Wednesday, 14 November 2012

ತಾಯ್ನುಡಿ


ಬೆಂಗಳೂರಿನಂತಹ ಕಾಸ್ಮೊಪಾಲಿಟನ್ ನಗರಗಳಲ್ಲಿನ ತಾಯ್ತಂದೆಯರು ತಮ್ಮ ಮಗು ಇಂಗ್ಲಿಷಿನಲ್ಲಿ ಮಾತಾಡುತ್ತಿದ್ದರೆ ಒಂದು ರೀತಿಯ ಪರಮಾನಂದ ಅನುಭವಿಸುತ್ತಾರೆ. ಅವರ ಮಕ್ಕಳು ತಮಗೆ ತಮ್ಮದೇ ತಾಯ್ನುಡಿ ಗೊತ್ತಿಲ್ಲ ಎಂದು ಬಲು ಹೆಮ್ಮೆಯಿಂದ ಹಾಗೂ ಯಾವುದೇ ಮುಜುಗರವಿಲ್ಲದೆ ಹೇಳುವುದನ್ನು ಕಂಡಾಗ ಅಥವಾ ನಾವು ಕನ್ನಡಾನ ಮನೇಲಷ್ಟೇ ಮಾತಾಡ್ತೀವಿ, ಓದೋಕೆ ಬರೆಯೋಕಂತೂ ಬರೊಲ್ಲ ಬಿಡಿ ಎಂದಾಗ ಪಿಚ್ಚೆನಿಸಿದರೂ ಆ ಕಠೋರ ಸತ್ಯವನ್ನು ಅರಗಿಸಿಕೊಳ್ಳದೇ ಇರಲಾಗದು. ಕೆಲ ಶಾಲೆಗಳಲ್ಲಿ ಅಳವಡಿಸಿಕೊಂಡಿರುವ ನೀತಿನಿಯಮಾವಳಿಗಳು ತಾಯ್ನುಡಿಯನ್ನು ಮಕ್ಕಳು ಉಪೇಕ್ಷಿಸುವುದಕ್ಕೆ ಪೂರಕವಾಗಿವೆ. ಮಕ್ಕಳು ಇಂಡಿಯನ್ ಭಾಷೆಗಳಲ್ಲಿ ಮಾತಾಡುತ್ತಿದ್ದರೆ ಐರೋಪ್ಯ ನುಡಿಯಾದ ಇಂಗ್ಲಿಷನ್ನು ಕಲಿಯುವುದಕ್ಕೆ ತೊಡಕಾಗುತ್ತದೆ ಎಂಬುದು ಶಿಕ್ಷಕರ ವಾದ. ಅವರ ವಾದ ಸರಿಯಾದುದೇ. ಏಕೆಂದರೆ ನಮ್ಮ ದೇಶದ ನುಡಿಗಳ ವಾಕ್ಯರಚನೆಗೂ ಐರೋಪ್ಯ ನುಡಿಗಳ ವಾಕ್ಯರಚನೆಗೂ ಅಗಾಧ ವ್ಯತ್ಯಾಸವಿದೆ. ಅಷ್ಟಕ್ಕೂ ಐರೋಪ್ಯ ಭಾಷೆಗಳಲ್ಲಿ ನುರಿತಿರಬೇಕಾದರೆ ಮನಸ್ಸು ಆ ನುಡಿಯಲ್ಲೇ ಯೋಚಿಸಬೇಕಾಗುತ್ತದೆ. ವಾಸ್ತವವಾಗಿ ನಾವು ನೀವೆಲ್ಲ ಏನು ಮಾತನಾಡಬೇಕು ಎಂಬುದನ್ನು ನಮ್ಮ ತಾಯ್ನುಡಿಯಲ್ಲಿ ಯೋಚಿಸಿ ಆಮೇಲೆ ಅದನ್ನು ಇಂಗ್ಲಿಷ್ ಮುಂತಾದ ಪರಕೀಯ ನುಡಿಗಳಲ್ಲಿ ವ್ಯಕ್ತಪಡಿಸುತ್ತೇವೆ. ತಾಯ್ನುಡಿಯನ್ನೇ ಇಂಗ್ಲಿಷ್ ಮಾಡಿಬಿಟ್ಟರೆ, ಇಂಗ್ಲಿಷಿನಲ್ಲೇ ಯೋಚಿಸಬಹುದಲ್ಲವೇ?

ಈ ವಾದವನ್ನು ವಿಶ್ಲೇಷಿಸುವ ಮುನ್ನ ತಾಯ್ನುಡಿ ಎಂದರೇನೆಂದು ತಿಳಿದುಕೊಳ್ಳೋಣ. ಒಂದು ಮಗು ತಾನು ಹುಟ್ಟಿದಾಗಿನಿಂದ ಬುದ್ದಿ ಬೆಳವಣಿಗೆಯಾಗುವವರೆಗೆ ತನ್ನ ಅಮ್ಮನಿಂದ, ತನ್ನ ಆಪ್ತರಿಂದ ಹಾಗೂ ಸುತ್ತಲಿನ ಪರಿಸರದಿಂದ ವ್ಯಕ್ತಿಗಳನ್ನು ಮತ್ತು ವಸ್ತುಗಳನ್ನು ಗುರುತಿಸುತ್ತಾ, ನುಡಿಯನ್ನು ಕಲಿಯತೊಡಗುತ್ತದೆ.  ಆ ನುಡಿಯ ಮೂಲಕ ಸಿಹಿ-ಕಹಿ, ಬೇಕು-ಬೇಡ, ಇಷ್ಟಾನಿಷ್ಟ, ನೋವು-ನಲಿವು, ಬಿಸಿ-ತಂಪು ಮುಂತಾದವುಗಳನ್ನು ತಾನಾಗಿ ಅರಿತು ಬೌದ್ಧಿಕವಾಗಿ ಬೆಳೆಯತೊಡಗುತ್ತದೆ. ನುಡಿಕಲಿಕೆಯ ಈ ಪ್ರಾಥಮಿಕ ಹಂತದಿಂದ ಶಾಲಾ ಹಂತಕ್ಕೆ ಬಂದಾಗಲೂ ಕೂಡ ಅದು ತನಗೊದಗಿದ ಪ್ರಪ್ರಥಮ ನುಡಿಯಲ್ಲೇ ಯೋಚಿಸುತ್ತದೆ ಹಾಗೂ ಎದುರಾದ ವ್ಯಕ್ತಿಯೊಂದಿಗೆ ಸಂಭಾಷಿಸಲಾರಂಭಿಸುತ್ತದೆ. ಈ ಪ್ರಾಥಮಿಕ ಚಿಂತನಾ ನುಡಿಯನ್ನೇ ಮೂಲನುಡಿ, ಬೇರುನುಡಿ ಅಥವಾ ತಾಯ್ನುಡಿ ಎನ್ನುತ್ತೇವೆ.
ಈ ಒಂದು ಬುನಾದಿಯಲ್ಲಿ ನಾವು ಚಿಂತಿಸಿದಾಗ ಯಾರಾದರೂ ತಮ್ಮ ತಾಯ್ನುಡಿಯಲ್ಲಿ ಮಾತಾಡೋದಿಲ್ಲ ಎಂದರೆ ಅವರು ತಮ್ಮ ಅಸ್ತಿತ್ವದ ಬೇರುಗಳನ್ನು ಕಡಿದುಕೊಳ್ಳುತ್ತಿದ್ದಾರೆಂದು ತಿಳಿಯಬೇಕಾಗುತ್ತದೆ. ಏಕೆಂದರೆ ನಮ್ಮ ಅನಿಸಿಕೆ, ನೋವು ನಲಿವು, ಪ್ರೀತಿ ಮಮತೆ ಇತ್ಯಾದಿಗಳನ್ನು ನಾವು ಆಂತರ್ಯದಿಂದ ಅಭಿವ್ಯಕ್ತಿಸಬೇಕಾದಲ್ಲಿ ಹೃದಯದ ಮಾತೇ ಮುಖ್ಯವಾಗುತ್ತದೆ ಹೊರತು ಇತರೆಲ್ಲ ಮಾತುಗಳು ಶುಷ್ಕವಾದ ಅಭಿನಯವಾಗುತ್ತದಷ್ಟೆ. 

ಆದರೂ ಕೆಲವರು ತಮ್ಮ ತಾಯ್ನುಡಿಗಿಂತಲೂ ತಾವು ವ್ಯವಹರಿಸುವ ನುಡಿಯಲ್ಲೇ ತಾದಾತ್ಮ್ಯ ಗಳಿಸಿಕೊಂಡು ಅದನ್ನೇ ತಮ್ಮ ಹೃದಯಕ್ಕೆ ಹತ್ತಿರಾಗಿಸಿಕೊಂಡಿರುತ್ತಾರೆ. ಅಯ್ಯಂಗಾರ, ತಿಗುಳ, ಸಂಕೇತಿ ಮುಂತಾದ ಜನಾಂಗದವರು ತಮ್ಮ ಮೂಲನುಡಿಗಿಂತಲೂ ಕನ್ನಡದಲ್ಲೇ ತಾದಾತ್ಮ್ಯ ಹೊಂದಿರುವುದನ್ನು ಕಂಡಿದ್ದೇವೆ. ಇನ್ನು ಕೆಲವರು ತಾಯ್ನಾಡಿನಿಂದ ಹೊರಗೆ ನೆಲೆಗೊಂಡು ಅಲ್ಲಿನವರನ್ನೇ ಮದುವೆಯಾಗಿ ಅಲ್ಲಿನ ನುಡಿಯನ್ನೇ ತಮ್ಮ ನುಡಿಯನ್ನಾಗಿ ಅಳವಡಿಸಿಕೊಂಡಿರುವುದನ್ನೂ ಕಂಡಿದ್ದೇವೆ. ಈ ನಿಟ್ಟಿನಲ್ಲಿ ಚಿಂತಿಸಿದಾಗ ತಾಯ್ನುಡಿಯು ವಂಶವಾಹಿಯಾಗಿ ಬರದೆ ಬಾಲ್ಯದ ನುಡಿಗಲಿಕೆಯ ಸಂದರ್ಭದಲ್ಲಿ ಹೆಚ್ಚಾಗಿ ಕಿವಿ ಮೇಲೆ ಬಿದ್ದ ನುಡಿಯೇ ತಾಯ್ನುಡಿ ಎಂದು ಭಾವಿಸಬೇಕಾಗುತ್ತದೆ. ಮಗು ಆ ಪದಸಂಪತ್ತನ್ನು ಪಡೆದು ಅದರಲ್ಲೇ ತನ್ನ ಭಾವನೆಗಳನ್ನು ಹೊರಹಾಕುತ್ತದೆ.

ಕೊಸರು: ಎಷ್ಟೇ ನುಡಿಗಳನ್ನು ರೂಢಿಸಿಕೊಂಡು ಎಷ್ಟೇ ನಿರರ್ಗಳವಾಗಿ ಮಾತನಾಡಿದರೂ ಮನುಷ್ಯನ ಸುಷುಪ್ತಿಯ ನುಡಿಯೇ ಬೇರೆಯಾಗಿರುತ್ತದೆ. ಅದು ಅಂತರಾತ್ಮಕ್ಕಷ್ಟೇ ಗೊತ್ತು. ಅದೇ ಮನುಷ್ಯನನ್ನು ನಿರಂತರ ಮುನ್ನಡೆಸುತ್ತದೆ. ಆ ನುಡಿಗೆ ಧ್ವನಿಯಿಲ್ಲ, ಲಿಪಿಯಿಲ್ಲ, ವ್ಯಾಕರಣವಂತೂ ಇಲ್ಲವೇ ಇಲ್ಲ. ಕಿವುಡ ಮೂಕರಿಗೂ ಆ ನುಡಿ ಗೊತ್ತು. ಆತ್ಮವಿದ್ದವರೆಲ್ಲ ಆ ನುಡಿಗೆ ಸ್ಪಂದಿಸುತ್ತಾರೆ.

-ಮರಿಜೋಸೆಫ್ 

ಕನ್ನಡ ಯಾರು ಓದುತ್ತಾರೆ ಬಿಡ್ರಿ ? ಇದು ಓದುತ್ತಿರೋದೇ ಅಲ್ವೇ????

"ಕನ್ನಡ ಯಾರು ಓದುತ್ತಾರೆ ಬಿಡ್ರಿ, ಈಗೀಗ ಕನ್ನಡ ಓದುವವರೇ ಇಲ್ಲಾ" ಎಂಬ ಮಾತುಗಳು ಬಹಳ ವರ್ಷದಿಂದ ಕೇಳುತ್ತಲೇ ಬರುತ್ತಿದೆ.ಆದರೆ ಅದೇ ಕನ್ನಡದಲ್ಲಿ ಯಾರು ಬರೆಯುತ್ತಾರೆ ಬಿಡ್ರಿ ಎನ್ನುವ ಮಾತು ಅಷ್ಟಾಗಿ ಕೇಳಿಬರುವುದಿಲ್ಲ.  ಅದೆಷ್ಟು ನಿಜವೋ ಸುಳ್ಳೋ ಗೊತ್ತಿಲ್ಲ. ಓದುವವರಿಲ್ಲ ಎಂಬುವುದನ್ನು ನಂಬುವುದು ಸ್ವಲ್ಪ ಕಷ್ಟವೇ.ತುಂಬಾ ಓದುವವರನ್ನೇನೋ ನೋಡಿದ್ದೇನೆ, ಆದರೆ ಅಂಥವರನ್ನು ತುಂಬಾ ನೋಡಿಲ್ಲ. ಹಾಗೆಂದ ಮಾತ್ರಕ್ಕೆ ತುಂಬಾ ಓದಿಕೊಂಡಿರುವವರು ತುಂಬಾ ಇಲ್ಲಾ ಎಂದಲ್ಲ, ನಾನು ತುಂಬಾ ನೋಡಿಲ್ಲ ಎಂದೆ ಅಷ್ಟೇ. ಆದರೂ ತುಂಬಾ ಜನ ಕನ್ನಡ ಓದುತ್ತಿದ್ದಾರೆ ಎಂಬುದು ಮಾತ್ರ ನನಗೆ ಗ್ಯಾರಂಟಿ. ಈ ಮೇಲಿನ ಸಾಲುಗಳಲ್ಲಿ ’ತುಂಬಾ’ ಎಂಬ ಪದ ತುಂಬಾ ಕಡೆ ಬಳಕೆಯಾಗಿದ್ದಕ್ಕೆ ಕ್ಷಮೆಯಿರಲಿ. ಅಲ್ಲೆಲ್ಲಾ ’ಬಹಳ’ ಅಂಥ ಬಳಸಬಹುದಿತ್ತು ಆದರೆ ’ತುಂಬಾ’ ಅನ್ನೋದೆ ಯಾಕೋ ತುಂಬಾ ಆತ್ಮೀಯ. ಕನ್ನಡ ಇನ್ನೂ ಹಲವಾರು ಜನರು ಓದುತ್ತಿದ್ದಾರೆ ಎನುವುದಕ್ಕೆ ನನ್ನದೇ ಆದ ಕಾರಣಗೆಳಿವೆ. 

http://bangalore.citizenmatters.in/blogs/25-check-outs
ನಿಜ ಹೇಳಬೇಕೆಂದರೆ ನನ್ನ ಪರಿಚಯದ ಗೆಳೆಯರ ಬಳಗದಲ್ಲಿ, ಓದುವವರಿಗಿಂತ ಬರೆಯುವವರೇ ಹೆಚ್ಚು. ಹಾಗೆಂದರೆ ಆ ಬರೆಯುವ ಗೆಳೆಯರು ಓದುವುದಿಲ್ಲ ಎಂದಲ್ಲ ಅಥವಾ ಅವರು ಬರೆಯುವಷ್ಟು ಓದುವುದಿಲ್ಲ ಅಂತನೂ ಅಲ್ಲಾ. ಓದುವ ಗೆಳೆಯರಿಗಿಂತ ಬರೆಯುವ ಗೆಳೆಯರ ಹೆಚ್ಚಿನ ಸಂಖ್ಯೆ ಎಂಬುದಷ್ಟೇ ನನ್ನ ಉದ್ದೇಶ. ಈ ಗೆಳೆಯರು ಬರೆದಿದ್ದೆಲ್ಲಾ ಒಂದಷ್ಟು ಜನ ಓದುತ್ತಾರೆ ಎಂದುಕೊಂಡರೂ ಆ ಒಂದು ವೃತ್ತದಲ್ಲೇ ಸುಮಾರು ಓದುಗರು ಇದ್ದಾರೆ ಎಂದು ಖಾತ್ರಿಯಾಯಿತು. ಮೊದಲೇ ಹೇಳಿದಂತೆ ಓದುವವರನ್ನೂ ಅಷ್ಟಾಗಿ ವ್ಯಯಕ್ತಿಕವಾಗಿ ನೋಡಿಲ್ಲವಾದರೂ ಈ ಬರೆಯುವವರ ಸಂಖ್ಯೆಯ ಮೇಲೆ ಓದುವವರಿದ್ದಾರೆ ಎಂಬ ಗ್ಯಾರಂಟಿಯಿದೆ. ಮಿನಿಮಮ್ ಗ್ಯಾರಂಟಿ ಇಲ್ಲದಿದ್ದರೆ ಅವರಾದರೂ ಯಾಕೆ ಬರದಾರು? ಇನ್ನೂ, ನಾನು ಬರೆದಿದ್ದಕ್ಕೆ ಹೆಚ್ಚೇನು ಪ್ರತಿಕ್ರಿಯೆ ಬರುವುದಿಲ್ಲವಾದರಿಂದ ಅದೆಷ್ಟು ಜನ ನನ್ನ ಲೇಖನಗಳನ್ನು ಓದುತ್ತಾರೆ ಎಂಬುದರ ಬಗ್ಗೆ ನನಗೇ ಜಿಜ್ಞಾಸೆ ಇದೆ, ಹಾಸ್ಯ ಲೇಖನಗಳನ್ನು ಬರೆದಾಗ ಚೆನ್ನಾಗಿ ಬರೆಯುತ್ತೀರಾ ಎಂದು ಕೆಲವರು ಹಾಸ್ಯ ಮಾಡುವುದನ್ನು ಬಿಟ್ಟರೆ ಗಂಭೀರ ಲೇಖನಗಳನ್ನು ಯಾರು ಗಂಭೀರವಾಗಿ ಪರಗಣಿಸಿದ್ದು ಕಂಡಿಲ್ಲ. 

ಇನ್ನೂ "ಕನ್ನಡ ಯಾರು ಓದುತ್ತಾರೆ ಬಿಡ್ರಿ" ಎಂಬ ಮಾತಿಗೆ ಬಂದರೆ, ಕನ್ನಡ ಓದುವವರಿಲ್ಲದೆ ಅಷ್ಟೊಂದು ಪುಸ್ತಕಗಳು ಬರುತ್ತಿವೆಯೇ? ಅದರಲ್ಲೂ ಈಗಿನ ಕೆಲವು ಕನ್ನಡ ಲೇಖಕರು ಬರೆಯುತ್ತಿರುವ ವೇಗ ನೋಡಿದರೆ ಗಾಬರಿಯುಕ್ತ ಸಂತೋಷವಾಗುತ್ತದೆ. ಮಗದೊಮ್ಮೆ ಸಂತೋಷಭರಿತ ಗಾಬರಿಯಾಗುತ್ತದೆ.ನಮ್ಮ ಜೋಗಿ ಅವರನ್ನೇ ತೆಗೆದುಕೊಳ್ಳಿ, I mean ಉದಾಹರಣೆ ತೆಗೆದುಕೊಳ್ಳಿ. ಅಗಲೇ 27 ಪುಸ್ತಕಗಳಾಯಿತಂತೆ. ಅವರ ಅಪ್ಪಟ ಅಭಿಮಾನಿಯಾದ ನನ್ನಂತವನೇ ಇನ್ನೂ ಎಂಟೋ ಹತ್ತೋ ಓದಿರಬೇಕು ಅಷ್ಟರಲ್ಲಿ 27 ಅಂತೆ. ಅಬ್ಬಾ. ಇನ್ನೂ ರವಿ ಬೆಳೆಗೆರೆ ಅವರು ಬರೆಯುತ್ತಿರುವ ರಭಸ ನೋಡಿದರೆ ಹೇಗಪ್ಪ ಎಲ್ಲಾ ಓದಿ ಮುಗಿಸೋದು ಎನ್ನುವ ಗೊಂದಲ. ಇತರ ಲೇಖರರೂ ಏನೂ ಕಮ್ಮಿ ಇಲ್ಲ ಬಿಡಿ. ಮೊನ್ನೆ ಹಿರಿಯ ಗೆಳೆಯರೊಬ್ಬರ ತಮ್ಮ ಪುಸ್ತಕವೊಂದು ಕನ್ನಡ ಸರ್ಕಾರದ ಗ್ರಂಥಾಲಯ ಇಲಾಖೆಗೆ ಆಯ್ಕೆ ಆಯಿತೆಂದು ತಿಳಿಸಿ, ಅದನ್ನು ಅವರು ಪ್ರಕಟಿಸುವ ಪಟ್ಟಿಯಲ್ಲಿ ನೋಡಿ ಖಾತ್ರಿ ಮಾಡಕೊಳ್ಳಬೇಕೆಂದು ನನ್ನನ್ನು ವಿನಂತಿಸಿದರು. ಅಷ್ಟೇ ಅಲ್ವೇ? ಆಯ್ತು ಬಿಡಿ ಸಾರ್ ಎನ್ನುತ್ತಾ ಪಟ್ಟಿಯ ಲಿಂಕ್ ತೆರೆದು ನೋಡಿ ಗಾಬರಿ ಆಯಿತು, ಈ ವರ್ಷ ಆಯ್ಕೆಯಾದ ಪುಸ್ತಕ ಪಟ್ಟಿಯಲ್ಲಿ ಸುಮಾರು ೨೦೦೦ಕ್ಕೂ ಹೆಚ್ಚು ಪುಸ್ತಕಗಳು. ಅಬ್ಬಾ ಎಷ್ಟು ಸಮೃದ್ಧವಾಗಿದೆ ನಮ್ಮ ಪುಸ್ತಕ ಪ್ರಪಂಚ. ಬರೆದ ಲೇಖಕರು, ಟೈಪ್ ಮಾಡಿದವರು, ಅದನ್ನು ಪ್ರಕಾಶಿಸಿದವರು, ಪ್ರೂಫ್ ನೋಡಿದವರು,ಪ್ರಿಂಟ್ ಮಾಡಿದವರು, ಬೈಂಡ್ ಮಾಡಿದವರು, ಆಯ್ಕೆ ಮಾಡಿದವರು, ನನ್ನಂತೆ ಪಟ್ಟಿ  ನೋಡಿ ಗಾಬರಿ ಬಿದ್ದವರು, ಆಯ್ಕೆಯಾದ ಪುಸ್ತಕಗಳನ್ನು ಗ್ರಂಥಾಲಯಗಳಲ್ಲಿ ಜೋಡಿಸುವವರು, ಅದಕ್ಕೆ ಲೇಖಕರಿಗೆ ಚೆಕ್ ತಯಾರು ಮಾಡುವವರು, ಇವರೆಲ್ಲರ ಸಂಖ್ಯೆ ಏನು ಚಿಕ್ಕದೆ? ಅಬ್ಬಾ ಕನ್ನಡ ಪುಸ್ತಕ ಜಗತ್ತೇ ಎನಿಸಿತು!!!!!

ಹಾಗೆಯೇ ಕಳೆದ ವರ್ಷ ಬೆಂಗಳೂರಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಸಮಯದಲ್ಲಿ ಆದ ಅನುಭವ ಮರೆಯಲು ಸಾಧ್ಯವೇ? ಪುಸ್ತಕ ಮಳಿಗೆಗಳಲ್ಲಿ ಕಂಡ ಅಪಾರ ಜನ ಜಂಗುಳಿ ನೋಡಿ  ನನಗೆ ಉಬ್ಬಸ ಬಂದು ಬಿಟ್ಟಿತ್ತು. ಸಂತೋಷ ಆದಾಗ ಅನಂದ ಬಾಷ್ಪ ಬರುವುದು ಸರಿ, ಹೃದಯ ಉಕ್ಕಿ ಬರುವುದು ಇನ್ನೂ ಸರಿ, ಇದಾವುದು ಉಬ್ಬಸ ಅಂದುಕೊಂಡಿರಾ?ಪುಸ್ತಕ ಮಳಿಗೆಯಲ್ಲಿ ವ್ಯವಸ್ಥೆ ಏನೋ ಎಲ್ಲವೂ ಚೆನ್ನಾಗಿಯೇ ಇತ್ತು ಆದರೆ ನೆಲಕ್ಕೆ ಏನೂ ಹಾಸಿರಲಿಲ್ಲ, ಇಲ್ಲಾ ಹಾಸಿದ್ದು ಜನರ ಉತ್ಸಾಹಕ್ಕೆ ಚೆಲ್ಲಾಪಿಲ್ಲಿಯಾಗಿತ್ತೋ ಏನೋ. ಮಣ್ಣಿನ ನೆಲದಿಂದ ಏಳುತ್ತಿದ್ದ ಧೂಳಿಗೆ ತತ್ತರಿಸಿಹೋಗಿದ್ದೆ. "ಈ ಕನ್ನಡ ಮಣ್ಣಿನ ಘಮವೇ" ಅಂತದ್ದು ಅಂತ ವೇದಿಕೆಯಲ್ಲಿ ಸಾಹಿತಿಯೊಬ್ಬರು ಮಾಡುತ್ತಿದ್ದ ಭಾಷಣ ಕೇಳಿ ಮೊದಮೊದಲು ಒಂದೆರೆಡು ಸಾರಿ ದೀರ್ಘ್ಹವಾಗಿ ಉಸಿರೆಳೆದುಕೊಂಡೆ ನೋಡಿ, ಅದೆಲ್ಲಿತ್ತೋ ಕೆಮ್ಮು ನಾಭಿಯಿಂದ ಹೊರಟು ಬಾಯಿಂದ ಹೊರ ಹೊಮ್ಮುವಷ್ಟರಲ್ಲಿ ಕೈಯಲ್ಲಿದ್ದ ಡಿಸ್ಕೌಂಟಲ್ಲಿ ಪಡೆದ ಅಷ್ಟು ಪುಸ್ತಕಗಳು ನೆಲಕ್ಕೆ ಬಿದ್ದವು.ತೆಗೆದು ಕೊಳ್ಳೋಣ ಅಂತ ಬಗ್ಗಿದ್ದೇ ತಪ್ಪಾಗಿಹೋಯಿತು. ಹಿಂದೆ ಯಾರೋ ತಳ್ಳಿದ್ದಂತಾಯಿತು. ಮುಂದೆ ನನಗಿಂತ ಮುಂಚೆ ನೆಲಕ್ಕೆ ಬಿದ್ದವರು ಕೈಹಿಡಿದು ನೆಲಕ್ಕೆ ಎಳೆದುಕೊಂಡರು. ಪುಸ್ತಕ ಮಳಿಗೆಯೊಂದರ ಕ್ಯಾಶಿಯರ್ ಮುಂದೆ ಸಾಷ್ಟಾಂಗ ನಮಸ್ಕ್ರಾರ ಮಾಡಿದಾಯ್ತು. ಪಾಪ ಅವರಿಗೆ ಅವರ ಕಂಪ್ಯೂಟರಿನ ವಯರ್ ಎಲ್ಲೆ ಎಳೆದುಬಿಡುವೆನೋ ಎಂಬ ಗಾಬರಿ. "ಈ ಮಣ್ಣಿನ ಋಣ ಮರೆತರೆ ಅವನಿಗಿಂತ ನಿರ್ಭಾಗ್ಯ ಇನ್ಯಾರಿಲ್ಲ" ಎನ್ನುತ್ತಿದ್ದ ಭಾಷಣ ಸಾಹಿತಿಯ ಮಾತು ಬೇಡವೆಂದರೂ ಕೇಳಿಸುತ್ತಿತ್ತು. ಬಟ್ಟೆಗೆ ಅಂಟಿಕೊಂಡಿದ್ದ ಮಣ್ಣಿನ ಋಣವನ್ನು ನಿಧಾನವಾಗಿ ಒದರುತ್ತಾ ಏಳುತ್ತಿದ್ದಂತೆ ಆ ಮಳಿಗೆಯ ಓನರ್ ’ಇರಲಿ ಇರಲಿ ನಮಗ್ಯಾಕಪ್ಪ ನಮಸ್ಕ್ರಾರ’ ಎಂಬ ಮುಖ ಭಾವದಲ್ಲಿ ನನ್ನ ಭುಜ ಹಿಡಿದು ಎಬ್ಬಿಸಿದರು. "ಬುಕ್ಸ್ ಬುಕ್ಸ್ ಹುಷಾರೀ" ಅಂತ ಇನ್ಯಾರೋ ಅಂದರು. ’ಮುಗಿಬಿದ್ದು ಕನ್ನಡ ಪುಸ್ತಕ ಖರೀದಿಸಿದ ಕನ್ನಡ ಜನತೆ’ ಎಂಬ ಮಾರನೆಯ ದಿನದ ದಿನಪತ್ರಿಕೆಯ ಹೆಡ್ಡಿಂಗನ್ನು ನನ್ನ ನೋಡಿಯೇ ಬರೆದರೇನೋ? ಕನ್ನಡ ಪುಸ್ತಕ ಪ್ರಿಯರು ಇನ್ನೂ ಅಪಾರ ಸಂಖ್ಯೆಯಲ್ಲಿ ಇದ್ದಾರೆ ಎಂಬುದಕ್ಕೆ ಆ ದಿನವೇ ಸಾಕ್ಷಿ . ಕೆಲವೊಂದು ಸತ್ಯಗಳು ಎದ್ದಿರುವಾಗಿಂತಲೂ ಬಿದ್ದಾಗಲೇ ಅರಿವಾಗುವುದು. ಹಾಗೆ ಎದ್ದ ನಾನು ಈ ವಿಷಯದಲ್ಲಿ ಮತ್ತೆ ಬಿದ್ದಿಲ್ಲ. 

ಇನ್ನೂ ಗಾಂಧಿನಗರದ ಪುಸ್ತಕ ಮಳಿಗೆಯೊಂದಕ್ಕೆ ಹೋದಾಗ ಬೈಕ್ ಗೆ ಪಾರ್ಕಿಂಗ್ ಸಿಗಲಿಲ್ಲ. ಅಲ್ಲೇ ಪಕ್ಕದ ಹೋಟೆಲ್ಲಿನ ಜಾಗದಲ್ಲಿ ಪಾರ್ಕಿಂಗ್ ಸಿಕ್ಕಿತು. ಹಾಗದರೆ ಒಂದು ಹೋಟೆಲಿಗಿಂತ ಪುಸ್ತಕ ಮಳಿಗೆಗೆ ಹೆಚ್ಚು ಮಂದಿ ಹೋಗುತ್ತರೆಯೇ ಎಂಬ ಅನುಮಾನ ಕಾಡಲು ಶುರುವಾಯಿತು. ಇದು ಜ್ಞಾನದ ಹಸಿವು ಹೆಚ್ಚುತ್ತಿರುವ ಸಂಕೇತವೇ ಎಂಬ ಮತ್ತೊಂದು ಪ್ರಶ್ನೆ ಎದುರಾಯಿತು.Food for thought ಎಂದು ಕೊಂಡು ಮುಂದೆ ನಡೆದಾಗ ಎಲ್ಲರ ಮನೆಯಲ್ಲೂ ಹೆಂಡತಿಯೋ,ತಾಯಿಯೋ ಅಡುಗೆ ಮಾಡೇ ಮಾಡುತ್ತಾರೆ, ಅದೇ ಎಲ್ಲಾ ಮನೆಯಲ್ಲೂ ಹೆಂಡತಿ, ತಾಯಿ ಪುಸ್ತಕ ಬರೆಯುವುದಿಲ್ಲವಲ್ಲ ಎಂಬ ಉತ್ತರ ಹೊಳೆಯಿತು. ಮಾಡಿದ ಅಡುಗೆ ತಿನ್ನುವುದಲ್ಲದೇ ಹೆಂಡತಿ ಬರೆದದ್ದನ್ನು....... ಓಕೆ ಬೇಡ. ಬಿಡಿ.

ಕಳೆದ ವರ್ಷ ಸಮ್ಮೇಳನದಲ್ಲಿ ಖರೀದಿಸಿದ ಅಷ್ಟೂ ಪುಸ್ತಕಗಳಲ್ಲಿ ಹೆಚ್ಚಿನವನ್ನು ಇನ್ನೂ ಓದೇ ಇಲ್ಲಾ, ಸಮಯ ಸಿಕ್ಕಾಗ ಓದಬೇಕು ಎಂದುಕೊಳ್ಳುತ್ತಲೇ ತುಂಬಾ ಸಮಯವಾಗಿದೆ. ಓದಲು ಕುಳಿತಾಗ ಬರೆಯಬೇಕು ಅನಿಸುತ್ತದೆ, ಬರೆಯಬೇಕಾದಾಗ ಓದಬೇಕು ಅನ್ನಿಸುತ್ತದೆ. Atleast ಬರೆದದ್ದನ್ನೇ ಒಮ್ಮೆ ಓದಿಕೊಂಡರೆ, ಬರೆದಿದ್ದರಲ್ಲಿ ಇಷ್ಟೆಲ್ಲಾ ತಪ್ಪುಗಳಿರುತ್ತಿರಲಿಲ್ಲವೇನೋ? 


"ಕನ್ನಡ ಪುಸ್ತಕ ತಗೋತ್ತಾರೆ, ಆದ್ರೆ ಯಾರ್ ಓದ್ತಾರೆ ಬಿಡಿ" ಅನ್ನೋದು ಲೇಟಸ್ಟ್ ಮಾತು. ಏನಂತೀರ? 

ಕನ್ನಡ ಎನೆ ಕಿವಿ ನಿಮಿರುವುದು"


"ಕನ್ನಡ ಎನೆ ಮನ ಕುಣಿಯುವುದು
ಕನ್ನಡ ಎನೆ ಕಿವಿ ನಿಮಿರುವುದು"

ಇದು ಕುವೆಂಪು ಬರೆದ ಒಂದು ಕಾವ್ಯದ ಪ್ರಸಿದ್ಧ ಸಾಲು. ತಾವು ಪದ್ಯಗಳನ್ನು ಗೀಚುವ ಗೀಳಿಗೆ ಅಂಟಿಕೊಂಡಾಗ, ಇಂಗ್ಲೀಷ್ ನ ವ್ಯಾಮೋಹ ಅವರನ್ನು ಬಹಳವಾಗಿ ಅಪ್ಪಿಕೊಂಡಿತ್ತು. ಅಷ್ಟೆ ಏಕೆ ಮೊದಮೊದಲು ಕವನಗಳನ್ನು ಸಹ ಆಂಗ್ಲದಲ್ಲಿ ಬರೆದರು. ಒಂದು ಕವನ ಸಂಕಲನವಾಗಿ ಹೊರತಂದ್ದಿದರು. ಬಹುಷಃ ಅಂದಿನ ಬ್ರಿಟಿಷ್ ಆಳ್ವಿಕೆಯಲ್ಲಿ ಬದುಕುತ್ತಿದ್ದ ನಮ್ಮವರಿಗೆ ಎಲ್ಲೆಲ್ಲೂ ಇಂಗ್ಲೀಷ್ ನ ಭಾಷೆ, ಶೈಲಿ, ಉಡುಪು ಮತ್ತು ಅವರ ಸಂಸ್ಕೃತಿ ಆಕರ್ಷಿಸದೆ ಇದ್ದಿರಲಾರದು. ಇಂತಹ ಸಂದರ್ಭದಲ್ಲಿ ಕುವೆಂಪು ಆಂತಹ ಕುವೆಂಪುರವರಿಗೇ ಆ ಮೋಹ ವ್ಯಾಪಿಸಿತ್ತು ಕೂಡ.

ಕ್ರಮೇಣ ಕನ್ನಡದ ಬಗ್ಗೆ ಇರಬೇಕಾದ ಔನತ್ಯ, ಅಂತಃಕರಣ, ಕಾಳಜಿಯಂತಹ ಒಂದು ಹಿತನುಡಿಯಿಂದ ಮುಂದೆ ಕುವೆಂಪುರವರು ಕನ್ನಡದಲ್ಲಿ ಪ್ರಾರಂಭಿಸಿದ ತಮ್ಮ ಕಾವ್ಯಮಯ ಜೀವನ ಕನ್ನಡಕ್ಕೊಂದು ನೆಲೆಗಟ್ಟು ಕಟ್ಟಿಕೊಡುವಲಿ ಯಶಸ್ವಿಯಾಯಿತು. ಅಷ್ಟೆ ಏಕೆ ಕನ್ನಡವನ್ನು ಉತ್ಕೃಷ್ಟವಾಗಿ ಪ್ರೀತಿಸುವುದು ಅಂದರೆ ಏನು ಅನ್ನುವುದಕ್ಕೆ ಕುವೆಂಪುರವರ ಈ ಮೇಲಿನ ಕಾವ್ಯ ಸಾಲುಗಳು ಸಾಕು.

ಇದು ಕೇವಲ ಗುರುವಿನ ಹಿತನುಡಿಗೆ ಹುಟ್ಟಿದ ಲೇಪನವಲ್ಲ ಅಥವಾ ಕನ್ನಡ ಜನತೆಯಿಂದ ಮೆಚ್ಚುಗೆ ಪಡೆಯುವ ಸಲುವಾಗಿ ಬರೆದದ್ದಲ್ಲ. ತನ್ನ ಆಂತರ್ಯದಿಂದ ಉಕ್ಕಿ ಬರುವ ಕನ್ನಡದ ಮೇಲಿನ ಪ್ರೇಮದ ಸಿರಿ ಆ ಸಾಲುಗಳು. ಆ ಪ್ರೇಮದ ಫಲವೇ ಮುಂದೊಂದು ದಿನ ಕುವೆಂಪು ಎಂದರೆ "ಕನ್ನಡದ ಪ್ರತೀಕ" ಎನ್ನುವಷ್ಟು ನಾಡಿನ ಮನ ಮಿಡಿತಗಳಲ್ಲಿ ಧೃಡವಾಗಿಹೋದರು. ವಿಶ್ವವಿದ್ಯಾಲಯದಲ್ಲಿ ಕುಲಪತಿಗಳಾಗಿ ತಾವು ನೀಡಿದ ಸೇವೆಯಿಂದಿಡಿದು ಕನ್ನಡಕ್ಕೆ ಪ್ರಥಮ ಭಾರತೀಯ ಜ್ನಾನಪೀಠ ಪ್ರಶಸ್ತಿಯನ್ನು ದಕ್ಕಿಸಿಕೊಡುವವರೆಗೂ ಸಂಪೂರ್ಣ ನಾಡಿಗರಾಗಿ ದುಡಿದರು. ವೈಚಾರಿಕತೆಗೆ ಒತ್ತುಕೊಟ್ಟು ವಿಶ್ವಮಾನವರಾಗಿ ಎಂಬ ಸಂದೇಶವನು ನೀಡಿದ್ದು ಸಹ ಈ ಮಣ್ಣಿನ ಗುಣವನ್ನು ಅವಗಣಿಸಿಕೊಂಡಿದ್ದಾಗಲೇ. ಇಂತಹ ಚಿತ್ತಸಜ್ಜಿತವಾದ ಕನ್ನಡ ಪ್ರೇಮ ಹುಟ್ಟಿದು ಆಕಸ್ಮಿಕವಂತೂ ಖಂಡಿತ ಅಲ್ಲ, ಲಾಭಿಗಾಗಿ ಮತ್ತೂ ಅಲ್ಲ. ರನ್ನತ್ರಯರಿಂದ ಆದಿಯಾಗಿ ಕುಮಾರ ರಾಘವಾಂಕರ, ರಾಜ ವೀರಮಲ್ಲರ, ಅಕ್ಕ, ಸರ್ವ, ಕನಕ ಪುರಂದರದಾಸರುಗಳು ಹಾದುಹೋದ ಇತಿಹಾಸವನ್ನು ಪಠಿಸಿದ್ದರಿಂದ. ಜೊತೆಜೊತೆಯಲಿ ಮಹಾನ್ ಕನಸುಗಾರ ಸರ್ ವಿಶ್ವೇಶ್ವರಯ್ಯ, ಸೈದ್ಧಾಂತಿಕ ರಾಜಕಾರಿಣಿ ನಿಜಲಿಂಗಪ್ಪ, ಸಂಗೀತ ಸಾಮ್ರಾಜ್ನೆ ಗಂಗೂಬಾಯಿ ಹಾನಗಲ್ ನಾಟಕ ಬ್ರಹ್ಮ ಗುಬ್ಬಿವೀರಣ್ಣ ವೀಣೆಶೇಷಣ್ಣರಂತವರ, ಸಹಪಾಠಿಗಳಾದ ಪದಬ್ರಹ್ಮ ಬೇಂದ್ರೆ, ಕನ್ನಡದ ಆಸ್ತಿ ಮಾಸ್ತಿಯರಂತಹವರು ಮಾಡಿದ ಸಾಧನೆಗಳನ್ನು ಅವಲೋಕಿಸುವುದರ ಮೂಲಕ ಕನ್ನಡದ ಕಂಪನ್ನು ಅಸ್ವಾದಿಸಿದರು.

ಮಲೆನಾಡಿನ ಸೊಬಗಿಗೆ ಗಂಧದ ಪರಿಮಳಕ್ಕೆ ಸಹ್ಯಾದ್ರಿಯ ಸಾಲು ಬೆಟ್ಟದ ಶೃಂಗಾರಕ್ಕೆ ಕರಾವಳಿ ತೀರದ ಮೌನಕ್ಕೆ ಮನಸೋತರು. ಪಟ್ಟದಕಲ್ಲು ಐಹೊಳೆ ಅಜಂತ ಎಲ್ಲೊರದ ವಾಸ್ತುಶಿಲ್ಪದಲ್ಲಿನ ಉತ್ತಮಿಕೆ, ಹಂಪಿ ಹಳೆಬೀಡು, ಗೊಮ್ಮಟದಂತ ಅದ್ಭುತ ಕಲಾಕೆತ್ತನೆ, ಗೊಲ್ಗುಂಬಜ್: ಮೈಸೂರು ಅರಮನೆಗಳ ನಿರ್ಮಾಣಗಳನ್ನು ಆಧ್ಯಾತ್ಮಿಸಿದರು. ಮೌರ್ಯ ಕದಂಭಾದಿ, ಹೊಯ್ಸಳ ವಿಜಯನಗರ ಸಾಮ್ರಾಜ್ಯದ ಆಳ್ವಿಕೆ ನಮ್ಮ ನಾಡಿನ ಸಾಮಾಜಿಕ ರಾಜಕೀಯ ಮತ್ತು ಸಾಂಸ್ಕೃತಿಕ ಬೆಳವಣಿಗೆಗೆ ನೀಡಿದ ಕೊಡುಗೆಗಳನ್ನು ಮಾನದಂಡವನ್ನಾಗಿಸಿಕೊಂಡು ಪರಿಶೀಲಿಸಿದರು. ಆಗುಂಬೆ ಜೋಗಿನ ಸಿರಿ ಸಕಲವನ್ನು ಧ್ಯಾನಿಸಿದರು.

ಒಟ್ಟಾರೆ ಕರ್ನಾಟಕದ ಸರ್ವಕಾಲಿಕ ಸಂಸ್ಕೃತಿಯನ್ನು ಮತ್ತು ಶ್ರೀಮಂತಿಕೆಯನ್ನು ಬಿಡಿಬಿಡಿಯಾಗಿ ಅಧ್ಯಯಿನಿಸಿ ಆಕರ್ಷಿತರಾದರು. ಕನ್ನಡಗ್ರಂಥಮಾಲಿಕೆಗಳಲ್ಲಿ ಶ್ಲೋಕ ವಚನಗಳಲಿ ಉಕ್ತಿಗಳಲಿ ಪವಡಿಸಿದರು. ಇದೆಲ್ಲದರ ಪ್ರಭಾವವೇ ಅದೊಂದು ದಿನ ಬರೆದ "ಕನ್ನಡ ಎನೆ ಮನ ಕುಣಿಯುವುದು ಕನ್ನಡ ಎನೆ ಕಿವಿ ನಿಮಿರುವುದು" ಎಂಬ ಅಭಿಮಾನದ ನುಡಿ.

ಆದರೆ ಪ್ರಸ್ತುತ ದಿನಗಳಲಿ ಕನ್ನಡವು ಅವನತಿಯ ದಾರಿ ತುಳಿದಿದೆ ಎಂಬ ಆತಂಕ, ಕಾಳಜಿ ಇರುವ ಮನಗಳನ್ನು ಕಾಡುತ್ತಿರುವುದು ಮಾತ್ರ ಸುಳ್ಳಲ್ಲ. ಕಾರಣ ಮಹಾನ್ ಚೇತನ ಕುವೆಂಪುರನ್ನು ಒಳಗೊಂಡು ಇನ್ನೂ ಆನೇಕ ಕರ್ನಾಟಕರತ್ನವರ್ಯರ ಆದರ್ಶಮಯ ಬದುಕನ್ನು ಈಗಿನ ತಾಂತ್ರಿಕ ಪೀಳಿಗೆ ಆಶ್ವಾದಿಸುವುದರಲ್ಲಿ ವಿಫಲವಾಗಿದೆ. ಎಲ್ಲರು ಕುವೆಂಪು, ಡಾ. ರಾಜ್ ಕುಮಾರ್ ಅಗುವುದು ಸಾಧ್ಯವಾಗದೇ ಇರಬಹುದು  ಕನಿಷ್ಟ ಪಕ್ಷ ನಮ್ಮ ತಾಯ್ನೆಲ ತಾಯ್ನಾಡಿನ ಬಗ್ಗೆ ಅಚಲ ವಿಶ್ವಾಸ, ನಿಶ್ಚಲ ಪ್ರೀತಿ ಬೆಳೆಸಿಕೊಳ್ಳಬೇಕಾಗಿದೆ. ನಮ್ಮ ನಾಡಿನ ಇತಿಹಾಸ ಸಂಸ್ಕೃತಿ ಹೋರಾಟ ಚರಿತ್ರೆಗಳ ಮೇಲೆ ಬೆರಳಾಡಿಸಬೇಕಾಗಿದೆ. ಆಗ ಮಾತ್ರ "ಕನ್ನಡ ಎನೆ ಮನ ಕುಣಿಯುವುದು ಕನ್ನಡ ಎನೆ ಕಿವಿ ನಿಮಿರುವುದು" ಎಂಬ ಸಾಲಿಗೆ ಅರ್ಥಸಿಗುವುದು. ನಮ್ಮ ಕನ್ನಡ ಪ್ರೀತಿಗೆ ಪ್ರತಿಫಲ ದೊರೆಯುವುದು.

-ಸಂತೋಷ್.
!

ವಿಮೋಚನೆ


ಈ ಹಿಂದೆ ಪ್ರಕಟವಾಗಿದ್ದ ಕವಿತೆ, ಮರು ಓದಿಗೆ

ಹಲೋ ಅನು…
ವಿಮೋಚನೆ ಬಗ್ಗೆ ಮೂಡಿದ ಕೆಲವು ಸಾಲುಗಳು

ಬುದ್ಧ ಹೇಳಿದ,..
ಆಸೆಗಳಿಗೆ ತಳವಿಲ್ಲದಂತಾಗಲಿ
ನಿನ್ನ ಬದುಕಿನ ಪಾತ್ರೆ…
ಕಾಣುವುದು ಆಗ ಬದುಕು ವಿಮೋಚನೆಯ ಸವಿನಿದ್ರೆ

ಇನ್ನೊಬ್ಬ ಗುರು ಹೇಳಿದ,..
ಅಜ್ಞಾನದ ಕೋಣೆಯ ಬಿಟ್ಟು
ಜ್ಞಾನ ಕೋಣೆಯ ಕಡೆಗೆ ಗುರಿಯಿಟ್ಟು
ನಡೆದು ಸೇರುವುದೇ ವಿಮೋಚನೆಯ ಗುಟ್ಟು..

ವಿಮೋಚನೆಯ ಪ್ರತಿಪಾದಕ ದೈವಶಾಸ್ತ್ರಜ್ಞ ಹೇಳಿದ..
ಅಸಮಾನತೆ, ಶೋಷಣೆ ಜಗತ್ತು ಕೊನೆಗೊಂಡು
ಹೂಸ ಜಗತ್ತು ಸೃಷ್ಟಿಗೊಂಡು
ದೇವರಾಜ್ಯದ ಪ್ರತಿಬಿಂಬವಾಗುವುದೇ ವಿಮೋಚನೆಯ ಒಗಟ್ಟು..

ನಾನು ನನ್ನನೇ ಕೇಳಿದೆ…
ವಿಮೋಚನೆ ಎಂದರೇನು?
ನನ್ನ ಮರೆತು ಇನ್ನೊಬ್ಬನಿಗೆ ಸಹಾಯ ಹಸ್ತಚಾಚುವಾಗ..
ಭಯ ಮರೆತು ದಬ್ಬಾಳಿಕೆಯ ವಿರುದ್ಧ ದನಿ ಎತ್ತುವಾಗ
ಕಳವಳ ಬಿಟ್ಟು ಇನ್ನೊಬ್ಬನಲ್ಲಿ ವಿಶ್ವಾಸವಿರುಸುವಾಗ..
ಹೀಗೆ ಬದುಕಿನ ಪ್ರತಿಕ್ಷಣದ ದಂದ್ವದಲ್ಲಿ..
ಕೆಟ್ಟತನ ಬಳಲಿ ಸೋತು ತನ್ನಲ್ಲಿ
ಒಳ್ಳೆತನ ಗೆಲ್ಲುವುದೇ ವಿಮೋಚನೆ… ಅದೇ ನಿಸ್ವಾರ್ಥ.. ನ್ಯಾಯ…ವಿಶ್ವಾಸ… ಮಾನವೀಯತೆ
ಆದ್ದರಿಂದ ವಿಮೋಚನೆಂಬುವುದು….
ದೂರದ ಮಾತಲ್ಲ.. ತಲುಪುವ ಸ್ಥಳವಲ್ಲ
ಅದು ಪ್ರತಿಕ್ಷಣದ ಗೆಲ್ಲುವು..ಕ್ಷಣ ಹೆಜ್ಜೆಯ ಒಲವು…

ಜೋವಿ
Read more!

ಕ್ರಿಕೆಟ್ ಹಾಗೂ ನವೆಂಬರ್ 15

ಕರ್ನಾಟಕ ಹಾಗೂ ಕ್ರಿಕೆಟ್‌ಗೂ ಒ೦ದು ಅವಿನಾಭಾವ ಸಂಬಂಧ. ಅದು ಕೇವಲ ಕರ್ನಾಟಕದಿಂದ ಭಾರತವನ್ನು ಪ್ರತಿನಿಧಿಸಿದ ನಮ್ಮ ಕ್ರಿಕೆಟಿಗರ ಸಂಖ್ಯೆಗೆ ಮಾತ್ರ ಸೀಮಿತವಾಗಿಲ್ಲ. ಘೆನ್ತ್ಲೆಮೆನ್ಸ್ ಘಮೆ ಎಂದೇ ಕರೆಸಿಕೊಳ್ಳುವ ಈ ಆಟವನ್ನುನಿಜಕ್ಕೂ Gentlemenಗಳ ರೀತಿಯಲ್ಲಿ ಆಡಿದವರು ನಮ್ಮ ಕರ್ನಾಟಕದ ಆಟಗಾರರು. ಅಂತಹ ಆಟಗಾರರಲ್ಲಿ ಇಂದಿಗೂ ಇಡೀ ಕ್ರಿಕೆಟ್ ವಿಶ್ವವೇ ಪ್ರೀತಿಯಿಂದ ನೆನಸಿಕೊಳ್ಳುವ ಆಟಗಾರನೆಂದರೆ ನಮ್ಮ ಜಿ.ಆರ್.ವಿಶ್ವನಾಥ್, ಎಲ್ಲರ ಪ್ರೀತಿಯ ವಿಶಿ.  


ವಿಶ್ವನಾಥ್ ಎಂದಾಕ್ಷಣ ಅವರ ಸ್ಕ್ವೇರ್ ಕಟ್, ಡೆಲಿಕೆಟ್ ಕಟ್, ಡ್ರೈವ್‌ಗಳು ಎಷ್ಟು ಪ್ರಸಿದ್ಧವೋ ಅಂತೆಯೇ  ವಿನಯ, ಒಳ್ಳೆಯತನ ಹಾಗೂ ಕ್ರೀಡಾ ಮನೋಭಾವಕ್ಕೂ ವಿಶಿ ಅಷ್ಟೇ ಪ್ರಸಿದ್ಧರು. ಒಂದರ್ಥದಲ್ಲಿ ಇಡೀ ಕರ್ನಾಟಕ ಕ್ರಿಕೆಟಿನ, ಕ್ರಿಕೆಟ್ ಬಳಗದ ಸಾಂಸ್ಕೃತಿಕ ರಾಯಭಾರಿ ನಮ್ಮ ವಿಶಿ. ಅದೇ  ಪರಂಪರೆಯನ್ನು ಉಳಿಸಿಕೊಂಡು ಬಂದವರು ನಮ್ಮ ಕುಂಬ್ಳೆ, ಶ್ರೀನಾಥ್, ವೆಂಕಿ, ಡ್ರಾವಿಡ್‌ನಂಥವರು. ವಿಶ್ವನಾಥ್ ಆಡಿದ ರಾಜ್ಯದಿಂದ ಬಂದವರು ಎಂದ ಮೇಲೆ ವಿನಯ, ಕ್ರೀಡಾ ಮನೋಭಾವ ಇರಲೇಬೇಕು ಎಂದು ನಿರೀಕ್ಷಿಸುವಷ್ಟು ಪ್ರಸಿದ್ಧಿ ನಮ್ಮ ವಿಶಿಯದು.  ಇದೇ ಮನೋಭಾವದ, ಮನಸ್ಸಿನ ಆಟಗಾರ ಸಚಿನ್ ತೆಂಡೂಲ್ಕರ್. ವಿಶಿ ಹಾಗೂ ಸಚಿನ್  ಅಂತರಾಷ್ಟ್ರೀಯ ಕ್ರಿಕೆಟಿಗೆ ಪಾದಾರ್ಪಣ ಮಾಡಿದ್ದು ನವೆಂಬರ್ 15ರಂದೇ. ತನ್ನ ಅತ್ಯದ್ಭುತ ಕಲಾತ್ಮಕ ಆಟದಿಂದ ಆಪಾರ ಸಾಧನೆ, ದಾಖಲೆ, ಪ್ರೀತಿ ಗಳಿಸಿದ ಸಚಿನ್ ಪಾದಾರ್ಪಣೆ ಮಾಡಿದ 20 ವರ್ಷಗಳ ಹಿಂದೆ ಅಂದರೆ 1969 ರಲ್ಲಿ ಪ್ರಾರಂಭವಾದದ್ದು ವಿಶಿಯ ಕಾವ್ಯದಂಥ ಅಂತರಾಷ್ಟ್ರೀಯ ಕ್ರಿಕೆಟ್ ಜೀವನ. ಸಚಿನ್‌ನದು ಪಾಕಿಸ್ತಾನದ ಎದುರಾದರೆ, ವಿಶಿಯದು ಆಸ್ಟ್ರೇಲಿಯ ವಿರುದ್ಧ. ಕಾಕತಾಳಿಯವೋ ಅಥವಾ ದಿನದ ಮಹಿಮೆಯೋ, ಭಾರತ  ಕಂಡ ಇಬ್ಬರು ಮಹಾನ್ ಕಲಾತ್ಮಕ ಆಟಗಾರರು ಕ್ರಿಕೆಟಿಂದ ಜಗವನ್ನು ಬೆಳಗಿಸಲು ಪ್ರಾರಂಭಿಸಿದ್ದು ಒಂದೇ ದಿನ.

ಕ್ರಿಕೆಟ್ ಆಟವನ್ನು ಹೇಗೆ ಆಡಬೇಕು, ಮೈದಾನದ ಒಳಗೂ, ಹೊರಗೂ ಹೇಗೆ ನಡೆಸುಕೊಳ್ಳಬೇಕು ಎನ್ನುವುದಕ್ಕೆ ದೊಡ್ಡ ಮಾದರಿ ಈ ಇಬ್ಬರು ಕ್ರಿಕೆಟಿಗರು. 91 ಟೆಸ್ಟ್ ಹಾಗೂ 25 ಒಂದು ದಿನದ ಪಂದ್ಯಗಳನ್ನಾಡಿದ ವಿಶಿ, ಇತರರು ಕಷ್ಟ ಪಡುತ್ತಿದ್ದ, ತಿಣುಕಾಡುತ್ತಿದ್ದ ಪಿಚ್‌ಗಳಲ್ಲಿ ಲೀಲಾಜಲವಾಗಿ ಆಡುತ್ತಿದ್ದವರು. ವಿಶಿಯ ಆಟವನ್ನು ಕಣ್ಣಾರೆ ಕಂಡವರ ಬಣ್ಣನೆಯನ್ನು ಕೇಳುವುದೇ ಒಂದು ಸೊಗಸು. ಇನ್ನೂ ಸಚಿನ್ ಗಳಿಸಿರುವ ರನ್ನುಗಳು, ಮಾಡಿರುವ ಸಾಧನೆ, ದಾಖಲೆಗಳು ಎಲ್ಲರಿಗೂ ತಿಳಿದ ವಿಷಯವೇ. ಕೇವಲ 14 ಶತಕಗಳನ್ನು ಗಳಿಸಿದರೂ ವಿಶಿಯ ಆಟಕ್ಕೆ ವಿಶೇಷವಾದ ಮೆರಗು. 1978ರ ಸರಣಿಯಲ್ಲಿ ಚೆನ್ನೈನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಗಳಿಸಿದ 124 ರನ್ನುಗಳ ಇನ್ನಿಂಗ್ಸನ್ನು ಭಾರತ ನೆಲದಲ್ಲಿ ಯಾವುದೇ ಆಟಗಾರ ಆಡಿದ  ಅತ್ತ್ಯುತ್ತಮ ಇನ್ನಿಂಗ್ಸ್‌ಗಳಲ್ಲಿ ಒಂದು ಪರಿಗಣಿಸಲಾಗುತ್ತದೆ. ತಮ್ಮ ಕ್ರೀಡಾ ಮನೋಭಾವಕ್ಕೆ ಹೆಸರಾದ ವಿಶಿ ಅಂಪೈರ್ ತೀರ್ಪುಗಳನ್ನು ಎಂದೂ ಪ್ರಶ್ನಿಸಿದವರಲ್ಲ. ಅಂಥಹ ವಿಶಿ ಅದೊಮ್ಮೆ ಅಂಪೈರ್ ತೀರ್ಪಿಗೆ ವಿರುದ್ಧವಾಗಿ ನಡೆದುಕೊಳ್ಳುವ ಘಟನೆ ನಡೆಯಿತು. ಅದು ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯ.  Golden Jubilee ಟೆಸ್ಟ್ ಎಂದೇ ಕರೆಸಿಕೊಂಡ ಪ್ರತಿಷ್ಟಿತ ಟೆಸ್ಟ್ ಪಂದ್ಯ. ಇಂಗ್ಲೆಂಡಿನ ಬಾಬ್ ಟೇಲರ್‌ಅನ್ನು ಅಂಪೈರ್ ತಪ್ಪಾಗಿ ಔಟ್ ಎಂದು ತೀರ್ಪು ಕೊಟ್ಟಾಗ, ನಾಯಕನಾಗಿದ್ದ ವಿಶ್ವನಾಥ್ ಅವರನ್ನು ವಾಪಸ್ ಕರೆಸಿದರು. ಮುಂದೆ ಇದೇ ಟೇಲರ್, ಬಾಥಮ್ ಜೊತೆ ಸೇರಿಕೊಂಡು ಪೇರಿಸಿದ ರನ್ನುಗಳಿಂದಾಗಿ ಭಾರತ ಆ ಟೆಸ್ಟ್‌ನ್ನು ಸೋಲಬೇಕಾಯಿತು. ಆದರೆ ವಿಶ್ವನಾಥ್ ಹಾಗೂ ಭಾರತ ಇಡೀ ಕ್ರಿಕೆಟ್ ವಿಶ್ವದ ಪ್ರೀತಿ ಹಾಗೂ ಗೌರವವನ್ನು ಗಳಿಸಿ ಆಗಿತ್ತು. 

ಪ್ರಾಯಶ: ಅಂಪೈರ್‌ಗಳ ಕೆಟ್ಟ ತೀರ್ಪಿಗೆ ಬಲಿಯಾದ ಸಂಖ್ಯೆಯಲ್ಲಿ ಸಹಾ ಸಚಿನ್‌ನದೇ ದಾಖಲೆ ಇರಬೇಕು. 90ರ ಆಸುಪಾಸಲ್ಲಿ ಓಟಾದ ಆಟಗಾರರಲ್ಲಿ ಸಹಾ ಸಚಿನ್‌ನದೇ ಅಗ್ರಸ್ಥಾನವಿರಬೇಕು. ಆದರೂ ಒಂದು ದಿನವಾದರೂ ಮೈದಾನದಲ್ಲಿ ತಮ್ಮ ಅಸಮಾಧಾನವನ್ನು ತೋರಿದವರಲ್ಲ ಸಚಿನ್. ಗಳಿಸಿದ ರನ್ನು, ಮಾಡಿದ ಸಾಧನೆಗಳನ್ನು ಮೀರಿ ಜನಮನಗಳಲ್ಲಿ ಭದ್ರವಾದ ಸ್ಥಾನಗಳನ್ನು ಪಡೆದಿರುವಕ್ಕೆ ಕಾರಣ ಇಂಥವುಗಳೇ. ತನ್ನ ಮೇಲೆ ಏನೇ ಅಪವಾದಗಳಿದ್ದರೂ ಅದಕ್ಕೆ ತಮ್ಮ ಬ್ಯಾಟ್‌ನಿಂದಲೇ ಉತ್ತರ ನೀಡುತ್ತಾ ಬಂದಿರುವ ಸಚಿನ್ ಈ ೨೦ ವರ್ಷಗಳಲ್ಲಿ ಬೆಳೆದು ಬಂದಿರುವ ಪರಿ ನಿಜಕ್ಕೂ ಅಚ್ಚರಿ ಮೂಡಿಸುವಂಥದ್ದು.  ತನ್ನ ಯಶಸ್ಸಿನ ಸಂತೋಷವನ್ನು ಹಂಚಿಕೊಳ್ಳಲು ತನ್ನೊಂದಿಗೆ ಕೋಟ್ಯಾಂತರ ಜನರಿರುವಾಗ ಅದಕ್ಕಿಂತ ದೊಡ್ಡ ಸಂತೋಷವೇನಿದೆ ಎಂದಿದ್ದಾರೆ ಸಚಿನ್. ಅಂತೆಯೇ ಅಂದಿನ ಕಾಲದಲ್ಲಿ ರಣಜಿ ಪಂದ್ಯಕ್ಕೇ ಸಾವಿರಾರು ಜನರನ್ನು ಕ್ರೀಡಾಂಗಣಕ್ಕೆ ಬರುವಂತೆ ಮಾಡುತ್ತಿದ್ದ  ವಿಶ್ವನಾಥ್‌ನಂಥ ಆಟಗಾರರು ಇಂದು ಅಪರೂಪ. ರಾಜ್ಯ, ದೇಶವನ್ನೂ ಮೀರಿ ಪ್ರೀತ್ಯಾದರಗಳನ್ನು ಗಳಿಸಿದ ವಿಶಿ, ಸಚಿನ್‌ರಂಥ ಆಟಗಾರರ ಸಂತತಿ ಇನ್ನಷ್ಟು ಹೆಚ್ಚಲಿ ಎಂದು ಹಾರೈಸೋಣ. ಇಂಥಹ ಮಹಾನ್ ಮಾನವೀಯ ಆಟಗಾರರ ಪಾದಾರ್ಪಣಕ್ಕೆ ವೇದಿಕೆಯಾದ ನವೆಂಬರ್ 15ರಂಥ ದಿನಗಳೂ ಕ್ರಿಕೆಟ್‌ನಲ್ಲಿ ಹೆಚ್ಚಲಿ.

- ಸವ್ಯಸಾಚಿ

Friday, 9 November 2012

ದಸರ - ಇದು ಆಸನ ಕಥನ

          ತಡವಾಗಿಯಾದರೂ ಮೈಸೂರಿಗೆ ಹೋಗುವ ನಿರ್ಧಾರಮಾಡಿ ಹೋರಟೆಬಿಟ್ಟೆವು. 402ನೇ ದಸರದಲ್ಲಿ ಅಂತಿಂಥ ಯಾವ ವಿಶೇಷಗಳು ಮೇಳೈಸದಿರುವ ಸೂಚನೆ ಇದ್ದರೂ  ಬಲರಾಮನ ಬದಲಿಗೆ ಅರ್ಜುನ ಈ ಬಾರಿಯ ಅಂಬಾರಿ ಹೊರುತ್ತಾನೆ. ಆತ ದೈತ್ಯನಂತೆ ಬಲರಾಮನಿಂತ ಕೊಂಚ ಉದ್ದ ಮತ್ತು ತೂಕ ಉಳ್ಳವನಂತೆ. ಆದರೆ ಬಲುತುಂಟ, ಮುಂಗೋಪಿ ತನ್ನ ಹಳೇ ಮಾವುತನನ್ನೆ ಕೊಲೆ ಮಾಡಿದ ಕೊಲೆಪಾತಕ. ಇಂತಹ ಕಾರಣಗಳಿಂದಲೇ ದಸರೆ ಗಜಪಡೆಯಿಂದ ಡಿಬಾರ್ ಆಗಿದ್ದನಂತೆ. ಅನಿವಾರ್ಯವಾಗಿ ಈತನಿಗೆ ಅಂಬಾರಿ ಹೊರುವ ಅವಕಾಶ ಬಂದಿದೆ. ಬಲರಾಮ ಅಂಬಾರಿ ಹೊತ್ತುಹೋಗುವಾಗ ಆತನನ್ನು ಮುಟ್ಟಿ ಚಾಮುಂಡಿಯನ್ನು ನೆನೆಯುತ್ತಿದ್ದ ಜನ, ಈ ಬಾರಿ ಅಂಬಾರಿ ಹೊರುವ ಅರ್ಜುನನ ಬಳಿ ಸುಳಿಯಲು ಸಾದ್ಯವಿಲ್ಲ. ಅವನ ತಂಟೆ ತಕರಾರುಗಳು ಸಲ್ಲದಾದ್ದರಿಂದ ಅವನ ಸುತ್ತ ಪ್ಯಾರ ಮಿಲಿಟರಿ, ಬಂದೂಕುದಾರಿಗಳು, ಕಟ್ಟಿಹಾಕುವ ಬಿರಿಹಗ್ಗ, ಅವ್ವಳಿಕೆ ಚುಚ್ಚುಮದ್ದು ಇತ್ಯಾದಿಗಳ ಸಿದ್ಧ ಪಡೆ ಇರಲಿದೆಯಂತೆ ಎಂಬೆಲ್ಲ ಸುದ್ದಿ ಓದಿ ಈ ಬಾರಿಯ ಅಂಬಾರಿ ಮೆರವಣಿಗೆಯನ್ನು ನೇರವಾಗಿ ನೋಡಲೆಬೇಕೆಂದು ಕೌತುಕಿಸಿದ ಮನಸ್ಸು ನೆಚ್ಚಿನ ನಾಯಕನ ಚಲನಚಿತ್ರದ ಬಿಡುಗಡೆಗೆ ಕಾದಂತೆ ಆಗಿತ್ತು.

ಅಂತೂ ಇಂತೂ ನಮ್ಮ ನೆಂಟರಿಸ್ಥರೊಬ್ಬರ ಸಹಾಯದಿಂದ ಅಂಬಾರಿ ಹೋಗುವ ಹಾದಿಯ ಇಕ್ಕೆಲಗಳಲ್ಲಿ ಅದಾಗಲೇ ಕಿಕ್ಕಿರಿದು ತುಂಬಿದ್ದ ಜನರ ನಡುವೆ ಬೇಡುವಂತ ದೀನ  ಮುಖಮಾಡಿ ಸ್ವಲ್ಪ, ಸ್ವಲ್ಪ, ಸ್ವಲ್ಪ ಅನ್ನುತ್ತಲೆ ಸಾಕಾಗುವಷ್ಟು ಜಾಗ ಗಿಟ್ಟಿಸಿಕೊಂಡು ಕೂತುಬಿಟ್ಟೆವು. ಇದು ನಿಜಕ್ಕೂ ಹಿಮಾಲಯ ಹತ್ತಿ ಹಿರಿಹಿಗ್ಗುವ ಸಂತೋಷ. ಆದರೆ ಅಲ್ಲಿಂದಾಚೆಗಿನದೆ ಸಶೇಷ. ಡಬ್ಬದಲ್ಲಿ ಕೂತ ಗಿಫ್ಟುಗಳಂತೆ ಸುತ್ತಲು ಅಚ್ಚುಕಟ್ಟಾಗಿ ಪ್ಯಾಕ್ ಅಗಿತ್ತು. ಆಗ ಸಮಯ 1:30 ರ ಮಧ್ಯಾಹ್ನ. ಸಾಲು ಮರಗಳ ಮಧ್ಯೆ ಪ್ರಖರವಾದ ಬಿಸಿಲು. ಅಲ್ಲಿ ಕೂತವರನ್ನು ನೋಡಿ ಪಾಪ ಎಂದು ಮರುಕಪಟ್ಟುಕೊಳ್ಳುತ್ತಿದ್ದೆವು. ಅಲ್ಲಿದ್ದ ಎಲ್ಲರನ್ನು ಗಮನಿಸುವ ಗುರುತಿಸುವ ವ್ಯವದಾನ ನಮಗೆ. ಏಕೆಂದರೆ ಅಂಬಾರಿ ಆ ಸ್ಥಳಕ್ಕೆ ಬಂದು ತಲುಪಲು 4 ರ ತಿಳಿ ಸಂಜೆ ಆದೀತು ಎಂದು ತಿಳಿದವರು ಹೇಳುತ್ತಿದ್ದರು. ಪಕ್ಕದಲ್ಲಿ ಇದ್ದವರು ಪಕ್ಕದ ಮನೆಯವನಂತಾಗಿ ಹೋದ. ಅಲ್ಲೊಬ್ಬ ಇಲ್ಲೊಬ್ಬ ಇದ್ದ ವಿದೇಶಿಯರನ್ನು What? Where You? Mysore Good? ಎಂದೆಲ್ಲ ಮಾತನಾಡಿಸುತ್ತ ತಿಳಿದ ಇಂಗ್ಲೀಷ್ ಪದಗಳಲ್ಲೆ ಮೈಸೂರನ್ನು ವರ್ಣಿಸಿ ಹೇಳುತ್ತಿದ್ದ ಸ್ಥಳಿಯರ ಔದಾರ್ಯ ಮೆಚ್ಚಲೇಬೇಕು. ಊಟದ ಸಮೇತ ಊರ ಮುಂಚಿತವಾಗಿ ಬಂದಿದ್ದ ಹಲವರು ಪೊಟ್ಟಣ ತೆರೆದು ಊಟ, ಇಡ್ಲಿ, ಪಲಾವುಗಳನ್ನು ತಿನ್ನುತ್ತಿದ್ದರು. ಬೀಡಿ ಹಚ್ಚಿದವನು ಜನರಿಂದ ಉಗಿಸಿಕೊಂಡು ಹೊಗೆಯನ್ನು ಹೊರಬಿಡಲಾಗದೆ ಕಣ್ಣುಕಿವಿಯೆಲ್ಲ ಬಿಸಿಯಾಗುತಿದ್ದ ಅವನ ಹಾವಭಾವವೇ ಸಮಯ ಸಾಗಿಸಲಿಕ್ಕೊಂದು ಮೋಜು.  ಬುಟ್ಟಿವ್ಯಾಪಾರಿಗಳಿಂದ ಕಡ್ಲೆಕಾಯಿ, ಕಾರಬೆಳೆ, ಬಟಾಣಿ ಕೊಳ್ಳಲು ಕಾಸನ್ನು ಪಾಸು ಮಾಡುವಾಗಿನ ಜನರ ಸಹಕಾರಕ್ಕೆ ಸಲಾಮು ಹೊಡಿಯಲೆ ಬೇಕು. ಪಾಸು ಮಾಡುವಾಗ ಪುಸಕ್ಕನೆ ಕೈಜಾರಿದ ಒಂದು ರೂಪಾಯಿ ನಾಣ್ಯಕೊಸ್ಕರ ಕೂತವರ ತಳವನೆಲ್ಲ ತಡಕಾಡುವ ಗಾಬರಿ ಅವರ್ಣನೀಯ. ಇನ್ನು ಪ್ರಕೃತಿ ಕರೆದರತ್ತು ಮುಗಿದೆ ಹೋಯಿತು. ಆ ಸಂಕಷ್ಟಕರವಾದ ಸ್ವಂತ ವಿಷಯವನ್ನು ಯಾರೊಂದಿಗೆ ಹೇಳಿಕೊಳ್ಳಲಾದೀತು?. ಅಲ್ಲಿಗೆ ಎದುರುಬದಿಯಲ್ಲಿ ಬಿಸಿಲಿನಲ್ಲಿ ಕೂತವರನ್ನು ಕಂಡು "ಪಾಪ" ಎಂದು ಮರುಕಪಟ್ಟುಕೊಳ್ಳುತಿದ್ದುದನ್ನು ನಿಲ್ಲಿಸಿಬಿಟ್ಟೆವು.

ಜಾತ್ರೆಯ ತುಂಬೆಲ್ಲ ಪೊಂ ಪೊಂ ಪೀಪಿಗಳದ್ದೆ ಸದ್ದು. ಪೋಲಿಸರದ್ದು ಕೇವಲ ವಾಕಿ ಅಂಡ್ ಟಾಕಿ. ಜಲಮಂಡಳಿಯ ಲಾರಿ, ಅಗ್ನಿಶಾಮಕ ಗಾಡಿ ಸೈರನ್ ಮಾಡಿ ನಮ್ಮನ್ನು ಆಗಾಗೇ ಕಿವಿಹಿಂಡಿ ಹೋಗುತ್ತಿದ್ದವು. ಎರಡುಮೂರು ಬಾರಿ ಆಂಬುಲೆನ್ಸ್ ಹೋದಾಗಲಂತೂ ಜನರು ಅಲೆ ಎದ್ದಂತೆ ಎದ್ದು ಕೂತರು. ಇಷ್ಟೆಲ್ಲದರ ಮಧ್ಯೆ NCC ಶಾಲಾಮಕ್ಕಳು ಓಡಿ ಬಂದು ರಸ್ತೆಯ ಬದಿಗಳಲ್ಲಿ ಸಾಲುಗಟ್ಟಿ ನಿಲ್ಲುವಾಗ ಆಂಬಾರಿಯೇ ಬಂತೆಂಬಂತೆ ಓ ಗುಟ್ಟಿದ್ದು ನಿತ್ರಾಣಿಗಳಿಗೆ ಪುನರ್ಶ್ಚೇತನದ ಅನುಭವ. ಅಷ್ತರಲ್ಲಾಗಲೆ. 4:30 ಕಳೆದಿದ್ದ ಸಮಯ. ನಂದಿಕಂಬದ ಗೆಜ್ಜೆಗಳು ಜಲ್ ಜಲ್ ಸದ್ದಿನೊಂದಿಗೆ ಬರತೊಡಗಿದವು. ಕೂತ್ತಿದ್ದ ಜನರು ತಾಳ್ಮೆಕಳೆದು ಎದ್ದು ನಿಲ್ಲಲು ಅವಣಿಸುತಿರುವಾಗ ಹಿಂದಿನಿಂದ ಏರುದನಿಯಲ್ಲಿ ಗದರಿಸಿ ಎಲ್ಲರನ್ನು ಕೂರಿಸಿ ಒಂದು ಒಪ್ಪಂದಕ್ಕೆ ಬರಲಾಯಿತು. "ಯಾರೂ ಸಹ ಎದ್ದು ನಿಲ್ಲುವಂತಿಲ್ಲ ಇದರಿಂದ ಹಿಂದೆ ಕುಳಿತಿರುವವರಿಗೆ ತೊಂದರೆಯಾಗುತ್ತದೆ" ಎಂದು ಈ ಒಪ್ಪಂದದ ಸಾರಾಂಶ. "ಅವರು ಮನುಷ್ಯರೆ" ಎಂಬ ಭಾವನಾತ್ಮಕ ಮಾತು ಈ ಒಪ್ಪಂದಕ್ಕೆ ಸ್ಪೂರ್ತಿ. ಹಲವು ಗಂಟೆಗಳಿಂದ ಕಾದಿದ್ದ ಆ ದಿವ್ಯ ಕ್ಷಣ ಬಂದೇಬಿಟ್ಟಿತು. 'ನಿಶಾನೆ ಆನೆ'ಯಾಗಿ ಬಹಳ ಮೆಚ್ಚುಗೆಗೆ ಪಾತ್ರನಾಗಿದ್ದ ಬಲರಾಮ ದಾಂಡಿಡುತ್ತಾ ಬಂದೆಬಿಟ್ಟ. ಕಣ್ಣು ಮನಸ್ಸೆಲ್ಲ ಒಮ್ಮೆಲೆ ಪುಳಕಿತವಾಗಿ ಹೋಯಿತು. ಹಿಂದಿಂದೆಯೇ ಗಜದಂಪತಿಗಳು, ಡೊಳ್ಳುಕುಣಿತ, ತೊಗಲುಗೊಂಬೆಧಾರಿಗಳು, ಕೃಷ್ಣನ ಸ್ವರೂಪಿ, ಯಕ್ಷಗಾನಿಗಳು, ನಗಾರಿ ತಮಟೆಗಳು ಎಲ್ಲವೂ ಹಾದುಹೋದವು. ಕತ್ತುಹಿಗ್ಗಿಸಿ ಕಾದ ಕಣ್ಣುಗಳಿಗೆ ಎಲ್ಲವನ್ನು ತುಂಬಿಸಿಕೊಳ್ಳುವ ಚಟುವಟಿಕೆ. ನೆರೆದವರೆಲ್ಲರ ಕೈಯಲ್ಲಿ ಮೊಬೈಲ್. ನೋಡಿ ಆನಂದಿಸುವುದಕ್ಕಿಂತ ಮೊಬೈಲ್ ನಲ್ಲಿ ಚಿತ್ರಿಕರಿಸುವ, ಪೋಟೊ ತೆಗೆಯುವ ವಿವಿಧ ಆಂಗಲ್ ನಲ್ಲಿ ಕ್ಲಿಕ್ಕಿಸುವ ಕ್ರಿಯಾತ್ಮಕತೆಯೆ ಜಾಸ್ತಿ ವ್ಯಕ್ಯವಾಗುತ್ತಿತು.
ಭವ್ಯ ಎನ್ನುವಂತ ಸ್ತಬ್ಧಚಿತ್ರಗಳು ಸಾಗಿ ಬಂದವು. ಒಂದಕ್ಕಿಂತ ಒಂದು ಸುಂದರ ಮತ್ತು ವಿಶಿಷ್ಟ.  ಯಾವ ಜಿಲ್ಲಾಪಂಚಾಯಿತಿಯದು ಹೆಚ್ಚು ಮನೋಹರ ಎಂದು ವರ್ಗೀಕರಿಸಲಾಗದಷ್ಟು ವಿಭಿನ್ನ. ಎಲ್ಲವೂ ಅಚ್ಚುಕಟ್ಟಾಗಿ ರೂಪತಳೆದಿರುವ ಕಲಾತ್ಮಕತೆ. ನಡುನಡುವೆ ಸಾಗುತ್ತಿದ್ದ ಕಲಾತಂಡದಿಂದ ಸೊಗಸಾದ ಕಲಾಪ್ರದರ್ಶನ ತಾಳ ಅದಬೆರೆತ ಮೇಳ. ಒಟ್ಟು ಇದ್ದ 37 ಸ್ತಬ್ಧಚಿತ್ರಗಳು ಸಾಗುವಷ್ಟರಲ್ಲಿ 5:30ರ ಸಂಜೆ. ಪೋಲಿಸ್ ಬ್ಯಾಂಡ್, ಅದರಿಂದೆ ಮೇಯರ್ ಕುದರೆ ಸವಾರಿ, ಅದರಿಂದೆ ಅಶ್ವದಳ, ಅದರಿಂದೆ ದೊಡ್ಡ ಮಿಲಿಟರಿ ಬೆಟಾಲಿಯನ್, ಅದರಿಂದೆ ಬಂದವನೆ ಗಾಂಬೀರ್ಯ ವದನ, ದೈತ್ಯರೂಪಿ, ಅಜಾನುಬಾಹು ಅರ್ಜುನ. ಅಕ್ಕಪಕ್ಕ ಗಜರಾಣಿರ ಮಧ್ಯೆ ಧಾವಿಸಿ ಬರುತ್ತಿದ್ದ. ಸ್ತಂಬೀಭೂತರಂತಾಗಿದ್ದ ಜನರು ಎಚ್ಚರಗೊಂಡವರಂತೆ ಎದ್ದು ನಿಂತು ಚಪ್ಪಾಳೆ ತಟ್ಟಿ ಹರ್ಷೋದ್ಘಾರ ಮಾಡಿದರು. ಅವನ ರಾಜಕಳೆಯಿಂದ ಮೆರವಣಿಗೆಗೆ ಮೆರಗು ತಂದಿದ್ದಕ್ಕಾಗಿ ಧನ್ಯವಾದ ಸಲ್ಲಿಸಿದರು. ಹಲವರು ನಿಂತಲ್ಲೇ ತಾಯಿ ಚಾಮುಂಡಿಯನ್ನು ನೆನೆದು ಪುನೀತರಾದರು. ಚಾಮರ ದೂತ್ತೆಂದು ಬೀಸಿ ಹೊದಂತಾದ ಅನುಭವ. ಉಸಿರು ತುಂಬಿ ಬಂತು. ಸುರಕ್ಷತೆಯ ಸಲುವಾಗಿ ಒಂದು ದೊಡ್ಡ ಹಿಂಡೆ ಅವನ ಹಿಂದೆ ಇತ್ತು.
-ಸಂತೋಷ್ ಇಗ್ನೇಷಿಯಸ್,

 Read more!