Friday, 20 October 2017

ಮಿಥುನ್ ಬಿರಾಲ - ಸಂವಾದ


ಕ್ರಿಕೆಟ್ ಆಟದಲ್ಲಿ ಆಟಗಾರರು ಬಹು ಮುಖ್ಯ ಭಾಗ. ೨೨ ಜನ ಮೈದಾನದಲ್ಲಿ ಆಟವಾಡಿದರೆ, ತೆರೆಯ ಹಿಂದೆ ನೂರಾರು ಜನರ ಶ್ರಮವಿರುತ್ತದೆ. ಅಂತಹ ಒಂದು ಬಹು ಮುಖ್ಯ ಕಾರ್ಯಕ್ಷೇತ್ರವೆಂದರೆ ಪಂದ್ಯದ ರೆಫರಿಯ ಹುದ್ದೆ. ಅತ್ಯಂತ ಜವಬ್ದಾರಿಯ ಹಾಗೂ ಗೌರವಯುತವಾದ ಈ ಹುದ್ದೆಗೆ ತನ್ನದೇ ಆದ ಘನತೆಯಿದೆ. ಕರ್ನಾಟಕದ ಆಟಗಾರರಿಗೆ ವಿಶ್ವ ಕ್ರಿಕೆಟ್‌ನಲ್ಲಿ ಒಂದು ವಿಶಿಷ್ಠ ಸ್ಥಾನವಿದೆ. ಸಭ್ಯ ಕ್ರಿಕೆಟಿಗರೆಂದೇ ಖ್ಯಾತಿ ಪಡೆದ ನಮ್ಮದೇ ಆಟಗಾರರು ರೆಫರಿ ಹುದ್ದೆಯನು ಅಲಂಕರಿಸಿದ್ದಾರೆ. ಅದರ ಮುಂದುವರಿದ ಭಾಗವಾಗಿ ಈಗ ಮಿಥುನ್ ಬಿರಾಲ ಈ ಹುದ್ದೆಗೆ ಆಯ್ಕೆಯಾಗಿದ್ದಾರೆ. ೪೦ ವರ್ಷದ ಮಿಥುನ್ ರವರ ತಂದೆ ರಘುನಾಥ್ ಬಿರಾಲ ಸಹಾ ಈ ಹುದ್ದೆಯನ್ನು ನಿಭಾಯಿಸಿದವರೇ. ಇಂತಹ ಸಂದರ್ಭದಲ್ಲಿ ಮಿಥುನ್‌ರವರನ್ನು ಮಾತುಕತೆಯ ಪರವಾಗಿ ಅಭಿನಂದಿಸಿದಾಗ ನಡೆದ ಸಂವಾದ .

ಮಾ.ಕ- ನಮಸ್ಕಾರ ಮಿಥುನ್, ಮೊದಲಿಗೆ ಬಿಸಿಸಿಐ ನಿಯೋಜಿತ  ಮ್ಯಾಚ್ ರೆಫ಼ರಿ ಆಗಿ ಆಯ್ಕೆಯಾಗಿರುವ ನಿಮಗೆ ನಮ್ಮ ಮಾತುಕತೆ ಬಳಗ ಹಾಗೂ ಕಥೋಲಿಕ ಕ್ರೈಸ್ತರ ಪರವಾಗಿ ಅಭಿನಂದನೆಗಳು. ಈ ಪಾತ್ರದಲ್ಲಿನ ನಿಮ್ಮ ಮುಂದಿನ ದಿನಗಳಿಗೆ ನಮ್ಮ ಶುಭ ಹಾರೈಕೆಗಳು
ಮಿಥುನ್ – ನಮಸ್ಕಾರ ಪ್ರಶಾಂತ್. ನಿಮಗೂ, ನಿಮ್ಮ ಪತ್ರಿಕೆಗೂ, ಎಲ್ಲಾ ಜನರಿಗೂ ನನ್ನ ಧನ್ಯವಾದಗಳು. ನಿಮ್ಮ ಅಭಿನಂದನೆಯೊಂದಿಗೆ ಪ್ರಾರಂಭಿಸುತ್ತಿರುವ ನನ್ನ ಈ ಹೊಸ ಇನ್ನಿಂಗ್ಸ್‌ಗಾಗಿ ನನಗಾಗಿ ಪ್ರಾರ್ಥನೆಯೂ ಇರಲಿ.

ಮಾ.ಕ- ನಿಮ್ಮ ತಂದೆ ರಘುನಾಥ್ ಬಿರಾಲ ಅವರೂ ಸಹಾ ಮ್ಯಾಚ್ ರೆಫರಿ ಆಗಿದ್ದವರು. ತಂದೆಯ ಹೊರತಾಗಿ  ರೆಫರಿಯ ಹುದ್ದೆ ಆಯ್ಕೆ ಮಾಡಲು ಪ್ರೇರಣೆ ಏನು? ಸ್ವತ: ಆಟಗಾರರಾಗಿದ್ದ ನೀವು ಕೋಚ್ ಅಥವಾ ತರಬೇತುದಾರರಾಗಬಹುದಿತ್ತಲ್ಲವೇ?
ಮಿಥುನ್ – ಹೌದು ನಾನು ಆಸ್ಟ್ರೇಲಿಯಾದವರು ನೀಡುವ ೨ನೇ ಹಂತದ ಸರ್ಟಿಫೈಡ್ ಕೋಚ್. ಈ ವರ್ಷದ ರಣಜಿ ಸರಣಿ ಅರಂಭಗೊಂಡರೂ ಕೋಚ್ ಆಗಿ ನನಗೆ ಯಾವುದೇ ರಾಜ್ಯದಿಂದ ಕರೆ ಇನ್ನೂ ಬಂದಿಲ್ಲ. ಕರ್ನಾಟಕ ರಾಜ್ಯ ಸಂಸ್ಥೆಯಿಂದ ಈ ಅವಕಾಶ ಲಭಿಸಿದಾಗ, ಇದು ಸದ್ಯಕ್ಕೆ ಅತ್ತ್ಯುತ್ತಮ ಅವಕಾಶ ಎಂದೆನಿಸಿತು. ಕೋಚ್ ಹುದ್ದೆಯ ಅರ್ಹತೆ ಪಡೆದಿರುವುದರಿಂದ ಅದನ್ನು ಯಾವುದೇ ಸಮಯದಲ್ಲೂ ಮಾಡಬಹುದಾಗಿದೆ. ಈ ಆಟದೊಂದಿಗೆ ಯಾವುದಾದರೊಂದು ರೀತಿಯ ನಂಟನ್ನು ಉಳಿಸಿಕೊಳ್ಳಬೇಕಾಗಿರುವುದು ಮುಖ್ಯ ಎನಿಸಿತು. ಈ ಹುದ್ದೆಯನ್ನು ನಾನು ಸ್ವೀಕರಿಸಿರುವುದು ಸಂತಸ ತಂದಿದೆ.

ಮಾ.ಕ- ಪಂದ್ಯಗಳಲ್ಲಿ ಆಟಗಾರರ ನಡುವಳಿಕೆ ಬಗ್ಗೆ ಗಮನ ಹಾಗೂ ಪಂದ್ಯಕ್ಕೆ ಅಡಚಣೆ ಉಂಟಾಗುವ ಸಮಯದಲ್ಲಿ ಮ್ಯಾಚ್ ರೆಫರಿಗಳು ಕಾರ್ಯಪ್ರವೃತ್ತರಾಗುವ ಬಗ್ಗೆ ಕ್ರಿಕೆಟ್ ಪ್ರಿಯರಿಗೆ ಒಂದಷ್ಟು ಮಾಹಿತಿ ಇದ್ದರೂ, ಒಬ್ಬ ರೆಫರಿಯ ಇತರ ಕಾರ್ಯ ಚಟುವಟಿಕೆಗಳು ಯಾವುವು?
ಮಿಥುನ್ – ಈ ಕ್ರೀಡೆಯಲ್ಲಿ ಆಟಗಾರರೇ ಅತಿ ಮುಖ್ಯ ಮತ್ತು ಅದು ನಡೆಯುವುದೇ ಅವರಿಂದ. ಆಟಗಾರರ ಮೈದಾನದೊಳಗೆ ತಮ್ಮ ಅತ್ತ್ಯುತ್ತಮ ಸಾಮಾರ್ಥ್ಯ ತೋರಲು ಬೇಕಾದ ಏನೆಲ್ಲಾ ಸೌಲಭ್ಯಗಳು ಇರಬೇಕೋ ಅದರೆಲ್ಲದರ ಕಡೆ ಗಮನ ಕೊಡಬೇಕು. ಒಬ್ಬ ಮ್ಯಾಚ್ ರೆಫರಿ ಆಟಗಾರರ ಗೆಳೆಯನಂತಿರಬೇಕೆ ವಿನಹ ಅವರ ಮೇಲೆ ಸವಾರಿ ಮಾಡಬಾರದು. ಹೌದು, ಆಟ ಲೋಕ ರೂಢಿಯ ಕ್ರೀಡಾ ಮನೋಭಾವದಿಂದ ನಡೆಯುತ್ತಿದೆ ಎಂಬುದನ್ನು ನಾವು ಖಚಿತ ಪಡಿಸಿಕೊಳ್ಳಬೇಕಾಗುತ್ತದೆ. ಕಟ್ಟುನಿಟ್ಟಾಗಿರಬೇಕಾಗಿದ್ದರೂ ಕಠೋರವಾಗಿರಲು ಸಾಧ್ಯವಿಲ್ಲ. ತೂಗಿಸಿಕೊಂಡು ಹೋಗಬೇಕಾಗುತ್ತದೆ. ಇದರೊಂದಿಗೆ ಮೈದಾನ ಹಾಗೂ ಕ್ರೀಡಾಂಗಣದಲ್ಲಿನ ಮೂಲಭೂತ ಸೌಲಭ್ಯಗಳ ಬಗ್ಗೆ, ಆಟಗಾರರು ಉಳಿದುಕೊಳ್ಳುವ ಹೋಟೆಲ್ಲುಗಳ ಗುಣಮಟ್ಟ, ಆಟದ ವರದಿಗಾಗಿ ಸರಿಯಾದ ಅಂತರ್ಜಾಲ ವ್ಯವಸ್ಥೆ, ಮೈದಾನದಲ್ಲಿನ ಸಲಕರಣೆಗಳ ಗುಣಮಟ್ಟ ಹೀಗೆ ಎಲ್ಲದರ ಬಗ್ಗೆ ರೆಫರಿ ಗಮನ ಹರಿಸಬೇಕಾಗುತ್ತದೆ. ಒಟ್ಟಿನಲ್ಲಿ ಆಟಕ್ಕೆ ಆಟಗಾರರಿಗೆ ಯಾವುದೇ ತೊಂದರೆ ಆಗದಂತ ವಾತಾವರಣದ ಬಗ್ಗೆ ಸದಾ ಗಮನಹರಿಸಬೇಕಾಗುತ್ತದೆ.

ಮಾ.ಕ - ವಿಶ್ವ ಕ್ರಿಕೆಟ್‌ನಲ್ಲಿ ಕರ್ನಾಟಕದ ಕ್ರಿಕೆಟಿಗರು ತಮ್ಮ ಸಭ್ಯ ಕ್ರಿಕೆಟ್ ಎಂದು ಹೆಸರುವಾಸಿಯಾದವರು, ಈ ಒಂದು ಸಂಪ್ರದಾಯ ನಿಮ್ಮ ಈ ಹುದ್ದೆಯ ಮೇಲೆ ಹೇಗೆ ಪರಿಣಾಮ ಬೀರಬಹುದು. ಏಕೆಂದರೆ ಯಾವುದೋ ಒಂದು ನಡುವಳಿಕೆ ಒಂದು ಸಂಸ್ಕೃತಿಯಲ್ಲಿ ಬೆಳೆದ ಆಟಗಾರನಿಗೆ ತಪ್ಪೆನಿಸಿದರೆ  ಇನ್ನೊಬ್ಬನಿಗೆ ಅದು ಏನೂ ಅನಿಸದಿರಬಹುದು
ಮಿಥುನ್ - ಹೌದು ನಮ್ಮ ಆಟಗಾರರು ಉತ್ತಮ ನಡುವಳಿಕೆಗೆ ಹೆಸರುವಾಸಿ ಹಾಗೂ ಕ್ರಿಕೆಟ್‌ನ ಉತ್ತಮ ರಾಯಭಾರಿಗಳು. ಆದರೆ ಆಟಗಾರರು ಪರಸ್ಪರ ಆಡುತ್ತಲೇ ಇರುವುದರಿಂದ, ಹೇಗೆ ನಡೆದುಕೊಳ್ಳಬೇಕು ಹಾಗೂ ತಮ್ಮ ಮಿತಿಗಳನ್ನು ತಿಳಿದವರೇ ಆಗಿರುತ್ತಾರೆ. ಅದನ್ನು ಮೀರಿದ ಅಶಿಸ್ತಿನ ನಡುವಳಿಕೆಗೆ ನಿಯಮಗಳಿವೆ ಹಾಗೂ ಅದರ ಪ್ರಕಾರ ಅದೇಷ್ಟೇ ದೊಡ್ಡ ಆಟಗಾರನಾಗಿದ್ದರೂ ತಲೆ ಬಾಗಬೇಕಾಗುತ್ತದೆ

ಮಾ.ಕ-  ಮ್ಯಾಚ್ ರೆಫರಿ ಆಗಲಿ ಯಾವುದಾದರೂ ನಿರ್ದಿಷ್ಟವಾದ ಅರ್ಹತೆ ಇದೆಯೇ?
ಮಿಥುನ್ - ಹೌದು, ರೆಫರಿ ಆಗಬಯಸುವವರು ಕನಿಷ್ಠ ೨೦ ರಣಜಿ ಪಂದ್ಯಗಳನ್ನಾದರು ಆಡಿರಲೇ ಬೇಕಾಗುತ್ತದೆ.

ಮಾ.ಕ- ಇಂದಿನ ದಿನಗಳಲ್ಲಿ ಮ್ಯಾಚ್ ರೆಫರಿ ಹುದ್ದೆಯ ಸವಾಲುಗಳೇನು?
ಮಿಥುನ್ – ಈಗ ಪ್ರತಿ ಪಂದ್ಯವೂ ಕ್ಯಾಮರಗಳಲ್ಲಿ ಚಿತ್ರೀಕರಣವಾಗುತ್ತದೆ. ಇದರಿಂದ ಅನುಕೂಲದೊಂದಿಗೆ ಒತ್ತಡವೂ ಇರುತ್ತದೆ. ಪಂದ್ಯದ ಪ್ರತಿ ಕ್ಷಣವನ್ನೂ ಗಮನಿಸಲು ಕ್ಯಾಮರಗಳು ಸಹಾಯಕ. ಅದೇ ನಿಟ್ಟಿನಲ್ಲಿ ನಮ್ಮಿಂದ ಯಾವುದೇ ಒಂದು ಲೋಪವಾದರೆ ಬೇರೆಯವರು ಅದನ್ನು ಎತ್ತಿ ತೋರಿಸುವ ಸಂಭವವೂ ಇದೆ.

ಮಾ.ಕ-  ಇನ್ನೂ ನಿಮ್ಮ ಕ್ರಿಕೆಟ್ ಜೀವನಕ್ಕೆ ಬಂದರೆ, ಪಾದಾರ್ಪಣೆ ಮಾಡಿದ ಮೊದಲ ವರ್ಷದಲ್ಲಿ ಅತಿ ಹೆಚ್ಚು ರನ್ನುಗಳನ್ನು ಹೊಡೆದ ದಾಖಲೆ ೧೭ ವರ್ಷಗಳಿಂದ ನಿಮ್ಮ ಹೆಸರಲ್ಲಿದೆ. ಆಟಗಾರನಾಗಿ ನಿಮ್ಮ ಆರಂಭದ ವರ್ಷಗಳ ಬಗ್ಗೆ ಹೇಳಿ?
ಮಿಥುನ್ – ಕ್ರಿಕೆಟ್ ಕುಟುಂಬ ಹಿನ್ನಲೆಯಿಂದ ಬಂದವರಿಗೆ ಏರುಪೇರುಗಳು ಸಹಜ. ನಾನಾಡಿದ ಮೊಟ್ಟ ಮೊದಲ ಪಂದ್ಯದಲ್ಲಿ ಶತಕಗಳಿಸಿದ್ದೆ. ನನಗಾಗ ೧೩ ವರ್ಷ. ನಂತರ ಎಲ್ಲಾ ವಯೋಮಾನದ ತಂಡಗಳಲ್ಲೂ ನಾನು ಆಡಿದ್ದೇನೆ. ಕಿರಿಯರ ತಂಡದಲ್ಲಿ ದ್ವಿಶತಕ ಬಾರಿಸಿದ್ದು ನನಗೆ ರಣಜಿ ಪ್ರವೇಶಿಸಲು ಸಹಕಾರಿಯಾಯಿತು. ರಣಜಿ ತಂಡಕ್ಕೆ ಆಯ್ಕೆಯಾದ ಮೊದಲ ವರ್ಷ ನನಗೆ ಆಡಲು ಅವಕಾಶವೇ ಸಿಗಲಿಲ್ಲ. ನನ್ನ ತಂದೆ ಆಗ ತಂಡದ ಕೋಚ್ ಆಗಿದ್ದರು. ನನಗಿಂತ ಹಿಂದೆ ಬಂದವರಿಗೆಲ್ಲಾ ನನಗಿಂತ ಮುಂಚೆ ಅವಕಾಶ ಸಿಕ್ಕಿದು ನೋಡಿಯೂ ನನಗೆ ಏನೂ ಅನಿಸಲಿಲ್ಲ ಎಂದು ನಾನು ಹೇಳಿದರೆ ಅದು ಸುಳ್ಳಾಗುತ್ತದೆ. ಈಗ ಹಿಂದಿರುಗಿ ನೋಡಿದರೆ ನನ್ನ ತಂದೆಯ ಹುದ್ದೆಯ ಬಗ್ಗೆ ನನಗೇನು ಹೊಟ್ಟೆಕಿಚ್ಚಿಲ್ಲ. ಅವರದು ನಿಜಕ್ಕೂ ಕಷ್ಟದ ಕೆಲಸವೇ. ಆ ಕಷ್ಟದ ದಿನಗಳೇ ನನಗೆ ಮುಂದೆ ಅವಕಾಶ ಸಿಕ್ಕಾಗ ದಾಖಲೆಯ ರನ್ನು ಗಳಿಸಲು ಪ್ರೇರಣೆಯಾಯಿತು.

ಮಾ.ಕ- ನಿಮ್ಮ ಅಂದಿನ ಸಾಮರ್ಥ್ಯದ ಹಿನ್ನಲೆಯಲ್ಲಿ ನೋಡಿದಾಗ, ನೀವು ಕ್ರಿಕೆಟ್‌ನಲ್ಲಿ ಇನ್ನಷ್ಟು ಸಾಧಿಸಬಹುದಿತ್ತು ಎನಿಸುವುದಿಲ್ಲವೇ? ಅಂದು ನೀವು ಎದುರಿಸಿದ ಸವಾಲುಗಳೇನು?
ಮಿಥುನ್ – ಹೌದು, ನಾನು ಇನ್ನಷ್ಟು ಸಾಧಿಸಬಹುದಿತ್ತು. ಆದರೆ ಅಂದು ನಾನು ಎಸ್. ಎಸ್. ದಾಸ್, ಆಕಾಶ್ ಚೋಪ್ರ, ಸೆಹ್ವಾಗ್, ಗೌತಮ್ ಗಂಭೀರ ಮುಂತಾದವರೊಂದಿಗೆ ಸ್ಪರ್ಧೆಯಲ್ಲಿದ್ದೆ. ಅವರ ಸಾಧನೆಗಳೇನು ಎಂಬುದು ಈಗ ಎಲ್ಲರಿಗೆ ತಿಳಿದಿದೆ. ಆದರಿಂದ ನನಗೆ ಯಾವುದೇ ರೀತಿಯ ವಿಷಾದವಿಲ್ಲ.

ಮಾ.ಕ- ಇಂದಿನ ಕ್ರಿಕೆಟ್ ಬದಲಾಗಿದೆಯೇ?
ಮಿಥುನ್ – ಖಂಡಿತ. ಅಂದು ೨೫೦ ರಿಂದ ೨೭೫ ರನ್ನುಗಳು ಸ್ಪರ್ಧಾತ್ಮಕವಾಗಿದ್ದವು, ಇಂದು ೧೮೦ ರನ್ನುಗಳನ್ನು ೨೦ ಓವರುಗಳಲ್ಲಿ ಚಚ್ಚಿ ಬಿಸಾಡುತ್ತಾರೆ. ಹೆಚ್ಚು ರನ್ನುಗಳು, ರಂಗು ರಂಗಿನ ಬಟ್ಟೆ, ಅಡ್ಡಾದಿಡ್ಡಿ ಹೊಡೆತಗಳು ಎಲ್ಲಾ ಸೇರಿ ಕ್ರಿಕೆಟ್ ಮನೋರಂಜನೆಯ ಮಾಧ್ಯಮವಾಗಿದೆ. ಮೊದಲ ಎಸೆತದಿಂದಲೇ ಮನೋರಂಜನೆ. ಸಾಂಪ್ರದಾಯಿರಿಗೆ ಟೆಸ್ಟ್ ಕ್ರಿಕೆಟ್ ಇಷ್ಟ. ಅದರಲ್ಲಿ ಅಂತಹ ಬದಲಾವಣೆ ಆಗಿಲ್ಲ.

ಮಾ.ಕ- ಈಗಿನ ನಿಮ್ಮ ಮೆಚ್ಚಿನ ಕ್ರಿಕೆಟಿಗರು?
ಮಿಥುನ್ – ವಿರಾಟ್ ಕೊಹ್ಲಿ, ಡೇವಿಡ್ ವಾರ್ನರ್, ಏ.ಬಿ.ಡಿವಿಲಿಯರ್ಸ್ ಹಾಗೂ ಜೋ ರೂಟ್

ಮಾ.ಕ- ಕ್ರಿಕೆಟ್ ಆಡುವುದನ್ನು ಬಿಟ್ಟು ಈ ರಂಗದಲ್ಲಿ ಯುವಕರಿಗೆ ಬೇರೆ ಉದ್ಯೋಗಾವಕಾಶಗಳು ಇವೆಯೇ?
ಮಿಥುನ್ – ನಿಮ್ಮ ಅಭಿರುಚಿಗೆ ತಕ್ಕಂತೆ ಅನೇಕ ಅವಕಾಶಗಳಿವೆ. ವೀಕ್ಷಕ ವಿವರಣೆ, ಅಂಪೈರ್, ಸ್ಕೋರರ್, ಅಂಕಣ ತಯಾರಿಕೆ, ದೈಹಿಕ ಸಲಹೆಗಾರರು, ಕ್ಯಾಮರಾ ಮೆನ್, ಮಾಧ್ಯಮ ಪ್ರತಿನಿಧಿ ಹೀಗೆ ಅನೇಕ ಅವಕಾಶಗಳಿವೆ.

ಮಾ.ಕ- ವಂದನೆಗಳು ಮಿಥುನ್. ನಿಮ್ಮ ಹುದ್ದೆ ಅಂತರಾಷ್ಟ್ರೀಯ ಪಂದ್ಯಗಳಿಗೂ ಆದಷ್ಟು ಬೇಗ ವಿಸ್ತಾರಗೊಳ್ಳಲಿ ಎಂದು ಹಾರೈಸುತ್ತೇವೆ.
ಮಿಥುನ್ - ನಿಮ್ಮ ಹಾರೈಕೆಗೆ ಹಾಗೂ ಈ ಸಂವಾದಕ್ಕಾಗಿ ವಂದನೆಗಳು. ದೇವರು ಎಲ್ಲರಿಗೂ ಒಳ್ಳೆಯದನ್ನು ಮಾಡಲಿ.

Wednesday, 20 September 2017

ಸುರಾಗ್‍


ಕನ್ನಡ ಕ್ರೈಸ್ತ ವಲಯದಲ್ಲಿ ಸಾಂಸ್ಕೃತಿಕವಾಗಿ, ಸಾಹಿತ್ಯ ಸಂಗೀತದಲ್ಲಿ ಹಲವಾರು ಪ್ರತಿಭಾವಂತರು ತೊಡಗಿಸಿಕೊಂಡಿದ್ದರೂ ತೀರ ವೃತ್ತಿಯಾಗಿ ತೊಡಗಿಸಿಕೊಂಡವರು ಹಾಗೂ ಅದರಲ್ಲಿ ಯಶಸ್ಸು ಕಂಡವರು ವಿರಳ. ಕನ್ನಡ ಚಿತ್ರರಂಗದಲ್ಲಿ ತಮ್ಮ ಛಾಪನ್ನು ಮೂಡಿಸಿದ ಕ್ರೈಸ್ತರ ಸಂಖ್ಯೆ ಕಡಿಮೆಯೇ ಎನ್ನಬಹುದು.

ಅಂಥಹ ವಿರಳರಲ್ಲಿ ಸಾಧು ಕೋಕಿಲ ಒಬ್ಬರು. ಸಾಧು ಶೀಲನ್ ಎಂದೇ ೮೦-೯೦ರ ದಶಕದಲ್ಲಿ ತಮ್ಮ ಸಂಗೀತದ ಮೂಲಕ ಕನ್ನಡ ಕ್ರೈಸ್ತ ವಲಯದಲ್ಲಿ ಸುಪ್ರಸಿದ್ಧರಾಗಿದ್ದವರು ಸಾಧು. ಅವರು ವಾದ್ಯ ಸಂಯೋಜಿಸಿದ ಅನೇಕ ಧ್ವನಿಸುರಳಿಗಳು, ಗೀತೆಗಳು ಇಂದಿಗೂ ಕನ್ನಡ ಜನ ಮನಗಳಲ್ಲಿ ಬೆರೆತು ಹೋಗಿದೆ.

ಇಂಥ ಸಾಧು ಶೀಲನ್ ೧೯೯೪ರಲ್ಲಿ ’ಶ್’ ಚಿತ್ರದ ಮೂಲಕ ಸಾಧು ಕೋಕಿಲರಾಗಿ ಪೂರ್ಣ ಪ್ರಮಾಣದ ಸಂಗೀತ ನಿರ್ದೇಶಕರಾಗಿ ಕನ್ನಡ ಚಿತ್ರರಂಗಕ್ಕೆ ದಾಪುಗಾಲಿಟ್ಟರು. ಚಿತ್ರರಂಗಕ್ಕೆ ಬಂದ ಈ ಎರಡು ದಶಕಗಳಲ್ಲಿ ಸಾಧುರವರ ಸಾಧನೆ ಸಾಮಾನ್ಯವೇನ್ನಲ್ಲ. ಶ್, ಗಂಡುಗಲಿ, ರಕ್ತ ಕಣ್ಣೀರು, H2O, ಟೋನಿ, ಇಂತಿ ನಿನ್ನ ಪ್ರೀತಿಯ, ಎದೆಗಾರಿಕೆ, ಮಾಸ್ತಿ ಗುಡಿ ಮುಂತಾದ ಅನೇಕ ಹಿಟ್ ಚಿತ್ರಗಳ ಸಂಗೀತ ನಿರ್ದೇಶನ ಒಂದು ಕಡೆ. ಮತ್ತೊಂದು ಕಡೆ ನಿರ್ದೇಶನದಲ್ಲೂ ನಿರ್ಮಾಪಕನಾಗಿಯೂ ಸಾಧುರವರ ಸಾಧನೆ ದಾಖಲಾರ್ಹ. ಸಂಗೀತ ನಿರ್ದೇಶನ ಮಾತ್ರವಲ್ಲದೆ, ಹಿನ್ನಲೆ ಸಂಗೀತ, ರೀರೆಕಾರ್ಡಿಂಗ್‍ನಲ್ಲೂ ಸಾಧುರವರದು ದೊಡ್ಡ ಹೆಸರು.

ಆದರೆ ಇಂದು ಇದೆಕ್ಕೆಲ್ಲಾ ಮಿಗಿಲಾಗಿ ಹಾಸ್ಯ ನಟನಾಗಿ ಬೆಳೆದು ನಿಂತಿರುವ ಪರಿ ಅಚ್ಚರಿ ಮೂಡಿಸುವಂಥದು. ಇಂದು ಯಾವುದೇ ಜನಪ್ರಿಯ ನಾಯಕ ನಟನಿಗೆ ಸಿಗುವ ಸಿಳ್ಳೆ, ಚಪ್ಪಾಳೆ, ಕೇಕೆಯ ಸ್ವಾಗತ ಸಾಧು ಕೋಕಿಲ ತೆರೆಯ ಮೇಲೆ ಬಂದಾಗ ಸಿಗುತ್ತದೆ ಎನ್ನುವುದು ಸುಳ್ಳಲ್ಲ.
ಇದರ ನಡುವೆ ಸಾಧುರವರು ಸಂಗೀತ ಕ್ಷೇತ್ರದಲ್ಲೇ ಇನ್ನಷ್ಟು ಹೆಚ್ಚು ಹೆಚ್ಚಾಗಿ ತೊಡಗಿಸಿಕೊಳ್ಳಬೇಕೆನ್ನುವುದು ಅವರ ಅಭಿಮಾನಿಗಳೆಲ್ಲರ ಬೇಡಿಕೆ. ಎಸ್ಪಿ ಬಾಲಸುಬ್ರಮಣಿಯಮ್‍ರಂಥ ದಿಗ್ಗಜರೇ ಈ ಮಾತನ್ನು ಕಾರ್ಯಕ್ರಮವೊಂದರಲ್ಲಿ ಹೇಳಿರುವುದನ್ನು ನಾವು ಕೇಳಿದ್ದೇವೆ.
ಈ ನಿರಾಸೆ, ಕೊರಗನ್ನು ನೀಗಸಲೆಂಬಂತೆ ಅವರ ಮಗ ಸುರಾಗ್ ಈಗ ಸ್ವತಂತ್ರವಾಗಿ ಸಂಗೀತ ನಿರ್ದೇಶನಕ್ಕೆ ಇಳಿದಿದ್ದಾರೆ. ಮಹೇಶ್ ಬಾಬು ನಿರ್ದೇಶನದ, ಚೇತನ್ ಅಭಿನಯದ ’ಅತಿರಥ’ ಚಿತ್ರ ಅವರ ಸಂಗೀತ ನಿರ್ದೇಶನ ಮೊದಲ ಚಿತ್ರವಾಗಿದೆ. ಪುನೀತ್ ರಾಜ್‍ಕುಮಾರ್ ಸೇರಿದಂತೆ ಚಿತ್ರರಂಗದ ಅನೇಕ ಗಣ್ಯರ ನಡುವೆ ’ಅತಿರಥ’ ಚಿತ್ರದ ಆಡಿಯೋ ಲಾಂಚ್ ಆಗಿದೆ. ಸಾಧು ಕೋಕಿಲ ಮಗನ ಸಂಗೀತ ನಿರ್ದೇಶನ ಎಂಬ ನಿರೀಕ್ಷೆಯ ಭಾರವನ್ನು ಹೊತ್ತುಕೊಳ್ಳಬೇಕಾದ ಅನಿವಾರ್ಯತೆ ಸುರಾಗ್ ಮೇಲಿದೆ. ಬಿಡುಗಡೆ ಆದ ಹಾಡುಗಳು ಈಗಾಗಲೇ ಯೂಟ್ಯೂಬ್‍ನಲ್ಲಿ ಸದ್ದು ಮಾಡುತ್ತಿದೆ. ಸುರಾಗ್‍ನ ವಯೋಸಹಜ ಲವಲವಿಕೆ, ಹೊಸತನ, ಪ್ರಯೋಗಾತ್ಮಕ ಮನಸ್ಸು ಚಿತ್ರದ ಹಾಡುಗಳಲ್ಲಿ ಕಾಣುತ್ತದೆ. ಯುವ ಸಂಗೀತ ಪ್ರೇಮಿಗಳನ್ನು ಸೆಳೆಯುವಂತ ರಾಗ ಸಂಯೋಜನೆ ಇಲ್ಲಿರುವುದರಿಂದ ಹಾಡುಗಳು ಯಶಸ್ವಿಯಾಗಬಹುದೆಂಬ ಭರವಸೆ ಇದೆ.

ಈ ಹಿನ್ನಲೆಯಲ್ಲಿ ಮಾತುಕತೆಯ ಪರವಾಗಿ ಸುರಾಗ್‍ನನ್ನು ಭೇಟಿ ಮಾಡಲು ಹೋದಾಗ ಊಟದ ಸಮಯ ಮೀರಿತ್ತು. ಆದರೆ ಹಸಿವಿನ ಪರಿವಿರಲಿಲ್ಲ. ಈಗಲೇ ಹತ್ತಾರು ಮೊಬೈಲು ಕರೆಗಳನ್ನು ಸ್ವೀಕರಿಸುವ ಅನಿವಾರ್ಯತೆಯ ನಡುವೆಯೂ ಬೇಸರದ ಯಾವುದೇ ಸುಳಿವಿರಲಿಲ್ಲ. ದನಿಯಲ್ಲಿ ವಿನಯದ ಅಚ್ಚು. ತುಟಿ ಮೇಲಿನ ನಗುವಿಗೆ ಹಾಗೂ ಮಾತಲ್ಲಿ ಆತ್ಮೀಯತೆಗೆ ಕೊರತೆಯಿಲ್ಲ. ಒಟ್ಟಿನಲ್ಲಿ ಸುಲಭವಾಗಿ ಬೆರೆಯಬಲ್ಲ, ಮಾತಿಗಿಳಿದರೆ ನಿರ್ರಗಳವಾಗಿ ಹರಿಯುವ, ವಯಸ್ಸಿಗೆ ತಕ್ಕ ಧಾರ್ಮಿಕ ಪ್ರಶ್ನೆ-ಗೊಂದಲಗಳಿರುವ, ಸ್ಪಷ್ಟವಾದ ಯೋಚನೆ, ನಿಲುವುಗಳಿರುವ ಯುವಕನಂತೆ ಸುರಾಗ್ ಕಂಡರು.

ಇದೇ ಧಾಟಿಯಲ್ಲಿ ಕೂತು ಮಾತಾಡಿದಾಗ ಹಂಚಿಕೊಂಡ ಕೆಲವು ಸಂಗತಿಗಳು ಹೀಗಿವೆ –

ಪ್ರಶ್ನೆ – ನಮಸ್ಕಾರ ಸುರಾಗ್. ಮೊದಲಿಗೆ ಸ್ವತಂತ್ರ ನಿರ್ದೇಶಕರಾಗಿ ಪಾದಾರ್ಪಣೆ ಮಾಡುತ್ತಿರುವ ನಿಮಗೆ ಮಾತುಕತೆ ಹಾಗೂ ಕನ್ನಡ ಕ್ರೈಸ್ತರ ಪರವಾಗಿ ಅಭಿನಂದನೆಗಳು.
ಸುರಾಗ್ – ತುಂಬಾ ಥ್ಯಾಂಕ್ಸ್, ನನ್ನ ಮೇಲೆ ಪ್ರೀತಿ ಇಟ್ಟು ಬಂದಿದ್ದಕ್ಕೆ.

ಪ್ರಶ್ನೆ – ಹೇಳಿ  ಸುರಾಗ್, ’ಅತಿರಥ’ದ ಈ ಹೆಜ್ಜೆ ಎಲ್ಲಿಂದ ಪ್ರಾರಂಭವಾಯಿತು ?
ಸುರಾಗ್ – ನಾನು ನಮ್ಮ ತಂದೆಯವರ ಜೊತೆ ಅನೇಕ ಚಿತ್ರಗಳಲ್ಲಿ ಕೆಲಸ ಮಾಡಿಕೊಂಡು ಬರುತ್ತಿದ್ದೆ. ಇತ್ತೀಚಿನ ’ಮಾಸ್ತಿ ಗುಡಿ’ ಚಿತ್ರಕ್ಕೆ ನಾನು ಸಹಾಯಕನಾಗಿ ಕೆಲಸ ಮಾಡುವಾಗ, ಸ್ಟುಡಿಯೋಗೆ ಬರುತ್ತಿದ್ದ ನಿರ್ದೇಶಕ ಮಹೇಶ್ ಬಾಬು ನನ್ನ ಕೆಲಸ ನೋಡಿದ್ದರು. ಅವರು ನಿರ್ದೇಶಿಸಲಿದ್ದ ’ಅತಿರಥ’ ಚಿತ್ರಕ್ಕೆ ಸಂಗೀತ ನೀಡಲು ನನಗೆ ಅಹ್ವಾನ ಕೊಟ್ಟರು. ಒಪ್ಪಿಕೊಂಡೆ. ಜೊತೆಗೆ ನಿರ್ಮಾಪಕರಾದ ಪ್ರೇಮ್ ಹಿಂದೆ ನಮ್ಮ ಜನಧಾರೆ ತಂಡದಲ್ಲಿದ್ದರಂತೆ. ಹೀಗೆ ಎಲ್ಲವೂ ಕೂಡಿ ಬಂತು.

ಪ್ರಶ್ನೆ – ಸಂತೋಷ, ಆದರೆ ನಿಮಗಿನ್ನು  ೨೨ ವರ್ಷ. ನಿಮಗೆ ಈ ಚಿತ್ರಕ್ಕೆ ಅವಕಾಶ ಬಂದಾಗ ನಾನಿನ್ನು ಚಿಕ್ಕವನು ಎಂಬ ಅಳುಕೇನಾದರೂ ಇತ್ತೇ?
ಸುರಾಗ್ – ಆ ಥರದ ಅಳುಕು ಈಗಲ್ಲ, ಐದು ವರ್ಷದ ಹಿಂದೆ ಇತ್ತು.  ಸುಮಾರು ೫ ವರ್ಷದ ಹಿಂದೆಯೇ ನನಗೆ ನಿರ್ದೇಶಕ ನಾಗಶೇಖರ್ ತಮ್ಮ ’ಗಡಿಯಾರ’ ಎಂಬ  ಚಿತ್ರಕ್ಕೆ ಅವಕಾಶ ನೀಡಿದ್ದರು. ಆಗ ನನಗಿನ್ನು ೧೭. ಆಗ ಸ್ವಲ ಅಳುಕಿತ್ತು. ಆದರೆ ಆ ಚಿತ್ರ ಟೇಕ ಆಫ್ ಆಗಲಿಲ್ಲ. ಈಗ ಅವಕಾಶ ಬಂದಾಗ ಏನೂ ಅನಿಸಲಿಲ್ಲ. ಐ ವಾಸ್ ಕಾನ್‍ಫಿಡೆಂಟ್. ಯಾಕಂದ್ರೆ ಈ ಐದು ವರ್ಷಗಳಲ್ಲಿ ಸಾಕಷ್ಟು ಚಿತ್ರಗಳ ಸಂಗೀತ, ರೀರೆಕಾರ್ಡಿಂಗ್‍ನಲ್ಲಿ ತೊಡಗಿಸಿಕೊಂಡಿದ್ದೇನೆ.

ಪ್ರಶ್ನೆ – ನೀವು ಕಾನ್‍ಫಿಡೆಂಟ್ ಆಗಿದ್ರೂ, ವಯಸ್ಸಿನ ದೃಷ್ಟಿಯಿಂದ ಅನುಭವಿಗಳ, ಹಿರಿಯರ ಮಧ್ಯೆ ಸ್ವಲ್ಪ ತೊಡಕುಗಳ ಅನುಭವ ಆಗಿರಬೇಕಲ್ಲವೇ?
ಸುರಾಗ್ – ಹೌದು, ಒಮ್ಮೊಮ್ಮೆ ಈ ರೀತಿಯ ಸನ್ನಿವೇಶಗಳನ್ನು ಅನುಭವಿಸಬೇಕಾಗುತ್ತದೆ. ಆದರೆ ನಾನು ಅದಕ್ಕೆ ಹೊಂದಿಕೊಂಡಿದ್ದೇನೆ, ಏಕೆಂದರೆ ನಾನಿನ್ನು ಚಿಕ್ಕವನು. ಆದರೆ ನಮ್ಮ ವಯಸ್ಸಿಗಿಂತ ನಾವು ವರ್ಕ್ ಮಾಡೋ ರೀತಿ ಆ ರೀತಿಯ ಡೌಟ್‍ಗಳನ್ನು ನಿಧಾನವಾಗಿ ತೆಗೆಸಿಬಿಡುತ್ತದೆ. ಅದರಲ್ಲೂ ನಮ್ಮ ಜೊತೆ  ಕೆಲಸ ಮಾಡೋ ಮ್ಯೂಸಿಷ್ಯನ್ಸ್, ಟೆಕ್ನಿಷಿಯನ್ಸ್‍ರ ವಿಶ್ವಾಸಗಳಿಸಿಕೊಂಡರೆ ನಮ್ಮ ಕೆಲಸ ಸುಲಭವಾಗುತ್ತದೆ. ನನಗೆ ಈ ಚಿತ್ರದಲ್ಲಿ ನಮ್ಮ ನಿರ್ದೇಶಕರ ನಿರ್ಮಾಪಕರ ಸಂಪೂರ್ಣ ಬೆಂಬಲವಿದ್ದಿದ್ದರಿಂದ ಏನೂ ತೊಂದರೆ ಆಗಲಿಲ್ಲ.

ಪ್ರಶ್ನೆ – ನಿಮ್ಮದು ಎರಡೂ ಕಡೆಯಿಂದ ಸಂಗೀತದ ಕುಟುಂಬ. ತಂದೆಯ ಕಡೆ ಹಾಗೂ ತಾಯಿಯ ಕಡೆಯ ಕುಟುಂಬಗಳು ಸಂಗೀತದಲ್ಲೇ ಮುಳುಗಿದೆ, ಆದರೂ ನಿಮ್ಮ ಸಂಗೀತದ ಪಯಣ ಮೊದಲು ಎಲ್ಲಿಂದ ಪ್ರಾರಂಭವಾಯಿತು ಎಂಬ ನೆನಪಿದೆಯೇ?
ಸುರಾಗ್ – ನೀವು ಹೇಳಿದ ಹಾಗೆ ನಮ್ಮದು ಸಂಗೀತಮಯ ಕುಟುಂಬ. ತಂದೆ ಸಂಗೀತದಲ್ಲೇ ಮುಳುಗಿರುತ್ತಿದ್ದರು. ಇತ್ತ ತಾತ, ದೊಡ್ಡಪ್ಪ, ಮಾವ, ಅತ್ತೆಯಂದಿರು ಎಲ್ಲರೂ ಸಂಗೀತದಲ್ಲಿ ತೊಡಗಿಕೊಂಡವರೇ. ಇದಕ್ಕಿಂತ ಮುಖ್ಯವಾಗಿ ನಾವು ಚರ್ಚುಗಳಲ್ಲಿ ಸಾಂಸ್ಕೃತಿಕವಾಗಿ, ಸಂಗೀತದ ವಾತವಾರಣದಲ್ಲಿ ತೊಡಗಿಕೊಂಡು ಬಂದಿರುತ್ತೇವೆ. ಇದೆಲ್ಲವೂ ನನ್ನ ಸಂಗೀತದ ಪಯಣದಲ್ಲಿ ಸಹಕಾರಿಯಾಗಿದೆ. ನಾನು ಎರಡು ಮೂರು ವರ್ಷವಿರುವಾಗಲೇ ನನ್ನ ತಂದೆ ತಾಯಿ ನನಗೆ ಕೀಬೋರ್ಡ್ ಶಿಕ್ಷಣಕ್ಕೆ ಏರ್ಪಾಡು ಮಾಡಿದ್ದರು.

ಪ್ರಶ್ನೆ – ಮುಂದೆ?
ಸುರಾಗ್ – ಮುಂದೆ ನಮ್ಮ ತಂದೆ ಜೊತೆಯಲ್ಲಿ ರೀರೆಕಾರ್ಡಿಂಗ್‍ಗಳಿಗೆ, ಸ್ಟುಡಿಯೋಗೆ ಹೋಗಲು ಪ್ರಾರಂಭಿಸಿದೆ. ಸಂಗೀತ ಸಂಯೋಜನೆ ಪೂರ್ಣವಾಗಿ ಡಿಜಿಟಲ್ ಆದಾಗ ನನಗೆ ಮತ್ತಷ್ಟು ಆಸಕ್ತಿ ಮೂಡಿತು. ಕಂಪ್ಯೂಟರ್ನಲ್ಲಿ ಸಹಾ ಆಸಕ್ತಿ ಇದಿದ್ದರಿಂದ ನಾನೇ  ಕೀ ಬೋರ್ಡ್ ಹಾಗೂ ಕಂಪ್ಯೂಟರ್ ಇಟ್ಟುಕೊಂಡು ಸಂಯೋಜಿಸಲು ಶುರು ಮಾಡಿದೆ. ನಿಧಾನವಾಗಿ ನನ್ನ ಪ್ರಯೋಗಗಳು ನನಗೇ ಇಷ್ಟವಾಗ ತೊಡಗಿತು.   ೧೨ನೇ ತರಗತಿ ಆದ ಮೇಲೆ ಪೂರ್ಣವಾಗಿ ಇದೇ ಕ್ಷೇತ್ರಕ್ಕೆ ಇಳಿದುಬಿಟ್ಟೆ.
ಪ್ರಶ್ನೆ – ಸಂಗೀತದಲ್ಲಿ ಯಾವ ಯಾವ ರೀತಿ ಪ್ರಿಪೇರ್ ಆಗಿದ್ದೀರಿ?
ಸುರಾಗ್ – ನಾನು ವೆಸ್ಟರ್ನ್ ಕ್ಲಾಸಿಕಲ್‍ನಲ್ಲಿ ಪರಿಣಿತಿ ಪಡೆದಿದ್ದೇನೆ. ಜೊತೆಗೆ ಸೌಂಡ್ ಎಂಜನಿಯರಿಂಗ್ ನನಗೆ ಇಷ್ಟ. ಅದರ ಬಗ್ಗೆಯೂ ಸಾಕಷ್ಟು ತಿಳಿದುಕೊಂಡಿದ್ದೇನೆ. ಆದರೆ ಕಲಿಯುವುದು ಬಹಳ ಇದೆ. ಜೇಮ್ಸ್ ಅಂತ ಗುರುಗಳೂ ಸೇರಿದಂತೆ ಸುಮಾರು ಜನ ಗುರುಗಳು ನನ್ನನ್ನು ಸಂಗೀತದಲ್ಲಿ ಕೈ ಹಿಡಿದು ನಡೆಸಿದ್ದಾರೆ.

ಪ್ರಶ್ನೆ – ಈಗ ನಿಮ್ಮ ಮುಂದಿರುವ ಸವಾಲುಗಳು?
ಸುರಾಗ್ -  ಇರುವುದು ಏಳೇ ಸ್ವರಗಳಾಗಿರುವುದರಿಂದ ಅವುಗಳನ್ನೇ ಎಷ್ಟು ಚೆನ್ನಾಗಿ ಪ್ರೆಸೆಂಟ್ ಮಾಡುತ್ತೇವೆ ಎನ್ನುವುದು ಮುಖ್ಯವಾಗುತ್ತದೆ. ಅದು ಸೌಂಡಿಂಗ್‍ಯಿಂದ , ಸೋನಿಕಲಿ ಹೇಗೆ ಕಿವಿಗೆ ಇಂಪಾಗಿ, ಆಕರ್ಷಕವಾಗಿ ಕೇಳೋ ಹಾಗೆ ಮಾಡಬೇಕು ಎನ್ನುವ ಸವಾಲು ನಮ್ಮ ಮುಂದಿದೆ.

ಪ್ರಶ್ನೆ – ನಿಮ್ಮ ಅತಿ ಹತ್ತಿರದ ಸ್ಪೂರ್ತಿ ನಿಮ್ಮ ತಂದೆ. ಅವರನ್ನು ಬಿಟ್ಟರೆ ನಿಮ್ಮನ್ನು ಪ್ರೇರೇಪಿಸಿದಂತ ಸಂಗೀತಗಾರರು ಯಾರು?
ಸುರಾಗ್ – ಮೈಕಲ್ ಜಾಕ್ಸನ್‍ರವರ ಸಂಗೀತ ಹಾಗೂ ಸಂಯೋಜನೆಗಳ ಅಭಿಮಾನಿ ನಾನು. ಇಲ್ಲಿ ಇಳಯರಾಜರವರು ನನಗೆ ಬಹಳ ಇಷ್ಟ. ಒಂದು ಕಡೆ ಮಧುರವಾದ ಟ್ಯೂನ್ ಮತ್ತೊಂದು ಕಡೆ ಅದಕ್ಕೆ ಅವರು ನೀಡುವ ಸೌಂಡಿಂಗ್ ಅದ್ಭುತವಾಗಿರುತ್ತದೆ. ನಮ್ಮ ರಾಗಗಳಿಗೆ ಪಾಶ್ಚಾತ್ಯದ ಸ್ಪರ್ಶ ನೀಡುವುದರಲ್ಲಿ ಅವರದು ಎತ್ತಿದ ಕೈ. ಕನ್ನಡದಲ್ಲಿ ಜಿ.ಕೆ.ವೆಂಕಟೇಶ್‍ರವರ ಹಾಡುಗಳ ನನಗೆ ಬಹಳ ಇಷ್ಟ.

ಪ್ರಶ್ನೆ -  ಮುಂದಿನ ಯೋಜನೆಗಳು
ಸುರಾಗ್ – ಅವಕಾಶಗಳು ಬರುತ್ತಿದೆ. ಆಯ್ಕೆ ನಡೆಯುತ್ತಿದೆ. ನಮ್ಮದೇ ನಿರ್ಮಾಣದ ಚಿತ್ರವೊಂದಕ್ಕೆ ಸಂಗೀತ ನೀಡಲಿದ್ದೇನೆ. ಜಾಗ್ವಾರ್ ಖ್ಯಾತಿಯ ನಿಖಿಲ್ ಅವರೊಂದಿಗೆ ಸೇರಿ ವಿಡಿಯೋ ಆಲ್ಬಂವೊಂದು ಸಿದ್ಧವಾಗುತ್ತಿದೆ.

ಪ್ರಶ್ನೆ – ನಿಮ್ಮ ಇಡೀ ಕುಟುಂಬದೊಡನೆ ನೀವೂ ಚರ್ಚ್ ಚಟುವಟಿಕೆಗಳಲ್ಲಿ ತೊಡಗಿಕೊಂಡವರು, ಇನ್ನೂ ಬ್ಯೂಸಿ ಆಗಲಿದ್ದೀರಿ, ಚರ್ಚ್ ಚಟುವಟಿಕೆಗಳು?
ಸುರಾಗ್ – ನಾನು ನನ್ನ ತಾಯಿಯ ಜೊತೆ ಬರುತ್ತಿದೆ ಎಂಬುದನ್ನು ಬಿಟ್ಟರೆ ಅಷ್ಟೇನು ಸಕ್ರೀಯವಾಗಿರಲಿಲ್ಲ. ನಮ್ಮ ದೇವಾಲಯಕ್ಕೆ ಫಾ.ಚಸರಾ ಬಂದ ಮೇಲೆ ಧಾರ್ಮಿಕ ವಿಷಯಗಳ ಬಗ್ಗೆ ಆಸಕ್ತಿ ಬೆಳೆಯಿತು. ಅವರ ಧಾರ್ಮಿಕ ಚಿಂತನೆಗಳು ನನಗೆ ಇಷ್ಟವಾಗಿತ್ತು. ಎಷ್ಟೋ ವಿಷಯಗಳ ಬಗ್ಗೆ ಅವರೊಡನೆ ಚರ್ಚೆ ಮಾಡುತ್ತಿದ್ದೆ ಹಾಗೂ ಅದಕ್ಕೆ ಅವರು ಸ್ಪಂದಿಸುತ್ತಿದ್ದರು. ಈಗ ಅವರಿಲ್ಲ.

ಪ್ರಶ್ನೆ – ಕನ್ನಡ ಕ್ರೈಸ್ತ ಸಾಂಸ್ಕೃತಿಕ, ಧಾರ್ಮಿಕ  ಕಾರ್ಯಕ್ರಮಗಳಲ್ಲಿ ನಿಮ್ಮ ಪಾತ್ರವೇನಾದರೂ ನಿರೀಕ್ಷಿಸಬಹುದೇ?
ಈ ಪ್ರಶ್ನೆಯೊಂದಿಗೆ ನಮ್ಮ ಸಂವಾದ ಬೇರೆಯದೇ ತಿರುವುಗಳನ್ನು ಪಡೆಯಿತು. ಈಗ ಪ್ರಶ್ನೆಗಳಿಗೆ ಉತ್ತರಿಸುವ ಸರದಿ ನನ್ನದಾಯಿತು. ಕ್ರೈಸ್ತ ಧರ್ಮ, ಧಾರ್ಮಿಕತೆ, ಅದರ ಸಫಲತೆ ಹೀಗೆ ಅನೇಕ ವಿಷಯಗಳ ಬಗ್ಗೆ ವಿಸ್ತಾರವಾದ ಅರ್ಥಪೂರ್ಣ ಚರ್ಚೆಯತ್ತ ಅದು ಹೊರಳಿತು. ಕೊನೆಗೆ, ಮಕ್ಕಳು ಹಾಗೂ ಯುವ ಮನಸ್ಸುಗಳಿಗೆ ಉಪಯೋಗವಾಗುವಂತ ಕಾರ್ಯಕ್ರಮಗಳು ನಮ್ಮಲ್ಲಿ ಬಂದರೆ ಅದಕ್ಕೆ ತಮ್ಮದೇ ಆದ ರೀತಿಯಲ್ಲಿ ಕೈ ಜೋಡಿಸುತ್ತೇನೆ ಎಂಬ ಸುರಾಗರ ಭರವಸೆಯೊಂದೆಗಿ ನಮ್ಮ ಸಂವಾದ ಮುಗಿಯಿತು.

ಸಂವಾದ ಮುಗಿಸಿಕೊಂಡು ಬರುವಾಗ ಭೇಟಿಯಾದ ತಂದೆ ಸಾಧು ಕೋಕಿಲ ಹಾಗೂ ತಾಯಿ ಸೆಲಿನ್‍ರವರಿಗೆ ಮಗನ ಬಗ್ಗೆ ಸಹಜವಾದ ಹೆಮ್ಮೆ ಸಂತೋಷವಿತ್ತು. ಅದರಲ್ಲೂ ಸಾಧುರವರಲ್ಲಿ ಮಗನ ಬಗ್ಗೆ ಸಾಕ್ಷಷ್ಟು ಭರವಸೆಯಿದೆ. ಈ ಕುಟುಂಬದ ಸಂಗೀತದ ಪಯಣ ಹೀಗೆ ಮುಂದುವರಿಯಲಿ ಹಾಗೂ ಅವರ ಕನಸುಗಳು ನನಸಾಗಲಿ