Tuesday, 20 March 2012

ಅದೇಕೆ ಹೀಗೆ?


ಪ್ರೀತಿಯ ಅನು…
ಅದೇಕೆ ಹೀಗೆ? ಮಾಡಬೇಕಾಗಿದ್ದನ್ನುಮಾಡಲಾಗುತ್ತಿಲ್ಲ, ಮಾಡಬೇಕಾದುದ್ದಲಿ ಮನಸ್ಸಿಲ್ಲ. ಖಾಲಿ ಖಾಲಿಯಾಗಿಬಿಟ್ಟಿರುವ ಮನಸ್ಸು. ವಾಡಿಕೆಯ ಅನುಕ್ರಮವಾಗಿಬಿಟ್ಟಿರು ಸಪ್ಪೆ ಬದುಕು. ಪಟ್ಟುಬಿಡದೆ ಗಟ್ಟಿಯಾಗಿ ಅಪ್ಪಿಗೊಂಡಿಬಿಟ್ಟಿರುವ ಯಾಂತ್ರಿಕತೆ. deadline, projectಗಳೆಂಬ ಒತ್ತಡಗಳಲ್ಲಿ ವಾರ ಪೂರ್ತಿ ಕತ್ತೆಯಂತೆ ದುಡಿದರೂ ಮರೀಚಿಕೆಯಾಗಿಬಿಟ್ಟಿರುವ ತೃಪ್ತಿ, ಸಂತೋಷ. ಅದೇಕೆ ಹೀಗೆ? 
ಇನ್ನೊಂದು ಕಡೆ, ನಮ್ಮ ಮನೋರಂಜನೆಗೆಂದೇ ಡ್ಯಾನ್ಸ್ ಕ್ಲಬ್, ಥೀಮ್ ಪಾರ್ಕ್‍, ಕಂಪ್ಯೂಟರ್ ಗೇಮ್ಸ್ ನಮ್ಮನ್ನು ಕುಶಾಲು ಪಡಿಸುವ  ಹತ್ತು ಹಲವಾರು ಮನೋರಂಜನೆಗಳನ್ನು ಸೃಷ್ಟಿಸಿಕೊಂಡಿದ್ದೇವೆ. ಸಾಲದಕ್ಕೆ, ಒತ್ತಡ ಬದುಕ ನಿರ್ವಹಣೆಗೆಂದು ಯೋಗ ಶಾಲೆಗಳು, laughing clubಗಳು, art of living ತರದ ಆಧ್ಯಾತ್ಮಿಕ ಕೇಂದ್ರಗಳು, counselling centreಗಳು ಅಧಿಕವಾಗಿ ಬೆಳೆದು ನಿಂತಿವೆ. ಆದರೂ,ನಮ್ಮ ನಗರಗಳಲ್ಲಿ ಆತ್ಮಹತ್ಯೆಗಳ ಸಂಖ್ಯೆ ಕಡಿಮೆಯಾಗಿಲ್ಲ. ಕಡಿಮೆಯಾಗುವ ಲಕ್ಷಣ ಕೂಡ ಕಾಣುತ್ತಿಲ್ಲ. ಅದೇಕೆ ಹೀಗೆ?
ತಂತ್ರಜ್ಞಾನದ ಹೂಸ ಹೂಸ ಅವಿಷ್ಕಾರಗಳ ಫಲವಾಗಿ ಮೊಬೈಲ್‍ಗಳು ನಮ್ಮ ಕೈಸೇರಿದೆ. laptopಗಳು ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿವೆ. ಕ್ಷಣ ಮಾತ್ರದಲ್ಲಿ ತಲುಪಿಸುವ ಇ-ಮೇಲ್‍ಗಳ ಸೌಲಭ್ಯವಿದೆ. ನಾನಾ ತರಹ ಟಾಪ್ ಗೇರುಗಳ ಭಾರಿ ವೇಗದ ವಾಹನಗಳು ರಸ್ತೆಗಿಳಿದಿವೆ. ದಾರಿ ಹೆದ್ದಾರಿಗಳ ಅಭಿವೃದ್ಧಿ ಹತ್ತಾರು ಪಟ್ಟು ಹೆಚ್ಚಿದೆ. ವಿಮಾನ ಪ್ರಯಾಣದ ಬೆಲೆ ಅಗ್ಗವಾಗಿ ಸಾಮಾನ್ಯನ ಕೈ ಹಿಡಿದಿದೆ. ಅಷ್ಟೇ ಅಲ್ಲದೆ, ಜಾಗತೀಕರಣದ ಪ್ರಕ್ರಿಯೆಯಿಂದಾಗಿ ಪ್ರಪಂಚವೇ ಸಣ್ಣ ಹಳ್ಳಿಯಾಗಿ ’ಗಡಿಗೆರೆ’ ಎಂಬುವುದು ಇತಿಹಾಸವಾಗಿಬಿಟ್ಟಿದೆ.ಆದರೂ ನಮ್ಮ ಸಂಬಂಧಗಳು ಇಮ್ಮಡಿಯಾಗುತ್ತಿಲ್ಲ. ’ನಾನು’ ’ನನ್ನ ಕುಟುಂಬ’ ಎಂಬ ಸ್ವಾರ್ಥದ ಗೆರೆ ದಾಟುತ್ತಿಲ್ಲ. ನಮ್ಮ ಮನೆಯ ಗೋಡೆಯನ್ನು ನಮ್ಮ ದೇಹವಿರಲಿ, ಸ್ಪರ್ಶಾತೀತ ಮನಸ್ಸಿಗೂ ಸಹ ದಾಟಲಾಗುತ್ತಿಲ್ಲ. ಅಷ್ಟೇ ಅಲ್ಲದೆ, ಒಬಂಟಿಗನೆಂಬ ಕೊರಗು ನಮ್ಮನ್ನು ಬಿಡಲು ಸುತರಾಂ ಒಪ್ಪುತ್ತಿಲ್ಲ.  ಅದೇಕೆ ಹೀಗೆ?
ಕಾರಣಾಂತರಗಳಿಂದ ಇಷ್ಟವಿಲ್ಲದ ವಿಷಯ/subjectನ್ನು ಆರಿಸಿಕೊಳ್ಳುತ್ತೇವೆ. ಮನಸ್ಸಿಲ್ಲದೆ ಅದನ್ನು ಓದುತ್ತೇವೆ. ಕೊನೆಗೆ ಅದು ದಾರ್ಶನಿಕ ಮತ್ತು ಪರಿವರ್ತಕ ಅನುಭವವಾಗದೆ.. ಕೇವಲ ಬಾಯಿಪಾಠವಾಗಿ ಹೊಟ್ಟೆಪಾಡಿಗಾಗಿ ಗಳಿಸುವ certificate ಕೋರ್ಸಾಗಿಬಿಟ್ಟಿವೆ. ಇನ್ನೊಂದು ಕಡೆ, ಅಕ್ಷರಸ್ಥರ ಸಂಖ್ಯೆ ಗಗನಕೇರಿದೆ. universities, ಮತ್ತು ಶಾಲಾಕಾಲೇಜುಗಳಲ್ಲಿ ವಿದ್ಯಾರ್ಜನೆ ಮಾಡಿ ಹೊರಬರುತ್ತಿರುವ ವಿದ್ಯಾರ್ಥಿಗಳ ಅಂಕಿಯು ಏರುಮುಖದಲ್ಲಿ ಗೆರೆನಕ್ಷೆಯೆಂಬ ಬೆಟ್ಟವನ್ನು ಏರುತ್ತಿದೆ. ಆದರೂ ನಮ್ಮ ಸಂಕುಚಿತಯ ಬುದ್ಧಿ ಕಡಿಮೆಯಾಗಿಲ್ಲ. ಅಮಾನವೀಯ ಕೃತ್ಯಗಳು ಕೊನೆ ಕಂಡಿಲ್ಲ. ಅದೇಕೆ ಹೀಗೆ?
ಆಧುನಿಕತೆಯಲ್ಲಿ, ಅಭಿವೃದ್ಧಿಯ ನೆಪದಲ್ಲಿ, success ಎಂಬ ನಾಮಜಪದಲ್ಲಿ ನಮ್ಮನೇ ನಾವು ಕಳೆದುಕೊಂಡಿಬಿಟ್ಟಿದೇವಾ? ಯಾವುದೋ ಒಂದು ಮೂಲೆಯಲ್ಲಿ ಹೌದು ಎನ್ನುತ್ತಿರುವ ವಾಸ್ತವಿಕತೆ. ಕಳೆದು ಹೋಗಿರುವ ನಮ್ಮನ್ನು ’ಹುಡುಕಿಕೊಡಿ” ಎಂದು ಯಾವ ದೇವರಲ್ಲಿ ಹರಕೆ ಕಟ್ಟಿಕೊಳೋಣ? ಯಾವ ಪೋಲಿಸ್ ಠಾಣೆಗೆ ಹೋಗಿ ದೂರು ಕೊಡೋಣ? ಬೆಳಿಗ್ಗೆ ಆಕಾಶದಲ್ಲಿ ಹುಟ್ಟಿ ನವ ಚೈತನ್ಯವನ್ನು ನೀಡುವ ಸೂರ್ಯ ನಮಗೆ ತುಂಬ ಚಿರಪರಿಚಿತವಾಗಿಬಿಟ್ಟಿದ್ದಾನೆ. ಸೂರ್ಯೋದಯೆಂಬ ಅದ್ಭುತ ನಮಗೆ ಮಾಮೂಲಿನ ಸಂಗತಿಯಾಗಿಬಿಟ್ಟಿದೆ. officeಗೆ ತಯಾರಾಗುವ ತತ್ಪರತೆಯಲ್ಲಿ  ಹಕ್ಕಿಗಳ ಇಂಚರ ಅಪ್ಪಿತಪ್ಪಿಯೂ ನಮಗೆ ಕೇಳಿಸುವುದೇ ಇಲ್ಲ. ಹೆಂಡತಿಯ ತುಂಟ ನಗು ನಮಗೆ ಕಾಣುವುದೇ ಇಲ್ಲ. ಮಕ್ಕಳ ಚೇಷ್ಟೆಗೆ ಸಮಯವೇ ಇಲ್ಲ. ಅದೇಕೆ ಹೀಗೆ? ಮಟ ಮಟ ಮಧ್ಯಾಹ್ನದಲ್ಲಿ ಟಾರ್ಚ್ ಹಿಡಿದುಕೊಂಡು "ನಾನು ಕಳೆದುಹೋಗಿದ್ದೇನೆ ನನ್ನನ್ನೇ ಹುಡುಕಿಕೊಳ್ಳುತ್ತಿದ್ದೇನೆ ದಯವಿಟ್ಟು ನನ್ನನ್ನು ಹುಡುಕಿ ಕೊಡಿ" ಎಂದು ಕೂಗಿಕೊಂಡು ಅಲೆಯುವ ನಾಸಿರುದ್ದೀನ್ ಆಗಿಬಿಟ್ಟಿದೇವೆಯಾ?
ಮೊನ್ನೆ Tuesdays with Morrie ಎಂಬ ಸಿನಿಮಾ ನೋಡಿದೆ. ಈ ಎಲ್ಲಾ ಸಮಸ್ಯೆಗಳಿಗೆ ಉತ್ತರ ನೀಡುವ ಒಂದು ಅದ್ಭುತ ಚಿತ್ರ. ಆಧುನಿಕತೆ,ಸ್ವರ್ಧೆ,successಗಳ ಮಾಯೆಯಲ್ಲಿ ಕಳೆದುಹೋಗಿರುವ ನಾವು ಕೂತು ನೋಡಲೇ ಬೇಕಾದ ಚಲನಚಿತ್ರ. ಸಮಾಜಶಾಸ್ತ್ರಜ್ಞ ಮತ್ತು ಪ್ರಾಧ್ಯಾಪಕ, ಆಧುನಿಕತೆ ಮತ್ತು success ಎಂಬ ಮಾಯೆಯಲ್ಲಿ ಕಳೆದುಹೋಗಿರುವ ತನ್ನ ಹಳೆಯ ವಿದ್ಯಾರ್ಥಿಗೆ ನೀಡುವ ಬದುಕಿನ ಪಾಠದ ಸಂಚಿಕೆಗಳೇ ಈ ಚಲನಚಿತ್ರದ ಕಥಾವಸ್ತು. ಪ್ರತಿ ಮಂಗಳವಾರದಲ್ಲಿ ನಡೆಯುವ ತರಗತಿಗೆ ಪ್ರಾಧ್ಯಾಪಕರ ಮನೆಯೇ ಪಾಠಶಾಲೆ. ಬದುಕಿನ ಅರ್ಥವೆಂಬುವುದು ತರಗತಿಗಳ ವಿಷಯ.. ಪ್ರಾಧ್ಯಾಪಕರ ಸ್ವಂತ ಅನುಭವಗಳೇ ಬೋಧನೆಯ ತಳಹದಿ. ವಿದ್ಯಾರ್ಥಿಯ ಸಾಧನೆ ಮಟ್ಟವನ್ನು ಸೂಚಿಸುವ ಗುಣಾಂಕ/ವರ್ಗಾಂಕವೆಂಬ ತಲೆನೋವಿಲ್ಲ. ಮೌಖಿಕ ಪರೀಕ್ಷೆ ಮಾತ್ರ: ಗುರುಗಳು ಕೇಳುವ ಪ್ರಶ್ನೆಗಳಿಗೆ ಉತ್ತರಿಸುವುದು ಮತ್ತು ಸ್ವಂತ ಪ್ರಶ್ನೆಗಳನ್ನು ಗುರುಗಳ ಮುಂದಿಡುವುದು. ಯಾವುದೇ ಪಠ್ಯಪುಸ್ತಕಗಳ ಅಗತ್ಯತೆಯಿಲ್ಲದಿದ್ದರೂ ಪ್ರೀತಿ, ಕೆಲಸ, ಸಮುದಾಯ, ಕುಟುಂಬ, ಮುಪ್ಪು, ಸಾವು ಹೀಗೆ ಅನೇಕ ವಿಷಯಗಳ ಸುತ್ತ ಗಿರಕಿ ಹೊಡೆಯುವ ಬೋಧನೆಗಳು. ಪರೀಕ್ಷೆಗಳ ಹಂಗಿಲ್ಲ ಆದರೆ ಕೊನೆಗೆ ಕಲಿತ ಪಾಠಗಳ ಪ್ರಬಂಧದ ಮಂಡನೆ ಮಾತ್ರ ಅತ್ಯಗತ್ಯ. ಹೀಗೆ ವಿದ್ಯಾರ್ಥಿ ತನ್ನ ಪ್ರಾಧ್ಯಾಪಕರಿಂದ ಕಲಿತ ಬದುಕಿನ ಪಾಠಗಳ ಮಂಡನೆಯೇ ಈ ಚಲನಚಿತ್ರ. ಒಂದು ತರಗತಿಯಲ್ಲಿ ಬದುಕಿನ ಬಗ್ಗೆ ಹೇಳುವ ಮೋರಿಯವರ ಮಾತುಗಳು, ಆಧುನಿಕತೆಯಲ್ಲಿ ರೋಗಪೀಡಿತರಾಗಿರುವ ನಮಗೆ ಸೂಕ್ತವೆನ್ನಿಸುತ್ತವೆ. "ಈ ಪ್ರಪಂಚದ ಸಂಸ್ಕಾರ ಮತ್ತು ಸಂಸ್ಕೃತಿ ನಮ್ಮ ಬಗ್ಗೆ ಸಕರಾತ್ಮಕವಾಗಿ ಯೋಚಿಸಲು ಬಿಡುವುದಿಲ್ಲ. ಆದುದರಿಂದ ನಮಗೆ ಒಗ್ಗದ ಇಂತಹ ಸಂಸ್ಕೃತಿಯನ್ನು ಒಪ್ಪಿಕೊಳ್ಳಲೇಬಾರದು. ನಮ್ಮದೇ ಸಂಸ್ಕೃತಿಯನ್ನು ನಾವೇ ಕಟ್ಟಿಕೊಳ್ಳಬೇಕು". ಇಲ್ಲಿ ಮೋರಿ ನಮಗೆ ನೈಜ ಉದಾಹರಣೆಯಾಗಿ ನಿಲ್ಲುತ್ತಾನೆ. ವಾಸ್ತವ ಪ್ರಪಂಚದ ತೀವ್ರತೆಗೆ, ವೇಗಕ್ಕೆ ಗುಲಾಮನಾಗದೆ, ಪ್ರಾಪಂಚಿಕ ಮೌಲ್ಯಗಳಿಗೆ ಬೆಲೆಕೊಡದೆ... ತನ್ನದೇ ಪ್ರಪಂಚವನ್ನು ಸೃಷ್ಟಿಸಿಕೊಳ್ಳುತ್ತಾನೆ. ಚರ್ಚಿಸಲು ಸಹವರ್ತಿಗಳ ಸಂಘ ಮಾಡುತ್ತಾನೆ. ಬೆಳಗ್ಗಿನ ನಡೆಗೆ ಗೆಳೆಯರ ಕೂಟ ಕಟ್ಟಿಕೊಳ್ಳುತ್ತಾನೆ. ಗ್ರೀನ್ ಹೌಸೆಂಬ ಒಂದು projectನ್ನು ಪ್ರಾರಂಭಿಸಿ ಮಾನಸಿಕ ಆರೋಗ್ಯವನ್ನು ರೂಢಿಸಿಕೊಳ್ಳಲು ಬಡವರಿಗೆ ಸಹಾಯ ಮಾಡುತ್ತಾನೆ. ಹೊಸ ಹೊಸ ಪುಸ್ತಕಗಳ ಸಹವಾಸ ಮಾಡಿ ತನ್ನ ತರಗತಿಗಳಿಗೆ ಅತ್ಯಗತ್ಯವಾಗಿ ಬೇಕಾಗಿರುವ ಹೊಸ ಹೊಸ ಆಲೋಚನೆ, ಅಭಿಪ್ರಾಯಗಳನ್ನ, ಕಲ್ಪನೆಗಳನ್ನು ಶೇಖರಿಸುತ್ತಾನೆ. ದೂರವಿರುವ ಗೆಳೆಯರಿಗೆ ಪತ್ರಗಳನ್ನು ಬರೆಯುತ್ತಾನೆ. ಮನೆಯ ಹತ್ತಿರವೇ ಇರುವ "ನೃತ್ಯಮನೆ"ಗೆ ಹೋಗಿ ತನ್ನಷ್ಟಕ್ಕೆ ನೃತ್ಯ ಮಾಡಿ ಮೈಮರೆಯುತ್ತಾನೆ. ಪಕೃತಿ ದೇವಿಯ ಸೌಂದರ್ಯವನ್ನು ಸವಿಯುತ್ತಾನೆ...ಹೀಗೆ ತನ್ನ ಪ್ರಪಂಚವನ್ನು ಪರಸ್ಪರ ಸಂಗ ಸಲ್ಲಾಪ ಸಹವಾಸ ಮತ್ತು ಸ್ನೇಹ ವಿಶ್ವಾಸಗಳಿಂದ ಹೆಣೆದುಕೊಳ್ಳುತ್ತಾನೆ. ಆದ್ದರಿಂದ ಸಾವಿನ ದವಡೆಯಲ್ಲೂ ಒಂಟಿತನವೆಂಬ ಭೂತ ಅವನನ್ನು ಕಾಡುವುದಿಲ್ಲ. ಅಂಟಿಕೊಂಡಿರುವ ಭಯಾನಕ ರೋಗದಿಂದ ಒಂದು ವರ್ಷದಲ್ಲಿ ತನಗೆ ಸಾವು ಖಚಿತವೆಂದು ಗೊತ್ತಿದ್ದರೂ ತನ್ನ ವಿದ್ಯಾರ್ಥಿಗೆ ಸಾವಿನ ಬಗ್ಗೆ ಪಾಠ ಮಾಡುತ್ತಾನೆ. ಸಾವಿಗೆ ಹೆದರಬೇಡ ಎಂದು ಹೇಳುತ್ತಲೆ ಅಂಜದೆ ಸಾಯುತ್ತಾನೆ. ಒಟ್ಟಾರೆ, ಮೋರಿಯ ಮಾತುಗಳು ಪುಸ್ತಕದ ಬದನೆಕಾಯಿ ಆಗದೆ, ಬದುಕ ಪಾಠಗಳಾಗಿ ನಮ್ಮನ್ನು, ನಮ್ಮ ಟೊಳ್ಳುತನವನ್ನು ಪ್ರಶ್ನಿಸುತ್ತವೆ. ಹೊಸ ಬದುಕಿಗೆ, ಬದುಕಿನ ರೀತಿಗೆ ಮೂಹರ್ತ ಹಾಕಿಕೊಡುತ್ತವೆ. "The way you get meaning into your life is to devote yourself to loving others, devote yourself to your community around you, and devote yourself to creating something that gives you purpose and meaning" ಎಂದು ಹೇಳುತ್ತಲೆ.. ಪ್ರೀತಿಸು ಇಲ್ಲವಾದರೆ ಹಾಳಾಗುವೆ" ಎಂದು ಎಚ್ಚರಿಸುತ್ತಾನೆ ನಮ್ಮ ಮೊರಿ.

ಹೌದು,ನಮ್ಮದೇ ಪ್ರಪಂಚದಲ್ಲಿ ಪರಕೀಯರಾಗಿ ಬಾಳುತ್ತಿರುವ ನಮಗೆ Tuesdays with Morrie ಎಂಬ ಕೋರ್ಸು/ವ್ಯಾಸಂಗ ಅನಿವಾರ್ಯವೆನ್ನಿಸುತ್ತದೆ. ಈ ಒಂದು ಕೋರ್ಸ್‍ಗೆ ಬೇಕಾದ ಪಠ್ಯವೆಂದರೆ ಅಂತರ್ಜಾಲದಲ್ಲಿ ಸುಲಭವಾಗಿ ಉಚಿತವಾಗಿ ಸಿಗುವ Tuesdays with Morrie ಎಂಬ ಕಾದಂಬರಿ. download  ಮಾಡಿ ಓದಿ.. ಬದುಕನ್ನು ಮತ್ತು ಬದುಕುವುದನ್ನು enjoy ಮಾಡಿ.
ಪ್ರೀತಿಯಿಂದ ನಿಮ್ಮವ
ಜೋವಿ

Wednesday, 14 March 2012

ಪರೀಕ್ಷೆ ಹಾದಿಯ ಎಂಟು ಸ್ಥಳಗಳು

          ಅಕ್ಷರಗಳು ಪುಟಗಳ ಮಧ್ಯೆ ಅಡಗಿ ಕುಳಿತ ಪುಟ್ಟ ಪುಟ್ಟ ಭೂತಗಳಂತೆ ಕಂಡರು ಅಚ್ಚರಿಯಿಲ್ಲ. ಬಡಪಾಯಿ ಮಕ್ಕಳ ಪಾಡನ್ನು ಆ ದೇವರೇ ಕಾಪಾಡಬೇಕು. ಪುಸ್ತಕಗಳು ಅದರ ಪಾಠಗಳು ಯಾವ ಜನ್ಮದ ಶತ್ರುಗಳೋ..  ಪರೀಕ್ಷೆಗಳಂತೂ ಟೈಮ್ ಬಾಂಬ್ ಇದ್ದಂತೆ! ವಾರಗಳು, ದಿನಗಳು, ಗಂಟೆಗಳಲ್ಲಿ ಹತ್ತಿರವಾಗುತ್ತಾ ಹೃದಯ ಬಡಿತವನ್ನು ಹೆಚ್ಚು ಮಾಡಿ ಬಡಿದು ಬಿಡುತ್ತವೆ.
ಹೌದು ಇದು ದೊಡ್ಡ ಪರೀಕ್ಷೆಯಕಾಲ.  ಎಲ್ಲ ಮಕ್ಕಳ ಸತ್ವಪರೀಕ್ಷೆಯಕಾಲ. ಇಲ್ಲಿ ಪುಸ್ತಕಗಳ ಜೊತೆ ಶಿಕ್ಷಕರು, ತಂದೆ ತಾಯಂದಿರು, ಸ್ನೇಹಿತರು ಎಲ್ಲರೂ ರಾಕ್ಷಸ ರಂತೆ ಭಾಸವಾಗುವ ಬೇಸಿಗೆಗಾಲ.  ಜಾಣಬುದ್ಧಿ ಮತ್ತು ಮನಸ್ಸು ಕೆಲವೊಮ್ಮೆ ಕೆಲಸಮಾಡದೇ ಕೈಕೊಡುವ ಬರಗಾಲ. ಭವಿಷ್ಯವನ್ನು ನಿರ್ಧರಿಸುವಲ್ಲಿ ಹಠಾತ್ ತೆಪ್ಪಗಾಗಿ ಬಿಡುವ ತಪಸ್ಸುಕಾಲ. ಆದರೆ ಗೊಂದಲಕ್ಕಿಡಾಗುವ ಅಗತ್ಯವಿಲ್ಲ. ಒಂದು ಮಟ್ಟಿನ ಪೂರ್ವತಯಾರಿಯ ಅಂಶಗಳಲ್ಲಿ ಗಮನಹರಿಸಿ ಸಮತೋಲನಮಾಡುವ ಕೌಶಲ್ಯವಿದ್ದರೆ ಇಂತಹ ಸವಾಲನ್ನು ಆರಾಮಾದಾಯಕವಾಗಿ ಎದುರಿಸಬಹುದು.

ಬಹಳ ಮಹತ್ವವೆಂದರೆ ಓದಿದ್ದನ್ನು ನೆನಪಿಟ್ಟುಕೊಂಡು ಅದನ್ನು ಅಂಕಗಳನ್ನಾಗಿ ಪರಿವರ್ತಿಸುವ ಕಲೆ ಅಗತ್ಯ. ಇದಕ್ಕೆ ಕೆಲವು ಪ್ರಮುಖ ಅಂಶಗಳನ್ನು ಹೀಗೆ ಪಟ್ಟಿಮಾಡಬಹುದು.

೧. ಸಮಯ ಪಾಲನೆ
ವಿದ್ಯಾರ್ಥಿ ಜೀವನದಲ್ಲಿ ಸಮಯ ಬಹಳ ಅಮೂಲ್ಯ. ಇದನ್ನು ಸರಿಯಾದ ರೀತಿಯಲ್ಲಿ ಸದುಪಯೋಗಪಡಿಸಿಕೊಳ್ಳಬೇಕು. ಪರೀಕ್ಷಾ ಸಮಯದಲ್ಲಿ ಇಡೀ ದಿನ ಓದು ಓದು ಓದಿ, ಸುಸ್ತಾಗಿ ಬಿದ್ದು ಹೋಗುವ ಬದಲು ಎಂದಿನಂತೆ ಮಲಗುವ ಸಮಯಕ್ಕೆ ನಿದ್ರಿಸಿ, ಊಟ, ಆಟ ಇತರೆ ದೈನಂದಿನ ಕೆಲಸಕ್ಕೂ ಸಮಯ ಮಿಸಲಿತ್ತು, ಮಿಕ್ಕ ಪೂರ್ತಿ ಗಂಟೆಯನ್ನು ಏಕಾಗ್ರತೆಯಿಂದ ಓದಲು ಬಳಸಿಕೊಂಡರೆ ಸಾಕು.

೨. ಅಧ್ಯಯನದ ಶೈಲಿ
ನಿಮ್ಮ ಅಧ್ಯಯನ ಮಟ್ಟವನ್ನು ಉತ್ತಮಗೊಳಿಸಿಕೊಳ್ಳಲು ಇದು ಸಹಕಾರಿಯಾಗಿರುತ್ತದೆ. ಕಾರಣ ಒಬೊಬ್ಬ ವಿದ್ಯಾರ್ಥಿಗೂ ತನ್ನದೇ ಆದ ಕಲಿಕಾ ಶೈಲಿಗಳಿರುತವೆ. ಕೆಲವರು ಜೋರಾಗಿ (ಶಬ್ದ ಮಾಡಿ) ಓದುವ, ಕೆಲವರಿಗೆ ಮಲಗಿದ ಭಂಗಿಯಲ್ಲಿ ಓದುವ ಅಭ್ಯಾಸ. ಹಲವರಿಗೆ ಗುಂಪು ಚರ್ಚೆಯಲ್ಲಿ (group study) ಓದಿಕೊಂಡರೇನೇ ಸಮಾಧಾನ. ಈ ವಿಧಗಳಲ್ಲಿ ಉತ್ತಮ ಮಧ್ಯಮವೆಂಬ ಬೇಧವಿಲ್ಲ. ಆದರೆ ಓದನ್ನು ಮತ್ತೆ ಮತ್ತೆ ಮನನಮಾಡಿಕೊಳ್ಳಲು  ಪುಟ್ಟ ಟಿಪ್ಪಣಿಯನ್ನು ಮಾಡಿಟ್ಟುಕೊಳ್ಳುವುದು ಹೆಚ್ಚು ಉಪಯುಕ್ತ. ಇದು ಓದಿದ್ದನು ಕಡಿಮೆ ಅವದಿಯಲ್ಲಿ ಪುನರಾವರ್ತಿಸಲು ನೆರವಿಗೆ ಬರುತದೆ.

೩. ಪಠ್ಯ ಪುಸ್ತಕಕ್ಕೆ ಮೊದಲ ಆದ್ಯತೆ
ಆನೇಕರು ಕೊನೇ ಗಳಿಗೆಯವರೆಗೂ ಕಾಲಹರಣಮಾಡಿ, ಕಡೆ ಗಳಿಗೆಯಲ್ಲಿ ಡೈಜೆಸ್ಟ್ ಅಥವಾ ನೋಟ್ಸ್ ಬುಕ್ ಗಳನ್ನು ತಿರುವಿಹಾಕುವುದು ವಿಷಾದನೀಯ. ಇವೆಲ್ಲವುಗಳಿಗಿಂತ ಪಠ್ಯಪುಸ್ತಕ ನೇರ ಮತ್ತು ಉತ್ತಮ. ಚಿಕ್ಕ ಉತ್ತರ ಮತ್ತು ಬಹು ಆಯ್ಕೆಯ ಪ್ರಶ್ನೆಗಳಿಗೆ ಪಠ್ಯಪುಸ್ತಕವೇ ಮೂಲಾಧಾರ. ಮುಖ್ಯವಾಗಿ ಇಸವಿ, ಹೆಸರುಗಳನ್ನು ಬಣ್ಣದ ಪೆನ್ನಿನಿಂದ ಗುರುತಿಸುವುದರಿಂದ, ಪರೀಕ್ಷೆಗಳಲ್ಲಿ ಸುಲಭಕ್ಕೆ ನೆನಪಿಗೆ ತಂದುಕೊಳ್ಳಬಹುದು.

೪.  ಹಳೆ ಪ್ರಶ್ನೆಪತ್ರಿಕೆಗಳ ಅಧ್ಯಯನ 
ಕಳೆದ ಕೆಲವು ವರ್ಷಗಳ ಪ್ರಶ್ನೆ ಪತ್ರಿಕೆಗಳನ್ನು ಸಂಗ್ರಹಿಸಿ ಪ್ರಶ್ನೆಗಳ ಮಾದರಿಯನ್ನು ಗ್ರಹಿಸುವುದು ಜಾಣ ವಿದ್ಯಾರ್ಥಿಗಳ  ಲಕ್ಷಣ. ಸಾಮಾನ್ಯವಾಗಿ ಪ್ರಶ್ನೆಗಳನ್ನು ಎಂದಿಗಿಂತ ಭಿನ್ನವಾಗಿ ಕೇಳುವುದು ವಾಡಿಕೆ. ಇದು ಹಲವು ಹಳೆಯ ಪ್ರಶ್ನೆಪತ್ರಿಕೆಗಳನ್ನು ಗಮನಿಸಿದಾಗ ನಮಗೆ ತಿಳಿಯುತ್ತದೆ. ಇದರಿಂದ ಪರೀಕ್ಷಾ ಮಂಡಲಿಗೆ ನಿಮ್ಮ ಗ್ರಹಿಕೆಯ, ಅರ್ಥೈಸುವಿಕೆಯ ಸಾಮರ್ಥ್ಯವನ್ನು ಪರೀಕ್ಷಿಸುವ ಉದ್ದೇಶವಿದ್ದರೂ ಇರಬಹುದು.  ಹೀಗೆ ಪ್ರಶ್ನೆಗಳ ವಿವಿಧ ಸ್ತರಗಳನ್ನು ತಿಳಿಯುವುದರಿಂದ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ನೋಡಿ ಗೊಂದಲಕಿಡಾಗುವ ಪ್ರಮಯ ಉದ್ಭವಿಸುವುದಿಲ್ಲ. ಮತ್ತೊಂದು ಸಲಹೆ ಎಂದರೆ ಪ್ರತಿ ಪ್ರಶ್ನೆಯನ್ನು ಅರ್ಥವಾಗುವವರೆಗು ಓದಿ ಆನಂತರ ಉತ್ತರ ಬರೆಯುವದರಿಂದ ತಪ್ಪು ಉತ್ತರಕ್ಕೆ ಆಸ್ಪದವಾಗುವುದಿಲ್ಲ.

೫.  ಸ್ಪಷ್ಟ ಮತ್ತು ದೋಷರಹಿತ ಬರವಣಿಗೆ
ಉತ್ತರಪತ್ರಿಕೆಯಲ್ಲಿ ಮೌಲ್ಯಮಾಪನ ಮಾಡುವವರಿಗೆ ಮೊದಲು ಗಮನಸೆಳೆಯುವ ಅಂಶವೆಂದರೆ ಉತ್ತರಪತ್ರಿಕೆಯ ಅಂದತೆ(neatness). ಹಾಗಾಗಿ ಉತ್ತರಪತ್ರಿಕೆಯೂ ನಾಜೂಕಗಿರಲಿ ಮತ್ತು ಸ್ಪಚ್ಛವಾಗಿರಲಿ. ಆನಂತರ ಉತ್ತರಗಳೂ ಸ್ಪಷ್ಟವಾಗಿ ಸ್ಪುಟವಾಗಿರಲಿ. ಅಂಕಗಳಿಗೆ ಬೇಕಾದಷ್ಟು ಮಾತ್ರ ಉತ್ತರ ಬರೆಯಿರಿ. ಇದರಿಂದ ಎಲ್ಲ ಪ್ರಶ್ನೆಗಳಿಗೂ ನಿಗದಿತ ಸಮಯದೊಳಗೆ ಉತ್ತರಿಸಲು ಸಾಧ್ಯ. ಮುಖ್ಯವಾಗಿ ನಿಮ್ಮ ಬರವಣಿಗೆಯಲ್ಲಿ ತಪ್ಪುಗಳು ಇಲ್ಲದಿದ್ದರೆ ನೀವು ಜಾಣ ವಿದ್ಯಾರ್ಥಿ ಎಂದು ಮೌಲ್ಯಮಾಪಕರು ಊಹಿಸುತ್ತಾರೆ.

೬.  ಪರಿಕರದ ಸದ್ಬಳಕೆ
ಸಾಮಾನ್ಯವಾಗಿ ವಿದ್ಯಾರ್ಥಿಗಳು ಆಯಾಯ ವಿಷಯಕ್ಕೆ ಸಂಬಂಧಿಸಿದಂತೆ ಸಲಕರಣೆಗಳನ್ನು ಬಳಸಬೇಕಾಗುತದೆ. ಉದಾಹರಣೆಗೆ ಸ್ಕೇಲ್ (ಅಳತೆ ಪಟ್ಟಿ) ಪೆನ್ಸಿಲ್ (ಸೀಸದ ಕಡ್ಡಿ) ರಬ್ಬರ್, ಜಿಯಾಮೆಟ್ರೀ ಪೆಟ್ಟಿ ಹೀಗೆ ಆಗತ್ಯವಿದ್ದಲ್ಲಿ ಇವುಗಳ ಸಮರ್ಪಕ ಬಳಕೆ ಉಚಿತ. ಇವುಗಳನ್ನು ನಾವೇ ಸ್ವತಃ ಕೊಂಡೊಯ್ಯುವುದರಿಂದ ಪರೀಕ್ಷಾ ಕೊಠಡಿಯಲ್ಲಿ ಮತ್ತೊಬ್ಬರಿಂದ ಎರವಲು ಪಡೆಯಲು ಅವರನ್ನು ಪೀಡಿಸುವುದು ಮತ್ತು ನಾವು ಮುಜುಗರಕ್ಕೊಳಗಾಗುವುದನ್ನು ತಪ್ಪಿಸಬಹುದು.

೭.   ಅಂತಿಮ ಚೆಕ್
ಪರೀಕ್ಷಾ ಅವಧಿಯ ಕಡೆಯ ಐದತ್ತು ನಿಮಿಷವನ್ನು ಬರೆದ ಉತ್ತರಪತ್ರಿಕೆಯನ್ನು ನೀವೇ ಸ್ವತಃ ಪರೀಕ್ಷಿಸಿಕೊಳ್ಳಲು ಮೀಸಲಿಡೀ. ಆದರಿಂದ ಕೇಳಿದ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿದ್ದಿರೋ ಇಲ್ಲವೋ ಎಂದು ಖಾತ್ರಿಮಾಡಿಕೊಳ್ಳಬಹುದು. ಇಲ್ಲದಿದ್ದರೆ ಸಣ್ಣ ಅನುಮಾನಗಳು ಕಾಡೀ ಮುಂದಿನ ಪರೀಕ್ಷಾ ಓದಿನ ಸಮಯದ ಮೇಲೆದುಷ್ಪರಿಣಾಮಬೀರಬಹುದು. ಕೆಲವೊಮ್ಮೆ ಜ್ಞಾಪಕಕ್ಕೆಬರದ ಉತ್ತರಗಳನ್ನು ಕೊನೆಗೊಮ್ಮೆ ಬರೆಯೋಣ ಎಂದು ಬಿಟ್ಟಿದ್ದ್ದರೆ ಯೋಚಿಸಿ ಬರೆಯಲು ಈ ಸಮಯ ಸಹಾಯಕ್ಕೆ ಬರುತದೆ.

೮.  ಸ್ವ ಮೌಲ್ಯಮಾಪನ
ಇದು ಪರೀಕ್ಷೆಯ ನಂತರ ಮಾಡಿಕೊಳ್ಳುವ ಸ್ವ ಮೌಲ್ಯ ಮಾಪನ. ಇದೇನಿದು ಎಂದು ಆಶ್ಚರ್ಯಪಡಬೇಡಿ. ಕಲಿಕೆ ಪರೀಕ್ಷೆ ನಂತರವೂ ಅಗತ್ಯ. ನೀವು ಉತ್ತರಿಸಿದ್ದ ಪ್ರಶ್ನೆಗಳನ್ನು ಒಂದೊಂದಾಗಿ ಪಠ್ಯಪುಸ್ತಕವನ್ನು ನೋಡಿ ಪರಿಕ್ಷಿಕೊಳ್ಳಿ. ನೀವು ಬರೆದ ಉತ್ತರ ಸರಿಯೋ ತಪ್ಪೋ ತಿಳಿದುಕೊಳ್ಳಿ. ಇದರಿಂದ ಒಂದು ವೇಳೆ ನೀವು ತಪ್ಪು ಉತ್ತರ ಬರೆದೂ ಅದೇ ಸರಿ ಎಂದು ಭಾವಿಸಿದ್ದರೆ ಅದು ನಿಮಗೆ ಇಲ್ಲಿ ತಿಳಿಯುತ್ತದೆ. ಏಕೆಂದರೆ ತಪ್ಪುಗಳನ್ನು ತಿಳಿದುಕೊಳ್ಳುವುದು ಸಹ ಸರಿ ಜೀವನದ ಕ್ರಮ.

                ಈ ಎಲ್ಲ ಅಂಶಗಳೊಂದಿಗೆ ನಿಮ್ಮ ನಿಮ್ಮ ಶಿಕ್ಷಕರು ತಿಳಿಸುವ ಸಲಹೆಗಳನ್ನು, ಪೂರಕವಾದ ಅಂಶಗಳನ್ನು ಅಡವಳಿಸಿಕೊಳ್ಳಿ ಖಂಡಿತ ಸಹಾಯವಾಗುತದೆ. ಪರೀಕ್ಷೆಕಾಲದ ಜೊತೆ ಜೊತೆಗೆ ಬರುವ ಬೇಸಿಗೆಕಾಲ, ಬರಗಾಲ ಮತ್ತು ತಪಸ್ಸುಕಾಲವೂ ತಕ್ಕಮಟ್ಟಿಗೆ ತಂಪಾಗಿರುತ್ತದೆ. ತಂಪಾಗಿರಲಿ ಎಂಬುದು ನಮ್ಮ ಆಶಯ.  

-ಸಂತೋಷ್ ಇ.