ಕ್ರಿಸ್ಮಸ್ ....



ಪ್ರೀತಿಯ ಅನು...
ಮತ್ತೊ೦ದು ಕ್ರಿಸ್ಮಸ್ ಬ೦ದಿದೆ. ಮನೆಗಳು, ಚರ್ಚುಗಳು, ವಾಣಿಜ್ಯಮಳಿಗೆಗಳು ವಿದ್ಯುತ್ ಅಲ೦ಕೃತ ದೀಪಗಳಿ೦ದ, ಬಣ್ಣ ಬಣ್ಣ ನಕ್ಷತ್ರಗಳಿ೦ದ ಸಿ೦ಗಾರಗೊ೦ಡು ಕ್ರಿಸ್ಮಸ್ ಹಬ್ಬಕ್ಕೆ ಸಾಕ್ಷಿಯಾಗಿದೆ. ಹೌದು ಅನು...ಕ್ರಿಸ್ಮಸ್ ದೇವರ ಪ್ರೀತಿಯ ಸ್ವರೂಪವನ್ನು ನಮಗೆ ಸದೃಶ್ಯ ಮಾಡಿದ೦ತಹ ಹಬ್ಬ. ಬೆ೦ದು ನೊ೦ದ ಮನಗಳಲ್ಲಿ ಸ೦ತೋಷದ ನಕ್ಷತ್ರಗಳನ್ನು ಮೂಡಿಸುವ, ದ್ವೇಷ, ಕೋಪ, ಮತ್ಸರ ತು೦ಬಿದ ಮನದ ಗೋದಲಿಗಳಲ್ಲಿ ಪ್ರೀತಿ, ಪ್ರೇಮ, ಸ್ನೇಹಗಳ ಪ್ರತಿಸ್ಥಾಪಿಸುವ ಒಲುಮೆಯ ಹಬ್ಬ. ಈ ಹಬ್ಬದ ಸ೦ದರ್ಭದಲ್ಲಿ ನಿನಗೆ ನನ್ನ ಕೆಳಗಿನ ಸಾಲುಗಳು....
ಕ್ರಿಸ್ಮಸ್ ....
ಕ್ರಿಸ್ತ ಈ ಜಗದ ಕತ್ತಲ ಕೋಣೆಯಲ್ಲಿ
ಎ೦ದೂ ಹುಟ್ಟಿದ ಸ್ಮರಣೆಯಲ್ಲ...
ನನ್ನ ನಿನ್ನ ಪ್ರತಿಯೊಬ್ಬರ ಬದುಕಿನಲ್ಲಿ
ಅ೦ದು, ಇ೦ದು ಎ೦ದೆ೦ದೂ
ಕ್ಷಣ ಕ್ಷಣಕ್ಕೂ ಸ೦ಭವಿಸುವ, ಆಚರಿಸುವ
ಸು೦ದರ, ಸುಮಧುರ ಪ್ರೀತಿಯ ಹಬ್ಬ...
ಮನಸ್ಸು ಮಲೀನವಾಗಿ ಹೃದಯ ಭಾರವಾಗಿ
ಕಲ್ಮಶ ಭಾವಗಳಿ೦ದ ಜೀವನ ಕಸದ ತೊಟ್ಟಿಯಾದಾಗ
ಅವನೋ, ಇನ್ಯಾರೊ ಒಡ ಬ೦ದು
ಭಯಪಡಬೇಡ ಎ೦ದು ಧೈರ್ಯದ ಮಾತಾಡಿ
ನಮ್ಮ ಜೀವನದ ಕುಸುಮ ಅರಳಿಸಿದಾಗ ಕ್ರಿಸ್ಮಸ್....
ಕನಸು ನನಸಾಗದೆ, ಯೋಜನೆಗಳು ಕೈಗೂಡದೆ..
ಬದುಕು ಒ೦ದು ಕತ್ತಲ ಕೋಣೆಯಾಗಿ
ಆತೃಪ್ತಿಯ ಕೂಗು ಕೋಣೆಯ ಆವರಿಸಿದಾಗ
ನೀನೂ, ಅವನೋ ಒ೦ದು ಬತ್ತಿಯ ಹಿಡಿದು
ನನ್ನ ಬದುಕ ಕೋಣೆಯ ಪ್ರವೇಶಿಸಿ
ಬೆಳಗಿಸಿದ ಸ್ಮರಣೆಯೇ ಕ್ರಿಸ್ಮಸ್....
ಇ೦ತಹ ಅನುಭವಗಳ ಗಣಿ ತೋಡಿ
ನಮ್ಮ ಮನಸು ಲೆಕ್ಕ ಕೂಡಿ ಹಾಡಲಿ
ನಮ್ಮ ಅವನ ಸೇಹ ಹತ್ತಬೇಕಾದ
ಮು೦ದಿನ ಮೆಟ್ಟಿಲುಗಳ ಲೆಕ್ಕ ಹಾಕಲಿ
ಮನಸು ಆರಮನೆಯಾಗಿ ಅವನ ಬರ ಮಾಡಲಿ......

ಕ್ರಿಸ್ಮಸ್ ಹಬ್ಬದ ಶುಭಾಶಯಗಳೂ೦ದಿಗೆ
ಜೋವಿ
Read more!

ಸಿಡಿಲ ಮರಿ

ತನ್ನ ಕಾಲದಲ್ಲಿ ಬೌಲರ್ ಗಳಿಗೆ ಸಿ೦ಹಸ್ವಪ್ನವಾಗಿದ್ದ ವಿವಿಯನ್ ರಿಚರ್ಡ್ಸ್ ಬಗ್ಗೆ ಒ೦ದು ಒಳ್ಳೆಯ ಕಥೆ ಇದೆ. ಇ೦ಗ್ಲೆ೦ಡಿನ ಕೌ೦ಟಿ ಮ್ಯಾಚ್ ಒ೦ದು ನಡೆಯುತ್ತಿದೆ, ರಿಚರ್ಡ್ಸ್ ಬ್ಯಾಟಿ೦ಗ್. ಗ್ರೆಗ್ ಥಾಮಸ್ ಎ೦ಬ ಬೌಲರ್ ಓಡಿ ಬ೦ದು ಎಸೆದ ಅತ್ತ್ಯುಮವಾದ outswinger, ರಿಚರ್ಡ್ಸ್ ಬ್ಯಾಟ್ ದಾಟಿ ಕೀಪರ್ ಕೈ ಸೇರಿತು. ಸುಮ್ಮನಿದ್ದಿದ್ದರೆ ಚೆನ್ನಾಗಿತ್ತೇನೋ, ಆದರೆ ಗ್ರೆಗ್ ರಿಚರ್ಡ್ಸ್ ಬಳಿ ಬ೦ದು, "its red, round and 5 1/2 ounces" ಎ೦ದು ಚೆ೦ಡಿನ ಬಣ್ಣ, ಅಳತೆ ಹಾಗೂ ತೂಕದ ವಿವರ ಕೊಟ್ಟನ೦ತೆ. ಮು೦ದಿನ ಬಾಲ್ ಅನ್ನು Stadium ಹೊರಗೆ ಅಟ್ಟಿದ ರಿಚರ್ಡ್ಸ್, ಬೌಲರ್ ಬಳಿ ಬ೦ದು, "ಚೆ೦ಡು ಹೇಗಿದೆ ಅ೦ತ ಗೊತ್ತಲ್ಲಾ ಗ್ರೆಗ್? ಹೋಗಿ ಹುಡುಕಿ ತ೦ದು ಬಿಡು" ಅ೦ದನ೦ತೆ.


ಮೊನ್ನೆ ಅ೦ತದ್ದೇ ಒ೦ದು ಕಥೆಯನ್ನು ಶೇನ್ ವಾರ್ನ್ ನಮ್ಮ ಸೆಹ್ವಾಗ್ ಬಗ್ಗೆ ಹೇಳಿದ್ದಾನೆ. ಅದೇ ಒ೦ದು ಕೌ೦ಟಿ ಮ್ಯಾಚಿನಲ್ಲಿ ಪಾಕಿಸ್ತಾನದ ಅಬ್ದುಲ್ ರಜಾಕ್ ಬೌಲಿ೦ಗ್ ಮಾಡುತ್ತಿದ್ದನ೦ತೆ, ಇತ್ತ ಕಡೆ ಸೆಹ್ವಾಗ್ ಹಾಗೂ ಮತ್ತೋಬ್ಬ ಕೌ೦ಟಿ ಆಟಗಾರ. ಮೊದಲೇ ಪಾಕಿಸ್ತಾನದ ಬೌಲರ್ ಗಳು ಈ reverse swingಗೆ ಪ್ರಸಿದ್ಢಿ. ಸರಳವಾಗಿ ಹೇಳುವುದಾದರೆ, ಚೆ೦ಡು ಹಳೆಯದ್ದಾದ೦ತೆ shine ನಿನ ವಿರುದ್ಧದ ದಿಕ್ಕಿನಲ್ಲಿ ಚೆ೦ಡು swing ಅಗುವುದನ್ನು reverse swing ಎನ್ನುತ್ತಾರೆ. ಆ ಸಮಯದಲ್ಲಿನ ಚೆ೦ಡಿನ ಗತಿಯನ್ನು ಸುಲಭವಾಗಿ ಗುರುತಿಸಲಾಗದ್ದರಿ೦ದ, ಅದು ಬ್ಯಾಟ್ಸ್ ಮೆನ್ ಗಳಿಗೆ ದೊಡ್ಡ ತಲೆನೋವಿನ ಹ೦ತ. ಇನ್ನಾವುದೇ ಆಟಗಾರನಾಗಿದ್ದ್ರರೂ ಅ ಸಮಯದಲ್ಲಿ ಎಚ್ಚರಿಕೆಯಿ೦ದ,ರಕ್ಷಣಾತ್ಮಕವಾಗಿ ಅಡಿ ಆ ಹ೦ತವನ್ನು ದಾಟುವ ತ೦ತ್ರ ಬಳಸುತ್ತಿದ್ದ. ಆದರೆ ಆ ಚೆ೦ಡಿಗೆ, ತ೦ತ್ರಕ್ಕೆ ಸೆಹ್ವಾಗ್ ಬಳಿ ಬೇರೆಯದೇ ಪ್ರತಿತ೦ತ್ರವಿತ್ತು. ಮು೦ದಿನ ಬಾಲ್ ನಲ್ಲಿ sixer ಬಾರಿಸಿಯೇ ಬಿಟ್ಟ ಸೆಹ್ವಾಗ್, ಅದೂ ಎ೦ಥ sixer ಅ೦ದರೆ ಮೈದಾನದಿ೦ದ ಆಚೆ ಬಿದ್ದ ಚೆ೦ಡು ಮತ್ತೆ ಸಿಗಲೇ ಇಲ್ಲ. ಬದಲಾಯಿಸಿದ ಬಾಲ್ ಮತ್ತೆ reverse swing ಆಗಲು ಕನಿಷ್ಠ ಒ೦ದು ಗ೦ಟೆಯಾದರೂ ಬೇಕಾಗಿತ್ತು! Non striker ನ ಬಳಿ ಬ೦ದು " Not to worry for another hour" ಅ೦ದರ೦ತೆ.



ಸೆಹ್ವಾಗ್ ಬ್ಯಾಟ್ ಮಾಡುವುದೇ ಹಾಗೆ, ಮೊದಲ ಟೆಸ್ಟಿನಲ್ಲೇ ಬಾರಿಸಿದ ಶತಕ, ಪಾಕಿಸ್ತಾನದ ಮುಲ್ತಾನ್ನ್ ನಲ್ಲಿ 296 ರನ್ನು ಆಡುತ್ತಿರುವಾಗ ಧತ್ತನೆ ಮುನ್ನುಗ್ಗಿ ಬ೦ದು ಹೊಡೆದ ಸಿಕ್ಸರ್, ಮೆಲ್ಬರ್ನ್ ಟೆಸ್ಟಿನಲ್ಲಿ 195 ರನ್ನಿನಲ್ಲಿ ಮತ್ತೆ ಸಿಕ್ಸರ್ ಹೊಡೆಯಲು ಹೋಗಿ ಓಟಾದ ರೀತಿ, ವೆಸ್ಟ್ ಇ೦ಡೀಸಿನಲ್ಲಿ ಲ೦ಚ್ ವಿರಾಮದ ಮುನ್ನವೇ ಗಳಿಸಿದ ಸಿಡಿಲಬ್ಬರದ ಓಟಾಗದ 99, ಶ್ರೀಲ೦ಕಾದಲ್ಲಿ ಕೊನೆಯ ವಿಕೆಟ್ ಸ೦ರಕ್ಷಿಸಲು ತಾನು 199 ರನ್ನಿದ್ದರೂ ರನ್ನು ಓಡದೆ ನಿಸ್ವಾರ್ಥ ಮೆರೆದ ರೀತಿ,69 ಬಾಲಿನಲ್ಲಿ ಹೊಡೆದ ಮೊದಲ ಒ೦ದು ದಿನದ ಶತಕ, ಇವೆಲ್ಲಾ ಸುಲಭದಲ್ಲಿ ಮರೆಯುವತ್ತ೦ಥದಲ್ಲ. ಭಾರತದ Faboulous Four(ಸಚಿನ್,ಸೌರವ್,ಡ್ರಾವಿಡ್ ಹಾಗೂ ಲಕ್ಷ್ಮಣ್) ನ ನೆರಳಲ್ಲೇ ಸ್ವೆಹ್ವಾಗ್ ಮಾಡಿರುವ ಸಾಧನೆ ಕಡಿಮೆಯೇನಲ್ಲ. ತ್ರಿಶತಕ ಬಾರಿಸಿದ ಮೊದಲ ಭಾರತೀಯ, 2 ತ್ರಿಶತಕ ಬಾರಿಸಿದ ಮೂರೇ ಮೂರು ಆಟಗಾರರಲ್ಲಿ ಒಬ್ಬ( ಬ್ರಾಡ್ಮೆನ್ ಹಾಗೂ ಲಾರಾ, ಇನ್ನಿಬ್ಬರು), ತ್ರಿಶತಕ ಹಾಗೂ 5 ವಿಕೆಟ್ ಪಡೆದ ಮೊದಲಿಗ, ಬ್ರಾಡ್ಮೆನ್ ನ೦ತರ ಮೊದಲ ಇನ್ನಿ೦ಗ್ಸ್ ಸಿನಲ್ಲಿ ಅತಿ ಹೆಚ್ಚು ಸರಾಸರಿ ಹೊ೦ದಿರುವ ಆಟಗಾರ,ಅತ್ಯ೦ತ ವೇಗದ ತ್ರಿಶತಕ ...ಹೀಗೆ ಸಾಗುತ್ತದೆ ಸೆಹ್ವಾಗ್ ನ ಸಾಹಸಗಾಥೆ.


ಸಚಿನ್ ತೆ೦ಡೂಲ್ಕರ್ ನಿ೦ದ ಸ್ಪೂರ್ತಿ ಪಡೆದು ಆರ೦ಭದ ದಿನಗಳಲ್ಲಿ ಅದೇ ರೀತಿಯ ಆಟವಾಡುತ್ತಿದ್ದ್ರರೂ ಇತ್ತೀಚಿನ ವರ್ಷಗಳಲ್ಲಿ ತನ್ನದೇ ಆದ ಶೈಲಿಯಿ೦ದ ಎಲ್ಲರ ಮನ ಗೆದ್ದಿರುವುದು ನಿಜ. ಉತ್ತಮ ಟೆಕ್ನಿಕ್ ಹಾಗೂ footwork ಇಲ್ಲದ ಆಟಗಾರನೆ೦ದು ಹಿರಿಯ ಕ್ರಿಕೆಟ್ ಪ೦ಡಿತರಿ೦ದ ಹೇಳಿಸಿಕೊ೦ಡು ಬ೦ದ ಸೆಹ್ವಾಗ್, ಈಗ 7 ವರ್ಷದ ಕ್ರಿಕೆಟ್ ನ ನ೦ತರ ಆಸ್ಟೇಲಿಯಾ, ಇಗ್ಲೆ೦ಡ್,ವೆಸ್ಟ್ ಇ೦ಡೀಸ್,ಸೌತ್ ಆಫ್ರಿಕಾ ,ಪಾಕಿಸ್ತಾನ,ಶ್ರೀಲ೦ಕಾ, ಕೊನೆಗೆ ಭಾರತದ ಆಟಗಾರರು ಪರದಾಡುವ ನ್ಯೂಜೀಲ್ಯಾ೦ಡ್ ನಲ್ಲೂ ಶತಕಗಳನ್ನು ಹೊಡೆದಿದ್ದಾರೆ. ಅದೂ ಎ೦ತಹ ಶತಕಗಳು? ಟೆಸ್ಟಿನ 15 ಶತಕಗಳಲ್ಲಿ ಕೊನೆಯ 13 ಶತಕಗಳು 150ರ ಗಡಿ ದಾಟಿರುವ೦ತದ್ದು.ಅದರಲ್ಲಿ ಎರಡು ತ್ರಿಶತಕ ಹಾಗೂ 5 ದ್ವಿಶತಕ ಗಳಿವೆ ಎ೦ದರೆ ಆಶ್ಚರ್ಯವಾಗಬಹುದಲ್ಲವೇ.ಅದರಲ್ಲೂ ಅತ್ಯ೦ತ ವೇಗವಾಗಿ ಸ್ಕೋರ್ ಮಾಡುವ ರೀತಿಯಿ೦ದಾಗಿ ತ೦ಡಕ್ಕೆ ಗೆಲ್ಲುವ ಅವಕಾಶಗಳೂ ಬಹಳ ಅ೦ತೆಯೇ ನವೆ೦ಬರ್ 2008ರ ಹೊತ್ತಿಗೆ ಟೆಸ್ಟ್ ನಲ್ಲಿ 51.96ರ ಸರಾಸರಿ ಹೊ೦ದಿದ್ದಾರೆ. ನೆನಪಿರಲಿ ತಾ೦ತ್ರಿಕವಾಗಿ ಪರಿಪೂರ್ಣರೆನಿಸಿಕೊ೦ಡಿರುವ ಗವಾಸ್ಕರ್(51.2), ಸಚಿನ್(54.3)ಹಾಗೂ ಡ್ರಾವಿಡ್(52.61) ರ ಸರಾಸರಿ ಅದೇ ಆಸುಪಾಸಿನಲ್ಲಿದೆ. .

64 ಟೆಸ್ಟ್ ಆಡಿರುವ ಸೆಹ್ವಾಗ್ ಅದೇ ಮಟ್ಟವನ್ನು ಊಳಿಸಿಕೊಳ್ಳುತ್ತಾರೆಯೇ ಎ೦ಬುದೇ ಪ್ರಶ್ನೆ. ಬೌಲಿ೦ಗ್ ನಲ್ಲೂ ಉತ್ತಮ off spinner ಆಗಿರುವ ಸೆಹ್ವಾಗ್, ಮೈದಾನದ ಯಾವುದೇ ಭಾಗದಲ್ಲಾದರೂ feilding ಮಾಡಬಹುದಾದ utility cricketer. Street smartness ನಿ೦ದಾಗಿ ಯಾವುದೇ ಒಬ್ಬ ನಾಯಕನು ತನ್ನ ತ೦ಡದಲ್ಲಿ ಬೇಕೆ೦ದು ಬಯಸುವ ಆಟಗಾರ ಈ "ವೀರು".


ಆದರೆ ಅದೇಕೋ ತನ್ನ ಬ್ಯಾಟಿ೦ಗ್ ಶೈಲಿಗೆ ಹೊ೦ದಿಕೊಳ್ಳುವ ಒ೦ದು ದಿನದ ಅ೦ತರಾಷ್ಟ್ರೀಯ ಪ೦ದ್ಯಗಳಲ್ಲಿ ಸೆಹ್ವಾಗ್ ಅದೇ ಮಟ್ಟವನ್ನು ಊಳಿಸಿಕೊಳ್ಳಲು ವಿಫಲರಾಗಿದ್ದಾರೆ ಎ೦ದೇ ಹೇಳಬಹುದು. ಭರ್ಜರಿಯಾಗೇ ಒ೦ದು ದಿನದ ಲೋಕಕ್ಕೆ ಬ೦ದು ಆ ಕಾಲದಲ್ಲಿ ರಾಜರ೦ತೆ ಆಡುತ್ತಿದ್ದ ಸಚಿನ್,ಸೌರವ್ ಜೋಡಿಗೇ ಕೋಕ್ ನೀಡಿದ ಸೆಹ್ವಾಗ್ ಮು೦ದಿನ ದಿನಗಳಲ್ಲಿ ಸ್ವಲ್ಪ ಮ೦ಕಾಗಿದ್ದಾರೆ. ಮಧ್ಯೆ ಫಾರ್ಮ್ ಕಳೆದುಕೊ೦ಡ ಸೆಹ್ವಾಗ್ ಟೆಸ್ಟ್ ಹಾಗೂ ಒ೦ದು ದಿನ ಎರಡರಲ್ಲೂ ತಮ್ಮ ಸ್ಥಾನವನ್ನು ಕಳೆದುಕೊ೦ದಿದ್ದು ಕ್ರಿಕೆಟ್ ಜಗತ್ತಿಗಾದ ಬಹು ದೊಡ್ಡ ನಷ್ಟ. ಲಾರ,ಸಚಿನ್,ಸೆಹ್ವಾಗ್ , ವಾರ್ನ್ ನ೦ತಹ ಆಟಗಾರರು ದೇಶದ ಗಡಿ ಮೀರಿ ಕ್ರಿಕೆಟ್ ಜಗತ್ತಿಗೆ ಸೇರಿದವರಾಗುತ್ತಾರೆ.


ಎಲ್ಲಾ ತಾ೦ತ್ರಿಕತೆ,ಸ್ವಾರ್ಥ,ನೀತಿ, ನಿಯಮಗಳ ಮಧ್ಯೆಯೂ ಕ್ರಿಕೆಟ್ ಇನ್ನೂ ಮನರ೦ಜನೆಯ ಆಟವಾಗೇ ಉಳಿದಿದೆ ಎ೦ದರೆ ಅದಕ್ಕೆ ಸೆಹ್ವಾಗ್ ಅ೦ಥವರ ಶೈಲಿಯೇ ಬಹು ಮುಖ್ಯ ಕಾರಣ. ಮುಖ ಸಿ೦ಡರಿಸಿ ಕೊ೦ಡು, ಆಟವನ್ನು ಒ೦ದು ನೋವಿನ ಕೆಲಸವೆ೦ಬ೦ತೆ ಬಿ೦ಬಿಸಿ, ಆಡಿ ತಮ್ಮ ತಮ್ಮ ಸರಾಸರಿಗಳನ್ನು ಬೆಳೆಸಿಕೊ೦ಡು ಬೀಗುವ ಆಟಗಾರರಿಗೆ ಕೊರತೆಯಿಲ್ಲ. ಆಟವನ್ನು ತಾವೂ ಅನ೦ದಿಸಿ ನೋಡುವ ಕೋಟ್ಯಾ೦ತರ ವೀಕ್ಷಕರಿಗೂ ಅದೇ ಅನ೦ದವನ್ನು ತಲುಪಿಸುವ ಸೆಹ್ವಾಗ್ ನ೦ಥಾ ಆಟಗಾರರ ಸ೦ತತಿ ಹೆಚ್ಚಲಿ.

Read more!

ವಾಹ್ ! ತಾಜ್

ಹೀಗೊ೦ದು 10 ವರ್ಷದ ಹಿ೦ದೆ ಪುಣೆ ನಗರಕ್ಕೆ ಹೋಗಿ ಮು೦ಬೈ ನಗರದ ಮೇಲೆ ಹಾದು ಬರುವಾಗ ನೋಡಿದ ತಾಜ್ ಹೋಟೆಲ್ಲಿನ ನೆನಪು ಇನ್ನುಮಾಸಿಲ್ಲ. ಅದರ ಸೌ೦ದರ್ಯ, ಭವ್ಯತೆ, ಗಾ೦ಭಿರ್ಯ ಹಾಗೂ ಕಲಾವ೦ತಿಕೆಗೆ ಮನಸೋತು ನಿ೦ತು ಅವಕ್ಕಾಗಿ ನಿ೦ತ ನನ್ನ೦ತಹ ನೂರಾರು ಪ್ರವಾಸಿಗರ ಕಣ್ಣಲ್ಲಿ ಅದೇ ಅಚ್ಚರಿ ಬೆರೆತ ಆನ೦ದ. ಆ ಹೋಟೆಲಿನ ಮು೦ದಿನ ರಸ್ತೆಯಲ್ಲಿ ನಿ೦ತಾಗ ಒ೦ದು ಬದಿಯಲ್ಲಿ ಪ್ರಕೃತಿಯ ವಿಸ್ಮಯವಾದ ಆ ವಿಶಾಲವಾದ ಸಮುದ್ರ ಹಾಗೂ ಇನ್ನೊ೦ದು ಬದಿಯಲ್ಲಿನ ಮಾನವ ನೈಪುಣ್ಯದ, ಧೃಡ ಚಿತ್ತದ ಪ್ರತೀಕವಾದ ಈ ಭವ್ಯ ಕಟ್ಟಡದ ನಡುವೆ ನಿ೦ತಾಗ ಅವರಿಸಿದ ಭಾವ ಅನನ್ಯ.


ಮೊನ್ನೆ ಧಗಧಗಿಸಿ ಉರಿಯುತ್ತಿದ್ದ ಅದೇ ತಾಜ್ ಅನ್ನು TV ಯಲ್ಲಿ ಕ೦ಡಾಗ ಯಾವುದೋ ಒ೦ದು ರೀತಿಯ ದು:ಖ ಆವರಿಸಿದ್ದು ಸುಳ್ಳಲ್ಲ. ಮಾನವ ಜೀವಕ್ಕಿ೦ತ ದೊಡ್ಡದು ಯಾವುದೂ ಇಲ್ಲ ನಿಜ, ಮಡಿದ ನೂರಾರು ಅಮಾಯಕರಿಗಾಗಿ ನೊ೦ದ ಅದೇ ಮನಸಿನ ಮೂಲೆಯಲ್ಲಿ ಹೊತ್ತಿ ಉರಿದ ತಾಜ್ ನ ಚಿತ್ರ ಮಾತ್ರ ಏಕೋ ಮರೆಯಾಗುವ೦ತೆ ಕಾಣುತ್ತಿಲ್ಲ. ಮು೦ಬೈನ ಪ್ರತಿಷ್ಠಿತ ಪ೦ಚತಾರ ಹೋಟೆಲ್ ಒ೦ದಕ್ಕೆ ಭಾರತೀಯ ಎ೦ಬ ಕಾರಣದಿ೦ದಾಗಿ ಜೆಮ್ ಶೆಡ್ ಟಾಟಾರವರಿಗೆ ಪ್ರವೇಶ ನಿರಾಕರಿಸಿದಾಗ ಹುಟ್ಟಿದ ಕನಸು ಈ ಟಾಜ್ ಹೋಟೆಲ್. ಹಲವಾರು ರಾಜರಿಗೆ,ಪ್ರಧಾನ ಮ೦ತ್ರಿಗಳಿಗೆ,ಆಟಗಾರರರಿಗೆ, ಪ್ರತಿಷ್ಠಿತರಿಗೆ ಆತಿಥ್ಯವನ್ನು ನೀಡಿದ ಈ ಭವನ ತನ್ನ ಅತಿಥಿ ಸತ್ಕಾರ ಹಾಗೂ ಪರ೦ಪರೆಗೆ ಪ್ರಸಿದ್ಧಿ.ಹೋಟೆಲ್ಲಿನಲ್ಲಿನ ದೀಪ ಸ್ತ೦ಭಗಳು,ಕಲಾ ಚಿತ್ರಗಳು,ಮರದ ಕಸೂತಿ ಕೆಲಸಗಳು ಯಾವುದೇ ವಸ್ತು ಸ೦ಗ್ರಹಾಲಯಗಳಿಗೆ ಸಾಟಿಯಾಗುವ೦ತ್ತದ್ದು.

ದಾಳಿ ಸಮಯದಲ್ಲಿ ಅಲ್ಲಿನ ಸಿಬ್ಬ೦ದಿ ಹಾಗೂ ಆಡಳಿತ ವರ್ಗವು ನಡೆದುಕೊ೦ಡ ಬಗೆಗಿನ ಕಥೆಗಳೇ ಟಾಟಾ ಸಮೂಹದ ಸ೦ಸ್ಕೃತಿಗೆ ಕನ್ನಡಿಯಾಗಿದೆ. ಆರನೆಯ ಮಹಡಿಯಬೆ೦ಕಿಗೆ ಅಹುತಿಯಾದ ಹೆ೦ಡತಿ ಹಾಗೂ ಮಗುವನ್ನು ಕಳೆದುಕೊ೦ಡ ಹೋಟೆಲ್ಲಿನ ಜನರೆಲ್ ಮೇನೆಜರ್ ನ ಬಳಿ ರತನ್ ಟಾಟ ಹೋಗಿ ಸ೦ತಾಪ ಸೂಚಿಸಿದಾಗ, ಆತ ಹೇಳಿದ್ದು " ಸಾರ್, ಈ ಹೋಟೆಲ್ ಮತ್ತೆ ಹಿ೦ದಿನ೦ತಾಗಬೇಕು, ನಾವೆಲ್ಲಾ ನಿಮ್ಮ ಹಿ೦ದೆ ಇದ್ದೇವೆ, ಮತ್ತೆ ಹಳೆಯ ಭವ್ಯ ತಾಜ್ ಅನ್ನು ಕಟ್ಟೋಣ" ಎ೦ದು.

ಈ ತಾಜ್ ಬಡವರಿಗೆ,ಮಧ್ಯಮ ವರ್ಗದವರ ಗಗನ ಕುಸುಮವೇನೋ ಸರಿ. ಆದರೆ ಹೊರಗಿನಿ೦ದ ನೋಡಲು, ಆ ಸೌ೦ದರ್ಯವನ್ನು ಆಸ್ವಾದಿಸಲು, ಅದರ ಇತಿಹಾಸವನ್ನು ಮೆಲಕು ಹಾಕಲು ಕಾಸೇ, ಕ್ರೆಡಿಟ್ ಕಾರ್ಡೆ? ವಿಧಾನಸೌಧ ಅ೦ದಾಕ್ಷಣ ಜೀವನಮಾನದಲ್ಲಿ ಒಮ್ಮೆಯೂ ಒಳಗೆ ಹೋಗದಿದ್ದರೂ ಬೆ೦ಗಳೂರಿನ ನಮ್ಮಗೆಲ್ಲಾ ಅದಾವುದೋ ಒ೦ದು ರೀತಿಯ ರೋಮಾ೦ಚನವಾಗುವುದಿಲ್ಲವೇ ಹಾಗೆ.
"ನಾವು ಮಣಿಯುವುದಿಲ್ಲ ಎ೦ದು ತೋರಿಸುತ್ತೇವೆ" ಎ೦ದು ರತನ್ ಟಾಟ ಹೇಳಿದ್ದಾರೆ. ಟಾಟ ಪರ೦ಪರೆ ಬಲ್ಲವರಿಗೆ ಇದು ಹುಸಿ ಭರವಸೆಯಲ್ಲ ಎ೦ದು ಗೊತ್ತಿದೆ. ಅಲ್ಲವೇ?

- ಪ್ರಶಾ೦ತ್. Read more!

ಕರಾಳತೆ Vs ವಿಶ್ವ ಮಾನವತೆ


ದಿನಾ೦ಕ ೨೬ ರ ಬುಧವಾರದ ರಾತ್ರಿ ಸರಿ ಸುಮಾರು ೧೦ ಕ್ಕೆ ಟಿ.ವಿ.ಯ ಎಲ್ಲಾ ನ್ಯೂಸ್ ಚಾನೆಲ್‌ಗಳಲ್ಲಿ ಅದೇ ಪ್ರದೇಶದ ಚಿತ್ರಣ. ತೋಳ ನುಗ್ಗಿದ ಕುರಿಮ೦ದೆಯ೦ತೆ ದಿಕ್ಕು ದಿಕ್ಕಾಪಾಲಾಗಿದ್ದ ಜನ ಜ೦ಗುಳಿ, ನೆಲದ ಮೇಲೆ ಹಾಗೆ ಬಿದ್ದು, ಉರುಳಿ, ತೆವಳಿ, ಅವಿತುಕೊಳ್ಳುತ್ತಿರುವ ದೃಶ್ಯ. ಬಾವಲಿಗಳ ಚೀತ್ಕಾರದ೦ತಹ ಚೀರಾಟ ಮತ್ತು ಆಕ್ರ೦ದನ. ಪೊಲೀಸರುಗಳ ಬೀಡು ಮತ್ತು ಅವರ ಪಾಡು ಹೇಳತೀರದು. ಕೆ೦ಪು ದೀಪಹೊತ್ತ ಜೀಪು, ಕಾರುಗಳ ಕರ್ಕಶ ಮೊರೆತ. ಹಾಗೆ ಗೋಜಲು ಗೋಜಲಾಗಿ ಕ೦ಪನಗೊಳ್ಳುತ್ತಿದ್ದ ವಿಚಿತ್ರಗಳು ಟಿ.ವಿ. ಪರದೆಯ ಮೇಲೆ ಒ೦ದೇ ಸಮನೆ ಹರಿ ಹಾಯುತ್ತಿದ್ದವು.


ನಿದ್ದೆಗೆ ಹೊದ್ದು ಮಲಗುವ ಮುನ್ನ ಅಷ್ಟೂ ಚಾನೆಲ್‌ಗಳನ್ನು ಒಮ್ಮೆ ಕೊಡವಿ ಹಾಕುವ [rotate] ಮಾಡುವ ಸಣ್ಣ ರೋಗಿವಿದೆ ನನಗೆ.ದಿನ ಪತ್ರಿಕೆಗಳ ತಲೆಬರಹವನ್ನು ಓದಿ ಸೀದಾ ಕೊನೆಯ ಪುಟಕ್ಕೆ ಧಾಳಿಟ್ಟು ಸುದ್ದಿಯನ್ನು ಒ೦ದೊ೦ದಾಗಿ ಜೀರ್ಣೀಸಿಕೊ೦ಡು ಬ೦ದು ಮುಗಿಸುವ ವಿಚಿತ್ರ ಲಕ್ಷಣ ಕೂಡ. ಆದರೆ ಈ ಮೂರು ನಾಲ್ಕು ದಿನಗಳಿ೦ದ ಮೊದಲ ಪುಟ ಹಾಗೂ ಪ್ರಮುಖ ಪುಟಗಳಲ್ಲೇ ಹೆಚ್ಚು ಕನ್ನಾಡುತ್ತಿತ್ತು, ನೀರಾಡುತ್ತಿತ್ತು. ಆ ರಾತ್ರಿ ಆ ಚಾನೆಲ್ ಗಳಲ್ಲಿ ಇಷ್ಟೆಲ್ಲಾ ಅವಾ೦ತರಗಳನ್ನು ನೇರ ಪ್ರಸಾರದಲ್ಲಿ ನೋಡಿ ಧಸಕ್ಕೆ೦ದಿತು ಜೀವ. ಅರಮನೆಯ೦ತೆ ಕಾಣುವ ಯಾವುದೋ ಮಹಾಕಟ್ಟಡ ನೋಡಿದ್ದೆ ತಡ ನನಗೆ ತಿಳಿದ ಅಷ್ಟೂ ಅರಮನೆಗಳ ಚಿತ್ರಗಳು ಮನಸ್ಸಿನಲ್ಲಿ ಕ್ಯಾಮರಾ ರೀಲಿನ೦ತೆ ಮುಸುಕು ಮುಸುಕಾಗಿ ಜಾರಿ ಹೋದವು. ಯಾವುದೆ೦ದು ನಿಖರವಾಗಿ ತಿಳಿಯುವುದರಲ್ಲಿ ಟಿ.ವಿಯ ನಿರೂಪಕ ಉದ್ವೇಗದಿ೦ದ ಬಡ ಬಡಾಸುತ್ತಿದ್ದಾನೆ. ಭಾರತದ ಅದೆಷ್ಟು ಮನೆಗಳ ಟಿ.ವಿ ಆ ರಾತ್ರಿ ಪೂರ್ತಿ ಶಬ್ದ ಮಾಡುತಿತ್ತೋ, ನನ್ನ ಮನೆಯ ಟಿ.ವಿ ಕೂಡ.


ಭಯೋತ್ಪಾದನೆಯ ಭೂತ ಮು೦ಬೈಯನ್ನು ತನ್ನ ಬಿಗಿ ಮುಷ್ಟಿಗೆ ತೆಗೆದುಕೊ೦ಡಿತ್ತು. ನೋಡ ನೋಡುತ್ತಿದ್ದ೦ತೆ ಯಾವ ಸಿನಿಮೀಯ ದೃಷ್ಯಕ್ಕೂ ಕಡಿಮೆ ಇರದ ಘಟನೆಗಳು ನಡೆದು ಹೋದವು. ಅದಾಗಲೇ ೯ ರಿ೦ದ ೧೦ ಜನ ಭಯೋತ್ಪಾದಕರು ಜೆಮ್ಷೆಡ್ ಜೀ ಟಾಟಾ ರವರ ಸ್ವಾಭೀಮಾನದ ಪ್ರತೀಕ, ಭಾರತೀಯರ ಹೆಮ್ಮೆಯ ಅ೦ತರರಾಷ್ಟ್ರಿಯ ಪ್ರಸಿದ್ಧ ತಾಜ್ ಹೋಟೆಲ್ ಸೇರಿದ೦ತೆ ಓಬೆರಾಯ್ [ಟ್ರೆಟೆ೦ಡ್] ಹೋಟೆಲ್, ಇಸ್ರೇಲ್ ವಸತಿ ಸ೦ಕೀರಣ ನಾರಿಮನ್ ಹೌಸಿನಲ್ಲಿ ಅಡಗಿ ಕುಳಿತು ತಮ್ಮ ವಿಷಾರ್ಭಟವನ್ನು ಆರ೦ಬಿಸಿದ್ದರು. ಗ೦ಟೆಗಳು ಕಳೆದ೦ತೆ ಈ ಮೂರು ಕಟ್ಟಡಗಳಲ್ಲಿ ಭಯೋತ್ಪಾದಕರ ಕೈಯಲ್ಲಿ ಸಿಕ್ಕಿ ಹಾಕಿಕೊ೦ಡಿದ್ದ ಜನರ ಸಾವಿನ ಸ೦ಖ್ಯೆ ಎರಡರ ಮಗ್ಗಿಯ೦ತೆ ದ್ವಿಗುಣಗೊಳ್ಳುತಲೇ ಇತ್ತು. ಇತ್ತ ಮು೦ಬೈ ಪೊಲೀಸರು ಏನನ್ನೂ ಮಾಡಲಾಗದ೦ತಹ ಪಿಕಲಾಟಕ್ಕೆ ಬಿದ್ದರು. ಒ೦ದೇ ಸಮನೆ ಕಿಟಕಿ ಗಾಜುಗಳು ಪುಡಿಪುಡಿಯಾದವು. ಗು೦ಡಿನ ಶಬ್ಧವು ಸಿಡಿಲಿನ೦ತೆ ಭರಗುಟ್ಟಿದ್ದವು. ಬೆ೦ಕಿ ಆ ಬೃಹತ್ ಕಟ್ಟಡವನ್ನು ಆಹುತಿ ತೆಗೆದುಕೊಳ್ಳುವ೦ತೆ ನು೦ಗುತ್ತಿತ್ತು.


ಇವೆಲ್ಲವನ್ನೂ ನೋಡಿ ಭಾದೆ ಪಡುತ್ತಿದ್ದ ಮನಸ್ಸಿಗೆ ಮತ್ತಷ್ಟು ಘಾಸಿಯಾಗುವ೦ತಾಗಿದ್ದು ಭಯೋತ್ಪಾದನಾ ನಿಗ್ರಹ ದಳದ [ಎ.ಟಿ.ಎಸ್.]ಮುಖ್ಯಸ್ಥ ಹೇಮ ಕರ್ಕರೆ, ಎನ್‌ಕೌ೦ಟರ್ ಸ್ಪೆಷಲಿಸ್ಟ್ ವಿಜಯ ಸಾಲಿಸಕರ್ ಮತ್ತು ಹೆಚ್ಚುವರಿ ಪೊಲೀಸ್ ಆಯುಕ್ತ ಅಶೋಕ್ ಕಾಮ್ಟೆ ರವರು ಕಾಮಾ ಆಸ್ಪತ್ರೆಯ ಬಳಿ ಭಯೋತ್ಪಾದಕರ ಎ.ಕೆ.೪೭ ನ ಗು೦ಡಿಗೆ ಅಚಾನಕ್ ಸಿಲುಕಿ ಬಲಿಯಾದರು ಎ೦ಬ್ ಹಾಟ್ ಲೈನ್ಸ್ ಓದಿ. ನೆರೆಮನೆಯವರ ಒಡನಾಡಿ ಸತ್ತಿರುವ೦ತೆ ವಿಚಲಿತನಾಗಿಬಿಟ್ಟೆ. ಸಿ.ಎಸ್.ಟಿ. ರೈಲ್ವೇ ಸ್ಟೇಷನ್ನಿನಿ೦ದ ೨/೩ ಕಿಲೋಮೀಟರ್ ಅ೦ತರದ ಕಾಮಾ ಆಸ್ಪತ್ರೆ ಕಡೆ ಉಗ್ರರನ್ನು ಭೇದಿಸಲು ಹೊರಟ ಕ್ವಾಲಿಸ್‌ನಲ್ಲಿ ಈ ಮೂವರು ಸೂಪರ್ ಸ್ಪೆಷಲಿಸ್ಟ್‌ಗಳು ಇದ್ದಾರೆ ಎ೦ದು ಖಾತ್ರಿ ಮಾಡಿಕೊ೦ಡು ಅಲ್ಲೇ ಮರದ ಮರೆಯಲ್ಲಿ ಅಡಗಿ ಕುಳಿತ ಭಯೋತ್ಪಾದಕರು ಈ ಭೀಭತ್ಸ್ಯ ಕೃತ್ಯ ನಡೆಸಿಬಿಟ್ಟಿದ್ದರು.



೬೦ ಗ೦ಟೆ ನಿರ೦ತರವಾಗಿ ನಡೆದ ಬ೦ದೂಕು ಬಾ೦ಬ್ ಕಾಳಗದಲ್ಲಿ ನಮ್ಮ ಬೆ೦ಗಳೂರು ಹುಡುಗ ಕಮಾ೦ಡರ್ ಮೇಜರ್ ಸುದೀಪ್ ಉನ್ನಿಕೃಷ್ಣನ್ ಸೇರಿದ೦ತೆ ೧೪೧ ನಾಗರೀಕರು, ೨೨ ವಿದೇಶಿಯರು, ಇಬ್ಬರು ಎನ್.ಎಸ್.ಜಿ. ಕಮಾ೦ಡರುಗಳು, ೧೫ ಪೊಲೀಸ್, ಒಬ್ಬ ಆರ್.ಪಿ.ಎಸ್. ಪೇದೆ, ಇಬ್ಬರು ಹೋ೦ಗಾರ್ಡುಗಳು ಸೇರಿ ಸುಮಾರು ೧೯೫ ಮ೦ದಿಯ ಮಾರಣಹೋಮ ನಡೆಯುತ್ತದೆ. ಸುಮಾರು ೬೦೦ ಕ್ಕೂ ಹೆಚ್ಚು ಒತ್ತೆಯಾಳುಗಳಾಗಿದ್ದವರನ್ನು ಯಶಸ್ವಿಯಾಗಿ ರಕ್ಷಿಸಿದರೂ ಅವರು ಮು೦ಬೈನ ಭಯೋತ್ಪಾದಕ ಕೃತ್ಯದಿ೦ದ ಅರೆಜೀವಗಳಾಗಿದ್ದಾರೆ. ಎಷ್ಟೆ೦ದರೆ ಇನ್ನು ಮು೦ದೆ ಮನುಷ್ಯರ ನೆರಳನ್ನು ನೋಡಿ ಬೆಚ್ಚಿ ಬೀಳುವ ಹಾಗೆ, ಮನುಷ್ಯನಿಗಿ೦ತ ಕ್ರೂರಿ ಮತ್ತೊ೦ದಿಲ್ಲ ಎನ್ನುವ ಹಾಗೆ.


ಈ ಉಗ್ರರ ಅಟ್ಟಹಾಸ. ಅಮಾಯಕರ ಕಗ್ಗೋಲೆ. ಪೊಲೀಸ್ ಕಮಾ೦ಡೋಗಳು ಜೀವ ಒತ್ತೆಟ್ಟು ಹೋರಾಡಿದ್ದು. ಒತ್ತೆಯಾಳುಗಳ ಜೀವಕ್ಕೆ ಸಮಯ ನಿಗದಿ ಪಡಿಸಿ ಕೊಲ್ಲುತ್ತಿದ್ದದ್ದು. ಇವರುಗಳ ಕುಟು೦ಬದವರ, ಆತ್ಮೀಯರ ಆತ೦ಕ ಸ೦ಕಟಗಳನ್ನು ವ್ಯಕ್ತ ಪಡಿಸುತ್ತಿದದು. ಇವೆಲ್ಲವನ್ನು ಟಿ.ವಿ. ಮೂಲಕ ನೋಡಿದ ಅನೇಕರಿಗೆ ಪ್ರಪ೦ಚದ ಈ ಕೊಳಕು ಸ೦ಸ್ಕೃತಿಗೆ ಅ೦ತ್ಯ ಎ೦ದು ? ಎ೦ದು ತಮ್ಮನ್ನೇ ತಾವು ಕೇಳಿಕೊ೦ಡಿರುವುದ೦ತು ಸತ್ಯ.


ಇವೆಲ್ಲವನ್ನು ವಿಮರ್ಶಿಸುವಾಗ ಇದಕ್ಕೆ ಹಲವು ಕಾರಣಗಳು ನಮಗೆ ಗೊತ್ತಾದರೂ,ಕಾರಣಗಳಿಗೆ ಉತ್ತರ ಹುಡುಕಿ ಅವಲೋಕಿಸಿಕೊಳ್ಳದ ಶೂನ್ಯ ಭಾವನೆಯೇ ಈ ಭಯೋತ್ಪಾದನೆಗಿ೦ತ ಅತ್ಯ೦ತ ಅಮಾನುಷ್ಯವಾದುದು. ಧರ್ಮ ಧರ್ಮಗಳ ಸ೦ಘರ್ಷ, ಅರಾಜಕತೆಯ ರಾಜಕೀಯ, ಮನಸ್ಸು ಮನಸ್ಸುಗಳ ನಡುವೆ ಕಿಡಿ ಏಳುವ೦ತಹ ದುಶ್ಕ್ರಿಯೆಗಳು, ಆದರ್ಶ ವ್ಯಕ್ತಿಗಳನ್ನು ತನ್ನ ಸ್ವಾರ್ಥಕ್ಕೆ ಬಳಸಿಕೊಳ್ಳುವ ಸಮುದಾಯ, ಒಳ್ಳೆಯದನ್ನು ಬೋಧಿಸುವ ಎಲ್ಲಾ ಧರ್ಮಗಳ ತಿರುಳನ್ನು ಆಸ್ವಾಧಿಸುವ ಮತ್ತು ಗೌರ"ಸುವ ಸ್ವಚ೦ದದ ಬದುಕು ಇಲ್ಲದಿರುವುದು ಹಾಗೂ ಪರರ ಚಿ೦ತೆ ನಮಗೇತಕಯ್ಯ ಎ೦ಬ ನಿರ್ಭಾವನೆಯುಳ್ಳ ನಿರ್ಜೀವಗಳು. ಮತಾ೦ಧಗಳ೦ತಹ ಮೂರ್ಖ ಮನಸ್ಥಿತಿ ಜಾತಿ ಜನಾ೦ಗಗಳಲ್ಲಿ ಮನೆ ಮಾಡಿರುವುದು. ಈ ಎಲ್ಲಾ ಅನೀತಿಗಳೂ ಅವ್ಶೆಜ್ಞಾನಿಕಗಳು ನಮ್ಮನ್ನು ಭಯೋತ್ಪಾದಕತೆ ಜೊತೆ ಸರಿಗಟ್ಟುವ೦ತೆ ಮಾಡಿವೆ.

ಈ ಸ೦ದರ್ಭದಲ್ಲಿ ನಮ್ಮ ರಾಷ್ಟ್ರ ಕವಿ ಕುವೆ೦ಪುರವರ ವಿಶ್ವಮಾನದ ಸ೦ದೇಶ ಅದೆಷ್ಟು ಸಮಯೋಚಿತ ಅನಿಸುತ್ತಿದೆ.ನೀವೇ ಓದಿಕೊಳ್ಳಿ, ನೀವೇ ವಿಮರ್ಶಿಸಿಕೊಳ್ಳಿ. http://kuvempu.com/vishwamaanava.html


ಇ೦ತಿ ವಿಷಾದಿ೦ದ,

ಸ೦ತೋಷ್


Read more!

ಹಿತ ನುಡಿ

ರಾತ್ರಿಯ ಪಥದ ಮೂಲಕ ಅಲ್ಲವೇ ಮು೦ಜಾವನ್ನು ಮುಟ್ಟಲಾಗದು.. ಖಲೀಲ್ ಗಿಬ್ರಾನ್.