Saturday, 28 January 2012

ಪುಣ್ಯಕೋಟಿಯ ಸಾವು


ಪ್ರೀತಿಯ ಅನು
ಶುಭಹಾರೈಕೆಗಳು. ನಾನೊಬ್ಬ ಕಸಬುದಾರ ಬರಗಾರನಲ್ಲದಿದ್ದರೂ ನನ್ನಲ್ಲಿರುವ ಸೂಕ್ಷ್ಮತೆ, ಸಂವೇದನತ್ವ ನನ್ನನ್ನು ಸುಮ್ಮನಿರಲು ಬಿಡುತ್ತಿಲ್ಲ. ಜೀವಪೂರಕ ಚಿಂತನೆಗಳು ಹೆಚ್ಚು ಹೆಚ್ಚು ಹರಿದಾಡಬೇಕೆಂಬ ಅಸೆ ನನ್ನ ಕೈಯಿಂದ ಈ ಲೇಖನಗಳನ್ನು ಬರೆಸಿದೆ. ಅನು …ನನ್ನ ಚಿಂತನೆಗಳು, ಅನುಭಗಳು ಚಿತ್ಕಾರಗಳು ಅಕ್ಷರರೂಪ ಪಡೆಯುವಂತೆ ಸತಯಿಸಿದವರಲ್ಲಿ ನಿನ್ನದು ಸಿಂಹಪಾಲು. ನನ್ನ ಅನೇಕ ಅನುಭಗಳು ಚಿಂತನೆಗಳು, ಚಿತ್ಕಾರಗಳು ಅಭಿವ್ಯಕ್ತಿಗೊಳ್ಳಲು ಅಕ್ಷರ/ಪದಗಳ ಮುಂದೆ ಭಿಕ್ಷೆ ಬೇಡುತ್ತಾ ಸಾಲಾಗಿ ನಿಂತಿವೆ. ಅಂತಹ ಒಂದು ಅನುಭವವನ್ನು ಮಾತು ಕೈಹಿಡಿದ್ದ ಪ್ರತಿಫಲವೇ ಈ ಕತೆ.

ಪುಣ್ಯಕೋಟಿಯ ಸಾವು

ಆಕಾಶದಲ್ಲಿ ಹೆಪ್ಪುಗಟ್ಟಿದ ಕತ್ತಲು, ಆಕಾಶವನ್ನು ಬಿಟ್ಟು ಹೋಗಲು ತಯಾರಿಲ್ಲದಿದ್ದರೂ ದಂಡೆತ್ತಿ ಬರುತ್ತಿದ್ದ ದಂಡನಾಯಕ ಸೂರ್ಯನಿಗೆ ಸೋಲಲೇ ಬೇಕಾದ ಅಸಹಾಯಕತೆಯಿಂದ ಜಾರಿಕೊಳ್ಳುತ್ತಿತ್ತು. ದಂಡನಾಯಕನ ಕಿರಣಗಳು ಕತ್ತಲೆಯ ಸೀಳಿ ರಾಜರೋಷವಾಗಿ ಆಕಾಶವನಾವರಿಸಿಕೊಳ್ಳುತ್ತಿದ್ದಂತೆ ಹಕ್ಕಿಗಳ ಇಂಚರ ಬಾನ ತುಂಬಿ ಬೆಳಕಿನ ಮೆರವಣಿಗೆಗೆ ಸುಪ್ರಭಾತ  ಹಾಡುವಂತ್ತಿತ್ತು. ಈ ಕಡೆ, ಇಗರ್ಜಿಯ ಗಂಟೆಯ ಸಪ್ಪಳಕ್ಕೆ ಆರೋಗ್ಯಮ್ಮ ಎದ್ದಳೋ ಅಥವಾ ಆರೋಗ್ಯಮ್ಮಳ ಸಪ್ಪಳಕ್ಕೆ ಗಂಟೆ ಎಚ್ಚರವಾಯಿತೋ! ಆರೋಗ್ಯಮ್ಮ ಆಗಲೇ ನಿದ್ದೆಗೆ ಶುಭಮಸ್ತು ಹೇಳಿ ಪುಣ್ಯಕೋಟಿಯ ದರ್ಶನಕ್ಕೆಂದು ಕೊಟ್ಟಿಗೆಯ ಕಡೆ ಹೆಜ್ಜೆ ಹಾಕಿದಳು. ಪುಣ್ಯಕೋಟಿಯ ದರ್ಶನದಿಂದ ದಿನ ಸುಗಮವಾಗಿರುತದೆಂಬ ಅಳವಾದ ನಂಬಿಕೆಯಿಂದ ಹುಟ್ಟಿಕೊಂಡ ಪ್ರತಿದಿನದ ಶಿಷ್ಟಚಾರ ಇದ್ದಾಗಿತ್ತು. ಆರೋಗ್ಯಮ್ಮಳ ವಿಧಿವತ್ತಾದ ಪ್ರವೇಶದಿಂದ ನೆಲದ ಮೇಲೆ ಮರದಿಮ್ಮಿಗಳಂತೆ ಬಿದ್ದುಕೊಂಡಿದ್ದ ಹಸುಗಳು ಚಂಗನೇ ಪುಟ್ಟಿದೆದ್ದವು. ಅವುಗಳ ಕೊರಳುಗಳಲ್ಲಿ ಕಟ್ಟಿದ ಗಂಟೆಗಳ ಸಪ್ಪಳ ಕೊಟ್ಟಿಗೆಯ ತುಂಬಾ ಮಾರ್ಧನಿಸಲಾರಂಭಿಸಿತ್ತು. ಈ ಕಡೆ ಪುಣ್ಯಕೋಟಿಯ ದರ್ಶನಕ್ಕೆ ಹಾತೊರೆಯುತ್ತಿದ್ದ ಆರೋಗ್ಯಮ್ಮಳ ಕಂಗಳು ಪುಣ್ಯಕೋಟಿಯನ್ನು ಕಂಡಾಕ್ಷಣ ರವಿಯ ಸ್ವರ್ಶಕಂಡ ಹೂವಂತಾಗಿ ಅರಳಾರಂಭಿಸಿತ್ತು. ಅವಳ ಮುಖ ಸೂರ್ಯನಿಗೆ ಕನ್ನಡಿಯಿಡಿದಂತ್ತಿತ್ತು.

ಕೊಟ್ಟಿಗೆಯ ಮಗುಲಿಗಿದ್ದ ಪಡಸಾಲೆ ಮೇಲೆ ಗೋಣಿಚೀಲವನ್ನು ಮೈತುಂಬಾ ಹೊದ್ದುಕೊಂಡು ಮಲಗಿಕೊಂಡಿದ್ದ ಮೂಗ ಗಂಟೆಗಳ ಸದ್ದಿಗೆ ಚೆಂಡು ಪುಟಿಯುವಂತೆ ಎದ್ದು ಕಣ್ಣು ಮಿಟುಕಿಸಿಕೊಳ್ಳುತ್ತಾ ಕೊಟ್ಟಿಗೆಯ ಬಾಗಿಲ ಬಳಿ ಹಾಜರಾದರೂ ನಿದ್ರಾದೇವಿ ಅವನನ್ನು ಬಿಟ್ಟಿದಂತಿರಲಿಲ್ಲ. ಪುಣ್ಯಕೋಟಿಯ ದರ್ಶನಕೆಂದು ಬಂದಿದ್ದ ಆರೋಗ್ಯಮ್ಮ ಮಾತ್ರ ಧನ್ಯತೆ ತುಂಬಿದ ಕಂಗಳಿಂದ ಪುಣ್ಯಕೋಟಿಯನ್ನೇ ದಿಟ್ಟಿಸುತ್ತಾ, “ಒಂದು ಹೊತ್ಗೆ ಊಟಕ್ಕೂ ಅಲೆಯುವಂತಹ ಕಷ್ಟದ ಸಮಯದಾಗ ನನ್ಗೆ ಭಾಗ್ಯದಾತೆಯಂತೆ ಬಂದಲ್ಲ ತಾಯೇ”  ಮನಸ್ಸಿನಲ್ಲೇ ಹೇಳಿಕೊಳ್ಳುತ್ತಾ ಪುಣ್ಯಕೋಟಿಯ ತಲೆಯನ್ನು ತೀಡುತ್ತಿದ್ದಂತೆ ಯಜಮಾನಿಯ ಮನಸ್ಸನ್ನು ಅರಿತಂತೆ ಪುಣ್ಯಕೋಟಿ ಖುಷಿಯಿಂದ ತಲೆಯಾಡಿಸತೊಡಗಿತ್ತು. ಹೀಗೆ ದಿನದ ಶಿಷ್ಟಚಾರ ಮುಗಿಸಿದ ಆರೋಗ್ಯಮ್ಮ “ಏ ಬೇಗಾ ಕೊಟ್ಗೆ ಕ್ಲೀನ್ ಮಾಡಿ ಹಾಲ್ ಕರ್ದು ನಾಷ್ಟ ಹಾಕ್ಸುಕೊಂಡು, ಹಸುಗಳ್ನ ತೊರೆದಿಂಡಿಗೆ ಹೊಡ್ಕೊಂಡು ಒಗು” ಮೂಗನಿಗೆ ಆಜ್ಞಾನಪಿಸುತ್ತಾ ಕೊಟ್ಟಿಗೆಯ ಹೂರ ನಡೆದಳು. ಯಜಮಾನಿಯ ಮಾತಿಗೆ ತಲೆಯಾಡಿಸುತ್ತಾ ಕೊಟ್ಟಿಗೆಯ ತಿಪ್ಪೆಯನ್ನು ಬಳಿಯಲು ಸಜ್ಜಾದ.

ಪುಣ್ಯಕೋಟಿಯು ಒಂದು ಅಸಾಮಾನ್ಯ ಹಸುವೆಂದು ಊರಿಗೆ ಊರೇ ಮಾತನಾಡಿಕೊಳ್ಳುತ್ತಿತ್ತು. ಗೋವಿನ ಹಾಡಿನಲ್ಲಿ ಬರುವ ಪುಣ್ಯಕೋಟಿಯ ಹೆಸರು ಆರೋಗ್ಯಮ್ಮಳ ಹಸುಗೆ ಹೇಗೆ ಬಂದಿತ್ತೋ ಗೊತ್ತಿಲ್ಲ, ಆದರೆ ಸಾಕ್ಷತ್ ಪುಣ್ಯಕೋಟಿಯೇ ಮೈದಾಳಿದಂತಿತ್ತು ಆ ಹಸು. ಇಡೀ ತಾಲ್ಲೂಕಿನಲ್ಲೇ ಯಾವ ಹಸುವು ಕೊಡದಷ್ಟು ಹಾಲನ್ನು ಕರೆಯುತ್ತಾ ಎಲ್ಲರ ಮನೆ ಮಾತಾಗಿತ್ತು. ಬ್ಯಾಂಕಿನಿಂದ ಸಾಲ ಪಡೆದು ಪುಣ್ಯಕೋಟಿಯನ್ನು ಖರೀದಿಸಿದ್ದರೂ ಇಂತಹ ಅಸಾಧರಣವಾದ ಹಸು ಸಿಕ್ಕಿದು ದೇವರ ಕೈವಾಡವೇ ವಿನಃ ಬೇರೇನೂ ಅಲ್ಲ ಎಂಬುವುದು ಆರೋಗ್ಯಮ್ಮಳ ಬಲವಾದ ನಂಬಿಕೆಗೆ ಕಾರಣವೂ ಇತ್ತು. ಬಡತನ ದವಡೆಗೆ ಸಿಕ್ಕಿ ನುಚ್ಚುನೂರಾಗಿದ್ದ ಆರೋಗ್ಯಮ್ಮಳಿಗೆ ಪುಣ್ಯಕೋಟಿಯು ಅಧಿಕ ಹಾಲನ್ನು ಕರೆಯುವುದರ ಮೂಲಕ ಸ್ವಾಲಂಬನೆಯ ಹಾಲನ್ನು ಉಣಿಸಿ, ಉಜ್ವಲ ಭವಿಷ್ಯದ ಕಿಡಿಯನ್ನ ಅವಳಲ್ಲಿ ಹೊತ್ತಿಸಿತ್ತು. ಈ ಕಡೇ ಚಿಕ್ಕ ಪುಟ್ಟ ಕಾರಣಕ್ಕೆಲ್ಲಾ ಕಾಲು ಕೆರೆದುಕೊಂಡು ಆರೋಗ್ಯಮ್ಮ ಬಳಿ ಜಗಳ ಮಾಡುತ್ತಿದ್ದ ಪಕ್ಕದ ಮನೆಯವರಿಗೆ ಮಾತ್ರ ಆರೋಗ್ಯಮ್ಮಳ ಆಶಾದಾಯಕ ಚೇತರಿಕೆ ನುಂಗಲಾಗದ ತುತ್ತಾಯಿತ್ತು.

ಯಜಮಾನಿಯ ಪ್ರತಿದಿನದ ಶಿಷ್ಟಚಾರವನ್ನು ಮೂಕ ಸಾಕ್ಷಿಯಂತೆ ನೋಡುತ್ತಿದ್ದ ಮೂಗನ ನಿಜವಾದ ಹೆಸರು ರಾಜ. ಬಾಯಿಬಾರದ ಕಾರಣ ಊರಿನವರು ಅವನನ್ನು ಮೂಗ ಎಂದೇ ಕರೆಯುತ್ತಿದ್ದರು. ಊರಿನಲ್ಲಿ ಚಲಾವಣೆಯಲ್ಲಿದ್ದ ಕತೆಯ ಪ್ರಕಾರ ರಾಜ ಸಣ್ಣವನಿರುವಾಗ ತನ್ನ ತಾಯಿಯ ಸಾವಿನ ಸುದ್ಧಿಯನ್ನು ಕೇಳುತ್ತಲೇ ತನ್ನ ವಾಕ್ ಚಾತುರ್ಯವನ್ನು ಕಳೆದುಕೊಂಡಿದ್ದ. ಚಿಕ್ಕವಯಸಿನಲೇ ಅನಾಥನಾಗಿದ್ದ ರಾಜ ಅವರಿವ್ರ ಮನೆಗಳಲ್ಲಿ ಜೀತಮಾಡುತ್ತಾ ಕೊನೆಗೆ ಆರೋಗ್ಯಮಳ ಮನೆಯಲ್ಲಿ ಪುಣ್ಯಕೋಟಿ ಮತ್ತು ಇತರ ಹಸುಗಳ ಪಾಲನೆಗೆ ಅಧಿಕೃತವಾಗಿ ನೇಮಕಗೊಂಡಿದ್ದ. ಎಲ್ಲಾ ಹಸುಗಳಿಂತ ಪುಣ್ಯಕೋಟಿಯ ಮೇಲೆ ಮೂಗನಿಗೆ ಅತಿಯಾದ ಪ್ರೀತಿ. ಪುಣ್ಯಕೋಟಿಯನ್ನು ನೆನದಾಗಲ್ಲ ಮೂಗನ ಮನಸ್ಸು ಸಂತೋಷದಿಂದ ಬಲೂನ್ನಂತೆ ಉಬ್ಬಿಕೊಳ್ಳುತಿತ್ತು. ಮೂಗ ಯಾರಿಗೂ ಹೇಳಿಕೊಳ್ಳಲಾಗದ ನೋವನ್ನುಪುಣ್ಯಕೋಟಿಯ ಬಳಿ ಹೇಳಿಕೊಳ್ಳುತ್ತಾ ಹೃದಯವನ್ನು ಹಗುರ ಮಾಡಿಕೊಳ್ಳುತ್ತಿದ್ದ. ಪುಣ್ಯಕೋಟಿಯ ಕರುವು ಜಿಗಿಜಿಗಿದು ಅಮ್ಮಳ ಬಳಿಬಂದಾಗ ಪುಣ್ಯಕೋಟಿ ತನ್ನ ಕರುವಿನ ಮೈಯನೆಲ್ಲಾ ಅಕ್ಕರೆಯಿಂದ ನೆಕ್ಕುತ್ತಾ ಹಾಲು ಉಣಿಸುತ್ತಿದ್ದ ದೃಶ್ಯವನ್ನು ಕಂಡು ಮೂಗ ಹರ್ಷ ಚಿತ್ತನಾಗಿ ಮೈಮರೆಯುತ್ತಿದ್ದ. ಚಿಕ್ಕಂದಿನಲೇ ತಾಯಿಯನ್ನು ಕಳೆದುಕೊಂಡಿದ್ದ ದುರ್ದೈವಿ ಮೂಗನಿಗೆ ಆ ಹಸುವಿನ ಮಮತೆ ತನ್ನ ಅಮ್ಮಳ ಮಮತೆಯನ್ನು ಸಾದೃಶ್ಯಗೊಳಿಸುವಂತಿರುತಿತ್ತು. ಹೀಗೆ ಪುಣ್ಯಕೋಟಿಯ ಬಳಿ ಇದ್ದಾಗ ಮೂಗನ ಪ್ರತಿಯೊಂದು ಸನ್ನೆಯು ಮಾತಾಗಿ ಪುಣ್ಯಕೋಟಿಗೆ ಬಹುಬೇಗ ಅರ್ಥವಾಗಿ ಬಿಡುತಿತ್ತು. ಮೌನದಲೇ ಇಬ್ಬರ ಒಡನಾಟ ಬೆಳೆದು ಹೆಮ್ಮರವಾಗಿತ್ತು. ಈ ಮೌನ ಸಂಬಂಧಗಳ ಸದೃಢ ಭಾಷೆಗೆ ಮಾತೇ  ಬೇಡವಾಗಿತ್ತು.
ಹೀಗೆ ದಿನಗಳು ಉರುಳಿ ತಿಂಗಳಾದವು.. ಸ್ವಾಭಿವಿಕ ಎಂಬಂತೆ ಪುಣ್ಯಕೋಟಿಯು ಹಾಲು ಕರೆಯುವುದನ್ನು ಕಡಿಮೆಮಾಡಿತ್ತು. ಜತೆಗೆ ಯಾವುದೋ ಒಂದು ಭಯಂಕರವಾದ ರೋಗ ಪುಣ್ಯಕೋಟಿಯನ್ನು ಕಾಡತೊಡಗಿತ್ತು. ಪುಣ್ಯಕೋಟಿಯನ್ನು ಗುಣಮುಖವಾಗಿಸಲು ಪ್ರಯತ್ನಿಸಿದ ಅನೇಕ ಪಶುವೈದ್ಯರು ಸಾಧ್ಯವಾಗದೆ ಕೈಚೆಲ್ಲಿದರು.  ಒಂದು ಕಾಲದಲ್ಲಿ ಊರಿನ ಜನರಿಗೆಲ್ಲಾ ಅವರ ಬೇಡಿಕೆಯ ಪ್ರಕಾರ ಹಾಲವನ್ನು ಒದಗಿಸುತ್ತಿದ್ದ ಪುಣ್ಯಕೋಟಿ ಈಗ ತಾನು ಕರೆಯುತ್ತಿದ್ದ ಹಾಲು ಆರೋಗ್ಯಮ್ಮಳ ಮನೆಯ ದಿನನಿತ್ಯದ ಕಾಫಿ ಟೀಗೆ ಸಾಕಾಗುತ್ತಿರಲಿಲ್ಲ. ಬ್ಯಾಂಕಿನ ಸಾಲ ತೀರಿಸುವ ಪ್ರಶ್ನೆ ಬೇರೆ ಪೆಡಂಭೂತವಾಗಿ ಅರೋಗ್ಯಮ್ಮಳನ್ನು ಕಾಡಲು ಪ್ರಾರಂಭಿಸಿತ್ತು. ಈ ರೀತಿಯ ವಿಷಮ ಪರಿಸ್ಥಿತಿಯಿಂದ ಆರೋಗ್ಯಮ್ಮಳ ಆರೋಗ್ಯದ ಪರಿಸ್ಥಿತಿ ಕೂಡ ಹದಗೆಡಲು ಪ್ರಾರಂಭಿಸಿತ್ತು.

ಬೇಸಿಗೆ ಕಾಲವಾದರೂ ಮೋಡ ಕವಿದ ವಾತವರಣ. ಮೋಡವು ಸೂರ್ಯನ ಆವರಿಸಿ ಬೀಗುತ್ತಾ ದಿನವನ್ನು ಮಂಕಾಗಿಸಿಬಿಟ್ಟಿತ್ತು.  ಪುಣ್ಯಕೋಟಿಯ ಆಕಸ್ಮಿಕ ಸಾವಿನ ಸುದ್ದಿ ಕಾಡ್ಗಿಚ್ಚಿನಂತೆ  ಊರೆಲ್ಲಾ ಹರಡಿತ್ತು. “ಅಯ್ಯೋ ಎಂಥಾ ಹಸು ಸತೋಯಿತ್ತಲ್ಲ,,” ಎಂದು ಕೆಲವರು ಮರುಕ ಪಟ್ಟರೆ, ಇನ್ನೂ ಕೆಲವರು ಅಭಿಮನ್ಯುನಂತೆ ಪುಣ್ಯಕೋಟಿಯ ಸಂಶಯಾಸ್ವದ ಸಾವಿನ ಚಕ್ರವೂಹ್ಯವನ್ನು ಭೇದಿಸಲು ಪ್ರಯತ್ನಿಸುತ್ತಿದ್ದರು. “ಹಸು ಮೇಯಿಸುವಾಗ ಮೂಗ ಎಸೆದ ಕಲ್ಲು ಪುಣ್ಯಕೋಟಿಯ ತಲೆಮೇಲೆ ಬಲವಾಗಿ ಬಿದ್ದುದ್ದರಿಂದ ಪುಣ್ಯಕೋಟಿ…ಸತೋಯಿತಂತೆ”, “ ಇಲ್ಲ, ಆರೋಗ್ಯಮ್ಮಳಿಗೆ ಆಗದವರು ಯಾರೋ ಹಸುಗೆ ವಿಷ ಹಾಕಿ..” ಹೀಗೆ ಅಂತೆಕಂತೆ ಕಥೆಗಳು ಪುಣ್ಯಕೋಟಿಯ ಸಾವಿನ ಸುತ್ತಾ ಹುಟ್ಟಿಕೊಂಡವು. ಯಾರಿಗೂ ಪುಣ್ಯಕೋಟಿಯ ಆಕಾಲಿಕ ಸಾವಿನ ನಿಖರವಾದ ಕಾರಣ ಗೂತ್ತಿರಲಿಲ್ಲ. ಮೂಗನಿಗೂ ಸಹ ಪುಣ್ಯಕೋಟಿಯ ಆಕಸ್ಮಿಕ ಸಾವು ಒಂದು ಪ್ರಶ್ನೆಯಾಗಿ ಉಳಿದಿತ್ತು. ತಾನು ಅತಿ ಯಾಗಿ ಪ್ರೀತಿಸುತ್ತಿದ್ದ ಹಸುವಿನ ಮರಣದಿಂದ ಮೂಗ ಗರಬಡಿದವನಂತಾಗಿದ್ದ. ಇನ್ನೊಂದು ಕಡೆ, ಪುಣ್ಯಕೋಟಿಯ ಆಕಾಲಿಕ ಸಾವು ಅರೋಗ್ಯಮ್ಮಳನ್ನು ಭ್ರಮನಿರಸನಗೊಳಿಸಿ, ಅವಳ ಬದುಕನ್ನು ಮೋಡ ಕವಿದ ವಾತವರಣವಾಗಿಸಿಬಿಟ್ಟಿತ್ತು.

ಕೆಲ ದಿನಗಳ ನಂತರ, ಪುಣ್ಯಕೋಟಿಯ ಆಕಸ್ಮಿಕ ಸಾವಿನಿಂದ ಉಂಟಾದ ನಷ್ಟವನ್ನು ತುಂಬಲು ಬ್ಯಾಂಕಿನ ಪರಿಹಾರ ಧನವು ಆರೋಗ್ಯಮಳ ಕೈಸೇರಿತ್ತು. ಪರಿಹಾರ ಹಣದಿಂದ ಅರೋಗ್ಯಮ್ಮ ಇನ್ನೊಂದು ಹಸುವನ್ನು ಖರೀದಿಸುವಳೆಂಬ ಕೆಲವರ ಊಹೆ ಸುಳ್ಳಾಯಿತ್ತು. ಪುಣ್ಯಕೋಟಿಯ ಕರುವು ಕೂಡ ಮನೆಯಿಂದ ಮಾಯವಾಯಿತ್ತು. ಆರೋಗ್ಯಮ್ಮ ಮದ್ಯವಸನಿಯಾಗಿ, ಪರಿಹಾರ ಹಣವನ್ನೆಲ್ಲಾ ಮದ್ಯಕ್ಕಾಗಿ ವ್ಯಯಿಸತೊಡಗಿದಳು. ಪುಣ್ಯಕೋಟಿಯ ಸತ್ತಿದಕ್ಕೆ ಆರೋಗ್ಯಮ್ಮ ತಲೆಕೆಡಿಸಿಕೊಂಡಿದ್ದಾಳೆಂದು, ಆರೋಗ್ಯಮ್ಮಳ ದುಸ್ಥಿತಿಗೆ ಊರಿನವರು ಮಮ್ಮಲ ಮರುಗಿದರು.
ಒಂದು ದಿನ ಎಂದಿನಂತೆ ಮೂಗ ಇದ್ದ ಕೆಲ ಹಸುಗಳನ್ನು ಮೇಯಿಸಿಕೊಂಡು ಮನೆಗೆ ವಾಪಸ್ಸಾಗಿ, ಹಸುಗಳನ್ನು ಕೊಟ್ಟಿಗೆಯಲ್ಲಿ ಕಟ್ಟಿ, ಟೀ ಹಾಕಿಸಿಕೊಳ್ಳಲು ಅಣಿಯಾಗುತ್ತಿದಂತೆ, ಆರೋಗ್ಯಮ್ಮ ಕುಡಿದ ಅರೆಮತ್ತಲ್ಲಿ..” ಹಸು ಸತ್ರೆ ಬ್ಯಾಂಕ್ ನಿಂದ ಹಣ ಬರುವುದೆಂಬ ಅಸೆಯಿಂದ ನಾನೇ ಕೈಯಾರೆ ನನ್ನ ಪುಣ್ಯಕೋಟಿಗೆ ವಿಷ ಹಾಕಿ ಸಾಯ್ಸಿಬಿಟ್ನಲ್ಲ ..” ಎಂದು ಪಾಪ ಪ್ರಜ್ಞೆಯಿಂದ ಹೇಳುತ್ತಿದ ಮಾತು ಮೂಗನ ಕಿವಿಗೆ ಬೀಳುತಿದ್ದಂತೆ...ಆರೋಗ್ಯಮ್ಮಳು ರಾಕ್ಷಸನಂತೆ ಸ್ವಾರ್ಥದ ಬಾಯಿಯನ್ನು ತೆರೆದು ತನ್ನನ್ನು ನುಂಗುಲು ಬರುತ್ತಿರುವಂತೆ ಮೂಗನಿಗೆ ಭಾಸವಾಗಿ... ಮೂಗ ಓಡಲು ಪ್ರಾರಂಭಿಸಿದ.
-ಜೋವಿ

Read more!

Thursday, 19 January 2012

ದೇಶದ ಶ್ರೇಷ್ಠತೆ


ಒಂದು ದೇಶ/ ರಾಜ್ಯವನ್ನು “ಶ್ರೇಷ್ಠ” ಎಂದು ನಿರ್ಧಾರಿಸುವುದಾದರೂ ಹೇಗೆ? ಒಂದು ದೇಶಕ್ಕೆ ಶ್ರೇಷ್ಠ ಎಂಬ ಪ್ರಮಾಣಪತ್ರವನ್ನು ಯಾವ ಆಧಾರದ ಮೇಲೆ ಕೊಡಬಹುದು? ಯಾವ ಲಕ್ಷಣಗಳು ಒಂದು ದೇಶವನ್ನು ಶ್ರೇಷ್ಠವಾಗಿಸುತ್ತದೆ?  ಒಟ್ಟಾರೆ...what makes a nation great? ದೇಶದ ಮಿಲಿಟರಿ ಬಲವೇ ಅಥವಾ ಆರ್ಥಿಕ ಅಭಿವೃದ್ಧಿಯೇ? ದೇಶದ ವೈಜ್ಞಾನಿಕ ಅವಿಷ್ಕಾರಗಳೇ.. ದೇಶವು ಗರ್ಭಕಟ್ಟಿಕೊಂಡಿರುವ ಅಗಾಧ ನೈಸರ್ಗಿಕ ಸಂಪತ್ತೇ? ಇವೆಲ್ಲಾವು ಶ್ರೇಷ್ಠತೆಯ ಮಾನದಂಡಗಳಾಗಿದ್ದರೆ… ಇಂದು ಅಮೇರಿಕಾ ಅಥವಾ ಇನ್ನಿತರ ದೇಶಗಳು  ಶ್ರೇಷ್ಠ ರಾಷ್ಟ್ರವಾಗಿರಬೇಕಾಗಿತ್ತು!  ನೈಸರ್ಗಿಕ ಸಂಪತ್ತು ದೇಶಕ್ಕೆ ಶ್ರೇಷ್ಠ ಎಂಬ ಅಂಕಪಟ್ಟಿಯನ್ನು ತಂದುಕೊಡುವುದಾಗಿದ್ದರೆ ಇಂದು ಎಷ್ಟೋ ಆಫ್ರಿಕಾ ದೇಶಗಳು ಶ್ರೇಷ್ಠವೆಂಬ ಹಣೆಪಟ್ಟಿ ಕಟ್ಟಿಕೊಂಡು ಅಭಿಮಾನದಿಂದ ಬೀಗಬಹುದಾಗಿತ್ತು. ಇನ್ನೊಂದು ಕಡೆ, ದೇಶದ ಸವಿಸ್ತಾರವಾದ ಪ್ರದೇಶವಾಗಲ್ಲಿ ಅಥವಾ ಜನಸಂಖ್ಯೆಯಾಗಲ್ಲಿ ದೇಶಕ್ಕೆ ಶ್ರೇಷ್ಠತೆಯನ್ನು ತಂದು ಕೊಡುತ್ತದೆ ಎಂಬುವುದು ಅಪ್ಪಿತಪ್ಪಿಯೂ ಒಪ್ಪಲಾಗದಂತಹ ಮಾತು. ದೇಶದ ಸಂಪತ್ತು, ಗಾತ್ರ ಅಥವಾ ಶಕ್ತಿ ಸಾಮರ್ಥ್ಯಗಳ ಸೇರುಗಳಿಂದ ದೇಶದ ಶ್ರೇಷ್ಠತೆಯನ್ನು ಎಂದಿಗೂ ಅಳೆಯಾಲಾಗುವುದಿಲ್ಲ. ಆಗದರೆ ದೇಶದ ಶ್ರೇಷ್ಠತೆ ಯಾವುದರಲ್ಲಿ ಅಡಗಿದೆ?

ದೇಶವು ತನ್ನ ಪ್ರಜೆಗಳಲ್ಲಿ ಯಾವ ಮೌಲ್ಯವನ್ನು ಗುರುತಿಸಿ, ಅದಕ್ಕೆ ಮಾನ್ಯತೆ ಕೊಟ್ಟು ಉತ್ತೇಜಿಸಿತ್ತದೆಯೋ ಅದು ದೇಶದ ಔನ್ನತ್ಯ ಅಥವಾ ಘನತೆಗೆ ರುಜುವಾತು ಒದಗಿಸುತ್ತದೆ. ಆದುದರಿಂದ ದೇಶವು ಯಾವುದಕ್ಕೆ ಮಾನ್ಯತೆಯನ್ನು ಕೊಡುತ್ತದೆ ಎಂಬ ಪ್ರಶ್ನೆಯನ್ನು ಕೇಳಿಕೊಳ್ಳುವುದು ಸೂಕ್ತವೆನ್ನಿಸುತ್ತದೆ. ಭ್ರಷ್ಟಾಚಾರವೆಂಬ ಅನಿಷ್ಟಕ್ಕೆ ಮೂಗುದಾರ ಕಟ್ಟಿ ನಿಗ್ರಹಿಸದೆ, ಅದಕ್ಕೆ ಹುಲ್ಲು ಇಂಡಿ ಹಾಕಿ ಬಲಿಷ್ಠವಾಗಿಸುವ ದೇಶ ಎಂದಿಗೂ ಶ್ರೇಷ್ಠವೆಂದು ಕರೆಸಿಕೊಳ್ಳಲು ಸಾಧ್ಯವೇ ಇಲ್ಲ. ಸರ್ಕಾರದ ಆದ್ಯತೆ, ನಾಯಕರ ದೂರದೃಷ್ಟಿ, ಆದರ್ಶಮಯ ಜೀವನ, ದೇಶದ ಸಮಾಜಿಕ ಮತ್ತು ನ್ಯಾಯ ವ್ಯವಸ್ಥೆ, ಪೌರರಲ್ಲಿರಬೇಕಾದ ಪ್ರಾಮಾಣಿಕತೆ, ಬಡಬಗ್ಗರಿಗೆ ತೋರುವ ದಯೆ ದೇಶದ ಶ್ರೇಷ್ಠತೆಯನ್ನು ಸಾರಿ ಹೇಳುತ್ತವೆ. ಪ್ರಜೆಗಳಲ್ಲಿರಬೇಕಾದ ಸಂಯೋಜಿತ ವ್ಯಕ್ತಿತ್ವ, ಅವರು ಮೆಚ್ಚಿ ಅನುಮೋದಿಸುವ ಮತ್ತು ಉತ್ತೇಜಿಸುವ ಅಂಶಗಳು, ಮೌಲ್ಯಗಳು, ಆದರ್ಶಗಳು ಮಹತ್ವಾಂಕ್ಷೆಗಳು ಕೊನೆಗೆ ಅವರು ಬದುಕುವ ರೀತಿ ದೇಶದ ಶ್ರೇಷ್ಠತೆಯನ್ನು ದೃಢಪಡಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆಂಬುವುದು ಸೂರ್ಯನಷ್ಟೇ ಸತ್ಯ. ಒಂದು ಮಾತಿನಲ್ಲಿ ಹೇಳಬೇಕಾದರೆ ದೇಶದ ನ್ಯಾಯಪರತೆ/ಧರ್ಮಿಷ್ಠತೆ  ದೇಶವನ್ನು ಶ್ರೇಷ್ಠವನ್ನಾಗಿಸುತ್ತದೆ.

ದೇಶದ ಶ್ರೇಷ್ಠತೆಯ ಬಗ್ಗೆ ಮಾತನಾಡುತ್ತಾ, ಉತ್ತಮ ಸರ್ಕಾರ, ದೇಶಭಕ್ತಿ, ಪ್ರಜಾಪ್ರಭುತ್ವ, ಆದರ್ಶ ಮತ್ತು ನ್ಯಾಯಪರ ರಾಜಕೀಯ ನಾಯಕರುಗಳು ಮತ್ತು ರಾಜಕೀಯ ಪಕ್ಷಗಳು ಒಂದು ದೇಶಕ್ಕೆ ಶ್ರೇಷ್ಠತೆಯನ್ನು ತಂದುಕೊಡುವ ಕೆಲವೊಂದು ಸಾಧನಗಳೆಂದು ಕೆಲವರು ಪಟ್ಟಿಮಾಡುತ್ತಾರೆ. ಒಂದು ಉತ್ತಮ ಜವಾಬ್ದಾರಿಯುತ್ತ, ನ್ಯಾಯಪರ ನಿಷ್ಕಳಂಕ ಸರ್ಕಾರ ಮತ್ತು ರಾಜಕೀಯ ಪಕ್ಷಗಳು ಒಂದು ರಾಷ್ಟ್ರವನ್ನು ಶ್ರೇಷ್ಠ ರಾಷ್ಟ್ರವಾಗಿಸುವುದರಲ್ಲಿ ಅನುಮಾನವೇ ಇಲ್ಲ. Votebank politics ಬಗ್ಗೆ ತಲೆಕೆಡಿಸಿಕೊಳ್ಳದೆ, ಜನರ ಸರ್ವತೋಮುಖ ಅಭಿವೃದ್ಧಿಗೆ ತೊಡೆತಟ್ಟಿ ನಿಲ್ಲುವ ಸರ್ಕಾರ ಮತ್ತು ರಾಜಕೀಯ ಪಕ್ಷಗಳು ರಾಷ್ಟ್ರಕ್ಕೆ ಶ್ರೇಷ್ಠತೆಯನ್ನು ತಂದುಕೊಡುವ ಪ್ರಮುಖ ಪಾತ್ರ ದಾರಿಗಳು. ಪ್ರಜೆಗಳ ಹಿತ, ರಕ್ಷಣೆ, ಅಭಿವೃದ್ಧಿ ಸರ್ಕಾರ ಮತ್ತು ರಾಜಕೀಯ ಪಕ್ಷಗಳ ನಿರ್ಧಾರಗಳ, ಅದ್ಯತೆಗಳ ಮಾರ್ಗದರ್ಶಿಯಾಗಿರಬೇಕೇ ವಿನಃ ಈ ಪ್ರಕ್ರಿಯೆಯಲ್ಲಿ ಸ್ವಹಿತ ಎಂದೂ ನುಸುಳಬಾರದು. ಒಳ್ಳೆಯ ನಾಯಕತ್ವ ಉತ್ತಮ ರಾಜಕೀಯ ಮತ್ತು ಆಡಳಿತ ವ್ಯವಸ್ಥೆಯ ಒಂದು ಅಂಶ. ದೂರದೃಷ್ಟಿ, ವಿವೇಕ, ಜ್ಞಾನ ತಿಳುವಳಿಕೆ ಮತ್ತು ಸಮಾನ್ಯ ಜ್ಞಾನ ನಾಯಕತ್ವದಲ್ಲಿ ಎದ್ದು ಕಾಣಬೇಕು. ನಾಯಕತ್ವದ ಪ್ರತಿಯೊಂದು ನಿರ್ಧಾರವು ದೇಶದ  ಮುನ್ನಡೆಗೆ  ಸಹಕಾರಿಯಾಗಬೇಕು. ದೇಶವನ್ನು ಶ್ರೇಷ್ಠತೆಯ ಕಡೆಗೆ ಕೊಂಡೊಯುವ ಇನ್ನೊಂದು ಅಂಶ ಪ್ರಜೆಗಳಲ್ಲಿರಬೇಕಾದ್ದ ದೇಶಭಕ್ತಿ. ದೇಶವನ್ನು ಪ್ರೀತಿಸಬೇಕು ಎಂಬ ಭಾವ. ಆ ಪ್ರೀತಿ ವಸ್ತುನಿಷ್ಠವಾಗಿದ್ದು, ಕೆಟ್ಟದನ್ನು ತೆಗಳುತ್ತಾ ಒಳೆಯದನ್ನು ಅನುಮೋದಿಸುವ ತರ್ಕಾಧಾರಿತ ಪ್ರೀತಿ ದೇಶಭಕ್ತಿ ಅದಾಗಿರಬೇಕು. ಸಮಾಜದಲ್ಲಿ ಒಡಕನ್ನು ಬಿತ್ತುವ ದುಷ್ಟ ಶಕ್ತಿಗಳ ವಿರುದ್ಧ ಹೋರಾಡುವ ಛಲ, ನ್ಯಾಯಪರ ಹೋರಾಟಗಳಿಗೆ ಸಾತ್ ನೀಡುವ ದೇಶಭಕ್ತಿ ಪ್ರಜೆಗಳಲ್ಲಿರಬೇಕು.

ನಮ್ಮ ದೇಶದ ವಾಸ್ತವವನ್ನು ಅವಲೋಕಿಸಿ ನೋಡಿ, ಭ್ರಷ್ಟಾಚಾರ ಒಪ್ಪಿಗೊಂಡ ಮೌಲ್ಯವಾಗಿಬಿಟ್ಟಿದೆ. ಭ್ರಷ್ಟಾಚಾರವು ಕೆಟ್ಟದೆಂದು ನಮಗೆ ಅಪ್ಪಿತಪ್ಪಿಯೂ ಅನಿಸುವುದಿಲ್ಲ. ಭ್ರಷ್ಟ ರಾಜಕೀಯ ಪಕ್ಷಗಳನ್ನೇ ಪುನ: ಪುನ: ಆರಿಸಿ ಅಧಿಕಾರಕ್ಕೆ ತರುತ್ತೇವೆ. ನಮ್ಮ ಕಾರ್ಯಸಾಧನೆಗೆ ಭ್ರಷ್ಟ ಮಾರ್ಗಗಳನ್ನೇ ಕೈಗೊಳ್ಳುತ್ತೇವೆ. ಇನ್ನೊಂದು ಕಡೆ, ಅಧಿಕಾರ ದಾಹಕ್ಕಾಗಿ ಸಮಾಜವನ್ನು ಜಾತಿ, ಮತ ಮತ್ತು ಭಾಷಾಧಾರಗಳ ಮೇಲೆ ನುಚ್ಚುನೂರು ಮಾಡುತ್ತಿರುವ ರಾಜಕೀಯ ಪಕ್ಷಗಳಿಗೆ ದೇಶ ಹಿತ ಬೇಡವಾದ ಮೌಲ್ಯವಾಗಿಬಿಟ್ಟಿದೆ. ನಾವಂತೂ ಈ ರಾಜಕೀಯ ಪಕ್ಷಗಳ ಗುಲಾಮರಾಗಿಬಿಟ್ಟಿದ್ದೇವೆ. ಅವರು ಹರಡುತ್ತಿರುವ ದ್ವೇಷ ಪ್ರಚೋದಕ ಸಿದ್ಧಾಂತಗಳನ್ನು ನಾವು ಕಣ್ಣುಮುಚ್ಚಿ ಒಪ್ಪಿಕೊಳ್ಳುತ್ತಿದ್ದೇವೆ. ಅದನ್ನೇ ದೇಶಭಕ್ತಿ ಎಂದು ಸಹ ನಂಬಿಬಿಟ್ಟಿದ್ದೇವೆ. Votebank ಲೆಕ್ಕಚಾರ ಇಂದು ಸರ್ಕಾರಗಳ ಪ್ರತಿಯೊಂದು ನಿರ್ಧಾರಗಳನ್ನು ಆಧ್ಯತೆಗಳನ್ನು ಡ್ರೈವ್ ಮಾಡುತ್ತಿದೆ. ಬಡವರ ಮೇಲೆ ಇರಬೇಕಾದ ಕಾಳಜಿ ಮಾಯವಾಗಿಬಿಟ್ಟಿದೆ. ಸರ್ಕಾರಗಳ ಕೆಲವೊಂದು ಧೋರಣೆ, ಕಾರ್ಯನೀತಿ ಬಡವರ, ತುಳಿಯ್ಪಟ್ಟವರ ರೈತರ ನಿದ್ದೆಗೆಡಿಸುತ್ತಿದೆ. ಬಡವರನ್ನು ನಿರ್ಗತಿಕರನ್ನು ತುಚ್ಛವಾಗಿ ಕಾಣಲಾಗುತ್ತಿದೆ. ಅನ್ಯಾಯ ಮತ್ತು ಶೋಷಣೆಗಳ ವಿರುದ್ಧ ಹೋರಾಡುವ ನೆಪದಲ್ಲಿ ಹಿಂಸೆಗೆ ಮೊರೆಹೋಗಿರುವ ಕೆಲವೊಂದು ಗುಂಪುಗಳು ಇಂದು ಶೋಷಿಸುವ ಗುಂಪುಗಳಾಗಿ ಮಾರ್ಪಟ್ಟಿವೆ. ಈ ಪರಿಸ್ಥಿತಿಯಲ್ಲಿ ನಮ್ಮ ದೇಶವನ್ನು ಶ್ರೇಷ್ಠವೆಂದು ಕರೆಯಬಹುದೇ?..ಅಥವಾ ನಮ್ಮ ದೇಶಗೆ ಶ್ರೇಷ್ಠತೆಯೆಂಬ ಪಟ್ಟ ಸಿಗಬಹುದೇ? …ಗಣರಾಜ್ಯೋತ್ಸವದ ಈ ಸಂದರ್ಭದಲ್ಲಿ ಇದರ ಬಗ್ಗೆ ಯೋಚಿಸುವುದು ಸೂಕ್ತವೆನ್ನಿಸುತ್ತದೆ.

ಈ ಸಂದರ್ಭದಲ್ಲಿ ಖಲೀಲ್ ಗಿಬ್ರಾನ್ ರವರ the builders of bridges ಅಂದ್ರೆ ಸೇತುವೆಯ ಕಟ್ಟುವವರು ಎಂಬ ಕತೆ ನೆನಪಿಗೆ ಬರುತ್ತಿದೆ. ಅಸ್ಸಿ ನದಿ ಸಮುದ್ರವನ್ನು ಸೇರಲು ಹೋಗುವ ಸ್ಥಳದಲ್ಲಿ ನಗರದ ಎರಡು ಭಾಗಗಳನ್ನು ಹತ್ತಿರ ತರುವುದಕ್ಕೆ ಎಂದು ಒಂದು ಸೇತುವೆ ಕಟ್ಟಿದ್ದರು. ಅದಕ್ಕೆ ಬೇಕಾದ ದೊಡ್ಡ ದೊಡ್ಡ ಕಲ್ಲುಗಳನ್ನು ಬೆಟ್ಟದಿಂದ ಹೇಸರಗತ್ತೆಗಳ ಮೇಲೆ ಹೊರಿಸಿ ತರಿಸಿದರು. ಸೇತುವೆ ಮುಗಿದ ಮೇಲೆ ಅರಾಬಿಕ್ ಮತ್ತು ಅರಾಮೆಯಿಕ್ ಭಾಷೆಗಳಲ್ಲಿ ’ಎರಡನೆಯ ಅಂಟಿಯೋರಸ್ ದೊರೆ ಕಟ್ಟಿಸಿದ’ ಎಂದು ಒಂದು ಕಂಬದ ಮೇಲೆ ಕೆತ್ತಿದರು: ಒಂದು ಸಂಜೆ ಹುಚ್ಚನಂತೆ ತೋರುವ ಒಬ್ಬ ಯುವಕ ಈ ಕಂಬದ ಮೇಲೆ ಇದ್ದಲಿನ ಚೂರಿನಲ್ಲಿ ಬರೆದ: ’ಈ ಸೇತುವೆಯ ಕಲ್ಲುಗಳನ್ನು ಬೆಟ್ಟದಿಂದ ಹೇಸರಗತ್ತೆಗಳು ತಂದವು. ಈ ಸೇತುವೆಯ ಮೇಲೆ ಒಡಾಡುವಾಗ ನೀವು ಈ ಸೇತುಯನ್ನು ಕಟ್ಟಿದ ಆಂಟಿಯಕನ ಹೇಸರಗತ್ತೆಗಳ ಬೆನ್ನಿನ ಮೇಲೆ ಸವಾರಿ ಮಾಡುತ್ತಿದ್ದೇರಿ’. ಅದನ್ನು ನೋಡಿದ ಕೆಲವರು ನಕ್ಕರು. ಕೆಲವರು ಅಶ್ಚರ್ಯಪಟ್ಟರು. ಕೆಲವರು ಹೇಳಿದರು: ’ಇದನ್ನು ಮಾಡಿದವರು ಯಾರು ಎಂದು ನಮಗೆ ಗೊತ್ತು. ಆತನಿಗ ಸ್ವಲ್ಪ ಹುಚ್ಚಲ್ಲವೆ?’. ಆದರೆ ಒಂದು ಹೇಸರಗತ್ತೆ ನಗುತ್ತಾ ಮತ್ತೊಂದಕ್ಕೆ ಹೇಳಿತು: ಹೌದು ಆ ಕಲ್ಲುಗಳನ್ನು ಹೊತ್ತವರು ನಾವು. ನಿನಗೆ ನೆನಪಿಲ್ಲವೆ? ಆದರೂ ಇವತ್ತಿಗೂ ಎಲ್ಲರೂ ಹೇಳುವುದು ಸೇತುವೆ ಕಟ್ಟಿದವನು ದೊರೆ ಆಂಟಿಯೋರಸ್ ಎಂದೇ!.

ಹೌದು, ನಮ್ಮ ದೇಶವನ್ನು ಕಟ್ಟಿ ಬೆಳಸಿದವರು ಮತ್ತು ಬೆಳಸಬೇಕಾದವರು ಜನಸಮಾನ್ಯರಾದ ನಾವು ನೀವು. ನಮ್ಮ ದೇಶವನ್ನು ಶ್ರೇಷ್ಠತೆಯ ಬೆಳಕಿಗೆ ಕರೆದೊಯುವವರು ನಾವೇ. ಅದ್ದರಿಂದ ನಾವು ಮೆಚ್ಚಿ ಅನುಮೋದಿಸುವ ಮತ್ತು ಉತ್ತೇಜಿಸುವ ಅಂಶಗಳು, ಮೌಲ್ಯಗಳು, ಆದರ್ಶಗಳು ಮಹತ್ವಾಂಕ್ಷೆಗಳು ಕೊನೆಗೆ ನಾವು ಬದುಕುವ ರೀತಿಯು ನ್ಯಾಯಪರತೆ ಧರ್ಮಿಷ್ಠತೆಯಿಂದಿದ್ದು ನಮ್ಮ ದೇಶವನ್ನು ಶ್ರೇಷ್ಠವಾಗಿಸಲಿ ಎಂಬ ಮನೋಭಾವ ನಮ್ಮದಾಗಲಿ. 

-ಜೋವಿ

Tuesday, 10 January 2012

ತಿರುಕನ ಹಾಡು

ನಾನು ತಿರುಕ ನಾನು ತಿರುಕ
ಊರೇ ಆಗಲಿ ನಾಡೇ ಆಗಲಿ ನಡೆಯುವುದೇ ಪುಳಕ,
ಪಾಪಿ ಚಿರಾಯು....!
ನಾನು ಸಾಯೋಲ್ಲ, ಸತ್ತರು ಅಲ್ಲಿಗೆ ಸೇರೋಲ್ಲ
ಭೂಮಿಯೇ ನನಗೆ ಎಲ್ಲ......., ಎಲ್ಲ ಇರುವ ತನಕ!!
ನಾವು ಇರುವ ತನಕ ಅವನದೇ ಕೈಚಳಕ


ತಿರುಗಿ ತಿರುಗಿ ಏನು ನೋಡಿಲ್ಲ
ಹುಡುಕಿ ಹುಡುಕಿ ಏನು ಸಿಕ್ಕಿಲ್ಲ
ಊಟಕಿಷ್ಟು ರದ್ದಿ ನೋಟಕಿಷ್ಟು ಸುದ್ದಿ...! ಚಿತ್ರ ಸುದ್ದಿ
ಆಟವಿಲ್ಲ ಪಾಠವಿಲ್ಲ ಎರಡೂ ದೂರ ನನ್ನನೊದ್ದಿ
ಹೆಚ್ಚೆಂದರೆ ಎರಡು ಗುದ್ದು, ಗಟ್ಟಿಯಾದರೆ ಗೆಳೆಯರು
ಪಾಪವಿಲ್ಲ ಪುಣ್ಯವಿಲ್ಲ ಪುರುಸೊತ್ತಿಲ್ಲದ ಒರಟರು


ಪುರ ಪೇಟೆ ಪಾಳ್ಯಗಳ ಸುತ್ತಿರೆ ಇರುಳ ಅಕ್ಷಿಯಲ್ಲಿ
ಕಂಡೀತು ಬಾಳಹಕ್ಕಿ....
ನಾನು ಇದ್ದ ಪಾಳುಬಿದ್ದ ಮನೆಯಹಾಳು ಕಿಟಕಿಯಲ್ಲಿ
ಕಂಡೀತು ಬಾನಚುಕ್ಕಿ.....
ನೆತ್ತಿಯ ಮೇಲೆ ನೇತಾಡುವ ಚುಕ್ಕಿ, ಚುಕ್ಕಿಗಳ ಲೆಕ್ಕ ತಿಳಿದಿಲ್ಲ
ಚಕ್ಕೆ ನಾಣ್ಯದ ಗಾತ್ರ ಮಾತ್ರ ಇಷ್ಟೇ ಎಂದು ಹೇಳಬಲ್ಲ
ತಿರುಕ ನಾನು ತಿರುಕ ತಿಳುವಳಿಕೆ ಇಲ್ಲದ ತಿಕಲ


ಅಪ್ಪ ಇಲ್ಲ ಅಮ್ಮ ಇಲ್ಲ ಅವರಿವರ ಪಾಲಾದೆನು
ಆಸ್ತಿ ಇಲ್ಲ ಆರೈಕೆ ಗೊತ್ತಿಲ್ಲ ಗರ್ವದಿಂದ ಮನೆ ಬಿಟ್ಟವನು
ಸೇಂದಿ ಸಿಗರೇಟು ಮುಟ್ಟೊದಿಲ್ಲ, ಅನ್ನೋದೆಲ್ಲ ನಿಜವೇ ಅಲ್ಲ
ದೇವನಿದ್ರು ನಂಬೊದಿಲ್ಲ ಭೇಟಿ ಮಾತ್ರ ತಪ್ಪೋದಿಲ್ಲ
ಬಟ್ಟೆ ಚಿಂದಿ, ಕಸುಬು ಚಿಂದಿ, ಮನಸ್ಸು ಚಿಂದಿ, ಥೇಟ್ ಹಂದಿ....!
ತಿರುಗುತೀನಿ ನಾನು ತಿರುಕ ತಿರುಕ,
ಹೊತ್ತು ತಿರುಗುತ್ತೀನಿ ಜೊತೆಗಿಷ್ಟು ಕೊಳಕು ಬದುಕ...!!

                                                                      -ಸಂತೋಷ್.ಇ