Tuesday, 18 November 2014

ದೇವರ ವಿಳಂಬಗಳು ದೇವರ ನಿರಾಕರಣೆಗಳಲ್ಲ - ಭಾಗ 2

ನೀವು ಚೈನಾ ಬಿದಿರಿನ ಬೀಜವೊಂದನ್ನು ಮಣ್ಣಿನಲ್ಲಿ ನೆಟ್ಟು, ನೀರುಣಿಸಿ, ಒಂದು ವರ್ಷದ ಕಾಲ ಅದನ್ನು ಪೋಷಿಸಿದರೂ ಒಂದು ಸಣ್ಣ ಚಿಗುರೂ ಮೊಳಕೆಯೊಡೆಯುವುದಿಲ್ಲ. ಒಂದು ವರ್ಷವೇಕೆ? ಭರ್ತಿ 5 ವರ್ಷಗಳ ಕಾಲ ಯಾವುದೇ ಚಿಗುರು ಕಾಣುವುದಿಲ್ಲ. ಆದರೆ ಹಠಾತ್ತಾಗಿ ಒಂದು ದಿನ ಒಂದು ಸಣ್ಣ ಕಡ್ಡಿ ಮಣ್ಣನ್ನು ಸೀಳಿಕೊಂಡು ಹೊರ ಬಂದಿರುತ್ತದೆ. ಮುಂದಿನ 6 ವಾರಗಳಲ್ಲಿ ಅದೇ ಬಿದಿರು ಗಿಡ 90 ಅಡಿಗಳಷ್ಟು ಉದ್ದಕ್ಕೆ ಬೆಳೆಯಬಲ್ಲದು. 24 ಗಂಟೆಗಳಲ್ಲಿ  39 ಇಂಚುಗಳಷ್ಟು ಉದ್ದ ಬೆಳೆಯುಲು ಅದಕ್ಕೆ ಸಾಧ್ಯವಾಗುತ್ತದೆ. ಅಕ್ಷರಶ ನೀವು ಆ ಗಿಡ ಬೆಳಯುವುದನ್ನು ಕಣ್ಣಾರೆ ಕಾಣಬಹುದು. ಈ ಐದು ವರ್ಷಗಳಲ್ಲಿ ಬಚ್ಚಿಟ್ಟುಕೊಂಡತ್ತಿದ್ದ ಈ ಸಸಿ ಏನು ಮಾಡುತ್ತಿತ್ತು? ಅದು ತನ್ನ ಬೇರುಗಳನ್ನು ಬೆಳೆಸಿಕೊಳ್ಳುತಿತ್ತು. ಪೂರ್ತಿ 5 ವರ್ಷಗಳ ಕಾಲ ಅದು ತನ್ನ ವೇಗದ ಬೃಹತ್ ಬೆಳವಣಿಗೆಗೆ ತನ್ನನ್ನೇ ಸಿದ್ಧಗೊಳಿಸಿಕೊಳ್ಳುತಿತ್ತು. ಆ ಒಂದು ಬೇರಿನ ವ್ಯವಸ್ಥೆ ಇಲ್ಲದೆ ಆ ಗಿಡ ತನ್ನ ಮುಂದಿನ ಬೆಳವಣಿಗೆಯನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ . ಕೆಲವರು ಅ ಗಿಡ 6 ವಾರದಲ್ಲಿ 90 ಅಡಿ ಬೆಳೆಯಿತು ಎನ್ನಬಹುದು, ಆದರೆ ನಾನು ಅದು 5 ವರ್ಷ 6 ವಾರಗಳಲ್ಲಿ ಅಷ್ಟು ಎತ್ತರವಾಗಿ ಬೆಳೆಯಿತು ಎಂದು ಹೇಳುತ್ತೇನೆ. ಹಾಗೆಯೇ, ಆ ಹಂತವು ನನ್ನ ಆರಂಭಿಕ ಪಯಣದಲ್ಲಿ ನನ್ನ ಪ್ರತಿಭೆಯ ಕಡೆಗಿನ  ನನ್ನ ವಿಶ್ವಾಸವನ್ನು ನನ್ನ ಸಿದ್ಧತೆಯನ್ನು ಪರೀಕ್ಷಿಸಿತು.
  
ಒಟ್ಟಾರೆಯಾಗಿ,  ನನ್ನದು ಅತ್ಯಂತ ತೃಪ್ತಿಕರವಾದ ಕೀಡಾ ಜೀವನ. ಅನೇಕ ಏಳುಗಳ ಜೊತೆ ಹಲವಾರು ನಿರಾಸೆಗಳೂ ಇದ್ದವು. ಆಸ್ಟೇಲಿಯಾ ಪ್ರವಾಸದ ಬಳಿಕ ನನ್ನ ಆಟದ ಸಮಯ ಮುಗಿದಿದೆ ಹಾಗೂ ನಾನು 16 ವರ್ಷದ ಹಿಂದೆ ಬಂದಂತೆ, ಮುಂದಿನ ತಲೆಮಾರಿನ ಪ್ರತಿಭಾವಂತ ಯುವ ಬ್ಯಾಟ್ಸ್ ಮೆನ್ ಗಳಿಗೆ ಅವರ ಪಯಣವನ್ನು ಪ್ರಾರಂಭಿಸಲು ದಾರಿ ಮಾಡಿಕೊಡಬೇಕು ಎಂದು ಅತ್ಯಂತ ಸ್ಪಷ್ಟವಾಗಿ ಅನಿಸಲು ಪ್ರಾರಂಭಿಸಿತು. ನನ್ನ ಕುಟುಂಬ, ಸಹ ಆಟಗಾರರು ಹಾಗೂ ಗೆಳೆಯರ ನಡುವೆ ನನ್ನ ಕ್ರೀಡಾ ಜೀವನಕ್ಕೆ ತೆರೆ ಎಳೆಯಲು ಇದೇ ತಕ್ಕ ಸಮಯವೆನಿಸಿ ಸಂತೋಷದಿಂದ ನಿರ್ಧಾರ ತೆಗೆದುಕೊಂಡೆ. ನನಗೆ ಸಿಕ್ಕ ಪ್ರೀತಿ ನನ್ನ ಹೃದಯವನ್ನು  ತಟ್ಟಿದೆ. ನನಗೆ ಯಾವುದೇ ಪಶ್ಚಾತ್ತಾಪವಿಲ್ಲ, ಯಾವುದೇ ಪೂರೈಸದ ವೃತ್ತಿ ಗುರಿಗಳಿಲ್ಲ, ನನಗೆ ನಾನೇ ಸಾಬೀತು ಪಡಿಸಲು ಇನ್ನು  ಏನೂ ಉಳಿದಿಲ್ಲ. ನಾನು ಬಾಲಕನಾಗಿ ಏರಬೇಕೆಂದು ಅಂದುಕೊಂಡಿದ್ದ  ನನ್ನ ಪರ್ವತವನ್ನು ಏರಿದ್ದೇನೆ. ಏರಬೇಕೆಂದು ಕಣ್ಣಿಟ್ಟದ ಪರ್ವತವನ್ನು ಹತ್ತುವ ಪಯಣದಲ್ಲಿ ನನ್ನ ಶಾಲೆಯ ಮುಖ್ಯೋಪಾಧ್ಯಾರೂ ಸೇರಿದಂತೆ ಅನೇಕರ ಸಹಾಯ ಪಡೆದುಕೊಂಡಿದ್ದೇನೆ. ಒಬ್ಬನೇ ಕುಳಿತು ನನ್ನ ಸೋಲು ಗೆಲವುಗಳನ್ನು  ಮೆಲುಕು ಹಾಕುವಾಗ ನನ್ನ ಬಗ್ಗೆ ನಾನು ಹೆಚ್ಚು ಅರ್ಥ ಮಾಡಿಕೊಂಡಿದ್ದೇನೆ. ಹಾಗೇ ಏರುವುದೇ ನನಗೆಲ್ಲಾವೂ ಆಗಿ ನಾನು ಅದರಲ್ಲೇ ಮುಳುಗಿಹೋದೆ. ನನ್ನ ಗುರಿಗೆ ಹತ್ತಿರವಾಗುತ್ತಿದ್ದಂತೆ ಅದರಲ್ಲೇ ನನ್ನ ಗಮನವನ್ನು ಕೇಂದ್ರೀಕರಿಸಿ, ಗುರಿಯತ್ತ ನನ್ನ ದೃಷ್ಟಿಯಿರಿಸಿದೆ. ಕೊನೆಗೆ ನನ್ನ ಗುರಿ ತಲುಪಿ, ನಾನು ನಿಂತ ಸ್ಥಾನದಲ್ಲಿ ಅಪಾರವಾದ ಆನಂದ ಪಡೆದೆ. ಒಂದು ರೀತಿಯ ಶಾಂತಿ ಹಾಗೂ ಸಮಾನತೆ ಭಾವ ನನ್ನದಾಯಿತು. ಆಗ ನನಗೆ ಅರಿವಾದುದು ಏನೆಂದರೆ, ನೀವು ಜಗತ್ತಿನಲ್ಲಿ ಮೊದಲಿಗರೇ ಅಗಬೇಕಾಗಿಲ್ಲ, ನಿಮಗೆ ನೀವು ಮೊದಲಿಗರಾದರೆ ಸಾಕು. ನಿಮಗೆ ನೀವೆ ಮೊದಲಿಗರಾಗಬೇಕೆನ್ನುವ ಶಿಖರವೇ ಅತ್ಯಂತ ಎತ್ತರದ ಶಿಖರ.

ಒಬ್ಬ ಉತ್ತಮ ಪರ್ವತರೋಹಿಯ ಹಾಗೇ ನಾನು ಈಗ ಮತ್ತೊಂದು ಪರ್ವತದ ಹುಡುಕಾಟದಲ್ಲಿದ್ದೇನೆ. ಅದರ ಅನಿಶ್ವಿತತೆ ನನ್ನನ್ನು ಆತಂಕಕ್ಕೆ ತಳ್ಳುತ್ತದೆ, ಅದರೆ ಅದೇ ನನ್ನನು ಉತ್ತೇಜಿಸುತ್ತದೆ ಕೂಡ. ನಾನೀಗ ಮತ್ತೆ ನನ್ನ ತಂದೆಯ ಕೊಠಡಿಯ ಟ್ರಾನ್ಸಿಸ್ಟರ್ ನಿಂದ ಕ್ರಿಕೆಟ್ ವೀಕ್ಷಕ ವಿವರಣೆ ಕೇಳುತ್ತಿದ್ದ ಬಾಲಕನಂತಾಗಿದ್ದೇನೆ. ಇಂದಿಲ್ಲಿ ಪದವಿ ಪಡೆಯುತ್ತಿರುವ ದೇಶದ ಅತ್ಯಂತ ಚುರುಕು ಬುದ್ಧಿಯವರಲ್ಲಿ ಒಬ್ಬರಾದ ೨೦೧೩ ಬ್ಯಾಚಿನ ನಿಮಗೆ ನಿಮ್ಮ ಮುಂದಿನ ರೋಮಾಂಚಕ ಪಯಣಕ್ಕೆ ಶುಭವನ್ನು ಹಾರೈಸುತ್ತೇನೆ.

  ನಿಮಗೆ ತಕ್ಕದಾದ ಪರ್ವತ ನಿಮಗೆ ಸಿಗಲಿ. ಅ ಪಯಣದಲ್ಲಿ ನಿಮಗೆ ಬೆಂಬಲ ಸಿಗಲಿ ಮತ್ತು ನೀವು ಅದನ್ನು ಮತ್ತೊಬ್ಬರಿಗೆ ಕೊಡುವಂತಾಗಲಿ. ಸಹನೆಯಿಂದಿರಿ ಮತ್ತು ಪಯಣದಲ್ಲಿ ಬರಬಹುದಾದ ಏಳು ಬೀಳುಗಳ ಸಮಯದಲ್ಲಿ ನಿಮ್ಮ ಪ್ರಯತ್ನ ಮುಂದುವರಿಯಲಿ. ಅದಕ್ಕಿಂತ ಮುಖ್ಯವಾಗಿ ನೀವು ಪ್ರಾರಂಭಿಸಲಿರುವ ಈ ಪಯಣವನ್ನು ಮನಪೂರ್ವಕವಾಗಿ ಅನಂದಿಸಿ. ವಂದನೆಗಳು

Tuesday, 21 October 2014

ಸಿಡಿಲ ಮರಿ

ನನ್ನ ಮೆಚ್ಚಿನ ಆಟಗಾರರಲ್ಲಿ ಒಬ್ಬರಾದ ಸೆಹ್ವಾಗ್ ಹುಟ್ಟುಹಬ್ಬದ ಸವಿ ನೆನಪಿನಲ್ಲಿ, ಅವರ ಬೆಗೆಗಿನ ನನ್ನ ಹಳೆಯದೊಂದು ಲೇಖನ ಮರು ಓದಿಗಾಗಿ......

--------------------------------------
ತನ್ನ ಕಾಲದಲ್ಲಿ ಬೌಲರ್ ಗಳಿಗೆ ಸಿ೦ಹಸ್ವಪ್ನವಾಗಿದ್ದ ವಿವಿಯನ್ ರಿಚರ್ಡ್ಸ್ ಬಗ್ಗೆ ಒ೦ದು ಒಳ್ಳೆಯ ಕಥೆ ಇದೆ. ಇ೦ಗ್ಲೆ೦ಡಿನ ಕೌ೦ಟಿ ಮ್ಯಾಚ್ ಒ೦ದು ನಡೆಯುತ್ತಿದೆ, ರಿಚರ್ಡ್ಸ್ ಬ್ಯಾಟಿ೦ಗ್. ಗ್ರೆಗ್ ಥಾಮಸ್ ಎ೦ಬ ಬೌಲರ್ ಓಡಿ ಬ೦ದು ಎಸೆದ ಅತ್ತ್ಯುಮವಾದ outswinger, ರಿಚರ್ಡ್ಸ್ ಬ್ಯಾಟ್ ದಾಟಿ ಕೀಪರ್ ಕೈ ಸೇರಿತು. ಸುಮ್ಮನಿದ್ದಿದ್ದರೆ ಚೆನ್ನಾಗಿತ್ತೇನೋ, ಆದರೆ ಗ್ರೆಗ್ ರಿಚರ್ಡ್ಸ್ ಬಳಿ ಬ೦ದು, "its red, round and 5 1/2 ounces" ಎ೦ದು ಚೆ೦ಡಿನ ಬಣ್ಣ, ಅಳತೆ ಹಾಗೂ ತೂಕದ ವಿವರ ಕೊಟ್ಟನ೦ತೆ. ಮು೦ದಿನ ಬಾಲ್ ಅನ್ನು Stadium ಹೊರಗೆ ಅಟ್ಟಿದ ರಿಚರ್ಡ್ಸ್, ಬೌಲರ್ ಬಳಿ ಬ೦ದು, "ಚೆ೦ಡು ಹೇಗಿದೆ ಅ೦ತ ಗೊತ್ತಲ್ಲಾ ಗ್ರೆಗ್? ಹೋಗಿ ಹುಡುಕಿ ತ೦ದು ಬಿಡು" ಅ೦ದನ೦ತೆ.

ಮೊನ್ನೆ ಅ೦ತದ್ದೇ ಒ೦ದು ಕಥೆಯನ್ನು ಶೇನ್ ವಾರ್ನ್ ನಮ್ಮ ಸೆಹ್ವಾಗ್ ಬಗ್ಗೆ ಹೇಳಿದ್ದಾನೆ. ಅದೇ ಒ೦ದು ಕೌ೦ಟಿ ಮ್ಯಾಚಿನಲ್ಲಿ ಪಾಕಿಸ್ತಾನದ ಅಬ್ದುಲ್ ರಜಾಕ್ ಬೌಲಿ೦ಗ್ ಮಾಡುತ್ತಿದ್ದನ೦ತೆ, ಇತ್ತ ಕಡೆ ಸೆಹ್ವಾಗ್ ಹಾಗೂ ಮತ್ತೋಬ್ಬ ಕೌ೦ಟಿ ಆಟಗಾರ. ಮೊದಲೇ ಪಾಕಿಸ್ತಾನದ ಬೌಲರ್ ಗಳು ಈ reverse swingಗೆ ಪ್ರಸಿದ್ಢಿ. ಸರಳವಾಗಿ ಹೇಳುವುದಾದರೆ, ಚೆ೦ಡು ಹಳೆಯದ್ದಾದ೦ತೆ shine ನಿನ ವಿರುದ್ಧದ ದಿಕ್ಕಿನಲ್ಲಿ ಚೆ೦ಡು swing ಅಗುವುದನ್ನು reverse swing ಎನ್ನುತ್ತಾರೆ. ಆ ಸಮಯದಲ್ಲಿನ ಚೆ೦ಡಿನ ಗತಿಯನ್ನು ಸುಲಭವಾಗಿ ಗುರುತಿಸಲಾಗದ್ದರಿ೦ದ, ಅದು ಬ್ಯಾಟ್ಸ್ ಮೆನ್ ಗಳಿಗೆ ದೊಡ್ಡ ತಲೆನೋವಿನ ಹ೦ತ. ಇನ್ನಾವುದೇ ಆಟಗಾರನಾಗಿದ್ದ್ರರೂ ಅ ಸಮಯದಲ್ಲಿ ಎಚ್ಚರಿಕೆಯಿ೦ದ,ರಕ್ಷಣಾತ್ಮಕವಾಗಿ ಅಡಿ ಆ ಹ೦ತವನ್ನು ದಾಟುವ ತ೦ತ್ರ ಬಳಸುತ್ತಿದ್ದ. ಆದರೆ ಆ ಚೆ೦ಡಿಗೆ, ತ೦ತ್ರಕ್ಕೆ ಸೆಹ್ವಾಗ್ ಬಳಿ ಬೇರೆಯದೇ ಪ್ರತಿತ೦ತ್ರವಿತ್ತು. ಮು೦ದಿನ ಬಾಲ್ ನಲ್ಲಿ sixer ಬಾರಿಸಿಯೇ ಬಿಟ್ಟ ಸೆಹ್ವಾಗ್, ಅದೂ ಎ೦ಥ sixer ಅ೦ದರೆ ಮೈದಾನದಿ೦ದ ಆಚೆ ಬಿದ್ದ ಚೆ೦ಡು ಮತ್ತೆ ಸಿಗಲೇ ಇಲ್ಲ. ಬದಲಾಯಿಸಿದ ಬಾಲ್ ಮತ್ತೆ reverse swing ಆಗಲು ಕನಿಷ್ಠ ಒ೦ದು ಗ೦ಟೆಯಾದರೂ ಬೇಕಾಗಿತ್ತು! Non striker ನ ಬಳಿ ಬ೦ದು " Not to worry for another hour" ಅ೦ದನ೦ತೆ.

ಸೆಹ್ವಾಗ್ ಬ್ಯಾಟ್ ಮಾಡುವುದೇ ಹಾಗೆ, ಮೊದಲ ಟೆಸ್ಟಿನಲ್ಲೇ ಬಾರಿಸಿದ ಶತಕ, ಪಾಕಿಸ್ತಾನದ ಮುಲ್ತಾನ್ನ್ ನಲ್ಲಿ 296 ರನ್ನು ಆಡುತ್ತಿರುವಾಗ ಧತ್ತನೆ ಮುನ್ನುಗ್ಗಿ ಬ೦ದು ಹೊಡೆದ ಸಿಕ್ಸರ್, ಮೆಲ್ಬರ್ನ್ ಟೆಸ್ಟಿನಲ್ಲಿ 195 ರನ್ನಿನಲ್ಲಿ ಮತ್ತೆ ಸಿಕ್ಸರ್ ಹೊಡೆಯಲು ಹೋಗಿ ಔಟಾದ ರೀತಿ, ವೆಸ್ಟ್ ಇ೦ಡೀಸಿನಲ್ಲಿ ಲ೦ಚ್ ವಿರಾಮದ ಮುನ್ನವೇ ಗಳಿಸಿದ ಸಿಡಿಲಬ್ಬರದ ಓಟಾಗದ 99, ಶ್ರೀಲ೦ಕಾದಲ್ಲಿ ಕೊನೆಯ ವಿಕೆಟ್ ಸ೦ರಕ್ಷಿಸಲು ತಾನು 199 ರನ್ನಿದ್ದರೂ ರನ್ನು ಓಡದೆ ನಿಸ್ವಾರ್ಥ ಮೆರೆದ ರೀತಿ,69 ಬಾಲಿನಲ್ಲಿ ಹೊಡೆದ ಮೊದಲ ಒ೦ದು ದಿನದ ಶತಕ, ಇವೆಲ್ಲಾ ಸುಲಭದಲ್ಲಿ ಮರೆಯುವತ್ತ೦ಥದಲ್ಲ. ಭಾರತದ Faboulous Four(ಸಚಿನ್,ಸೌರವ್,ಡ್ರಾವಿಡ್ ಹಾಗೂ ಲಕ್ಷ್ಮಣ್) ನ ನೆರಳಲ್ಲೇ ಸ್ವೆಹ್ವಾಗ್ ಮಾಡಿರುವ ಸಾಧನೆ ಕಡಿಮೆಯೇನಲ್ಲ. ತ್ರಿಶತಕ ಬಾರಿಸಿದ ಮೊದಲ ಭಾರತೀಯ, 2 ತ್ರಿಶತಕ ಬಾರಿಸಿದ ಮೂರೇ ಮೂರು ಆಟಗಾರರಲ್ಲಿ ಒಬ್ಬ( ಬ್ರಾಡ್ಮೆನ್ ಹಾಗೂ ಲಾರಾ, ಇನ್ನಿಬ್ಬರು), ತ್ರಿಶತಕ ಹಾಗೂ 5 ವಿಕೆಟ್ ಪಡೆದ ಮೊದಲಿಗ, ಬ್ರಾಡ್ಮೆನ್ ನ೦ತರ ಮೊದಲ ಇನ್ನಿ೦ಗ್ಸ್ ಸಿನಲ್ಲಿ ಅತಿ ಹೆಚ್ಚು ಸರಾಸರಿ ಹೊ೦ದಿರುವ ಆಟಗಾರ,ಅತ್ಯ೦ತ ವೇಗದ ತ್ರಿಶತಕ ...ಹೀಗೆ ಸಾಗುತ್ತದೆ ಸೆಹ್ವಾಗ್ ನ ಸಾಹಸಗಾಥೆ.

ಸಚಿನ್ ತೆ೦ಡೂಲ್ಕರ್ ನಿ೦ದ ಸ್ಪೂರ್ತಿ ಪಡೆದು ಆರ೦ಭದ ದಿನಗಳಲ್ಲಿ ಅದೇ ರೀತಿಯ ಆಟವಾಡುತ್ತಿದ್ದರೂ ನಂತರದ ವರ್ಷಗಳಲ್ಲಿ ತನ್ನದೇ ಆದ ಶೈಲಿಯಿ೦ದ ಎಲ್ಲರ ಮನ ಗೆದ್ದಿರುವುದು ನಿಜ. ಉತ್ತಮ ಟೆಕ್ನಿಕ್ ಹಾಗೂ footwork ಇಲ್ಲದ ಆಟಗಾರನೆ೦ದು ಹಿರಿಯ ಕ್ರಿಕೆಟ್ ಪ೦ಡಿತರಿ೦ದ ಹೇಳಿಸಿಕೊ೦ಡು ಬ೦ದ ಸೆಹ್ವಾಗ್, ಈಗ 7 ವರ್ಷದ ಕ್ರಿಕೆಟ್ ನ ನ೦ತರ ಆಸ್ಟೇಲಿಯಾ, ಇಗ್ಲೆ೦ಡ್,ವೆಸ್ಟ್ ಇ೦ಡೀಸ್,ಸೌತ್ ಆಫ್ರಿಕಾ ,ಪಾಕಿಸ್ತಾನ,ಶ್ರೀಲ೦ಕಾ, ಕೊನೆಗೆ ಭಾರತದ ಆಟಗಾರರು ಪರದಾಡುವ ನ್ಯೂಜೀಲ್ಯಾ೦ಡ್ ನಲ್ಲೂ ಶತಕಗಳನ್ನು ಹೊಡೆದಿದ್ದಾರೆ. ಅದೂ ಎ೦ತಹ ಶತಕಗಳು? ಟೆಸ್ಟಿನ 15 ಶತಕಗಳಲ್ಲಿ ಕೊನೆಯ 13 ಶತಕಗಳು 150ರ ಗಡಿ ದಾಟಿರುವ೦ತದ್ದು.ಅದರಲ್ಲಿ ಎರಡು ತ್ರಿಶತಕ ಹಾಗೂ 5 ದ್ವಿಶತಕ ಗಳಿವೆ ಎ೦ದರೆ ಆಶ್ಚರ್ಯವಾಗಬಹುದಲ್ಲವೇ.ಅದರಲ್ಲೂ ಅತ್ಯ೦ತ ವೇಗವಾಗಿ ಸ್ಕೋರ್ ಮಾಡುವ ರೀತಿಯಿ೦ದಾಗಿ ತ೦ಡಕ್ಕೆ ಗೆಲ್ಲುವ ಅವಕಾಶಗಳೂ ಬಹಳ ಅ೦ತೆಯೇ ಟೆಸ್ಟ್ ನಲ್ಲಿ 5೦ರ ಹತ್ತಿರದ ಸರಾಸರಿ ಹೊ೦ದಿದ್ದಾರೆ. ನೆನಪಿರಲಿ ತಾ೦ತ್ರಿಕವಾಗಿ ಪರಿಪೂರ್ಣರೆನಿಸಿಕೊ೦ಡಿರುವ ಗವಾಸ್ಕರ್, ಸಚಿನ್ ಹಾಗೂ ಡ್ರಾವಿಡ್ ರ ಸರಾಸರಿ ಅದೇ ಆಸುಪಾಸಿನಲ್ಲಿದೆ. ಬೌಲಿ೦ಗ್ ನಲ್ಲೂ ಉತ್ತಮ off spinner ಆಗಿರುವ ಸೆಹ್ವಾಗ್, ಮೈದಾನದ ಯಾವುದೇ ಭಾಗದಲ್ಲಾದರೂ feilding ಮಾಡಬಹುದಾದ utility cricketer. Street smartness ನಿ೦ದಾಗಿ ಯಾವುದೇ ಒಬ್ಬ ನಾಯಕನು ತನ್ನ ತ೦ಡದಲ್ಲಿ ಬೇಕೆ೦ದು ಬಯಸುವ ಆಟಗಾರ ಈ "ವೀರು".


ಆದರೆ ಅದೇಕೋ ತನ್ನ ಬ್ಯಾಟಿ೦ಗ್ ಶೈಲಿಗೆ ಹೊ೦ದಿಕೊಳ್ಳುವ ಒ೦ದು ದಿನದ ಅ೦ತರಾಷ್ಟ್ರೀಯ ಪ೦ದ್ಯಗಳಲ್ಲಿ ಸೆಹ್ವಾಗ್ ಅದೇ ಮಟ್ಟವನ್ನು ಊಳಿಸಿಕೊಳ್ಳಲು ವಿಫಲರಾಗಿದ್ದಾರೆ ಎ೦ದೇ ಹೇಳಬಹುದು. ಭರ್ಜರಿಯಾಗೇ ಒ೦ದು ದಿನದ ಲೋಕಕ್ಕೆ ಬ೦ದು ಆ ಕಾಲದಲ್ಲಿ ರಾಜರ೦ತೆ ಆಡುತ್ತಿದ್ದ ಸಚಿನ್,ಸೌರವ್ ಜೋಡಿಗೇ ಕೋಕ್ ನೀಡಿದ ಸೆಹ್ವಾಗ್ ಮು೦ದಿನ ದಿನಗಳಲ್ಲಿ ಸ್ವಲ್ಪ ಮ೦ಕಾಗಿದ್ದಾರೆ. ಮಧ್ಯೆ ಫಾರ್ಮ್ ಕಳೆದುಕೊ೦ಡ ಸೆಹ್ವಾಗ್ ಟೆಸ್ಟ್ ಹಾಗೂ ಒ೦ದು ದಿನ ಎರಡರಲ್ಲೂ ತಮ್ಮ ಸ್ಥಾನವನ್ನು ಕಳೆದುಕೊ೦ದಿದ್ದು ಕ್ರಿಕೆಟ್ ಜಗತ್ತಿಗಾದ ಬಹು ದೊಡ್ಡ ನಷ್ಟ. ಲಾರ,ಸಚಿನ್,ಸೆಹ್ವಾಗ್ , ವಾರ್ನ್ ನ೦ತಹ ಆಟಗಾರರು ದೇಶದ ಗಡಿ ಮೀರಿ ಕ್ರಿಕೆಟ್ ಜಗತ್ತಿಗೆ ಸೇರಿದವರಾಗುತ್ತಾರೆ.ಎಲ್ಲಾ ತಾ೦ತ್ರಿಕತೆ,ಸ್ವಾರ್ಥ,ನೀತಿ, ನಿಯಮಗಳ ಮಧ್ಯೆಯೂ ಕ್ರಿಕೆಟ್ ಇನ್ನೂ ಮನರ೦ಜನೆಯ ಆಟವಾಗೇ ಉಳಿದಿದೆ ಎ೦ದರೆ ಅದಕ್ಕೆ ಸೆಹ್ವಾಗ್ ಅ೦ಥವರ ಶೈಲಿಯೇ ಬಹು ಮುಖ್ಯ ಕಾರಣ. ಮುಖ ಸಿ೦ಡರಿಸಿ ಕೊ೦ಡು, ಆಟವನ್ನು ಒ೦ದು ನೋವಿನ ಕೆಲಸವೆ೦ಬ೦ತೆ ಬಿ೦ಬಿಸಿ, ಆಡಿ ತಮ್ಮ ತಮ್ಮ ಸರಾಸರಿಗಳನ್ನು ಬೆಳೆಸಿಕೊ೦ಡು ಬೀಗುವ ಆಟಗಾರರಿಗೆ ಕೊರತೆಯಿಲ್ಲ. ಆಟವನ್ನು ತಾವೂ ಅನ೦ದಿಸಿ ನೋಡುವ ಕೋಟ್ಯಾ೦ತರ ವೀಕ್ಷಕರಿಗೂ ಅದೇ ಅನ೦ದವನ್ನು ತಲುಪಿಸುವ ಸೆಹ್ವಾಗ್ ನ೦ಥಾ ಆಟಗಾರರ ಸ೦ತತಿ ಹೆಚ್ಚಲಿ.

-ಪ್ರಶಾಂತ್ ಇಗ್ನೇಶಿಯಸ್

Thursday, 18 September 2014

ವಿಷ್ಣು

ವಿಷ್ಣುರವರ ಹುಟ್ಟು ಹಬ್ಬದ ಸವಿನೆನಪಿನಲ್ಲಿ ......

ಹೊನಲು.net ಬಳಗದ ಗೆಳೆಯರು ಕನ್ನಡದ ಬರಹಗಳನ್ನು ಆದಷ್ಟು ನುಡಿ ಮಾತಿಗೆ ಹತ್ತಿರವೆನ್ನುವಂತೆ ಹೊರತರಬೇಕೆನ್ನುವ ಪ್ರಯತ್ನದಲ್ಲಿ ಆದಷ್ಟು ಕನ್ನಡದ ಪದಗಳನ್ನೇ ಹಾಗೂ ಅಲ್ಪ, ಮಹಾ ಪ್ರಾಣದ ತೊಡಕನ್ನು ನಿವಾರಿಸುವ ಪ್ರಯತ್ನದಲ್ಲಿ ತೊಡಗಿಕೊಂಡಿದ್ದಾರೆ. ಅಲ್ಲಿ ಪ್ರಕಟವಾದ ಲೇಖನವಾದ್ದರಿಂದ ಓದುವಾಗ ಒಂದಷ್ಟು ಬದಲಾವಣೆಯನ್ನು ಇಲ್ಲಿ ಕಾಣಬಹುದಾಗಿದೆ


ಕಲಾವಿದರಿಗೆ ಸಾವಿಲ್ಲ. ಅವರ ಸಾದನೆ, ಕಲಾಕ್ರುತಿಗಳು ಅವರನ್ನು ಸದಾ ಜೀವಂತವಾಗಿಡುತ್ತದೆ ಎಂಬುದು ಸಾಮಾನ್ಯ ಮಾತು. ಅದು ನಿಜವೂ ಕೂಡ. ಆದರೆ ಕೆಲವು ಕಲಾವಿದರು ತಮ್ಮ ಸಾದನೆ, ಸೋಲು, ಗೆಲುವು, ಪ್ರಸಿದ್ದಿ ಎಲ್ಲವನ್ನೂ ಮೀರಿ ಜನಮನದಲ್ಲಿ ನಿಂತಿರುತ್ತಾರೆ. ಅಂತವರ ಸಾವು, ಇಲ್ಲದಿರಿವಿಕೆಯನ್ನು ಅರಗಿಸಿಕೊಳ್ಳುವುದು ಕಶ್ಟ. ಸಾಮಾನ್ಯ ಜನರ ಮನಸ್ಸುಗಳನ್ನು ತಟ್ಟುವ ಅಂತವರ ಅಗಲಿಕೆ ಎಂದಿಗೂ ನೋವಿನ ಸಂಗತಿಯೇ. ಇನ್ನಶ್ಟು ದಿನ ಇರಬೇಕಾಗಿತ್ತು ಎಂಬ ಬಾವ ಮನಸ್ಸಿನ ಬಾಗಿಲಲ್ಲಿ ಉಳಿದು, ಅವರ ಮೆಲಕು ಹಾಕುತ್ತಿರುತ್ತದೆ.

ಕನ್ನಡ ಮನಸ್ಸುಗಳಲ್ಲಿ ಅಂತಹ ಬಾವ ಉಳಿಸಿ ಹೋದವರು ವಿಶ್ಣುವರ‍್ದನ್. ಇಂದು (ಸೆಪ್ಟಂಬರ್ 18) ಅವರ ಹುಟ್ಟು ಹಬ್ಬ. ಅವರು ಹೋಗಿ ವರ‍್ಶಗಳೇ ಕಳೆದರೂ, ಆ ಬಾವ ಇನ್ನೂ ಇರುವುದೇ ಅವರ ದೊಡ್ಡಸ್ತಿಕೆ. ಏಕೆಂದರೆ ವಿಶ್ಣು ತಮ್ಮೆಲ್ಲಾ ಸಾದನೆಯ ನಡುವೆಯೂ ಆಪ್ತವಾಗಿರುವುದನ್ನು ಉಳಿಸಿಕೊಂಡವರು. ವಿಶ್ಣು ಅವರ ಆ ಮುದ್ದು ಮುಕ ವಯಸ್ಸಾದಂತೆ ಪಡೆದುಕೊಂಡ ಸಂತ ಕಳೆ, ಅವರ ಆಕರ‍್ಶಕ ನಗು ಪಡೆದುಕೊಂಡ ಮಗುವಿನ ಮುಗ್ದತೆ, ವ್ಯಕ್ತಿತ್ವ ಕಂಡುಕೊಂಡ ಗನತೆ ಎಲ್ಲವೂ ಮರೆಯಲಾಗದ್ದು. ಅವರಲ್ಲಿನ ತುಂಟತನ ಮಾತ್ರ ಕೊನೆಯ ವರ‍್ಶಗಳಲ್ಲಿ ಕಾಣೆಯಾದದ್ದು ಸ್ವಲ್ಪ ಬೇಸರದ ಸಂಗತಿಯೇ. ಇನ್ನಶ್ಟು ಮನತಣಿಸುವ ಪಾತ್ರಗಳಿಗೆ ಕಾಯುತ್ತಿದ್ದ ನಮ್ಮೆಲ್ಲರನ್ನು ಬಿಟ್ಟು, ನಡುವೆಯೇ ಕಣ್ಮರೆಯಾಗಿದ್ದು ಅದಕ್ಕಿಂತ ಬೇಸರದ ಸಂಗತಿ.

ಇಂದಿಗೂ ನನಗೆ ನಾಗರಹಾವು ಚಿತ್ರದ ಅನೇಕ ರೂಪಕಗಳು ಮನಸ್ಸಿನಿಂದ ಮರೆಯಾಗುವುದೇ ಇಲ್ಲ. ನಿಜಕ್ಕೂ ಅದು ವಿಶ್ಣು ಅವರಿಗಿಂತ ಪುಟ್ಟಣ್ಣರ ಮಾಂತ್ರಿಕ ಸ್ಪರ್‍ಶದ ಚಿತ್ರ. ಅದರಲ್ಲಿನ ಸುಂದರ ಗೀತೆಗಳ ನಡುವೆ ಎರಡು ಗೀತೆಗಳು ವಿಶ್ಣುರವರ ಮುಂದಿನ ಚಿತ್ರ ಬದುಕಿನ ಪ್ರತೀಕದಂತಿತ್ತು. ’ಹಾವಿನ ದ್ವೇಶ ಹನ್ನೆರೆಡು ವರುಶ’ ಗೀತೆಯ ’ಟಣ್ ಟಣ್ ಟಣ್ ಟಣ್ ಟಣ್ ಟಣ್ ಟಡಂಡಾಣ್’ ಎಂಬ ವಾದ್ಯ ಸಂಗೀತ, ಚಿತ್ರದುರ‍್ಗದ ಕೋಟೆ, ಆ ಕೆಂಪು ಮಣ್ಣು, ಸರಸರನೆ ಸರಿದು ಮರೆಯಾಗುವ ಹಾವು, ಎಲ್ಲವೂ ಮನಸ್ಸಿನಲ್ಲಿ ನಿಚ್ಚಳ. ಆದರೆ ಅದರ ನಡುವೆಯೇ ಎದ್ದು ಕಾಣುವುದು ವಿಶ್ಣು ಅವರ ಆ ಆತ್ಮವಿಶ್ವಾಸದ ನಡೆ ಹಾಗೂ ಬಿರುಸು. ಆ ಬಿರುಸೇ ಮುಂದಿನ ’ಸಾಹಸ ಸಿಂಹ’ ಬಿರುದಿಗೆ ಮುನ್ನುಡಿಯಾಯಿತು. ಅದೇ ರೀತಿ “ಬಾರೇ ಬಾರೇ ಚಂದದ ಚೆಲುವಿನ ತಾರೆ” ಯಲ್ಲಿನ ಅವರ ಸೌಮ್ಯ ನಡೆ, ನವಿರು ಮುಕ ಬಾವ ಎಲ್ಲವೂ ಅವರ ಮುಂದಿನ ಪ್ರೇಮ ಕತಾನಾಯಕನ ಪಾತ್ರಗಳ ದಿಕ್ಸೂಚಿಯಾಯಿತು. ಹೀಗೆ ಮೊದಲ ಚಿತ್ರದಲ್ಲೇ ಅವರು ಮೂಡಿಸಿದ ಬರವಸೆ ಅಪಾರ. ಅದು ನಿಜವಾಯಿತಾದರೂ “ಇನ್ನೂ ಬೇಕು” ಎಂಬುದನ್ನೂ ಉಳಿಸಿತು.

60, 70 ಹಾಗು 80ರ ದಶಕ ಕನ್ನಡ ಚಿತ್ರರಂಗದ ಸುವರ‍್ಣ ಯುಗ. ಡಾ.ರಾಜ್ ಮೊದಲಾಗಿ ದೇಶದಲ್ಲೇ ಆತ್ತ್ಯುತ್ತಮ ಅನ್ನುವಂತ ನಟರು, ನಿರ‍್ದೇಶಕರು, ಸಾಹಿತಿಗಳು, ತಂತ್ರಜ್ನರು, ನಿರ‍್ಮಾಪಕರು ಕನ್ನಡ ಚಿತ್ರರಂಗವನ್ನು ಬೆಳಗಿದರು. ಕನ್ನಡ ಚಿತ್ರರಂಗದ ಸೌಬಾಗ್ಯವೋ, ಚಿತ್ರ ರಸಿಕರ ಅದ್ರುಶ್ಟವೋ ವಿಶ್ಣು ಅವರು ಕೂಡ ಅದೇ ಕಾಲದಲ್ಲಿ ನಮಗೆ ಸಿಕ್ಕರು. ಪಳಗಿದ ನಿರ‍್ದೇಶಕರ ಕೈಯಲ್ಲಿ ಅರಳಿದರು, ಬೆಳೆದರು ಹಾಗೂ ಆತ್ತ್ಯುತ್ತಮ ಚಿತ್ರಗಳಲ್ಲಿ ತೊಡಗಿಸಿಕೊಂಡರು. ಒಂದು ಚಿತ್ರವನ್ನು ತಮ್ಮದೇ ಹೆಗಲಿನ ಮೇಲೆ ಎತ್ತಿಕೊಂಡು ಸಾಗುವ ಸಾಮರ್‍ತ್ಯವೂ ಅವರಿಗಿತ್ತು. ಅದು ಸಾಮಾನ್ಯದ ವಿಶಯವೇನಲ್ಲ. ಕನ್ನಡ ಚಿತ್ರ ರಸಿಕರು ಕೂಡ ಅವರನ್ನು ಪ್ರೀತಿಯಿಂದ ಒಪ್ಪಿ ಅಪ್ಪಿಕೊಂಡರು. ಸದಬಿರುಚಿಯ ನವಿರು ಚಿತ್ರಗಳು ಬಂದವು.

ದ್ವಾರಕೀಶ್ ರ ಜೊತೆಗಿನ ಅವರ ಗೆಳೆತನ ಕನ್ನಡಕ್ಕೆ ಒಂದಶ್ಟು ಹೊಸ ಬಗೆಯ ಚಿತ್ರಗಳನ್ನು ನೀಡಿತು. ಆ ಗೆಳೆತನ ಕಂಡ ಏಳು ಬೀಳುಗಳು ಚಿತ್ರರಂಗದಲ್ಲಿನ ಸಂಬಂದಗಳ ಹಾವು ಏಣಿಯಾಟಕ್ಕೆ ಸಾಕ್ಶಿಯಾದರೆ, ಅಂಬಿ ವಿಶ್ಣು ನಡುವಿನ ಗೆಳೆತನ, ಗೆಳೆತನವೆನ್ನುವುದು ಎಲ್ಲವನ್ನೂ ಮೀರಿದ ಬಂದನ ಎಂಬುದನ್ನು ನಿರೂಪಿಸಿತು. ಕೊನೆಯ ವರ್‍ಶಗಳಲ್ಲಿ ಪಾತ್ರಗಳ ಆಯ್ಕೆಯಲ್ಲಿ ವಿಶ್ಣು ಮತ್ತಶ್ಟು ಕಾಳಜಿ ವಹಿಸಬೇಕಾಗಿತ್ತೇನೋ ಎಂದೆನಿಸಿದರೂ, ಅದು ಬಹುತೇಕ ಹಿರಿಯ ನಟರ ಬಗ್ಗೆಯೂ ಅನ್ನಬಹುದಾದ ಮಾತು. ನಮ್ಮ ಹಿರಿಯ, ಪಳಗಿದ ನಟರುಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಸಿನಿಮಾದಲ್ಲಿನ ವ್ಯವಸ್ತೆಯ ಕೊರತೆ, ಚಿತ್ರರಂಗವನ್ನು ಇತ್ತೀಚಿನ ವರ‍್ಶಗಳಲ್ಲಿ ಕಾಡುತ್ತಿರುವುದು ಅದಕ್ಕೆ ದೊಡ್ಡ ಕಾರಣ. ಆದರೂ ಅತ್ತ್ಯುತ್ತಮ ಎನ್ನುವಂತ ಚಿತ್ರಗಳ ದೊಡ್ಡ ಸಾಲನ್ನೇ ವಿಶ್ಣು ನಮ್ಮ ಮುಂದೆ ಬಿಟ್ಟು ಹೋಗಿದ್ದಾರೆ. ’ವಂಶವ್ರುಕ್ಶ’, ’ನಾಗರಹಾವು’ ನಿಂದ ಬೆಳೆದು, ಹೊಸತನದ ’ಹೊಂಬಿಸಿಲಿ’ನಲ್ಲಿ ಕಂಗೊಳಿಸುತ್ತಾ, ’ನಾಗರಹೊಳೆ’ಯಂತ ಉತ್ತಮ ಚಿತ್ರಗಳ ಕಾಡೊಳಗೆ ನುಗ್ಗಿ ’ಸಾಹಸ ಸಿಂಹ’ನಾಗಿ ಬೆಳೆದವರು ಅವರು. ಚಿತ್ರ ರಸಿಕರ ಪ್ರೀತಿಯ ’ಬಂದನ’ದಲ್ಲಿ ’ಕೈದಿ’ಯಾಗಿ ಹಲವಾರು ಸದಬಿರುಚಿಯ ಚಿತ್ರಗಳಿಗೆ ’ಸುಪ್ರಬಾತ’ ಹಾಡಿ, ಆ ಚಿತ್ರಗಳ ’ಮುತ್ತಿನಹಾರ’ವನ್ನು ಕನ್ನಡ ಚಿತ್ರರಂಗಕ್ಕೆ ತೊಡಿಸಿದವರು.

ಜೀವನದುದ್ದಕ್ಕೂ ಅನೇಕ ’ಸಂಗರ‍್ಶ’ಗಳಲ್ಲಿ ನೊಂದರೂ ’ಕರ‍್ಣ’ನ ಸಹನೆಯಿಂದ, ’ಹಾಲು ಸಕ್ಕರೆ’ ಯಂತ ನಗುವಿನಿಂದ ’ಹಾಲುಂಡ ತವರಿಗೆ’ ಒಳ್ಳೆಯದನ್ನೇ ಬಯಸಿದವರು. ಬೆಳೆದಂತೆಲ್ಲಾ ಗರ‍್ಜಿಸುವುದಕ್ಕಿಂತ ’ಲಾಲಿ’ಯ ಕೋಮಲತೆಯನ್ನು ನೆಚ್ಚಿಕೊಂಡು, ’ಯಜಮಾನ’ನಾಗುವುದಕ್ಕಿಂತ ’ಆಪ್ತಮಿತ್ರ’ನಾಗಿ ಉಳಿದವರು. ಕೊನೆಗೆ ಸಾದನೆ, ಪ್ರಸಿದ್ದಿಗಿಂತ ಅದ್ಯಾತ್ಮಿಕತೆಯನ್ನೇ ’ಆಪ್ತ ರಕ್ಶಕನಾಗಿ’ ಆರಿಸಿಕೊಂಡ ವಿಶ್ಣುರವರ ಚಿತ್ರ ಜೀವನವು, ಎಲ್ಲಾ ಬಣ್ಣಗಳಿಂದ ಕೂಡಿದ ಸುಂದರ ಕಾಮನಬಿಲ್ಲು. ಮಳೆ ಬಿಸಿಲುಗಳ ಸಮ ಸಂಗಮದ ಪ್ರತೀಕ.

ಕೆಲವು ದಿನಗಳ ಹಿಂದೆ ಯಾವುದೋ ವಾಹಿನಿಯಲ್ಲಿ ವಿಶ್ಣು ಸಮಾದಿಯ ಬಗ್ಗೆ ನಡೆಯುತ್ತಿದ್ದ ಚರ‍್ಚೆಯನ್ನು ನೋಡಿ ಅನಿಸಿದ್ದು – ಇಡೀ ದೇಶವೇ ತಿರುಗಿ ನೋಡುವಂತ ಚಿತ್ರಗಳನ್ನು ನೀಡಿ, ಕನ್ನಡ ಚಿತ್ರರಂಗದ ಶ್ರೀಮಂತ ಇತಿಹಾಸವನ್ನು ಪರಿಚಯಿಸುತ್ತಾ, ನೆನಪಿಸುತ್ತಾ, ಆ ಇತಿಹಾಸದಲ್ಲಿನ ವಿಶ್ಣುರವರಂತವರ ದೊಡ್ಡ ಪಾತ್ರವನ್ನು ತೋರಿಸಿಕೊಡುವತ್ತಾ ಕ್ರಿಯಾಶೀಲರಾಗಬೇಕಾಗಿದೆ ನಮ್ಮ ಚಿತ್ರರಂಗ. ಇದಕ್ಕಿಂತ ದೊಡ್ಡ ಶ್ರದ್ದಾಂಜಲಿ, ಸ್ತಾವರಗಳನ್ನು ಮುಗ್ದ ಮನಸ್ಸಿನ ವಿಶ್ಣು ಕೇಳುತ್ತಿರಲಿಲ್ಲವೇನೋ. ವಿಶ್ಣುವರ‍್ದನರ ಈ ಹುಟ್ಟು ಹಬ್ಬ, ಅವರಂತ ಅನೇಕ ಕಲಾವಿದರ ಬೆಳವಣಿಗೆಗೆ ಸ್ಪೂರ‍್ತಿಯಾಗಿಲಿ, ಕನ್ನಡ ಚಿತ್ರರಂಗದ ಮರುಹುಟ್ಟಿನ ಕನಸಿನತ್ತ ಒಂದು ಹೆಜ್ಜೆಯಾಗಲಿ.!

Tuesday, 19 August 2014

ಆಡಿಯೋ ಅನಿಸಿಕೆ - ಅಂಬರೀಶ

ದರ್ಶನ್ ಚಿತ್ರವೆಂದರೆ ಸಾಕು ಅವರ ಅಭಿಮಾನಿಗಳಿಗೆ ಪಾಲಿಗೆ ಅದೇ ಒಂದು ಹಬ್ಬ. ಇನ್ನೂ ಕನ್ನಡ ಚಿತ್ರರಂಗದಲ್ಲಿ ’ಅಂಬರೀಶ’ ಎಂಬ ಪದಕ್ಕೆ ತನ್ನದೇ ಆದ ವಿಶೇಷತೆ, ಆತ್ಮೀಯತೆ ಹಾಗೂ ಸಡಗರವಿದೆ. ಮಾಸ್ ಹಿಟ್ ಗಳನ್ನು ನೀಡುತ್ತಲೇ ಬಾಕ್ಸ್ ಆಫೀಸ್  ನ ಡಾರ್ಲಿಂಗ್ ಆಗಿ ಹೋಗಿರುವ ದರ್ಶನ್, ಅದೇ ಹೆಸರಿನ ಮಹೇಶ್ ಸುಖಧರೆ ನಿರ್ದೇಶನದ ಚಿತ್ರದ ಮೂಲಕ ತಮ್ಮ ಅಭಿಮಾನಿಗಳ ಬಳಿಗೆ ಬರುತ್ತಿದ್ದಾರೆ ಎಂದರೆ ಕೇಳಬೇಕೆ? ದರ್ಶನ್ ಹಾಗೂ ಅಂಬಿ ಇಬ್ಬರ ಅಭಿಮಾನಿಗಳೂ
ಕಾತರದಿಂದ ಕಾಯುತ್ತಿರುವ ಚಿತ್ರದ ಧ್ವನಿ ಸುರಳಿ ಇತ್ತೀಚೆಗೆ ಬಿಡುಗಡೆ ಆಗಿದ್ದೂ ಮಾತ್ರವಲ್ಲದೆ ಯಶಸ್ಸನ್ನೂ ಕಂಡಿದೆ.ಹರಿಕೃಷ್ಣ ಸಂಗೀತ ನೀಡಿರುವ ಹಾಡುಗಳು ಹೇಗಿದೆ? ನೋಡೋಣ ಬನ್ನಿ -

ವಾಲೆಕುಂ
ಗಾಯನ - ಹೇಮಂತ್
ಸಾಹಿತ್ಯ - ನಾಗೇಂದ್ರ ಪ್ರಸಾದ್ 
ಚಿತ್ರದಲ್ಲಿ ನಾಯಕ ಶ್ರಮ ಜೀವಿ ಆಗಿದ್ದರೆ ಇಂಥ  ಹಾಡು ಕಟ್ಟಿಟ್ಟ ಬುತ್ತಿ. ಸಾರಥಿ ಚಿತ್ರದ ಅತಿರಥ ಮಹಾರಥ ಹಾಡನ್ನು ನೆನಪಿಸುವಂಥ ಗುಣ ಈ ಹಾಡಿನ ಸಾಹಿತ್ಯ, ಸಂಗೀತದಲ್ಲಿ  ಬೆರೆತು ಹೋಗಿದೆ. ನಾಗೆಂದ್ರ ಪ್ರಸಾದ್ ರ ಸಾಹಿತ್ಯ ಸಂಗೀತಕ್ಕೆ ಪೂರಕವಾಗಿದ್ದು, ಚಿತ್ರಮಂದಿರದಲ್ಲಿ ಅಭಿಮಾನಿಗಳಿಗೆ ರಸದೌತಣ ನೀಡಬಹುದು. ಹೇಮಂತರ ಗಾಯನದಲ್ಲಿ ಲವಲವಿಕೆ ಇದೆ.

ಕಣ್ಣಲ್ಲೇ : 
ಗಾಯನ - ಶ್ರೇಯಾ ಘೋಷಾಲ್ ಹಾಗೂ ಸೋನು ನಿಗಮ್
ಸಾಹಿತ್ಯ - ನಾಗೇಂದ್ರ ಪ್ರಸಾದ್
ಹರಿಕೃಷ್ಣರ ಸಂಗೀತದ ಆಲ್ಬಂ ಒಂದರಲ್ಲಿ ಈ ರೀತಿಯ ಹಾಡಿಲ್ಲದಿದ್ದರೆ ಆಲ್ಬಂ ಪೂರ್ಣವಾಗುವುದಿಲ್ಲವೇನೋ ಎಂಬಂತೆ, ನಿರೀಕ್ಷೆಯಂತೆ ಎದುರಾಗುವ ಡ್ಯೂಯಟ್ ಗೀತೆ. ನಿರೀಕ್ಷೆಯಂತೆ ಶ್ರೇಯಾ ಹಾಗೂ ಸೋನು ನಿಗಂ ಉತ್ತಮವಾಗಿ ಹಾಡಿದ್ದಾರೆ. ಕ್ಲಾಸ್ ಮಾಸ್ ಎರಡೂ ರೀತಿಯ ಸಾಹಿತ್ಯ ನೀಡಬಲ್ಲ ನಾಗೇಂದ್ರ ಪ್ರಸಾದ್ ತಮ್ಮ ಮೇಲಿನ ನಿರೀಕ್ಷೆಯನ್ನು ಸುಳ್ಳು ಮಾಡುವುದಿಲ್ಲ. ಇಂಪಾದ ಗೀತೆ.

ಗಂಡರ ಗಂಡ
ಗಾಯನ - ಎಸ್ಪಿ. ಬಾಲಸುಬ್ರಮಣ್ಯಂ
ಸಾಹಿತ್ಯ - ನಾಗೇಂದ್ರ ಪ್ರಸಾದ್
ಬಹಳ ದಿನಗಳ ನಂತರ ಕೇಳಿ ಬರುವ ಎಸ್ಪಿಬಿ ಧ್ವನಿ ಆತ್ಮೀಯವಾಗಿ ತಾಕುತ್ತಲೇ, ಇನ್ನೂ ತನ್ನ ಮಾಂತ್ರಿಕತೆಯನ್ನು ಉಳಿಸಿಕೊಂಡಿದೆ. ನಾಗೇಂದ್ರ ಪ್ರಸಾದರ ತೂಕದ, ಗಾಂಭೀರ್ಯದ ಸಾಹಿತ್ಯಕ್ಕೆ ಎಸ್ಪಿ ಉತ್ತಮವಾಗಿ ಜೀವ ತುಂಬಿದ್ದಾರೆ. ನಾಡ ಪ್ರಭು ಕೆಂಪೇಗೌಡರ ವ್ಯಕ್ತಿತ್ವ, ಸಾಧನೆಯ ಬಗ್ಗೆ ಪರಿಚಯ ಮಾಡಿಕೊಡುತ್ತಾ, ಐತಿಹಾಸಿಕ ಮಾಹಿತಿಗಳನ್ನು ಕಟ್ಟಿ ಕೊಡುತ್ತದೆ ಈ ಗೀತೆ. ತೆರೆಯ ಮೇಲೆ ಹೇಗೆ ಚಿತ್ರಿತವಾಗಿದೆ ಎಂಬ ಸಹಜ ಕುತೂಹಲ ಅಭಿಮಾನಿಗಳದ್ದು.

ಅಸಕು ಪಸಕು :
ಗಾಯನ -  ಟಿಪ್ಪು ಹಾಗೂ ಲಕ್ಷ್ಮಿ ವಿಜಯ್
ಸಾಹಿತ್ಯ - ನಾಗೇಂದ್ರ ಪ್ರಸಾದ್
೮೦ರ ದಶಕದಲ್ಲಿ ಪಡ್ದೆ ಹುಡುಗರಿಗೆ ಕಚಗುಳಿ ಇಟ್ಟ ಚಕ್ರವ್ಯೂಹ ಚಿತ್ರದ ಚಳಿ ಚಳಿ ಹಾಡನ್ನು ಮರೆಯಲು ಸಾಧ್ಯವೇ? ಹಾಡು ಕೇಳಿದೊಡನೆ ಅಂಬರೀಶ್ ನೆನಪಾಗದೇ ಇರಲಾರರು. ಅದೇ ಹಾಡನ್ನು ನೆನಪಿಸುವ ಗೀತೆ. ಆ ಗೀತೆಗೆ ಇದ್ದ ಮಾದಕತೆ ಇಲ್ಲಿ ಇಲ್ಲದಿದ್ದರೂ ತುಂಟತನವನ್ನು ಹೊದ್ದುಕೊಂಡಿರುವ ಗೀತೆ. ಟಿಪ್ಪು ಹಾಗೂ ಲಕ್ಷ್ಮಿ ಯವರ ಧ್ವನಿಯಲ್ಲಿ ಹಾಡಿಗೆ ಬೇಕಾದ ಎಲ್ಲವೂ ಇದೆ. ಸಾಹಿತ್ಯಕ್ಕೂ ಅದೇ ಮಾತನ್ನು ಹೇಳಬಹುದು

ಪೂಜ್ಯಾಯ:
ಗಾಯನ - ಮಧು ಬಾಲಕೃಷ್ಣ
ಸಾಹಿತ್ಯ - ನಾಗೇಂದ್ರ ಪ್ರಸಾದ್
ಉತ್ತಮವಾದ ಮಧುರ ಭಕ್ತಿ ಗೀತೆ. ಹಳೆಯ ಭಕ್ತಿ ಗೀತೆಗಳನ್ನು ಕೇಳಿದೊಡನೆ ಇಂದಿಗೂ ಮನ ಅರಳುತ್ತದೆ. ಅದೇ ರೀತಿಯ ಉತ್ತಮವಾದ ಗೀತೆಗೆ, ಉತ್ತಮ ಸಾಹಿತ್ಯ ಒದಗಿ ಬಂದಿದೆ. ಎಲ್ಲಕ್ಕಿಂತ ಮಿಗಿಲಾಗಿ ಮಧು ಬಾಲ ಕೃಷ್ಣರ ಗಾಯನದಲ್ಲಿ ಭಕ್ತಿ ಗೀತೆಗೆ ಬೇಕಾದ ಸರ್ವ ಗುಣಗಳೂ ಕೂಡಿಬಂದು ನೆನಪಿನಲ್ಲಿ ಉಳಿಯುವಂತ ಗೀತೆಗಳ ಸಾಲಿಗೆ ಸೇರಿಕೊಳ್ಳುತ್ತದೆ. ರಾಯರ ಭಕ್ತರಿಗಂತೂ ಹೇಳಿ ಮಾಡಿಸದಂಥ ಗೀತೆ.

ಖೇಲ್ ಕತಂ :
ಗಾಯನ - ದರ್ಶನ್, ನವೀನ್ ಮಾಧವ್, ಸತ್ಯನ್, ಸಂತೋಷ್ ವೆಂಕಿ
ಸಾಹಿತ್ಯ - ನಾಗೇಂದ್ರ ಪ್ರಸಾದ್
ಎಲ್ಲೋ ಕೇಳಿದಂತೆ ಅನಿಸಿದರೂ ಸೆಳೆಯುವ ಗೀತೆ. ನಾಯಕ ತನ್ನ ಪರಿಚಯವನ್ನು ಮಾಡಿಕೊಳ್ಳುತ್ತಾ ತನ್ನ ಕಾರ್ಯ ಸಾಧನೆಯ ವಿಧಾನವನ್ನು ವಿವರಿಸುವ ಈ ಗೀತೆಯಲ್ಲಿ ಬರುವ ಸಂಭಾಷಣೆಗೆ ದರ್ಶನ್ ತಾವೇ ಧ್ವನಿ ನೀಡಿದ್ದಾರೆ. ಲವಲವಿಕೆಯ ವಾದ್ಯ ಸಂಗೀತಕ್ಕೆ ನವೀನ್ ಮಾಧವ್, ಸತ್ಯನ್, ಸಂತೋಷ್ ವೆಂಕಿಯವರ ಕೋರಸ್ ಭರ್ಜರಿ ಸಾಥ್ ನೀಡಿದೆ. ದರ್ಶನ್ ರ ಸಂಭಾಷನೆಯ ವೈಖರಿ ಸಕ್ಕತಾಗಿದ್ದೂ  ಪರದೆಯಲ್ಲಿನ ಹಾಡಿನ ಉದ್ದಕ್ಕೂ ಅಭಿಮಾನಿಗಳು ವಿರಾಮವಿಲ್ಲದ ಶಿಳ್ಳೆಗೆ ಅಣಿಯಾಗಬೇಕೇನೋ?

-ಪ್ರಶಾಂತ್ ಇಗ್ನೇಶಿಯಸ್


Sunday, 22 June 2014

ಆಡಿಯೋ ಅನಿಸಿಕೆ -ಆರ್ಯನ್

80 ಹಾಗೂ  90 ದಶಕದಲ್ಲಿ ಕನ್ನಡದ ಪ್ರಮುಖ ನಿರ್ದೇಶಕರಾಗಿದ್ದ ಡಿ.ರಾಜೇಂದ್ರ ಬಾಬು ರವರ ಚಿತ್ರಗಳು ತಾಂತ್ರಿಕತೆಯಲ್ಲಿ ಎಂದೂ ಮುಂದು. ಅಂತೆಯೇ ಅವರ ಬಹುತೇಕ ಚಿತ್ರಗಳು ಸೂಪರ್ ಹಿಟ್ ಎನ್ನುವಂತ ಹಾಡುಗಳನ್ನು ಹೊಂದಿರುತ್ತಿದ್ದವು. ತಮ್ಮ ಚಿತ್ರಗಳ ಹಾಡುಗಳ ಬಗ್ಗೆ ವಿಶೇಷ ಕಾಳಜಿ ತೋರುತ್ತಿದ್ದ ಬಾಬುರವರ ಸಂಗೀತ ಅಭಿರುಚಿ ಉನ್ನತ ಮಟ್ಟದ್ದೇ. ಅವರ ಕೊನೆಯ ಚಿತ್ರವಾದ ’ಆರ್ಯನ್’ ಗೆ ಅವರು ಆರಿಸಿಕೊಂಡಿದ್ದು ವಿಭಿನ್ನವಾದ ಕಥೆಯನ್ನು ಹಾಗೂ ಯುವ ಪೀಳಿಗೆಯ ಸಂಗೀತ ನಿರ್ದೇಶಕ ಜೆಸ್ಸಿ ಗಿಫ್ಟ್ ಅವರನ್ನು. ಶಿವಣ್ಣ ಹಾಗೂ ರಮ್ಯ ಪ್ರಥಮ ಬಾರಿಗೆ ಒಂದಾಗಿ ನಟಿಸುತ್ತಿರುವುದರಿಂದ ಚಿತ್ರದ ಬಗ್ಗೆ ಕುತೂಹಲ ಇದೆ. ಇದೇ ಸಮಯದಲ್ಲಿ ಆಡಿಯೋ ಬಿಡುಗಡೆ ಆಗಿದೆ. ಜೆಸ್ಸಿ ಗಿಫ್ಟ್ ಉತ್ತಮವಾಗಿಯೇ ಸಂಗೀತ ನೀಡಿರುವ ಗೀತೆಗಳು ಮೆಚ್ಚುಗೆ ಗಳಿಸಿದರೂ ಇನ್ನೂ ಏನೋ ಉಳಿದಿದೆ ಎಂಬಂಥ ಭಾವ ಹಾಡುಗಳನ್ನು ಕೇಳಿದವರಿಗೆ ಅನಿಸದೆ ಇರದು. ಆ ಭಾವವೇ ಹಾಡುಗಳ  ಹೆಗ್ಗಳಿಕೆಯೂ ಇರಬಹುದು. ಹಾಡುಗಳು ಹೇಗಿವೆ ನೋಡೋಣ.


ಕನ್ನಡ ಮಣ್ಣಿನ
ಗಾಯನ - ಪುನೀತ್ ರಾಜ್ ಕುಮಾರ್
ಸಾಹಿತ್ಯ - 
ವೇಗ ಧಾಟಿಯ ಹಾಡುಗಳಿಗೆ ಪುನೀತ್ ಕಂಠ ಹೊಂದಿಕೊಂಡು ವಿಭಿನ್ನವಾಗಿ ಕೇಳುವುದನ್ನು ನಾವು ಹಿಂದೆ ಕೇಳಿದ್ದೇವೆ. ಇಲ್ಲಿ ಈ ಗೀತೆ ಪಾಪ್ ಗೀತೆಯಂತೆ ಕಂಡರೂ ಸಂಗೀತದಲ್ಲಿ ಅಂಥ  ವಿಶೇಷತೆ ಇಲ್ಲದಿರುವದರಿಂದ ಅಷ್ಟೇನೂ ರಿಣಾಮಕ್ಕಾರಿಯಾಗಿಲ್ಲ.ಸಾಹಿತ್ಯವೂ ಸಾಮನ್ಯದ ಆಸುಪಾಸಿನಲ್ಲೇ ಇದೆ. ಪುನೀತ್ ಗಾಯನಕ್ಕಿರುವ ಜನಪ್ರಿಯತೆ ಹಾಗೂ ಕಿಕ್ ಅನ್ನು ಇನ್ನಷ್ಟು ಚೆನ್ನಾಗಿ ಬಳಸಿಕೊಳ್ಳುವುದರತ್ತ ಸಂಗೀತ ನಿರ್ದೇಶಕರು ಮನಸ್ಸು ಮಾಡಬಹುದಿತ್ತೇನೋ. ವಾದ್ಯ ಸಂಗೀತದ ಭರದಲ್ಲಿ  ......ರವರ ಕಂಠ ಹಾಗೂ ಸಾಹಿತ್ಯ ಕಳೆದುಹೋಗುತ್ತದೆ.

ನೀ ಬರದ ದಾರಿಯಲ್ಲಿ
ಗಾಯನ - 
ಸಾಹಿತ್ಯ - 
ಇತ್ತೀಚಿನ ಕನ್ನಡದ ಮಧುರ ಗೀತೆಗಳ ಸಾಲಿಗೆ ಮತ್ತೊಂದು ಸೇರ್ಪಡೆ. ಸಂಗಾತಿ ಇಲ್ಲದ ವಿರಹ ಗೀತೆಯಲ್ಲಿ ವಿಷಾದವೇ ತುಂಬಿಕೊಂಡ ಸಾಹಿತ್ಯವನ್ನು .......... ರವರು ನೀಡಿದ್ದಾರೆ. ಹಾಡಿನ ಧಾಟಿ ಹಾಗೂ ಸಾಹಿತ್ಯಕ್ಕೆ ತಕ್ಕ ಗಾಯನ......... ರವರದು. ಉತ್ತಮವಾದ ಆರಂಭದಿಂದ ಭರವಸೆ ಮೂಡಿಸುತ್ತಾ ಯಾವುದೇ ತೀವ್ರತೆಯಿಲ್ಲದೆ ಸಾಗುವ ಪ್ಯಾಥೋ ಗೀತೆ. 

ಒಂದು ಹಾಡು ತೇಲಿ ಬಂತು
ಗಾಯನ - 
ಸಾಹಿತ್ಯ - 
ಆರಂಭದಲ್ಲೇ ಸುಂದರ ಸಾಹಿತ್ಯದಿಂದ ಮನ ಸೆಳೆಯುವ ಗೀತೆ ಕೊನೆಯವರೆಗೂ ಅದೇ ಗುಂಗನ್ನು ಉಳಿಸಿಕೊಳ್ಳುತ್ತದೆ. .........ರವರ ಉತ್ತಮವಾದ ಸಾಹಿತ್ಯ ಹಾಗೂ ಗಾಯನದಿಂದ ಮತ್ತಷ್ಟು ಮೆರಗು ಪಡೆದುಕೊಳ್ಳುತ್ತದೆ. ವಾದ್ಯ ಸಂಗಿತದಲ್ಲಿ ಹೆಚ್ಚಾಗಿ ಗಿಟಾರನ್ನೇ ನೆಚ್ಚಿಕೊಂಡಿರುವುದರಿಂದ ಮಾಧುರ್ಯ ಹೆಚ್ಚಿದೆ.ಆರಂಭದ ಸಾಲುಗಳಲ್ಲಿ ಬರುವಂತೆ ಗಾಳಿಯಲ್ಲಿ ತೇಲಿ 
ಬಂದ ಹಾಡೊಂದನ್ನು ಕೇಳಿದ ಅನುಭವ ನೀಡುವಲ್ಲಿ ಗಾಯಕ ... ಹಾಗೂ ..... ಯಶಸ್ವಿಯಾಗಿದ್ದಾರೆ. 

ಬಿಟ್ಟು ಬಿಡು
ಗಾಯನ - 
ಸಾಹಿತ್ಯ - 
ಇಂಗ್ಲೀಷಿನ We will we will Rock you ವನ್ನು ನೆನಪಿಸುವ ಗೀತೆ. ಪಾಪ್ ಸಂಗೀತದ ಧಾಟಿಯ ಗೀತೆಗೆ ಸಾಹಿತ್ಯವನ್ನು ಹೊಂದಿಸಲು ಪ್ರಯಾಸಪಟ್ಟಂತೆ ಕೇಳಿಸುತ್ತದೆ. ಜೆಸ್ಸಿ ಗಿಫ್ಟ್ ರವರ ಸಂಗೀತದ ಮೂಲ ಗುಣವನ್ನು ಈ ಹಾಡಿನಲ್ಲಿ ಕೇಳಬಹುದು. ಗೆಲ್ಲುತ್ತೇವೆ ಎಂಬ ವಿಶ್ವಾಸದ ಈ ಹಾಡಿನಲ್ಲಿ ಇಂಗ್ಲೀಷ ಪದಗಳು ಹಾದು ಹೋಗುತ್ತವೆ. ತೆರೆಯ ಮೇಲೆ ಇನ್ನಷ್ಟು ಇಷ್ಟವಾಗಬಹುದು.  ..........ರವರ ಕಂಠದಲ್ಲಿ ಗೀತೆಗೆ ಬೇಕಾದ ಜೋಶ್ ಇದೆ.


ಉಸಿರೇ ಆಡದೇ
ಗಾಯನ - 
ಸಾಹಿತ್ಯ - 
ಮತ್ತೊಂದು ಮಧುರ ಗೀತೆ. ಆಲ್ಬಂ ನ ಅತ್ತ್ಯುತ್ತಮ ಗೀತೆ ಎನ್ನಬಹುದು. .....ರವರ ಸರಳ ಸಾಹಿತ್ಯಕ್ಕೆ ಜೆಸ್ಸಿ ಗಿಫ್ಟ್ ಅಷ್ಟೇ ಸುಂದರವಾದ ಸಂಗೀತದ ಗಿಫ್ಟ್ ಕೊಟ್ಟಿದ್ದಾರೆ. .........ರವರ ಉತ್ತಮ ಗಾಯನದಿಂದಾಗಿ ಹಾಡು ಇಷ್ಟವಾಗುವುದು ಮಾತ್ರವಲ್ಲದೆ ಕಾಡುವ ಗುಣವನ್ನು ಪಡೆದುಕೊಂಡಿದೆ. ಇಂತಹ ಹಾಡುಗಳನ್ನು ಇಷ್ಟಪಡುವ ಚಿತ್ರ ಪ್ರೇಮಿಗಳ ತುಟಿಯ ಮೇಲೆ ಬಹಳ ದಿನಗಳ ಕಾಲ ನಲಿದಾಡಬಹುದಾದ ಗೀತೆ.

-ಪ್ರಶಾಂತ್ ಇಗ್ನೇಸಿಯಸ್

Tuesday, 17 June 2014

ಆಡಿಯೋ ಅನಿಸಿಕೆ - ಬಹುಪರಾಕ್

ಕಳೆದ ವರ್ಷದ ಸೂಪರ್ ಹಿಟ್  ಚಿತ್ರಗಳಲ್ಲಿ ಒಂದಾದ ಸುನಿ ನಿರ್ದೇಶನದ ಸಿಂಪಲ್ಲಾಗಿ ಒಂದ್ ಲವ್ ಸ್ಟೋರಿ, ತನ್ನ ಹಾಡುಗಳಿಂದಲೂ ಚಿತ್ರ ರಸಿಕರ ಮನ ಸೆಳೆಯಿತು. ನಿರ್ದೇಶಕ ಸುನಿ ಮತ್ತೆ ಬಹುಪರಾಕ್ ಮೂಲಕ ನಿರ್ದೇಶನಕ್ಕೆ ಇಳಿದಿದ್ದಾರೆ. ’ಸಿಂಪಲ್ಲಾಗಿ’ ಚಿತ್ರದ ಅಭಿಮಾನಿಗಳು ಇದಕ್ಕೆ ಭವ್ಯವಾದ ಸ್ವಾಗತವನ್ನೇ ಕೊಟ್ಟಿದ್ದಾರೆ. ಹಾಡುಗಳ ಬಗ್ಗೆ ಬಹುಪರಾಕ್ ಗಳು ಕೇಳಿ ಬರುತ್ತಿದೆ. ಹಾಡುಗಳು ಹೇಗಿದೆ? ಸುನಿ ಮ್ಯಾಜಿಕ್ ಮುಂದುವರಿದಿದೆಯೇ? ಸಂಗೀತ ನಿರ್ದೇಶಕ ಭರತ್ ಬಿ.ಜೆ ರವರ ಕೈ ಚಳಕ ಹೇಗಿದೆ ಎಂಬುದರತ್ತ ಒಂದು ನೋಟ

ಉಸಿರಾಗುವೆ
ಗಾಯನ -ರಾಜೇಶ್ ಕೃಷ್ಣನ್ ಹಾಗೂ  ಅನುರಾಧ ಭಟ್ 
ಸಾಹಿತ್ಯ - ಸುನಿ
ಮಾಧುರ್ಯ ಹಾಗೂ ಮೋಹಕ ಸಾಹಿತ್ಯವನ್ನೇ ಉಸಿರಾಗಿಸಿಕೊಂಡಿರುವ ಸುಂದರ ಗೀತೆ. ಎಷ್ಟೋ ಬೇಕೋ ಅಷ್ಟೇ ಇರುವ ಭರತ್ ರವರ ವಾದ್ಯ ಸಂಗೀತದಿಂದಾಗಿ ರಾಜೇಶ್ ಹಾಗೂ ಅನುರಾಧರ ಕಂಠ ಸುಮಧುರವಾಗಿ ಕೇಳುತ್ತದೆ.  ಸುನಿಯವರ ಸಾಹಿತ್ಯದಲ್ಲಿ ಹೊಸತನವಿದೆ. ಗೀತೆಯ ಎಲ್ಲಾ ವಿಭಾಗಗಳು ಉತ್ತಮವಾಗಿ ಬೆರೆತು ಇಷ್ಟವಾಗವ ಗೀತೆ.

ಗೆದ್ದೆ ಗೆಲ್ತಾನಂತ 
ಗಾಯನ - ನವೀನ್ ಸಜ್ಜು 
ಸಾಹಿತ್ಯ - ಪಿ ಲಂಕೇಶ್
ಪಿ.ಲಂಕೇಶ್ ರವರ ಸಾಹಿತ್ಯವಿರುವ ಮತ್ತೊಂದು ವಿಭಿನ್ನವಾದ ಗೀತೆ. ಮತ್ತೆ ಭರತ್ ಸಾಹಿತ್ಯಕ್ಕೆ ಹೆಚ್ಚು ಒತ್ತು ಇರಲಿ ಎಂಬಂತೆ ಸಂಯಮದ ವಾದ್ಯ ಸಂಯೋಜನೆ ಮಾಡಿದ್ದಾರೆ. ಆದರಿಂದ ಇಲ್ಲಿಯೂ ಸಾಹಿತ್ಯವೇ ಮುಂದಾಗಿದ್ದು ಸಂಗೀತ ಹಿನ್ನಲೆಯಲ್ಲಿ ಸರಾಗವಾಗಿ ಬೆರೆತುಕೊಂಡಿದೆ. ನವೀನ್ ರವರ ಲವಲವಿಕೆಯಿಂದ ಹಾಡು ಇನ್ನಷ್ಟು ಇಷ್ಟವಾಗುತ್ತದೆ.

ಸ್ನೇಹ ಎಂಬುದು 
ಗಾಯನ - ಕೆ.ಕೆ 
ಸಾಹಿತ್ಯ - ಸುನಿ
ಮಾಧುರ್ಯ ಹಾಗೂ ಪಾಶ್ಚಾತ್ಯ ಎರಡೂ ರೀತಿಯ ಧಾಟಿ ಇರುವ ಈ ಗೀತೆಗೆ ಕೆ.ಕೆ ಉತ್ತಮವಾಗಿ ಧ್ವನಿ ನೀಡಿದ್ದಾರೆ. ಸುನಿಯವರಲ್ಲಿನ ಸಾಹಿತಿ ಮತ್ತೊಮ್ಮೆ ವಿಜೃಂಭಿಸಿದ್ದಾರೆ. ಉತ್ತಮ ಸಾಹಿತ್ಯ, ಸಂಗೀತ, ಗಾಯನದಿಂದಾಗಿ ಹಾಡು ಆಪ್ತವಾಗುತ್ತಾ ಹೋಗುತ್ತದೆ. ಮತ್ತೆ ಮತ್ತೆ ಕೇಳಬೇಕೆನಿಸುವ ಗೀತೆ.


ಸಿಂಪಲ್ಲ್ ಪ್ರೀತಿ 
ಗಾಯನ - ಶ್ರೀನಗರ ಕಿಟ್ಟಿ ಹಾಗೂ ಮೇಘನ ರಾಜ್ 
ಸಾಹಿತ್ಯ - ಸುನಿ
ಇಂದಿನ ಟ್ರೆಂಡಿಗೆ ಹೊಂದುವಂತ ಸಾಹಿತ್ಯವಿರುವ ಗೀತೆಗೆ ಅಲ್ಬಂ ಹಾತೊರೆಯುತ್ತಿದೆಯೇನೋ ಎನ್ನುವಂತೆ ಎದುರಾಗುವ ಗೀತೆ. ಶ್ರೀನಗರ ಕಿಟ್ಟಿ ಹಾಗೂ ಮೇಘನರಾಜ್ ಸರಾಗವಾಗಿ ಹಾಡಿ ಮೆಚ್ಚುಗೆ ಗಳಿಸುತ್ತಾರೆ.ಫೇಸ್ ಬುಕ್, ವಾಟ್ಸ್ ಆಪ್, ಅಲ್ಲಕ್ ಬುಲ್ಲಕ್ ಎಲ್ಲವೂ ಸುನಿಯವರ ಸಾಹಿತ್ಯದಲ್ಲಿ ಹಾದು ಹೋಗುತ್ತದೆ. ಯುವಕರಿಗೆ ವಿಶೇಷವಾಗಿ ಇಷ್ಟವಾಗಬಹುದಾದ ಗೀತೆ. ಕಿಟ್ಟಿಯವರ ಕಂಠದಲ್ಲಿನ ಲವಲವಿಕೆ ಅಲ್ಲಕ್ ಬುಲ್ಲಕೇನಲ್ಲ ಬಿಡಿ.

ನಾನಾರೇಂಬುದು ನಾನಲ್ಲ - 
ಗಾಯನ - ಭರತ್ ಬಿ.ಜೆ, ಕೌಶಿಕ್ ಹಾಗೂ ಚೈತನ್ಯ ಭಟ್ 
ಸಾಹಿತ್ಯ - ಶಿಶುನಾಳ ಶರೀಫರು
ಸ್ವತ: ಸಂಗೀತ ನಿರ್ದೇಶಕರೇ ಕೌಷಿಕ್ ಹಾಗೂ ಚೈತನ್ಯರೊಂದಿಗೆ ಧ್ವನಿಗೂಡಿಸಿರುವ ಈ ಗೀತೆಯ ಸಾಹಿತ್ಯ ಸಂತ ಶಿಶುನಾಳ ಶರೀಫರದು ಎಂದ ಮೇಲೆ ಸಾಹಿತ್ಯದ ಗುಣ ಮಟ್ಟವನ್ನು ಪ್ರತ್ಯೇಕವಾಗಿ ಹೇಳಬೇಕೆ? ವಿಭಿನ್ನವಾದ ಸಂಗೀತ ಹಾಗೂ ಹಿನ್ನಲೆಯಲ್ಲಿನ ಕೋರಸ್ ನಿಂದಾಗಿ ಹಾಡು ಎತ್ತರದಲ್ಲಿ ನಿಲ್ಲುತ್ತದೆ. ಮಧುರವಾದ ವಾದ್ಯ ಸಂಗೀತ ಈ ಗೀತೆಯ ಸಂಗೀತ ನಿರ್ದೇಶಕರ ಮಾಧುರ್ಯಯದೆಡೆಗಿನ ತುಡಿತಕ್ಕೆ ಸಾಕ್ಷಿಯಾಗಿದೆ. ಎಲ್ಲಾ ರೀತಿಯಲ್ಲೂ ಉತ್ತಮವಾದ ಗೀತೆ.

ಬಜ಼ಾರು ಭಾರಿ 
ಗಾಯನ - ಸ್ಪರ್ಶ  
ಸಾಹಿತ್ಯ - ಸುನಿ
ಇಷ್ಟೆಲ್ಲ ಮಾಧುರ್ಯದ ನಡುವೆ ಒಂದು ಐಟಂ ಸಾಗು ಬೇಕೆ? ಸುನಿಗೂ ಹಾಗೇ ಅನಿಸಿರಬೇಕು. ಸಾಂಗು ಬೇಕಾ ಸಾಂಗು ಎನ್ನುತ್ತಾ ಬರುತ್ತದೆ ಮುಂದಿನ ಹಾಡು. ತುಂಟ ಸಾಹಿತ್ಯಕ್ಕೆ ಪೂರಕವಾದ ಸಂಗೀತ. ನಿರ್ದೇಶಕ ಸುನಿಯವರ ಜಾದೂ ವರ್ಕ ಔಟ್ ಆಗಿದೆ. ಸಾಹಿತ್ಯದಲ್ಲಿ ಅವರು ಲಗೋರಿ ಆಡಿದಂತಿದೆ. ಸ್ಪರ್ಶ ರವರ ಗಾಯನ ಉತ್ತಮವಾಗಿದೆ.

ಸೂರ್ಯನ ಬೆಂಕಿಯ  
ಗಾಯನ -ಭರತ್ ಬಿ.ಜೆ
ಸಾಹಿತ್ಯ - ವಿಶ್ವೇಶ್ವರ ವಿಶ್ವ
ಈ ಹಾಡನ್ನು ಕೇಳುವಷ್ಟರಲ್ಲಿ ಸಂಗೀತದ ಏಕತಾನತೆಯ ಸಣ್ಣ ಸುಳಿವು ಬರುತ್ತದೆ. ಹಿಂದಿನ ಹಾಡುಗಳ ಧಾಟಿಯಲ್ಲೇ ಸಾಗುವ ಈ ಗೀತಯ ಸಾಹಿತ್ಯವೂ ಸಹ ಚಿತ್ರದಲ್ಲಿನ ಸನ್ನಿವೇಶದಿಂದ ಎದ್ದು ಕಾಣದ ಹೊರತು ಹತ್ತರಲ್ಲಿ ಒಂದಾಗುವ ಅಪಾಯವಿದೆ. ಬೇರೆ ಹಾಡುಗಳಿಂದ ಪ್ರತ್ಯೇಕವಾಗಿ ಕೇಳಿದರೆ ಇಷ್ಟವಾಗಬಹುದು.


ದೇವನಿರುವನು 
ಗಾಯನ - ಭರತ್ ಬಿ.ಜೆ
ಸಾಹಿತ್ಯ - ಸುನಿ
ಉತ್ತಮವಾದ ಆಲಾಪನೆಯಿಂದ ಶಾಸ್ತ್ರೀಯವಾಗಿ ಆರಂಭವಾಗುವ ಗೀತೆ ಸುನಿಯವರ ಸರಳ ಸಾಹಿತ್ಯ ಹಾಗೂ ಅಷ್ಟೇ ಸುಲಲಿತವಾದ ಸಂಗೀತದಿಂದ ಇಷ್ಟವಾಗುತ್ತದೆ. ಭರತ್ ರವರು ತಾವೇ ಸ್ವತ: ಹಾಡಿರುವುದರಿಂದ ಹಾಡಿಗೆ ಬೇಕಾದ ಎಲ್ಲಾ ಏರಿಳಿತಗಳನ್ನು ಸರಿದೂಗಿಸಿದ್ದಾರೆ.  ನಡುವಿನಲ್ಲಿ ಹಾಡು ಅಚ್ಚರಿಯ ತಿರುವು ಪಡೆಯುವುದನ್ನು ಕೇಳಿಯೇ ಆನಂದಿಸಬೇಕು. ಸಂಗೀತ ಗಾಯನ ಎರಡರಲ್ಲೂ ಭರತ್ ಗೀತೆಯನ್ನು ಆವರಿಸಿಕೊಂಡಿದಾರೆ.

ಉಸಿರಾಗುವೆ ರೀಮಿಕ್ಸ್ 
ಗಾಯನ -ಭರತ್ ಬಿ.ಜೆ, ನೀಲ್ ನ್ಯಾಶ್ ಫೀಟ್, ವಿದ್ಯಾಶ್ರೀ, ಶ್ವೇತಾ
ಸಾಹಿತ್ಯ - ಸುನಿ
ಭರತ್, ನೀಲ್, ವಿದ್ಯಾಶ್ರಿ ಹಾಗೂ ಶ್ವೇತಾ ಅವರ ದನಿಯಲ್ಲಿ ಮೂಡಿ ಬಂದಿರುವ ಉಸಿರಾಗುವೆ ಗೀತೆಯ ರೀಮಿಕ್ಸ್ ನಲ್ಲಿ ಮೂಲ ಗೀತಯ ಮಾಧುರ್ಯ ಇಲ್ಲವಾದರೂ ರೀಮಿಕ್ಸ್ ಇರಬೇಕಾದ ಗುಣವನ್ನು ಹೊಂದಿದ್ದೂ, ಕುಣಿಸುವಂತಿದೆ. ಗಾಯನ , ಸಂಗೀತ ಇಲ್ಲೂ ಇಷ್ಟವಾಗುತ್ತದೆ.

ಬಹು ಪರಾಕ್ - 
ಗಾಯನ -  ಭರತ್ ಬಿ.ಜೆ  
ಸಾಹಿತ್ಯ - ಸುನಿ
ಕೊನೆಯ ಸಣ್ಣ ಬಿಟ್. ರಾಕ್ ರಾಕ್ ಬಹುಪರಾಕ್ ಎನ್ನುವ ಸಾಹಿತ್ಯವಿರುವ ಆ ಸಾಲುಗಳೇ ಈ ಬಿಟ್ ನ ಒನ್ ಲೈನ್ ಅನಿಸಿಕೆಯೂ ಹೌದು. ಭರತ್ ರವರೇ ಇದಕ್ಕೂ ದನಿ ನೀಡಿದ್ದಾರೆ.


-ಪ್ರಶಾಂತ್ ಇಗ್ನೇಶಿಯಸ್

Tuesday, 10 June 2014

ಯಶಸ್ಸಿನ ಸೂತ್ರಗಳು??

ಹಳೆಯ ಕತೆ. ಇಬ್ಬರು ಗೆಳೆಯರು ಕಾಡಿನಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಹಠಾತ್ತನೆ ಎದುರಿಗೆ ಒಂದು ಹುಲಿ ಬರುವುದು ಕಾಣಿಸಿತು. ಹೇಗೆ ಓಡಿದರೂ ಹುಲಿಯಿಂದ ತಪ್ಪಿಸಿಕೊಳ್ಳುವುದು ಸಾಧ್ಯವಿರಲಿಲ್ಲ. ತಕ್ಷಣವೇ ಒಬ್ಬ ತನ್ನ ಕೈ ಚೀಲದಿಂದ ಓಡಲು ಉಪಯೋಗಿಸುವ ಶೂ ತೆಗೆದುಕೊಂಡು ಹಾಕಿಕೊಳ್ಳಲು ಪ್ರಾರಂಭಿಸಿದ. ಭಯದ ನಡುವೆಯೂ ಇನ್ನೊಬ್ಬನಿಗೆ ಇದು ಏಕೋ ಅತಿ ಎನಿಸಿತು. ಆ ಶೂ ಹಾಕಿಕೊಂಡರೆ ಹುಲಿಗಿಂತ ವೇಗವಾಗಿ ಓಡಿ ತಪ್ಪಿಸಿಕೊಳ್ಳಲು ಸಾಧ್ಯಾನ? ದಡ್ಡ” ಎಂದ. ಶೂ ಹಾಕಿ ನಿಂತವನು ಹೇಳಿದ “ಹುಲಿಗಿಂತ ಜೋರಾಗಿ ಓಡೋದು ಬೇಡ. ನಿನಗಿಂತ ಜೋರಾಗಿ ಓಡಿದರೆ ಸಾಕು”

 ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಯಶಸ್ಸು ಎಲ್ಲರ ಗುರಿ. ಆ ಯಶಸ್ಸನ್ನುಮುಟ್ಟಬೇಕಾದರೆ ಮತ್ತೊಬ್ಬರನ್ನು ಸೋಲಿಸುವುದು, ಹಿಂದೆ ಹಾಕುವುದು, ಮೀರಿಸುವದೇ ಗುರಿಯಾದಾಗ, ಯಶಸ್ಸು ಅಥವಾ ಗೆಲುವು ಎನ್ನುವುದರ ಅರ್ಥ ಬದಲಾವಣೆಯಾಗುತ್ತದೆ. ಸೋಲು ಅನಾಥ ಯಶಸ್ಸಿಗೋ ಹತ್ತಾರು  ತಾಯಿ ತಂದೆ ಎಂಬ ಮಾತಿದೆ. ಹಾಗೆಯೇ ಯಶಸ್ಸಿನ ಹಿಂದೆ ಬೆನ್ನು ಬಿದ್ದವರು ಮಾತ್ರ ಕೋಟ್ಯಾಂತರ. ಆ ಓಟದಲ್ಲಿ ನಾವು ನೀವೂ ಎಲ್ಲರೂ ಭಾಗಿ.ಯಶಸ್ಸಿನ ಬಗ್ಗೆ ನೂರಾರು ಗಾದೆಗಳು, ಮಾತುಗಳು, ನುಡಿಮುತ್ತುಗಳು, ಭಾಷಣಗಳನ್ನು ಕೇಳುತ್ತಲೇ ಇರುತ್ತೇವೆ. ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಮಹಿಳೆ ಇರುತ್ತಾಳೆ ಎನ್ನುವುದರ ಜೊತೆ ಜೊತೆಗೆ ಇಂದು ಒಬ್ಬ ಯಶಸ್ವಿ ಅವಿವಾಹಿತ ಹುಡುಗನ ಹಿಂದೆ ಹತ್ತಾರು ಹುಡುಗಿಯರು ಇರುತ್ತಾರೆ ಎನ್ನುವಷ್ಟರ ಮಟ್ಟಿಗೆ ಯಶಸ್ಸಿನ ವ್ಯಾಖ್ಯಾನ ಬದಲಾಗುತ್ತಲೇ ಇರುತ್ತದೆ. ಎಲ್ಲರಿಗೂ ಯಶಸ್ಸನ್ನು ಕಂಡರೆ ಅಪಾರ ಪ್ರೀತಿ, ಆದರೆ ಯಶಸ್ವಿ ವ್ಯಕ್ತಿಯನ್ನು ಕಂಡರೆ ಮಾತ್ರ ಅದೇಕೋ ಅಸೂಯೆ ಎನ್ನುತ್ತಾನೆ ಲೇಖಕನೊಬ್ಬ.ಅಷ್ಟಕ್ಕೂ ಯಶಸ್ಸೆಂದರೆ ಏನು?

 ಬೆಂಗಳೂರಿನ ಯಾವುದಾದರೂ ರಸ್ತೆಯಲ್ಲಿ ಹಾದು ಹೋಗುವಾಗ ಗೋಡೆಗೆ ಅಂಟಿಸಿರುವ ಇತ್ತೀಚಿನ ಪೋಸ್ಟರ್ ಗಳನ್ನು ಗಮನಿಸಿದರೆ ಸ್ವಾರಸ್ಯಕರ ಸಂಗತಿಗಳು ಕಾಣಿಸುತ್ತವೆ. ಇಂದಿನ ಜನಜಂಗುಳಿಯ ಟ್ರಾಫಿಕ್ ಹಾಗೂ ವಾಹನ ಚಾಲಕರ ಅವರಸದ ಮಧ್ಯೆ ಪೋಸ್ಟರ್ ನೋಡುತ್ತ ನಿಲ್ಲುವುದು ದುಸ್ತರದ ಮಾತೇ. ಎಲ್ಲರೂ ಯಶಸ್ಸಿನ ಬೆನ್ನೇರಿ ಅವರಸದಲ್ಲಿ ಹೊರಟವರೇ.ಪೋಸ್ಟರ್ ನೋಡುತ್ತಾ ಮೈ ಮರೆತರೆ, ಭಾವಪೂರ್ಣ ಶ್ರದ್ಧಾಂಜಲಿ ಎಂಬ ತಲೆಬರಹ, ಮತ್ತೆ ಹುಟ್ಟಿ ಬಾ ಎನ್ನುವ ಅಡಿಬರಹದ ಮಧ್ಯೆ ನಾವೇ ಗೋಡೆ ಮೇಲಿನ ಪೋಸ್ಟರ್ ಆಗುವ ಸಂಭವ ಹೆಚ್ಚು,. ಅದರೂ ಸಿಕ್ಕ ಸ್ವಲ್ಪ ಸಮಯದಲ್ಲೇ ಕಣ್ಣಾಡಿಸಿದರೆ ಕಾಣ ಸಿಗುವುದು "ಯಶಸ್ವಿ 10ನೇ ದಿನ" ಅಥವಾ "ಯಶಸ್ವಿ 2ನೇ ವಾರ ಎಂಬ ಸಿನಿಮಾ ಪೋಸ್ಟರುಗಳು. ಮೊನ್ನೆ ಜೊತೆಯಲ್ಲಿದ್ದ ಹಿರಿಯರೊಬ್ಬರು ಇಂತಹುದೇ ಪೋಸ್ಟರ್ ನೋಡಿ "ಅಲ್ಲಿ ತಪ್ಪಾಗಿದೆ"ಎಂದರು, "ಏನು?" ಎಂದೆ. "2 ರ ಪಕ್ಕದಲ್ಲಿ 5" ಇಲ್ಲ ಅಂದರು. ಯಶಸ್ವಿ 25ನೇ ವಾರದ ಪೋಸ್ಟರ್ ಎಂದು ಕೊಂಡಿದ್ದರು. “ಈಗೆಲ್ಲಾ ಹಾಗೆ ಇಲ್ಲ, 2ನೆ ವಾರ ಚಿತ್ರ ಓಡಿದರೇ ಅದೇ ಖುಷಿ ಎನ್ನುತ್ತಲೇ, ಯಶಸ್ವಿಯೋ ಇಲ್ಲವೋ ಯಶಸ್ಸಾಗಿದೆ ಎಂದೂ ತೋರಿಸಿಕೊಳ್ಳುವುದೂ ಈಗ ಯಶಸ್ಸೇ ಎಂದೆ. ಅವರಿಗೆ ಅರ್ಥ ಮಾಡಿಸಲು ಯಶಸ್ವಿಯಾದೆನೋ ಇಲ್ಲವೋ ಗೊತ್ತಿಲ್ಲ. ಯಶಸ್ವಿ ಚಿತ್ರವನ್ನು ಬಯ್ದುಕೊಂಡೇ ನಡೆದರು.

ಯಶಸ್ಸಿನ ಅರ್ಥಗಳು ಕಾಲದಿಂದ ಕಾಲಕ್ಕೆ ಬದಲಾಗುತ್ತಾ ಬರುತ್ತದೆ ಎನ್ನುವುದಕ್ಕೆ ಇದು ಒಂದು ಉದಾಹರಣೆ ಅಷ್ಟೆ. ಹತ್ತು ವರ್ಷಗಳ ಹಿಂದೆ 100 ದಿನ ಓಡಿದ ಚಿತ್ರ ಯಶಸ್ವಿ ಎನ್ನಿಸಿಕೊಂಡಿದ್ದರೆ ಅದಕ್ಕೂ ಹಿಂದಿನ ಸಮಯದಲ್ಲಿ ಯಶಸ್ಸನ್ನು ಆ ಚಿತ್ರದಲ್ಲಿದ್ದ ಮೌಲ್ಯ, ಸಂದೇಶ, ಪಡೆದ ಪ್ರಶಸ್ತಿ , ಜನ ಮನ್ನಣೆಯಿಂದ ಅಳೆಯಲಾಗುತ್ತಿತ್ತು. ಇದು ಈಗ ಎಲ್ಲಾ ರಂಗಗಳಲ್ಲೂ ಕಾಣಿಸುತ್ತಿದೆ. ಹಿಂದೆ ಒಬ್ಬ ಕ್ರಿಕೆಟ್ ಆಟಗಾರನ ಆಟದ ಶೈಲಿ,ಕಲಾತ್ಮಕತೆಯಲ್ಲಿ ಅವನ ಯಶಸ್ಸು ಅಡಗಿದರೆ, ನಂತರದ ದಿನಗಳಲ್ಲಿ ಆತನ ಅಂಕಿ ಅಂಶಗಳು,ದಾಖಲೆಗಳು ಅವನ ಯಶಸ್ಸನ್ನು ತೋರಿಸಿಕೊಡುತ್ತಿತ್ತು. ಇಂದೋ ಆತನ ಜನಪ್ರಿಯತೆ, ಅದರಿಂದ ಅವನಿಗೆ ದೊರಕಬಹುದಾದ ಜಾಹಿರಾತು ಹಾಗೂ ಐಪಿಲ್ ನಲ್ಲಿ ಆತನ ಹರಾಜು ಮೊತ್ತ ಅವನ ಯಶಸ್ಸನ್ನು ಅಳೆಯುತ್ತದೆ. ಒಬ್ಬ ಕಲಾವಿದನ ಯಶಸ್ಸು ಅವನ ಕಲಾಕೃತಿ ತರುವ ಹಣದ ಮೇಲೆಯೇ ಅವಲಂಬಿತ.

ಮೊನ್ನೆ ಹಿರಿಯರೊಬ್ಬರು ತಾವು ಬಿನ್ನಿ ಮಿಲ್ಸ್ ಸಂಸ್ಥಯಲ್ಲಿ ೩೭ ವರ್ಷಗಳ ಕಾಲ ಯಶಸ್ವಿಯಾಗಿ ಸೇವೆ ಸಲ್ಲಿಸಿದರ ಬಗ್ಗೆ ಹೆಮ್ಮೆಯಿಂದ ಹೇಳಿದರು. ನಿಜಕ್ಕೂ ಅದು ಒಂದು ಹೆಮ್ಮೆಯ ವಿಷಯವೇ. ಆದರೆ ಇಂದಿನ ದಿನಗಳಲ್ಲಿ ಅದು ಯಶಸ್ಸಿನ ಮಾತಲ್ಲ. 3 ವರ್ಷ ಒಂದೇ ಸಂಸ್ಥೆಯಲ್ಲಿರುವವನನ್ನು ಗುಮಾನಿಯಿಂದ ನೋಡುತ್ತದೆ ಇಂದಿನ ಯುವ ಜನಾಂಗ. ಕಳೆದ 8 ವರ್ಷಗಳಿಂದ ಒಂದೇ ಸಂಸ್ಥೆಯಲ್ಲಿರುವ ನನ್ನನ್ನು ಕಂಡೇ ನನ್ನ ಯುವ ಸಹೋದ್ಯೋಗಿಗಳು “ನೀವು ಬಿಡಿ ಸಾರ್, ಈ ಕಂಪನಿಗೆ ಪಿಲ್ಲರ್ ಇದ್ದಂಗೆ” ಎನ್ನುತ್ತಾ ಕಾಲು ಎಳೆಯುವುದುಂಟು.’ ಪಿಲ್ಲರ್’ ಗೆ  ಇದ್ದಲ್ಲಿಯೇ ಇರುವುದು ಎಂಬುದು ವ್ಯಂಗ್ಯಾರ್ಥ.“ನೀವು ಬಿಡಿ ಗೋಡೆ ಮೇಲಿನ ಬಣ್ಣದಂತೆ” ಎನ್ನುತ್ತ ನಾನು ನಗುವುದುಂಟು.

 ಅಂದರೆ ಒಂದು ಗೆಲವು ಅಥವಾ ಯಶಸ್ಸಿನ್ನು ಇಂದಿನ ಕಾಲ ಜನಾಂಗ ನೋಡುವುದೇ ಬೇರೆಯದೇ ಅರ್ಥದಲ್ಲಿ. ಅದರೂ ಯಶಸ್ಸು ಎನ್ನುವುದರ ಅರ್ಥ ಒಬ್ಬರಿಂದ ಒಬ್ಬರಿಗೆ ಬೇರೆ ಬೇರೆಯಾಗಿರುವುದರಿಂದ ನಮ್ಮ ಯಶಸ್ಸು ಯಾವುದು  ಎನ್ನುವುದನ್ನು ನಾವು ಮೊದಲು ಅರ್ಥಮಾಡಿಕೊಳ್ಳಬೇಕಾಗುತ್ತದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮತ್ತೊಬ್ಬರ ಯಶಸ್ಸು ನಮಗೆ ಸ್ಪೂರ್ತಿ, ಪ್ರೇರಣೆಯಾದರೂ ನಮ್ಮ ಯಶಸ್ಸಿನ ಗುರಿ, ದಾರಿ, ಗುರುವನ್ನು ನಾವೇ ನಿರ್ಧರಿಸಿಕೊಳ್ಳಬೇಕಾಗುತ್ತದೆ ಎನ್ನುತ್ತಾರೆ ತಜ್ಞರು. ಇದೇ ರೀತಿ ಯಶಸ್ಸಿನಹಾದಿಯಲ್ಲಿ ಕೆಲವೊಂದು ಯೋಜನೆಗಳು ಅವಶ್ಯವೆನ್ನುತ್ತಾರೆ ಅದೇ ತಜ್ಞರು . ಅವುಗಳಲ್ಲಿ ಪ್ರಮುಖವಾದವು :

ಗುರಿ: ನಾವು ಯಶಸ್ಸನ್ನು ಸಾಧಿಸಬೇಕಾದರೆ ಮೊದಲು ಒಂದು ಗುರಿ ಇರಬೇಕು ಮತ್ತು ಆಗುರಿಯನ್ನು ಸಣ್ಣ ವಿಭಾಗಗಳನ್ನಾಗಿ ಮಾಡಿಕೊಂಡು ಒಂದೊಂದೇ ಮೆಟ್ಟಿಲುಗಳನ್ನೇರುತ್ತಾಅಂತಿಮ ಗುರಿಯನ್ನು ಸಾಧಿಸಿಕೊಂಡು ಯಶಸ್ಸು ಪಡೆಯಬೇಕು. ಸಚಿನ್ ತೆಂಡುಲ್ಕರ್ ೧೦೦ಶತಕಗಳನ್ನು ಸಾಧಿಸಿಸ್ದರೂ ಅವೆಲ್ಲವೂ ಒಂದೇ ಬಾರಿಗೆ ಇಲ್ಲವೇ ಧಿಡೀರನೆ ಆದಂತವುದಲ್ಲ.ಪ್ರತಿಯೊಂದು ಶತಕದಲ್ಲಿಯೂ ನೂರು ರನ್ನುಗಳ ಮೊತ್ತವಿದೆ ಹಾಗೂ ಆ ಪ್ರತಿಯೊಂದು ರನ್ನಿಗೂಅದರದೇ ಆದ ಮಹತ್ವವಿದೆ. ರನ್ನು ಹೊಡೆಯಲಾಗದ ಬಾಲಿನ ಹಿಂದೆ ಒಂದು ರಕ್ಷಣಾತ್ಮಕ ಆಟವಿದೆಹಾಗೂ ಆ ರಕ್ಷಣಾತ್ಮಕ ಆಟಕ್ಕೆ ಪರಿಶ್ರಮ ಹಾಗೂ ಅಭ್ಯಾಸ  ಅಗತ್ಯವಿದೆ.

ಸಾಧಿಸಲಾಗದಂತ ಗುರಿಗಳು ಬೇಡ : ಗುರಿಗಳು ನಮ್ಮ ಸಾಮರ್ಥ್ಯ ಹಾಗೂ ನಮ್ಮ ಪರಿಶ್ರಮದ ಮಿತಿಯಲ್ಲಿದ್ದರೆ ಒಳ್ಳೆಯದು ಬೇರೆ ಯಾರನ್ನೋ ಅನುಸರಿಸಿ ಇಲ್ಲವೇ ನಮಗೆ ಒಲ್ಲದ ಗುರಿಗಳು ನಮ್ಮನ್ನು ಹತಾಶೆಗೆ ತಳ್ಳಬಹುದು. ಮೊದಲ ದಿನ ವಾಯು ವಿಹಾರದಲ್ಲೇ ೨೦ ಕಿಲೋಮೀಟರ್ ನಡೆಯುತ್ತೇನೆ ಎಂಬಂತ ನಿರ್ಧಾರಗಳು ಯಶಸ್ಸನ್ನು ತರುವುದಿಲ್ಲ ಬದಲಿಗೆನಿರಾಶೆಯನ್ನು ಮೂಡಿಸುತ್ತದೆ.

ಗುರಿಗಳನ್ನು ಬರೆದಿಟ್ಟುಕೊಳ್ಳುವುದು ಹಾಗೂ ಪೂರ್ವ ತಯಾರಿ : ಮುಟ್ಟಬೇಕಾದ ಗುರಿಸಾಧಿಸಬೇಕಾದ ಯಶಸ್ಸನ್ನು ಬರೆದಿಟ್ಟುಕೊಂಡು, ಅದರತ್ತ ನಿರಂತರ ಶ್ರಮ ವಹಿಸುವುದು ಹಾಗೂ ಆ ಯಶಸ್ಸು ಪ್ರಾಪ್ತಿಯಾದಾಗ ನಮ್ಮ ಜೀವನ ಹೇಗಿರಬಹುದೆಂದು ಉಹಿಸುತ್ತಾ, ಅದಕ್ಕೆ ತಯಾರಿಮಾಡಿಕೊಳ್ಳಬೇಕು

ಬದಲಾವಣೆಗೆ ಮುಕ್ತ ಮನಸ್ಸು : ಯಶಸ್ಸು ಸುಲಭವಾಗಿ ದೊರಕುವಂತದಲ್ಲ. ಒಂದು ಗುರಿಯನ್ನುಸಾಧಿಸಲು ಹೊರಟಾಗ ಯಾವುದನ್ನು ಯಶಸ್ಸು ಎಂದು ತಿಳಿದುಕೊಂಡಿರುತ್ತೇವೆಯೋ ಅದರ ಸ್ವರೂಪ ಕೆಲವೊಮ್ಮೆ ಬದಲಾಗಬಹುದು. ಆಗ ಹಳೆಯ ಯಶಸ್ಸಿನ ಕಲ್ಪನೆಗೆ ಜೋತು ಬೀಳದೆ ಬದಲಾವಣೆಗೆಮುಖ ಒಡ್ಡಬೇಕು. ಸಾಹಿತ್ಯ ಲೋಕ ಕಂಡ ಅದ್ಭುತ ಪ್ರತಿಭೆಯಾದ ರಾಷ್ಟ್ರಕವಿ ಕುವೆಂಪುತಮ್ಮ ಆರಂಭದ ದಿನಗಳಲ್ಲಿ ಬರೆದದ್ದು ಇಂಗ್ಲೀಷ್ ಸಾಹಿತ್ಯವನ್ನು. ಅದರಲ್ಲಿ ಬಹಳಯಶಸ್ಸು ಕಂಡು ಅಪಾರ ಪ್ರಶಂಸೆಯನ್ನೂ ಪಡೆದರು. ಆದರೆ ಐರಿಷ್ ಲೇಖಕ ಕವಿ ಜೇಮ್ಸ್ಕಸಿನ್ಸ್ ರವರನ್ನು ಭೇಟಿ ಮಾಡಿದಾಗ ಕಸಿನ್ಸ್, ಕುವೆಂಪುರವರಿಗೆ  ಕನ್ನಡದಲ್ಲೇ ಬರೆಯಲು ಹಿತವಚನ ನೀಡುತ್ತಾರೆ. ಯುವಕ ಕುವೆಂಪುಗೆ ಈ ಮಾತುಗಳು ರುಚಿಸದೆ ಕನ್ನಡ ಭಾಷೆಗೆ ತಮ್ಮದೇ ಆದ ಇತಿ ಮಿತಿ ಇರುವುದರಿಂದ ಇಂಗ್ಲೀಷ್ನಲ್ಲೇ ಬರೆಯುತ್ತೇನೆ ಎಂದು ವಾದಿಸಿಸುತ್ತಾರೆ. ಆದರೂ ನಂತರ ಯೋಚಿಸಿ, ಕನ್ನಡದಲ್ಲಿ ಬರೆಯಲು ನಿರ್ಧಾರ ಮಾಡಿದರ ಫಲವಾಗಿ ಜಗತ್ತು ಕಂಡ ಅತ್ಯದ್ಭುತ ಕೃತಿಗಳನ್ನು ನೀಡಿ ವಿಶ್ವ ಮಾನವರಾದವರು ನಮ್ಮಕುವೆಂಪು.

ತೊಡಕುಗಳನ್ನು ಗುರುತಿಸಿ ಅದರ ನಿವಾರಣೆಗೆ ಕ್ರಮ : ಗುರಿ ಹಾಗೂ ಯಶಸ್ಸಿನ ಹಾದಿಯಲ್ಲಿ ಅನೇಕ ತೊಡಕುಗಳು ನಮಗೆ ಎದುರಾಗುತ್ತವೆ. ಪದೇ ಪದೇ ಎದುರಾಗುವ ತೊಡಕುಗಳನ್ನು ಗುರುತಿಸಿಕೊಂಡು ಅದನ್ನು ನಿವಾರಿಸಲು ಬೇಕಾದ ಕ್ರಮಗಳನ್ನು ಕೈಗೊಳ್ಳುವ ಮೂಲಕ ಯಶಸ್ಸು ಪಡೆಯಬಹುದು. ಗಾಯಕನಾಗಿ ಯಶಸ್ಸು ಪಡೆಯಬೇಕಾದವನು ಉತ್ತಮ ಕಂಠವಿದ್ದರೂ ಮುಂಜಾನೆ ಎದ್ದು ಅಭ್ಯಾಸದಲ್ಲಿ ತೊಡಗಬೇಕಾಗುತ್ತದೆ. ಹಾಗೇ ಮುಂಜಾನೆ ಏಳಲು ಸಾಧ್ಯವಾಗದ ಕಾರಣಗಳನ್ನು ಗುರುತಿಸಿ ಅವಗಳಿಗೆ ತಕ್ಕ ಕ್ರಮಗಳನ್ನು ಕಂಡುಕೊಂಡರೆ ಮಾತ್ರವೇ ಅವರ ಕಂಠ ಅವನ ಕೈಹಿಡಿಯುತ್ತದೆ.

ಯಶಸ್ಸಿನ ಹಾದಿಯಲ್ಲಿ ಎಚ್ಚರ : ಎಲ್ಲವನ್ನು ಗುರುತಿಸಿ ಯೋಜನೆಯನ್ನು ತಯಾರಿಮಾಡಿಕೊಂಡು ಸಾಗುತ್ತಿರುವಾಗ ಆಗಾಗ ನಡೆಯುತ್ತಿರುವ ಹಾದಿ ಸರಿಯಾಗಿದೆಯೇ, ಸರಿದಾರಿಯಲ್ಲಿಯೇ ನಡೆಯುತ್ತಿದ್ದೇನೆಯೇ ಎಂದು ಪರೀಕ್ಷಿಸಿಕೊಳ್ಳುವುದು ಜಾಣತನ.ಗೊತ್ತಿದ್ದೂ ಇಲ್ಲವೆ ಗೊತ್ತಿಲ್ಲದೆಯೇ ತಪ್ಪಬಹುದಾದ ದಾರಿಯಿಂದ ಸರಿ ದಾರಿಗೆ ಬೇಗನೇ ಮರಳದಿದ್ದರೆ, ಗುರಿ ಹಾಗೂ ಯಶಸ್ಸು ಮತ್ತಷ್ಟು ದೂರದ ದಾರಿಯಾಗಿ ಪರಿಣಮಿಸಿ ಪರಿಶ್ರಮಹಾಗೂ ಸಮಯ ಪೋಲಾಗುತ್ತದೆ. ಆರಿಸಿಕೊಂಡ ಗುರಿಯ ರಂಗದಲ್ಲಿ ಪರಿಣಿತರಾದವರ ಜೊತೆ ಒಡನಾಟವಿದ್ದರೆ ಇದನ್ನು ತಪ್ಪಿಸಬಹುದು.ಆ ಸಮಯಕ್ಕೆ ಕ್ರಮಿಸಬೇಕಾದ ದೂರದ ಯೋಜನೆ ಇದ್ದರೆ ದಾರಿ ತಪ್ಪುವುದು ಕಡಿಮೆಯಾಗುತ್ತದೆ.

ಅದೃಷ್ಟ, ಸೋಲು ಹಾಗೂ ಬಹುಮಾನ : ಯಶಸ್ಸಿನ ಪಯಣದಲ್ಲಿ ಅದೃಷ್ಟ ಹಾಗೂ ವಿಧಿಯಾಟಕ್ಕಿಂತ ಸ್ವಸಾಮರ್ಥ್ಯ,ಪರಿಶ್ರಮಕ್ಕೆ ಹೆಚ್ಚು ಮಹತ್ವ ಕೊಡುವುದು ಲೇಸು. ತೊಡಕು ತೊಂದರೆಗಳು ಬಂದಾಗ ಅದೇ ದುರಾದೃಷ್ಟ, ವಿಧಿಯ ಸಾಂತ್ವನ ಪಡೆಯುವದಕ್ಕಿಂತ ತೊಂದರೆಗಳ ನಿವಾರಣೆಗೆಕ್ರಮಗಳನ್ನು ಕೈಗೊಳ್ಳದಿದ್ದರೆ ಕಳ್ಳ ಮನಸ್ಸು ಗುರಿಯಿಂದ ಆಚೆಗೆ ಕರೆದೊಯ್ಯುತ್ತದೆ. Success is simply a matter of luck. Ask any failure  ಎಂಬ ಮಾತು ಅದೆಷ್ಟುಸತ್ಯವಲ್ಲವೇ.. ಅಂತೆಯೇ ಯಶಸ್ಸಿನ ಹಾದಿಯಲ್ಲಿ ಹೂವುಗಳು ಮಾತ್ರವಲ್ಲದೇ ಕಲ್ಲು ಮುಳ್ಳುಸೋಲು ಇರುವುದು ಸಹಜ. ತಮ್ಮ ಅಸಂಖ್ಯಾ ಸೋಲುಗಳನ್ನು ಮೆಟ್ಟಿ ಗೆಲುವನ್ನು ದಕ್ಕಿಸಿಕೊಂಡವರಲ್ಲಿ ಥಾಮಸ್ ಆಳ್ವಾ ಎಡಿಸನ್, ಅಬ್ರಾಹಾಂ ಲಿಂಕನ್ ರವರು ಪ್ರಮುಖರು.“ನಾನು ಸೋತಿಲ್ಲ, ನನ್ನ ಕೆಲಸದಲ್ಲಿ ೧೦,೦೦೦ ರೀತಿಯ ಮಾರ್ಗಗಳು ಕೆಲಸಕ್ಕೆಬರುವುದಿಲ್ಲ ಎಂಬ ಪಾಠವನ್ನು ಕಲಿತ್ತಿದ್ದೇನೆ” ಎನ್ನುತ್ತಾ ತಮ್ಮ ವೈಫಲ್ಯಗಳ ಬಗ್ಗೆಹೇಳುತ್ತಾರೆ ಎಡಿಸನ್. ಹಾಗೆಯೇ ಯಶಸ್ಸಿನ ಸಣ್ಣ ಸಣ್ಣ ಗುರಿಗಳನ್ನು ದಾಟುತ್ತಿದ್ದಂತೆ ನಮಗೆ ನಾವೇ ಬೆನ್ನು ತಟ್ಟಿಕೊಂಡು ಆಗಿಂದಾಗ್ಗೆ ಸಣ್ಣ ಪುಟ್ಟ ಕೊಡುಗೆಗಳನ್ನು ನೀಡಿಕೊಳ್ಳುವುದರಿಂದ ಮುಂದಿನ ಹೆಜ್ಜೆಯತ್ತ ಮನಸ್ಸು ಉಲ್ಲಾಸಗೊಳ್ಳುತ್ತದೆ.

ಇವಿಷ್ಟು ಮಾತ್ರವೇ ಯಶಸ್ಸಿನ ಗುಟ್ಟುಗಳಲ್ಲ, ಅಂತೆಯೇ ಇವೆಲ್ಲವೂ ಯಶಸ್ಸನ್ನು ಖಂಡಿತವಾಗಿಯೂ ತಂದು ಕೊಡುತ್ತವೆ ಎಂದು ಕೊಳ್ಳಬೇಕಾಗೂ ಇಲ್ಲ. ಆದರೆ ಇವೆಲ್ಲವೂ ಯಶಸ್ಸಿನ ಹಾದಿಯನ್ನು ಸುಗಮಗೊಳಿಸಬಲ್ಲಂತ ಸಂಗತಿಗಳು. ಯಶಸ್ಸು ಹಾಗೂ ಪರಿಶ್ರಮಕ್ಕೆ ಅವಿನಾಭಾವ ಸಂಬಂಧವಿದ್ದೂ ಪರಿಶ್ರಮವೇ ಯಶಸ್ಸಿನ ಸೂತ್ರಧಾರ ಎಂಬ ಮಾತನ್ನು ಜ್ಞಾನಿಯೊಬ್ಬ ಹೇಳಿದ್ದಾನೆ. ಇದನ್ನು ಅರಿತು ನಡೆದರೆ ಯಶಸ್ಸಿನ ಹಾದಿಯಲ್ಲಿ ಹತಾಶೆ,ನಿರಾಸೆಗೆ ಸ್ಥಳವಿರುವಿದಿಲ್ಲ. ಗುರಿ ಮಾತ್ರವಲ್ಲದೆ ಹಾದಿಯೂ ಮುಖ್ಯ ಆನಂದಕರ ಎಂಬ ಸತ್ಯವೂ ತಿಳಿಯುತ್ತದೆ.  ಹಾಗೆಯೇ ಕೇವಲ ಹಣ, ಸುಖದಲ್ಲಿ ಮಾತ್ರವಲ್ಲದೆ ಪರಸೇವೆಯಲ್ಲಿ,ನೋವಿನಲ್ಲೂ ಯಶಸ್ಸು ಇದೆ ಎಂಬುದನ್ನು ನಮ್ಮಲೇ ಅನೇಕ ಸಂತರು ತಮ್ಮ ಜೀವನದಿಂದ ನಿರೂಪಿಸಿದ್ದಾರೆ. ಇವಲ್ಲವೂ ನಮಗೆ ದಾರಿ ದೀಪವಾಗಲಿ, ಯಶಸ್ಸಿನ ಮೆಟ್ಟಿಲಾಗಲಿ.

ಸಾಧಿಸಬೇಕಾದ ಗುರಿಯ ಬಗ್ಗೆ ಇರಬೇಕಾದ ಆತ್ಮವಿಶ್ವಾಸದ ಬಗೆಗಿನ ಹಾಸ್ಯ ತುಣುಕೊಂದಿಗೆ ಮುಗಿಸೋಣ: ಹೆಂಡತಿಯೊಬ್ಬಳು ಹೊಸದಾಗಿ ಮನೆಗೆ ತಂದ ನಾಯಿಗೆ ಸರಿಯಾಗಿ ಕುಳಿತುಕೊಳ್ಳುವುದನ್ನು ಹೇಳಿ ಕೊಡುತ್ತಿದ್ದಳು. ದಿನವೆಲ್ಲಾ ಪ್ರಯತ್ನಿಸಿದರೂ ನಾಯಿ ಬಗ್ಗಲಿಲ್ಲ, ಹೆಂಡತಿ ಬಿಡಲಿಲ್ಲ. ಇದನ್ನು ನೋಡಿ ರೋಸಿ ಹೋದ ಗಂಡ ಹೇಳಿದ ” ಲೇ ಬಿಡೇ, ಅದು ಆಗೊಲ್ಲ,ನಿನ್ನಿಂದ ಸಾಧ್ಯವಿಲ್ಲ. ತಟ್ಟನೆ ಬಂತು ವಿಶ್ವಾಸದ ಉತ್ತರ : “ಆಗೊಲ್ಲ ಅಂದ್ರೆ ಹೆಂಗ್ರಿ? ಹೊಸತರಲ್ಲಿ ನೀವೂ ಹೀಗೆ ಇರಲಿಲ್ಲ್ವಾ? ನಾನು ಕಷ್ಟಪಟ್ಟು ಸರಿಮಾಡ್ಲಿಲ್ವಾ?.

-ಪ್ರಶಾಂತ್

(ತಾಬೋರ್ ಪತ್ರಿಕೆಯ ಜೂನ್ ೧೪ರ ಸಂಚಿಕೆಯಲ್ಲಿ ಪ್ರಕಟವಾದ ಲೇಖನ) 

Monday, 12 May 2014

ಮರೆಯಲಾಗದ ಮುತ್ತು

ಅದು 90ರ ದಶಕದ ಮಧ್ಯದ ಒಂದು ದಿನ. ಅಂದು ಯಾವುದೋ ಒಂದು ಸಂಸ್ಥೆಯ ಸಹಾಯಾರ್ಥದ ಡಾ.ರಾಜ್ ಕುಮಾರ್ ರಸ ಸಂಜೆ. ಸ್ಥಳ ಬೆಂಗಳೂರಿನ ಕಂಟೀರವ ಕ್ರೀಡಾಂಗಣ. ಅದಾಗಲೇ ರಾಜ್, ಚಿತ್ರಗಳಲ್ಲಿ ನಟಿಸುವುದು ವಿರಳವಾಗಿತ್ತು. ಸಿನಿಮಾ ಸಂಬಂದದ ಕಾರ್ಯಕ್ರಮಗಳನ್ನು ಬಿಟ್ಟರೆ ಸಾರ್ವಜನಿಕವಾಗಿ ಸಹ ಅಷ್ಟಾಗಿ ಕಾಣಿಸಿಕೊಳ್ಳುತ್ತಿರಲಿಲ್ಲ. ನಾವು ನೋಡಿದಂತೆ 80ರ ದಶಕದಲ್ಲಿ ರಾಜ್ ರಸ ಸಂಜೆಗಳಿಗೂ, ಈ ಕಂಟೀರವ ಕ್ರೀಡಾಂಗಣಕ್ಕೂ ಅವಿನಾಬಾವ ಸಂಬಂದ. ಅಗಾಗ ನಡೆಯುತ್ತಿದ್ದ ಈ ರಸ ಸಂಜೆಯ ಸಮಯದಲ್ಲಿ ಇಡೀ ಕ್ರೀಡಾಂಗಣ, ಅದರ ಅವರಣವೆಲ್ಲಾ ತುಂಬಿ ಹೋಗಿ, ಕಾರ್ಪೋರೇಶನ್ ಸುತ್ತಮುತ್ತಲಿನ ರಸ್ತೆಗಳಲ್ಲಿ ನಿಂತು ಒಳಗಿನ ರಾಜ್ ಗೀತೆಗಳನ್ನು ಕೇಳುತ್ತಿದ್ದ ಜನಸ್ತೋಮದ ದ್ರುಶ್ಯಗಳನ್ನು ನೆನೆದರೆ ಇಂದಿಗೂ ರೋಮಾಂಚನವಾಗುತ್ತದೆ. ಕನ್ನಡದ ಒಂದು ಕಾರ್ಯಕ್ರಮದಲ್ಲಿ ಅಷ್ಟೊಂದು ಸಡಗರ, ವೈಭವವೆಲ್ಲಾ ಇಂದು ಕನಸಿನ ಮಾತೇ.ಸರಿ.. 90ರ ದಶಕಕ್ಕೆ ಬರೋಣ. ಕಾರ್ಯಕ್ರಮ ಶುರುವಾಗಲು ಇನ್ನೂ 2, 3 ಗಂಟೆ ಇರುವಾಗಲೇ ಸುತ್ತಮುತ್ತಲೆಲ್ಲಾ ಜನ ಸಾಗರ. ಕ್ರೀಡಾಂಗಣ ಒಳಗಿದ್ದಷ್ಟೇ ಜನ ಹೊರ ಆವರಣದಲ್ಲೂ ನೆರದಿದ್ದಾರೆ. ಗುಂಪು ಗುಂಪಾಗಿ ನಿಂತ ಜನಗಳ ನಡುವೆ ರಾಜ್, ರಾಜ್ ಚಿತ್ರಗಳ ಬಗ್ಗೆಯೇ ಮಾತು. ರಾಜ್ ಕ್ರೀಡಾಂಗಣದ ಒಳಗೆ ಹೋಗಬೇಕಾದರೆ ಸಾಗಬೇಕಾದ ದಾರಿಯಲೆಲ್ಲಾ ಜನ. ಒಂದು ಕ್ಶಣ ನೋಡಲು ಸಿಕ್ಕರೂ ಸಾಕೆಂಬಂತೆ. ರಸ ಸಂಜೆಗೆ ಕಾಸು ಕೊಟ್ಟವರು, ಪಾಸು ಪಡೆದವರು ಒಳಗಿದ್ದರೆ, ಅದು ಸಾದ್ಯವಾಗದವರ ಸಂಬ್ರಮ ಇಲ್ಲಿ. 

ಹಗಲು ತನ್ನ ಬೆಳಕನ್ನು ಕಳಚಿಕೊಳ್ಳುತ್ತಾ ರಾತ್ರಿ ಕತ್ತನ್ನು ತಬ್ಬಿಕೊಳ್ಳುವ ಮುನ್ನ ಆಕಾಶದಲ್ಲಿ ಕೆಂಪು ನೀಲಿ ಬಣ್ಣಗಳು ಕಣ್ಣಾ ಮುಚ್ಚಾಲೆ ಆಡುತ್ತಿರುವ ಸಮಯ. ಬೆಳಕೂ ಅಲ್ಲದ ಕತ್ತಲೂ ಅಲ್ಲದ ಮಂಕಿನಲ್ಲಿ  ಸುತ್ತಮುತ್ತಲಿನ ಮರಗಳಲ್ಲಿ ಪಕ್ಶಿಗಳ ಚಿಲಿಪಿಲಿಯಿಲ್ಲ. ಅಲ್ಲೆಲ್ಲಾ ರಾಜ್ ದೇ ದ್ಯಾನ, ಕಲರವ. ಇದಕ್ಕಿಂದಂತೆ ಮುಕ್ಯ ದ್ವಾರದ ಬಳಿ ವಾಹನವೊಂದು ಬರುತ್ತದೆ. ಅದರ 
ಹಿಂದೆ ಮುಂದೆ  ಪೋಲಿಸ್ ಬೆಂಗಾವಲು ವಾಹನಗಳು. ವಾತಾವರಣದಲ್ಲಿ ಮಿಂಚಿನ ಸಂಚಾರ. ವಾಹನದ ಕಿಟಿಕಿಯಿಂದಲೇ ತಮ್ಮ ಆ ಸುಂದರ ನಗುವಿನೊಂದಿಗೆ ರಾಜ್ ಕೈ ಬೀಸುತ್ತಿದ್ದಂತೆ ನೆರದಿದ್ದ ಪ್ರತಿಯೊಬ್ಬನೂ ಅದು ತನಗೇ ಎಂಬಂತೆ ಕೈ ಬೀಸುತ್ತಾನೆ. ಆಗ ಅತ್ತವರೆಷ್ಟೋ? ಜಯಕಾರ ಕೂಗಿದವರೆಶ್ಟೋ, ವಾಹನದ ಹಿಂದೆ ಓಡಿದವರೆಶ್ಟೋ, ಬಿದ್ದವರೆಶ್ಟೋ, ನನ್ನಂತೆ ಅಲ್ಲೇ ನಿಂತು ಮೈ ಮರೆತವರೆಶ್ಟೋ? 

ಮುಂದೆ ನಡೆದದ್ದು ಮಾತ್ರ ಎಂದಿಗೂ ಮರೆಯಲು ಸಾದ್ಯವಾಗದ ಗಟನೆ. ಕ್ರೀಡಾಂಗಣದ ಬಾಗಿಲ ಒಳಗೆ ವಾಹನ ಮರೆಯಾಗುತ್ತಿದೆ ಎನಿಸುತ್ತಿದ್ದಂತೆ, ವಾಹನ ಗಕ್ಕೆನೆ ನಿಲ್ಲುತ್ತದೆ. ಕಾಸಿಲ್ಲದೆ, ಪಾಸಿಲ್ಲದೆ ಒಳಗಿರಲು ಸಾದ್ಯವಾಗದವರ ಬಗ್ಗೆ ಪ್ರೀತಿಯೋ, ಮಮತೆಯೋ ಎಂಬಂತೆ ರಾಜ್ ಜೀಪಿನಿಂದ ಕೆಳಗಿಳಿಯುತ್ತಾರೆ. ಅಲ್ಲಿ ಇಳಿಯುವ ಸಂದರ್ಭವೆನು ಇರಲಿಲ್ಲ. ಜನ ಏನಾಗುತಿದೆ ಎಂದು ನೋಡುತ್ತಿದಂತೆ ರಾಜ್ ಬಾಗಿಲು ತೆರೆದು, ಅದೇ ವಾಹನದ ಕಟ್ಟೆಯೊಂದರ ಮೇಲೆ ನಿಲ್ಲುತ್ತಾರೆ. ನಿಂತು, ತಮ್ಮ ಪಂಚೆಯನ್ನು ಒಮ್ಮೆ ಗಟ್ಟಿಯಾಗಿ ಕಟ್ಟಿ,  ಎರೆಡು ಕೈ ಮೇಲಕ್ಕೆತ್ತಿ ನಮಸ್ಕಾರ ಎನ್ನುತ್ತಿದ್ದಂತೆ ಆ ಸ್ತಳದಲ್ಲಾದ ರೂಪಾಂತರ ಅಕ್ಶರಗಳಲ್ಲಿ ವರ್ಣಿಸುವುದು ಅಸಾದ್ಯ. ಎಲ್ಲವೂ ಮೊದಲೇ ನಿರ್ದಾರವಾಗಿತ್ತೇನೋ ಎಂಬಂತೆ ದಟ್ಟ ಬಣ್ಣದ ಆ ವಾಹನದ ವೇದಿಕಯಲ್ಲಿ, ನಸುಗತ್ತಲ ನಡುವೆ ರಾಜ್ ತಮ್ಮ ಅಚ್ಚ ಬಿಳಿ ಅಂಗಿ ಹಾಗೂ ಪಂಚೆಯಲ್ಲಿ ಕಂಗೊಳಿಸಿದ ರೀತಿ ಅದ್ಬುತ. "ಅಬಿಮಾನಿ ದೇವರುಗಳಿಗೆ ನಮಸ್ಕಾರ" ಎಂಬಂತ ಆ ಬಂಗಿಗೆ ಅಲಲ್ಲಿ ಗುಂಪಾಗಿದ್ದ ಇಡೀ ಜನಸ್ತೋಮವೇ ವಾಹನದತ್ತ ದಾಪುಗಾಲಿಡುತ್ತದೆ. ಸಾವಿರಾರು ಕಪ್ಪು ತಲೆಗಳ ನಡುವೆ ಬಿಳಿಯ ಬಟ್ಟೆ ತೊಟ್ಟ ರಾಜ್. ಅಣ್ಣಾವ್ರಿಗೆ ಜೈ ಎಂಬ ಮಾತು ಎಲ್ಲ ಕಡೆಯಿಂದ ಮೊಳಗುತ್ತದೆ. ಕೆಲವೇ ಕ್ಶಣಗಳಲ್ಲಿ ಅವರಿದ್ದ ವಾಹನದ ಸುತ್ತಾ ಸಾವಿರಾರು ಜನ. ಪೋಲಿಸರ ಪಾಡಂತೂ ಬೇಡವೇ ಬೇಡ. ಸುತ್ತಲೂ ನಿಂತು ಜನ ಕೂಗುತ್ತಾ ಕುಣಿಯುತ್ತಿದ್ದ ರೀತಿ ಮರೆಯಲಸಾದ್ಯ. ರಾಜ್ ರದು ಎಂದಿನ ವಿನೀತ ನಗು. ಕಣ್ಣಲ್ಲಿ ಆನಂದಬಾಷ್ಪವಿತ್ತೇ ತಿಳಿಯಲಿಲ್ಲ. ಇಡೀ ಜನಸ್ತೋಮದತ್ತ ಬಾವಪೂರ್ಣವಾಗಿ ಕೈ ಬೀಸುತ್ತಾ ನಿಂತವರನ್ನು, ಪಕ್ಕದಲ್ಲಿದ್ದವರು ಎಚ್ಚರಿಸುತ್ತಾರೆ. ಇನ್ನೂ ಅಲ್ಲಿದ್ದರೆ ಆಗುವುದಿಲ್ಲ ಎಂದು ಅರಿತ ಪೋಲಿಸರು ವಾಹನವನ್ನು ಹೊರಡಿಸಿ ಕ್ರೀಡಾಂಗಣದ ಒಳಗೆ ಮರೆಯಾಗುತ್ತಾರೆ. ಜನರದ್ದು ಮಾತ್ರ ನಿಲ್ಲದ ಸಡಗರ, ಕೇಕೆ, ಕುಣಿತ. ಬಾಗಿಲಿಗೇ ಬಂದ ಬಗವಂತನ ಕಂಡ ಬಾವ ಪರವಶತೆ. 

ಅದು ಸಾಮಾನ್ಯ ಚಿತ್ರ ನಟನೊಬ್ಬನಿಗೆ ಇರಬಹುದಾದ ಅಬಿಮಾನವನ್ನು ಮೀರಿದ ಮಿಡಿತ, ತುಡಿತ. ರಾಜ್ ಮತ್ತು ಕನ್ನಡಿಗರದು ಸಿನಿಮಾ, ನಟನೆಗೆ ಮೀರಿದ ಸಂಬಂದ. ಅಂದು ರಾಜ್ ರ ಬಗೆಗಿನ ಜನರ ಪ್ರೀತಿ, ಉತ್ಸಾಹ ಮತ್ತು ರಾಜ್ ಗೆ ಅಬಿಮಾನಿಗಳ ಮೇಲಿದ್ದ ಕಾಳಜಿಯ ಒಟ್ಟು ರೂಪ ಕೆಲವೇ ಕ್ಶಣದಲ್ಲಿ ಮೈದಳೆದು ಮರೆಯಾದ ಅನುಭವ. ರಸ ಸಂಜೆ ಮುಗಿಯುವ ವರೆಗೂ ಕರಗಲಿಲ್ಲ ಜನ, ಮತ್ತೊಮ್ಮೆ ಸಿಕ್ಕೀತೆ ಭಾಗ್ಯ ಎಂಬ ನಿರೀಕ್ಶೆಯಲ್ಲಿ.  ಆದೇ ಕ್ರೀಡಾಂಗಣದಲ್ಲಿ ರಾಜ್ ರನ್ನು ಕೊನೆಯ ಬಾರಿಗೆ ನೋಡಿದಾಗಲೂ ಜನರದು ಅದೇ ಪ್ರೀತಿ, ರಾಜ್ ಮುಕದಲ್ಲಿ ಅದೇ ನಗು. ಉಸಿರು ಮಾತ್ರ ನಿಂತು ಹೋಗಿತ್ತು.

ರಾಜ್ ವ್ಯಕ್ತಿಯಲ್ಲ ಶಕ್ತಿ ಎಂಬದಕ್ಕೆ ಸಾಕ್ಶಿಯಾಗಿತ್ತು ಆ ಗಟನೆ. ರಾಜ್ ಎಂಬ ವ್ಯಕ್ತಿತ್ವಕ್ಕೆ ಅಶ್ಟು ಜನರನ್ನು ಸೆಳೆಯುವ ಶಕ್ತಿ ಬಂದದಾದರೂ ಹೇಗೆ?. ಒಂದೇ ಒಂದು ನಮಸ್ಕಾರ, ’ಅಬಿಮಾನಿ ದೇವರುಗಳೇ’ ಎಂಬ ಒಂದೇ ಒಂದು ಸಣ್ಣ ಉದ್ಗಾರಕ್ಕೂ ಸಿಗುತ್ತಿದ್ದ ಆ ಪ್ರತಿಕ್ರಿಯೆ, ಪ್ರೀತಿ ಹೇಗೆ ಸಾದ್ಯವಾಯಿತು ಎಂಬುದು ನಿಜಕ್ಕೂ ಆಶ್ಚರ್ಯದ ವಿಶಯವೇ. ಆದರೆ ರಾಜ್ ರ ದೊಡ್ಡ ಶಕ್ತಿ ಇದ್ದದ್ದು ಅವರು ಸಾಮಾನ್ಯ ಕನ್ನಡಿಗನಿಗೆ ತಂದಿತ್ತ ಸ್ವಾಬಿಮಾನ, ಆತ್ಮವಿಶ್ವಾಸದಲ್ಲಿ, ನೆರೆಹೊರೆಯಲ್ಲಿ ಕುಗ್ಗಿ ಹೋಗಿದ್ದ ಸಾಮಾನ್ಯ ಕನ್ನಡಿಗನ ಆತ್ಮ ಸ್ತೈರ್ಯಕ್ಕೆ ರಾಜ್ ಚಿತ್ರಗಳು, ವ್ಯಕ್ತಿತ್ವ ಕೊಟ್ಟ ಕೊಡುಗೆಯಲ್ಲಿ. ’ನಮ್ಮವನೊಬ್ಬ ಹೇಗಿದ್ದಾನೆ ನೋಡಿ’ ಎಂದು ಗಟ್ಟಿಯಾಗಿ ಹೇಳಲು ಆರಿಸಿಕೊಂಡ ಕನ್ನಡಿಗನ ಸಂಬ್ರಮದಲ್ಲಿ.  ಸಾಮಾನ್ಯರಲ್ಲಿ ಸಾಮಾನ್ಯನಾಗಿದ್ದ ಮುತ್ತುರಾಜ್, ಡಾ.ರಾಜ್ ಕುಮಾರ್ ಆಗಿ ಸಾಗಿದ ರೋಮಾಂಚಕ ಪಯಣದಲ್ಲಿ.   

ಸಾಮಾನ್ಯ ಚಿತ್ರ ಪ್ರೇಕ್ಶಕನಿಂದ ದೊರಕಬಹುದಾದ ಸಿನಿಮಾ ನಟನೆಡೆಗಿನ ಪ್ರೀತಿ, ಅಬಿಮಾನವನ್ನು ಒಬ್ಬ ಸಾಂಸ್ಕ್ರುತಿಕ ರಾಯಬಾರಿಗೆ ಸಿಗಬಹುದಾದ ಗೌರವವನ್ನಾಗಿ ವಿಸ್ತರಿಕೊಂಡವರು ರಾಜ್. ಕನ್ನಡ ಕರ್ನಾಟಕ ಅದಾಗಲೇ ಹಲವು ಮಹನೀಯರು, ಪ್ರತಿಬಾವಂತರನ್ನು ಕಂಡಾಗಿತ್ತು. ಆದರೂ ರಾಜ್ ಬೆಳೆದ ಪರಿ ಅದ್ಬುತ. ಅದಕ್ಕೆ ಅವರು ವಿಶೇಶವಾದ ಪ್ರಯತ್ನಗಳನೇನು ಮಾಡಲಿಲ್ಲ. ಪ್ರತಿಬೆ, ಸಾಮರ್ತ್ಯದ ಜೊತೆ ನೆಚ್ಚಿಕೊಂಡಿದ್ದು ಶ್ರಮ, ಶ್ರದ್ದೆಯನ್ನು. ಮರೆಯದಿದ್ದದ್ದು  ನಾಡು ನುಡಿಯನ್ನು. ಅವಲಂಬಿಸಿದ್ದು ಹಿರಿಯರ, ಅಬಿಮಾನಿಗಳ ಆಶೀರ್ವಾದನ್ನು. ಬಿಡದೆ ಬೆಳೆಸಿಕೊಂಡದ್ದು ಸರಳತೆ, ಶಿಸ್ತು ಹಾಗೂ ಸಾಮಾಜಿಕ ಜವಬ್ದಾರಿಯನ್ನು. ಅಶ್ಟಕ್ಕೂ ರಾಜ್ ಜನರಿಗೆ ಅಷ್ಟೇಕೆ ಹತ್ತಿರವಾದರು, ಅಬಿಮಾನಿಗಳಿಗೆ ದೇವರಾದರು ಎಂಬುದನ್ನು ಉತ್ತರಿಸುವುದು ಸುಲಬದ ವಿಶಯವಲ್ಲದಿದ್ದರೂ ಕಶ್ಟವೂ ಅಲ್ಲ. ಅದು ನಟನೆಯಿಂದಲೇ, ತಮ್ಮ  ಗಾಯನದಿಂದಲೇ, ಅಪರಿಮಿತ ಕನ್ನಡ ಪ್ರೇಮದಿಂದಲೇ, ತಮ್ಮ ನಿರ್ಮಲ ನಗುವಿಂದಲೇ, ಸರಳತೆಯಿಂದಲೇ, ಎಲ್ಲರೊಂದಿಗೂ ಬೆರೆಯುವ ಗುಣದಿಂದಲೇ, ಆ ಸ್ಪಶ್ಟ ಸಂಬಾಶಣೆಯಿಂದಲೇ? ಉತ್ತರ - ಎಲ್ಲದರಿಂದಲೂ ಹೌದು ಅತವಾ ಇವುಗಳಲ್ಲಿ ಯಾವುದಾದರೂ ಒಂದರಿಂದಲೂ ಹೌದು. ಜೀವನದಲ್ಲಿ ಚಿತ್ರಗಳನ್ನೇ ನೋಡದೆ ಇದ್ದರೂ ಅವರ ಬಕ್ತಿ, ಗೀತೆ, ಅವರ ವ್ಯಕ್ತಿತ್ವ, ಸಂಬಾಶಣೆಯ ಶೈಲಿಗೆ ಮರುಳಾಗಿ ಅಬಿಮಾನಿ ಎನಿಸಿಕೊಂಡವರ ದೊಡ್ಡ ಬಳಗವೇ ಇದೆ. ರಾಜ್ ಗೆ ಕನ್ನಡಿಗರು ತೋರಿದ ಪ್ರೀತಿ ದೊಡ್ಡದೋ ಅತವಾ ರಾಜ್ ರ ಕೊಡುಗೆ ದೊಡ್ಡದೋ ಎಂಬ ಮಾತುಗಳ ನಡುವೆ ಅದಾವುದನ್ನೂ ಲೆಕ್ಕಿಸದೇ ರಾಜ್ ರನ್ನು ಪ್ರೀತಿಯಿಂದ ಅಪ್ಪಿ ಒಪ್ಪಿಕೊಂಡ ಕನ್ನಡಿಗರ ಸಂಖ್ಯೆ ಎಲ್ಲಕಿಂತ ದೊಡ್ಡದಿದೆ. 

ಆಗಶ್ಟೇ ಬೆಳೆಯುತ್ತಿದ್ದ  ಚಿತ್ರರಂಗಕ್ಕೆ ಯುವ ಪ್ರತಿನಿದಿಯಾಗಿ, ಚಿಗುರೊಡೆಯುತ್ತಿದ್ದ ಅಕಂಡ ಕರ್ನಾಟಕದ ಬಾವನೆಗಳಿಗೆ ಸಾಂಸ್ಕ್ರುತಿಕ ರಾಯಬಾರಿಯಾಗಿ, ಶ್ರಮ ಜೀವಿಗಳ ಮುಕವಾಣಿಯಾಗಿ, ಕನ್ನಡ ಸ್ವಾಭಿಮಾನದ ಪ್ರತೀಕವಾಗಿ, ಸರಳತೆ, ದೀನತೆಯ ರೂಪಕವಾಗಿ, ಕನ್ನಡ ಪರ ನಿಲುವಿನ ಗಟ್ಟಿ ದನಿಯಾಗಿ, ಅಸಂಕ್ಯ ಕನ್ನಡಿಗರ ಕನಸುಗಳ ಸಾಕಾರತೆಗೆ ಸ್ಪೂರ್ತಿಯಾಗಿ, ರಾಜೀವನಾಗಿ, ಮಯೂರನಾಗಿ, ಕುಂಬಾರನಾಗಿ, ಸನಾದಿ ಅಪ್ಪಣ್ಣನಾಗಿ ರಾಜ್ ಈ ನಾಡಿಗೆ ನೀಡಿದ ಕೊಡುಗೆ ಅಪಾರ. ತನ್ನದು ಕೊಡುಗೆಯಲ್ಲ ರುಣ ಸಂದಾಯ ಎಂಬ ಬಾವದಲ್ಲಿಯೇ ಮರೆಯಾದರೂ ಮರೆಯಲಾಗದ ನೆನಪುಗಳನ್ನು ಬಿಟ್ಟು ಹೋದ ರಾಜ್ ರ ಹುಟ್ಟು ಹಬ್ಬದ ದಿನ ಪ್ರತಿಯೊಬ್ಬ ಅಬಿಮಾನಿಯ ಪಾಲಿಗೆ ಅವರ ಮೇಲಿನ ಅಬಿಮಾನದ ಮರುಹುಟ್ಟಿನ ದಿನವೇ ಸರಿ.. 

- ಪ್ರಶಾಂತ್ ಇಗ್ನೇಶಿಯಸ್