲ್ಲಿ ರಾರಾಜಿಸಿದವು. ಒಂದು ದೊಡ್ಡ ಫಲಭರಿತ ಉದ್ಯಮವಾಗಿ ಬೆಳೆದು ನಿಂತು ಬೆಂಗಳೂರಿನ ಮೂಲ ಸ್ವರೂಪವನ್ನೇ ಬದಲಾಯಿಸಿತು. ಒಂದು ಪರವಾನಗಿ, ಕಾಂಟ್ರ್ಯಾಕ್ಟ್ ಅದರ ಜೊತೆಗೆ ಸಹಜವೆಂಬಂತೆ ಭ್ರಷ್ಟಾಚಾರ, ಪರಿಸರದ ಕಾಳಜಿ ಇಲ್ಲದ ಮನಸ್ಸುಗಳೆಲ್ಲ ಸೇರಿಕೊಂಡು ಬೇಕು-ಬೇಡ ಎಲ್ಲದರ ರಾಶಿಯನ್ನು ಫ್ಲೆಕ್ಸುಗಳ ಮೂಲಕ ಬೆಂಗಳೂರನ್ನು ಆಕ್ರಮಿಸಿಕೊಂಡಿತು.  

(ಮುಂದುವರೆಯುತ್ತದೆ)

ಮಾನವನಾಗಿ ಹುಟ್ಟಿದ್ ಮೇಲೆ ಏನೇನು ಕಂಡಿ? - ಭಾಗ 1

(ಮುಂದುವರಿಯುತ್ತದೆ)